Tag: Manusmriti

  • ನೀವು ಮನುಸ್ಮೃತಿ ಪರವೋ ಸಂವಿಧಾನದ ಪರವೋ? 50% ಮೀಸಲಾತಿ ಗೋಡೆಯನ್ನು ತೆಗೆಯುತ್ತೇವೆ: ರಾಹುಲ್‌ ಗಾಂಧಿ

    ನೀವು ಮನುಸ್ಮೃತಿ ಪರವೋ ಸಂವಿಧಾನದ ಪರವೋ? 50% ಮೀಸಲಾತಿ ಗೋಡೆಯನ್ನು ತೆಗೆಯುತ್ತೇವೆ: ರಾಹುಲ್‌ ಗಾಂಧಿ

    – ಸಂವಿಧಾನ ಚರ್ಚೆಯಲ್ಲಿ ಬಿಜೆಪಿಗೆ ಸವಾಲು
    – ಸಂವಿಧಾನದ ಪುಸ್ತಕದ ಜೊತೆ ಮನುಸ್ಮೃತಿಯನ್ನು ತಂದ ರಾಹುಲ್‌
    – ಬಿಜೆಪಿ ದೇಶದ ಹೆಬ್ಬೆರಳನ್ನು ಕತ್ತರಿಸಿದೆ

    ನವದೆಹಲಿ: ಭಾರತದ ಆಡಳಿತ ವ್ಯವಸ್ಥೆ ಮನುಸ್ಮೃತಿಯನ್ನು (Manusmriti) ಪಾಲಿಸಬೇಕು ಎಂದು ವೀರ್ ಸಾವರ್ಕರ್‌ (Savarkar) ಹೇಳಿದ್ದರು. ಈ‌ ವೀರ್ ಸಾವರ್ಕರ್‌ ಅನುಸರಿಸುವ ಬಿಜೆಪಿ (BJP) ನಾಯಕರು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಸಂವಿಧಾನದ ಪರವೋ, ಸಾರ್ವಕರ್ ಪಾಲಿಸುವ ಮನುಸ್ಮೃತಿ ಪರವೋ ಎಂಬುದನ್ನು  ಸ್ಪಷ್ಟಪಡಿಸಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಆಗ್ರಹಿಸಿದ್ದಾರೆ.

    ಸಂವಿಧಾನ (Constitution) ಜಾರಿಗೆ ಬಂದು 75 ವರ್ಷವಾದ ಹಿನ್ನಲೆಯಲ್ಲಿ ಲೋಕಸಭೆಯಲ್ಲಿ ನಡೆಯುತ್ತಿರುವ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಹಿಂದೆ ಭಾರತ ಹೇಗೆ ನಡೆಯುತ್ತಿತ್ತು? ಈಗಲೂ ಹಾಗೆಯೇ ನಡೆಸಲು ಬಿಜೆಪಿ ನಾಯಕರು ಬಯಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ಕೀಳುಜಾತಿಯವನು ಎನ್ನುವ ಕಾರಣಕ್ಕೆ ವಿದ್ಯೆಯನ್ನೇ ಕಲಿಸದೇ ದ್ರೋಣಚಾರ್ಯರು ಗುರುದಕ್ಷಣೆಯಾಗಿ ಏಕಲವ್ಯನಿಂದ ಹೆಬ್ಬೆರಳು ಪಡೆದರು. ಹೆಬ್ಬೆರಳು ಕೈಗೆ ಮುಖ್ಯವಾಗಿದೆ, ದ್ರೋಣಾಚಾರ್ಯರು ಹೇಗೆ ಏಕಲವ್ಯನ ಹೆಬ್ಬೆರಳು ಕತ್ತರಿಸಿದರೋ ಹಾಗೇ ನೀವೂ ದೇಶದ ಹೆಬ್ಬೆರಳು ಕತ್ತರಿಸಿದ್ದೀರಿ ಎಂದು ಆರೋಪಿದರು.

    ಅಗ್ನಿವೀರ್, ಪೇಪರ್ ಲೀಕ್ ಜಾರಿ ಮಾಡುವ ಮೂಲಕ ಭಾರತದ ಯುವಕರ ಹೆಬ್ಬೆರಳು ಕತ್ತರಿಸಿದ್ದೀರಿ. ಅದಾನಿ ಅವರಿಗೆ ಧಾರವಿ ಕೊಟ್ಟು ಅಲ್ಲಿ ಸಣ್ಣ ಪುಟ್ಟ ಉದ್ಯಮ ನಡೆಸುತ್ತಿದ್ದ ಜನರು ಹೆಬ್ಬೆರಳು ಕತ್ತರಿಸಿದ್ದೀರಿ. ಬೆಂಬಲ ಬೆಲೆ ಕೇಳುವ ರೈತರ ಮೇಲೆ ಟಿಯರ್ ಗ್ಯಾಸ್ ಬಳಕೆ ಮಾಡುವ ಮೂಲಕ ರೈತರ ಬೆರಳು ಕತ್ತರಿಸಲಾಗಿದೆ. ಸಂವಿಧಾನದಲ್ಲಿ ಜನರ ಬೆರಳು ಕತ್ತರಿಸಿ ಅವರ ಹಕ್ಕುಗಳನ್ನು ಕಿತ್ತುಕೊಳ್ಳಿ ಎಂದು ಹೇಳಿಲ್ಲ ಆದರೆ ನೀವು ಅವಕಾಶಗಳನ್ನು ಕಿತ್ತುಕೊಂಡಿದ್ದೀರಿ ಎಂದು ದೂರಿದರು.

    ಹತ್ರಾಸ್‌ನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಇತ್ತೀಚೆಗೆ ನಾನು ಆ ಯುವತಿಯ ಕುಟುಂಬವನ್ನು ಭೇಟಿ ಮಾಡಿದೆ. ಅಲ್ಲಿ ಗ್ಯಾಂಗ್ ರೇಪ್ ಮಾಡಿದವರು ಹೊರಗೆ ಸುತ್ತಾಡುತ್ತಿದ್ದಾರೆ. ಯುವತಿಯ ಕುಟುಂಬಸ್ಥರು ಮನೆಯಿಂದ ಹೊರಗೆ ಬಾರದಂತೆ ಮಾಡಲಾಗಿದೆ. ಯುವತಿಯ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಲಿಲ್ಲ. ಅತ್ಯಚಾರಿಗಳನ್ನು ಹೊರಗೆ ಸುತ್ತಲು ಬಿಡಿ ಎಂದು ಸಂವಿಧಾನ ಅಲ್ಲ ಮನುಸ್ಮೃತಿಯಲ್ಲಿ ಬರೆದಿದೆ. ಉತ್ತರ ಪ್ರದೇಶದಲ್ಲಿ ಮನುಸ್ಮೃತಿ ಜಾರಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

    ಜಾತಿ, ಧರ್ಮ, ಸ್ಥಳ ಹೆಸರಿನ ಮೇಲೆ ತಾರತಮ್ಯ ಮಾಡಬಾರದು ಎಂದು ಸಂವಿಧಾನ ಹೇಳಿದೆ. ಆದರೆ ನೀವು ಹೋದ ಕಡೆ ಧರ್ಮಗಳ ನಡುವೆ ಜಗಳ ಹಚ್ಚುತ್ತಿದ್ದೀರಿ. ದ್ವೇಷ ಬೆಳೆಸುತ್ತಿದ್ದೀರಿ, ದಲಿತ ಕುಟುಂಬಗಳನ್ನು ಮನೆಯಲ್ಲಿ ಕೂಡಿ ಹಾಕಿದ್ದೀರಿ. ಇದು ಯಾವ ಸಂವಿಧಾನದಲ್ಲಿ ಬರೆದಿದೆ? ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆ ಇಲ್ಲ. ಇದಕ್ಕಾಗಿ ನಾವು ಜಾತಿ ಜನಗಣತಿ ಮಾಡಲು ನಿರ್ಧರಿಸಿದ್ದೇವೆ. ಬಳಿಕ ಭಾರತದಲ್ಲಿ ಹೊಸ ರೀತಿಯ ಅಭಿವೃದ್ಧಿಯಾಗಲಿದೆ ಹೊಸ ರೀತಿಯ ರಾಜಕೀಯ ಶುರುವಾಗಲಿದೆ 50% ಮೀಸಲಾತಿ ಗೋಡೆಯನ್ನು ಒಡೆದು ಹಾಕಲಿದ್ದೇವೆ ನೀವು ಏನ್ ಮಾಡಬೇಕು ಮಾಡಿ ಎಂದು ಸವಾಲು ಹಾಕಿದರು.

  • ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ: ನಟ ಚೇತನ್

    ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ: ನಟ ಚೇತನ್

    -ಇತಿಹಾಸ ಹೊಂದಿರುವ ಹೆಮ್ಮೆಯ ಕನ್ನಡಿಗ ಟಿಪ್ಪು

    ಕೋಲಾರ: ಸಮಾಜದಲ್ಲಿ ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ ಎಂದು ಜಿಲ್ಲೆಯಲ್ಲಿ ನಡೆದ ಅಂಬೇಡ್ಕರ್ ಸೇವಾ ಸಮಿತಿ ಕಾರ್ಯಕ್ರಮದಲ್ಲಿ ನಟ ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ.

    ಅಂಬೇಡ್ಕರ್ ಸೇವಾ ಸಮಿತಿ 2ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಒಳತಿಗಾಗಿ ಯಾರು ಅನ್ಯಾಯವನ್ನು ಪ್ರಶ್ನಿಸುತ್ತಾರೋ ಅವರಿಗೆ ದೇಶ ದ್ರೋಹದ ಪಟ್ಟ ಕಟ್ಟುತ್ತಾರೆ. ಅನ್ಯಾಯದ ವಿರುದ್ಧ ಹೋರಾಟ ಮಾಡಿದವರನ್ನ ಕೊಲ್ಲುವುದು, ಬಂಧಿಸುವ ಸ್ಥಿತಿ ಇದೆ. ಸಾಹಿತಿ ಎಂ.ಎಂ ಕಲಬುರ್ಗಿ ಎಂತಹ ವ್ಯಕ್ತಿಗಳು ಅನ್ಯಾಯದ ವಿರುದ್ಧ ಹೋದಾಗ ಧಾರ್ಮಿಕ ವಾದಿಗಳು ಹತ್ಯೆಗೈದಿದ್ದಾರೆ. ಆದರೆ ಅನ್ಯಾಯದ ವಿರುದ್ಧ ಹೋರಾಡಲು ಅಂಬೇಡ್ಕರ್ ಸಂವಿಧಾನ ರಚಿಸಿದರು. ಹೀಗಾಗಿ ಬುದ್ಧ ಹಾಗೂ ಅಂಬೇಡ್ಕರ್ ಅವರ ಸಿದ್ಧಾಂತಗಳು ನಮ್ಮ ದೇಶದ ಹೆಮ್ಮೆ ಎಂದು ಹೇಳಿದರು.

    ಸಂವಿಧಾನ ವಿರೋಧಿಗಳು ಧರ್ಮಗಳನ್ನ ಒಡೆಯುತ್ತಿದ್ದಾರೆ. 300 ವರ್ಷಗಳ ಇತಿಹಾಸ ಹೊಂದಿರುವ ಹೆಮ್ಮೆಯ ಕನ್ನಡಿಗ ಟಿಪ್ಪು ಸುಲ್ತಾನ. ಅಂತಹ ಟಿಪ್ಪು ದೇಶ ರಕ್ಷಣೆ ಮಾಡಿ, ಮಠ ಮಾನ್ಯಗಳನ್ನ ರಕ್ಷಣೆ ಮಾಡಿದ್ದಾರೆ. ಆದ್ರೆ ಇಂದು ಅವರನ್ನು ದೇಶದ್ರೋಹಿಯಂತೆ ಬಿಂಬಿಸುತ್ತಿದ್ದಾರೆ. ಟಿಪ್ಪುವಿಗೆ ದೇಶದ್ರೋಹದ ಪಟ್ಟ ಕಟ್ಟುವವರು ನಿಜಕ್ಕೂ ಇತಿಹಾಸವನ್ನೂ ಅರಿತಿಲ್ಲ ಎಂದು ಕಿಡಿಕಾರಿದರು.

    ಹಾಗೆಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಹಿತಿ ಭಗವಾನ್ ಅವರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಸಮಾನತೆ ಇದೆ, ಆದ್ರೆ ಮನುಸ್ಮೃತಿಯಲ್ಲಿ ಸಮಾನತೆ ಇಲ್ಲ. ಮನುಸ್ಮೃತಿ ಇರುವುದು ಬ್ರಾಹ್ಮಣರು ಶೂದ್ರರ ಮೇಲೆ ದಾಸ್ಯ ಹೇರಲು ಮಾತ್ರ ಇದೆ. ಆದರೆ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಬದಿಗೆ ಸರಿಸಿ ಸಂವಿಧಾನವನ್ನು ತಂದರು ಎಂದು ಸಾಹಿತಿ ಭಗವಾನ್ ತಿಳಿಸಿದರು.

    ಸಂವಿಧಾನವನ್ನ ಯಾರೂ ಓದಿ ಅರ್ಥ ಮಾಡಿಕೊಂಡಿಲ್ಲ, ಸಂವಿಧಾನದಲ್ಲಿ ಸಮಾನತೆ ಇದೆ ದಾಸ್ಯ ಇಲ್ಲ. ಬ್ರಾಹ್ಮಣರು ಬಿಟ್ಟು ಉಳಿದವರೆಲ್ಲಾ ಗುಲಾಮರು ಎಂಬುದು ಮನುಸ್ಮೃತಿ. ಆದ್ದರಿಂದ ಸಂವಿಧಾನವನ್ನ ತೆಗೆಯಲು ಹೊರಟಿದ್ದಾರೆ ಎಂದರು. ಬಳಿಕ ಬ್ರಿಟಿಷರು ಬಂದ ಮೇಲೆ ನಮಗೆಲ್ಲಾ ಶಿಕ್ಷಣ ಸಿಕ್ಕಿತು. ಅಲ್ಲಿಯವರೆಗೂ ಎಲ್ಲರೂ ಹೆಬ್ಬಟ್ಟುಗಳೆ ಆಗಿದ್ದರು. ಕೆಲಸಕ್ಕೆ ಬಾರದ ತುಳಿಯುವ, ಕಡಿಯುವ ಇಲ್ಲಸಲ್ಲದ ದೇವರುಗಳನ್ನ ತಂದು ನಮ್ಮ ಮೇಲೆ ಹೇರಿದ್ದಾರೆ. ಇದರಿಂದ ನಾವು ಹೊರಗೆ ಬರಬೇಕು, ಸಂವಿಧಾನವನ್ನು ಅಧ್ಯಯನ ಮಾಡಿ ಅರಿವು ಪಡೆಯಬೇಕು ಎಂದು ಕಿವಿ ಮಾತನ್ನು ಹೇಳಿದರು.