Tag: Marriage Card

  • ಪ್ರಣಾಳಿಕೆಯನ್ನೇ ಮದ್ವೆ ಕಾರ್ಡ್‌ನಲ್ಲಿ ಮುದ್ರಿಸಿದ ಪವನ್ ಕಲ್ಯಾಣ್ ಬೆಂಬಲಿಗ!

    ಪ್ರಣಾಳಿಕೆಯನ್ನೇ ಮದ್ವೆ ಕಾರ್ಡ್‌ನಲ್ಲಿ ಮುದ್ರಿಸಿದ ಪವನ್ ಕಲ್ಯಾಣ್ ಬೆಂಬಲಿಗ!

    ಹೈದರಾಬಾದ್:‌ ಯಾವುದೇ ರಾಜಕೀಯ ಪಕ್ಷಕ್ಕೆ ಅದರ ಬೆಂಬಲಿಗರು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುತ್ತಾರೆ. ತಮ್ಮ ಪಕ್ಷದ ರಕ್ಷಣೆಗಾಗಿ ಇತರರೊಂದಿಗೆ ಹೋರಾಡಲು ಸಹ ಸಿದ್ಧರಾಗಿರುವ ಇಂತಹ ಅನೇಕ ಬೆಂಬಲಿಗರನ್ನು ನೀವು ಇಲ್ಲಿಯವರೆಗೆ ನೋಡಿರಬೇಕು. ಆದರೆ ಆಂಧ್ರಪ್ರದೇಶದ (Andhrapradesh) ವ್ಯಕ್ತಿಯೊಬ್ಬರು ತಮ್ಮ ನೆಚ್ಚಿನ ಪಕ್ಷದ ಬಗ್ಗೆ ಅಂತಹ ಉತ್ಸಾಹವನ್ನು ತೋರುವ ಮೂಲಕ ಇದೀಗ ಭಾರೀ ಸುದ್ದಿಯಾಗಿದ್ದಾರೆ.

    ಆಂಧ್ರಪ್ರದೇಶದ ಕಾಕಿನಾಡ ನಿವಾಸಿಯೊಬ್ಬರ ಮದುವೆ ಕಾರ್ಡ್‌ನಲ್ಲಿ ಜನಸೇನಾ ಪಕ್ಷದ (Janasena Party) ಪ್ರಣಾಳಿಕೆಯನ್ನು ಮುದ್ರಿಸಲಾಗಿದೆ. ವ್ಯಕ್ತಿ ಪಕ್ಷದ ನಾಯಕ ಪವನ್ ಕಲ್ಯಾಣ್ (Pawan Kalyan) ಅವರ ಬೆಂಬಲಿಗರಾಗಿದ್ದು, ಪಿಠಾಪುರಂನಲ್ಲಿ ಪವನ್ ಕಲ್ಯಾಣ್ ಅವರಿಗೆ ಮತ ನೀಡುವಂತೆ ಆಹ್ವಾನಿತರನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸಲೂನ್‌ನಲ್ಲಿ ಜನರಿಗೆ ಕ್ಷೌರ ಮಾಡಿ ಮತಯಾಚನೆ- ಗಮನ ಸೆಳೆದ ಅಭ್ಯರ್ಥಿಯ ಚುನಾವಣಾ ಪ್ರಚಾರ

    ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ವೀಡಿಯೋದಲ್ಲಿ ವ್ಯಕ್ತಿ ಜನರಿಗೆ ಮದುವೆ ಕಾರ್ಡ್‌ಗಳನ್ನು ವಿತರಿಸುತ್ತಿರುವುದನ್ನು ಕಾಣಬಹುದಾಗಿದೆ.

    ಬಿಜೆಪಿ-ಟಿಡಿಪಿ ಜೊತೆ ಮೈತ್ರಿ: ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಜನಸೇನಾ ಪಕ್ಷವನ್ನೂ ಕಟ್ಟಿದ್ದಾರೆ ಎಂಬುದು ಗಮನಾರ್ಹ. ಇತ್ತೀಚಿನ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷವು ಎನ್‌ಡಿಎ ಮೈತ್ರಿಕೂಟದ ಭಾಗವಾಗಿತ್ತು. ‌ಪಕ್ಷವು ಮುಂಬರುವ ಲೋಕಸಭಾ ಮತ್ತು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ-ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದೆ.

  • ಮಗನ ಮದುವೆಗೆ 4 ಕೆಜಿ ತೂಕದ ಮದುವೆ ಕಾರ್ಡ್ ಮಾಡಿಸಿದ ತಂದೆ!

    ಮಗನ ಮದುವೆಗೆ 4 ಕೆಜಿ ತೂಕದ ಮದುವೆ ಕಾರ್ಡ್ ಮಾಡಿಸಿದ ತಂದೆ!

    ಗಾಂಧಿನಗರ: ಮದುವೆ ಸಂಭ್ರಮಕ್ಕೆ ಏನಾದರೂ ಭಿನ್ನವಾಗಿ ಟ್ರೈ ಮಾಡಬೇಕು ಎಂದು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಯಸುತ್ತಾರೆ. ಅದರಂತೆ ಇಲ್ಲೊಬ್ಬ ತಂದೆ ತನ್ನ ಮಗನಿಗಾಗಿ 4 ಕೆಜಿ, 280 ಗ್ರಾಂ ತೂಕದ ಮದುವೆ ಕಾರ್ಡ್ ಅನ್ನು ಮಾಡಿಸಿದ್ದು, ಆ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ವಿವಾಹವನ್ನು ವಿಶೇಷವಾಗಿ ಮಾಡಬೇಕು ಎಂಬ ಕನಸು ಇರುತ್ತೆ. ಅದರಲ್ಲಿಯೂ ವಿಶೇಷವಾಗಿ ಭಾರತದಲ್ಲಿ, ಜನರು ಮದುವೆಗಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ತಂದೆ ತನ್ನ ಮಗನ ಮದುವೆಗೆ ಆಮಂತ್ರಣದ ಕಾರ್ಡ್ ಅನ್ನು ಭಿನ್ನವಾಗಿ ಮಾಡಿಸಿದ್ದು, ಆ ಕಾರ್ಡ್ 4 ಕೆಜಿಗಿಂತ ಹೆಚ್ಚು ತೂಕವಿದೆ. ಆ ಕಾರ್ಡ್‍ನ ಬೆಲೆ ಏನಾದರು ಕೇಳಿದರೆ ಜನರು ಬಾಯಿಯ ಮೇಲೆ ಬೆರಳು ಇಟ್ಟುಕೊಳ್ಳುತ್ತಾರೆ. ಇದನ್ನೂ ಓದಿ: ಹಣಬಲ, ಜಾತಿಬಲದಿಂದ ಕಾಂಗ್ರೆಸ್ ಚುನಾವಣೆ ಗೆಲ್ತಿತ್ತು, ಆದ್ರೆ ಈಗ ಅವರಿಗೆ ಅಡ್ರೆಸ್ಸಿಲ್ಲ: BSY

    ಗುಜರಾತಿ ಉದ್ಯಮಿ ಮೌಲೇಶಭಾಯ್ ಉಕಾನಿ, ಸೋನಾಲ್ಬೆನ್ ಉಕಾನಿ ಅವರ ಮಗ ಜೇ ಉಕಾನಿ ಅವರ ವಿವಾಹಕ್ಕಾಗಿ 4 ಕೆಜಿ ಮತ್ತು 280 ಗ್ರಾಂ ತೂಕದ ಕಾರ್ಡ್ ಅನ್ನು ಮಾಡಿಸಿದ್ದಾರೆ. ನವೆಂಬರ್ 14 ರಿಂದ 16 ರವರೆಗೆ ರಾಜಸ್ಥಾನದ ಜೋಧ್‍ಪುರದ ಉಮೈದ್ ಭವನ ಅರಮನೆಯಲ್ಲಿ ಈ ವಿವಾಹ ನಡೆದಿತ್ತು. ಈ ಮದುವೆ ಮುಗಿದು ಹೋಗಿದ್ದರೂ, ಆಮಂತ್ರಣ ಪತ್ರಿಕೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.

    ಭಾರೀ ತೂಕದ ಕಾರ್ಡ್ ಬೆಲೆ ಎಷ್ಟು ಎಂದರೆ ಬರೋಬ್ಬರಿ 7 ಸಾವಿರ ರೂಪಾಯಿ. ಈ ಕಾರ್ಡ್ ಗುಲಾಬಿ ಬಣ್ಣದ ಬಾಕ್ಸ್ ನಲ್ಲಿ ಇದ್ದು, ಈ ಕಾರ್ಡ್ ಅನ್ನು ತೆರೆದ ನಂತರ, ಅದರಲ್ಲಿ ಮಸ್ಲಿನ್ ಬಟ್ಟೆಯಲ್ಲಿ ಸುತ್ತುವ ನಾಲ್ಕು ಸಣ್ಣ ಪೆಟ್ಟಿಗೆಗಳನ್ನು ಕಾಣಬಹುದು. ಈ ನಾಲ್ಕೂ ಬಾಕ್ಸ್‍ಗಳಲ್ಲಿ ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಚಾಕಲೇಟ್‍ಗಳನ್ನು ಹಾಕಲಾಗಿದೆ.

    ಅದು ಅಲ್ಲದೇ ಇದರೊಳಗೆ 7 ಪುಟಗಳಿದ್ದು, ಅದರಲ್ಲಿ ಮದುವೆಯ ಸಂಭ್ರಮದ ಎಲ್ಲ ವಿವರಗಳಿವೆ. ಉಕನಿ ಶ್ರೀಕೃಷ್ಣನ ಅಪಾರ ಭಕ್ತನಾಗಿರುವುದರಿಂದ ಕೃಷ್ಣನ ಚಿತ್ರವನ್ನು ಹಾಕಿಸಲಾಗಿದೆ. ಇದನ್ನೂ ಓದಿ: ಚಿನ್ನದ ಹುಡುಗನಿಗೆ ಮೋದಿ ಚಪ್ಪಾಳೆ

    ಮದುವೆ ಕಾರ್ಡ್ ಮಾತ್ರವಲ್ಲ, ಮದುವೆ ಸಹ ಅಷ್ಟೇ ಅದ್ದೂರಿಯಾಗಿ ನಡೆದಿದೆ. ಈ ಮದುವೆ ಭಾರತದ ರಾಜಮನೆತನದ ಮತ್ತು ದುಬಾರಿ ಹೋಟೆಲ್‍ಗಳಲ್ಲಿ ಒಂದಾದ ಜೋಧ್‍ಪುರದ ‘ಉಮೈದ್ ಭವನ್ ಪ್ಯಾಲೇಸ್’ ನಲ್ಲಿ ನಡೆಯಿತು. ಒಂದು ದಿನಕ್ಕೆ ಉಮೈದ್ ಭವನ್ ಅರಮನೆಯ ರೂಂಗೆ 2 ಲಕ್ಷದಿಂದ 3 ಲಕ್ಷದವರೆಗೆ ಆಗುತ್ತೆ. ಈ ಮದುವೆಯ ಔತಣಕೂಟದಲ್ಲಿ ಅತಿಥಿಗಳಿಗೆ ಬಡಿಸಿದ ತಟ್ಟೆಯ ಬೆಲೆ 18,000 ರೂ. ಆಗಿದೆ. ಒಟ್ಟರೆ ಈ ಮದುವೆ ಐಷಾರಾಮಿಯಾಗಿ ನೆರವೇರಿದ್ದು, ಮದುವೆ ಮುಗಿದರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮುಗಿದಿಲ್ಲ.

  • ಮದ್ವೆ ಕರೆಯೋಲೆಯಲ್ಲಿ ರಫೇಲ್ ವಿವರಣೆ – ಪ್ರಧಾನಿಯಿಂದ ಸಿಕ್ತು ಮೆಚ್ಚುಗೆ

    ಮದ್ವೆ ಕರೆಯೋಲೆಯಲ್ಲಿ ರಫೇಲ್ ವಿವರಣೆ – ಪ್ರಧಾನಿಯಿಂದ ಸಿಕ್ತು ಮೆಚ್ಚುಗೆ

    ಗಾಂಧಿನಗರ: ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ರಫೇಲ್ ಎಂಬ ಅಸ್ತ್ರವನ್ನು ಬಳಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ರಫೇಲ್ ವಿಮಾನಗಳ ಖರೀದಿಯಲ್ಲಿ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ಎಸಗಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅರೋಪಿಸುತ್ತಾ ಬಂದಿದ್ದಾರೆ. ಇದೀಗ ಮೋದಿ ಅಭಿಮಾನಿಯೊಬ್ಬರು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ರಫೇಲ್ ವಿಮಾನ ಖರೀದಿಗೆ ಸಂಬಂಧಿಸಿದ ಮಾಹಿತಿಗಳನ್ನು ಮುದ್ರಿಸಿದ್ದಾರೆ.

    ಗುಜರಾತ್ ರಾಜ್ಯದ ಯುವರಾಜ್ ಪೋಖರನಾ ಅವರ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂದು ಯುವರಾಜ್ ಮತ್ತು ಸಾಕ್ಷಿ ಸತಿ-ಪತಿಗಳಾಗಿದ್ದಾರೆ. ನಮ್ಮ ಆಮಂತ್ರಣ ಪತ್ರಿಕೆಯನ್ನು ಪ್ರಧಾನಿಗಳು ಸಹ ನೋಡಿದ್ದು, ಮೆಚ್ಚುಗೆ ಸೂಚಿಸಿದ್ದಾರೆ ಎಂದು ಯುವರಾಜ್ ಹೇಳುತ್ತಾರೆ.

    ಪ್ರಧಾನಿ ಬರೆದ ಪತ್ರದಲ್ಲೇನಿದೆ?
    ಯುವರಾಜ್ ಮತ್ತು ಸಾಕ್ಷಿ ಮದುವೆಗೆ ಪೋಖರನಾ ಕುಟುಂಬಕ್ಕೆ ನನ್ನ ಶುಭಾಶಯಗಳು. ಅತಿಥಿಗಳು ಕಳುಹಿಸಿರುವ ಕರೆಯೋಲೆಯಲ್ಲಿ ಈ ವಿಭಿನ್ನ ಪತ್ರ ನನ್ನನ್ನು ಸೆಳೆಯಿತು. ಪತ್ರದಲ್ಲಿ ನಿಮ್ಮ ಸರಳತೆ, ರಾಷ್ಟ್ರದ ಬಗ್ಗೆ ನಿಮ್ಮ ಕಾಳಜಿ ಹಾಗು ನಿಮ್ಮ ದೇಶ ಭಕ್ತಿಯನ್ನು ತೋರಿಸುತ್ತಿತ್ತು. ಈ ಕರೆಯೋಲೆ ನನಗೆ ದೇಶಕ್ಕಾಗಿ ಕೆಲಸ ಮಾಡುವಂತೆ ಪ್ರೇರಣೆ ನೀಡುತ್ತಿದೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ಯುವರಾಜ್ ಮತ್ತು ಸಾಕ್ಷಿ ಅವರಿಗೆ ಮದುವೆ ಶುಭಾಶಯಗಳು ಎಂದು ಪ್ರಧಾನಿಗಳು ಕಳಹಿಸಿದ ಪತ್ರದಲ್ಲಿ ಬರೆಯಲಾಗಿದೆ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆ ಕಾರ್ಡ್ ಕೊಡುವ ನೆಪದಲ್ಲಿ ದಂಪತಿಗೆ ಚಾಕು ಇರಿದು ಹಣ, ಚಿನ್ನ ದೋಚಿದ್ರು!

    ಮದ್ವೆ ಕಾರ್ಡ್ ಕೊಡುವ ನೆಪದಲ್ಲಿ ದಂಪತಿಗೆ ಚಾಕು ಇರಿದು ಹಣ, ಚಿನ್ನ ದೋಚಿದ್ರು!

    ಹಾಸನ: ಅಣ್ಣನ ಮದುವೆ ಕಾರ್ಡ್ ಕೊಡುವ ನೆಪದಲ್ಲಿ ಮನೆಗೆ ಬಂದು ದಂಪತಿಗೆ ಚಾಕುವಿನಿಂದ ಇರಿದು ದರೋಡೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.

    ಈ ಘಟನೆ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದ್ದು, ವಾಗೀಶ್(61), ಸಾವಿತ್ರಿ(55) ಇರಿತಕ್ಕೊಳಗಾದ ದಂಪತಿ. ವಾಗೀಶ್ ಬಳಿ ಇಮ್ರಾನ್ ಎಂಬಾತ ಕೆಲಸ ಮಾಡಿಕೊಂಡಿದ್ದನು. ಇಂದು ಬೆಳಗ್ಗೆ ಇಮ್ರಾನ್ ತನ್ನ ಅಣ್ಣನ ಮದುವೆ ಕಾರ್ಡ್ ನೀಡಲು ವಾಗೀಶ್ ಮನೆಗೆ ಬಂದಿದ್ದಾನೆ. ಈ ವೇಳೆ ಮನೆಯಲ್ಲಿದ್ದ ದಂಪತಿಗೆ ಚಾಕು ಇರಿದು ಸುಮಾರು 3 ಲಕ್ಷ ರೂ. ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ ವಾಗೀಶ್ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

    ಹಲ್ಲೆಗೊಳಗಾದ ದಂಪತಿಯನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಕುವೆಂಪು ನಗರ ಬಡಾವಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಾಪತ್ತೆಯಾಗಿರುವ ಇಮ್ರಾನ್ ಪತ್ತೆಗಾಗಿ ಪೊಲೀಸರು ವಿಶೇಷ ಜಾಲ ಬೀಸಿದ್ದಾರೆ.