Tag: Marizanne Kapp

  • ICC Women’s T20 World Cup | ನ್ಯೂಜಿಲೆಂಡ್‌ಗೆ ಚೊಚ್ಚಲ ಚಾಂಪಿಯನ್‌ ಕಿರೀಟ

    ICC Women’s T20 World Cup | ನ್ಯೂಜಿಲೆಂಡ್‌ಗೆ ಚೊಚ್ಚಲ ಚಾಂಪಿಯನ್‌ ಕಿರೀಟ

    ದುಬೈ: 14 ವರ್ಷಗಳ ಬಳಿಕ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ (ICC Women’s T20 World Cup) ಫೈನಲ್‌ ತಲುಪಿದ್ದ ನ್ಯೂಜಿಲೆಂಡ್‌ ಮಹಿಳಾ ಕ್ರಿಕೆಟ್‌ ತಂಡ (New Zealand Women Team) ಚೊಚ್ಚಲ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ದಕ್ಷಿಣ ಆಫ್ರಿಕಾ ತಂಡ 2ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

    ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ 32 ರನ್‌ಗಳ ಗೆಲುವು ಸಾಧಿಸಿ, ಚೊಚ್ಚಲ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಇದನ್ನೂ ಓದಿ: 36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್‌ ಗೆದ್ದ ಕಿವೀಸ್‌ – ಟೀಂ ಇಂಡಿಯಾ ಸೋಲಿಗೆ ಕಾರಣಗಳೇನು?

    ಈ ಹಿಂದೆಯೂ ಎರಡು ಬಾರಿ ಫೈನಲ್‌ ತಲುಪಿದ್ದ ನ್ಯೂಜಿಲೆಂಡ್‌ ಮಹಿಳಾ ತಂಡ 2009ರಲ್ಲಿ ಇಂಗ್ಲೆಂಡ್‌ ವಿರುದ್ಧ, 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ರನ್ನರ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇನ್ನೂ 2023ರಲ್ಲಿ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ 14 ವರ್ಷಗಳ ಬಳಿಕ ಫೈನಲ್‌ ಪ್ರವೇಶಿಸಿದ ಕಿವೀಸ್‌ ಮಹಿಳಾ ತಂಡ ಚೊಚ್ಚಲ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ನ್ಯೂಜಿಲೆಂಡ್‌ ಆರಂಭಿಕ ಹಿನ್ನಡೆ ಅನುಭವಿಸಿದರೂ ಸವಾಲಿನ ಮೊತ್ತ ಕಲೆಹಾಕಿತು. 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 158 ರನ್‌ ಗಳಿಸಿತ್ತು. ಗೆಲುವಿಗೆ 159 ರನ್‌ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್‌ಗಳಿಗೆ 126 ರನ್‌ಗಳಷ್ಟೇ ಗಳಿಸಲು ಸಾಧ್ಯವಾಗಿ ಸೋಲು ಕಂಡಿತು. ಇದನ್ನೂ ಓದಿ: ನಂಬಿಕೆ ಇಲ್ಲದಿದ್ರೆ ಪ್ರತಿ ಪಂದ್ಯ ಮುಗಿದ ಬಳಿಕ ಭಾರತಕ್ಕೆ ಮರಳಬಹುದು: ಬಿಸಿಸಿಐಗೆ ಪಾಕ್‌ ಹೊಸ ಆಫರ್‌

    ಚೇಸಿಂಗ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ಪರ ಆರಂಭಿಕರಾದ ಲಾರಾ ವೊಲ್ವಾರ್ಡ್ಟ್, ತಜ್ಮಿನ್ ಬ್ರಿಟ್ಸ್ ಜೋಡಿ ಮೊದಲ ವಿಕೆಟ್‌ಗೆ 6.5 ಓವರ್‌ಗಳಲ್ಲಿ 51 ರನ್‌ಗಳ ಜೊತೆಯಾಟ ನೀಡಿತ್ತು. ಈ ಜೋಡಿ ವಿಕೆಟ್‌ ಬೀಳುತ್ತಿದ್ದಂತೆ ಮಧ್ಯಮ ಕ್ರಮಾಂಕದ ಆಟಗಾರರು ರನ್‌ ಕಲೆಹಾಕುವಲ್ಲಿ ಎಡವಿದರು. ಇದು ದಕ್ಷಿಣ ಆಫ್ರಿಕಾ ಸೋಲಿಗೆ ಕಾರಣವಾಯಿತು.

    ಅಮೆಲಿಯಾ ಕೇರ್‌ ಆಲ್‌ರೌಂಡ್‌ ಆಟ:
    ಅಲ್ಪ ಮೊತ್ತಕ್ಕೆ ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಿವೀಸ್‌ಗೆ ಅಮೇಲಿಯಾ ಕೇರ್‌ ಬ್ಯಾಟಿಂಗ್‌ನಲ್ಲಿ ಜೀವ ತುಂಬಿದರು. 38 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 43 ರನ್‌ ಬಾರಿಸಿದರು. ಇದರೊಂದಿಗೆ ಬೌಲಿಂಗ್‌ನಲ್ಲಿ ಪ್ರಮುಖ 3 ವಿಕೆಟ್‌ ಕಿತ್ತು ಮಿಂಚಿದರು. ಇದು ತಂಡದ ಗೆಲುವಿಗೆ ಸಾಕಾರವಾಯಿತು. ಇದನ್ನೂ ಓದಿ: ಜಿಯೋದಲ್ಲಿ ಐಪಿಎಲ್‌ ಬರಲ್ಲ, ಇನ್ನು ಮುಂದೆ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ!

  • ಆಫ್ರಿಕಾ ವಿರುದ್ಧ 10 ವಿಕೆಟ್‌ಗಳ ಜಯ – ಭಾರತದ ವನಿತೆಯರಿಗೆ ಮತ್ತೊಂದು ಕಿರೀಟ!

    ಆಫ್ರಿಕಾ ವಿರುದ್ಧ 10 ವಿಕೆಟ್‌ಗಳ ಜಯ – ಭಾರತದ ವನಿತೆಯರಿಗೆ ಮತ್ತೊಂದು ಕಿರೀಟ!

    ಚೆನ್ನೈ: ಶಫಾಲಿ ವರ್ಮಾ, ಸ್ಮೃತಿ ಮಂಧಾನ (Smriti Mandhana) ಅವರ ಬ್ಯಾಟಿಂಗ್‌ ನೆರವು ಹಾಗೂ ಸ್ನೇಹ್‌ ರಾಣಾ ಅವರ ಅಮೋಘ ಬೌಲಿಂಗ್‌ ಪ್ರದರ್ಶನದಿಂದ ಟೀಂ ಇಂಡಿಯಾ ಮಹಿಳಾ ತಂಡವು ದಕ್ಷಿಣಾ ಆಫ್ರಿಕಾ ಮಹಿಳಾ (South Africa Women) ತಂಡದ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿದ್ದ ವನಿತೆಯರು ಇದೀಗ ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) ಗೆಲುವು ಸಾಧಿಸಿದ್ದಾರೆ.

    ಚೆನ್ನೈನ (Chennai) ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್‌ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 37 ರನ್‌ ಗುರಿ ಪಡೆದ ಭಾರತ ಮಹಿಳಾ ತಂಡ 9.2 ಓವರ್‌ಗಳಲ್ಲೇ ಗುರಿ ತಲುಪಿ ಗೆಲುವು ಸಾಧಿಸಿದೆ. ಶಫಾಲಿ ವರ್ಮಾ ಮತ್ತೆ 24 ರನ್, ಶುಭಾ ಸತೀಶ್ 13 ಅಜೇಯರಾಗಿ ಉಳಿದರು. ಇದನ್ನೂ ಓದಿ: ವಿಶ್ವಕಪ್‌ ಗೆಲ್ಲಲು ಕಾರಣವಾಗಿದ್ದು 3 ಮಹತ್ವದ ನಿರ್ಧಾರ – ಟೀಂ ಇಂಡಿಯಾ ಸಿದ್ಧಗೊಂಡಿದ್ದು ಹೇಗೆ?

    ಟಾಸ್ ಗೆದ್ದು ಮೊದಲ ಬ್ಯಾಟ್​ ಮಾಡಿದ ಹರ್ಮನ್​ ಪ್ರೀತ್ ಕೌರ್‌ (Harmanpreet Kaur) ಬಳಗ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್​ ಮೊತ್ತ ಪೇರಿಸಿತ್ತು. 115.1 ಓವರ್​​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಪ್ರತಿಯಾಗಿ ಆಡಿದ್ದ ದಕ್ಷಿಣ ಆಫ್ರಿಕಾ ವನಿತೆಯರ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ 84.3 ಓವರ್​ಗಳಿಗೆ 266 ರನ್ ಗಳಿಸಿ ಆಲೌಟ್‌ ಆಯಿತು. ಬಳಿಕ ಫಾಲೋ ಆನ್‌ ಗುರಿಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 154.4 ಓವರ್‌ಗಳಲ್ಲಿ 373 ಗಳಿಸಿ ಆಲೌಟ್‌ ಆಯಿತು. ಇದರಿಂದ ಭಾರತ ತಂಡ 37 ರನ್​ಗಳ ಗುರಿ ಪಡೆದು ಸುಲಭ ಜಯ ದಾಖಲಿಸಿತು.

    ಮೊದಲ ಇನ್ನಿಂಗ್ಸ್‌ನಲ್ಲಿ ಮಿಂಚಿದ ಬ್ಯಾಟರ್ಸ್‌:
    ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಸ್ಫೋಟಕ ದ್ವಿಶತಕ ದಾಖಲಿಸಿದರು. ಇದರೊಂದಿಗೆ ಸ್ಮೃತಿ ಮಂಧಾನ ಅಮೋಘ ಶತಕ ಸಿಡಿಸಿದರು. ಮೊದಲ ವಿಕೆಟ್​ಗೆ ಈ ಜೋಡಿ 292 ರನ್​ಗಳ ಜತೆಯಾಟ ನೀಡಿತ್ತು. ಸ್ಮೃತಿ ಮಂಧಾನ 161 ಎಸೆತಗಳಲ್ಲಿ 26 ಬೌಂಡರಿ, 1 ಸಿಕ್ಸರ್ ಸಹಿತ 149 ರನ್ ಗಳಿಸಿ ಔಟಾದರೆ. ಶಫಾಲಿ 197 ಎಸೆತಗಳಲ್ಲಿ 23 ಬೌಂಡರಿ, 8 ಸಿಕ್ಸರ್ ಸಹಿತ ದಾಖಲೆಯ ದ್ವಿಶತಕ ಸಿಡಿಸಿದರು. ಬಳಿಕ ಜೆಮಿಮಾ ರೋಡ್ರಿಗ್ಸ್‌ 55 ರನ್‌, ಹರ್ಮನ್​ಪ್ರೀತ್ ಕೌರ್ 69 ರನ್‌, ರಿಚಾ ಘೋಷ್ 86 ರನ್ ಸಿಡಿಸಿ ಮಿಂಚಿದರು.

    ಸ್ನೇಹ್ ರಾಣಾ ದಾಳಿಗೆ ಆಫ್ರಿಕಾ ತತ್ತರ:
    ಮೊದಲ ಇನ್ನಿಂಗ್ಸ್​ ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ ತಂಡ ಸ್ನೇಹ್ ರಾಣಾ ಬೌಲಿಂಗ್ ದಾಳಿಗೆ ತತ್ತರಿಸಿತು. ಇದರ ನಡುವೆಯೂ ಸುನೆ ಲುಸ್ 65 ರನ್‌ ಮತ್ತು ಮರಿಜಾನ್ನೆ ಕಪ್ 74 ರನ್‌ ಗಳಿಸಿ ಬ್ಯಾಟಿಂಗ್‌ ಬಲ ನೀಡಿದ್ದರು. ಇದರೊಂದಿಗೆ ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ, ಸ್ನೇಹ್​ ರಾಣಾ 8 ವಿಕೆಟ್ ಕಿತ್ತರು. ಇದನ್ನೂ ಓದಿ: ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು

    ವೋಲ್ವರ್ತ್​​ ಮತ್ತು ಸುನೆ ಲೂಸ್ ಶತಕ:
    337 ರನ್​ಗಳ ಹಿನ್ನಡೆ ಅನುಭವಿಸಿದ ಪ್ರವಾಸಿ 2ನೇ ಇನ್ನಿಂಗ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿತು. ನಾಯಕಿ ಲಾರಾ ವೋಲ್ವರ್ತ್​​ ಮತ್ತು ಸುನೆ ಲುಸ್​ ಶತಕ ಸಿಡಿಸಿ ಗಮನ ಸೆಳೆದರು. ಲಾರಾ 16 ಬೌಂಡರಿ ಸಹಿತ 122 ರನ್ ಬಾರಿಸಿದರೆ ಲುಸ್​ 203 ಎಸೆತಗಳಲ್ಲಿ 18 ಬೌಂಡರಿ ಸಹಿತ 109 ರನ್ ಗಳಿಸಿದರು. ನಾಡಿನ್ ಡಿ ಕ್ಲರ್ಕ್ 61 ರನ್‌ ಸಿಡಿಸಿದರು. ಮೊದಲ ಇನ್ನಿಂಗ್ಸ್​​ನಲ್ಲಿ 8 ವಿಕೆಟ್ ಕಿತ್ತಿದ್ದ ಸ್ನೆಹ್ ರಾಣಾ 2ನೇ ಇನ್ನಿಂಗ್ಸ್​​ನಲ್ಲಿ 2 ವಿಕೆಟ್ ಪಡೆದರು. ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಕಿತ್ತರು, ಶಫಾಲಿ ವರ್ಮಾ, ಹರ್ಮನ್ ಪ್ರೀತ್ ಕೌರ್ ತಲಾ 1 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಆಟವನ್ನು ಕೊನೆಗೊಳಿಸಿದರು.

    4ನೇ ದಿನದಾಟದಲ್ಲಿ 37 ರನ್‌ಗಳ ಗುರಿ ಪಡೆದ ಭಾರತ 9.2 ಓವರ್​​​ಗಳಲ್ಲೇ 37 ರನ್ ಗಳಿಸಿತು. ಇದನ್ನೂ ಓದಿ: `ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು’ – ಭಗವದ್ಗೀತೆಯ ಸಂದೇಶ ಹಂಚಿಕೊಂಡ ಅಖ್ತರ್

    ಸಂಕ್ಷಿಪ್ತ ಸ್ಕೋರ್‌
    ಟೀಂ ಇಂಡಿಯಾ
    ಮೊದಲ ಇನ್ನಿಂಗ್ಸ್‌ – 603/6d
    2ನೇ ಇನ್ನಿಂಗ್ಸ್‌ – 37/0

    ದಕ್ಷಿಣ ಆಫ್ರಿಕಾ
    ಮೊದಲ ಇನ್ನಿಂಗ್ಸ್‌ – 266/10
    2ನೇ ಇನ್ನಿಂಗ್ಸ್‌ – 373/10

  • WPL 2023: ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ವಿಕೆಟ್‌ಗಳ ಜಯ – ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ

    WPL 2023: ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ವಿಕೆಟ್‌ಗಳ ಜಯ – ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ

    ಮುಂಬೈ: ಸಂಘಟಿತ‌ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವು ಯುಪಿ ವಾರಿಯರ್ಸ್‌ (UP Warriorz) ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ನೇರವಾಗಿ WPL ಫೈನಲ್‌ ಪ್ರವೇಶಿಸಿದೆ.

    ಮಂಗಳವಾರ ಮುಂಬೈನ ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ನಡೆದ ಲೀಗ್‌ ಸುತ್ತಿನ ಕೊನೆಯ ಪಂದ್ಯದಲ್ಲಿ ಜಯ ದಾಖಲಿಸುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದು, ನೇರವಾಗಿ ಫೈನಲ್‌ ಪ್ರವೇಶಿಸಿದೆ. ಕ್ರಮವಾಗಿ 2-3ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್‌ ಹಾಗೂ ಯುಪಿ ವಾರಿಯರ್ಸ್‌ ಎಲಿಮಿನೇಟರ್‌ ಪಂದ್ಯದಲ್ಲಿ ಸೆಣಸಲಿವೆ. ಗೆದ್ದ ತಂಡ ಫೈನಲ್‌ ಪ್ರವೇಶಿಸಲಿದೆ. ಇದನ್ನೂ ಓದಿ: WPL 2023: ಮುಂಬೈಗೆ ಜಯ – RCB ಸೋಲಿನ ವಿದಾಯ

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್‌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 138 ರನ್‌ ಗಳಿಸಿತ್ತು. 139‌ ರನ್‌ ಗುರಿ ಪಡೆದ ಡೆಲ್ಲಿ 17.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: WPL 2023: ರೋಚಕ ಜಯದೊಂದಿಗೆ ಯುಪಿ ವಾರಿಯರ್ಸ್‌ ಪ್ಲೆ ಆಫ್‌ಗೆ – RCB ಮನೆಗೆ

    ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಮೆಗ್‌ ಲ್ಯಾನಿಂಗ್‌ (Meg Lanning), ಶಫಾಲಿ ವರ್ಮಾ ಉತ್ತಮ ಆರಂಭ ನೀಡಿದರು. ಶಫಾಲಿ 16 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 21 ರನ್‌ ಗಳಿಸಿದರೆ, ಮೆಗ್‌ ಲ್ಯಾನಿಂಗ್‌ 23 ಎಸತೆಗಳಲ್ಲಿ 39 ರನ್‌ (5 ಬೌಂಡರಿ, 2 ಸಿಕ್ಸರ್‌) ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಅಲಿಸ್‌ ಕ್ಯಾಪ್ಸಿ 34 ರನ್‌ (4 ಬೌಂಡರಿ, 1 ಸಿಕ್ಸರ್‌) ಗಳಿಸಿದರೆ, ಆಲ್‌ರೌಂಡರ್‌ ಮಾರಿಜಾನ್ನೆ ಕಪ್‌ 31 ಎಸೆತಗಳಲ್ಲಿ 34 ರನ್‌ (4 ಬೌಂಡರಿ, 1 ಸಿಕ್ಸರ್‌) ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

    ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ 20 ಓವರ್‌ಗಳಲ್ಲಿ ಯುಪಿ ವಾರಿಯರ್ಸ್ ತಂಡ 6 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿತು. ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಪರವಾಗಿ ತಹಿಲಾ ಮೆಕ್‌ಗ್ರಾಥ್ ಅಜೇಯ 58 ರನ್‌ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಇದರೊಂದಿಗೆ ನಾಯಕಿ ಅಲಿಸ್ಸಾ ಹೀಲಿ ಅವರ 36 ರನ್‌ಗಳ ಕೊಡುಗೆ ತಂಡಕ್ಕೆ ನೆರವಾಯಿತು. ಉಳಿದಂತೆ ಯಾರೊಬ್ಬರೂ ಸ್ಥಿರವಾಗಿ ನಿಲ್ಲದ ಕಾರಣ ವಾರಿಯರ್ಸ್‌ ತಂಡ ಸಾಧಾರಣ ಮೊತ್ತವನ್ನಷ್ಟೇ ಗಳಿಸಲು ಶಕ್ತವಾಯಿತು.

    ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಬೌಲಿಂಗ್‌ನಲ್ಲಿ ಅಲಿಸ್‌ ಕ್ಯಾಪ್ಸಿ 3 ವಿಕೆಟ್ ಕಿತ್ತರೆ, ರಾಧಾ ಯಾದವ್ 2 ವಿಕೆಟ್, ಜೆಸ್ ಜೊನಾಸನ್‌ 1 ವಿಕೆಟ್‌ ಪಡೆದು ಮಿಂಚಿದರು.

  • 10 ಬೌಂಡರಿ, 5 ಸಿಕ್ಸರ್‌ – ಶಫಾಲಿ ವರ್ಮ ಸ್ಫೋಟಕ ಫಿಫ್ಟಿ; ಡೆಲ್ಲಿ ಕ್ಯಾಪಿಟಲ್ಸ್‌ಗೆ 10 ವಿಕೆಟ್‌ಗಳ ಭರ್ಜರಿ ಜಯ

    10 ಬೌಂಡರಿ, 5 ಸಿಕ್ಸರ್‌ – ಶಫಾಲಿ ವರ್ಮ ಸ್ಫೋಟಕ ಫಿಫ್ಟಿ; ಡೆಲ್ಲಿ ಕ್ಯಾಪಿಟಲ್ಸ್‌ಗೆ 10 ವಿಕೆಟ್‌ಗಳ ಭರ್ಜರಿ ಜಯ

    ಮುಂಬೈ: ಶಫಾಲಿ ವರ್ಮಾ (Shafali Verma) ಸ್ಫೋಟಕ ಅರ್ಧ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಟಾಸ್‌ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 105 ರನ್‌ ಗಳಿಸಿತ್ತು. 106 ರನ್‌ಗಳ ಅಲ್ಪಮೊತ್ತದ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೇವಲ 7.1 ಓವರ್‌ಗಳಲ್ಲೇ 107 ರನ್‌ ಚಚ್ಚಿ ಗೆಲುವು ಸಾಧಿಸಿತು.

    ಶಫಾಲಿ ವರ್ಮಾ ಆರಂಭದಿಂದಲೇ ಗುಜರಾತ್‌ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿ, ಕೇವಲ 18 ಎಸೆತಗಳಲ್ಲೇ ಸ್ಫೋಟಕ ಅರ್ಧಶತಕ ಸಿಡಿಸಿದ್ದರು. 271.42 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಶಫಾಲಿ 28 ಎಸೆತಗಳಲ್ಲಿ 76 ರನ್‌ (10 ಬೌಂಡರಿ, 5 ಸಿಕ್ಸರ್‌) ಚಚ್ಚಿದರು. ಇದಕ್ಕೆ ಜೊತೆಯಾದ ನಾಯಕಿ ಮೆಗ್‌ ಲ್ಯಾನಿಂಗ್‌ (Meg Lanning) 15 ಎಸೆತಗಳಲ್ಲಿ 21 ರನ್‌ ಗಳಿಸುವ ಮೂಲಕ ಸಾಥ್‌ ನೀಡಿದರು. ಅಂತಿಮವಾಗಿ ಕೇವಲ 7.1 ಓವರ್ ಗಳಲ್ಲಿ 107 ರನ್ ಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್‌ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಆಲ್‌ರೌಂಡರ್ ಮಾರಿಜಾನ್ನೆ ಕಪ್ (Marizanne Kapp) ತೀವ್ರ ಆಘಾತ ನೀಡಿದರು. ಇದನ್ನೂ ಓದಿ: ಸೋಲಿನ ಹೊಣೆ ನಾನೇ ಹೊರುತ್ತೇನೆ – ತನ್ನನ್ನು ತಾನೇ ಟೀಕಿಸಿಕೊಂಡ ಸ್ಮೃತಿ ಮಂದಾನ

    ಆರಂಭದಲ್ಲೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಗುಜರಾತ್‌ 33 ರನ್ ಗಳಾಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜಾರ್ಜಿಯಾ ವಾರೆಹಾಮ್ 22 ರನ್, ಕಿಮ್ ಗಾರ್ತ್ 32 ರನ್ ಗಳಿಸುವ ಮೂಲಕ ತಂಡ 100 ರನ್‌ಗಳ ಗಡಿ ದಾಟಲು ನೆರವಾದರು. ಇದನ್ನೂ ಓದಿ: ಗಿಲ್‌ ಶತಕದ ಮಿಂಚು, ಬ್ಯಾಟಿಂಗ್‌ ಲಯಕ್ಕೆ ಮರಳಿದ ಕೊಹ್ಲಿ ಅರ್ಧ ಶತಕ – ಉತ್ತಮ ಸ್ಥಿತಿಯಲ್ಲಿ ಭಾರತ

    ಡೆಲ್ಲಿ ಕ್ಯಾಪಿಟಲ್ಸ್‌ ಪರ ಮಾರಿಜಾನ್ನೆ ಕಪ್ 4 ಓವರ್ ಗಳಲ್ಲಿ ಕೇವಲ 15 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರೆ, ಶಿಖಾ ಪಾಂಡೆ 3 ವಿಕೆಟ್, ರಾಧಾ ಯಾದವ್ 1 ವಿಕೆಟ್ ಪಡೆದರು.