Tag: Manvendra Singh

  • ಭೀಕರ ರಸ್ತೆ ಅಪಘಾತ- ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಸೊಸೆ ಸಾವು

    ಭೀಕರ ರಸ್ತೆ ಅಪಘಾತ- ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಸೊಸೆ ಸಾವು

    – ಜಸ್ವಂತ್‌ ಪುತ್ರ, ಮೊಮ್ಮಗನಿಗೆ ಗಾಯ

    ಜೈಪುರ: ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ (Former Foreign Minister Jaswant Singh) ಅವರ ಸೊಸೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ರಾಜಸ್ಥಾನದ ಅಲ್ವಾರ್‌ನ (Alwar Rajasthan) ನೌಗಾಂವ್ ಬಳಿಯ ಖುಷ್ಪುರಿ ಗ್ರಾಮದ ಬಳಿ ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಇಂದು ಸಂಜೆ ಈ ರಸ್ತೆ ಅಪಘಾತ ಸಂಭವಿಸಿದೆ. ಮನ್ವೇಂದ್ರ ಅವರು ತಮ್ಮ ಕುಟುಂಬದೊಂದಿಗೆ ದೆಹಲಿಯಿಂದ ಜೈಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಮೋರಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ ಎನ್ನಲಾಗಿದೆ.

    ಘಟನೆಯಲ್ಲಿ ಪತ್ನಿ ಚಿತ್ರಾ ಸಿಂಗ್ (Chitra Singh)  ಸ್ಥಳದಲ್ಲೇ ಸಾವನ್ನಪ್ಪಿದರೆ, ಕೈ ನಾಯಕ ಮನ್ವೇಂದ್ರ ಸಿಂಗ್ (Congress leader Manvendra Singh) ಹಾಗೂ ಅವರ ಮಗ ಹಮೀರ್‌ ಸಿಂಗ್ ಗಾಯಗೊಂಡಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಾಯಾಳುಗಳನ್ನು ಅಲ್ವಾರ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕಾಲೇಜಿಗೆ ಹೋಗುವಂತೆ ಬೈದಿದ್ದಕ್ಕೆ ಬಾವಿಗೆ ಜಿಗಿದ ತಂಗಿ- ರಕ್ಷಿಸಲು ಹೋದ ಅಣ್ಣನೂ ಸಾವು

    ತಂದೆ-ಮಗ ಇಬ್ಬರಿಗೂ ಪಕ್ಕೆಲುಬುಗಳಿಗೆ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ಗಾಯಾಳುಗಳ ಸ್ಥಿತಿ ಅಪಾಯದಿಂದ ಪಾರಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಅಲ್ವಾರ್‌ನ ಸೋಲಂಕಿ ಆಸ್ಪತ್ರೆಯ ವೈದ್ಯ ವೈದ್ಯ ದೇವವ್ರತ್ ಶರ್ಮಾ ಮಾತನಾಡಿ, ಮಾಜಿ ಸಂಸದ ಮನ್ವೇಂದ್ರ ಸಿಂಗ್ ಅವರ ಪಕ್ಕೆಲುಬಿಗೆ ಗಾಯವಾಗಿದೆ. ಅದರಲ್ಲಿ ಮೂಳೆ ಮುರಿತದಿಂದಾಗಿ ಅವರ ಶ್ವಾಸಕೋಶಕ್ಕೂ ಹಾನಿಯಾಗಿದೆ. ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

  • ಮೋದಿ, ಶಾ ಸೇರಿಕೊಂಡು ಬಿಜೆಪಿ ಸಂಪ್ರದಾಯ, ಮೌಲ್ಯವನ್ನು ಬದಲಿಸಿದ್ದಾರೆ: ಜಸ್ವಂತ್ ಪುತ್ರ ಕಿಡಿ

    ಮೋದಿ, ಶಾ ಸೇರಿಕೊಂಡು ಬಿಜೆಪಿ ಸಂಪ್ರದಾಯ, ಮೌಲ್ಯವನ್ನು ಬದಲಿಸಿದ್ದಾರೆ: ಜಸ್ವಂತ್ ಪುತ್ರ ಕಿಡಿ

    ಜೈಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿಕೊಂಡು ಬಿಜೆಪಿ ಪಕ್ಷದ ಸಂಪ್ರದಾಯ ಮತ್ತು ಮೌಲ್ಯಗಳನ್ನು ಬದಲಿಸಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರ ಪುತ್ರ ಮನ್ವೇಂದ್ರ ಸಿಂಗ್ ಕಿಡಿಕಾರಿದ್ದಾರೆ.

    ಕಳೆದ ವರ್ಷ ಮನ್ವೇಂದ್ರ ಸಿಂಗ್ ಅವರು ಕಾಂಗ್ರೆಸ್ ಸೇರಿದ್ದು, ಸದ್ಯ ರಾಜಸ್ಥಾನದ ಬರ್ಮರ್ ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು ಪುಲ್ವಾಮಾ ಉಗ್ರರ ದಾಳಿ, ಬಾಲಾಕೋಟ್‍ನಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯನ್ನು ಇಟ್ಟುಕೊಂಡು ಮತ ಕೇಳುತ್ತಿರುವುದು ಬಿಜೆಪಿಯ ತತ್ವಗಳಿಗೆ ವಿರುದ್ಧವಾಗಿದೆ. ಮೋದಿ ಹಾಗೂ ಅಮಿತ್ ಶಾ ಅವರು ತಮ್ಮ ಆಡಳಿತದ ಅವಧಿಯಲ್ಲಿ ಬಿಜೆಪಿ ಪಕ್ಷವನ್ನು ಬದಲಿಸಿದ್ದಾರೆ. ಈಗ ಸಂಸ್ಕೃತಿ, ನಂಬಿಕೆ, ಯೋಚನೆ, ಆಚರಣೆ, ಪ್ರಮುಖವಾಗಿ ಮಾನವ ಸಂಬಂಧಗಳು ಹೀಗೆ ಎಲ್ಲ ವಿಚಾರಗಳಲ್ಲೂ ಬಿಜೆಪಿ ಬದಲಾಗಿದೆ ಎಂದು ಆರೋಪಿಸಿದರು.

    ಜಸ್ವಂತ್ ಸಿಂಗ್ ಸೇರಿದಂತೆ 75 ವರ್ಷ ಮೀರಿರುವ ಕೆಲವು ಹಿರಿಯ ನಾಯಕರಿಗೆ ಬಿಜೆಪಿ ಲೋಕಸಮರಕ್ಕೆ ಟಿಕೆಟ್ ನೀಡಲು ನಿರಾಕರಿಸಿದೆ. ಬಿಜೆಪಿಯ ಮೂಲ ತತ್ವವನ್ನೇ ಈಗಿರುವ ನಾಯಕರು ಬದಲಿಸಿದ್ದಾರೆ. ದ್ವೇಷವನ್ನು ಬಿತ್ತುತ್ತಿರುವವರ ವಿರುದ್ಧ ನಾನು ನಿಲ್ಲುತ್ತೇನೆ, ಹೋರಾಟ ಮಾಡುತ್ತೇನೆ ಎಂದು ಮನ್ವೇಂದ್ರ ಸಿಂಗ್ ಹೇಳಿದರು.

    ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆಯಲ್ಲಿ ಗೆಲುವು ಸೋಲು ನಿರ್ಧಾರವಾಗುತ್ತದೆ ಎನ್ನುವುದನ್ನು ನಾನು ನಂಬಲ್ಲ. ರಾಜಕೀಯದಲ್ಲಿ ಪದೇ ಪದೇ ಅಲೆ ಏಳಲ್ಲ. ಹಾಗೆಯೇ ಯಾವಾಗಲೂ ಒಂದೇ ಸೂತ್ರ ಯಶಸ್ಸು ತಂದು ಕೊಡಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಬಿಜೆಪಿ ತೊರೆದ ನಾಯಕರೇ ಕಾಂಗ್ರೆಸ್‍ಗೆ ಅಸ್ತ್ರವಾದ್ರು

    ಬಿಜೆಪಿ ತೊರೆದ ನಾಯಕರೇ ಕಾಂಗ್ರೆಸ್‍ಗೆ ಅಸ್ತ್ರವಾದ್ರು

    -ರಾಜಸ್ಥಾನ ಸಿಎಂ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಜಸ್ವಂತ್ ಸಿಂಗ್ ಪುತ್ರ

    ಜೈಪುರ್: ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೇ ಅವರನ್ನು ಸೋಲಿಸಲು ಕಾಂಗ್ರೆಸ್ ಪ್ರಬಲ ಅಸ್ತ್ರ ಪ್ರಯೋಗ ಮಾಡಿದ್ದು, ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಅವರ ಪುತ್ರ ಮಾನವೇಂದ್ರ ಸಿಂಗ್ ಅವರನ್ನು ಕಣಕ್ಕಿಳಿಸಿದೆ.

    ನಾಮಪತ್ರ ಸಲ್ಲಿಕೆಗೆ ನವೆಂಬರ್ 19 ಕೊನೆಯ ದಿನವಾಗಿದ್ದು, ಇಂದು ಕಾಂಗ್ರೆಸ್ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಮೂಲಕ ವಸುಂದರಾ ರಾಜೇ ಅವರಿಗೆ ಶಾಕ್ ಕೊಟ್ಟಿದೆ. ಮುಖ್ಯಮಂತ್ರಿ ವಸುಂದರಾ ರಾಜೇ ಸ್ಪರ್ಧಿಸಿರುವ ಜಲ್ವಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾನವೇಂದ್ರ ಅವರನ್ನು ಕಣಕ್ಕೆ ಇಳಿಸಲಾಗಿದೆ. ಈ ಮೂಲಕ ರಾಜಸ್ಥಾನದ ಬಿಜೆಪಿಯ ಇಬ್ಬರು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡ ಕಾಂಗ್ರೆಸ್ ನಾಯಕರು ಭಾರೀ ರಣತಂತ್ರ ರೂಪಿಸುತ್ತಿದ್ದಾರೆ.

    ರಜಪೂತರ ಮತಗಳನ್ನು ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. 2003ರಿಂದಲೂ ವಸುಂಧರಾ ರಾಜೇ ಜಲ್ವಾರ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಹೀಗಾಗಿ ಇಂದು ಅವರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಈ ರಣತಂತ್ರ ಹೂಡಿದೆ ಎನ್ನಲಾಗಿದೆ.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದ ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರ ಪುತ್ರ ಮಾನವೇಂದ್ರ ಕಾಂಗ್ರೆಸ್‍ಗೆ ಸೇರಿದ್ದು, ಕೈ ಪಾಳಯಕ್ಕೆ ಬಲ ಬಂದಂತಾಗಿದೆ. ಮಾನವೇಂದ್ರ ಸಿಂಗ್ ಅಕ್ಟೋಬರ್ 17ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಈ ಬೆನ್ನಲ್ಲೇ ಮಾಜಿ ಪೊಲೀಸ್ ಅಧಿಕಾರಿ ಹಾಗೂ ಬಿಜೆಪಿ ಸಂಸದ ಹರೀಶ್ ಮೀನಾ ಅವರು ನವೆಂಬರ್ 14ರಂದು ಕಾಂಗ್ರೆಸ್ ಮನೆ ಪ್ರವೇಶ ಮಾಡಿದ್ದರು. ಈ ಭಾರೀ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಲಿವೆ.

    ವಸುಂದರಾ ರಾಜೇ ಪ್ರತಿಕ್ರಿಯೆ:
    ನನ್ನ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಅವರ ಪುತ್ರ ಮಾನವೇಂದ್ರ ಸಿಂಗ್ ಅವರನ್ನು ನನ್ನ ವಿರುದ್ಧ ಕಣಕ್ಕಿಳಿಸಿದ್ದಾರೆ ಎಂದು ರಾಜಸ್ಥಾನ ಸಿಎಂ ವಸುಂಧರಾ ರಾಜೇ ಕಿಡಿಕಾರಿದ್ದಾರೆ.

    ಜಲ್ವಾರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ, ಕಾಂಗ್ರೆಸ್‍ನಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆಯಿದೆ. ಇದರಿಂದಾಗಿ ಇಲ್ಲಿಂದ ಹೋದವರಿಗೆ ಟಿಕೆಟ್ ನೀಡಿದ್ದಾರೆ. ನಾವು ಅವರನ್ನು ಇಲ್ಲಿಂದಲೂ ಹೊರ ಹಾಕುತ್ತೇವೆ ಎಂದು ಮಾನವೇಂದ್ರ ಸಿಂಗ್ ವಿರುದ್ಧ ಹರಿಹಾಯ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews