Tag: marketing

  • ನಾನು ಮಾಸ್ಕ್ ಧರಿಸೋದೇ ಇಲ್ಲ: ಡಾ.ಕಕ್ಕಿಲಾಯ ಅವಾಂತರ

    ನಾನು ಮಾಸ್ಕ್ ಧರಿಸೋದೇ ಇಲ್ಲ: ಡಾ.ಕಕ್ಕಿಲಾಯ ಅವಾಂತರ

    ಮಂಗಳೂರು : ನಾನು ಮಾಸ್ಕ್ ಧರಿಸೋದೇ ಇಲ್ಲ, ನಾನು ಸರ್ಕಾರದ ದಡ್ಡ ನಿಯಮಗಳನ್ನ ಪಾಲಿಸಲ್ಲ ಎಂದು ವೈದ್ಯರೊಬ್ಬರು ಮಾಸ್ಕ್ ಧರಿಸದೇ ಸೂಪರ್ ಮಾರ್ಕೆಟ್‍ನಲ್ಲಿ ಉಡಾಫೆ ವರ್ತನೆ ತೋರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ಸೂಪರ್ ಮಾರ್ಕೆಟ್‍ನಲ್ಲಿ ಮಾಸ್ಕ್ ಧರಿಸದೇ ವೈದ್ಯ ಡಾ.ಶ್ರೀನಿವಾಸ ಕಕ್ಕಿಲಾಯ ಬೇಜವಾಬ್ದಾರಿ ತನದ ಮಾತುಗಳನ್ನಾಡಿದ್ದಾರೆ. ಸೂಪರ್ ಮಾರ್ಕೆಟ್‍ನಲ್ಲಿ ಮಾಸ್ಕ್ ಧರಿಸದೇ ಡಾ.ಶ್ರೀನಿವಾಸ ಕಕ್ಕಿಲಾಯ ಶಾಪಿಂಗ್ ಮಾಡಿದ್ದಾರೆ.

    ಮಾಸ್ಕ್ ಧರಿಸದೇ ಆಗಮಿಸಿದ್ದಕ್ಕೆ ಪ್ರಶ್ನಿಸಿದ ಸೂಪರ್ ಮಾರ್ಕೆಟ್ ಸಿಬ್ಬಂದಿ ಮಾಸ್ಕ್ ಧರಿಸದೇ ನಮ್ಮಲ್ಲಿ ಬರಬೇಡಿ, ಸಿಬ್ಬಂದಿ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತೆ ಎಂದು ಹೇಳಿದ್ದಾರೆ. ನಾನು ಮಾಸ್ಕ್ ಧರಿಸೋದೇ ಇಲ್ಲ, ನಾನು ಸರ್ಕಾರದ ದಡ್ಡ ನಿಯಮಗಳನ್ನ ಫಾಲೋ ಮಾಡಲ್ಲ, ನಾನು ವಿಜ್ಞಾನ ಏನ್ ಹೇಳುತ್ತೋ ಅದನ್ನಷ್ಟೇ ಪಾಲಿಸ್ತೇನೆ ಅಂತ ಶ್ರೀನಿವಾಸ್ ವಾದ ಮಾಡುತ್ತಾ ಬೇಜವಾಬ್ದಾರಿತನದ ಮಾತುಗಳನ್ನಾಡಿದ್ದಾರೆ.

    ಸೂಪರ್ ಮಾರ್ಕೆಟ್ ಮಾಲೀಕ ರಯನ್ ರೊಜಾರಿಯಾ ದೂರಿನಡಿ ವೈದ್ಯ ಡಾ.ಶ್ರೀನಿವಾಸ ಕಕ್ಕಿಲಾಯ ವಿರುದ್ಧ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವೈದ್ಯ ಡಾ.ಶ್ರೀನಿವಾಸ ಕಕ್ಕಿಲಾಯ ವಿರುದ್ಧ ಪ್ರಕರಣ ದಾಖಲು ಬೆನ್ನಲ್ಲೇ ನೋಟೀಸ್ ಜಾರಿ ಮಾಡಲಾಗಿದೆ. ಕಕ್ಕಿಲಾಯರ ಮನೆಗೆ ತೆರಳಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

  • 15 ಸಾವಿರದಲ್ಲಿ ಸ್ಟಾರ್ಟ್ ಅಪ್, 4ನೇ ತಿಂಗಳಿನಲ್ಲಿ ಸಿಕ್ತು 15 ಲಕ್ಷ ಫಂಡಿಂಗ್- ಕಂಪನಿಯ ಮೌಲ್ಯ 2.5 ಕೋಟಿಗೂ ಅಧಿಕ

    15 ಸಾವಿರದಲ್ಲಿ ಸ್ಟಾರ್ಟ್ ಅಪ್, 4ನೇ ತಿಂಗಳಿನಲ್ಲಿ ಸಿಕ್ತು 15 ಲಕ್ಷ ಫಂಡಿಂಗ್- ಕಂಪನಿಯ ಮೌಲ್ಯ 2.5 ಕೋಟಿಗೂ ಅಧಿಕ

    – ಸಾಮಾನ್ಯ ವಿದ್ಯಾರ್ಥಿಗಳ ಅಸಾಮಾನ್ಯ ಸಾಧನೆ

    ಲವೊಂದಿದ್ದರೆ ಏನು ಬೇಕಾದ್ರೂ ಮಾಡಬಹುದು. ಛಲಗಾರನಿಗೆ ಅಸಾಧ್ಯವಾದದ್ದು ಸರಳವಾಗುತ್ತೆ. ಅಂತಹ ಇಬ್ಬರು ಯುವಕರ ಸ್ಫೂರ್ತಿದಾಯಕದ ಸಾಧನೆ ಕಥೆ ಇಲ್ಲಿದೆ. ಕೇವಲ 15 ಸಾವಿರ ರೂ.ದಲ್ಲಿ ಸ್ಟಾರ್ಟ್ ಅಪ್ ಆರಂಭಿಸಿದ್ದ ಯುವಕರಿಗೆ ನಾಲ್ಕು ತಿಂಗಳಲ್ಲಿ 15 ಲಕ್ಷ ರೂ. ಫಂಡಿಂಗ್ ಸಿಕ್ಕಿದ್ದು, ಸದ್ಯ ಕಂಪನಿಯ ಮೌಲ್ಯ ಎರಡೂವರೆ ಕೋಟಿಗೂ ಅಧಿಕ.

    22 ವರ್ಷದ ರಿಷಬ್ ಮತ್ತು 21 ವರ್ಷದ ಲಕ್ಕಿ ರೊಹಿಲ್ಲಾ ಇಬ್ಬರು ಕುರುಕ್ಷೇತ್ರದ ಎನ್‍ಐಟಿಯ ಫೈನಲ್ ಇಯರ್ ವಿದ್ಯಾರ್ಥಿಗಳು. ಕಾಲೇಜಿನ ಎರಡನೇ ವರ್ಷದಲ್ಲಿ ಇಬ್ಬರು ಜೊತೆಗೂಡಿ ಒಂದು ಆ್ಯಪ್ ಡೆವಲಪ್ ಮಾಡಿದ್ದರು. ಆದ್ರೆ ಹೆಚ್ಚು ಬಳಕೆಯಾಗದ ಹಿನ್ನೆಲೆ ನಾಲ್ಕು ತಿಂಗಳಲ್ಲೇ ಆ್ಯಪ್ ಕ್ಲೋಸ್ ಮಾಡಲಾಯ್ತು. ಮೂರನೇ ವರ್ಷದಲ್ಲಿ ಆರು ತಿಂಗಳು ಇಂಟರ್ನ್ ಶಿಪ್ ಬಂದಿತ್ತು. ಈ ಸೆಮಿಸ್ಟರ್ ನಲ್ಲಿ ಹೆಚ್ಚು ಓದೋದು ಇರಲ್ಲ. ಹಾಗಾಗಿ ಲಕ್ಕಿ ಹಾಗೂ ರಿಷಬ್ ತಮ್ಮದೇ ಹೊಸ ಸ್ಟಾರ್ಟ್ ಅಪ್ ಆರಂಭಿಸುವ ಕುರಿತು ಪ್ಲಾನ್ ಮಾಡತೊಡಗಿದರು. 2020 ಮಾರ್ಚ್ ನಲ್ಲಿ ಕೆಲವು ಐಡಿಯಾಗಳ ಕೆಲಸ ಮಾಡಲು ಆರಂಭಿಸಿದ ಗೆಳೆಯರು ಕೆಲವೇ ದಿನಗಳಲ್ಲಿ quantel.in (ಕ್ವಾಂಟೆಲ್.ಇನ್) ಹೆಸರಿನ ಪ್ಲಾಟ್‍ಫಾರಂ ನಿರ್ಮಿಸಿದರು. ಈ ವೇದಿಕೆಯಲ್ಲಿ ತಜ್ಞರ ಜೊತೆ ವಿದ್ಯಾರ್ಥಿಗಳು ಫೇಸ್ ಟು ಫೇಸ್ ಮಾತಾಡಬಹುದು. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಮತ್ತು ತಜ್ಞರಿಂದ ನೇರವಾಗಿ ಭವಿಷ್ಯದ ಕುರಿತ ಸಲಹೆಗಳನ್ನ ಪಡೆಯಬಹುದಾಗಿದೆ.

    ಹೂಡಿಕೆ ಮಾಡಿದ್ದು 15 ಸಾವಿರ ರೂಪಾಯಿ!: ಹೌದು ರಿಷಬ್ ಮತ್ತು ಲಕ್ಕಿ ಆ್ಯಡ್‍ಟೆಕ್ ಸ್ಟಾರ್ಟ್ ಅಪ್‍ಗಾಗಿ ಆರಂಭದಲ್ಲಿ 15 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದರು. ಕಂಪನಿಯ ನೋಂದಣಿಗಾಗಿ ತಮ್ಮ ಸೇವಿಂಗ್ಸ್ ಹಣ ಬಳಸಿದ್ದರು. ಸ್ಟಾರ್ಟ್ ಅಪ್ ಆರಂಭಿಸಿದ ನಾಲ್ಕು ತಿಂಗಳಲ್ಲಿಯೇ ಕ್ಯಾಲಿಫೋರ್ನಿಯಾದ ಕಂಪನಿ ಬಂಡವಾಳ ಹೂಡಿಕೆಗೆ ಮುಂದೆ ಬಂದು 15 ಲಕ್ಷ ರೂ. ಫಂಡಿಂಗ್ ಮಾಡಿದೆ. ಸದ್ಯ ಋಷಬ್ ಮತ್ತು ಲಕ್ಕಿ ಕಂಪನಿಯ ಒಟ್ಟು ಮೌಲ್ಯ 2.5 ಕೋಟಿ ರೂ.ಗೆ ತಲುಪಿದೆ.

    ತಜ್ಞರಿಂದ ಸಲಹೆ, ಮಾರ್ಗಸೂಚಿ, ಆಯ್ಕೆಯ ಮಾಹಿತಿ: 12ನೇ ತರಗತಿ ಬಳಿಕ ಪದವಿಯಲ್ಲಿ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು? ಪದವಿ ನಂತರ ಏನು ಮತ್ತು ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳು ಪಡೆದುಕೊಳ್ಳುವ ತರಬೇತಿಯ ಗುಣಮಟ್ಟ ಹೇಗಿರಬೇಕು ಎಂಬಿತ್ಯಾದಿ ಎಲ್ಲ ಪ್ರಶ್ನೆಗಳಿಗೆ ನಮ್ಮ ಕ್ವಾಂಟೆಲ್.ಇನ್ ಉತ್ತರ ನೀಡುತ್ತದೆ ಎಂದು ರಿಷಬ್ ಹೇಳ್ತಾರೆ. ಕ್ವಾಂಟೆಲ್ ವೇದಿಕೆಯಲ್ಲಿ ಬೇರೆ ಬೇರೆ ಕ್ಷೇತ್ರದ ತಜ್ಞರನ್ನ ನೇರವಾಗಿ ಸಂಪರ್ಕಿಸಿ ಸಲಹೆ ಪಡೆಯಬಹುದು. ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆಯಿಲ್ಲದೇ ನೇರವಾಗಿ ಪ್ರಶ್ನೆ ಕೇಳಬಹುದಾಗಿದೆ. ನಿಮ್ಮ ಶಿಕ್ಷಣ, ಉದ್ಯೋಗ ಮತ್ತು ಭವಿಷ್ಯದ ಕುರಿತ ಪ್ರಶ್ನೆಗಳನ್ನ ಕೇಳಿ ವಿದ್ಯಾರ್ಥಿಗಳು ಉತ್ತರ ಪಡೆದುಕೊಳ್ಳಬಹುದು ಎಂದು ಹೇಳ್ತಾರೆ ರಿಷಬ್.

    200 ರೂ. ಪಾವತಿಸಿ ಉತ್ತರ ಕಂಡುಕೊಳ್ಳಿ: ಕ್ವಾಂಟೆಲ್ ಪ್ಲಾಟ್‍ಫಾರಂನಲ್ಲಿರುವ ತಜ್ಞರ ಮಾಹಿತಿ ನೀಡಲಾಗಿರುತ್ತದೆ. ಪ್ರತಿ ತಜ್ಞರ ಕ್ಷೇತ್ರ, ಅನುಭವವನ್ನ ಅವರ ಪ್ರೊಫೈಲ್ ನಲ್ಲಿ ತಿಳಿಸಲಾಗಿರುತ್ತದೆ. ವಿದ್ಯಾರ್ಥಿಗಳೇ ತಮ್ಮ ಸಮಸ್ಯೆಗೆ ಯಾರಿಂದ ಪರಿಹಾರ ಸಿಗುತ್ತೆ ಅಂತ ನಿರ್ಧರಿಸಬಹುದು. ವಿದ್ಯಾರ್ಥಿಗಳಿಗೆಯೇ ತಜ್ಞರನ್ನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಲಾಗುತ್ತದೆ. 30 ರಿಂದ 40 ನಿಮಿಷ ವರ್ಚುವಲ್ ಸೆಷನ್ ಏರ್ಪಡಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರತಿ ಸೆಷನ್ ಗೆ 200 ರೂಪಾಯಿ ಪಾವತಿಸಬೇಕು. ಅತ್ಯಧಿಕ ಶುಲ್ಕವೇ ಆರು ನೂರು ರೂಪಾಯಿ ಇದೆ.

    ತಜ್ಞರ ಜೊತೆಗೆ ನೇರವಾಗಿ ಮಾತನಾಡಲು ಯಾವುದೇ ಕಂಪನಿ ನಮಗಿಂತ ಕಡಿಮೆ ಮೊತ್ತ ಚಾರ್ಜ್ ಮಾಡಲಾರದು. ಸದ್ಯ ಅತಿ ಕಡಿಮೆ ಶುಲ್ಕಕ್ಕೆ ಸೇವೆಯನ್ನ ನೀಡಲಾಗುತ್ತಿದೆ. ಇದುವರೆಗೂ ಕಾಲೇಜು ಮತ್ತು ವಿಶ್ವವಿದ್ಯಾಲಯದ ಸುಮಾರು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿ ನಮ್ಮ ವೇದಿಕೆ ತಲುಪಿದ್ದಾರೆ ಎಂದು ರಿಷಬ್ ಸಂತೋಷ ವ್ಯಕ್ತಪಡಿಸಿದ್ದಾರೆ. ಅವಶ್ಯವಿರುವ ಎಲ್ಲ ವಿದ್ಯಾರ್ಥಿಗೂ ಸೂಕ್ತ ಮಾರ್ಗದರ್ಶನ ಸಿಗಬೇಕು ಎಂಬುವುದು ನಮ್ಮ ಸ್ಟಾರ್ಟ್ ಅಪ್ ಉದ್ದೇಶ ಎಂದು ಹೇಳ್ತಾರೆ ಲಕ್ಕಿ. ಸದ್ಯ ಟಯರ್-1, 2 ಮತ್ತು ಮೂರನೇ ಹಂತದ ನಗರಗಳ ವಿದ್ಯಾರ್ಥಿಗಳತ್ತ ನಮ್ಮ ಗಮನವಿದೆ. ವ್ಯವಹಾರ ಒಂದೆಡೆ ಇರಬಹುದು, ನಮ್ಮ ಸ್ಟಾರ್ಟ್ ಅಪ್ ಮೂಲಕ ಸೋಶಿಯಲ್ ಇಂಪ್ಯಾಕ್ಟ್ ಕ್ರಿಯೇಟ್ ಮಾಡಲು ಪ್ರಯತ್ನಿಸುತ್ತಿದ್ದೇವೆ. ಕೈಗೆಟುಕುವ ದರದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮತ್ತು ಮೆಂಟರ್ ಶಿಪ್ ಸಿಗುವಂತಾಗಬೇಕು ಎಂದು ಸ್ಟಾರ್ಟ್ ಅಪ್ ಆರಂಭದ ಉದ್ದೇಶವನ್ನ ಲಕ್ಕಿ ತಿಳಿಸಿದರು.

    ಬಂಡವಾಳ ಹೂಡಿಕೆಗೆ 35 ಹೂಡಿಕೆದಾರರು ಹಿಂದೇಟು: ಸ್ಟಾರ್ಟ್ ಅಪ್ ಆರಂಭಿಸಿದ ಬಳಿಕ ಲಕ್ಕಿ ಮತ್ತು ರಿಷಬ್ ಫಂಡಿಂಗ್ ಗಾಗಿ ಇನ್ವೆಸ್ಟರ್ಸ್ ಗಳನ್ನ ಹುಡುಕಾಡಿದ್ದಾರೆ. ನೀವಿನ್ನೂ ಕಾಲೇಜಿನ ವಿದ್ಯಾರ್ಥಿಗಳು. ಒಂದು ದಿನದ ಜೋಶ್ ಕೆಲವೇ ದಿನಗಳಲ್ಲಿ ಮುಗಿದು ಹೋಗುತ್ತೆ ಎಂದು 35 ಹೂಡಿಕೆದಾರರು ಫಂಡಿಂಗ್ ಮಾಡಲು ಮುಂದೆ ಬರಲಿಲ್ಲ. ಆದ್ರೆ 36ನೇ ಹೂಡಿಕೆದಾರರಿಗೆ ರಿಷಬ್ ಮತ್ತು ಲಕ್ಕಿಯ ಐಡಿಯಾ ಇಷ್ಟವಾಗಿದೆ. ನಮ್ಮ ಇನ್ವೆಸ್ಟರ್ ದೆಹಲಿಯಲ್ಲಿಯೇ ಶಿಕ್ಷಣ ಪಡೆದಿದ್ದು, ಉದ್ಯೋಗ ಅರಸಿ ಯುಎಸ್ ಗೆ ತೆರಳಿದ್ದು, ಅಲ್ಲಿಯೇ ಸೆಟಲ್ ಆಗಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ ಅವರು ಅಲ್ಲಿಂದಲೇ 15 ಲಕ್ಷ ರೂ. ಫಂಡಿಂಗ್ ಮಾಡಿದರು. ಇದೇ ಹಣದಿಂದ ಪ್ರೊಜೆಕ್ಟರ್, ಮಾರ್ಕೆಟ್ ಖರ್ಚು, ನೌಕರರ ಸಂಬಳ, ಪೀಠೋಪಕರಣ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಯ್ತು ಎಂದು ಲಕ್ಕಿ ಕಂಪನಿ ಆರಂಭದಲ್ಲಿ ಎದುರಾದ ಸವಾಲುಗಳನ್ನ ಹಂಚಿಕೊಂಡರು.

    ರಿಷಬ್ ಮತ್ತು ಲಕ್ಕಿ ಒಂದೇ ಕೋಚಿಂಗ್ ಸೆಂಟರ್ ನಿಂದ ಜೆಇಇ ಯ ತಯಾರಿ ನಡೆಸಿದ್ದರು. ಆದ್ರೆ ಅಲ್ಲಿ ಇಬ್ಬರಿಗೂ ಪರಿಚಯವಿರಲಿಲ್ಲ. ಕುರುಕ್ಷೇತ್ರದ ಎನ್‍ಐಟಿಯಲ್ಲಿ ರಿಷಬ್ ಮೆಕ್ಯಾನಿಕಲ್ ಇಂಜಿನೀಯರಿಂಗ್ ಬ್ರ್ಯಾಂಚ್ ಮತ್ತು ಲಕ್ಕಿ ಸಿವಿಲ್ ಇಂಜಿನೀಯರಿಂಗ್ ಬ್ರ್ಯಾಂಚ್ ಸೇರಿಕೊಂಡಿದ್ದರು. ಒಂದೇ ಕಾಲೇಜಿನಲ್ಲಿ ಓದುತ್ತಿದ್ದರಿಂದ ಇಬ್ಬರ ಸ್ನೇಹ ಬೆಳೆದಿತ್ತು. ಇಬ್ಬರ ಆಲೋಚನೆಗಳು ಒಂದೇ ಆಗಿದ್ದರಿಂದ ರಿಷಬ್ ಮತ್ತು ಲಕ್ಕಿ ಸ್ನೇಹ ಗಾಢವಾಗಿತ್ತು. ಯಾವುದೋ ಕಂಪನಿಯಲ್ಲಿ ನೌಕರನಾಗಿ ಕೆಲಸ ಮಾಡುವ ಬದಲಾಗಿ ಇಬ್ಬರು ತಮ್ಮದೇ ಬ್ಯುಸಿನೆಸ್ ಆರಂಭಿಸಬೇಕೆಂದು ಪ್ಲಾನ್ ಮಾಡಿಕೊಂಡಿದ್ದರು.

    ಹೊಸ ಬ್ಯುಸಿನೆಸ್ ಆರಂಭಕ್ಕೂ ಇಬ್ಬರ ಕುಟುಂಬಸ್ಥರು ಸಪೋರ್ಟ್ ಮಾಡಿದ್ದಾರೆ. ನಂತರ ಕಾಲೇಜಿನ ಕ್ಯಾಂಪಸ್ ನಲ್ಲಿಯೇ ಕುಳಿತು ತಮ್ಮ ಸ್ಟಾರ್ಟ್ ಅಪ್ ಹೇಗಿರಬೇಕು? ಫಂಡಿಂಗ್, ಕಚೇರಿ, ಉದ್ಯೋಗಿಗಳ ಆಯ್ಕೆ ಸೇರಿದಂತೆ ಎಲ್ಲ ವಿಷಯಗಳ ಕುರಿತು ಚರ್ಚೆ ನಡೆಸಿ, ಕ್ವಾಂಟೆಲ್ ಪ್ಲಾಟ್‍ಫಾರಂ ಸೆಟಪ್ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ.

    ಸದ್ಯ 24 ಜನರ ಟೀಂ, ಎಲ್ಲರೂ 18ರಿಂದ 22 ವಯಸ್ಸಿನವರೇ: ಇಬ್ಬರಿಂದ ಆರಂಭವಾದ ತಂಡದಲ್ಲಿ ಸದ್ಯ 24 ಜನರಿದ್ದಾರೆ. ಕೋರ್ ಟೀಂನಲ್ಲಿ ಎಂಟು ಜನ ಮತ್ತು 15 ಇಂಟರ್ನ್ ಗಳಿದ್ದಾರೆ. ರಿಷಬ್, ಆತನಿಬ್ಬರು ಗೆಳೆಯರೇ 22 ವರ್ಷದವರು. ಡಿಸೈನಿಂಗ್ ಕೆಲಸ ಮಾಡುವ ಉದ್ಯೋಗಿಯ ವಯಸ್ಸು 18 ವರ್ಷ. 24 ಜನರು 18 ರಿಂದ 22 ವಯಸ್ಸಿನ ಒಂದೇ ವಯೋಮಾನದವರು ಎಂಬುವುದು ಮತ್ತೊಂದು ವಿಶೇಷ.

    ಲಕ್ಕಿಗೆ 2019ರಲ್ಲಿ ಬಿಡುಗಡೆಯಾದ ಅಪ್‍ ಸ್ಟಾರ್ಟ್ಸ್ ಸಿನಿಮಾ ಪ್ರೇರಣೆಯಾದ್ರೆ, ರಿಷಬ್ ಗೆ ಸ್ಟಾರ್ಟ್ ಅಪ್ ಮತ್ತು ಮೋಟಿವೇಷನಲ್ ಕಂಪನಿಯ ಕಥೆಗಳನ್ನು ಓದೋದು ಇಷ್ಟ. ಓಯೋ ಫೌಂಡರ್ ರಿತೇಶ್ ಅಗರ್‍ವಾಲ್ ಯಶಸ್ಸಿನ ಕಥೆ ಸ್ಟಾರ್ಟ್ ಅಪ್ ಆರಂಭಿಸಲು ಪ್ರೇರಣೆ ನೀಡಿದೆ. ಇಬ್ಬರು ಟಿವಿಎಫ್ ವೆಬ್ ಸಿರೀಸ್ ಪೀಚರ್ಸ್ ನಿಂದ ಪ್ರಭಾವಿತರಾಗಿದ್ದಾರೆ.

  • ಶೀಘ್ರದಲ್ಲೇ ಪಬ್‍ಜಿ ಭಾರತಕ್ಕೆ ಕಮ್‍ಬ್ಯಾಕ್

    ಶೀಘ್ರದಲ್ಲೇ ಪಬ್‍ಜಿ ಭಾರತಕ್ಕೆ ಕಮ್‍ಬ್ಯಾಕ್

    ನವದೆಹಲಿ: ಶೀಘ್ರದಲ್ಲಿಯೇ ಪಬ್‍ಜಿ ಮೊಬೈಲ್ ಗೇಮ್ ಭಾರತಕ್ಕೆ ಹೊಸ ಅವತಾರದಲ್ಲಿ ಎಂಟ್ರಿ ನೀಡಲಿದೆ ಎಂದು ಸೌಥ್ ಕೊರಿಯನ್ ಪಬ್‍ಜಿ ಕಾರ್ಪೋರೇಷನ್ ಇಂದು ಘೋಷಣೆ ಮಾಡಿದೆ.

    ಕೇವಲ ಭಾರತದ ಮಾರುಕಟ್ಟೆಗಾಗಿ ಪಬ್‍ಜಿ ಗೇಮ್ ಹೊಸ ಸ್ವರೂಪದಲ್ಲಿ ಬರಲಿದೆ ಎಂದು ಕಂಪನಿ ತನ್ನ ಘೋಷಣೆಯಲ್ಲಿ ಹೇಳಿದೆ. ಜೊತೆಗೆ ಇದರಲ್ಲಿ ಚೀನಾದ ಪಾಲುದಾರಿಕೆ ಇರಲ್ಲ ಎಂದು ಸ್ಪಷ್ಟನೆ ನೀಡಿದೆ.

    ಪಬ್‍ಜಿ ಕಾರ್ಪೋರೇಷನ್ ನ ಪೇರೆಂಟ್ ಕಂಪನಿ ಕ್ರ್ಯಾಫ್ಟನ್ ಇಂಕ್ ಭಾರತದಲ್ಲಿ 100 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡುವುದಾಗಿ ಸಹ ಘೋಷಿಸಿದೆ. ಕೊರಿಯನ್ ಕಂಪನಿಯೊಂದು ಮೊದಲ ಬಾರಿಗೆ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತವನ್ನ ಹೂಡಿಕೆ ಮಾಡ್ತಿದೆ ಎಂದು ಹೇಳಿದೆ.

    ಕೇಂದ್ರ ಸರ್ಕಾರ ಸೈಬರ್ ಸೆಕ್ಯೂರಿಟಿ ಮತ್ತು ದೇಶದ ಹಿತದ ಹಿನ್ನೆಲೆ ಪಬ್‍ಜಿ ಸೇರಿದಂತೆ ಚೀನಾ ಅ್ಯಪ್ ಗಳನ್ನು ಬ್ಯಾನ್ ಮಾಡಿತ್ತು. ಇದೀಗ ಕೊರಿಯನ್ ಕಂಪನಿ ಭಾರತಕ್ಕಾಗಿ ಹೊಸ ರೂಪದಲ್ಲಿ ಭದ್ರತೆಗೆ ಧಕ್ಕೆಯಾಗದ ರೀತಿಯಲ್ಲಿ ಪಬ್‍ಜಿ ಗೇಮ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ನಿಷೇಧಕ್ಕೊಳಗಾದ ದಿನವೇ ತಾನು ಹಿಂದಿರುಗುವ ಬಗ್ಗೆ ಪಬ್‍ಜಿ ವಿಶ್ವಾಸ ವ್ಯಕ್ತಪಡಿಸಿತ್ತು.

    ಭಾರತಕ್ಕೆ ಪಬ್‍ಜಿ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಹಿಂದಿರುಗಲಿದೆ. ಆದ್ರೆ ಲಾಂಚ್ ಆಗುವ ದಿನವನ್ನ ಕಂಪನಿ ಘೋಷಣೆ ಮಾಡಿಲ್ಲ. ಭಾರತೀಯ ಖಾಸಗಿತನಕ್ಕೆ ಆ್ಯಪ್ ನಿಂದ ಧಕ್ಕೆ ಆಗಲಾರದು ಎಂದು ಪಬ್‍ಜಿ ಸ್ಪಷ್ಟಪಡಿಸಿದೆ.

    ವೀಡಿಯೋ ಗೇಮ್ಸ್, ಇ-ಸ್ಪೋರ್ಟ್ಸ್ ಮತ್ತು ಐಟಿ ಇಂಡಸ್ಟ್ರಿಗಳಲ್ಲಿ ಪಬ್‍ಜಿ ಕಾರ್ಪೋರೇಷನ್ ಬಂಡವಾಳ ಹೂಡಿಕೆ ಮಾಡಲಿದೆ. ಭಾರತದ ನೂರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ. ಜೊತೆಗೆ ಕಾರ್ಯನಿರ್ವಹಣೆ ಹಿನ್ನೆಲೆ ಸ್ಥಳೀಯ ಮಟ್ಟದಲ್ಲಿ ಪಬ್‍ಜಿ ಕಾರ್ಪೋರೇಷನ್ ಕಚೇರಿ ಸಹ ತೆರೆಯಲಿದೆ.

    ವಿಶ್ವದಲ್ಲಿ ಅತಿ ಹೆಚ್ಚು ಡೌನ್‍ಲೋಡ್ ಅಗಿರುವ ಟಾಪ್ 5ರ ಲಿಸ್ಟ್ ನಲ್ಲಿ ಪಬ್‍ಜಿ ಸ್ಥಾನ ಹೊಂದಿದೆ. ಇಡೀ ವಿಶ್ವದಲ್ಲಿ 73 ಕೋಟಿಗೂ ಅಧಿಕ ಜನ ಪಬ್‍ಜಿ ಡೌನ್‍ಲೋಡ್ ಮಾಡಿದ್ದು, ಭಾರತದಲ್ಲಿ 17.5 ಕೋಟಿ ಅಂದ್ರೆ ಶೇ.24ರಷ್ಟು ಬಳಕೆದಾರರನ್ನು ಪಬ್‍ಜಿ ಹೊಂದಿದೆ. ಪಬ್‍ಜಿ ಆಡುವ ಪ್ರತಿ ನಾಲ್ಕು ಜನರಲ್ಲಿ ಓರ್ವ ಭಾರತೀಯನಿರುತ್ತಾನೆ.

  • ಬಯಲು ಸೀಮೆಯಲ್ಲಿ ಅಪರೂಪದ ಖರ್ಜೂರ ಬೆಳೆ- ತೋಟವನ್ನೇ ಮಾರುಕಟ್ಟೆಯಾಗಿ ಪರಿವರ್ತಿಸಿದ ವಿಭಿನ್ನ ರೈತ

    ಬಯಲು ಸೀಮೆಯಲ್ಲಿ ಅಪರೂಪದ ಖರ್ಜೂರ ಬೆಳೆ- ತೋಟವನ್ನೇ ಮಾರುಕಟ್ಟೆಯಾಗಿ ಪರಿವರ್ತಿಸಿದ ವಿಭಿನ್ನ ರೈತ

    ಚಿಕ್ಕಬಳ್ಳಾಪುರ: ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಸಾಗಾನಹಳ್ಳಿ ಗ್ರಾಮದ ಬಳಿ ಭರ್ಜರಿಯಾಗಿ ಖರ್ಜೂರ ಬೆಳೆಯಲಾಗಿದೆ. ಬೆಂಗಳೂರು ಮೂಲದ ಕೃಷಿ ಪದವೀಧರ ದಿವಾಕರ್ ಚೆನ್ನಪ್ಪ ಖರ್ಜೂರವನ್ನ ಬೆಳೆದು ಸಾಧನೆ ಮಾಡಿದ್ದಾರೆ.

    ಹೆಚ್ಚಾಗಿ ಮರುಭೂಮಿ ಪ್ರದೇಶಗಳಲ್ಲಿ ಬೆಳೆಯುವ ಖರ್ಜೂರದ ಹಣ್ಣುಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗಿದೆ. ಈಚಲು ಹಣ್ಣುಗಳಂತೆ ಹಳದಿ ಬಣ್ಣದ ಈ ಖರ್ಜೂರದ ಹಣ್ಣುಗಳು ಒಣ ಖರ್ಜೂರಕ್ಕಿಂತ ತಿನ್ನಲು ಬಲು ರುಚಿಕರ ಹಾಗೂ ಆರೋಗ್ಯಕರ ಕೂಡ. ದಿವಾಕರ್ ಚೆನ್ನಪ್ಪ ಅವರು ತನ್ನ ತೋಟಕ್ಕೆ ಗ್ರಾಹಕರನ್ನ ಬರ ಮಾಡಿಕೊಂಡು ತಾವು ಬೆಳೆದ ಖರ್ಜೂರವನ್ನ ಮಾರಾಟ ಮಾಡಿ ಕೈ ತುಂಬಾ ಹಣ ಕೂಡ ಗಳಿಸಿದ್ದಾರೆ.

    ಕಳೆದ 4 ವರ್ಷಗಳಿಂದ ಖರ್ಜೂರದ ಫಸಲನ್ನ ಮಾರುಕಟ್ಟೆಗೆ ತರೆದೆ ತನ್ನದೇ ತೋಟಕ್ಕೆ ತನ್ನ ಸ್ನೇಹಿತರು, ಸಂಬಂಧಿಕರು, ಪರಿಚಯಸ್ಥರನ್ನು ಕರೆದೊಯ್ದು ಖರ್ಜೂರವನ್ನ ಮಾರಾಟ ಮಾಡುತ್ತಿದ್ದಾರೆ. ಪ್ರತಿ ವರ್ಷ ಫಸಲು ಬಂದಾಗಲೆಲ್ಲಾ ಖರ್ಜೂರದ ಕೊಯ್ಲು ಹಬ್ಬ ಆಚರಿಸುತ್ತಾರೆ. ಹಬ್ಬದ ಅಂಗವಾಗಿ ತನ್ನ ಸ್ನೇಹಿತರು, ಸಂಬಂಧಿಕರು, ಪರಿಚಯಸ್ಥರಿಗೆಲ್ಲಾ ಆಹ್ವಾನ ನೀಡಿ, ಅವರಿಗೆ ಬೇಕಾದ ಖರ್ಜೂರ ಕಟಾವು ಮಾಡಿಕೊಳ್ಳೋಕೆ ಅವಕಾಶ ಮಾಡಿಕೊಡುತ್ತಾರೆ. ಇನ್ನೂ ತೋಟಕ್ಕೆ ಬಂದ ಗ್ರಾಹಕರು ತಮಗೆ ಬೇಕಾದಷ್ಟು ಖರ್ಜೂರ ಕಟಾವು ಮಾಡಿಕೊಂಡು ಹಣ ಪಾವತಿ ಮಾಡುತ್ತಾರೆ.

    ಈ ಬಾರಿಯೂ ಸಹ ಬೆಂಗಳೂರು ಸೇರಿದಂತೆ ನೆರೆಯ ಆಂಧ್ರ ಹಾಗೂ ಜಿಲ್ಲೆಯ ಹಲವು ಮಂದಿ ತೋಟಕ್ಕೆ ಭೇಟಿ ಕೊಟ್ಟು ಖರ್ಜೂರ ಕಟಾವು ಮಾಡಿಕೊಂಡರು. ಈ ಬಾರಿ ಪ್ರತಿ ಕೆಜಿ ಖರ್ಜೂರಕ್ಕೆ 300 ರೂಪಾಯಿ ನಿಗದಿ ಮಾಡಿದ್ದು, ಒಂದೇ ದಿನ ತೋಟಕ್ಕೆ ಬಂದ ಗ್ರಾಹಕರು 300 ಕೆಜಿ ಖರ್ಜೂರ ಖರೀದಿಸಿದ್ದಾರೆ. ವಿಶೇಷ ಅಂದ್ರೆ ಖರ್ಜೂರದ ಮರಗಳಿಗೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನ ಬಳಸಿಲ್ಲ. ಸಾವಯುವ ಗೊಬ್ಬರ ಬಳಸಲಾಗಿದೆ. ಹೀಗಾಗಿ ರೈತ ದಿವಾಕರ್ ಚೆನ್ನಪ್ಪರ ಸಾಧನೆ ಇತರರಿಗೆ ಮಾದರಿ ಅಂತ ಖುಷಿಪಟ್ಟರು.

    ಒಟ್ಟಿನಲ್ಲಿ ಬೆಲೆ ಇಲ್ಲ, ಮಾರುಕಟ್ಟೆ ವ್ಯವಸ್ಥೆ ಇಲ್ಲ, ಬೆಳೆದ ಬೆಳೆಗೆ ಹಣ ಸಿಗದೆ, ಆತಂಕಕ್ಕೆ ಒಳಗಾಗಿ ದಿಕ್ಕು ತೋಚದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ರೈತ ದಿವಾಕರ್ ಚೆನ್ನಪ್ಪರಂತೆ ಭಿನ್ನ-ವಿಭಿನ್ನ ಯೋಚನೆ ಮಾಡಿ ಬೆಳೆ ಬೆಳೆದು ಮಾರಾಟ ಮಾಡಬೇಕಿದೆ.

  • ರಾಯಚೂರಿನಲ್ಲಿ ಭೀಕರ ಬರಗಾಲ: ಕಸಾಯಿಖಾನೆ ಪಾಲಾಗುತ್ತಿರುವ ಜಾನುವಾರುಗಳು

    ರಾಯಚೂರಿನಲ್ಲಿ ಭೀಕರ ಬರಗಾಲ: ಕಸಾಯಿಖಾನೆ ಪಾಲಾಗುತ್ತಿರುವ ಜಾನುವಾರುಗಳು

    ರಾಯಚೂರು: ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ರೈತರು ತಾವು ಸಾಕಿದ ಜಾನುವಾರುಗಳನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ದನಗಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಿಲ್ಲಾರಿ, ಕಂಬಾರಿ, ದುಪ್ಪಟ್ಟಿ, ಸೀಮೆ ಸೇರಿ ವಿವಿಧ ಜಾತಿಯ ಎತ್ತು ಹಾಗೂ ಹಸುಗಳು ಕಡಿಮೆ ಬೆಲೆಯಲ್ಲಿ ಕಸಾಯಿಖಾನೆ ಪಾಲಾಗುತ್ತಿವೆ.

    ಮಳೆರಾಯನ ಅವಕೃಪೆಯಿಂದ ರಾಯಚೂರು ಜಿಲ್ಲೆಯ ರೈತರು ಬದುಕು ಸಾಗಿಸಲು ನಿತ್ಯ ಕಸರತ್ತು ಮಾಡುತ್ತಿದ್ದಾರೆ. ಒಂದು ಕಡೆ ಹೊಲದಲ್ಲಿ ಬೆಳೆಯಿಲ್ಲ ಇನ್ನೊಂದೆಡೆ ಬ್ಯಾಂಕ್‍ನಲ್ಲಿ ಸಾಲ ಬೆಳೆಯುತ್ತಿದೆ. ಹೀಗಾಗಿ ಮಕ್ಕಳಂತೆ ಸಾಕಿ ಬೆಳೆಸಿದ ಜಾನುವಾರುಗಳನ್ನ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಿ ಸಾಲ ತೀರಿಸಿಕೊಳ್ಳುತ್ತಿದ್ದಾರೆ. ಇನ್ನು ಹೊಲದಲ್ಲಿ ಕೆಲಸವೇ ಇಲ್ಲದೆ ರೈತರು ನಗರ ಪ್ರದೇಶಗಳಿಗೆ ಗುಳೆ ಹೊರಡುವ ಪರಸ್ಥಿತಿಯೂ ಇದೆ.

    ಲಕ್ಷಾಂತರ ರೂಪಾಯಿಗೆ ಕೊಂಡ ಜಾನುವಾರುಗಳನ್ನ ಕೇವಲ ಸಾವಿರಾರು ರೂಪಾಯಿಗೆ ಮಾರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಮಳೆಯ ಕೊರತೆಯಾಗಿರುವುದರಿಂದ ಬೆಳೆ ಬೆಳೆಯುವುದಿರಲಿ, ಕುಡಿಯಲು ಸಹ ನೀರು ಸಿಗದಂತಾಗಿದೆ. ಜಾನುವಾರಿಗಳಿಗೆ ಮೇವು ಸಿಗದಿರುವುದರಿಂದ ಎತ್ತು, ಆಕಳು, ಎಮ್ಮೆಗಳನ್ನ ಒಲ್ಲದ ಮನಸ್ಸಿನಿಂದ ಮಾರಾಟ ಮಾಡುತ್ತಿದ್ದಾರೆ. ಆದ್ರೆ ರೈತರು ಅರ್ಧ ಬೆಲೆಗೆ ಮಾರಲು ತಯಾರಿದ್ದರೂ ಮೇವು, ನೀರಿನ ಕೊರತೆಯಿಂದಾಗಿ ಜಾನುವಾರು ಸಂತೆಗಳಲ್ಲಿ ಕೊಳ್ಳುವವರ ಸಂಖ್ಯೆಯೂ ಕಡಿಮೆಯಿದೆ.

    ಜಾನುವಾರುಗಳನ್ನ ಮಾರಾಟ ಮಾಡಿ ಸಾಲ ತೀರಿಸಿಕೊಳ್ಳುವ ಪ್ರಯತ್ನದಲ್ಲಿರುವ ರೈತರ ಕೈಗೆ ಸಿಗುತ್ತಿರುವುದು ಕೇವಲ ಹತ್ತಿಪ್ಪತ್ತು ಸಾವಿರ ರೂಪಾಯಿ ಮಾತ್ರ. ಜಿಲ್ಲೆಯಲ್ಲಿ ಒಟ್ಟು 4 ಲಕ್ಷ 95 ಸಾವಿರದ 978 ಜಾನುವಾರುಗಳಿದ್ದು, 4 ಲಕ್ಷ ಮೆಟ್ರಿಕ್ ಟನ್ ಮೇವು ಸಂಗ್ರಹವಿದೆ. ಆದ್ರೆ ಜಾನುವಾರುಗಳಿಗೆ ಮೇವಿನ ಕೊರತೆ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ. ನೀರು ಹಾಗೂ ಮೇವಿನ ಸಮಸ್ಯೆಯಿಂದ ಜಾನುವಾರು ಕೊಳ್ಳುವವರು ಮುಂದೆ ಬರುತ್ತಿಲ್ಲ. ಹೀಗಾಗಿ ಸಿಕ್ಕಷ್ಟು ಬೆಲೆಗೆ ಜಾನುವಾರುಗಳನ್ನ ರೈತರು ಕಸಾಯಿಖಾನೆಗೆ ಮಾರುತ್ತಿದ್ದಾರೆ.

    ಒಟ್ನಲ್ಲಿ, ವರುಣನ ಮುನಿಸಿನಿಂದ ಜಮೀನು ಕೈಹಿಡಿಯುತ್ತಿಲ್ಲ. ಇತ್ತ ಸರ್ಕಾರದ ಬೆಳೆಹಾನಿ ಪರಿಹಾರವೂ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ರೈತರು ಜಾನುವಾರುಗಳನ್ನ ಸಾಲಭಾರ ತಾಳದೇ ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಭೀಕರ ಬರಗಾಲ ಎದುರಾಗುವ ಮುನ್ಸೂಚನೆಯಿದ್ದು ರೈತರ ನೆರವಿಗೆ ಸರ್ಕಾರ ಮುಂದಾಗಬೇಕಿದೆ.