Tag: Markets

  • ಕೊರೊನಾ ಎಫೆಕ್ಟ್ – ಬಸ್ ನಿಲ್ದಾಣಕ್ಕೆ ಬಂತು ರೇಷ್ಮೆ ಮಾರುಕಟ್ಟೆ

    ಕೊರೊನಾ ಎಫೆಕ್ಟ್ – ಬಸ್ ನಿಲ್ದಾಣಕ್ಕೆ ಬಂತು ರೇಷ್ಮೆ ಮಾರುಕಟ್ಟೆ

    ರಾಮನಗರ: ರಾಮನಗರ ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆ ಇದೆ. ಆದರೆ ಈಗ ಹೆಚ್ಚುವರಿ ರೇಷ್ಮೆಗೂಡು ಮಾರುಕಟ್ಟೆಯನ್ನು ಸರ್ಕಾರಿ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಿದ್ದಕ್ಕೆ ಸಿಟ್ಟಿಗೆದ್ದ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

    ಬೆಳಗ್ಗೆ ಏಕಾಏಕಿ ರಸ್ತೆಗೆ ಅಡ್ಡಲಾಗಿ ಕುಳಿತ ರೇಷ್ಮೆ ರೈತರು ಪ್ರತಿಭಟನೆಗೆ ಮುಂದಾದರು. ಬಸ್ ನಿಲ್ದಾಣದಲ್ಲಿ ಪೂರ್ವ ತಯಾರಿಯಿಲ್ಲದೇ ಏಕಾಏಕಿ ಮಾರುಕಟ್ಟೆ ಮಾಡಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗ್ಗೆ ಮಾರುಕಟ್ಟೆಗೆ ಗೂಡು ಹೊತ್ತು ತಂದ ರೈತರನ್ನು ಪ್ರವೇಶ ದ್ವಾರದ ಬಳಿಯೇ ಪೊಲೀಸರು ತಡೆ ಹಿಡಿದರು. ಮಿಶ್ರ ತಳಿಯ ಗೂಡು ಹರಾಜನ್ನು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದ್ದು, ರೈತರಿಗೆ ಅಲ್ಲಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದರು. ಅರ್ಧದಷ್ಟು ರೈತರು ಬಸ್ ನಿಲ್ದಾಣಕ್ಕೆ ತೆರಳಿದರೆ, ಉಳಿದ ರೈತರು ಹಳೆಯ ಮಾರುಕಟ್ಟೆ ಸ್ಥಳದಲ್ಲಿಯೇ ಹರಾಜಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದ್ದಾರೆ.

    ರೈತರ ಪ್ರತಿಭಟನೆ ಬಳಿಕ ಅಧಿಕಾರಿಗಳು ಹಳೆಯ ಮಾರುಕಟ್ಟೆಯಲ್ಲಿಯೇ ರೇಷ್ಮೆ ಗೂಡು ಹರಾಜಿಗೆ ಅವಕಾಶ ಕಲ್ಪಿಸಿದರು. ಹೀಗಾಗಿ ರೈತರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ತಲೆ ಮೇಲೆ ಮೂಟೆ ಹೊತ್ತು ಓಡಾಡುತ್ತಿದ್ದರು. ರಾಮನಗರ ಜಿಲ್ಲೆಯಲ್ಲಿ ಬಹುತೇಕ ರೈತರು ಹೆಚ್ಚಾಗಿ ಹಳದಿ ರೇಷ್ಮೆ ಗೂಡನ್ನು ಬೆಳೆಯುತ್ತಾರೆ. ಹೊರ ಜಿಲ್ಲೆ, ಹೊರ ರಾಜ್ಯದ ರೈತರು ಬಿಳಿ ಗೂಡನ್ನು ಬೆಳೆಯುತ್ತಾರೆ. ಆದ್ರೆ ಮಾರುಕಟ್ಟೆಯಲ್ಲಿ ಬಿಳಿ ರೇಷ್ಮೆ ಗೂಡಿಗೆ ಅವಕಾಶ ಕಲ್ಪಿಸಿ, ಹಳದಿ ಗೂಡಿಗೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮಾರುಕಟ್ಟೆ ನೀಡಿದ್ದು ರೈತರ ಕಣ್ಣು ಕೆಂಪಾಗಿಸಿತ್ತು.

    ಹೊರ ಜಿಲ್ಲೆ, ರಾಜ್ಯದ ಜನರಿಗೆ ಮಣೆ ಹಾಕುವ ಮೂಲಕ ಅಧಿಕಾರಿಗಳು ಕೇವಲ ಬಿಳಿ ಗೂಡಿಗೆ ಪ್ರಾಶಸ್ತ್ಯ ನೀಡಿ, ಹಳದಿ ಗೂಡನ್ನು ಬೇಕಾಬಿಟ್ಟಿ ಹರಾಜು ಪ್ರಕ್ರಿಯೆ ನಡೆಸಲು ಬಸ್ ನಿಲ್ದಾಣಕ್ಕೆ ವರ್ಗಾಯಿಸಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಕೊನೆಗೂ ರೈತರ ಒತ್ತಡಕ ಮಣಿದ ಮಾರುಕಟ್ಟೆ ಅಧಿಕಾರಿಗಳು ಹಳೆಯ ಮಾರುಕಟ್ಟೆಯಲ್ಲೇ ಎರಡೂ ತಳಿಯ ಗೂಡು ಹರಾಜಿಗೆ ಅವಕಾಶ ನೀಡಿದರು. ಹೀಗಾಗಿ ಬೆಳ್ಳಂಬೆಳಗ್ಗೆಯೇ ರೇಷ್ಮೆ ಮಾರುಕಟ್ಟೆ ಗೊಂದಲದ ಗೂಡಾಗಿತ್ತು.

  • ಅಡಿಕೆಗೆ ಬಂತು ಬಂಗಾರದ ಬೆಲೆ – ಕ್ವಿಂಟಲ್‍ಗೆ 40 ಸಾವಿರ ರೂಪಾಯಿಗೂ ಹೆಚ್ಚು ಏರಿಕೆ

    ಅಡಿಕೆಗೆ ಬಂತು ಬಂಗಾರದ ಬೆಲೆ – ಕ್ವಿಂಟಲ್‍ಗೆ 40 ಸಾವಿರ ರೂಪಾಯಿಗೂ ಹೆಚ್ಚು ಏರಿಕೆ

    ಕಾರವಾರ: ಕಳೆದ ನಾಲ್ಕೈದು ವರ್ಷಗಳ ಅಡಿಕೆ ಇತಿಹಾಸದಲ್ಲಿ ಕೆಂಪಡಿಕೆ ಕ್ವಿಂಟಾಲ್ ಒಂದಕ್ಕೆ ಗರಿಷ್ಠ 40 ಸಾವಿರ ರೂಪಾಯಿ ಗಡಿ ದಾಟಿದ್ದು, ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಕೃಷಿಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

    ಮೂರ್ನಾಲ್ಕು ತಿಂಗಳಿಂದ ನಿಧಾನವಾಗಿ ಏರುತ್ತಿದ್ದ ಕೆಂಪಡಿಕೆ ದರವು ಕಳೆದ ಗುರುವಾರದಂದು ಶಿರಸಿಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಒಂದಕ್ಕೆ 40,169 ರೂಪಾಯಿ ಗರಿಷ್ಠ ದರ ದಾಖಲಿಸಿ, ಕಳೆದ ನಾಲ್ಕೈದು ವರ್ಷಗಳಲ್ಲೇ ಉತ್ತಮ ದರವಾಗಿ ಗುರುತಿಸಿಕೊಂಡಿದೆ. 1 ವಾರದ ಹಿಂದೆ 38ರಿಂದ 39 ಸಾವಿರದ ಆಸುಪಾಸಿದ್ದ ಅಡಿಕೆ ದರ ಈಗ 40 ಸಾವಿರ ರೂಪಾಯಿ ಗಡಿದಾಟಿದ್ದು, ಹಂಗಾಮಿಗೆ ಸರಿಯಾಗಿ ಉತ್ತಮ ದರದ ನಿರೀಕ್ಷೆಯಲ್ಲಿದ್ದ ಅಡಕೆ ಬೆಳೆಗಾರರು ಇದರಿಂದ ಖುಷಿಯಾಗಿದ್ದಾರೆ.

    2014-15ರಲ್ಲಿ ಕೆಂಪಡಿಕೆ ಕ್ವಿಂಟಾಲ್ ಒಂದಕ್ಕೆ 81 ಸಾವಿರ ರೂಪಾಯಿ ಗಡಿ ದಾಟಿತ್ತು. 2018 ಹಾಗೂ 2019ರಲ್ಲಿ ಸರಾಸರಿ 32 ಸಾವಿರ ರೂಪಾಯಿ ಕ್ವಿಂಟಾಲ್ ಒಂದಕ್ಕೆ ಗರಿಷ್ಠ ದರ ಲಭಿಸಿತ್ತು. ಇದೀಗ ಮತ್ತೆ ದರ ಏರಿಕೆಯಾಗಿದ್ದು, ಬೆಳೆಗಾರರು ಇನ್ನಷ್ಟು ದರ ಏರುವ ನಿರೀಕ್ಷೆಯಲ್ಲಿದ್ದಾರೆ. ಕೆಲ ವರ್ಷಗಳ ಹಿಂದೆ ಕ್ವಿಂಟಾಲ್‍ಗೆ 80 ಸಾವಿರ ರೂಪಾಯಿ ಬೆಲೆ ಕಂಡಿದ್ದ ಬೆಳೆಗಾರರು, ಈಗ ಕನಿಷ್ಠ 50 ಸಾವಿರ ರೂಪಾಯಿ ದಾಟಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

    ಬೆಳೆ ಕಡಿಮೆ:
    ಕಳೆದ ವರ್ಷದ ಅಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಶೇ. 50ರಷ್ಟು ಅಡಿಕೆ ಬೆಳೆ ಕಡಿಮೆಯಾಗಿತ್ತು. ಅದರ ಜೊತೆಗೆ ಕೊಳೆ ರೋಗವೂ ಬಾಧಿಸಿದ ಪರಿಣಾಮ ಕೆಲವು ಕಡೆಗಳಲ್ಲಿ ಶೇ. 80ರಷ್ಟು ಬೆಳೆ ನಾಶವಾಗಿದ್ದು, ತಾಲೂಕಿನಲ್ಲಿ ಈ ಬಾರಿ ಅಡಿಕೆ ಬೆಳೆ ಕುಂಠಿತವಾಗಿದೆ. ಇದರ ಪರಿಣಾಮ ಅಡಿಕೆ ದರ ಇನ್ನೂ ಏರುವ ನಿರೀಕ್ಷೆಯನ್ನು ವ್ಯಾಪಾರಸ್ಥರು ವ್ಯಕ್ತಪಡಿಸಿದ್ದು, ಕೃಷಿಕರಿಗೆ ಹೆಚ್ಚಿನ ಅನುಕೂಲ ಆಗುವ ಸಾಧ್ಯತೆಗಳಿದೆ ಎನ್ನಲಾಗಿದೆ.

    ಯಲ್ಲಾಪುರದಲ್ಲಿ ಉತ್ತಮ ಬೆಲೆ:
    ಯಲ್ಲಾಪುರ ಮಾರುಕಟ್ಟೆಯಲ್ಲಿ ಕೆಂಪಡಿಕೆಗೆ ಉತ್ತಮ ದರ ಲಭ್ಯವಾಗಿದೆ. ಶಿರಸಿ ಮಾರುಕಟ್ಟೆಗಿಂತ ಹೆಚ್ಚಿನ ದರದಲ್ಲಿ ವ್ಯಾಪಾರವಿರುವ ಯಲ್ಲಾಪುರದಲ್ಲಿ 43 ಸಾವಿರ ರೂಪಾಯಿಗಳಿಗೂ ಅಧಿಕ ದರವನ್ನು ರೈತರು ಕಂಡಿದ್ದಾರೆ. ಯಲ್ಲಾಪುರದಲ್ಲಿಯೂ ಅತಿಯಾದ ಮಳೆಯಿಂದ ಬೇಡ್ತಿ ನದಿ ನೀರು ಅಕ್ಕಪಕ್ಕದಲ್ಲಿರುವ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಈಗ ಉತ್ತಮ ದರ ಬಂದಿರುವುದರಿಂದ ಕೃಷಿಕರ ಮೊಗದಲ್ಲಿ ನಗು ಮೂಡಿದೆ.

  • ಈರುಳ್ಳಿ ಬೆಲೆ ಭಾರೀ ಇಳಿಕೆ – 1 ಕೆಜಿಗೆ 20 ರೂಪಾಯಿ

    ಈರುಳ್ಳಿ ಬೆಲೆ ಭಾರೀ ಇಳಿಕೆ – 1 ಕೆಜಿಗೆ 20 ರೂಪಾಯಿ

    ಬೆಂಗಳೂರು: ಡಿಸೆಂಬರ್ ತಿಂಗಳಲ್ಲಿ ಗಗನಕ್ಕೇರಿದ್ದ ಈರುಳ್ಳಿ ಬೆಲೆ ಈಗ ಭಾರೀ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಸದ್ಯ 1 ಕೆ.ಜಿ ಈರುಳ್ಳಿ 20 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

    ರೈತರ ಎರಡನೇ ಬೆಳೆ ಮಾರುಕಟ್ಟೆಗೆ ಬಂದಿರುವುದರಿಂದ ಈರುಳ್ಳಿ ಬೆಲೆ ಕಡಿಮೆಯಾಗಿದೆ. ಆದರೆ ಈ ನಡುವೆ ಕೇಂದ್ರ ಸರ್ಕಾರ ನಮ್ಮ ದೇಶದ ಈರುಳ್ಳಿ ರಫ್ತನ್ನು ಬ್ಯಾನ್ ಮಾಡಿರುವುದರಿಂದ ರೈತರಿಗೆ ಅನಾನುಕೂಲವಾಗಿದೆ. ಸದ್ಯಕ್ಕೆ ಈಗ ಮಹಾರಾಷ್ಟ್ರ ರಾಜ್ಯದ ಸೋಲಾಪುರ, ನಾಸಿಕ್, ಅಹ್ಮದ್‍ನಗರ್ ಹಾಗೂ ರಾಜ್ಯದ ಬಿಜಾಪುರದಿಂದ ಈರುಳ್ಳಿಯ ಎರಡನೇ ಬೆಳೆ ಬರುತ್ತಿದೆ. ಇದರಿಂದ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.

    ಕೇಂದ್ರ ಸರ್ಕಾರ ರೈತರಿಗಾಗುವ ನಷ್ಟ ತಡೆಯಲು ರಫ್ತು ಆರಂಭಿಸಿದರೆ ಒಳಿತಾಗುತ್ತೆ. ಹೀಗಾಗಿ ರಫ್ತನ್ನು ಕೂಡಲೇ ಆರಂಭಿಸಬೇಕಿದೆ ಎಂದು ರೈತರು ಒತ್ತಾಯಿಸುತ್ತಿದ್ದಾರೆ.

    ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 20 ರಿಂದ 30 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರಿಗೂ ನಷ್ಟವಾಗುತ್ತಿದೆ. ಸಾರಿಗೆ ವೆಚ್ಚ, ಕೂಲಿ ವೆಚ್ಚಗಳು ಹೆಚ್ಚಾಗಿರುವುದರಿಂದ ರೈತರಿಗೆ ಈರುಳ್ಳಿ ಬೆಲೆ ಇಳಿದಿರೋದು ನಷ್ಟ ಉಂಟುಮಾಡುತ್ತಿದೆ. ರಫ್ತು ಆರಂಭಿಸುವುದರಿಂದ 1 ಕೆ.ಜಿ ಈರುಳ್ಳಿಗೆ 40-50 ರೂಪಾಯಿಗೆ ಬಂದರೆ ರೈತರಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಚಾರಗಳು ಇದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.

  • ಪಾತಾಳಕ್ಕೆ ಕುಸಿದ ಟೊಮೆಟೋ ಬೆಲೆ – ಕ್ವಿಂಟಾಲ್ ಗಟ್ಟಲೆ ಬೆಳೆ ತಿಪ್ಪೆಗೆ ಸುರಿದ ರೈತರು

    ಪಾತಾಳಕ್ಕೆ ಕುಸಿದ ಟೊಮೆಟೋ ಬೆಲೆ – ಕ್ವಿಂಟಾಲ್ ಗಟ್ಟಲೆ ಬೆಳೆ ತಿಪ್ಪೆಗೆ ಸುರಿದ ರೈತರು

    ರಾಯಚೂರು: ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಟೊಮೆಟೋ ಬೆಳೆಗೆ ಸೂಕ್ತ ಬೆಲೆ ಸಿಗದೆ ರೋಸಿಹೋದ ರೈತರು ನಗರದ ಮಾರುಕಟ್ಟೆ ಬಳಿ ತಿಪ್ಪೆಗೆ ಸುರಿದು ಹೋಗಿರುವ ಘಟನೆ ನಡೆದಿದೆ. ಬೆಲೆ ಕುಸಿತ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತಂದ ಟೊಮೆಟೋಗಳನ್ನು ಬೀದಿಗೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಹತ್ತಿ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳಗ್ಗೆ ತರಕಾರಿ ಖರೀದಿ ನಡೆಯುತ್ತದೆ. ಕೆಜಿ ಟೊಮೆಟೋಗೆ 2ರೂ. ನಂತೆ ವರ್ತಕರು ದರ ನಿಗದಿ ಮಾಡಿದ್ದಾರೆ. ಆದರೆ ಕನಿಷ್ಠ 3 ರೂಪಾಯಿ ಕೊಡುವಂತೆ ಮನವಿ ಮಾಡಿದರೂ ವರ್ತಕರು ಮಣೆ ಹಾಕಿಲ್ಲ. ಇದರಿಂದ ಸಿಟ್ಟಿಗೆದ್ದ ರೈತರು ಮಾರಾಟ ಮಾಡದೇ ತಿಪ್ಪೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೆಲ ರೈತರು ತಿಪ್ಪೆಗೆ ಸುರಿದರೆ ಇನ್ನೂ ಕೆಲ ರೈತರು ಅಕ್ಕಪಕ್ಕದ ಜನರಿಗೆ, ಕೂಲಿಕಾರ್ಮಿಕರಿಗೆ, ಹೋಟೆಲ್ ಮಾಲೀಕರಿಗೆ ಉಚಿತವಾಗಿ ಟೊಮೆಟೋ ಹಂಚಿದ್ದಾರೆ. ಬಳಿಕ ಸುಮಾರು ಮೂರ್ನಾಲ್ಕು ಕ್ವಿಂಟಲ್ ಉಳಿದಿದ್ದು ಮಾರುಕಟ್ಟೆ ಎದುರೇ ರಸ್ತೆಗೆ ಎಸೆದಿದ್ದಾರೆ. ಒಂದು ಎಕರೆ ಟೊಮೆಟೋ ಬೆಳೆಯಲು ರೈತರು ಕನಿಷ್ಠ 30 ರಿಂದ 40 ಸಾವಿರ ರೂ. ಖರ್ಚು ಮಾಡಿದ್ದಾರೆ.

    ಹಗಲಿರುಳೆನ್ನದೆ ನೀರು ಕಟ್ಟಿದ್ದಾರೆ. ಮುದುರು, ಬೂದುರೋಗದ ಕಾಟವಿದ್ದು ಕಾಲಕಾಲಕ್ಕೆ ರಾಸಾಯನಿಕ ಸಿಂಪಡಿಸಬೇಕಿದೆ. ಇಲ್ಲವಾದರೆ ಬೆಳೆಯೆ ಕೈಗೆಟುಕುವುದಿಲ್ಲ. ಇಷ್ಟೆಲ್ಲಾ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆಯೇ ಇಲ್ಲವಾಗಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಟೊಮೆಟೋ 10 ರಿಂದ 15 ರೂಪಾಯಿ ಕೆ.ಜಿ ಇದೆ. ಮಾರ್ಚ್ ತಿಂಗಳವರೆಗೂ ಟೊಮೆಟೋ ಬೆಳೆಯ ಸ್ಥಳೀಯ ಸೀಜನ್ ಇದ್ದು ಸದ್ಯಕ್ಕೆ ಬೆಲೆ ಏರಿಕೆ ಸಾಧ್ಯತೆಗಳಿಲ್ಲ.

  • ಕಳೆದ ವಾರಕ್ಕಿತ ಈ ವಾರ ಬೇಳೆ ಬೆಲೆ ಹೆಚ್ಚಳ – ಯಾವುದು ಎಷ್ಟು ಹೆಚ್ಚಳ?

    ಕಳೆದ ವಾರಕ್ಕಿತ ಈ ವಾರ ಬೇಳೆ ಬೆಲೆ ಹೆಚ್ಚಳ – ಯಾವುದು ಎಷ್ಟು ಹೆಚ್ಚಳ?

    ಬೆಂಗಳೂರು: ಈಗಂತೂ ಎಲ್ಲಿ ಹೋದ್ರೂ, ಎಲ್ಲಿ ಕೇಳಿದ್ರೂ ಈರುಳ್ಳಿದೇ ಸುದ್ದಿ. ಕೆ.ಜಿಗೆ ಅಷ್ಟು ಕೊಟ್ಟೆ, ಇಷ್ಟು ಕೊಟ್ಟೆ ಅಂತಾನೇ ಮಾತು. ಇನ್ನೂ ಬೆಳೆ ಕಾಳುಗಳ ಬೆಲೆ ಕೇಳುವಂತಿಲ್ಲ ಎನ್ನುವಂತಾಗಿದೆ. ಹೌದು ಕಳೆದ ಒಂದು ತಿಂಗಳಿಂದ ತರಕಾರಿ ಬೆಲೆ ಅದ್ರಲ್ಲೂ ಈರುಳ್ಳಿ ರೇಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು.

    ಈಗ ಜನಸಾಮಾನ್ಯರಿಗೆ ಮತ್ತೊಂದು ಏಟು ಬಿದ್ದಿದ್ದು, ಬೆಳೆಕಾಳುಗಳ ಬೆಲೆಗಳಲ್ಲಿ ಮೂರುಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಜನರಿಗೆ, ಬೆಳೆ-ಕಾಳುಗಳು ಕೈಗೆಟ್ಟಕುತ್ತಿಲ್ಲ. ಇವುಗಳನ್ನು ನೀವೇನಾದ್ರೂ ಕೊಳ್ಳೋಕೆ ಹೋದ್ರೆ, ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಎನ್ನುವಂತಾಗಿದೆ. ಕಳೆದ ವಾರಕ್ಕೂ ಇವತ್ತಿಗೂ ಇರೋ ಬೇಳೆಕಾಳುಗಳ ಬೆಲೆಗಳನ್ನ ನೋಡೋದಾದರೆ.

    ಕಳೆದ ವಾರ 90 ರೂ. ಇದ್ದ ತೋಗರಿ ಬೇಳೆ ಈ ವಾರ 120 ರೂ. ಆಗಿದೆ. ಹಾಗೆಯೇ ಉದ್ದಿನ ಬೇಳೆ ಬೆಲೆ 70 ರೂ. ಯಿಂದ 140 ರೂ. ಗೆ ಜಿಗಿದಿದೆ. ಕಳೆದ ವಾರ 70 ರೂ. ಇದ್ದ ಹೆಸರ ಬೇಳೆ ಈ ವಾರ 130 ರೂ ಆಗಿದೆ. ಕಡಲೆ ಬೇಳೆ 45 ರೂ. ಇಂದ 75 ರೂ. ಆಗಿದೆ. ಇತರ ಆಹಾರ ಪದಾರ್ಥಗಳ ಬೆಲೆಯೂ ಕೂಡ ಹೆಚ್ಚಿದ್ದು, ಅಕ್ಕಿ (ಸಾದಾ) 38 ರೂ. ಇಂದ 55 ರೂ.ಗೆ, ಸೋನಾಮಸೂರಿ ಅಕ್ಕಿ 50 ರೂ. ಇಂದ 60 ರೂ. ಗೆ, ಗೋಧಿ 25 ರೂ. ಇಂದ 32 ರೂ. ಗೆ, ಜೋಳ 28 ರೂ. ಇಂದ 35 ರೂ ಗೆ ಹೆಚ್ಚಳವಾಗಿದೆ.

    ಇದನ್ನು ಬಿಟ್ಟರೆ ಅಡುಗೆ ಎಣ್ಣೆ 80 ರೂ. ಇಂದ 100 ರೂ. ಗೆ ಹೆಚ್ಚಳವಾಗಿದೆ. ತುಪ್ಪ ಕೆ.ಜಿಗೆ 380 ರೂ. ಇಂದ 430 ರೂ. ಗೆ ಹೆಚ್ಚಳವಾಗಿದೆ. ಶೇಂಗಾ 55 ರೂ. ಇಂದ 140 ರೂ. ಗೆ ಹೆಚ್ಚಳವಾಗಿದೆ. ಬೆಲ್ಲ 50 ರೂ. ಇಂದ 55 ರೂ. ಗೆ ಏರಿಕೆ ಆಗಿದೆ.

    ವೆಜಿಟೇಬಲ್ ಗಳ ರೇಟ್ ಸಹ ಗಗನಕ್ಕೇರಿದೆ. ನಗರದ ಹ್ಯಾಪ್ ಕ್ಯಾಮ್ಸ್, ಯಶವಂತಪುರ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಕೇಳಿದ್ರೇ ತಿನ್ನಂಗಿಲ್ಲ ಎನ್ನುವಂತಾಗಿದೆ. ಈರುಳ್ಳಿ ರೇಟ್ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡು 200 ಇಂದ 100 ರೂ. ಗೆ ಕೆ.ಜಿ ಆಗಿದೆ. ಬೆಳ್ಳುಳ್ಳಿ ಕೆ.ಜಿಗೆ 300ರೂ ಆಗಿದ್ರೇ, ನುಗ್ಗೆಕಾಯಿ 350ರೂ ಆಗಿದೆ. ಹೀಗೆ ಜೀವನಾವಶ್ಯಕ ಆಹಾರ ಪದಾರ್ಥಗಳ ಬೆಲೆ, ಈರುಳ್ಳಿ ಬೆಲೆ ಏರಿಕೆಗೆ ಆಗಲು ಮಳೆರಾಯನ ಕಣ್ಣಾಮುಚ್ಚಾಲೆ ಆಟ, ಮಹಾರಾಷ್ಟ್ರದಲ್ಲಾದ ಪ್ರವಾಹ, ಹೊಸ ಬೇಳೆ ಬರದೇ ಇರುವುದರಿಂದ ಬೇಳೆ ಕಾಳುಗಳ ಬೆಲೆ ಏರಿಕೆಯಾಗಿದೆ.

  • ರೇಷ್ಮೆ ಗೂಡು ಮಾರಿ ತಿಂಗಳಾದ್ರೂ ಹಣವಿಲ್ಲ- ಎಚ್‍ಡಿಕೆ ಕ್ಷೇತ್ರದ ರೈತರ ಗೋಳು

    ರೇಷ್ಮೆ ಗೂಡು ಮಾರಿ ತಿಂಗಳಾದ್ರೂ ಹಣವಿಲ್ಲ- ಎಚ್‍ಡಿಕೆ ಕ್ಷೇತ್ರದ ರೈತರ ಗೋಳು

    ರಾಮನಗರ: ನಿರ್ಗಮಿತ ಮುಖ್ಯಮಂತ್ರಿಗಳ ತವರು ಕ್ಷೇತ್ರದ ರೇಷ್ಮೆ ಮಾರುಕಟ್ಟೆಯಲ್ಲಿ ರೈತರ ಗೋಳನ್ನು ಕೇಳುವವರೆ ಇಲ್ಲದಂತಾಗಿದೆ. ರೇಷ್ಮೆ ಗೂಡು ಮಾರಿ ತಿಂಗಳು ಕಳೆದರೂ ಇನ್ನೂ ಹಣ ಪಾವತಿಯಾಗದೆ, ರೈತರು ಪರದಾಡುವಂತಾಗಿದೆ.

    ರೈತರಿಗೆ ವರವಾಗಬೇಕಿದ್ದ ಆನ್‍ಲೈನ್‍ನಲ್ಲಿ ಹಣ ಪಾವತಿ ವ್ಯವಸ್ಥೆ, ಅವರ ಜೀವ ಹಿಂಡುತ್ತಿದೆ. ಪ್ರಾಯೋಗಿಕವಾಗಿ ಅಳವಡಿಸಿಕೊಂಡಿರುವ ಆನ್‍ಲೈನ್ ಹಣ ಪಾವತಿ ವ್ಯವಸ್ಥೆ ಎಡವಟ್ಟಿಗೆ ಕಾರಣವಾಗಿದ್ದು, ಅದೇ ಈಗ ರೈತರ ಕಷ್ಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ತಿಂಗಳ ಪೂರ್ತಿ ಶ್ರಮವಹಿಸಿ ರೇಷ್ಮೆ ಸಾಕಾಣಿಕೆ ಮಾಡಿದ ರೈತರು ದಿನನಿತ್ಯ ಹಣಕ್ಕಾಗಿ ಮಾರುಕಟ್ಟೆಗೆ ಅಲೆದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ರೇಷ್ಮೆ ಗೂಡು ಖರೀದಿಸುವಾಗ ಆನ್‍ಲೈನ್ ಪೇಮೆಂಟ್ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಎರಡು ದಿನಗಳಲ್ಲಿ ಹಣ ಹಾಕುವುದಾಗಿ ಅಧಿಕಾರಿಗಳು ಹಾಗೂ ಡೀಲರ್ಸ್‍ಗಳು ರೈತರಿಗೆ ಸಬೂಬು ಹೇಳಿ ಸಾಗಹಾಕುತ್ತಿದ್ದಾರೆ. ಸಾವಿರಾರು ರೂ.ಗಳನ್ನು ಖರ್ಚು ಮಾಡಿಕೊಂಡು ತಿಂಗಳುಗಟ್ಟೆಲೆ ರೈತರು ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳ ವಿರುದ್ಧ ರೈತರು ಆಕ್ರೊಶ ವ್ಯಕ್ತಪಡಿಸಿದ್ದಾರೆ.