ನವದೆಹಲಿ: ರಾಜ್ಯಸಭೆ ಮಾರ್ಷಲ್‍ಗಳ ಹೊಸ ಸಮವಸ್ತ್ರದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ನಿರ್ಧಾರ ಮರುಪರಿಶೀಲನೆಗೆ ಸೂಚನೆ ರಾಜ್ಯಸಭೆ ಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆದೇಶಿಸಿದ್ದಾರೆ.
ರಾಜ್ಯಸಭೆಯ 250ನೇ ಐತಿಹಾಸಿಕ ಕಲಾಪ ಇಂದು ನಡೆಯಿತು. ಈ ಕಲಾಪದಲ್ಲಿ ಮಾರ್ಷಲ್‍ಗಳಿಗೆ ಸಾಂಪ್ರದಾಯಿಕ ಸಮವಸ್ತ್ರ ‘ಬಂದ್‍ಗಲಾ ಮತ್ತು ಪೇಟ’ವನ್ನು ಬದಲಿಸಿ, ಮಿಲಿಟರಿ ರೀತಿಯ ಸಮವಸ್ತ್ರ ನೀಡಲಾಗಿತ್ತು. ಈ ನಿರ್ಧಾರವು ಭಾರೀ ಟೀಕೆ ಹಾಗೂ ವಿರೋಧಕ್ಕೆ ಕಾರಣವಾಗಿದೆ.

ಟೀಕೆ ಹಾಗೂ ವಿರೋಧದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ವಿವಿಧ ಸಲಹೆಗಳನ್ನು ಪರಿಗಣಿಸಿದ ನಂತರ ರಾಜ್ಯಸಭಾ ಸಚಿವಾಲಯ ಮಾರ್ಷಲ್‍ಗಳಿಗೆ ಹೊಸ ವಸ್ತ್ರಸಂಹಿತೆಯನ್ನು ರೂಪಿಸಿದೆ. ಆದರೆ ಕೆಲ ರಾಜಕೀಯ ಪಕ್ಷಗಳು ಹಾಗೂ ಗಣ್ಯ ವ್ಯಕ್ತಿಗಳಿಂದ ಅಭಿಪ್ರಾಯಗಳನ್ನು ಸ್ವೀಕರಿಸಿದ ನಂತರ ಈ ಬಗ್ಗೆ ಪರಿಶೀಲಿಸಲು ಸಚಿವಾಲಯದ ಕಾರ್ಯದರ್ಶಿಯವರಿಗೆ ಸೂಚಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಈ ಕುರಿತು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ವೇದ್ ಮಲಿಕ್ ಅವರು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಸೇನಾ ಸಮವಸ್ತ್ರವನ್ನು ನಕಲು ಮಾಡುವುದು ಕಾನೂನು ಬಾಹೀರ. ಈ ಬಗ್ಗೆ ಉಪ ರಾಷ್ಟ್ರಪತಿ ಕಚೇರಿ, ರಾಜ್ಯಸಭೆ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗಮನ ಹಿರಿಸಿ, ಕ್ರಮಕೈಗೊಳ್ಳುತ್ತಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ ಟ್ವೀಟ್ ಅನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಮಾರ್ಷಲ್ ಹೊಸ ಸಮವಸ್ತ್ರಕ್ಕೆ ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲದೆ ಕೇಂದ್ರ ಸಚಿವ ವಿ.ಕೆ.ಸಿಂಗ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.