ಬೆಂಗಳೂರು: ವಿಶ್ವ ಸುಂದರಿ ಕಿರೀಟವನ್ನು ಪಡೆದ 21 ವರ್ಷದ ಮಾನುಷಿ ಚಿಲ್ಲರ್ ಗೂ ಬೆಂಗಳೂರಿಗೂ ಸಂಬಂಧವಿದೆ. ಮಾನುಷಿ ಅವರು ತಮ್ಮ ಬಾಲ್ಯದ 5 ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದಿರುವುದು ವಿಶೇಷ.
ಹೌದು. ಬಾಲ್ಯವನ್ನು ಕಳೆಯುವುದರ ಜೊತೆಗೆ ಅವರು ನೃತ್ಯ ಅಭ್ಯಾಸವನ್ನು ಆರಂಭಿಸಿದ್ದು ಬೆಂಗಳೂರಿನಲ್ಲೇ. ಎಳವೆಯಲ್ಲೇ ಪ್ರತಿಭಾವಂತರಾಗಿದ್ದ ಚಿಲ್ಲರ್ ಓದುವುದರಲ್ಲಿ ಟಾಪರ್ ಆಗಿದ್ದರು. 1997ರ ಮೇ 14 ರಂದು ಹರ್ಯಾಣದ ರೊಹ್ಟಕ್ ನಲ್ಲಿ ಜನಿಸಿದ್ದ ಮಾನುಷಿ 2 ವರ್ಷವಿದ್ದಾಗ ತಂದೆ ಮಿತ್ರ ಬಸು ಚಿಲ್ಲರ್ ಮತ್ತು ತಾಯಿ ನೀಲಮ್ ಚಿಲ್ಲರ್ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಲ್ಲಿದ್ದಾಗ ಮಾನುಷಿ ಕುಚುಪುಡಿ ಕಲಿಯೋಕೆ ಆರಂಭಿಸಿದ್ದರು.
ಮಾನುಷಿ ಈಗ ಸೋನೆಪತ್ ನಲ್ಲಿ ಬಿಪಿಎಸ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ಓದುತ್ತಿದ್ದು, ಅಲ್ಲಿನ ಪ್ರಾಧ್ಯಾಪಕಿ ಮತ್ತು ಸಂಬಂಧಿ ಆಗಿರುವ ಡಾ. ಉಷಾ ಚಿಲ್ಲರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಮಾನುಷಿ ಹರ್ಯಾಣದಲ್ಲಿ ಜನಿಸುವ ವೇಳೆ ತಂದೆ ಮಿತ್ರ ಚಿಲ್ಲರ್ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ(ಡಿಆರ್‍ಡಿಓ)ದಲ್ಲಿ ಹಿರಿಯ ವಿಜ್ಞಾನಿಯಾಗಿ ನೇಮಕಗೊಂಡಿದ್ದರು. ಮಾನುಷಿಗೆ 2 ವರ್ಷವಿದ್ದಾಗ ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಮಾನುಷಿ ಹಾಗೂ ಅವರ ಪೋಷಕರು 1999-2004 ಬೆಂಗಳೂರಿನಲ್ಲಿ ನೆಲೆಸಿದ್ದರು ಎಂದು ತಿಳಿಸಿದ್ದಾರೆ.

ಮಾನುಷಿ ಎಲ್.ಕೆ.ಜಿಯಿಂದ ಮೊದಲನೇ ತರಗತಿವರೆಗೂ ಬೆಂಗಳೂರಿನಲ್ಲಿಯೇ ಓದಿದ್ದರು. ನಂತರ ಹರ್ಯಾಣದಲ್ಲಿ ಓದನ್ನು ಮುಂದುವರಿಸುತ್ತಿದ್ದಾಳೆ. ಆಕೆ ಎಲ್ಲರ ಜೊತೆ ತುಂಬ ಸಲುಗೆಯಿಂದ ಹಾಗೂ ಹತ್ತಿರವಾಗಿದ್ದರು ಹಾಗೂ ತುಂಬಾ ಚೆನ್ನಾಗಿ ಓದುತ್ತಿದ್ದಳು. ಬೆಂಗಳೂರಿನಿಂದ ಬಂದ ಮೇಲೆ ಸೆಂಟ್. ಥಾಮಸ್ಸ್ ಶಾಲೆಗೆ ಸೇರಿದ್ದ ಆಕೆ ಅಲ್ಲೂ ಕೂಡ ಟಾಪರ್ ಆಗಿದ್ದಳು ಎಂದು ಹೊಗಳಿದರು.
ಶನಿವಾರ ವಿಶ್ವ ಸುಂದರಿ ಕಿರೀಟವನ್ನು ಪಡೆಯುತ್ತಿದ್ದಾಗ ಮಾನುಷಿ ಓದಿದ್ದ ಶಾಲೆಯಲ್ಲಿ ಶಾಲಾ ವಾಷಿಕೋತ್ಸವವನ್ನು ಆಚರಿಸುತ್ತಿದ್ದರು. ಶಾಲೆಯ ಮುಖ್ಯ ಶಿಕ್ಷಕಿಯಾದ ಅನುರಾಧ ಅಮ್ಸ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾನುಷಿ ಮೂರನೇ ತರಗತಿಗೆ ನಮ್ಮ ಶಾಲೆ ಸೇರಿದ್ದಳು. ಆಕೆ ಶಾಲೆಯಲ್ಲಿದ್ದಾಗ ಎಲ್ಲರಿಗೂ ಹತ್ತಿರವಾಗಿದ್ದರು. ಅವರಿಗೆ ಸಾಂಸ್ಕೃತಿಕ ನೃತ್ಯಗಳಲ್ಲಿ ಸಾಕಷ್ಟು ಆಸಕ್ತಿಯಿತ್ತು. ಈ ಶಾಲೆಗೆ ಸೇರುವ ಮುಂಚೆ ಬೆಂಗಳೂರಿನಲ್ಲಿ ಸಾಂಸ್ಕೃತಿಕ ನೃತ್ಯವನ್ನು ಅಭ್ಯಾಸ ಮಾಡಿದ್ದರು ಎಂದು ಅನುರಾಧ ಅವರು ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದ್ದಾರೆ.

ಚೀನಾದ ಸನ್ಯಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 108 ದೇಶಗಳ ಸುಂದರಿಯರನ್ನು ಹಿಂದಿಕ್ಕುವ ಮೂಲಕ ಮಾನುಷಿ 2017ರ ಮಿಸ್ ವಲ್ಡ್ ಆಗಿದ್ದಾರೆ. ಮಿಸ್ ಇಂಗ್ಲೆಂಡ್ ಸ್ಟೆಫನಿ ಹಿಲ್ ಮೊದಲ ರನ್ನರ್ ಅಪ್ ಆದರೆ, ಮೆಕ್ಸಿಕೋ ಸುಂದರಿ ಆಂಡ್ರೆಜಾ ಮೆಜಾ ಎರಡನೇ ರನ್ನರ್ ಅಪ್ ಸ್ಥಾನವನ್ನು ತಮ್ಮದಾಗಿಸಿಕೊಂಡರು.
ಟಾಪ್ 5 ಸ್ಥಾನಕ್ಕೆ ತಲುಪಿದಾಗ ಪ್ರಶ್ನೋತ್ತರ ಸುತ್ತಿನಲ್ಲಿ ಮಾನುಷಿ ಅವರಿಗೆ, ಅತಿ ಹೆಚ್ಚು ಸಂಬಳ ನೀಡುವ ಯಾವ ವೃತ್ತಿಗೆ ನೀವು ಅರ್ಹರು ಮತ್ತು ಯಾಕೆ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ವೇಳೆ ಸಂಬಳ ಯಾವುದೇ ವೃತ್ತಿಯ ಗೌರವವನ್ನು ನಿರ್ಧರಿಸುವುದಿಲ್ಲ. ತಾಯಿಯಾಗುವ ವೃತ್ತಿ ಮಹಿಳೆಯ ಜೀವನದಲ್ಲಿ ದೊರೆಯುವ ಅತ್ಯಂತ ಗೌರವಯುತವಾದ ಹುದ್ದೆಯಾಗಿದೆ. ಕೇವಲ ಹಣದಿಂದ ಮಾತ್ರ ಪ್ರೀತಿ ಮತ್ತು ಗೌರವ ಸಿಗುತ್ತದೆ ಎಂಬ ವಿಚಾರದಲ್ಲಿ ನನಗೆ ನಂಬಿಕೆಯಿಲ್ಲ. ನನ್ನ ತಾಯಿ ನನಗೆ ಜೀವನದ ಅತಿ ದೊಡ್ಡ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಹಾಗಾಗಿ ತಾಯಿಯಾಗುವ ವೃತ್ತಿ ಜಗತ್ತಿನಲ್ಲಿ ಅತ್ಯಂತ ಗೌರವಯುಕ್ತವಾದದ್ದು ಎಂದು ಮಾನುಷಿ ಭಾವನಾತ್ಮಕವಾಗಿ ಉತ್ತರಿಸಿದ್ದರು.
https://www.youtube.com/watch?v=g9mR4KsHd6Q











