Tag: maratha board

  • ಬೆಂಗಳೂರಿನಲ್ಲಿ ಕರ್ನಾಟಕ ಬಂದ್‌ ಬಿಸಿಯೇ ಇಲ್ಲ- ಮಾರುಕಟ್ಟೆಯಲ್ಲಿ ಜನವೋ ಜನ

    ಬೆಂಗಳೂರಿನಲ್ಲಿ ಕರ್ನಾಟಕ ಬಂದ್‌ ಬಿಸಿಯೇ ಇಲ್ಲ- ಮಾರುಕಟ್ಟೆಯಲ್ಲಿ ಜನವೋ ಜನ

    – ಮೆಜೆಸ್ಟಿಕ್‌ನಿಂದ ಎಂದಿನಂತೆ ಬಸ್‌ ಸಂಚಾರ
    – ಬೆಳಗ್ಗೆ 4 ಗಂಟೆಯಿಂದಲೇ ಪೊಲೀಸರಿಂದ ಗಸ್ತು

    ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರದಿಂದ ಹಿಂದೆ ಸರಿಯದ ಕರ್ನಾಟಕ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್‌ಗೆ ರಾಜಧಾನಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ರಸ್ತೆಯಲ್ಲಿ ಎಂದಿನಂತೆ ಜನರು ಸಂಚರಿಸುತ್ತಿದ್ದು, ಬಿಎಂಟಿಸಿ ಬಸ್ಸುಗಳು ರಸ್ತೆಗೆ ಇಳಿದಿದೆ. ಕೆ.ಆರ್‌. ಮಾರುಕಟ್ಟೆಗೆ ಜನರು ಆಗಮಿಸಿ ಖರೀದಿಯಲ್ಲಿ ತೊಡಗಿದ್ದಾರೆ. ಅಂಗಡಿ, ಹೋಟೆಲ್‌ಗಳು ತೆರೆದಿದ್ದು ಗ್ರಾಹಕರು ಆಗಮಿಸುತ್ತಿದ್ದಾರೆ.

    ಕರ್ನಾಟಕ ಬಂದ್‌ಗೆ ಯಾವುದೇ ಅನುಮತಿ ಪಡೆದಿಲ್ಲ. ಹೀಗಾಗಿ ಯಾರೇ ಚೇಷ್ಟೆ ಮಾಡಿದರೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶುಕ್ರವಾರವೇ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂಥ್‌ ಎಚ್ಚರಿಕೆ ನೀಡಿದ್ದರು. ಹೀಗಾಗಿ ಬೆಳ್ಳಬೆಳಗ್ಗೆ ಬೆಂಗಳೂರಿನ ಪ್ರಮುಖ ರಸ್ತೆ ಗಳು, ಸಿಗ್ನಲ್‌ಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ನಿಯೋಜನೆಗೊಂಡಿದ್ದಾರೆ.

    ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಅಯಾಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿಸಿಪಿ, ಎಸಿಪಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಲಾಗಿದೆ.

    ಇಂದು ಬೆಳಗ್ಗೆ 10:30ರಿಂದ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಕನ್ನಡ ಸಂಘಟನೆಗಳ ಕಾರ್ಯಕರ್ತರು ರ‍್ಯಾಲಿ ಹೊರಡಲಿದ್ದಾರೆ. ಹೀಗಾಗಿ ಟೌನ್ ಹಾಲ್ ಬಳಿ ಪೊಲೀಸ್ ಭದ್ರತೆ ಹೆಚ್ಚು ಮಾಡಲಾಗಿದೆ. ‌ಒಬ್ಬರು ಇಬ್ಬರು ಎಸಿಪಿ, ಒಬ್ಬರು ಡಿಸಿಪಿ ನೇತೃತ್ವದಲ್ಲಿ 200 ಜನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪ್ರತಿಭಟನೆ ನಿಯಂತ್ರಣಕ್ಕೆ ವಾಟರ್ ಜೆಟ್ ಕೂಡ ತರಲಾಗಿದೆ.

    ಮೆಜೆಸ್ಟಿಕ್‌ನಿಂದ ವಿವಿಧ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸಂಚಾರ ಎಂದಿನಂತೆ ಆರಂಭಗೊಂಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.