Tag: Manyata Tech Park

  • ಮಾನ್ಯತಾ ಟೆಕ್ ಪಾರ್ಕ್ ಬಳಿ ರಾಜಕಾಲುವೆ ಮೇಲೆ ಅಕ್ರಮವಾಗಿ ಎದ್ದಿರುವ ಬೃಹತ್ ಕಟ್ಟಡ ಯಾರದ್ದು?- ಹೆಚ್‌ಡಿಕೆ ಪ್ರಶ್ನೆ

    ಮಾನ್ಯತಾ ಟೆಕ್ ಪಾರ್ಕ್ ಬಳಿ ರಾಜಕಾಲುವೆ ಮೇಲೆ ಅಕ್ರಮವಾಗಿ ಎದ್ದಿರುವ ಬೃಹತ್ ಕಟ್ಟಡ ಯಾರದ್ದು?- ಹೆಚ್‌ಡಿಕೆ ಪ್ರಶ್ನೆ

    ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರು ಮಾನ್ಯತಾ ಟೆಕ್ ಪಾರ್ಕ್ ಬಳಿ ಭೇಟಿ ನೀಡಿದ್ದು ನೆರೆ ಮತ್ತು ಮಳೆ ಅನಾಹುತ ವೀಕ್ಷಿಸೋದಕ್ಕಾ? ಅಥವಾ ರಾಜಕಾಲುವೆ (Rajakaluve) ಒತ್ತುವರಿದಾರನ್ನು ರಕ್ಷಣೆ ಮಾಡೋದಕ್ಕಾ? ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರು (H.D Kumaraswamy) ಪ್ರಶ್ನಿಸಿದ್ದಾರೆ.

    ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಡಿ.ಕೆ ಶಿವಕುಮಾರ್ ಅವರು ಮಾನ್ಯತಾ ಟೆಕ್ ಪಾರ್ಕ್ (Manyata Tech Park) ಬಳಿಗೆ ಭೇಟಿ ಕೊಟ್ಟು ಮಳೆ, ನೆರೆ ಪರಿಸ್ಥಿತಿ ವೀಕ್ಷಣೆ ಮಾಡಿರುವುದೇನೋ ಸರಿ. ಆದರೆ, ಅವರ ಭೇಟಿ ಪ್ರವಾಹ ವೀಕ್ಷಣೆಗೋ ಅಥವಾ ರಾಜಕಾಲುವೆ ರಕ್ಕಸರ ರಕ್ಷಣೆಗೋ..? ಈ ಬಗ್ಗೆ ಬೆಂಗಳೂರು ಮಹಾಜನತೆಗೆ ಬೆಂಗಳೂರು ಉಸ್ತುವಾರಿ ಸಚಿವರು ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಳೆ ನೀರು ಸರಾಗವಾಗಿ ಹರಿಯಲು ಅಡ್ಡವಿರುವ ಕಟ್ಟಡ ತೆರವಿಗೆ ಸೂಚನೆ: ಡಿಕೆಶಿ

    ಡಿಸಿಎಂ ಅವರು ಪಾದಸ್ಪರ್ಶ ಮಾಡಿದ್ದ ರಾಜಕಾಲುವೆ ಪುನೀತವಾಗಿರಬೇಕು. ಪಾಪ.. ಅದೇ ರಾಜಕಾಲುವೆ ಮೇಲೆ ಬೃಹದಾಕಾರವಾಗಿ ಎದ್ದು ನಿಂತಿರುವ ‘ಭಾರೀ ಆಸಾಮಿ’ಯೊಬ್ಬರ ಕಟ್ಟಡ ಅವರ ಕಣ್ಣಿಗೆ ಕಾಣಲಿಲ್ಲವೆ? ರಾಜಾರೋಷವಾಗಿ ರಾಜಕಾಲುವೆಯನ್ನು ಮುಕ್ಕಿ ತಿಂದಿರುವ ಆಸಾಮಿಯ ಬಗ್ಗೆ ಅವರು ಚಕಾರವನ್ನೇ ಎತ್ತಲಿಲ್ಲ.‌ ಕೊನೆಪಕ್ಷ ಅವರ ಹೆಸರನ್ನೂ ಹೇಳಲಿಲ್ಲ ಎಂದು ಡಿಕೆಶಿಯವರ ಕಾಲೆಳೆದಿದ್ದಾರೆ.

    ರಾಜಕಾಲುವೆಗಳ ಮೇಲೆ ಐಷಾರಾಮಿ ಸೌಧಗಳನ್ನು ಕಟ್ಟಿಕೊಂಡು ಕೋಟಿ ಕೋಟಿ ದುಡಿಯುತ್ತಿರುವ ರಾಜಕಾಲುವೆ ರಕ್ಕಸರ ವಿರುದ್ಧ ಕ್ರಮ ಜರುಗಿಸುವ ದಮ್ಮು ತಾಕತ್ತು ನಿಮಗೆ ಇದೆಯಾ ಡಿ.ಕೆ. ಶಿವಕುಮಾರ್ ಅವರೇ? ಹೋಗಲಿ, ಅಂಥವರ ವಿರುದ್ಧ ಕ್ರಮ ಜರುಗಿಸಲು ನಿಮ್ಮ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ, ಅಧಿಕಾರ ನೀಡಿದ್ದೀರಾ? ಒಂದು ವೇಳೆ ನೀಡಿದ್ದರೆ ಆ ಅಕ್ರಮ ಕಟ್ಟಡಗಳು ಇನ್ನೂ ಯಾಕೆ ಹಾಗೆಯೇ ಇವೆ? ಎಂಬುದನ್ನು ನೀವು ಹೇಳಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

    ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ನೀವು ಕುರ್ಚಿ ಮೇಲೆ ಕೂತು ಎರಡು ವರ್ಷವೇ ಆಯಿತು. ಅದೆಷ್ಟೋ ಬಾರಿ ಸಾಯಿ ಬಡಾವಣೆ ಮುಳುಗಿದ್ದೂ ಆಯಿತು, ತೇಲಿದ್ದೂ ಆಯಿತು! ನಿಮ್ಮಿಂದ ಆಗಲಿ ಅಥವಾ ಕಾಂಗ್ರೆಸ್ ಸರ್ಕಾರದಿಂದ ಆಗಲಿ ಯಾವುದೇ ಪರಿಹಾರ ಸಿಗಲಿಲ್ಲ! ಬಡಾವಣೆಯ ಜನರು ನರಳುತ್ತಿರುವುದು ಮಾತ್ರ ತಪ್ಪಿಲ್ಲ. ಈ ಅಸಡ್ಡೆ ಯಾಕೆ? ಇವರೆಲ್ಲ ತೆರಿಗೆ ಕಟ್ಟುತ್ತಿಲ್ಲವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಮಳೆ | ಮೇ 30, 31 ರಂದು DC , CEO ಸಭೆ ಕರೆದ ಸಿಎಂ

  • ಮಳೆ ನೀರು ಸರಾಗವಾಗಿ ಹರಿಯಲು ಅಡ್ಡವಿರುವ ಕಟ್ಟಡ ತೆರವಿಗೆ ಸೂಚನೆ: ಡಿಕೆಶಿ

    ಮಳೆ ನೀರು ಸರಾಗವಾಗಿ ಹರಿಯಲು ಅಡ್ಡವಿರುವ ಕಟ್ಟಡ ತೆರವಿಗೆ ಸೂಚನೆ: ಡಿಕೆಶಿ

    -ಯಾರಿಗೂ ಅನ್ಯಾಯ ಮಾಡಲು ಬಯಸುವುದಿಲ್ಲ, ಸೂಕ್ತ ಪರಿಹಾರ ನೀಡುತ್ತೇವೆ ಎಂದ ಡಿಸಿಎಂ

    ಬೆಂಗಳೂರು: ಮಳೆ ನೀರು ಸರಾಗವಾಗಿ ಹರಿಯಲು ಅಡ್ಡವಿರುವ ಕಟ್ಟಡಗಳನ್ನು ವಿಪತ್ತು ನಿರ್ವಹಣೆ ಕಾಯ್ದೆಯಡಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

    ಗುರುವಾರ ಯಲಹಂಕದ ಮಾನ್ಯತಾ ಟೆಕ್ ಪಾರ್ಕ್ (Manyata Tech Park) ಬಳಿ ಮಳೆ ಪ್ರವಾಹಕ್ಕೆ ಕಾರಣವಾದ ರಾಜಕಾಲುವೆ ಹಾಗೂ ನಾಲೆಗಳನ್ನು ಪರಿಶೀಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಹಾಗೂ ಮುಖ್ಯಮಂತ್ರಿಗಳು ಈಗಾಗಲೇ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಇದು ಬಹಳ ಮುಖ್ಯವಾದ ಜಂಕ್ಷನ್. ಇಲ್ಲಿಂದ ಸಮಸ್ಯೆ ಆರಂಭವಾಗಿ ನಂತರ ಉಳಿದ ಪ್ರದೇಶಗಳಲ್ಲಿ ಸಮಸ್ಯೆಯಾಗುತ್ತಿದೆ. ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅಡ್ಡಿಪಡಿಸುತ್ತಿದ್ದಾರೆ. ನಮ್ಮ ಅಧಿಕಾರಿಗಳಿಗೂ ಸಹಕಾರ ನೀಡುತ್ತಿರಲಿಲ್ಲ. ಹೀಗಾಗಿ ಸಮಸ್ಯೆಗೆ ಕಾರಣವಾಗಿರುವ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.ಇದನ್ನೂ ಓದಿ: ನೀರಾವರಿ ಇಲಾಖೆಯಲ್ಲಿ ಹೆಚ್ಚು ಎಂಜಿನಿಯರ್‌ಗಳಿಲ್ಲ: ಸಿಎಸ್‌ಗೆ ಖಾರವಾದ ಪತ್ರ ಬರೆದಿದ್ದಕ್ಕೆ ಡಿಕೆಶಿ ಸಮರ್ಥನೆ

    ಶಾಶ್ವತ ಪರಿಹಾರ ನೀಡಲಾಗುವುದು:
    ನಮಗೆ ಯಾರ ಆಸ್ತಿಯನ್ನು ನಷ್ಟ ಮಾಡಲು ಇಷ್ಟವಿಲ್ಲ. ಯಾರಿಗೂ ಅನ್ಯಾಯ ಮಾಡಲು ಬಯಸುವುದಿಲ್ಲ. ನೀರು ಸರಾಗವಾಗಿ ಹರಿಯಬೇಕು. ಹೀಗಾಗಿ ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕಾಮಗಾರಿ ಮುಂದುವರಿಸಲು ನನ್ನ ಮುಂದೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವುದು ಮುಖ್ಯ ಎಂದರು.

    ಆಯುಕ್ತರಿಗೆ ಅಧಿಕಾರ:
    ಮಳೆ ನೀರು ಸರಾಗವಾಗಿ ಹರಿಯುವುದು ಇಲ್ಲಿ ಮುಖ್ಯವೇ ಹೊರತು ಇನ್ಯಾರೂ ಅಲ್ಲ. ನಾವು ಯಾವುದೇ ಕಟ್ಟಡಗಳಿಗೆ ಅಡಚಣೆ ಮಾಡಲು ಬಯಸುವುದಿಲ್ಲ. ನಾವು ಬೆಂಗಳೂರಿನ ಘನತೆ ಹಾಳಾಗಲು ಬಿಡುವುದಿಲ್ಲ. ಹೀಗಾಗಿ ಈ ಭಾಗದ ಭೂಮಾಲೀಕರಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದೇವೆ. ತಾಂತ್ರಿಕ ಕಾರಣಗಳಿಂದಾಗಿ ತಪ್ಪಾಗಿದ್ದರೆ ನಾವು ಅದಕ್ಕೆ ಪರಿಹಾರ ನೀಡುತ್ತೇವೆ. ನಮಗೆ ಈ ವಿಚಾರವಾಗಿ ಶಾಶ್ವತ ಪರಿಹಾರ ಬೇಕಾಗಿದೆ. ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದು, ನಾವು ನಮ್ಮ ಕೆಲಸ ಮುಂದುವರಿಸುತ್ತೇವೆ. ನಮ್ಮ ಪಾಲಿಕೆ ಆಯುಕ್ತರು ಹಾಗೂ ಕಾರ್ಯದರ್ಶಿಗಳಿಗೆ ಈ ವಿಚಾರದಲ್ಲಿ ಇರುವ ಅಡಚಣೆಗಳನ್ನು ತೆರವುಗೊಳಿಸಲು ಸಂಪೂರ್ಣ ಅಧಿಕಾರ ನೀಡಲಾಗಿದೆ. ನಕ್ಷೆಗಳ ವಿಚಾರವಾಗಿ ಇರುವ ಗೊಂದಲದ ಬಗ್ಗೆ ಕೇಳಿದಾಗ, ನಕ್ಷೆಗಳ ಗೊಂದಲ ಏನೇ ಇದ್ದರೂ ನೀರು ಹರಿಯಲು ಜಾಗ ಮಾಡಲೇಬೇಕು ಎಂದು ಹೇಳಿದರು.

    ಕಸದ ಸೆಸ್ ಕಡಿಮೆ ಮಾಡಬೇಕು ಎಂಬ ಬಿಜೆಪಿ ಆಗ್ರಹದ ಬಗ್ಗೆ ಕೇಳಿದಾಗ, ಅವರ ಕಾಲದಲ್ಲಿ ತೆಗೆದುಕೊಂಡ ತೀರ್ಮಾನವನ್ನು ನಾವು ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಅವರು ಏನು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಪರಿಶೀಲಿಸಿ ನಂತರ ಅವರೊಂದಿಗೆ ಮಾತನಾಡುತ್ತೇನೆ. ಅವರ ಅಭಿಪ್ರಾಯಕ್ಕೂ ಗೌರವ ನೀಡುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ಸಿಎಂ Vs ಡಿಸಿಎಂ ಮಧ್ಯೆ ವರ್ಗಾವಣೆ ಸಂರ್ಘರ್ಷ – ನಿಜಕ್ಕೂ ಆಗಿದ್ದೇನು? ಡಿಕೆಶಿ ಆಕ್ಷೇಪ ಏಕೆ?

  • ಮಾನ್ಯತಾ ಟೆಕ್‌ ಪಾರ್ಕ್‌ ಜಲಾವೃತ – ಪರ್ಯಾಯ ಮಾರ್ಗ ಬಳಸುವಂತೆ ಮನವಿ

    ಮಾನ್ಯತಾ ಟೆಕ್‌ ಪಾರ್ಕ್‌ ಜಲಾವೃತ – ಪರ್ಯಾಯ ಮಾರ್ಗ ಬಳಸುವಂತೆ ಮನವಿ

    ಬೆಂಗಳೂರು: ರಾತ್ರಿ (Bengaluru Rain) ಸುರಿದ ಭಾರೀ ಮಳೆಗೆ ಮಾನ್ಯತಾ ಟೆಕ್‌ ಪಾರ್ಕ್ (Manyata Tech Park) ಜಲಾವೃತವಾಗಿದೆ.

    ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸಬೇಕೆಂದು ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಸಿಸಿಬಿ ಕಚೇರಿ ಜಲಾವೃತ | ಬೊಮ್ಮನಹಳ್ಳಿ -ಸಿಲ್ಕ್ ಬೋರ್ಡ್ ರಸ್ತೆಯಲ್ಲಿ 3 ಅಡಿ ನೀರು

     

     

    ಮಹಾದೇವಪುರ, ಬೆಂಗಳೂರು ಪೂರ್ವ ವಲಯ, ಬೊಮ್ಮನಹಳ್ಳಿ, ಯಲಹಂಕ ವಲಯದಲ್ಲಿ ಭಾರೀ ಮಳೆಯಾಗಿದ್ದು, 4 ವಲಯದ 100 ಕ್ಕೂ ಹೆಚ್ಚು ಪ್ರದೇಶಗಳಿಗೆ ಸಮಸ್ಯೆಯಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ವರುಣನ ಅಬ್ಬರ – 10 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲೆಯ ಮಳೆ

    ಹಲವು ಮನೆಗಳಿಗೆ ನೀರು ನುಗ್ಗಿ ಲೇಔಟ್ ಗಳು ಜಲಾವೃತಗೊಂಡಿದೆ. ಶಾಂತಿನಗರ, ಕೋರಮಂಗಲ, ಬೊಮ್ಮನಹಳ್ಳಿಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ.

    ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ನಾಗವಾರ ವಾರ್ಡ್‌ನಲ್ಲಿ ನಿವಾಸಿಗಳು ರಾತ್ರಿ ಜಾಗರಣೆ ಮಾಡಿದ್ದಾರೆ. Bengaluru Rain| ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್ ಬಂದ್ – ಶಿವಾನಂದ ಸರ್ಕಲ್‌ ಅಂಡರ್‌ ಪಾಸ್‌ ಮುಳುಗಡೆ

  • ಮಾನ್ಯತಾ ಟೆಕ್ ಪಾರ್ಕ್ ಜಲಾವೃತ – 400ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಮಾನ್ಯತಾ ಟೆಕ್ ಪಾರ್ಕ್ ಜಲಾವೃತ – 400ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಎಡಬಿಡದೇ ಸುರಿದ ಭಾರೀ ಮಳೆಗೆ ನಗರದ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಉತ್ತರ ಬೆಂಗಳೂರಿನ ಅತಿದೊಡ್ಡ ಟೆಕ್ ಪಾರ್ಕ್‍ಗಳಲ್ಲಿ ಒಂದಾದ ಮಾನ್ಯತಾ ಟೆಕ್ ಪಾರ್ಕ್ ಕೂಡ ಜಲಾವೃತಗೊಂಡಿದೆ. ಈ ಹಿನ್ನೆಲೆ ಕೆಲವು ನೌಕರರು ತಮ್ಮ ಕಚೇರಿಗೆ ತಲುಪಲಾಗದೇ ಮನೆಗೆ ಮರಳಬೇಕಾಯಿತು.

    ಮಾನ್ಯತಾ ಟೆಕ್ ಪಾರ್ಕ್ ಹಿಂಭಾಗದ ರಾಮಯ್ಯ ಲೇಔಟ್ ರಸ್ತೆಗಳು ಮಳೆ ನೀರು ಹಾಗೂ ರಾಜಕಾಲುವೆ ನೀರಿನಿಂದ ತುಂಬಿ ಹರಿಯುತ್ತಿದೆ. ಎಲಿಮೆಂಟ್ಸ್ ಮಾಲ್ ಮುಂಭಾಗದ ರಸ್ತೆ ನದಿಯಂತೆ ಮಾರ್ಪಾಡುಗೊಂಡಿದ್ದು, ರಸ್ತೆಯಲ್ಲಿ ಹಲವರು ವಾಹನಗಳು ಕೆಟ್ಟು ನಿಂತಿದೆ. ಹಾಗಾಗಿ ಎರಡು ಭಾಗದ ರಸ್ತೆಗಳನ್ನು ಕೂಡ ಬ್ಲಾಕ್ ಮಾಡಲಾಗಿದೆ. ಥಣಿಸಂದ್ರ ಮುಖ್ಯರಸ್ತೆ ಕೂಡ ಸಂಪೂರ್ಣ ಜಲಾವೃತಗೊಂಡಿದೆ. ಇದನ್ನೂ ಓದಿ: ಮಹಾಮಳೆಗೆ ನಲುಗಿದ ರಾಜ್ಯ ರಾಜಧಾನಿ- 100ಕ್ಕೂ ಹೆಚ್ಚು ಮನೆಗೆ ನುಗ್ಗಿದ ನೀರು, ಕೆರೆಯಂತಾದ ರಸ್ತೆಗಳು

    ಮಾನ್ಯತಾ ಪಕ್ಕದ ರಾಮಯ್ಯ ನಾರ್ತ್ ಸಿಟಿ ಲೇಔಟ್ ಮಳೆ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದ್ದು, ಪ್ರತಿಷ್ಟಿತ ಬಡಾವಣೆಗೆ ನೀರು ನುಗ್ಗಿದೆ. ಅಲ್ಲದೇ ಮಾನ್ಯತಾ ಟೆಕ್ ಪಾರ್ಕ್ ಸಮೀಪದ ಎಸ್‍ವಿಎನ್ ಸ್ಕೂಲ್ ಜಲಾವೃತಗೊಂಡಿದ್ದು, ಶಾಲೆಗೆ ಆಡಳಿತ ಮಂಡಳಿ ರಜೆ ಘೋಷಿಸಿದೆ. ಮಾನ್ಯತಾ ಪಕ್ಕದ ರಾಮಯ್ಯ ನಾರ್ತ್ ಸಿಟಿ ಲೇಔಟ್ ಸಂಪೂರ್ಣ ಮುಳುಗಡೆಯಾಗಿದ್ದು, ನಾನೂರಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಮನೆಯಿಂದ ಹೊರಬರಲಾಗದೇ ಜನ ಪರದಾಡುತ್ತಿದ್ದಾರೆ. ಇದನ್ನೂ ಓದಿ: ಮಳೆಯ ಆರ್ಭಟ – ವಿಧಾನಸೌಧಕ್ಕೂ ನುಗ್ಗಿದ ನೀರು

    ಮತ್ತೊಂದೆಡೆ ಬೆಳ್ಳಂದೂರು ಕೆರೆ ಕೋಡಿ ತುಂಬಿದ ಹಿನ್ನಲೆ ಬೆಳ್ಳಂದೂರು ಲೇಕ್ ರೋಡ್ ಡೇಂಜರ್ ಝೋನ್‍ನಲ್ಲಿದೆ. ಭಾರೀ ಮಳೆಗೆ ಬೆಳ್ಳಂದೂರು ರಾಜಕಾಲುವೆಯ ನೀರು ಮಸೀದಿ, ಮನೆ, ಅಪಾರ್ಟ್‍ಮೆಂಟ್, ಅಂಗಡಿ, ರಸ್ತೆಗಳಿಗೆ ನುಗ್ಗಿದ್ದರಿಂದ ಜನ ಪರದಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳಾ ಟೆಕ್ಕಿ ಆತ್ಮಹತ್ಯೆ – ಗಂಡನ ಕಿರುಕುಳ ಅರೋಪ

    ಮಹಿಳಾ ಟೆಕ್ಕಿ ಆತ್ಮಹತ್ಯೆ – ಗಂಡನ ಕಿರುಕುಳ ಅರೋಪ

    ಬೆಂಗಳೂರು: ನಗರದಲ್ಲಿ ಮಂಡ್ಯ ಮೂಲದ ಮಹಿಳಾ ಟೆಕ್ಕಿಯೊಬ್ಬರು ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

    ಈ ಫೋಟೋದಲ್ಲಿರುವ ಈ ಸುಂದರ ಯುವತಿಯೇ ನೋಡಿ ಬದುಕು ಸಾಕು ಅಂತಾ ನೇಣಿಗೆ ಶರಣಾದ ದುರ್ದೈವಿ. ಮಂಡ್ಯ ಮೂಲದ ಈ ಯುವತಿಯ ಹೆಸರು ಸಂಗೀತಾ. ಚೆನ್ನಾಗಿ ಓದಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‍ನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇದೇ ಜಾಗದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನೆಲಮಂಗಲ ಮೂಲದ ವಿನಯ್ ಅನ್ನೋರ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಎರಡು ಮನೆಯವರನ್ನು ಒಪ್ಪಿಸಿ ಕಳೆದ ಒಂದುವರೇ ವರ್ಷದ ಹಿಂದೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಮೊದ ಮೊದಲಿಗೆ ಚೆನ್ನಾಗಿ ಇದ್ದ ಈ ಇಬ್ಬರು ದಂಪತಿ, ಕಳೆದ ಐದಾರು ತಿಂಗಳಿನಿಂದ ಚಿಕ್ಕಪುಟ್ಟ ವಿಚಾರಕ್ಕೆ ಗಲಾಟೆ ಮಾಡ್ಕೋತಿದ್ರು ಆ ಗಲಾಟೆಯ ಮುಂದುವರಿದ ಭಾಗವಾಗಿ ನಿನ್ನೆ ಸಂಜೆ ಸಂಗೀತಾ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಪತ್ನಿಯ ಶಿರಚ್ಛೇದ ಮಾಡಿ ಪೊಲೀಸ್ ಠಾಣೆಗೆ ಹೊತ್ತೊಯ್ದ

    ಅವನು ಅನುಮಾನದ ಪಿಶಾಚಿ, ಅವನ ಕಿರುಕುಳದಿಂದಲೇ ನಮ್ಮ ಮಗಳು ನೇಣಿಗೆ ಶರಣಾಗಿರುವುದು ಎಂದು ಸಂಗೀತಾಳ ಪೋಷಕರು ಆಳಿಯ ವಿನಯ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗಳು ಚೆನ್ನಾಗಿರಲಿ ಅಂತಾ ಪ್ರೀತಿಸಿದ ಹುಡುಗನಿಗೇ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದೇವು. ಆದರೆ ಆಳಿಯ ವಿನಯ್‍ಗೆ ಸಂಗೀತಾಳ ಬಗ್ಗೆ ಅನುಮಾನ. ಯಾರ ಜೊತೆಗೂ ಫೋನ್‍ನಲ್ಲಿ ಮಾತಾಡೋವಾಗಿಲ್ಲ. ಯಾರ ಜೊತೆಗೆ ಓಡಾಡೋಗಿಲ್ಲ. ಮನೆಯಲ್ಲಿ ಚಿಕ್ಕಪುಟ್ಟ ವಿಚಾರಗಳಿಗೂ ಜಗಳ ತೆಗೆದು ಗಲಾಟೆ ಮಾಡುತ್ತಿದ್ದ. ಊಟ ಸರಿಯಾಗಿ ಮಾಡಲ್ಲ, ಬೇಕಾಬಿಟ್ಟಿ ಮಾಡಿ ಹಾಕುತ್ತಾಳೆ ಎಂದು ಸಂಗೀತಾಗೆ ಕಿರುಕುಳ ನೀಡುತ್ತಿದ್ದ. ಇದೇ ಕಾರಣಕ್ಕೆ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಗೀತಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪತಿ ವಿನಯ್‍ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್‌ ಸೋಂಕಿತನ ಪತ್ನಿ, ಬಾಮೈದುನನಿಗೂ ಸೋಂಕು- ಗುಜರಾತ್‌ನಲ್ಲಿ 3ಕ್ಕೇರಿದ ಸಂಖ್ಯೆ

  • ‘ಮಾನ್ಯತಾ ಟೆಕ್ ಪಾರ್ಕಿಗೆ ರಜೆ ನೀಡಿ’- ಸದನದಲ್ಲಿ ಚರ್ಚೆ, ಶ್ರೀರಾಮುಲು ಸ್ಪಷ್ಟನೆ

    ‘ಮಾನ್ಯತಾ ಟೆಕ್ ಪಾರ್ಕಿಗೆ ರಜೆ ನೀಡಿ’- ಸದನದಲ್ಲಿ ಚರ್ಚೆ, ಶ್ರೀರಾಮುಲು ಸ್ಪಷ್ಟನೆ

    ಬೆಂಗಳೂರು: ವಿಧಾನ ಪರಿಷತ್‍ನಲ್ಲಿ ಕೊರೊನಾ ಕುರಿತ ಚರ್ಚೆಯ ವೇಳೆ ಹಲವು ಟೆಕ್ ಕಂಪನಿಗಳಿರುವ ಮಾನ್ಯತಾ ಟೆಕ್ ಪಾರ್ಕಿಗೆ ರಜೆ ನೀಡುವ ಆಗ್ರಹ ಕೇಳಿ ಬಂತು.

    ಮಾನ್ಯತಾ ಟೆಕ್ ಪಾರ್ಕಿನಲ್ಲಿ ಒಂದು ಪಾಸಿಟಿವ್ ಕೇಸ್ ಬಂದಿದೆ. ಹೀಗಿದ್ದರೂ ಮಾನ್ಯತಾ ಟೆಕ್ ಪಾರ್ಕಿಗೆ ರಜೆ ಘೋಷಣೆ ಮಾಡಿಲ್ಲ. ಕೂಡಲೇ ಟೆಕ್ ಪಾರ್ಕಿಗೆ ರಜೆ ಘೋಷಿಸಿ ಎಂದು ರಮೇಶ್ ಗೌಡ ಒತ್ತಾಯ ಮಾಡಿದರು.

    ಮಾನ್ಯತಾ ಟೆಕ್ ಪಾರ್ಕಿನಲ್ಲಿ ಪಾಸಿಟಿವ್ ಆಗಿದೆ ಅನ್ನೋದು ಸುಳ್ಳು ಸುದ್ದಿ. ಭಯ ಹುಟ್ಟಿಸುವ ಕೆಲಸ ಮಾಡಬೇಡಿ. ವರದಿ ಬಂದ ನಂತರ ಬೇಕಾದರೆ ನೋಡೋಣ. ಮಾನ್ಯತಾ ಟೆಕ್ ಪಾರ್ಕಿನಲ್ಲಿ ಯಾವುದೇ ಕೇಸ್ ಪಾಸಿಟಿವ್ ಬಂದಿಲ್ಲ ಎಂದು ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದರು.

    ಕೊರೊನಾ ಬಗ್ಗೆ ಪರಿಷತ್‍ನಲ್ಲಿ ಮಾತನಾಡಿದ ಶ್ರೀರಾಮುಲು, ಇವತ್ತು ಒಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಇವತ್ತಿಗೆ 15 ಕೊರೊನಾ ಪ್ರಕರಣ ದೃಢಪಟ್ಟಿದೆ. ಕೊರೊನಾ ಸಂಬಂಧ ಈಗಾಗಲೇ ಟಾಸ್ಕ್ ಫೋರ್ಸ್ ರಚನೆ ಆಗಿದೆ. ಕೊರೊನಾ ವಿರುದ್ಧ ಕೆಲಸ ಮಾಡಲು ಎನ್‍ಸಿಸಿ, ಎನ್‍ಎಸ್‍ಎಸ್ ಸ್ವಯಂ ಸೇವಕರು ಸೇರಿದಂತೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್ ಸದಸ್ಯರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದೇವೆ. ಪಬ್‍ಗಳು ಬಂದ್ ಮಾಡದಿದ್ದರೆ ಅವರ ಪರವಾನಗಿ ರದ್ದು ಮಾಡುತ್ತೇವೆ ಎಂದು ತಿಳಿಸಿದರು.

  • ರಾಹುಲ್ ಸಂವಾದದ ವೇಳೆ ಮೋದಿ ಪರ ಘೋಷಣೆ ಕೂಗಿದ ಟೆಕ್ಕಿಗಳಿಗೆ ಲಾಠಿ ಏಟು

    ರಾಹುಲ್ ಸಂವಾದದ ವೇಳೆ ಮೋದಿ ಪರ ಘೋಷಣೆ ಕೂಗಿದ ಟೆಕ್ಕಿಗಳಿಗೆ ಲಾಠಿ ಏಟು

    ಬೆಂಗಳೂರು: ನಗರದ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನಡೆದ ರಾಹುಲ್ ಗಾಂಧಿಯ ಸಂವಾದ ಕಾರ್ಯಕ್ರಮದ ವೇಳೆ “ಮೋದಿ, ಮೋದಿ” ಎಂದು ಘೋಷಣೆ ಕೂಗಿದ ಟೆಕ್ಕಿಗಳಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ.

    ಸೋಮವಾರ ಸಂಜೆ ಮಾನ್ಯತಾ ಟೆಕ್ ಪಾರ್ಕಿ ನ ಆಂಪಿ ಥಿಯೇಟರ್ ನಲ್ಲಿ ನವೋದ್ಯಮಿಗಳ ಜೊತೆ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮ ಆಯೋಜನೆಗೊಂಡಿತ್ತು. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ  ಕುಳಿತಿದ್ದ ಟೆಕ್ಕಿಗಳು “ಮೋದಿ ಮೋದಿ” ಎಂದು ಕರೆದು ಆರಂಭದಲ್ಲೇ ಮುಖಭಂಗ ಮಾಡಿದ್ದಾರೆ.

    ಭಿತ್ತಿಪತ್ರಗಳನ್ನು ಹಿಡಿದು ಮೋದಿ ಪರ ಘೋಷಣೆ ಕೂಗಿದ ಟೆಕ್ಕಿಗಳು, “ಮತ್ತೊಮ್ಮೆ ಮೋದಿ”, “ಈ ಸಲ 400 ಸೀಟುಗಳು ಬಿಜೆಪಿಗೆ”, “ಸಾಫ್ ನಿಯತ್ ಸಬ್ ಕಾ ವಿಕಾಸ್” ಎಂದು ಬರೆದಿರುವ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿದರು.

    ಮೋದಿ ಪರ ಘೋಷಣೆ ಕೂಗುತ್ತಿದ್ದಂತೆ ಪೊಲೀಸರು ಟೆಕ್ಕಿಗಳನ್ನು ಚದುರಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಮೋದಿ ಪರ ಘೋಷಣೆ ಕೂಗಿದ ಟೆಕ್ಕಿಗಳ ಮೇಲೆ ಲಾಠಿ ಬೀಸಿದ್ದಾರೆ.

  • ವೈಟ್ ಟ್ಯಾಪಿಂಗ್‍ನಿಂದ ಭಾರೀ ಟ್ರಾಫಿಕ್ ಜಾಮ್!

    ವೈಟ್ ಟ್ಯಾಪಿಂಗ್‍ನಿಂದ ಭಾರೀ ಟ್ರಾಫಿಕ್ ಜಾಮ್!

    -ಒಂದು ಕಿ.ಮೀ. ದಾಟೋದಕ್ಕೆ ಗಂಟೆಗಟ್ಟಲೇ ಕಾಯಲೇಬೇಕು

    ಬೆಂಗಳೂರು: ನಮ್ಮ ಸಿಲಿಕಾನ್ ಸಿಟಿಯಲ್ಲಿ ಒಂದು ರಸ್ತೆ ದಾಟಬೇಕಾದ್ರೆ ಯುದ್ಧ ಗೆದ್ದಂತೆ ಆಗತ್ತದೆ. ಸಿಗ್ನಲ್ ಒಂದು ಕಡೆಯಾದ್ರೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರು ಮತ್ತೊಂದು ಕಡೆ ಇರುತ್ತಾರೆ. ಐಟಿ-ಬಿಟಿ ಇರೋ ಕಡೆ ಹೋದ್ರೆ ಕಥೆ ಕೇಳೋದೇ ಬೇಡ. ಹದ್ದಿನ ಕಣ್ಣಿಟ್ಟುಕೊಂಡೇ ರಸ್ತೆ ದಾಟಬೇಕು.

    ಇದೆಲ್ಲದರ ನಡುವೆ ಬಿಬಿಎಂಪಿ ಬೆಂಗಳೂರಿನ ರಸ್ತೆಗಳನ್ನ ಹೈಟೆಕ್ ಮಾಡೋಕೆ ಹೊರಟಿರೋದು ಗೊತ್ತೆ ಇದೆ. ಕಳೆದ ಎರಡು ತಿಂಗಳಿಂದ ಹೆಬ್ಬಾಳದಿಂದ ಬಾಣಸವಾಡಿವರೆಗೆ ವೈಟ್ ಟ್ಯಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ನಾಗವಾರದಲ್ಲಿರೋ ಮಾನ್ಯತಾ ಟೆಕ್ ಪಾರ್ಕ್‍ಗೆ ಪ್ರತಿನಿತ್ಯ ಲಕ್ಷಕ್ಕೂ ಹೆಚ್ಚು ವಾಹನಗಳು ಬರುತ್ತವೆ. ಆದ್ರೆ ಇಲ್ಲಿ ಇದೀಗ ವೈಟ್ ಟಾಪಿಂಗ್ ಮಾಡುತ್ತಿರೋದ್ರಿಂದ ದಾಟೋದಕ್ಕೇ ಸರ್ಕಸ್ಸೇ ಮಾಡಬೇಕಾಗಿದೆ.

    ಹೀಗಾಗಿ ಇದೀಗ ಇಲ್ಲಿ ವೈಟ್ ಟಾಪಿಂಗ್ ಬೇಕಿತ್ತಾ ಅಂತಾ ವಾಹನ ಸವಾರರು ಪ್ರಶ್ನಿಸುತ್ತಿದ್ದಾರೆ. ಕಾಮಗಾರಿ ಆರಂಭವಾಗುವ ಮೊದಲೇ ಬೇರೆ ಮಾರ್ಗವನ್ನ ಮಾಡಿದ್ರೆ ಚೆನ್ನಾಗಿ ಇರುತ್ತಿತ್ತು. ಪ್ರತ್ಯೇಕ ಲೈನ್ ಮಾಡಿ ಟ್ರಾಫಿಕ್ ಕಂಟ್ರೋಲ್ ಮಾಡುವ ಹಲವು ಅವಕಾಶಗಳಿತ್ತು. ಒಂದು ವೇಳೆ ಅರ್ಜೆಂಟ್ ಅಂತಾ ಏನಾದರೂ ಬಂದ್ರೇ ಅಷ್ಟೇ ಮುಗೀತು ನಮ್ಮ ಕತೆ ಅಂತ ವಾಹನ ಸವಾರರು ಅಸಮಾಧಾನ ಹೊರ ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಐಟಿ ಕಂಪೆನಿಗಳಿಗೆ ಬೀಗ ಹಾಕುವಂತೆ ಆಗ್ರಹ, ಮಾನ್ಯತಾ ಟೆಕ್ ಪಾರ್ಕ್ ಬಳಿ ಕರವೇ ಕಾರ್ಯಕರ್ತರ ಪ್ರತಿಭಟನೆ

    ಐಟಿ ಕಂಪೆನಿಗಳಿಗೆ ಬೀಗ ಹಾಕುವಂತೆ ಆಗ್ರಹ, ಮಾನ್ಯತಾ ಟೆಕ್ ಪಾರ್ಕ್ ಬಳಿ ಕರವೇ ಕಾರ್ಯಕರ್ತರ ಪ್ರತಿಭಟನೆ

    ಬೆಂಗಳೂರು: ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಬಂದ್ ಗೆ ಬೆಂಬಲ ನೀಡದ ಐಟಿ ಕಂಪನಿಗಳಿಗೆ ಬೀಗ ಹಾಕುವ ಎಚ್ಚರಿಕೆ ಹಿನ್ನಲೆಯಲ್ಲಿ ಮಾನ್ಯತಾ ಟೆಕ್ ಪಾರ್ಕ್‍ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಮಾನ್ಯತಾ ಟೆಕ್ ಪಾರ್ಕ್ ಬಳಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಅಂಗಡಿ ಮುಚ್ಚಿಸಲು ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಒಳಗೆ ಐಟಿ ಉದ್ಯೋಗಿಗಳು ಹಾಗೂ ವಾಹನಗಳನ್ನು ಬಿಡದೆ ರಸ್ತೆಯಲ್ಲಿಯೇ ತಡೆದಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿ, ರಸ್ತೆಯಲ್ಲೇ ಧರಣಿ ನಡೆಸುತ್ತಿದ್ದಾರೆ.

    ಐಟಿ ಕಂಪನಿ ಬಂದ್ ಮಾಡೋದಕ್ಕೆ ಹೇಳಿ ಎಂದು ಕರವೇ ಆಗ್ರಹಿಸಿದ್ದಾರೆ. ಆದ್ರೆ ಐಟಿ ಕಂಪನಿಯವರು ಬೇರೆ ಕೆಲಸದಲ್ಲಿ ನಿರತರಾಗಿದ್ದಾರೆ, ಬಂದ್ ಮಾಡಿದರೆ ಅರೆಸ್ಟ್ ಮಾಡುತ್ತೀವಿ ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಪ್ರವೀಶ್ ಶೆಟ್ಟಿ ಹಾಗೂ ಪೊಲೀಸರ ಮಧ್ಯೆ ಗಲಾಟೆ ನಡೆದಿದೆ. ಅದ್ಹೇಗೆ ಅರೆಸ್ಟ್ ಮಾಡ್ತೀರಾ? ನಾವೇನ್ ಕಲ್ಲು ಹೊಡೆದಿದ್ವಾ, ನೀವೆನೂ ಹೇಳಿದ ಹಾಗೆ ಮಾಡೋದಕ್ಕೆ ಆಗಲ್ಲ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.

    ಐಟಿ ಕಂಪನಿ ವಿರುದ್ಧ ಪ್ರವೀಣ್ ಶೆಟ್ಟಿ ವಾಗ್ಧಾಳಿ ನಡೆಸಿ ಇಲ್ಲಿನ ನೀರು, ಜಮೀನು, ಕರೆಂಟು ಎಲ್ಲವೂ ಬೇಕು. ಆದರೆ ಐಟಿಯವರು ನಮ್ಮ ಹೋರಾಟಕ್ಕೆ ಬೆಂಬಲ ಮಾತ್ರ ಕೊಡಲ್ಲ. ಬಾಗಿಲು ಮುಚ್ಚಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಬಂದ್ ಗೆ ಬೆಂಬಲಿಸದೆ ಇದ್ದರೆ ಮುಂದಿನ ಪರಿಸ್ಥಿತಿ ಗೆ ಅವರೇ ಹೊಣೆ ಎಂದು ಹೇಳಿದ್ದಾರೆ.

    ಇದಕ್ಕೆ ಮಾನ್ಯತಾ ಟೆಕ್ ಪಾರ್ಕ್ ಮ್ಯಾನೇಜರ್ ಪ್ರತಿಕ್ರಿಯಿಸಿ, ಐಟಿ ಕಂಪನಿ ಕ್ಲೋಸ್ ಇದೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ನೀರಿನ, ನಾಡಿನ ಸಮಸ್ಯೆ ಬಂದಾಗ ಐಟಿಬಿಟಿ ಬೆಂಬಲವಿದೆ ಎಂದು ಹೇಳಿದ್ದಾರೆ.