Tag: Marcus Stoinis

  • ಕಳೆದ 7 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್‌!

    ಕಳೆದ 7 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್‌!

    ಚಂಡೀಗಢ: ಮಲ್ಲನ್‌ಪುರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ ಕ್ವಾಲಿಫೈಯರ್‌ 1 ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 102 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ 10 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 106 ರನ್‌ ಸಿಡಿಸಿ ಗೆಲುವು ಸಾಧಿಸಿದೆ. ಈ ಮೂಲಕ 4ನೇ ಬಾರಿಗೆ ಫೈನಲ್‌ಗೆ ಎಂಟ್ರಿಕೊಟ್ಟಿದೆ.

    2009, 2011, 2016ರ ಬಳಿಕ 4ನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿರುವ ಆರ್‌ಸಿಬಿ ಈ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ ಎಂದು ಕ್ರಿಕೆಟ್‌ ತಜ್ಞರು ಭವಿಷ್ಯ ನುಡಿದಿದ್ದಾರೆ. ಏಕೆಂದರೆ ಕಳೆದ 7 ವರ್ಷಗಳಲ್ಲಿ ನಡೆದ ಐಪಿಎಲ್‌ ಆವೃತ್ತಿಗಳಲ್ಲಿ ಐಪಿಎಲ್‌ ಕ್ವಾಲಿಫೈರ್‌-1 ನಲ್ಲಿ ಗೆದ್ದ ತಂಡಗಳೇ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

    ಯಾವ ವರ್ಷ – ಯಾವ ತಂಡ?
    2018 – CSK.
    2019 – MI.
    2020 – MI.
    2021 – CSK.
    2022 – GT.
    2023 – CSK.
    2024 – KKR
    2025 – ….?

    2018ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್‌, 2021ರಲ್ಲಿ ಸಿಎಸ್‌ಕೆ, 2022ರಲ್ಲಿ ಗುಜರಾತ್‌ ಟೈಟಾನ್ಸ್‌, 2023ರಲ್ಲಿ ಸಿಎಸ್‌ಕೆ, 2024ರಲ್ಲಿ ಕೆಕೆಆರ್‌ ತಂಡಗಳು ಕ್ವಾಲಿಫೈಯರ್‌-1ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟವನ್ನು ತಮ್ಮದಾಗಿಸಿಕೊಂಡಿವೆ. ಇದೀಗ 18ನೇ ಆವೃತ್ತಿಯ ಕ್ವಾಲಿಫೈಯರ್‌-1 ನಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿರುವ ಆರ್‌ಸಿಬಿ ಚಾಂಪಿಯನ್‌ ಪಟ್ಟಕ್ಕೆ ಕೊರಳೊಡ್ಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

  • RCB vs PBKS | 101 ರನ್‌ಗಳಿಗೆ ಪಂಜಾಬ್‌ ಆಲೌಟ್‌ – ಆರ್‌ಸಿಬಿ ಫೈನಲ್‌ಗೇರಲು 102 ರನ್‌ ಗುರಿ

    RCB vs PBKS | 101 ರನ್‌ಗಳಿಗೆ ಪಂಜಾಬ್‌ ಆಲೌಟ್‌ – ಆರ್‌ಸಿಬಿ ಫೈನಲ್‌ಗೇರಲು 102 ರನ್‌ ಗುರಿ

    ಚಂಡೀಗಢ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದ ಪಂಜಾಬ್‌ ಕಿಂಗ್ಸ್‌ವು (Punjab Kings) ಕ್ವಾಲಿಫೈಯರ್‌-1ನಲ್ಲಿ 14.1 ಓವರ್‌ಗಳಲ್ಲೇ 101‌ ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ ಎದುರಾಳಿ ಆರ್‌ಸಿಬಿಗೆ (RCB) 102 ರನ್‌ಗಳ ಗುರಿ ನೀಡಿದೆ.

    ಮಲ್ಲನ್‌ಪುರ ಕ್ರಿಕೆಟ್‌ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ಮೊದಲು‌ ಫೀಲ್ಡಿಂಗ್‌ ಆಯ್ದುಕೊಂಡು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಪಂಜಾಬ್‌ಗೆ ಬಿಟ್ಟುಕೊಟ್ಟಿತು.

    ಉತ್ತಮ ರನ್‌ ಪೇರಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಪಂಜಾಬ್‌ ಕಿಂಗ್ಸ್‌ಗೆ  ಆರಂಭದಲ್ಲೇ ಮರ್ಮಾಘಾತವಾಯಿತು. 1.2 ಓವರ್‌ಗಳಲ್ಲಿ 9 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿದ್ದ ಪಂಜಾಬ್‌ ಬಳಿಕ ಪೆವಿಲಿಯನ್‌ ಪರೇಡ್‌ ನಡೆಸಲು ಶುರು ಮಾಡಿತು. ಪವರ್‌ ಪ್ಲೇನಲ್ಲಿ ಒಂದೆಡೆ ರನ್‌ ಹರಿಯುತ್ತಿದ್ದರೆ ಮತ್ತೊಂದೆಡೆ ಪ್ರಮುಖ ವಿಕೆಟ್‌ಗಳು ತರಗೆಲೆಗಳಂತೆ ಉದುರುತ್ತಿದ್ದವು. ಇದರಿಂದ ಪವರ್‌ ಪ್ಲೇನಲ್ಲಿ 48 ರನ್‌ ಗಳಿಸುವ ಹೊತ್ತಿಗೆ ಪಂಜಾಬ್‌ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು.

    ಆರ್‌ಸಿಬಿ ಬೌಲರ್‌ಗಳ ಬಿಗಿ ಹಿಡಿತ:
    ಮೊದಲ ಓವರ್‌ನಲ್ಲಿ ನಿರಾಸೆಗೊಂಡಿದ್ದ ಆರ್‌ಸಿಬಿ ಬೌಲಿಂಗ್‌ ಪಡೆ 2ನೇ ಓವರ್‌ನಿಂದಲೇ ಪಂಜಾಬ್‌ ಬ್ಯಾಟರ್‌ಗಳ ಮೇಲುಗೈ ಸಾಧಿಸಿತು. ಈ ಆವೃತ್ತಿಯಲ್ಲಿ ಮೆರೆದಾಡಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಪೆವಿಲಿಯನ್‌ ಹಾದಿ ತೋರುವಲ್ಲಿ ಯಶಸ್ವಿಯಾದರು. ಸೂಯಶ್‌ ಶರ್ಮಾ (Suyash Sharma) ಸ್ಪಿನ್‌ ಮೋಡಿ, ಜೋಶ್‌ ಹೇಜಲ್ವುಡ್‌, ಯಶ್‌ ದಯಾಳ್‌, ಭುವನೇಶ್ವರ್‌ ಕುಮಾರ್‌ ಅವರ ಉರಿ ಚೆಂಡಿನ ದಾಳಿಗೆ ಪಂಜಾಬ್‌ ರನ್‌ ಕದಿಯಲು ತಿಣುಕಾಡಿತು. ಮಾರ್ಕಸ್‌ ಸ್ಟೋಯ್ನಿಸ್‌, ನೇಹಾಲ್‌ ವಧೇರಾ ಹೊರತುಪಡಿಸಿದ್ರೆ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಒಂದಂಕಿಯ ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು.

    ಪಂಜಾಬ್‌ ಕಿಂಗ್ಸ್‌ ಪರ ಮಾರ್ಕಸ್‌ ಸ್ಟೋಯ್ನಿಸ್‌ 26 ರನ್‌, ಅಜ್ಮತುಲ್ಲಾ ಒಮರ್ಜೈ, ಪ್ರಭ್‌ಸಿಮ್ರನ್‌ ತಲಾ 18 ರನ್‌, ಪ್ರಿಯಾಂಶ್‌ ಆರ್ಯ 7 ರನ್‌, ಜೋಶ್‌ ಇಂಗ್ಲಿಸ್‌ 4 ರನ್‌. ಶ್ರೇಯಸ್‌ ಅಯ್ಯರ್‌ 2 ರನ್‌, ನೇಹಾಲ್‌ ವಧೇರಾ 8 ರನ್‌, ಶಶಾಂಕ್‌ ಸಿಂಗ್‌ 3, ಹರ್ಪ್ರೀತ್‌ ಬ್ರಾರ್‌ 4 ರನ್‌ ಗಳಿಸಿದ್ರೆ ಮುಶೀರ್‌ ಖಾನ್‌ ಶೂನ್ಯ ಸುತ್ತಿದರು.

    ಆರ್‌ಸಿಬಿ ಪರ ಸೂಯಶ್‌ ಶರ್ಮಾ, ಜೋಶ್‌ ಹೇಜಲ್ವುಡ್‌ ತಲಾ 3 ವಿಕೆಟ್‌ ಕಿತ್ತರೆ, ಯಶ್‌ ದಯಾಳ್‌ 2 ವಿಕೆಟ್‌, ಭುವನೇಶ್ವರ್‌ ಕುಮಾರ್‌, ರೊಮಾರಿಯೊ ಶೆಫರ್ಡ್‌ ತಲಾ ಒಂದು ವಿಕೆಟ್‌ ಪಡೆದು ಮಿಂಚಿದರು.

  • ಆಸೀಸ್‌ಗೆ ಬಹುದೊಡ್ಡ ಆಘಾತ – ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಗುಳಿದ ಸ್ಟಾರ್ಕ್‌

    ಆಸೀಸ್‌ಗೆ ಬಹುದೊಡ್ಡ ಆಘಾತ – ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಗುಳಿದ ಸ್ಟಾರ್ಕ್‌

    – ದೈತ್ಯ ಆಸೀಸ್‌ ತಂಡದಲ್ಲೀಗ `Five Star’ ಕೊರತೆ

    ಕ್ಯಾನ್ಬೆರಾ: 2025ರ ಚಾಂಪಿಯನ್ಸ್‌ (Champions Trophy 2025) ಟ್ರೋಫಿ ಟೂರ್ನಿಗೆ ಇನ್ನೂ ಒಂದು ವಾರವಷ್ಟೇ ಬಾಕಿ ಉಳಿದಿದೆ. ಈ ಹೊತ್ತಿನಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಬಹುದೊಡ್ಡ ಆಘಾತವಾಗಿದೆ.

    ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಮಾರ್ಕಸ್‌ ಸ್ಟೋಯ್ನಿಸ್‌ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಸ್ಟಾರ್‌ ವೇಗಿ ಮಿಚೆಲ್‌ ಸ್ಟಾರ್ಕ್‌ (Mitchell Starc) ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಹೊತ್ತಲ್ಲೇ ಆಸೀಸ್‌ಗೆ ದೊಡ್ಡ ಆಘಾತ – ಏಕದಿನ ಕ್ರಿಕೆಟ್‌ಗೆ ಸ್ಟೋಯ್ನಿಸ್‌ ಗುಡ್‌ಬೈ

    ಬಲಿಷ್ಠ ತಂಡದಲ್ಲಿ ಸ್ಟಾರ್‌ಗಳ ಕೊರತೆ:
    2025ರ ಚಾಂಪಿಯನ್ಸ್‌ ಟ್ರೋಫಿಟೂರ್ನಿಗೆ 7 ದಿನಗಳು ಬಾಕಿಯಿದೆ. ಈಗಾಗಲೇ ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins), ವೇಗಿ ಜೋಶ್‌ ಹ್ಯಾಜಲ್‌ವುಡ್‌, ಮಿಚೆಲ್‌ ಮಾರ್ಷ್‌ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಅಲ್ಲದೇ ಏಕದಿನ ಕ್ರಿಕೆಟ್‌ಗೆ ಮಾರ್ಕಸ್‌ ಸ್ಟೋಯ್ನಿಸ್‌ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಈ ಬೆನ್ನಲ್ಲೇ ಮಿಚೆಲ್‌ ಸ್ಟಾರ್ಕ್‌ ವೈಯಕ್ತಿಕ ಕಾರಣಗಳಿಂದ ಹೊರಗುಳಿದಿದ್ದಾರೆ. ಇದು ಅಸ್ಟ್ರೇಲಿಯಾ ತಂಡಕ್ಕೆ ನುಂಗಲಾರದ ತುತ್ತಾಗಿದೆ. ಪ್ಯಾಟ್‌ ಕಮ್ಮಿನ್ಸ್‌ ಹೊರಬಿದ್ದ ಬೆನ್ನಲ್ಲೇ ಸ್ಟೀವ್‌ ಸ್ಮಿತ್‌ಗೆ ಚಾಂಪಿಯನ್ಸ್‌ ಟ್ರೋಫಿ ನಾಯಕತ್ವ ನೀಡಲಾಗಿದೆ. ಆದ್ರೆ ಮೂವರು ಸ್ಟಾರ್‌ ಬೌಲರ್‌ (ಸ್ಟಾರ್ಕ್‌, ಕಮ್ಮಿನ್ಸ್‌, ಹ್ಯಾಜಲ್‌ವುಡ್‌), ಆಲ್‌ರೌಂಡರ್‌ ಸ್ಟೋಯ್ನಿಸ್‌ ಹೊರಗುಳಿದಿರುವುದು ಆಸೀಸ್‌ಗೆ ಆಘಾತವಾಗಿದೆ. ಈ ಐವರಿ ಬದಲೀ ಆಟಗಾರರಾಗಿ ಯಾರನ್ನ ಆಯ್ಕೆ ಮಾಡಬೇಕೆಂಬುದು ಚಿಂತೆಯಾಗಿದೆ.

    ಫೆ.19ರಿಂದ ಚಾಂಪಿಯನ್ಸ್‌ ಟ್ರೋಫಿ ಆರಂಭವಾಗುತ್ತಿದ್ದು, ಸ್ಟಾರ್ಕ್‌, ಕಮ್ಮಿನ್ಸ್‌, ಹ್ಯಾಜಲ್‌ವುಡ್‌ ಮೇಲೆ ಆಸೀಸ್‌ ಬಹುದೊಡ್ಡ ನಿರೀಕ್ಷೆ ಹೊಂದಿತ್ತು. ಆದ್ರೆ ಒಬ್ಬರಾದ ಮೇಲೆ ಒಬ್ಬರು ತಂಡದಿಂದ ಹೊರಗುಳಿಯುತ್ತಿರುವುದು ಕ್ರಿಕೆಟ್‌ ಲೋಕದಲ್ಲಿ ಚರ್ಚೆ ಹುಟ್ಟುಹಾಕಿದೆ. ಇದನ್ನೂ ಓದಿ:IND vs ENG, 2nd ODI: ರೋಹಿತ್‌ ಅಬ್ಬರದ ಶತಕ, ಜಡೇಜಾ ಸ್ಪಿನ್‌ ಜಾದು – ಆಂಗ್ಲರ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ

    ಏಕದಿನ ಕ್ರಿಕೆಟ್‌ನಲ್ಲಿ ಸ್ಟೋಯ್ನಿಸ್‌ ಸಾಧನೆ:
    2015ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸ್ಟೋಯ್ನಿಸ್‌, ಈವರೆಗೂ 74 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ಅವಧಿಯಲ್ಲಿ 93.96 ಸ್ಟ್ರೈಕ್ ರೇಟ್‌ನಲ್ಲಿ 1,495 ರನ್ ಗಳಿಸಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್​ನಲ್ಲಿ ನ್ಯೂಜಿಲೆಂಡ್ ವಿರುದ್ಧದ ನಡೆದಿದ್ದ ಪಂದ್ಯದಲ್ಲಿ ಅಜೇಯ 146 ರನ್​ ಗಳಿಸಿದ್ದು ಏಕದಿನ ಸ್ವರೂಪದಲ್ಲಿ ಅತ್ಯಧಿಕ ಸ್ಕೋರ್​ ಆಗಿತ್ತು.

    ಜೊತೆಗೆ 74 ಪಂದ್ಯಗಳಲ್ಲಿ 43.12 ಸರಾಸರಿಯಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದಾರೆ. 2024ರ ನವೆಂಬರ್‌ 10ರಂದು ಪರ್ತ್‌ನಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. 2019ರಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾ ನೀಡುವ ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.

  • ಚಾಂಪಿಯನ್ಸ್‌ ಟ್ರೋಫಿ ಹೊತ್ತಲ್ಲೇ ಆಸೀಸ್‌ಗೆ ದೊಡ್ಡ ಆಘಾತ – ಏಕದಿನ ಕ್ರಿಕೆಟ್‌ಗೆ ಸ್ಟೋಯ್ನಿಸ್‌ ಗುಡ್‌ಬೈ

    ಚಾಂಪಿಯನ್ಸ್‌ ಟ್ರೋಫಿ ಹೊತ್ತಲ್ಲೇ ಆಸೀಸ್‌ಗೆ ದೊಡ್ಡ ಆಘಾತ – ಏಕದಿನ ಕ್ರಿಕೆಟ್‌ಗೆ ಸ್ಟೋಯ್ನಿಸ್‌ ಗುಡ್‌ಬೈ

    ಕ್ಯಾನ್ಬೆರಾ: 2025ರ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಟೂರ್ನಿಗೆ 13 ದಿನಗಳು ಬಾಕಿಯಿರುವಾಗಲೇ ಆಸೀಸ್‌ಗೆ ದೊಡ್ಡ ಆಘಾತ ಎದುರಾಗಿದೆ. ಆಸೀಸ್‌ ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins), ವೇಗಿ ಜೋಶ್‌ ಹ್ಯಾಜಲ್‌ವುಡ್‌ ಈಗಾಗಲೇ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಮಿಚೆಲ್‌ ಮಾರ್ಷ್‌ ಸಹ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ನಡುವೆ ಸ್ಟಾರ್‌ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ (Marcus Stoinis) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಬಿಗ್‌ ಶಾಕ್‌ ಕೊಟ್ಟಿದ್ದಾರೆ.

    ಫೆ.19ರಿಂದ ಚಾಂಪಿಯನ್ಸ್‌ ಟ್ರೋಫಿ ಆರಂಭವಾಗುತ್ತಿದ್ದು, ಸ್ಟಾರ್‌ ಆಲ್‌ರೌಂಡರ್‌ ಆಗಿ ಗುರುತಿಸಿಕೊಂಡಿದ್ದ ಸ್ಟೋಯ್ನಿಸ್‌ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಹೊಂದಿದ್ದರು. ಆದ್ರೆ ಏಕಾಏಕಿ ನಿವೃತ್ತಿ ಘೋಷಿಸಿರುವುದು ಕ್ರಿಕೆಟ್‌ ಲೋಕದಲ್ಲಿ ಚರ್ಚೆ ಹುಟ್ಟುಹಾಕಿದೆ. ಗಾಯದ ಸಮಸ್ಯೆಯಿಂದ ಹೊರಗುಳಿದಿರುವವರ ಪೈಕಿ ಹ್ಯಾಜಲ್‌ವುಡ್‌ ಸ್ವಲ್ಪ ಚೇತರಿಕೆ ಕಂಡಿದ್ದಾರೆ. ಆದ್ರೆ ಪ್ಯಾಟ್‌ ಕಮ್ಮಿನ್ಸ್‌ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆ ಅವರನ್ನು ತಂಡದಿಂದ ಕೈಬಿಡಲಾಗಿದೆ. ಹೀಗಿರುವಾಗಲೇ ಸ್ಟೋಯ್ನಿಸ್‌ ಶಾಕ್‌ ಕೊಟ್ಟಿದ್ದಾರೆ.

    ಏಕದಿನ ಕ್ರಿಕೆಟ್‌ನಲ್ಲಿ ಸ್ಟೋಯ್ನಿಸ್‌ ಸಾಧನೆ:
    2015ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸ್ಟೋಯ್ನಿಸ್‌, ಈವರೆಗೂ 74 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ಅವಧಿಯಲ್ಲಿ 93.96 ಸ್ಟ್ರೈಕ್ ರೇಟ್‌ನಲ್ಲಿ 1,495 ರನ್ ಗಳಿಸಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್​ನಲ್ಲಿ ನ್ಯೂಜಿಲೆಂಡ್ ವಿರುದ್ಧದ ನಡೆದಿದ್ದ ಪಂದ್ಯದಲ್ಲಿ ಅಜೇಯ 146 ರನ್​ ಗಳಿಸಿದ್ದು ಏಕದಿನ ಸ್ವರೂಪದಲ್ಲಿ ಅತ್ಯಧಿಕ ಸ್ಕೋರ್​ ಆಗಿತ್ತು.

    ಜೊತೆಗೆ 74 ಪಂದ್ಯಗಳಲ್ಲಿ 43.12 ಸರಾಸರಿಯಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದಾರೆ. 2024ರ ನವೆಂಬರ್‌ 10ರಂದು ಪರ್ತ್‌ನಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. 2019ರಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾ ನೀಡುವ ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.

  • ಸ್ಟೊಯಿನಿಸ್‌ ಶತಕ; ಚೆನ್ನೈ ವಿರುದ್ಧ ಲಕ್ನೋಗೆ 6 ವಿಕೆಟ್‌ ಜಯ

    ಸ್ಟೊಯಿನಿಸ್‌ ಶತಕ; ಚೆನ್ನೈ ವಿರುದ್ಧ ಲಕ್ನೋಗೆ 6 ವಿಕೆಟ್‌ ಜಯ

    – ಧೋನಿ ದಾಖಲೆ ಉಡೀಸ್‌ ಮಾಡಿದ ಗಾಯಕ್ವಾಡ್‌
    – IPLನಲ್ಲಿ ಶತಕ ಸಿಡಿಸಿದ ಮೊದಲ ಸಿಎಸ್‌ಕೆ ನಾಯಕ ಋತುರಾಜ್‌

    ಚೆನ್ನೈ: ಮಾರ್ಕಸ್‌ ಸ್ಟೊಯಿನಿಸ್‌ ಅಬ್ಬರದ ಶತಕದಾಟದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ 6 ವಿಕೆಟ್‌ಗಳ ಜಯ ಸಾಧಿಸಿತು.

    ಚೆನ್ನೈನಲ್ಲಿ ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಕೆ.ಎಲ್‌.ರಾಹುಲ್‌ ಪಡೆ ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಚೆನ್ನೈ ನಾಯಕ ಋತುರಾಜ್‌ ಶತಕದಾಟ ಮತ್ತು ಶಿವಂ ದುಬೆ ಸ್ಫೋಟಕ ಶೈಲಿಯ ಅರ್ಧಶತಕ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 210 ರನ್‌ ಗಳಿಸಿತು. 211 ರನ್‌ ಗುರಿ ಬೆನ್ನತ್ತಿದ ಲಕ್ನೋ 20 ಓವರ್‌ಗೆ 3 ಬಾಲ್‌ ಬಾಕಿ ಇರುವಾಗಲೇ 4 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿ ಗೆಲುವು ಸಾಧಿಸಿತು.

    ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಆರಂಭದಲ್ಲೇ ಆಘಾತ ಎದುರಿಸಿತು. ಅಜಿಂಕ್ಯ ರಹಾನೆ ಕೇವಲ 1 ರನ್‌ ಗಳಿಸುತ್ತಿದ್ದಂತೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ಈ ವೇಳೆ ಜವಾಬ್ದಾರಿಯುತ ಆಟವಾಡಿದ ಋತುರಾಜ್‌ ಗಾಯಕ್ವಾಡ್‌ ಶತಕ ಗಳಿಸಿ ಗಮನ ಸೆಳೆದರು. ಚೆನ್ನೈ ತಂಡದ ಇತಿಹಾಸದಲ್ಲೇ ನಾಯಕ ಸಿಡಿಸಿದ ಮೊದಲ ಶತಕ ಎಂಬ ದಾಖಲೆಯನ್ನು ಗಾಯಕ್ವಾಡ್‌ ಬರೆದರು. ಗಾಯಕ್ವಾಡ್‌ ಔಟಾಗದೇ ಶತಕ ಸಿಡಿಸಿ (108 ರನ್‌, 60 ಬಾಲ್, 12‌ ಫೋರ್‌, 3 ಸಿಕ್ಸರ್‌) ಮಿಂಚಿದರು.

    ಇವರಿಗೆ ರವೀಂದ್ರ ಜಡೇಜಾ ಉತ್ತಮ ಜೊತೆಯಾಟ ನೀಡಿದರು. ಗಾಯಕ್ವಾಡ್‌ ಮತ್ತು ಜಡೇಜಾ ಜೋಡಿ 39 ಬಾಲ್‌ಗೆ 52 ರನ್‌ಗಳ ಜೊತೆಯಾಟವಾಡಿತು. ಈ ವೇಳೆ ಜಡೇಜಾ 16 ರನ್‌ ಗಳಿಸಿ ಔಟಾದರು. ರನ್‌ ಗಳಿಕೆ ವೇಗ ಕಡಿಮೆಯಿದ್ದರೂ ಇನ್ನಿಂಗ್ಸ್‌ಗೆ ಸ್ಥಿರತೆ ಒದಗಿಸುವಲ್ಲಿ ಈ ಜೊತೆಯಾಟ ನೆರವಾಯಿತು.

    ತಂಡದ ಮೊತ್ತ 200 ರ ಗಡಿ ದಾಟಲು ದುಬೆ ಕೊಡುಗೆಯೂ ಇದೆ. 244 ರ ಸ್ಟೈಕ್‌ರೇಟ್‌ನಲ್ಲಿ ಬ್ಯಾಟ್‌ ಮಾಡಿದ ದುಬೆ 22 ಎಸೆತಕ್ಕೆ 66 ರನ್‌ ಸಿಡಿಸಿ ಮಿಂಚಿದರು. ದುಬೆ ಆಟದ ರಭಸಕ್ಕೆ ಲಕ್ನೋ ಬೌಲರ್‌ಗಳು ಬಸವಳಿದರು. ನಂತರ ದುಬೆ ರನ್‌ಔಟ್‌ ಆಗಿ ಪೆವಿಲಿಯನ್‌ ಸೇರಿದರು. ನಂತರ ಕ್ರೀಸ್‌ಗೆ ಬಂದ ಮಹೇಂದ್ರ ಸಿಂಗ್‌ ಧೋನಿ ತಮಗೆ ಸಿಕ್ಕ ಏಕೈಕ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಅಭಿಮಾನಿಗಳಿಗೆ ಖುಷಿ ಕೊಟ್ಟರು.

    ಲಕ್ನೋ ಪರ ಮ್ಯಾಟ್ ಹೆನ್ರಿ, ಮೊಹ್ಸಿನ್ ಖಾನ್, ಯಶ್ ಠಾಕೂರ್ ತಲಾ 1 ವಿಕೆಟ್‌ ಕಿತ್ತರು.

    ಚೆನ್ನೈ ನೀಡಿದ 211 ರನ್‌ ಗುರಿ ಬೆನ್ನತ್ತಿದ ಲಕ್ನೋ ಕೂಡ ಆರಂಭಿಕ ಆಘಾತ ಎದುರಿಸಿತು. ಓಪನರ್‌ ಕ್ವಿಂಟನ್‌ ಡಿ ಕಾಕ್‌ 3 ಎಸೆತಗಳನ್ನು ಎದುರಿಸಲು ತಿಣುಕಾಡಿ ಕೊನೆಗೆ ಶೂನ್ಯ ವಿಕೆಟ್‌ ಒಪ್ಪಿಸಿ ಹೊರನಡೆದರು. ನಾಯಕ ಕೆ.ಎಲ್‌.ರಾಹುಲ್‌ ಕೂಡ ಕೇವಲ 16 ರನ್‌ಗಳಿಸಲಷ್ಟೇ ಶಕ್ತರಾದರು.

    ಈ ವೇಳೆ ತಂಡಕ್ಕೆ ಆಸರೆಯಾದವರು ಸ್ಟೊಯಿನಿಸ್‌. ಕೊನೆವರೆಗೂ ಹೋರಾಡಿ ಲಕ್ನೋವನ್ನು ಗೆಲುವಿನ ದಡ ಸೇರಿದರು. ಸ್ಟೊಯಿನಿಸ್‌ ಶತಕದಾಟದೊಂದಿಗೆ ಅಬ್ಬರಿಸಿದರು. 63 ಬಾಲ್‌ಗೆ 124 ರನ್‌ (13 ಫೋರ್‌, 6 ಸಿಕ್ಸರ್‌) ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

    ದೇವದತ್ ಪಡಿಕ್ಕಲ್ 13, ನಿಕೋಲಸ್ ಪೂರನ್ 34, ದೀಪಕ್ ಹೂಡಾ ಔಟಾಗದೇ 17 ರನ್‌ ಗಳಿಸಿದರು. ಚೆನ್ನೈ ಪರ ಮತೀಶ ಪತಿರಾನ 2, ದೀಪಕ್ ಚಹಾರ್ ಹಾಗೂ ಮುಸ್ತಫಿಜುರ್ ರೆಹಮಾನ್ ತಲಾ 1 ವಿಕೆಟ್‌ ಕಬಳಿಸಿದರು.

  • ಲಕ್ನೋ ಸೂಪರ್‌ ಜೈಂಟ್ಸ್‌ಗೆ 5 ರನ್‌ ರೋಚಕ ಜಯ – RCBಗೆ ಮತ್ತೆ ಕಂಟಕವಾದ ಲಕ್ನೋ

    ಲಕ್ನೋ ಸೂಪರ್‌ ಜೈಂಟ್ಸ್‌ಗೆ 5 ರನ್‌ ರೋಚಕ ಜಯ – RCBಗೆ ಮತ್ತೆ ಕಂಟಕವಾದ ಲಕ್ನೋ

    ಲಕ್ನೋ: ಮಾರ್ಕಸ್‌ ಸ್ಟೋಯ್ನಿಸ್‌ (Marcus Stoinis) ಸಿಕ್ಸರ್‌, ಬೌಂಡರಿ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants), ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿ, ಪ್ಲೆ ಆಫ್‌ ಹಾದಿಯನ್ನ ಸುಗಮವಾಗಿಸಿಕೊಂಡಿದೆ. ಆದರೆ ಪ್ಲೆ ಆಫ್‌ ಪ್ರವೇಶಿಸುವ ಕನಸು ಕಂಡಿದ್ದ ಆರ್‌ಸಿಬಿಗೆ ಮತ್ತೆ ಸಂಕಷ್ಟ ತಂದೊಡ್ಡಿದೆ.

    ಕೊನೆಯ 2‌ ಓವರ್‌ಗಳಲ್ಲಿ ಮುಂಬೈ ಗೆಲುವಿಗೆ 30 ರನ್‌ಗಳ ಅಗತ್ಯವಿದ್ದಾಗ 19ನೇ ಓವರ್‌ನಲ್ಲೇ 19ರನ್‌ ದಾಖಲಾಯಿತು. ಕೊನೆಯ ಓವರ್‌ನಲ್ಲಿ 11 ರನ್‌ಗಳು ಬೇಕಿದ್ದಾಗ ಟಿಮ್‌ ಡೇವಿಡ್‌ ಹಾಗೂ ಕ್ಯಾಮರೂನ್‌ ಗ್ರೀನ್‌ ಕಳಪೆ ಪ್ರದರ್ಶನದಿಂದಾಗಿ 5 ರನ್‌ ಗಳಷ್ಟೇ ಸೇರ್ಪಡೆಯಾಯಿತು. ಕೊನೆಗೆ ಮುಂಬೈ 5 ರನ್‌ಗಳಿಂದ ವಿರೋಚಿತ ಸೋಲನುಭವಿಸಿತು. 5ನೇ ಸ್ಥಾನದಲ್ಲಿದ್ದ ಆರ್‌ಸಿಬಿ (RCB) ತಂಡಕ್ಕೂ ಲಕ್ನೋ ಗೆಲವು ಸಂಕಷ್ಟ ತಂದಂತಾಗಿದೆ. ಒಂದು ವೇಳೆ ಆರ್‌ಸಿಬಿ ಸತತ ಎರಡು ಪಂದ್ಯಗಳಲ್ಲಿ ಗೆದ್ದು ಮುಂಬೈ ಮುಂದಿನ ಪಂದ್ಯದಲ್ಲೂ ಸೋತರಷ್ಟೇ ಆರ್‌ಸಿಬಿಗೆ ಪ್ಲೆ ಆಫ್‌ ಪ್ರವೇಶಿಸುವ ಅವಕಾಶ ಸಿಗಲಿದೆ.

    ತವರಿನ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ 3 ವಿಕೆಟ್‌ ನಷ್ಟಕ್ಕೆ 177 ರನ್‌ ಕಲೆಹಾಕಿತ್ತು. 178 ರನ್‌ ಗುರಿ ಪಡೆದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿ ಗೆದ್ದು ಬೀಗಿತು. ಈ ಮೂಲಕ ಪ್ಲೆ ಆಫ್‌ಗೆ ಬಹುತೇಕ ಅರ್ಹತೆ ಪಡೆದುಕೊಂಡಿತು.

    ಬೌಲಿಂಗ್‌ ಪಿಚ್‌ನಲ್ಲಿ ಇದೇ ಮೊದಲಬಾರಿಗೆ ಇತ್ತಂಡಗಳಿಂದಲೂ ರನ್‌ ಹೊಳೆ ಹರಿಯಿತು. ಲಕ್ನೋ ಪರ ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ಮುಂಬೈ ಇಂಡಿಯನ್ಸ್‌ ಪರ ರೋಹಿತ್‌ ಶರ್ಮಾ (Rohit Sharma), ಇಶಾನ್‌ ಕಿಶನ್‌ (Ishan Kishan) ಭರ್ಜರಿ ಸಿಕ್ಸರ್‌ ಬೌಂಡರಿ ಬ್ಯಾಟಿಂಗ್‌ ನಡೆಸಿದರು.

    ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಲಕ್ನೋ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿದ್ರು. ಮೊದಲ ವಿಕೆಟ್‌ ಜೊತೆಯಾಟಕ್ಕೆ ಈ ಜೋಡಿ 9.4 ಓವರ್‌ಗಳಲ್ಲಿ 90 ರನ್‌ ಸಿಡಿಸಿತ್ತು. ರೋಹಿತ್‌ ಶರ್ಮಾ 25 ಎಸೆತಗಳಲ್ಲಿ 37 ರನ್‌ (1 ಬೌಂಡರಿ, 3 ಸಿಕ್ಸರ್‌) ಗಳಿಸಿದರೆ, ಇಶಾನ್‌ ಕಿಶನ್‌ 39 ಎಸೆತಗಳಲ್ಲಿ 59 ರನ್‌ (1 ಸಿಕ್ಸರ್‌, 8 ಬೌಂಡರಿ) ಚಚ್ಚಿದರು. ಕಳೆದೆರಡು ಪಂದ್ಯದಲ್ಲಿ ಅಬ್ಬರಿಸಿದ್ದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಸೂರ್ಯಕುಮಾರ್‌ ಯಾದವ್‌ 7 ರನ್‌ ಹಾಗೂ ನಿಹಾಲ್‌ ವಧೇರಾ 16 ರನ್‌ ಗಳಿಸಿ ನಿರಾಸೆ ಮೂಡಿಸಿದರು.

    ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್‌ ಡೇವಿಡ್‌ ಬ್ಯಾಟಿಂಗ್‌ ನೆರವಿನಿಂದ ರನ್‌ ಗಳಿಸಿದ್ದ ಮುಂಬೈ ಗೆಲುವಿನ ಕನಸು ಕಂಡಿತ್ತು. ಕೊನೆಯ ಓವರ್‌ನಲ್ಲಿ ಡೇವಿಡ್‌ ಹಾಗೂ ಕ್ಯಾಮರೂನ್‌ ಗ್ರೀನ್‌ ಕಳಪೆ ಪ್ರದರ್ಶನದಿಂದ ಮುಂಬೈ ವಿರೋಚಿತ ಸೋಲನುಭವಿಸಿತು. ಟಿಮ್‌ ಡೇವಿಡ್‌ 19 ಎಸೆತಗಳಲ್ಲಿ 32 ರನ್‌ ಗಳಿಸಿದರು.

    ಲಕ್ನೋ ಪರ ಬೌಲಿಂಗ್‌ ದಾಳಿ ನಡೆಸಿದ ರವಿ ಬಿಷ್ಣೋಯಿ, ಯಶ್‌ ಠಾಕೂರ್‌ ತಲಾ 2 ವಿಕೆಟ್‌ ಉರುಳಿಸಿದರೆ, ಮೊಹ್ಸಿನ್‌ ಖಾನ್‌ 1 ವಿಕೆಟ್‌ ಪಡೆದು ಮಿಂಚಿದರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ ಆರಂಭದಲ್ಲೇ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ದೀಪಕ್‌ ಹೂಡ 5 ರನ್‌, ಕ್ವಿಂಟನ್‌ ಡಿ ಕಾಕ್‌ 16 ರನ್‌ ಹಾಗೂ ಪ್ರೇರಕ್‌ ಮಂಕಡ್‌ ಶೂನ್ಯಕ್ಕೆ ಔಟಾಗಿದ್ದರು. ಬಳಿಕ ಒಂದಾದ ನಾಯಕ ಕೃನಾಲ್‌ ಪಾಂಡ್ಯ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ಜೋಡಿ 59 ಎಸೆತಗಳಲ್ಲಿ 82 ರನ್‌ ಸಿಡಿಸಿತ್ತು. ನಂತರದಲ್ಲಿ ನಿಕೋಲಸ್‌ ಪೂರನ್‌‌ ಹಾಗೂ ಸ್ಟೋಯ್ನಿಸ್‌ ಜೋಡಿ 24 ಎಸೆತಗಳಲ್ಲಿ 60 ರನ್‌ ಬಾರಿಸಿತು. ಕೊನೆಯವರೆಗೂ ಅಜೇಯರಾಗಿ ಹೋರಾಡಿದ ಸ್ಟೋಯ್ನಿಸ್‌ 47 ಎಸೆತಗಳಲ್ಲಿ 89 ರನ್‌ (8 ಸಿಕ್ಸರ್‌, 4 ಬೌಂಡರಿ) ಚಚ್ಚಿದರೆ, ಕೃನಾಲ್‌ ಪಾಂಡ್ಯ 42 ಎಸೆತಗಳಲ್ಲಿ 49 ರನ್‌ ಗಳಿಸಿದರು. ಅರ್ಧ ಶತಕ ಗಳಿಸದೆಯೇ ಕಾಲು ನೋವು ಸಮಸ್ಯೆಯಿಂದ ಕ್ರೀಸ್‌ ಬಿಟ್ಟು ಹೊರನಡೆದರು. ನಿಕೋಲಸ್‌ ಪೂರನ್‌ 8 ರನ್‌ ಗಳಿಸಿ ಅಜೇಯರಾಗುಳಿದರು.

    ಮುಂಬೈ ಪರ ಜೇಸನ್‌ ಬೆಹ್ರೆನ್‌ಡ್ರೋಫ್‌ 4 ಓವರ್‌ಗಳಲ್ಲಿ 30 ರನ್‌ ನೀಡಿ 2 ವಿಕೆಟ್‌ ಕಿತ್ತರೆ, ಪಿಯೂಷ್‌ ಚಾವ್ಲಾ 3 ಓವರ್‌ಗಳಲ್ಲಿ 1 ವಿಕೆಟ್‌ 26 ರನ್‌ ನೀಡಿ 1 ವಿಕೆಟ್‌ ಪಡೆದರು.

  • IPL 2023: ಲಕ್ನೋಗೆ 10 ರನ್‌ಗಳ ಸೂಪರ್‌ ಜಯ – ರಾಜಸ್ಥಾನ್‌ಗೆ ತವರಿನಲ್ಲಿ ಸೋಲು

    IPL 2023: ಲಕ್ನೋಗೆ 10 ರನ್‌ಗಳ ಸೂಪರ್‌ ಜಯ – ರಾಜಸ್ಥಾನ್‌ಗೆ ತವರಿನಲ್ಲಿ ಸೋಲು

    ಜೈಪುರ: ಕೇಲ್‌ ಮೇಯರ್ಸ್‌ (Kyle Mayers) ಜವಾಬ್ದಾರಿಯುತ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡವು ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ 10 ರನ್‌ಗಳ ಜಯ ಸಾಧಿಸಿದೆ. ಆದರೆ ಸತತ ಜಯದ ಹಾದಿಯಲ್ಲಿ ಮುನ್ನುಗ್ಗುತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ತವರಿನಲ್ಲಿ ಸೋತು ಮುಖಭಂಗ ಅನುಭವಿಸಿದೆ.

    ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಲಕ್ನೋ ಸೂಪರ್‌ ಜೈಂಟ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 154 ರನ್‌ ಗಳಿಸಿತು. 155 ರನ್‌ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ನಿಗದಿತ 20 ಓವರ್‌ಗಳಲ್ಲಿ 144 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡ ನಿಧಾನಗತಿಯ ಬ್ಯಾಟಿಂಗ್‌ ಹೊರತಾಗಿಯೂ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ ಹಾಗೂ ಜೋಸ್‌ ಬಟ್ಲರ್‌ (Jos Buttler) ಜೋಡಿ ಮೊದಲ ವಿಕೆಟ್‌ ಪತನಕ್ಕೆ 11.3 ಓವರ್‌ಗಳಲ್ಲಿ 87 ರನ್‌ ಗಳಿಸಿತ್ತು. ಈ ವೇಳೆ 35 ಎಸೆತಗಳಲ್ಲಿ 44 ರನ್‌ (4 ಬೌಂಡರಿ, 2 ಸಿಕ್ಸರ್‌) ಗಳಿಸಿದ್ದ ಜೈಸ್ವಾಲ್‌ ಔಟಾಗುತ್ತಿದ್ದಂತೆ, ಜೋಸ್‌ ಬಟ್ಲರ್‌ ಸಹ 40 ರನ್‌ (41 ಎಸೆತ, 4 ಬೌಂಡರಿ, 1 ಸಿಕ್ಸರ್‌) ಗಳಿಸಿ ವಿಕೆಟ್‌ ಒಪ್ಪಿಸಿದರು.

    ಈ ಬೆನ್ನಲ್ಲೇ ನಾಯಕ ಸಂಜು ಸ್ಯಾಮ್ಸನ್‌ (Sanju Samson) ಬೇಡದ ರನ್‌ ಕದಿಯಲು ಹೋಗಿ ರನೌಟ್‌ಗೆ ತುತ್ತಾದರೆ, ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಶಿಮ್ರಾನ್‌ ಹೆಟ್ಮೇಯರ್‌ ಕೇವಲ 2 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು ಇದು ತಂಡಕ್ಕೆ ಭಾರೀ ಆಘಾತ ನೀಡಿತು. ಇನ್ನೂ ಕೊನೆಯ ಓವರ್‌ವರೆಗೂ ಹೋರಾಡಿ 21 ಎಸೆತಗಳಲ್ಲಿ 26 ರನ್‌ ಗಳಿಸಿದ್ದ ದೇವದತ್‌ ಪಡಿಕಲ್‌ ಕ್ಯಾಚ್‌ ನೀಡಿ ನಿರಾಸೆ ಮೂಡಿಸಿದರು. ಇದರಿಂದ ರಾಜಸ್ಥಾನ್‌ ತಂಡ ಸಂಪೂರ್ಣವಾಗಿ ಗೆಲುವಿನ ಭರವಸೆ ಕೈಚೆಲ್ಲಿತು. ಕೊನೆಯಲ್ಲಿ ರಿಯಾನ್‌ ಪರಾಗ್‌ 15 ರನ್‌, ಅಶ್ವಿನ್‌ 3 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಲಕ್ನೋ ಸೂಪರ್‌ ಜೈಂಟ್ಸ್‌ ಪರ ಅವೇಶ್‌ ಖಾನ್‌ ಪ್ರಮುಖ 3 ವಿಕೆಟ್‌ಗಳನ್ನು ಕಿತ್ತರೆ, ಮಾರ್ಕಸ್‌ ಸ್ಟೋಯ್ನಿಸ್‌ 2 ವಿಕೆಟ್‌ ಪಡೆದು ಮಿಂಚಿದರು.

    ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಬೃಹತ್‌ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಅಂದುಕೊಂಡ ವೇಗದಲ್ಲಿ ರನ್‌ಗಳಿಸಲು ಅವಕಾಶ ನೀಡದ ಕಾರಣ ಲಕ್ನೋ ತಂಡ ಈ ಪಂದ್ಯದಲ್ಲಿ ಸಾಧಾರಣ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.

    ಮೊದಲ ವಿಕೆಟ್‌ ಪತನಕ್ಕೆ 82 ರನ್‌ಗಳ ಆರಂಭಿಕ ಜೊತೆಯಾಟವನ್ನು ಪಡೆದುಕೊಂಡಿತ್ತಾದರೂ ರನ್ ವೇಗ ನಿಧಾನವಾಗಿತ್ತು. ನಾಯಕ ಕೆ.ಎಲ್.ರಾಹುಲ್ ಪವರ್‌ ಪ್ಲೇನಲ್ಲೂ ಅಬ್ಬರಿಸುವಲ್ಲಿ ವಿಫಲವಾದರು. ಆರಂಭಿಕರಾಗಿ ಕಣಕ್ಕಿಳಿದ ಕೇಲ್‌ ಮೇಯರ್ಸ್‌ ಹಾಗೂ ಕೆ.ಎಲ್‌ ರಾಹುಲಗ್‌ 10.4 ಓವರ್‌ಗಳಲ್ಲಿ 82 ರನ್‌ ಗಳಿಸಿತ್ತು.121.87 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಕೆ.ಎಲ್‌ ರಾಹುಲ್‌ 32 ಎಸೆತಗಳಲ್ಲಿ ಕೇವಲ 39 ರನ್‌ ಗಳಿಸಿದರು. ನಿಧಾನಗತಿಯ ಬ್ಯಾಟಿಂಗ್‌ ಪ್ರದರ್ಶಿಸಿದ ಕೇಲ್‌ ಮೇಯರ್ಸ್‌ ಕೂಡ 42 ಎಸೆತಗಳಲ್ಲಿ 51 ರನ್‌ (3 ಸಿಕ್ಸರ್‌, 4 ಬೌಂಡರಿ) ಔಟಾದರು.

    ಉಳಿದಂತೆ ಆಯುಷ್ ಬದೋನಿ ಹಾಗೂ ದೀಪಕ್ ಹೂಡಾ ಕಳಪೆ ಪ್ರದರ್ಶನ ನೀಡಿದರು. ಇನ್ನು ಮಾರ್ಕಸ್ ಸ್ಟೋಯ್ನಿಸ್ 16 ಎಸೆತದಲ್ಲಿ 21 ರನ್ ಬಾರಿಸಿದರೆ ನಿಕೋಲಸ್ ಪೂರನ್ 20 ಎಸೆತಗಳಲ್ಲಿ 28 ರನ್ ಬಾರಿಸಿದರು. ಅಂತಿಮವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 154 ರನ್‌ ಗಳಿಸಿತ್ತು.

    ರಾಜಸ್ಥಾನ್‌ ಪರ ರವಿಚಂದ್ರನ್‌ ಅಶ್ವಿನ್‌ 2 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೋಲ್ಟ್‌, ಸಂದೀಪ್‌ ಶರ್ಮಾ, ಜೇಸನ್‌ ಹೋಲ್ಡರ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • IPL 2023: ಕೊನೆಯಲ್ಲಿ ಸಿಕ್ಸರ್‌, ಬೌಂಡರಿ ಆಟ – ಲಕ್ನೋ ತವರಿನಲ್ಲಿ ಗೆದ್ದು ಬೀಗಿದ ಪಂಜಾಬ್‌

    IPL 2023: ಕೊನೆಯಲ್ಲಿ ಸಿಕ್ಸರ್‌, ಬೌಂಡರಿ ಆಟ – ಲಕ್ನೋ ತವರಿನಲ್ಲಿ ಗೆದ್ದು ಬೀಗಿದ ಪಂಜಾಬ್‌

    ಲಕ್ನೋ: ಕೊನೆಯಲ್ಲಿ ಶಾರೂಖ್‌ ಖಾನ್‌ (M Shahrukh Khan) ಸಿಕ್ಸರ್‌, ಬೌಂಡರಿ ಆಟ ಹಾಗೂ ಸಿಕಂದರ್‌ ರಾಜಾ (Sikandar Raza) ಅರ್ಧಶತಕದ ಬ್ಯಾಟಿಂಗ್‌ ನೆರವಿನಿಂದ ಪಂಜಾಬ್‌ ಕಿಂಗ್ಸ್‌ (Punjab Kings), ಲಕ್ನೋ ಸೂಪರ್‌‌ ಜೈಂಟ್ಸ್‌ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿತು. 160 ರನ್‌ಗಳ ಗುರಿ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ 19.3 ಓವರ್‌ಗಳಲ್ಲೇ 8 ವಿಕೆಟ್‌ ನಷ್ಟಕ್ಕೆ 161 ರನ್‌ ಗಳಿಸಿ ರೋಚಕ ಜಯ ಸಾಧಿಸಿತು.

    ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಪಂಜಾಬ್‌ ಕಿಂಗ್ಸ್‌ 159 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಸ್ಯಾಮ್ ಕರ್ರನ್‌ ತಂಡದ ನಾಯಕತ್ವ ವಹಿಸಿಕೊಂಡಿದ್ದರು.

    ಚೇಸಿಂಗ್‌ ಆರಂಭಿಸಿದ ಪಂಜಾಬ್‌ ಕಿಂಗ್ಸ್‌ ತಂಡವು ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಉತ್ತಮ ಆರಂಭ ಪಡೆಯುವಲ್ಲಿ ವೀಫಲವಾಯಿತು. ಆರಂಭಿಕರಾದ ಅಥರ್ವ ತೈದೆ ಶೂನ್ಯ ಸುತ್ತಿದರೆ, ಪ್ರಭ್‌ಸಿಮ್ರಾನ್‌ ಸಿಂಗ್‌ ಕೇವಲ 4 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು.  5ನೇ ವಿಕೆಟ್‌ಗೆ  ಜೊತೆಯಾಟವಾಡಿದ ಮ್ಯಾಥಿವ್‌ ಶಾರ್ಟ್‌ 34 ರನ್‌ (22 ಎಸೆತ, 5 ಬೌಂಡರಿ, 1 ಸಿಕ್ಸರ್‌) ಹಾಗೂ ಹರ್ಪ್ರೀತ್‌ ಸಿಂಗ್‌ 22 ರನ್‌ (22 ಎಸೆತ, 3 ಬೌಂಡರಿ) ಗಳಿಸುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಹರ್ಪ್ರೀತ್‌ ಸಿಂಗ್‌ ವಿಕೆಟ್‌ ಪತನವಾಗುತ್ತಿದ್ದಂತೆ ಕಣಕ್ಕಿಳಿದ ಸಿಕಂದರ್‌ ರಾಜಾ ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ಲಕ್ನೋ ಬೌಲರ್‌ಗಳನ್ನ ಬೆಂಡೆತ್ತಿದರು.

    ಬೌಲಿಂಗ್‌ನಲ್ಲಿ ಒಂದು ವಿಕೆಟ್‌ ಕಿತ್ತ ಸಿಕಂದರ್‌ ರಾಜಾ ಬ್ಯಾಟಿಂಗ್‌ನಲ್ಲಿ 57 ರನ್‌ (41 ಎಸೆತ, 4 ಬೌಂಡರಿ, 3 ಸಿಕ್ಸರ್‌) ಸಿಡಿಸಿ ಮಿಂಚಿದರು. ಇದರಿಂದ ತಂಡದಲ್ಲಿ ಗೆಲುವಿನ ಭರವಸೆ ಚಿಗುರಿತ್ತು. ಈ ಬೆನ್ನಲ್ಲೇ ನಾಯಕ ಸ್ಯಾಮ್‌ ಕರ್ರನ್‌ 6 ರನ್‌, ಜಿತೇಶ್‌ ಶರ್ಮಾ 2 ರನ್‌ ಗಳಿಸಿ ನಿರಾಸೆ ಮೂಡಿಸಿದ್ದರು. ಆದ್ರೆ ಕೊನೆಯಲ್ಲಿ ಎಂ. ಶಾರೂಖ್‌ ಖಾನ್‌ ಕೇವಲ 10 ಎಸೆತಗಳಲ್ಲಿ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಹರ್ಪ್ರೀತ್‌ ಬ್ರಾರ್‌ ಕೊನೆಯಲ್ಲಿ 6 ರನ್‌ ಗಳಿಸಿದರು.

    ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆಯಿತು. ನಾಯಕ ಕೆ.ಎಲ್ ರಾಹುಲ್ ಮತ್ತು ಕೇಲ್ ಮೇಯರ್ಸ್ ಮೊದಲ ವಿಕೆಟ್‌ ಪತನಕ್ಕೆ 7.4 ಓವರ್‌ಗಳಲ್ಲಿ 53 ರನ್‌ ಕಲೆಹಾಕಿದ್ದರು. ಈ ವೇಳೆ ಕೇಲ್‌ ಮೇಯರ್ಸ್‌ 23 ಎಸೆತಗಳಲ್ಲಿ 29 ರನ್‌ ಗಳಿಸಿ ಔಟಾಗುತ್ತಿದ್ದಂತೆ, ಕ್ರೀಸ್‌ಗೆ ಬಂದ ದೀಪಕ್‌ ಹೂಡಾ ಕೇವಲ 2 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ನಂತರ ಕಣಕ್ಕಿಳಿದ ಕೃನಾಲ್‌ ಪಾಂಡ್ಯ 17 ಎಸೆತಗಳಲ್ಲಿ 18 ರನ್ ಗಳಿಸುವ ಮೂಲಕ ನಾಯಕ ರಾಹುಲ್‌ಗೆ ಸಾಥ್‌ ನೀಡಿದರು. ಈ ಜೋಡಿ 35 ಎಸೆತಗಳಲ್ಲಿ 48 ರನ್‌ಗಳನ್ನು ಕಲೆಹಾಕಿತು. ಇನ್ನೂ ಕಳೆದ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಸ್ಫೋಟಕ 50 ರನ್‌ ಚಚ್ಚಿದ್ದ ನಿಕೋಲಸ್‌ ಪೂರನ್‌ ಈ ಬಾರಿ ಮೊದಲ ಎಸೆತದಲ್ಲೇ ಸಿಕ್ಸರ್‌ ಸಿಡಿಸಲು ಪ್ರಯತ್ನಿಸಿ ಔಟಾದರು.

    ನಂತರ ಕ್ರೀಸ್‌ಗೆ ಬಂದ ಮಾರ್ಕಸ್‌ ಸ್ಟೋಯ್ನಿಸ್‌ 15 ರನ್‌ ಗಳಿಸಿ ಔಟಾದ ನಂತರ ಕೃಷ್ಣಪ್ಪ ಗೌತಮ್‌ (1 ರನ್‌), ಯದ್ವೀರ್‌ ಸಿಂಗ್‌ (ಶೂನ್ಯ) ಬಹುಬೇಗನೆ ಕ್ರೀಸ್‌ನಿಂದ ನಿರ್ಗಮಿಸಿದರು. ಕೊನೆಯಲ್ಲಿ ಆಯುಷ್‌ ಬದೋನಿ 5 ರನ್‌, ರವಿ ಬಿಷ್ಣೋಯಿ 3 ರನ್‌ ಗಳಿಸಿ ಅಜೇಯರಾಗುಳಿದರು.

    ರಾಹುಲ್‌ ತಾಳ್ಮೆಯ ಆಟ:
    ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಲಕ್ನೋ ತಂಡದ ನಾಯಕ ಕೆ.ಎಲ್‌ ರಾಹುಲ್‌ ಇಂದು ತಾಳ್ಮೆಯ ಆಟವಾಡಿದರು. ಮೊದಲ ವಿಕೆಟ್‌ ಪತನಗೊಳ್ಳುತ್ತಿದ್ದಂತೆ ಜವಾಬ್ದಾರಿ ಆಟಕ್ಕೆ ಮುಂದಾದ ರಾಹುಲ್‌ 56 ಎಸೆತಗಳಲ್ಲಿ 74 ರನ್ (8 ಬೌಂಡರಿ, 1 ಸಿಕ್ಸರ್) ಗಳಿಸಿ ಕೊನೆಯ ಕ್ಷಣದಲ್ಲಿ ವಿಕೆಟ್ ಒಪ್ಪಿಸಿದರು. ಈ ಮೂಲಕ ರಾಹುಲ್‌ 2023ರ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಗಳಿಸಿದರು.

    ಸ್ಯಾಮ್‌ ಬೌಲಿಂಗ್‌ ಮಿಂಚು:
    ಪಂಜಾಬ್‌ ಕಿಂಗ್ಸ್‌ ಪರ ನಾಯಕ ಸ್ಯಾಮ್ ಕರ್ರನ್ 3 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಕಗಿಸೊ ರಬಾಡ 2 ವಿಕೆಟ್ ಕಿತ್ತರೆ, ಅರ್ಷ್‌ದೀಪ್‌ ಸಿಂಗ್‌, ಹಪ್ರೀತ್ ಬ್ರಾರ್ ಮತ್ತು ಸಿಕಂದರ್ ರಾಜಾ ತಲಾ ಒಂದೊಂದು ವಿಕೆಟ್‌ ಕಿತ್ತರು.

  • IPL 2023: ಲಕ್ನೋಗೆ ಸೂಪರ್‌ ಜಯ – KGF ವೀರಾವೇಷದ ಆಟ ವ್ಯರ್ಥ, RCBಗೆ ವಿರೋಚಿತ ಸೋಲು

    IPL 2023: ಲಕ್ನೋಗೆ ಸೂಪರ್‌ ಜಯ – KGF ವೀರಾವೇಷದ ಆಟ ವ್ಯರ್ಥ, RCBಗೆ ವಿರೋಚಿತ ಸೋಲು

    ಬೆಂಗಳೂರು: ನಿಕೊಲಸ್‌ ಪೂರನ್‌, ಮಾರ್ಕಸ್‌ ಸ್ಟೋಯ್ನಿಸ್‌ ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 1 ವಿಕೆಟ್‌ ರೋಚಕ ಜಯ ಸಾಧಿಸಿತು.

    ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ KGF (ಕೊಹ್ಲಿ, ಗ್ಲೇನ್‌ ಮ್ಯಾಕ್ಸ್‌ವೆಲ್‌, ಫಾಫ್‌ ಡುಪ್ಲೆಸಿಸ್‌) ಭರ್ಜರಿ ಬ್ಯಾಟಿಂಗ್‌ ಹೊರತಾಗಿಯೂ, ನಿಕೋಲಸ್‌ ಪೂರನ್‌, ಮಾರ್ಕಸ್‌ ಸ್ಟೋಯ್ನಿಸ್‌ ಬ್ಯಾಟಿಂಗ್‌ ಅಬ್ಬರಕ್ಕೆ ಆರ್‌ಸಿಬಿ ತಂಡ ಮಕಾಡೆ ಮಲಗಿತು. ಈ ಮೂಲಕ ತವರಿನಲ್ಲೇ ಸೋತು ತೀವ್ರ ಮುಖಭಂಗ ಅನುಭವಿಸಿದ್ದು, ಐಪಿಎಲ್‌ನಲ್ಲಿ ಸತತ 2 ಪಂದ್ಯಗಳನ್ನು ಸೋತಿತು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 212 ರನ್‌ ಕಲೆಹಾಕಿತು. 213 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿ ರೋಚಕ ಜಯ ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ ಲಕ್ನೋ ತಂಡ ಉತ್ತಮ ಶುಭಾರಂಭ ಪಡೆಯುವಲ್ಲಿ ವಿಫಲವಾಯಿತು. ಕೇಲ್‌ ಮೇಯರ್ಸ್‌, ಕೆ.ಎಲ್‌ ರಾಹುಲ್‌, ದೀಪಕ್‌ ಹೂಡಾ ಹಾಗೂ ಕೃನಾಲ್‌ ಪಾಂಡ್ಯ ಆರ್‌ಸಿಬಿ ಬೌಲರ್‌ಗಳ ದಾಳಿಗೆ ತುತ್ತಾಗಿ ಪೆವಿಲಿಯನ್‌ ಸೇರಿದರು. ನಾಯಕ ಕೆ.ಎಲ್‌. ರಾಹುಲ್‌ ಸತತವಾಗಿ ಬ್ಯಾಟಿಂಗ್‌ ವೈಫಲ್ಯ ಮುಂದುವರಿಸಿದರು. ಪರಿಣಾಮ ಲಕ್ನೋ ತಂಡ 6 ಓವರ್‌ಗಳಲ್ಲಿ 37 ರನ್‌ ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡು, ಸೋಲಿನ ಭೀತಿ ಎದುರಿಸಿತ್ತು.

    ನಂತರ 5ನೇ ವಿಕೆಟ್‌ಗೆ ಕಣಕ್ಕಿಳಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಮಾರ್ಕಸ್‌ ಸ್ಟೋಯ್ನಿಸ್‌ ಉತ್ತಮ ಚೇತರಿಕೆ ನೀಡಿದರು. ಕೇವಲ 30 ಎಸೆತಗಳಲ್ಲಿ ಭರ್ಜರಿ 65 ರನ್‌ (6 ಬೌಂಡರಿ, 5 ಸಿಕ್ಸರ್‌) ಸಿಡಿಸಿದರು. ಇದರಿಂದ ತಂಡ 10 ಓವರ್‌ಗಳ ಅಂತ್ಯಕ್ಕೆ 91 ರನ್‌ ಗಳಿಸಿತ್ತು. ನಂತರ ನಿಕೊಲಸ್‌ ಪೂರನ್‌ ಬ್ಯಾಟಿಂಗ್‌ ದಾಳಿಗೆ ಆರ್‌ಸಿಬಿ ತಂಡ ಸಂಪೂರ್ಣ ಮಂಕಾಯಿತು. ಆರ್‌ಸಿಬಿ ಬೌಲರ್‌ಗಳನ್ನು ಬಿಡದೇ ಬೆಂಡೆತ್ತಿದ್ದ ನಿಲಕೋಲಸ್‌ ಪೂರನ್‌ ಕೇವಲ 15 ಎಸೆತಗಳಲ್ಲಿ 50 ರನ್‌ ಚಚ್ಚಿ ಹೊಸ ದಾಖಲೆಯನ್ನೂ ಬರೆದರು. ನಿಕೋಲಸ್‌ ಪೂರನ್‌ 18 ಎಸೆತಗಳಲ್ಲಿ 62 ರನ್‌ (4 ಬೌಂಡರಿ, 7 ಸಿಕ್ಸರ್‌) ಗಳಿಸಿ ಆಡುತ್ತಿದ್ದಾಗಲೇ ಕ್ಯಾಚ್‌ ನೀಡಿ ಔಟಾದರು.

    ಇದರೊಂದಿಗೆ ಆಯುಷ್ ಬದೋನಿ 24 ಎಸೆತಗಳಲ್ಲಿ 30 ರನ್‌ ಗಳಿಸಿ ತಂಡಕ್ಕೆ ನೆರವಾದರು. ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ಆರ್‌ಸಿಬಿ ತಂಡಕ್ಕೆ ಮತ್ತೆ ಜೀವ ಬಂದಂತಾಗಿತ್ತು. ಆದರೆ ಕೊನೆಯಲ್ಲಿ ಜಯದೇವ್‌ ಉನಾದ್ಕಟ್‌ 9 ರನ್‌ಗಳಿಸಿ ತಂಡವನ್ನು ಗೆಲುವಿನ ಹಂತಕ್ಕೆ ತಂದಿದ್ದರು, ಕೊನೆಯ 2 ಎಸೆತಗಳಲ್ಲಿ 1 ರನ್‌ ಬೇಕಿದ್ದಾಗಲೇ ಉನಾದ್ಕಟ್‌ ಕ್ಯಾಚ್‌ ನೀಡಿದ್ದರು. ಕೊನೆಯ ಓಂದು ಎಸೆತಕ್ಕೆ ಒಂದು ರನ್‌ ಬೇಕಿದ್ದಾಗ ಅವೇಶ್‌ ಖಾನ್‌ ಕೊನೆಯ ಎಸೆತ ಎದುರಿಸುವಲ್ಲಿ ವಿಫಲರಾದರು. ಆದರೆ ಬೈಸ್‌ ರನ್‌ ಕದಿಯುವ ಮೂಲಕ ಲಕ್ನೋ ತಂಡ ಜಯ ಸಾಧಿಸಿತು.

    ಆರ್‌ಸಿಬಿ ಪರ ಮ್ಯಾಜಿಕ್‌ ಬೌಲೀಂಗ್‌ ಮಾಡಿದ ಮೊಹಮ್ಮದ್‌ ಸಿರಾಜ್‌, ವೇಯ್ನ್ ಪಾರ್ನೆಲ್ ತಲಾ 3 ವಿಕೆಟ್‌ ಕಿತ್ತರೆ, ಕರಣ್‌ ಶರ್ಮಾ 1 ವಿಕೆಟ್‌, ಹರ್ಷಲ್‌ ಪಟೇಲ್‌ 2 ವಿಕೆಟ್‌ ಕಿತ್ತರು.

    ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡಕ್ಕೆ ರನ್‌ ಮಿಷಿನ್‌ ಕೊಹ್ಲಿ ಹಾಗೂ ಫಾಫ್‌ ಡುಪ್ಲೆಸಿಸ್‌ ಉತ್ತಮ ಆರಂಭ ಒದಗಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಈ ಜೋಡಿ 11.3 ಓವರ್‌ಗಳಲ್ಲಿ 96 ರನ್‌ ಗಳಿಸಿತ್ತು. ಈ ವೇಳೆ ವಿರಾಟ್‌ 61 ರನ್‌ (44 ಎಸೆತ, 4 ಬೌಂಡರಿ, 4 ಸಿಕ್ಸರ್‌) ಗಳಿಸಿ ಔಟಾದರು.

    ನಂತರ ಜೊತೆಯಾದ ಮ್ಯಾಕ್ಸ್‌ವೆಲ್‌ ಹಾಗೂ ನಾಯಕ ಫಾಫ್‌ ಡುಪ್ಲೆಸಿಸ್‌ ಜೋಡಿ ಲಕ್ನೋ ಬೌಲರ್‌ಗಳನ್ನ ಬೆಂಡೆತ್ತಿದರು 50 ಎಸೆತಗಳಲ್ಲಿ ಈ ಜೋಡಿ ಬರೋಬ್ಬರಿ 115 ರನ್‌ ಸಿಡಿಸಿತ್ತು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಮಾಡಿದ ಫಾಫ್ ಡುಪ್ಲೆಸಿಸ್ ನಂತರ ಅಬ್ಬರಿಸಿದರು. ರವಿ ಬಿಷ್ಣೋಯಿ ಓವರ್ ನಲ್ಲಿ 115 ಮೀಟರ್ ಸಿಕ್ಸರ್ ಸಿಡಿಸಿ ಮಿಂಚಿದರು. 203 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಮ್ಯಾಕ್ಟ್‌ವೆಲ್‌ 29 ಎಸೆತಗಳಲ್ಲಿ ಸ್ಫೋಟಕ 59 ರನ್‌ (6 ಸಿಕ್ಸರ್‌, 3 ಬೌಂಡರಿ) ಚಚ್ಚಿ ಕೊನೆಯಲ್ಲಿ ಒಂದು ಎಸೆತ ಬಾಕಿಯಿರುವಂತೆ ಔಟಾದರು. 171 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಫಾಫ್‌ ಡುಪ್ಲೆಸಿಸ್‌ 46 ಎಸೆತಗಳಲ್ಲಿ 79 ರನ್‌ (5 ಸಿಕ್ಸರ್‌, 5 ಬೌಂಡರಿ) ಸಿಡಿಸಿ ಅಜೇಯರಾಗುಳಿದರು.

    ಆರಂಭಿಕರಾಗಿ ಕಣಕ್ಕಿಳಿದ ಆರ್‌ಸಿಬಿ ತಂಡದ ನಾಯಕ ಫಾಫ್‌ ಡು ಪ್ಲೆಸಿಸ್‌ ಮತ್ತು ವಿರಾಟ್‌ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸಿದರು. ಸಿಕ್ಸರ್‌, ಬೌಂಡರಿ ಸಿಡಿಸುತ್ತಾ ಅಭಿಮಾನಿಗಳಿಗೆ ರಸದೌತಣ ನೀಡಿದರು. ಪ್ರತಿ ಹೊಡೆತವನ್ನೂ ಎಂಜಾಯ್‌ ಮಾಡಿದ ಅಭಿಮಾನಿಗಳು ʻಕೊಹ್ಲಿ, ಕೊಹ್ಲಿʼ, ʻಆರ್‌ಸಿಬಿ, ಆರ್‌ಸಿಬಿʼ ಎಂದು ಆಟಗಾರರನ್ನ ಹುರಿದುಂಬಿಸಿದರು. ಪ್ರತಿ ಬೌಂಡರಿ, ಸಿಕ್ಸರ್‌ಗಳನ್ನು ಎಂಜಾಯ್‌ ಮಾಡುತ್ತಾ ಹುಚ್ಚೆದ್ದು ಕುಣಿದರು.

    ಲಕ್ನೋ ಸೂಪರ್‌ ಜೈಂಟ್ಸ್‌ ಪರ ಮಾರ್ಕ್‌ವುಡ್‌, ಅಮಿತ್‌ ಮಿಶ್ರಾ ತಲಾ ಒಂದೊಂದು ವಿಕೆಟ್‌ ಪಡೆದರು.

  • ಕೆಎಲ್ ರಾಹುಲ್‍ಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ

    ಕೆಎಲ್ ರಾಹುಲ್‍ಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ

    ಮುಂಬೈ: ಮಂಗಳವಾರ ರಾತ್ರಿ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರಿಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಲಾಗಿದೆ.

    ಐಪಿಎಲ್ ನೀತಿ ಸಂಹಿತೆಯ ಹಂತ 1ರ ಪ್ರಕಾರ ರಾಹುಲ್‍ಗೆ ದಂಡ ವಿಧಿಸಲಾಗಿದೆ. ತಂಡದ ಸಹ ಆಟಗಾರ ಮಾರ್ಕಸ್ ಸ್ಟೊಯಿನಿಸ್ ಅವರು ಸಹ ಅದೇ ಪಂದ್ಯದಲ್ಲಿ ಐಪಿಎಲ್‍ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಮಾರ್ಕಸ್ ಸ್ಟೊಯಿನಿಸ್ ಕೂಡಾ ಐಪಿಎಲ್ ನೀತಿ ಸಂಹಿತೆಯ ಹಂತ 1 ಅಡಿ ದಂಡ ಕಟ್ಟಬೇಕಾಗಿದೆ. ಇದನ್ನೂ ಓದಿ: ಲಕ್ನೋಗೆ ಕೆಜಿಎಫ್ ಚಿತ್ರದ ಡೈಲಾಗ್ ಮೂಲಕ ಟಕ್ಕರ್ ನೀಡಿದ ಆರ್‌ಸಿಬಿ

    ಜೋಶ್ ಹ್ಯಾಜಲ್‍ವುಡ್ ಎಸೆತದಲ್ಲಿ ಸ್ಟೊಯಿನಿಸ್ ಔಟಾಗಿದ್ದರು. ಆದರೆ ಇದಕ್ಕೂ ಮುನ್ನ ಅವರು ಅಂಪೈರ್ ಜೊತೆ ವಾಗ್ದಾಳಿ ನಡೆಸಿದರು. ಅವರ ಮಾತುಗಳು ಸ್ಟಂಪ್ ಮೈಕ್ರೋಫೋನ್‍ನಲ್ಲಿ ರೆಕಾರ್ಡ್ ಆಗಿವೆ. ಈ ಹಿನ್ನೆಲೆ ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಳಿಗೆ, ಮ್ಯಾಚ್ ರೆಫ್ರಿ ದಂಡ ವಿಧಿಸಿದ್ದಾರೆ.

    ಲಕ್ನೋ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ರನ್‍ಗಳಿಂದ ಜಯ ಸಾಧಿಸಿತು. ಇದನ್ನೂ ಓದಿ: ಪ್ಲೆ-ಆಫ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಔಟ್?