Tag: mantra

  • ಸೂರ್ಯನಿಗೆ ಟಾರ್ಚ್ ಬಿಟ್ಟ ನಂತ್ರ ಕೊರೊನಾಗೆ ಔಷಧಿ ಕಂಡು ಹಿಡಿದ ನಿತ್ಯಾನಂದ

    ಸೂರ್ಯನಿಗೆ ಟಾರ್ಚ್ ಬಿಟ್ಟ ನಂತ್ರ ಕೊರೊನಾಗೆ ಔಷಧಿ ಕಂಡು ಹಿಡಿದ ನಿತ್ಯಾನಂದ

    ಬೆಂಗಳೂರು: ವಿಶ್ವಾದ್ಯಂತ ಹರಡುತ್ತಿರುವ ಕೊರೊನಾ ವೈರಸ್‍ಗೆ ಸ್ವಯಂ ಘೋಷಿತ ದೈವಮಾನವ ನಿತ್ಯಾನಂದ ಔಷಧಿ ಕಂಡುಹಿಡಿದ್ದೇನೆ ಎಂದು ವಿಡಿಯೋವೊಂದನ್ನು ಹರಿಬಿಟ್ಟಿದ್ದಾನೆ.

    ಕೊರೊನಾವನ್ನು ನಾನು ಗುಣಪಡಿಸುತ್ತೇನೆ. ಸೋಂಕಿಗೆ ಮದ್ದು ಕಂಡು ಹಿಡಿದಿದ್ದೇನೆ. ಇಂದಿನಿಂದ ಕೊರೊನಾಗೆ ಚಿಕಿತ್ಸೆ ಕೊಡಲಿರುವೆ ಎಂದು ನಿತ್ಯಾನಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ನಾನು ಹೇಳುವ ಮಂತ್ರವನ್ನು 48 ಗಂಟೆಗಳ ಕಾಲ ಪಠಿಸಿದರೆ ಸಾಕು ಕೊರೊನಾ ವೈರಸ್ ದೇಹ ಬಿಟ್ಟು ಹೋಗುತ್ತೆ ಎಂದಿದ್ದಾನೆ. ಇದನ್ನೂ ಓದಿ:ಹೊಸ ದೇಶವನ್ನೇ ಕಟ್ಟಿದ ನಿತ್ಯಾನಂದ – ಕ್ಯಾಬಿನೆಟ್ ರಚನೆ, ಪ್ರಧಾನಿ ಆಯ್ಕೆ

    “ಓಂ ನಿತ್ಯಾನಂದ ಪರಮ ಶಿವೋಹಂ” ಎಂದು ನಿರಂತರ 48 ಗಂಟೆಗಳ ಕಾಲ ಮಂತ್ರ ಪಠಿಸಿದರೆ ಕೊರೊನಾ ದೇಹ ಬಿಟ್ಟು ಹೋಗುತ್ತೆ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಈ ಮಂತ್ರ ಪಠಿಸಿದರೆ 48 ಗಂಟೆ ಧನಾತ್ಮಕ, ಆಧ್ಯಾತ್ಮಿಕ ಶಕ್ತಿ ದೇಹದಿಂದ ಕೊರೊನಾ ಓಡಿಹೋಗುತ್ತೆ. ಶುಕ್ರವಾರದಿಂದ ಭಾನುವಾರದವರೆಗೂ ಕೈಲಾಸದಲ್ಲಿ ಸ್ಪೆಷಲ್ ಕ್ಲಾಸ್ ಇದೆ. ಕೊರೊನಾ ಪೀಡಿತರು ಇಲ್ಲಿ ಸೇರಿ ಎಂದು ವಿಡಿಯೋ ಮೂಲಕ ನಿತ್ಯಾನಂದ ಸಂದೇಶ ರವಾನಿಸಿದ್ದಾನೆ.

    ಸೂರ್ಯನಿಗೆ ಟಾರ್ಚ್ ಬಿಟ್ಟಿದ್ದ:
    ನಾನು ಧ್ವಜಾರೋಹಣ ಮುಗಿಸೋವರೆಗೂ ಕಾಣಿಸಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ಅದಕ್ಕೆ ಅವನು ಬಿಡದಿಯಲ್ಲಿ 40 ನಿಮಿಷ ತಡವಾಗಿ ಹುಟ್ಟಿದ್ದ ಎಂದು ನಿತ್ಯಾನಂದ ಸ್ವಾಮೀಜಿ ಈ ಹಿಂದೆ ಭರ್ಜರಿ ಬಿಲ್ಡಪ್ ಕೊಟ್ಟಿದ್ದ. ಬಿಡದಿ ಆಶ್ರಮದಲ್ಲಿ ವಿದೇಶಿ ಭಕ್ತಾದಿಗಳನ್ನು ಸುತ್ತಲು ಕೂರಿಸಿಕೊಂಡು ನಾನು ಆದೇಶ ನೀಡಿದ್ದಕ್ಕೆ ಸೂರ್ಯ ತಡವಾಗಿ ಉದಯಿಸಿದ. ಬಿಡದಿಯಲ್ಲಿ ಮಾತ್ರ 40 ನಿಮಿಷ ತಡವಾಗಿ ಕಾಣಿಸಿಕೊಂಡ ಎಂದು ನಿತ್ಯಾನಂದ ಹೇಳಿದ್ದ. ಇದನ್ನೂ ಓದಿ: ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ, ನಾನು ಪರಮಶಿವ- ನಿತ್ಯಾನಂದನ ವಿಡಿಯೋ ವೈರಲ್

    ನಿತ್ಯಾನಂದ ಹೇಳಿದ್ದೇನು?
    ದಿನ ಆರಂಭವಾಗುವುದು ಸೂರ್ಯೋದಯದ ಮೂಲಕ. ಇವತ್ತು ಎಷ್ಟು ಮಂದಿ ಸೂರ್ಯೋದಯವನ್ನು ನೋಡಿದ್ದೀರೋ ಗೊತ್ತಿಲ್ಲ. ಇವತ್ತು ನಾನು ಧ್ವಜರೋಹಣಕ್ಕೆ ತಡವಾಗಿ ಬಂದೆ. ಪ್ರತಿದಿನ ಮುಂಜಾನೆ 6:40ರಿಂದ 7 ರವರೆಗೆ ಧ್ವಜರೋಹಣ ನಡೆಯುತ್ತದೆ. ಆದರೆ ನಾನು ಇಂದು ಕೊಂಚ ತಡವಾಗಿ ಬಂದೆ. ನಾನು ಹೇಳೋವರೆಗೆ, ಧ್ವಜಾರೋಹಣ ಮುಗಿಸೋವರೆಗೆ ನೀನು ಕಾಣಿಸಿಕೊಳ್ಳಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ನಾನು ಹೇಳಿದ ತಕ್ಷಣ ಸೂರ್ಯ ಅವತ್ತು ಬಿಡದಿಯಲ್ಲಿ ನಲವತ್ತು ನಿಮಿಷ ತಡವಾಗಿ ಕಾಣಿಸಿಕೊಂಡ.

    ಬಿಡದಿಯಲ್ಲಿ ಮಾತ್ರ ಈ ಅಚ್ಚರಿ ನಡೆದಿದ್ದು, ಬೇಕಾದರೆ ಗೂಗಲ್ ನಲ್ಲಿ ಇಂದಿನ ಸೂರ್ಯೋದಯದ ಸಮಯ ಎಷ್ಟಿತ್ತು? ಬಿಡದಿಯಲ್ಲಿ ಸೂರ್ಯೋದಯವಾದ ಸಮಯ ನೋಡಿ ಆಗ ಗೊತ್ತಾಗುತ್ತೆ. ಇದೆಲ್ಲ ನನ್ನಿಂದ ಮಾತ್ರ ಸಾಧ್ಯ ಎಂದು ವಿವರಿಸಿದ್ದ. ನಿತ್ಯಾನಂದನ ಈ ಮಾತನ್ನು ಹೇಳುತ್ತಿದ್ದಂತೆ ಅಲ್ಲಿದ್ದ ವಿದೇಶಿ ಮಹಿಳಾ ಭಕ್ತೆಯರು ಚಪ್ಪಾಳೆ ತಟ್ಟಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.

    https://www.facebook.com/theavatarclicks/videos/165762454725106/

  • ಸೂರ್ಯಗ್ರಹಣದ ಪರಿಣಾಮವೇನು -ಏನು ಮಾಡಬೇಕು? ಏನು ಮಾಡಬಾರದು?

    ಸೂರ್ಯಗ್ರಹಣದ ಪರಿಣಾಮವೇನು -ಏನು ಮಾಡಬೇಕು? ಏನು ಮಾಡಬಾರದು?

    ಗುರುವಾರ ಬೆಳಗ್ಗೆ 8:04ಕ್ಕೆ ಕೇತುಗ್ರಸ್ತ ಸೂರ್ಯಗ್ರಹಣ ಆರಂಭವಾಗಲಿದ್ದು, ಬೆಳಗ್ಗೆ 11:04 ಗಂಟೆಗೆ ಮುಕ್ತಾಯವಾಗುತ್ತದೆ. ಈ ಬಾರಿ ಮೂಲ ನಕ್ಷತ್ರ ಧನಸ್ಸು ರಾಶಿಯಲ್ಲಿ ಗ್ರಹಣವಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ದೋಷ ಪರಿಹಾರಕ್ಕೆ ಯಾವ ಮಂತ್ರ ಪಠಿಸಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

    ರಾಜ್ಯದ ಎಲ್ಲೆಲ್ಲಿ ಗ್ರಹಣ ಗೋಚರ?
    ಮಂಗಳೂರು – ಶೇ. 93.04
    ಮೈಸೂರು – ಶೇ.94
    ಶಿವಮೊಗ್ಗ – ಶೇ. 89.86
    ಬೆಂಗಳೂರು – ಶೇ. 89.54
    ಹುಬ್ಬಳ್ಳಿ – ಶೇ. 86.24
    ಬೀದರ್ – ಶೇ. 74.40
    ವಿಜಯಪುರ -ಶೇ. 80.64

    ಸೂರ್ಯಗ್ರಹಣ ಕಾಲದಲ್ಲಿ ಏನು ಮಾಡಬಾರದು?
    ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು, ಯಾಕೆಂದರೆ ಗರ್ಭಿಣಿಯರ ಮೇಲೆ ಸೂರ್ಯನ ಕಿರಣ ಬಿದ್ದಾಗ ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿದ್ರೆ, ಸ್ನಾನ, ಊಟ, ಪ್ರಯಾಣ ಮಾಡಬಾರದು. ದೇವತಾ ವಿಗ್ರಹಗಳನ್ನು ಮುಟ್ಟಬಾರದು, ವ್ಯವಹಾರಗಳಿಗೆ ಒಪ್ಪಂದ ಮಾಡಿಕೊಳ್ಳಬಾರದು. ವ್ಯಾಪಾರ-ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಬೇಕು. ಬರೀಗಣ್ಣಿನಿಂದ ಸೂರ್ಯ ಗ್ರಹಣ ನೋಡಬಾರದು.

    ಗ್ರಹಣದ ನಂತರ ಏನು ಮಾಡಬೇಕು?
    ಗ್ರಹಣ ಮೋಕ್ಷದ ನಂತರ ಕಡ್ಡಾಯವಾಗಿ ಸ್ನಾನ ಮಾಡಬೇಕು. ಹರಿಯುವ ನೀರಿನಲ್ಲಿ ಅಥವಾ ತಣ್ಣೀರಿನಿಂದ ಸ್ನಾನ ಮಾಡಬೇಕು. ಸ್ನಾನದ ನಂತರ ಆಹಾರ ಸೇವನೆ ಮಾಡಬಹುದು. ಈ ವೇಳೆ ಜಪ-ತಪ, ಧ್ಯಾನ, ಮಂತ್ರೋಪದೇಶ, ಪಿತೃದರ್ಪಣ ಮಾಡುವುದು ಒಳಿತು.

    ಗ್ರಹಣಾಚರಣೆಯ ಕ್ರಮವೇನು?
    ಗ್ರಹಣ ಸ್ಪರ್ಶಕಾಲದಲ್ಲಿ ಸ್ನಾನ ಮಾಡಬೇಕು. ಬಳಿಕ ಗ್ರಹಣ ಸಮಯದಲ್ಲಿ ದೇವರ ಸ್ತೋತ್ರಗಳನ್ನು ಪಠಿಸಬೇಕು. ಮನೆಯ ದೇವರಿಗೆ ವಿಶೇಷ ಪೂಜೆ-ಪ್ರಾಥನೆ ಮಾಡಬೇಕು. ನಂತರ ಗ್ರಹಣ ಮೋಕ್ಷ ಕಾಲದ ಬಳಿಕ ಪುನಃ ಸ್ನಾನ ಮಾಡಿ, ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ಪೂಜೆ ಮಾಡಬೇಕು. ಆ ನಂತರ ಆಹಾರ ಸೇವನೆ ಮಾಡಬೇಕು.

    ಗ್ರಹಣ ದೋಷ ಪರಿಹಾರ ಮಂತ್ರ:
    ಯೋ ಸೌ ವಜ್ರಧರೋ ದೇವಃ ಆದಿತ್ಯಾನಂ ಪ್ರಭುರ್ಮತಃ |
    ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
    ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
    ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
    ಯೋ ಸೌ ಶೂಲಧಯೋ ದೇವಃ ಪಿನಾಕೀ ವೃಷವಾಹನಃ |
    ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||

    ಗ್ರಹಣ ದೋಷ ಪರಿಹಾರ ಕ್ರಮ:
    ಶಿವನ ದೇವಾಲಯದ ದೀಪಕ್ಕೆ ಎಣ್ಣೆ ಒಪ್ಪಿಸುವುದು, ದೇಗುಲದಲ್ಲಿ ಕನಿಷ್ಠ 21 ಪ್ರದಕ್ಷಿಣೆ ಹಾಕುವುದು. ಗ್ರಹಣಕ್ಕೆ ಸಂಬಂಧಿಸಿದ ಧಾನ್ಯಗಳನ್ನು(ಗೋಧಿ ಹಾಗೂ ಹುರುಳಿ) ದಾನ ಮಾಡುವುದು.

    ಗ್ರಹಣ ಎಫೆಕ್ಟ್ ಏನಾಗಬಹುದು?
    1. ರಾಜ್ಯದಲ್ಲಿ ಅಕಾಲಿಕ ಮಳೆ, ಸೈಕ್ಲೋನ್ ಭೀತಿ, ಕೃಷಿಕ್ಷೇತ್ರಕ್ಕೆ ಹಾನಿ, ಕೆಂಪು ಧಾನ್ಯದಲ್ಲಿ ಹಾನಿ ಆಗುವ ಸಂಭವವಿದೆ.
    2. ಅಲ್ಲದೆ ರಾಜ್ಯ ರಾಜಕೀಯದಲ್ಲಿ ಭಿನ್ನಮತ ಸ್ಫೋಟವಾಗುವ ಸಾಧ್ಯತೆ ಇದೆ. ಹಿರಿಯ ರಾಜಕಾರಣಿಗಳ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.
    3. ದೇಶದ ವಿಚಾರದಲ್ಲಿ ಸೈನಿಕರಿಗೆ ತೊಂದರೆ, ನೆರೆಯ ರಾಷ್ಟ್ರದಿಂದ ಆಕಸ್ಮಿಕ ಯುದ್ಧಭೀತಿ ಆವರಿಸಲಿದೆ.
    4. ದೇಶದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಸುನಾಮಿ, ಬೆಂಕಿ ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ.
    5. ಧರ್ಮವನ್ನು ಅನುಸರಿಸುವ ಎಲ್ಲಾ ವ್ಯಕ್ತಿಗಳಿಗೂ ಅತೀ ವಿರೋಧ, ತೊಂದರೆಗಳು ಆಗಲಿದೆ.
    6. ಗ್ರಹಣ ರಾಶಿಯಲ್ಲಿ ಬುಧ, ಗುರು, ಶನಿ, ಕೇತು ಇರುವುದರಿಂದ ಕಾಯಿಲೆಗಳು ಹೆಚ್ಚಾಗುತ್ತದೆ, ಮಾನಸಿಕ ನೆಮ್ಮದಿ ಕಡಿಮೆಯಾಗುತ್ತದೆ.