Tag: March 22

  • ನವನಾಯಕ ಆರ್ಯವರ್ಧನ್ ಕನಸಿನ ‘ಖನನ’!

    ನವನಾಯಕ ಆರ್ಯವರ್ಧನ್ ಕನಸಿನ ‘ಖನನ’!

    ಬೆಂಗಳೂರು: ವಿಶಿಷ್ಟವಾದ ಟೈಟಲ್ ನಿಂದಲೇ ಸಖತ್ ಸೌಂಡ್ ಮಾಡೋ ಚಿತ್ರಗಳ ಜಮಾನ ಶುರುವಾಗಿ ಒಂದಷ್ಟು ಕಾಲವೇ ಕಳೆದಿದೆ. ಅದೇ ಸಾಲಿನಲ್ಲಿ ಮೂಡಿ ಬಂದು ಬಿಡುಗಡೆಗೆ ತಯಾರಾಗಿರುವ ಚಿತ್ರ ಖನನ. ಶೀರ್ಷಿಕೆಯೇ ಇಷ್ಟು ವಿಶಿಷ್ಟವಾಗಿರುವಾಗ ಅಂಥಾದ್ದೇ ವಿಶೇಷವಾದ ಕಥೆಯನ್ನೂ ಈ ಚಿತ್ರ ಹೊಂದಿದೆ ಅಂತ ಯಾರಿಗಾದರೂ ಅನ್ನಿಸದಿರೋದಿಲ್ಲ. ನಿಜಕ್ಕೂ ಖನನ ಕನ್ನಡ ಚಿತ್ರರಂಗಕ್ಕೆ ಮೈಲಿಗಲ್ಲಾಗುವಂಥಾ ಕಥೆ, ಹೊಸತನದ ನಿರೂಪಣೆಯನ್ನ ಹೊಂದಿದೆ. ಏಕಕಕಾಲದಲ್ಲಿಯೇ ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ತಯಾರಾಗಿರೋ ಈ ಚಿತ್ರದ ಮೂಲಕವೇ ಆರ್ಯವರ್ಧನ್ ನಾಯಕ ನಟನಾಗಿ ಎಂಟ್ರಿ ಕೊಡಲು ತಯಾರಾಗಿದ್ದಾರೆ.

    ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಆರ್ಯವರ್ಧನ್ ಪಾಲಿಗೆ ಖನನ ಎಂಬುದು ಬಹುದಿನದ ಕನಸೊಂದನ್ನು ನನಸು ಮಾಡಿದ ಚಿತ್ರ. ನಟಿಸೋ ಚಿತ್ರಗಳ ಸಂಖ್ಯೆ ಕಡಿಮೆಯಾದರೂ ಪರವಾಗಿಲ್ಲ ಆದರೆ ವಿಶಿಷ್ಟ ಕಥೆಗಳಲ್ಲಿಯೇ ಪಾತ್ರವಾಗಬೇಕೆಂಬಂಥಾ ತುಡಿತ ಹೊಂದಿರುವವರು ಆರ್ಯವರ್ಧನ್. ಈ ಚಿತ್ರದ ನಿರ್ಮಾಪಕರಾದ ಶ್ರೀನಿವಾಸ್ ರಾವ್ ಅವರ ಪುತ್ರರಾದ ಆರ್ಯ, ಸಾಕಷ್ಟು ಸೈಕಲ್ಲು ಹೊಡೆದೇ ಇಲ್ಲಿವರೆಗೆ ಸಾಗಿ ಬಂದಿದ್ದಾರೆ.

    ತಂದೆಯೇ ಚಿತ್ರ ನಿರ್ಮಾಣ ಮಾಡೋ ಶಕ್ತಿ ಹೊಂದಿರುವಾಗ ಹೀರೋ ಆಗೋದು ಸಲೀಸು ಅಂತ ಯಾರಾದರೂ ಅಂದುಕೊಂಡರೆ ಅದು ನಿಜಕ್ಕೂ ಸುಳ್ಳು. ಯಾಕೆಂದರೆ, ಈಗ ನಿರ್ಮಾಪಕರಾಗಿ ಮಗನ ಕನಸಿಗೆ ಸಾಥ್ ನೀಡಿರೋ ತಂದೆ ಶ್ರೀನಿವಾಸ್ ರಾವ್ ಅವರೂ ಬಣ್ಣದ ಕನಸು ಕಟ್ಟಿಕೊಂಡು ಸಾಕಷ್ಟು ಶ್ರಮ ವಹಿಸಿದ್ದಾರೆ. ಅದೇ ಹಾದಿಯಲ್ಲಿ ಆರ್ಯವರ್ಧನ್ ಕೂಡಾ ಪರಿಶ್ರಮದಿಂದಲೇ ಹೀರೋ ಆಗಿದ್ದಾರೆ.

    ವರ್ಷಗಳ ಹಿಂದೆ ಮಾರ್ಚ್ 22 ಎಂಬ ಚಿತ್ರವೊಂದು ತೆರೆ ಕಂಡಿತ್ತಲ್ಲಾ? ಎಲ್ಲರ ಮೆಚ್ಚುಗೆ ಗಳಿಸಿಕೊಂಡು ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಆ ಚಿತ್ರದಲ್ಲಿ ಸಲ್ಮಾನ್ ಎಂಬ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಚಿತ್ರ ನೋಡಿದವರ್ಯಾರೂ ಆ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ಆ ಪಾತ್ರಕ್ಕೆ ಅಷ್ಟೊಂದು ಪರಿಣಾಮಕಾರಿಯಾಗಿ ಜೀವ ತುಂಬಿದ್ದವರು ಆರ್ಯವರ್ಧನ್. ಇದಕ್ಕಾಗಿ ಅವರಿಗೆ ಎಲ್ಲ ದಿಕ್ಕುಗಳಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಇದರಿಂದ ಉತ್ತೇಜಿತರಾದ ಆರ್ಯವರ್ಧನ್ ಆ ನಂತರ ಚಿಟ್ಟೆ ಎಂಬ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದರು. ಆ ಹೊತ್ತಿಗೆಲ್ಲಾ ಆರ್ಯವರ್ಧನ್ ಅವರಿಗೆ ತಮ್ಮ ಗುರಿ ಮತ್ತು ದಾರಿಗಳೆಲ್ಲವೂ ಸ್ಪಷ್ಟವಾಗಿತ್ತು.

    ಒಂದೊಳ್ಳೆ ಕಥೆಯ ಮೂಲಕ ಹೀರೋ ಆಗಿ ಎಂಟ್ರಿ ಕೊಡಬೇಕೆಂದು ತಯಾರಿ ಆರಂಭಿಸಿದ್ದ ಆರ್ಯವರ್ಧನ್ ಅವರಿಗೆ ತಂದೆ ಶ್ರೀನಿವಾಸ ರಾವ್ ಸಾಥ್ ಕೊಟ್ಟಿದ್ದರು. ತಮ್ಮ ಎಸ್. ನಲಿಗೆ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿಯೇ ನಿರ್ಮಾಣ ಮಾಡೋದಾಗಿ ಹಸಿರು ನಿಶಾನೆಯನ್ನೂ ತೋರಿಸಿದ್ದರು. ಅದಕ್ಕೆ ತಕ್ಕುದಾಗಿಯೇ ನಿರ್ದೇಶಕ ರಾಧಾ ಅವರು ವಿಶಿಷ್ಟವಾದೊಂದು ಕಥೆ ಹೇಳೋದರ ಮೂಲಕ ವಿಧ್ಯುಕ್ತ ಚಾಲನೆ ಪಡೆದುಕೊಂಡಿದ್ದ ಖನನ ಚಿತ್ರವೀಗ ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ತಯಾರಾಗಿ ಬಿಡುಗಡೆಗೆ ಸಜ್ಜುಗೊಂಡಿದೆ.

    ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಆರ್ಯವರ್ಧನ್ ಪಾಲಿಗೆ ಸಿನಿಮಾ ಕನಸು ಚಿಗುರಿಕೊಳ್ಳಲು ಕಾರಣವಾಗಿದ್ದೇ ತಂದೆ ಶ್ರೀನಿವಾಸ ರಾವ್ ಅವರಲ್ಲಿದ್ದ ಸಿನಿಮಾ ಪ್ರೇಮ. ಶ್ರೀನಿವಾಸ ರಾವ್ ಎಪ್ಪತ್ತರ ದಶಕದಲ್ಲಿಯೇ ನಾಯಕನಾಗಬೇಕೆಂಬ ಕನಸು ಕಂಡಿದ್ದವರು.

    ಕಾಲೇಜು ದಿನಗಳಲ್ಲಿಯೇ ನಟನಾಗೋ ಹಂಬಲದಿಂದ ನಾನಾ ಸಾಹಸ ಮಾಡಿ ಭ್ರಮನಿರಸನ ಹೊಂದಿದ್ದ ಅವರು ಆ ನಂತರದಲ್ಲಿ ತಮ್ಮದೇ ವಹಿವಾಟಿನಲ್ಲಿ ಕಳೆದು ಹೋಗಿದ್ದವರು. ಆದರೆ ತಮ್ಮೆಲ್ಲ ಕನಸು ತನ್ನ ಮಗನ ಮೂಲಕ ನನಸಾಗಲೆಂಬ ಕಾರಣದಿಂದಲೇ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಹೀಗೆ ತಂದೆಯ ಉತ್ತೇಜನದೊಂದಿಗೇ ಬೆಳೆದು ಬಂದ ಆರ್ಯವರ್ಧನ್ ಓದಿಕೊಂಡಿದ್ದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಹದಿಮೂರು ವರ್ಷಗಳ ಕಾಲ ಬಹು ಪ್ರತಿಷ್ಠಿತ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದ ಅವರು ಈಗಲೂ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದಾರೆ. ಓದಿಗೆ ಮೋಸ ಮಾಡಬಾರದೆಂಬ ಕಾರಣದಿಂದ ಅಲ್ಲಿಯೇ ತೊಡಗಿಸಿಕೊಂಡಿರೋ ಆರ್ಯವರ್ಧನ್ ಅದರ ನಡುವೆಯೂ ಸಿನಿಮಾ ನಟನೆಯತ್ತ ಆಕರ್ಷಣೆ ಹೊಂದಿದ್ದವರು. ಈ ಚಿತ್ರ ಒಪ್ಪಿಕೊಂಡ ಮೇಲೂ ರಾತ್ರಿಯೆಲ್ಲ ಕೆಲಸ ಮಾಡಿ ಬೆಳಗೆ ಸೀದಾ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೂ ಇದೆ.

    ಸಂಪೂರ್ಣ ತರಬೇತಿ ಪಡೆದುಕೊಂಡೇ ನಾಯಕನಾಗಿ ಅಖಾಡಕ್ಕಿಳಿದಿರುವ ಅವರು ಯಾವುದನ್ನೇ ಆದರೆ ಒಂದು ಸಲ ಹಿಡಿದರೆ ಬಿಡುವ ಜಾಯಮಾನದವರಲ್ಲ. ಮೊದಲ ಚಿತ್ರದಲ್ಲಿಯೇ ಇವರ ಸಮರ್ಪಣಾ ಭಾವ ಕಂಡು ನಿರ್ದೇಶಕರು ಸೇರಿದಂತೆ ಇಡೀ ಚಿತ್ರತಂಡದಲ್ಲೊಂದು ಮೆಚ್ಚುಗೆಯಿದೆ.

    ಶಾಲಾ ಕಾಲೇಜು ದಿನಗಳಲ್ಲಿಯೇ ಕಲೆ ಮತ್ತು ಸಾಹಿತ್ಯದತ್ತ ಅಪಾರ ಒಲವು ಹೊಂದಿದ್ದ ಆರ್ಯವರ್ಧನ್ ಅವರಿಗೆ ಆ ಕಾರಣದಿಂದಲೇ ಸಿನಿಮಾ ಆಸಕ್ತಿಯೂ ರೂಪುಗೊಂಡಿದೆ. ತಾನಿಂಥಾದ್ದೇ ಚಿತ್ರ ಮಾಡಬೇಕೆಂಬ ಸ್ಪಷ್ಟತೆ ಹುಟ್ಟಿಕೊಂಡಿದ್ದು, ಕಥೆಯ ಆಯ್ಕೆಯಲ್ಲಿ ಪ್ರೌಢಿಮೆ ಸಾಧ್ಯವಾದದ್ದರ ಹಿಂದೆ ಓದಿನ ಪಾತ್ರವಿದೆ ಅನ್ನೋದು ಆರ್ಯ ಅಭಿಪ್ರಾಯ.

    ತಾನು ಯಾವ ಚಿತ್ರವನ್ನೇ ಮಾಡಿದರೂ ಅದರಲ್ಲಿ ಸಮಾಜಕ್ಕೇನಾದರೂ ಸಂದೇಶ ಇರಬೇಕೆಂಬ ಕಾಳಜಿ ಹೊಂದಿರುವ ಅವರ ಪಾಲಿಗೆ ಖನನ ಮೂಲಕ ಅಂಥಾದ್ದೇ ಕಥೆ ಸಿಕ್ಕಿದೆ. ಕನ್ನಡದ ಮಟ್ಟಿಗೆ ಅತ್ಯಂತ ಅಪರೂಪದ ಈ ಚಿತ್ರದ ಮೂಲಕ ತಮಗೆ ಗ್ರ್ಯಾಂಡ್ ಓಪನಿಂಗ್ ಸಿಗಲಿದೆ ಎಂಬ ಭರವಸೆಯೂ ಅವರಲ್ಲಿದೆ.

    ಖನನ ಎಂಬುದು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ. ಚೆಂದದ ಕಥೆ ಹೇಳುತ್ತಲೇ ಬದುಕಿನ ವಾಸ್ತವ ದಿಗ್ದರ್ಶನ ಮಾಡಿಸುವಂಥಾ ಈ ಚಿತ್ರದಲ್ಲಿ ಸಾಹಸ, ಪ್ರೀತಿ ಪ್ರೇಮ ಸೇರಿದಂತೆ ಎಲ್ಲ ಅಂಶಗಳೂ ಇವೆ. ಪಕ್ಕಾ ಕಮರ್ಶಿಯಲ್ ಜಾನರಿನಲ್ಲಿಯೇ ಹಲವಾರು ಪ್ರಯೋಗಗಳು ಮತ್ತು ತಾಂತ್ರಿಕ ಶ್ರೀಮಂತಿಕೆಯಿಂದ ಖನನ ಮೂಡಿ ಬಂದಿದೆಯಂತೆ. ಈ ಹಿಂದೆ ಮಾರ್ಚ್ 22 ಚಿತ್ರದ ಮೂಲಕವೇ ಆರ್ಯವರ್ಧನ್ ಒಳ್ಳೆ ನಟ ಎಂಬುದು ಸಾಬೀತಾಗಿತ್ತು. ಖನನ ಚಿತ್ರದ ಮೂಲಕ ಅವರು ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಗೆಂದ ಮೇಲೆ ನಿರೀಕ್ಷೆಗಳು ಇದ್ದೇ ಇರುತ್ತವೆ. ಈ ಚಿತ್ರ ಇದೇ ತಿಂಗಳು ತೆರೆ ಕಾಣಲಿದೆ.

  • ಮಾರ್ಚ್ 22

    ಮಾರ್ಚ್ 22

    ಮಾರ್ಚ್ 22

    ದಿನಕ್ಕೊಂದರಂತೆ ಸಿನಿಮಾ ಸೆಟ್ಟೇರುತ್ತಿರುವ ಇಂದಿನ ದಿನಗಳಲ್ಲಿ ಸಾಮಾಜಿಕ ಬದ್ಧತೆಯುಳ್ಳ ಸಿನಿಮಾಗಳು ಕಣ್ಮರೆಯಾಗುತ್ತಿರುವ ನಡುವೆಯೂ ವಿಶೇಷ ಸಾಮಾಜಿಕ ಕಳಕಳಿಯೊಂದಿಗೆ ಚಿತ್ರವೊಂದನ್ನು ಬಿಡುಗಡೆ ಮಾಡ ಹೊರಟಿದ್ದಾರೆ ನಿರ್ಮಾಪಕ ಹರೀಶ್ ಶೇರಿಗಾರ್ ದಂಪತಿಗಳು.

    ಹೌದು, ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರ್ ನಡಿಯಲ್ಲಿ “ಮಾರ್ಚ್ 22” ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ.

    ಮಂಗಳೂರು ಮೂಲದ ನಿರ್ಮಾಪಕರಾದ ದುಬೈನ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮಪತ್ನಿಯಾದ ಶರ್ಮಿಳಾ ಶೇರಿಗಾರ್ ‘ಮಾರ್ಚ್ 22’ ಚಿತ್ರವನ್ನು ನಿರ್ಮಿಸಿದ್ದು, ಚಿತ್ರ ಸುಂದರವಾಗಿ ಮೂಡಿಬಂದಿದೆ.

    ಹಿರಿಯ ನಿರ್ದೇಶಕರಾದ ಕೂಡ್ಲು ರಾಮಕೃಷ್ಣ ಈ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರದ ನಾಯಕರಾಗಿ ಆರ್ಯವರ್ಧನ್ ಹಾಗೂ ಕಿರಣ್ ರಾಜ್ ಕಾಣಿಸಿಕೊಂಡಿದ್ದರೆ, ನಾಯಕಿಯರಾಗಿ ಮೇಘಶ್ರೀ ಹಾಗೂ ದೀಪ್ತಿ ಶೆಟ್ಟಿಯವರು ಕಾಣಿಸಿಕೊಂಡಿದ್ದಾರೆ.

    ಭಾರತದ ಸರ್ವಸಮಾನ ಮನಸ್ಥಿತಿಯ ನಡುವೆಯೂ ಅಲ್ಲಲ್ಲಿ ನೆಡೆಯುವ ಕೋಮುಸಾಮರಸ್ಯವನ್ನು ಹಾಳುಗೈಯುವ ಘಟನೆಗಳು ಸಮಾಜದ ದಿಕ್ಕನ್ನು ಹೇಗೆ ಬದಲಾಯಿಸಬಲ್ಲದು ಎನ್ನುವುದು ಚಿತ್ರದಲ್ಲಿ ಮುಖ್ಯವಾಗಿ ತೋರಿಬರುವ ಸಾಮಾಜಿಕ ಕಳಕಳಿಯಾಗಿ ಕಂಡುಬರಲಿದೆ.

    ಚಿತ್ರದ ಕಥಾಹಂದರವು ಉತ್ತಮವಾಗಿದ್ದು, ಅರ್ಥಪೂರ್ಣ ಸಂದೇಶದೊಡನೆ, ಸಮಾಜದ ಎಲ್ಲರನ್ನೂ ಸಮನ್ವಯದಿಂದ ಬದುಕುವಂತೆ ಪ್ರೇರೇಪಿಸಲು ಸಿನಿಮಾ ಸಶಕ್ತವಾಗಿದೆ.

    ಇದಲ್ಲದೇ ಜ್ವಲಂತ ಸಮಸ್ಯೆಯೆಂದೇ ಬಿಂಬಿಸಲ್ಪಡುತ್ತಿರುವ ಜಲಸಂಪನ್ಮೂಲದ ಕೊರತೆಯ ಕುರಿತಾಗಿಯೂ ಚಿತ್ರ ಬೆಳಕು ಚೆಲ್ಲುತ್ತಿರುವುದು, ಚಿತ್ರ ಪ್ರಸ್ತುತ ವಿದ್ಯಮಾನಗಳಿಗೆ ತೆರದುಕೊಂಡಿರುವ ಬಗೆಯನ್ನು ಸ್ಪಷ್ಟಪಡಿಸುತ್ತದೆ.

    ಇನ್ನು ಅನಿವಾಸಿ ಭಾರತೀಯ, ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿಯವರು ಈ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷತೆಯಾಗಿದೆ.

    ಚಿತ್ರದ ನಿರ್ದೇಶಕರಾದ ಕೂಡ್ಲು ರಮೇಶ್ ರವರು ಜೀವಜಲದ ಮಹತ್ತ್ವ ಹಾಗೂ ಜಾಗೃತಿಯ ಸಂದೇಶ ಸಾರುವ ಸಿನಿಮಾ ಇದಾಗಿದ್ದು, ಸಿನಿರಸಿಕರಿಂದ ಬಹಳಷ್ಟು ಪ್ರತಿಕ್ರಿಯೆ ಈಗಾಗಲೇ ಒದಗಿಬಂದಿದೆ. ವಾಸ್ತವಿಕ ಪರಿಕಲ್ಪನೆಯೊಂದಿಗೆ ಅದ್ಭುತ ಕಥೆಯೊಂದನ್ನು ಜನರೆದುರು ತೆರೆದಿಡುವ ಚಿತ್ರ ಇದಾಗಿರುವುದರಿಂದ ಸಹಜವಾಗಿಯೇ ನಿರೀಕ್ಷೆ, ಪ್ರತೀಕ್ಷೆಗಳು ಮುಗಿಲು ಮುಟ್ಟಿದೆ ಎಂದಿರುವುದು ಚಿತ್ರದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

    ಚಿತ್ರದಲ್ಲಿ ಖ್ಯಾತ ಸಹನಟರ ದಂಡೇ ಇದ್ದು, ಅನಂತ್ ನಾಗ್, ರವಿ ಕಾಳೆ, ಜೈಜಗದೀಶ್, ಶರತ್ ಲೋಹಿತಾಶ್ವ, ವಿನಯಾಪ್ರಸಾದ್, ಸಾಧುಕೋಕಿಲ, ಕಿಶೋರ್, ಶ್ರೀನಿವಾಸಮೂರ್ತಿ ಇನ್ನಿತರರ ನಟನೆ ಮನೋಜ್ಞವಾಗಿ ಮೂಡಿಬಂದಿದೆ. ಹಾಗಾಗಿ ಸದ್ಯದಲ್ಲೇ ತೆರೆಗೆ ಬರಲಿರುವ “ಮಾರ್ಚ್ 22” ಚಲನಚಿತ್ರ ಬೆಳ್ಳಿಪರದೆಯ ಹಿಟ್ ಆಗುವುದನ್ನು ಬಹುತೇಕ ಖಾತರಿಗೊಳಿಸಿದೆ.

  • ಗಣೇಶ ಹಬ್ಬಕ್ಕೆ ಸ್ಯಾಂಡಲ್‍ ವುಡ್‍ನಲ್ಲಿ ಮೂರು ಸಿನಿಮಾಗಳ ಧಮಾಕ

    ಗಣೇಶ ಹಬ್ಬಕ್ಕೆ ಸ್ಯಾಂಡಲ್‍ ವುಡ್‍ನಲ್ಲಿ ಮೂರು ಸಿನಿಮಾಗಳ ಧಮಾಕ

    ಬೆಂಗಳೂರು: ಶುಕ್ರವಾರ ಸ್ಯಾಂಡಲ್‍ವುಡ್‍ನಲ್ಲಿ ಗಣೇಶ ಹಬ್ಬಕ್ಕೆ ವಿಶೇಷವಾಗಿ ಮೂರು ವಿಭಿನ್ನ ಕಥಾಹಂದರವನ್ನು ಒಳಗೊಂಡಿರುವ ಸಿನಿಮಾಗಳು ಬೆಳ್ಳಿ ಪರದೆಯಲ್ಲಿ ರಾರಾಜಿಸಲಿವೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ `ಸಾಹೇಬ’, ನಿಧಿ ಸುಬ್ಬಯ್ಯ ನಟನೆಯ `5ಜಿ’ ಮತ್ತು ಅನಂತನಾಗ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ `ಮಾರ್ಚ್ 22′ ಸಿನಿಮಾಗಳು ತೆರೆಕಾಣಲಿವೆ.

    1.ಸಾಹೇಬ:
    ಸಾಹೇಬ ಸಿನಿಮಾದಲ್ಲಿ ಮನೋರಂಜನ್ ಗೆ ಜೊತೆಯಾಗಿ ಸಾನ್ವಿ ಶ್ರೀವಾತ್ಸವ್ ಕಾಣಿಸಿಕೊಂಡಿದ್ದು, ನಿರ್ದೇಶಕ ಭರತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾಗೆ ವಿ.ಹರಿಕೃಷ್ಣ ಸಂಗೀತವಿದೆ. ಸಿನಿಮಾ ಒಟ್ಟು 5 ಹಾಡುಗಳನ್ನು ಹೊಂದಿದ್ದು, ಈಗಾಗಲೇ ತನ್ನ ಸಂಗೀತದ ಮೂಲಕ ಸಾಹೇಬ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಚಿತ್ರತಂಡ ಮಾತ್ರ ಇದೂವರೆಗೂ ಸಿನಿಮಾದ ಕಥೆಯನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.

    2. 5ಜಿ:
    ಇನ್ನೂ ನಿಧಿಸುಬ್ಬಯ್ಯ ಮತ್ತು ಸಿಂಪಲ್ ಪ್ರವೀಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 5ಜಿ ಸಹ ನಾಳೆ ತೆರೆಕಾಣಲಿದೆ. ಬಾಲಿವುಡ್‍ಗೆ ಹೋಗಿ ಬಂದ ನಿಧಿ ಈಗ ಮತ್ತೆ ಕನ್ನಡದಲ್ಲೇ ಸೆಟ್ಲ್ ಆಗುವಂತೆ ಕಾಣುತ್ತಿದೆ. ಈಗಾಗಲೇ “ನನ್ನ ನಿನ್ನ ಪ್ರೇಮಕತೆ’ ಚಿತ್ರದಲ್ಲಿ ನಟಿಸಿರುವ ನಿಧಿ ಈಗ “5ಜಿ’ಗೂ ನಾಯಕಿಯಾಗಿದ್ದಾರೆ. ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗಳಾಗಿ ನಿಧಿ ಸುಬ್ಬಯ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಈಗಿನ ವ್ಯವಸ್ಥೆ, ಗಾಂಧೀಜಿಯ ಕನಸು, ಗಾಂಧೀಜಿ ಈಗ ಬಂದರೆ ಏನಾಗಬಹುದು ಎಂಬ ಕಥೆಯನ್ನು ಸಿನಿಮಾ ಒಳಗೊಂಡಿದೆ.

    3.ಮಾರ್ಚ್ 22:
    ಮಂಗಳೂರು ಮೂಲದ ದುಬೈ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ಬಹು ನಿರೀಕ್ಷಿತ ‘ಮಾರ್ಚ್ 22’ ಸಿನಿಮಾ ನಾಳೆ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ. ಜೀವ ಜಲದ ಮಹತ್ವ ಸಾರುವ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರು. ಉಳಿದಂತೆ ನಟ ಅನಂತ್ ನಾಗ್, ವಿನಯಾ ಪ್ರಸಾದ್, ಗೀತಾ, ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್ ತಾರಾಗಣದಲ್ಲಿದ್ದಾರೆ.