Tag: Mansore

  • ನಿರ್ದೇಶಕ ಮಂಸೋರೆ ನಿಶ್ಚಿತಾರ್ಥ:  ಆಗಸ್ಟ್‌ನಲ್ಲಿ  ಮದುವೆ

    ನಿರ್ದೇಶಕ ಮಂಸೋರೆ ನಿಶ್ಚಿತಾರ್ಥ: ಆಗಸ್ಟ್‌ನಲ್ಲಿ ಮದುವೆ

    ಬೆಂಗಳೂರು: ಹರಿವು, ನಾತಿಚರಾಮಿ ಮತ್ತು ಆಕ್ಟ್-1978 ಚಿತ್ರಗಳ ನಿರ್ದೇಶಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಮಂಸೋರೆ’ ಅವರು ಇಂದು ಬೆಂಗಳೂರಿನಲ್ಲಿ ‘ಅಖಿಲಾ’ ಅವರೊಂದಿಗೆ ನಿಶ್ಚಿತಾರ್ಥವಾಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ.

    ಕೋವಿಡ್ ಕಾರಣದಿಂದಾಗಿ ಹೆಚ್ಚು ಜನರನ್ನು ಆಹ್ವಾನಿಸದೇ, ಕುಟುಂಬದವರು ಹಾಗೂ ಕೆಲವು ಗೆಳೆಯರ ಸಮಕ್ಷಮದಲ್ಲಿ ನಿಶ್ಚಿತಾರ್ಥ ನಡೆದಿದ್ದು, ಮದುವೆಗೆ ಆಗಸ್ಟ್ 15ನೇ ತಾರೀಖು ದಿನಾಂಕ ನಿಗದಿ ಆಗಿದೆ. ಮಂಸೋರೆ ಅವರ ವೃತ್ತಿಜೀವನದಲ್ಲಿ ಮಾಧ್ಯಮ ಮಿತ್ರರು ಹಾಗೂ ಚಿತ್ರರಂಗದ ಹಲವಾರು ಸ್ನೇಹಿತರು ಭಾಗಿಯಾಗಿರುವುದರಿಂದ, ಮಾಧ್ಯಮಗಳ ಮೂಲಕವೇ ಅವರೆಲ್ಲರಿಗೂ ತಮ್ಮ ಮದುವೆ ನಿಶ್ಚಯವಾಗಿರುವ ಶುಭಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ.

    2014ರಲ್ಲಿ ಮಂಸೋರೆ ಅವರು ಮೊದಲು ನಿರ್ದೇಶಿಸಿದ ‘ಹರಿವು’ ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ ಬಂದಿತ್ತು. ಹರಿವು ಚಿತ್ರದಲ್ಲಿ ‘ಸಂಚಾರಿ ವಿಜಯ್’ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಮಂಸೋರೆ ನಿರ್ದೇಶನದಲ್ಲಿ, ಶೃತಿ ಹರಿಹರನ್ ಮತ್ತು ಸಂಚಾರಿ ವಿಜಯ್ ನಟಿಸಿ, 2018ರಲ್ಲಿ ಬಿಡುಗಡೆಯಾಗಿದ್ದ ‘ನಾತಿಚರಾಮಿ’ ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ, ಮಂಸೋರೆ ಅವರಿಗೆ ಉತ್ತಮ ಸಾಹಿತ್ಯಕ್ಕೆ ರಾಷ್ಟ್ರಪ್ರಶಸ್ತಿ ಮತ್ತು ಇತರೆ ಮೂರು ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಗೌರವ ಸಿಕ್ಕಿದ್ದು, ಅದೇ ಚಿತ್ರದ ನಿರ್ದೇಶನಕ್ಕಾಗಿ ಮಂಸೋರೆ ಅವರಿಗೆ ಉತ್ತಮ ನಿರ್ದೇಶಕ ಫಿಲ್ಮ್ ಫೇರ್ ಪ್ರಶಸ್ತಿಯ ಗರಿ ಸಿಕ್ಕಿತ್ತು. ಇದನ್ನೂ ಓದಿ : ಬಾಯಿ ಮುಚ್ಚಿದರೆ ಸರಿ- ಚಕ್ರವರ್ತಿಗೆ ಪ್ರಿಯಾಂಕಾ ಅವಾಜ್

    ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ನೇತೃತ್ವದ, ‘ಬದಲಾದ ಭಾರತ’ ಎಂಬ ಯೋಜನೆಯಡಿಯಲ್ಲಿ ಆಯ್ಕೆಯಾದ ಸಿನಿಮಾಗಳ ಪಟ್ಟಿಯಲ್ಲಿ ‘ನಾತಿಚರಾಮಿ’ ಚಿತ್ರವೂ ಒಂದಾಗಿತ್ತು. ಮಂಸೋರೆ ನಿರ್ದೇಶನದ ಮೂರನೇ ಚಲನಚಿತ್ರ “ಆಕ್ಟ್-1978” ಕಳೆದ ವರ್ಷ ದೀರ್ಘಕಾಲದ ಲಾಕ್-ಡೌನ್ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ದಕ್ಷಿಣ ಭಾರತದ ಚಲನಚಿತ್ರ ಎಂದೇ ಖ್ಯಾತಿಯಾಗಿತ್ತು.

    ಕೊರೋನಾ ಲಾಕ್-ಡೌನ್ ನಂತರ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರರಂಗ ಹಿಂದೇಟು ಹಾಕುತ್ತಿದ್ದ ವೇಳೆಯಲ್ಲಿ ಬಿಡುಗಡೆಯಾದ ‘ಆಕ್ಟ್-1978’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯಕ್ಕೆ ಮಂಸೋರೆ ಅವರು ‘ರಾಣಿ ಅಬ್ಬಕ್ಕ’ನ ಕುರಿತಾದ ಚಿತ್ರ ಮಾಡುವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು, ಅದರ ಚಿತ್ರೀಕರಣಕ್ಕೆ ಹೋಗುವ ಮುನ್ನ ಮತ್ತೊಂದು ಚಿತ್ರ ಮಾಡುವ ಬಗ್ಗೆ ಯೋಚಿಸುತ್ತಿದ್ದು, ಮದುವೆಯ ಬಳಿಕ ಮುಂದಿನ ಚಿತ್ರದ ಘೋಷಣೆ ಮಾಡುವುದಕ್ಕೆ ಸಿದ್ಧತೆಗಳನ್ನು ನಡೆಸಿದ್ದಾರೆ.

  • ಕೋವಿಡ್ ನಡುವೆಯೂ ಗೆಲುವು ತನ್ನದಾಗಿಸಿಕೊಂಡ ಮಂಸೋರೆ ಸಿನಿಮಾ

    ಕೋವಿಡ್ ನಡುವೆಯೂ ಗೆಲುವು ತನ್ನದಾಗಿಸಿಕೊಂಡ ಮಂಸೋರೆ ಸಿನಿಮಾ

    – ಯಶಸ್ವಿ 25 ದಿನ ಪೂರೈಸಿದ ‘ಆಕ್ಟ್ 1978’

    ಕೊರೊನಾ ಲಾಕ್‍ಡೌನ್ ಬಳಿಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ತರುವಲ್ಲಿ ಯಶಸ್ವಿಯಾದ ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಚಿತ್ರ 25 ದಿನ ಪೂರೈಸಿದ ಖುಷಿಯಲ್ಲಿದೆ. ನವೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ‘ಆಕ್ಟ್ 1978’ ಚಿತ್ರ ಮೊದಲ ದಿನವೇ ಪ್ರೇಕ್ಷಕರು ಹಾಗೂ ವಿಮರ್ಶಕರ ಮನಸ್ಸನ್ನು ಗೆದ್ದಿತ್ತು. ಕೊರೊನಾ ನಡುವೆಯೂ ಚಿತ್ರಮಂದಿರದಲ್ಲೇ ಸಿನಿಮಾ ವೀಕ್ಷಿಸಿ, ಮೆಚ್ಚಿ 25 ದಿನಗಳ ಗೆಲುವನ್ನು ದಾಖಲಿಸಲು ಸಹಕರಿಸಿದ ಪ್ರೇಕ್ಷಕ ಪ್ರಭುಗಳಿಗೆ ಚಿತ್ರತಂಡ ಧನ್ಯವಾದ ತಿಳಿಸಿದೆ.

    ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಲಾಕ್‍ಡೌನ್ ಬಳಿಕ ಮೊದಲ ಬಾರಿ ಬಿಡುಗಡೆಯಾದ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ‘ಆಕ್ಟ್ 1978’ ಚಿತ್ರ ಇದೀಗ ಕೊರೊನಾ ಮಹಾಮಾರಿ ನಡುವೆಯೂ ಯಶಸ್ವಿ 25 ದಿನಗಳನ್ನು ಪೂರೈಸಿದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಚಿತ್ರಕ್ಕೆ ಸಿಕ್ಕ ಗೆಲುವು ಹಾಗೂ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದ್ದು ಐವತ್ತು ದಿನಗಳ ಸಂಭ್ರಮದತ್ತ ಎದುರು ನೋಡುತ್ತಿದೆ.

    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ನಿರ್ದೇಶನದ ಮೂರನೇ ಸಿನಿಮಾ ಇದಾಗಿದ್ದು, ಸೋಶಿಯಲ್ ಥ್ರಿಲ್ಲರ್ ಸಬ್ಜೆಕ್ಟ್ ಇರುವ ಚಿತ್ರಕ್ಕೆ ಸಿನಿರಸಿಕರಲ್ಲದೆ ಚಿತ್ರರಂಗದ ಗಣ್ಯರು ಕೂಡ ಸಿನಿಮಾ ನೋಡಿ ಭೇಷ್ ಎಂದಿದ್ದರು. ಸೋಶಿಯಲ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿರುವ ಚಿತ್ರದಲ್ಲಿ ಯಜ್ಞಾ ಶೆಟ್ಟಿ ಅಮೋಘ ಅಭಿನಯ ಎಲ್ಲರ ಮನಸೆಳೆದಿತ್ತು. ಇನ್ನು ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಪ್ರಮೋದ್ ಶೆಟ್ಟಿ, ಕೃಷ್ಣ ಹೆಬ್ಬಾಳೆ, ದತ್ತಣ್ಣ, ಸಂಚಾರಿ ವಿಜಯ್, ಶರಣ್ಯ, ಶ್ರುತಿ ಒಳಗೊಂಡಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಆಕ್ಟ್ 1978’ ದೇವರಾಜ್.ಆರ್ ನಿರ್ಮಾಣದಲ್ಲಿ ಮೂಡಿ ಬಂದಿದ್ದು, ಚಿತ್ರಕ್ಕೆ ಖ್ಯಾತ ಛಾಯಾಗ್ರಾಹಕ ಸತ್ಯ ಹೆಗ್ಡೆ ಕ್ಯಾಮೆರಾ ನಿರ್ದೇಶನವಿದೆ.

     

  • ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    – ಕೊರೊನಾ ಕಂಟಕವನ್ನೂ ಛಿದ್ರಗೊಳಿಸೋ ಲಕ್ಷಣ!

    ಒಂದೊಳ್ಳೆ ಸಿನಿಮಾ ಎಂಟ್ರಿ ಕೊಟ್ರೆ ತಿಂಗಳಿಂದೀಚೆಗೆ ಕವುಚಿಕೊಂಡಿರೋ ಕೊರೊನಾ ಗ್ರಹಣ ತಂತಾನೇ ಕಳಚಿಕೊಳ್ಳುತ್ತೆ. ಇದು ಸಿನಿಮಾ ಪ್ರೇಮಿಗಳ ಒಕ್ಕೊರಲಿನ ಅಭಿಪ್ರಾಯ. ಅದರಲ್ಲಿಯೇ ಮತ್ತೆ ಸಿನಿಮಾ ಮಂದಿರಗಳು ಗಿಜಿಗುಡುತ್ತಾ ಕಳೆಗಟ್ಟಿಕೊಳ್ಳಲೆಂಬ ಹಾರೈಕೆಯೂ ಇದೆ. ಅದೆಷ್ಟೋ ಸಿನಿಮಾ ಪ್ರೇಮಿಗಳ ಈ ಮನದಿಂಗಿತವನ್ನು ನಿಜವಾಗಿಸುವಂಥಾ ಗಾಢ ಭರವಸೆ ಹೊತ್ತು ಆಕ್ಟ್-1978 ಚಿತ್ರದ ಟ್ರೇಲರ್ ಲಾಂಚ್ ಆಗಿದೆ.

    ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಅದಕ್ಕೆ ದಕ್ಕಿರೋ ವೀಕ್ಷಣೆ, ನಾನಾ ದಿಕ್ಕುಗಳಿಂದ ಹರಿದು ಬರುತ್ತಿರೋ ಸದಭಿಪ್ರಾಯಗಳೆಲ್ಲವೂ ಒಂದು ಮಹಾ ಗೆಲುವಿನ ಮುನ್ಸೂಚನೆಯಂತೆಯೂ, ಚಿತ್ರರಂಗದ ಪಾಲಿಗೆ ಸುಗ್ಗಿ ಸಂಭ್ರಮ ಪಡಿಮೂಡಿಕೊಳ್ಳುವ ಶುಭ ಸೂಚನೆಯಂತೆಯೂ ಕಾಣಿಸಲಾರಂಭಿಸಿದೆ.

    ಇದು ಹರಿವು ಮತ್ತು ನಾತಿಚರಾಮಿಯಂಥ ಸದಭಿರುಚಿಯ ಸಿನಿಮಾಗಳನ್ನು ಕೊಡಮಾಡಿರುವ ಮಂಸೋರೆ ನಿರ್ದೇಶನದ ಚಿತ್ರ. ಈ ಹಿಂದೆ ಒಂದೇ ಒಂದು ಪೋಸ್ಟರ್ ಮೂಲಕ ಈ ಸಿನಿಮಾ ಸೃಷ್ಟಿಸಿದ್ದ ಕ್ರೇಜ್ ಎಂಥಾದ್ದೆಂಬುದನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಆ ದೆಸೆಯಿಂದಲೇ ಆಕ್ಟ್-1978  ಬಗ್ಗೆ ವಿಶೇಷವಾದ ಕುತೂಹಲ ಮೂಡಿಕೊಂಡಿತ್ತು. ಈಗ ಪುನೀತ್ ರಾಜ್ ಕುಮಾರ್ ಅವರ ಪಿಆರ್‍ಕೆ ಯೂಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗಿರೋ ಟ್ರೇಲರ್ ಎಲ್ಲ ನಿರೀಕ್ಷೆಗಳನ್ನೂ ಮತ್ತಷ್ಟು ಉದ್ದೀಪಿಸುವಂತೆ ಮೂಡಿ ಬಂದಿದೆ. ನಿರ್ದೇಶಕ ಮಂಸೋರೆ ಈ ಬಾರಿ ಎಲ್ಲರ ಮನಸುಗಳಿಗೂ ಕೌತುಕದ ಬಾಂಬಿಟ್ಟು ಬಿಟ್ಟಿದ್ದಾರೆ.

    ಮಂಸೋರೆ ಭಿನ್ನ ಪಥದಲ್ಲಿಯೇ ಸದ್ದು ಮಾಡುತ್ತಾ, ಪ್ರತಿ ಹೆಜ್ಜೆಯಲ್ಲಿಯೂ ಹೊಸಾ ಸಾಧ್ಯತೆಗಳತ್ತ ಕೈ ಚಾಚುತ್ತಾ ಈ ನೆಲದ ಕಥೆಗಳಿಗೆ ದೃಶ್ಯ ರೂಪ ನೀಡೋ ಅಪರೂಪದ ನಿರ್ದೇಶಕ. ಅವರು ಈ ಬಾರಿ ಪಕ್ಕಾ ಥ್ರಿಲ್ಲರ್ ಕಥಾನಕದೊಂದಿಗೆ ಅಡಿಯಿರಿಸುತ್ತಿದ್ದಾರೆ. ಈ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಒಂದು ಸರ್ಕಾರಿ ಕಚೇರಿಯನ್ನೇ ಹೈಜಾಕ್ ಮಾಡೋ ದೃಶ್ಯಾವಳಿಗಳೊಂದಿಗೆ ಈ ಟ್ರೇಲರ್ ಎಲ್ಲರನ್ನೂ ಸೆಳೆದುಕೊಂಡಿದೆ. ಮೈಗೆ ಬಾಂಬು ಕಟ್ಟಿಕೊಂಡಿರೋ ಬಸುರಿ ಹೆಂಗಸಿನ ರೆಬೆಲ್ ಪಾತ್ರದಲ್ಲಿ ಯಜ್ಞ ಶೆಟ್ಟಿ ಅಕ್ಷರಶಃ ಮಿಂಚಿದ್ದಾರೆ. ಮಿಕ್ಕುಳಿದ ಪಾತ್ರಗಳೂ ಕೂಡಾ ಅಷ್ಟೇ ಮಜವಾಗಿ ಮೂಡಿ ಬಂದಿರೋದರ ಸೂಚನೆಗಳೂ ಈ ಟ್ರೇಲರ್‌ನಲ್ಲಿ ಕಾಣಿಸಿವೆ.

    ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರೂ ಕೂಡಾ ಕುದಿತವೊಂದನ್ನು ಒಳಗಿಟ್ಟುಕೊಂಡಿರುತ್ತಾರೆ. ಆದರೆ, ಅದರ ವಿರುದ್ಧದ ಹೋರಾಟ, ಕ್ರಾಂತಿಗೆ ಮತ್ಯಾವುದೋ ಮಹಾ ಶಕ್ತಿಯೇ ಧರೆಗಿಳಿದು ಬರಬೇಕೆಂಬಂತೆ ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡಿರುತ್ತಾರೆ. ಆದರೆ ಮನಸು ಮಾಡಿದರೆ ಸಾಮಾನ್ಯರ ಕುದಿತ, ಬೇಗುದಿಗಳೂ ಅಸಾಧಾರಣ ರೀತಿಯಲ್ಲಿ ಆಸ್ಫೋಟಗೊಳ್ಳಬಹುದೆಂಬ ಕಥಾ ಹೂರಣ ಈ ಟ್ರೇಲರ್‍ನಲ್ಲಿ ಧ್ವನಿಸಿದೆ. ಅಂತೂ ಪ್ರತಿ ಕ್ಷಣವೂ ಉಸಿರು ಬಿಗಿಹಿಡಿದು ಕಾಯುವಂಥಾ ಬಿಗುವಿನೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಮೂಡಿಕೊಂಡಿದೆ.

    ಈ ಹಿಂದಿನ ಸಿನಿಮಾಗಳನ್ನು ನೋಡಿದ ಬಹುತೇಕರು ನಿರ್ದೇಶಕ ಮಂಸೋರೆಯ ಅಗಾಧ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು. ಅವರೀಗ ಪರಭಾಷಾ ಚಿತ್ರರಂಗಗಳ ಮಂದಿಯೇ ನಿಬ್ಬೆರಗಾಗೋ ಕಥಾ ವಸ್ತುವಿನೊಂದಿಗೆ ಕಮಾಲ್ ಮಾಡಲು ಮುಂದಾಗಿದ್ದಾರೆ. ಯಜ್ಞ ಶೆಟ್ಟಿಯನ್ನಂತೂ ಈ ಬಸುರಿ ಹೆಂಗಸಿನ ಪಾತ್ರ ಮತ್ತೊಂದು ಎತ್ತರಕ್ಕೇರಿಸೋದರಲ್ಲಿ, ಈ ಸಿನಿಮಾ ಮೂಲಕವೇ ಅವರ ವೃತ್ತಿ ಬದುಕಿನ ದಿಕ್ಕು ಬದಲಾಗೋದು ಗ್ಯಾರೆಂಟಿ ಅಂತ ನೋಡುಗರೇ ಭವಿಷ್ಯ ನುಡಿಯುತ್ತಿದ್ದಾರೆ. ಒಂದು ಟ್ರೇಲರ್ ಇಂಥಾ ಅಭಿಪ್ರಾಯಗಳನ್ನು ಹೊಮ್ಮಿಸುವಂತೆ ಮಾಡೋದು ಆರಂಭಿಕ ಗೆಲುವು. ಅದು ಆಕ್ಟ್-1978  ಚಿತ್ರಕ್ಕೆ ದಕ್ಕಿದೆ. ಮುಂದೆ ಮಹಾ ಗೆಲುವೊಂದು ಬಾಚಿ ತಬ್ಬಿಕೊಳ್ಳಲು ಕಾದು ನಿಂತಿರುವಂತಿದೆ!

  • ಆಕ್ಟ್ 1978: ಮಂಸೋರೆಯ ಮ್ಯಾಜಿಕಲ್ ಮೋಷನ್ ಪೋಸ್ಟರ್!

    ಆಕ್ಟ್ 1978: ಮಂಸೋರೆಯ ಮ್ಯಾಜಿಕಲ್ ಮೋಷನ್ ಪೋಸ್ಟರ್!

    ಬೆಂಗಳೂರು: ಹರಿವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸಾ ಸಾಧ್ಯತೆಗಳ ಹರಿವೊಂದನ್ನು ಹಾಯಿಸಿ ಬಿಟ್ಟು, ನಾತಿಚರಾಮಿ ಚಿತ್ರದೊಂದಿಗೆ ನಿರ್ದೇಶಕರಾಗಿ ಮತ್ತಷ್ಟು ಗಟ್ಟಿಯಾಗಿ ನೆಲೆ ಕಂಡುಕೊಂಡಿರುವವರು ಮಂಸೋರೆ. ನಾತಿಚರಾಮಿ ಪ್ರೇಕ್ಷಕರ ಮನ ಗೆದ್ದ ನಂತರದಲ್ಲಿ ಈ ಬಾರಿ ಭಿನ್ನ ಜಾಡಿನ ಚಿತ್ರವೊಂದನ್ನು ನಿರ್ದೇಶನ ಮಾಡೋ ಸುಳಿವು ಮಂಸೋರೆ ಕಡೆಯಿಂದ ಜಾಹೀರಾಗಿತ್ತು. ಕಥೆಯನ್ನು ಗಟ್ಟಿಗೊಳಿಸೋದಕ್ಕಾಗಿ ಸುತ್ತಾಟದಲ್ಲಿದ್ದ ಅವರು ಹೊಸಾ ಪ್ರಾಜೆಕ್ಟಿನ ಬಗ್ಗೆ ಒಂದಷ್ಟು ಚರ್ಚೆಗಳಾಗುವಂತೆ ಮಾಡಿದ್ದರು. ಆದರೆ ತಿಂಗಳು ಕಳೆದರೂ ಆ ಬಗ್ಗೆ ಯಾವ ಸುಳಿವೂ ಬಿಟ್ಟುಕೊಡದಿದ್ದ ಮಂಸೋರೆ ಇದೀಗ ಸಂಪೂರ್ಣವಾಗಿಯೇ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಇದೀಗ ಈ ಚಿತ್ರದ ಮೋಷನ್ ಪೋಸ್ಟರ್‌ನೊಂದಿಗೆ ಸದ್ದು ಮಾಡಿದ್ದಾರೆ.

    ಈ ಬಾರಿ ಮಂಸೋರೆ ಶಶಕ್ತವಾದ ಕ್ರಿಯಾಶೀಲರ ಸಾಥ್‌ನೊಂದಿಗೆ ಸಾಮಾಜಿಕ ಥ್ರಿಲ್ಲರ್ ಕಥೆಯೊಂದನ್ನು ಹೇಳ ಹೊರಟಿದ್ದಾರೆ. ಈ ಚಿತ್ರಕ್ಕೆ ಆಕ್ಟ್ 1978 ಎಂಬ ನಾಮಕರಣವನ್ನೂ ಮಾಡಿದ್ದಾರೆ. ಇದೀಗ ಬಿಡುಗಡೆಯಾಗಿರೋ ಮೋಷನ್ ಪೋಸ್ಟರ್‌ನಲ್ಲಿ ರೋಚಕ ಕಥೆಯ ಸುಳಿವಿನೊಂದಿಗೆ, ಥ್ರಿಲ್ಲರ್ ಜಾನರಿನ ಚಹರೆಯನ್ನೂ ಹೊಮ್ಮಿಸಿದ್ದಾರೆ. ಯಾರೇ ನೋಡಿದರೂ ಅವರೊಳಗೆ ಕಥೆಯೇನಿರಬಹುದೆಂಬ ಪ್ರಶ್ನೆಗಳ ತಾಕಲಾಟ ಶುರು ಮಾಡುವಂತಿರೋ ಈ ಮೋಷನ್ ಪೋಸ್ಟರ್ ನಿಜಕ್ಕೂ ಪ್ರಾಮಿಸಿಂಗ್ ಆಗಿದೆ.

    ಈ ಚಿತ್ರದಲ್ಲಿ ಮೊನ್ನೆಯಷ್ಟೇ ದಾಂಪತ್ಯ ಜೀವನ ಆರಂಭಿಸಿರುವ ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕೈಲಿ ಗನ್ನು ಹಿಡಿದು, ಬಾಂಬು ಕಟ್ಟಿಕೊಂಡು ಕೂತ ಗರ್ಭಿಣಿಯ ಅವತಾರವೇ ಯಜ್ಞಾರ ಪಾತ್ರ ವಿಶೇಷವಾಗಿದೆ ಎಂಬುದರ ಸುಳಿವು ಕೊಡುವಂತಿದೆ. ಈ ಬಾರಿ ನಿರ್ದೇಶಕ ಮಂಸೋರೆ ಕಮರ್ಶಿಯಲ್ ಜಾಡಿನತ್ತ ಹೊರಳಿಕೊಂಡಿದ್ದಾರೆ. ಇದರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಬೆಲ್‌ಬಾಟಂ ಖ್ಯಾತಿಯ ಕಥೆಗಾರ ಟಿ.ಕೆ ದಯಾನಂದ್ ಮತ್ತು ಯುವ ನಿರ್ದೇಶಕ ವೀರು ಮಲ್ಲಣ್ಣ ಸಾಥ್ ಕೊಟ್ಟಿದ್ದಾರೆ. ಯಾವ ಜಾನರಿನ ಚಿತ್ರವನ್ನೇ ಆದರೂ ಹೊಸತನದೊಂದಿಗೆ ಕಟ್ಟಿ ನಿಲ್ಲಿಸುವ ಕಸುವು ಹೊಂದಿರೋ ಮಂಸೋರೆ ಈ ಬಾರಿ ಮ್ಯಾಜಿಕ್ ಮಾಡೋ ಎಲ್ಲ ಸೂಚನೆಗಳೂ ಕಾಣಿಸುತ್ತಿವೆ.

  • ನಾತಿಚರಾಮಿ: ಮೈ ಮನಸುಗಳ ಸೂಕ್ಷ್ಮ ಸಂಘರ್ಷ!

    ನಾತಿಚರಾಮಿ: ಮೈ ಮನಸುಗಳ ಸೂಕ್ಷ್ಮ ಸಂಘರ್ಷ!

    ಬೆಂಗಳೂರು: ಒಬ್ಬಳನ್ನು ಬಾಧಿಸುವ ಗಂಡನಿಲ್ಲದ ನೀರವ. ಅವನ ನೆನಪಲ್ಲಿಯೇ ಬದುಕಿ ಬಿಡುವ ಗಟ್ಟಿ ನಿರ್ಧಾರಕ್ಕೆ ನೇತುಬೀಳೋ ದೈಹಿಕ ವಾಂಛೆ. ಇನ್ನೊಬ್ಬಳಿಗೆ ಗಂಡ ಇದ್ದರೂ ಆತನ ಪಾಲಿಗವಳು ಸುಖದ ಸರಕು ಮಾತ್ರ. ಆಕೆಯ ಪಾಲಿಗೆ ದೈಹಿಕ ಬಯಕೆ ನೀಗಿಕೊಂಡೂ ಆತ್ಮಸಾಂಗತ್ಯವಿಲ್ಲದ ನಿತ್ಯ ಸೂತಕ. ಮತ್ತೊಬ್ಬಾಕೆ ಬಂದದ್ದನ್ನು ಬಂದಂತೆಯೇ ಸ್ವೀಕರಿಸೋ ಸ್ಥಿತಪ್ರಜ್ಞೆಯುಳ್ಳ ಗಟ್ಟಿಗಿತ್ತಿ. ಈ ಮೂರು ಪಾತ್ರಗಳ ಮೂಲಕವೇ ಕಟ್ಟುಪಾಡುಗಳೊಳಗೆ ಅದೆಷ್ಟೋ ಮಹಿಳೆಯರು ಕಟ್ಟಿಟ್ಟುಕೊಂಡ ಭಾವಗಳಿಗೆ ಬಿಂದಾಸ್ ಆಗಿಯೇ ಮಾತು ಕೊಟ್ಟಿರೋ ಚಿತ್ರ ನಾತಿಚರಾಮಿ. ಈ ಮೂಲಕ ನಿರ್ದೇಶಕ ಮಂಸೋರೆಯವರ ಎರಡನೇ ಮ್ಯಾಜಿಕ್ಕು ಮನಸೂರೆಗೊಂಡಿದೆ.

    ಲೈಂಗಿಕ ತುಮುಲಗಳಿಗೂ ಮಡಿಬಟ್ಟೆ ಹೊದ್ದು ಬದುಕೋ ವಾತಾವರಣ ಈ ನೆಲದ್ದು. ಅದರಲ್ಲಿಯೂ ಹೆಣ್ಣಿನ ಪಾಲಿಗೆ ಇಂಥಾ ದೈಹಿಕ ವಾಂಛೆಗಳನ್ನು ಅಭಿವ್ಯಕ್ತಗೊಳಿಸೋದೇ ನಿಷಿದ್ಧ. ಆದರೆ ಮಂಸೋರೆ ನಾತಿಚರಾಮಿ ಮೂಲಕ ಮಡಿವಂತಿಕೆಯೊಳಗೇ ಅವಿತಿರೋ ಕುತೂಹಲ, ಹತ್ತಿಕ್ಕಲಾರದ ತಲ್ಲಣಗಳನ್ನು ಬಿಡುಬೀಸಾಗಿ ಹೇಳಿದ್ದಾರೆ. ಇದಕ್ಕೆ ಸಂಧ್ಯಾರಾಣಿಯವರ ಕಥೆ ಮತ್ತು ಸಂಭಾಷಣೆ ಸಖತ್ತಾಗಿಯೇ ಸಾಥ್ ನೀಡಿದೆ.

    ಮಂಸೋರೆ ಮೂರು ಸ್ಥರಗಳ ಮೂರು ಮಹಿಳಾ ಪಾತ್ರಗಳ ಮೂಲಕ ಬೇರೆಯದ್ದೇ ಒಂದು ಮನೋಲೋಕವನ್ನು ಕಟ್ಟಿ ಕೊಟ್ಟಿದ್ದಾರೆ.

    ಶ್ರುತಿ ಹರಿಹರನ್ ಗಂಡನನ್ನು ಕಳೆದುಕೊಂಡು ಆತನ ನೆನಪಲ್ಲಿಯೇ ಬೇಯುತ್ತಾ, ನೆನಪಿನಂತೆಯೇ ಕಾಡುವ ದೈಹಿಕ ತುಮುಲವನ್ನು ಹತ್ತಿಕ್ಕಲಾರದೆ ಒದ್ದಾಡೋ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರದ ಮೂಲಕವೇ ಅವರೊಳಗಿನ ಪರಿಪೂರ್ಣ ನಟಿಯ ದರ್ಶನವೂ ಆಗುತ್ತದೆ. ಇನ್ನು ಶರಣ್ಯ ಗಂಡ ಇದ್ದರೂ ಮಾನಸಿಕ ನೆಮ್ಮದಿಯಿಲ್ಲದ ಹೆಣ್ಣಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶ್ವೇತಾ ಬಂದದ್ದನ್ನು ಬಂದಂತೆಯೇ ಸ್ವೀಕರಿಸೋ ಹೆಂಗಸಾಗಿ ನಟಿಸಿದ್ದಾರೆ. ಈ ಮೂರೂ ಪಾತ್ರಗಳು ಬೆಚ್ಚಿ ಬೀಳಿಸುತ್ತಾ ಬೆರಗಾಗಿಸುತ್ತಾ ಬದುಕಿನ ಸೂಕ್ಷ್ಮಗಳನ್ನು ಅನಾವರಣಗೊಳಿಸುತ್ತಾ ಸಾಗುತ್ತವೆ.

    ಇಂಥಾ ಸೂಕ್ಷ್ಮ ವಿಚಾರ ಹೇಳುವಾಗ ಕೊಂಚ ಸಿನಿಮಾ ಕುಸುರಿಯನ್ನು ಮರೆತರೂ ದೃಶ್ಯ ಪೇಲವವಾಗುತ್ತದೆ. ಆದರೆ ಮಂಸೋರೆ ಅಂಥಾ ಯಾವ ಅವಘಡವೂ ಆಗದಂತೆ ಇಡೀ ಚಿತ್ರವನ್ನು ರೂಪಿಸಿದ್ದಾರೆ. ಸ್ವತಃ ಕಲಾ ನಿರ್ದೇಶಕರೂ ಆಗಿರೋ ಮಂಸೋರೆ ಅದನ್ನೂ ಪಾತ್ರವಾಗಿಸಿದ್ದಾರೆ. ಬಟ್ಟೆಗಳೂ ಇಲ್ಲಿ ಏನನ್ನೋ ಧ್ವನಿಸುತ್ತವೆ. ಮೌನವೂ ಕೂಡಾ ಮಾತಿಗಿಂತ ತೀವ್ರವಾಗಿ ತಟ್ಟುತ್ತದೆ. ಇದಕ್ಕೆ ಬಿಂದುಮಾಲಿನಿಯವರ ಸಂಗೀತ ಸಾಥ್ ನೀಡುತ್ತದೆ.

    ಒಟ್ಟಾರೆಯಾಗಿ ಹೊಸಾ ಬಗೆಯಲ್ಲಿ, ಎಲ್ಲ ಸಿದ್ಧ ಸೂತ್ರಗಳನ್ನು ಮೀರಿದ ಚಿತ್ರವೊಂದನ್ನು ಕಟ್ಟಿ ಕೊಡುವಲ್ಲಿ ಮಂಸೋರೆ ಯಶ ಕಂಡಿದ್ದಾರೆ. ಬಾಲಾಜಿ ಮನೋಹರ್, ಪೂರ್ಣಚಂದ್ರ ಮೈಸೂರು, ಗೋಪಾಲ ದೇಶಪಾಂಡೆ, ಕಲಾಗಂಗೋತ್ರಿ ಮಂಜು ಸೇರಿದಂತೆ ಎಲ್ಲ ಕಲಾವಿದರೂ ತಂತಮ್ಮ ಪಾತ್ರಗಳನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ಮಾನಸಾ ಮುಸ್ತಫಾ ಕಾಸ್ಟ್ಯೂಮಿನಲ್ಲಿಯೂ ಕಲಾತ್ಮಕ ಕೈಚಳಕ ತೋರಿಸಿದ್ದಾರೆ. ಸಿದ್ಧ ಸೂತ್ರಗಳಾಚೆಗಿನ ಈ ಚಿತ್ರ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡುವಲ್ಲಿ ಶಕ್ತವಾಗಿದೆ.

    ರೇಟಿಂಗ್: 4/5

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಸೋರೆಯವರ ಎರಡನೇ ಮ್ಯಾಜಿಕ್ ನಾತಿಚರಾಮಿ!

    ಮಂಸೋರೆಯವರ ಎರಡನೇ ಮ್ಯಾಜಿಕ್ ನಾತಿಚರಾಮಿ!

    ಬೆಂಗಳೂರು: ಮೊದಲ ಚಿತ್ರ ‘ಹರಿವು’ ಮೂಲಕವೇ ಪ್ರತಿಭಾವಂತ ನಿರ್ದೇಶಕರಾಗಿ ಹೊರಹೊಮ್ಮಿದ್ದವರು ಮಂಸೋರೆ. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು. ಕಲಾತ್ಮಕ ಚಿತ್ರವಾದರೂ ಎಂಥಾ ಕಲ್ಲೆದೆಯನ್ನೂ ಕರಗಿಸಬಲ್ಲ ಸೂಕ್ಷ್ಮ ಗುಣದಿಂದ ಈ ಚಿತ್ರ ಜನಸಾಮಾನ್ಯರನ್ನೂ ತಲುಪಿಕೊಂಡಿತ್ತು. ಇಂಥಾ ಮಂಸೋರೆ ನಿರ್ದೇಶನದ ಎರಡನೇ ಚಿತ್ರ ನಾತಿಚರಾಮಿ ಇದೇ ತಿಂಗಳ 28ರಂದು ತೆರಕಾಣಲು ಅಣಿಗೊಂಡಿದೆ.

    ಮೊದಲ ಚಿತ್ರ ಹರಿವು ಕಲಾತ್ಮಕ ಜಾಡಿನದ್ದಾಗಿತ್ತು. ಹಾಗಿದ್ದರೆ ಮಂಸೋರೆ ನಿರ್ದೇಶನದ ಎರಡನೇ ಚಿತ್ರ ನಾತಿಚರಾಮಿಯೂ ಅದೇ ಬಗೆಯದ್ದಾ ಎಂಬ ಪ್ರಶ್ನೆ ಸಹಜವೇ. ಆದರೆ ಈ ಚಿತ್ರದ ಮೂಲಕ ಮಂಸೋರೆ ಹೊಸಾ ಪ್ರಯೋಗವೊಂದಕ್ಕೆ ಕೈಹಾಕಿದ್ದಾರೆ. ಅದೇನೆಂಬುದು ಈ ತಿಂಗಳ ಇಪ್ಪತ್ತೆಂಟರಂದೇ ಜಾಹೀರಾಗಬೇಕಾದರೂ ಇದೊಂದು ಕಲಾತ್ಮಕ ಕಮರ್ಶಿಯಲ್ ಚಿತ್ರ ಎನ್ನಲಡ್ಡಿಯಿಲ್ಲ.

    ಕಮರ್ಶಿಯಲ್ ಅಂದಾಕ್ಷಣ ಸೊಂಟ ಬಳುಕಿಸೋ ಐಟಂ ಸಾಂಗು, ಮಸಾಲೆ ಐಟಮ್ಮುಗಳು ಅಂದುಕೊಂಡರೆ ನಾತಿಚರಾಮಿ ಆ ಥರದ್ದಲ್ಲ. ಆದರೆ ಭಿನ್ನ ಕಥಾ ಹಂದರ ಹೊಂದಿರೋ ಈ ಚಿತ್ರ ಹೊಸಾ ಅಲೆಯದ್ದು ಎನ್ನಲಡ್ಡಿಯಿಲ್ಲ. ಕಥೆಯ ಸೃಷ್ಟಿ ಮತ್ತು ಅದನ್ನು ಮನಸಿಗೆ ನಾಟುವಂತೆ ನಿರೂಪಣೆ ಮಾಡೋ ಚಾಕಚಕ್ಯತೆ ಮಂಸೋರೆ ಅವರಿಗಿದೆ ಎಂಬುದಕ್ಕೆ ಹರಿವು ಚಿತ್ರವೇ ಉದಾಹರಣೆ. ನಾತಿಚರಾಮಿಯಲ್ಲಿ ಬೇರೆಯದ್ದೇ ಥರದ ಕಥೆಯೊಂದಕ್ಕೆ ದೃಶ್ಯದ ಚೌಕಟ್ಟು ತೊಡಿಸಲಾಗಿದೆಯಂತೆ.

    ಈ ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಬರೆದಿರುವವರು ಎನ್. ಸಂಧ್ಯಾರಾಣಿ. ಈಗಾಗಲೇ ಸೂಕ್ಷ್ಮ ಸಂವೇದನೆಯುಳ್ಳ ಬರಹಗಾರ್ತಿಯಾಗಿ, ಅಂಕಣಗಾರ್ತಿಯಾಗಿ, ಸಾಹಿತಿಯಾಗಿ ಗುರುತಿಸಿಕೊಂಡಿರೋ ಸಂಧ್ಯಾರಾಣಿ ಈ ಚಿತ್ರಕ್ಕಾಗಿ ವಿಭಿನ್ನವಾದ ಕಥೆ ಬರೆದಿದ್ದಾರಂತೆ. ಮೊದಲ ಸಲ ಅವರು ಸಂಭಾಷಣೆಯನ್ನೂ ಬರೆದಿರೋದು ವಿಶೇಷ.

    ಹೇಳಿ ಕೇಳಿ ಕನ್ನಡ ಚಿತ್ರರಂಗದಲ್ಲಿ ಹೊಸಾ ಗಾಳಿ ಬೀಸುತ್ತಿದೆ. ಈ ಅಲೆಯಲ್ಲಿ ಬಂದು ಕಸುವು ಹೊಂದಿದ ಕಥೆಯನ್ನೆಲ್ಲ ಪ್ರೇಕ್ಷಕರು ಗೆಲ್ಲಿಸಿದ್ದಾರೆ. ನಾತಿಚರಾಮಿ ಕೂಡಾ ಪ್ರೇಕ್ಷಕರ ಮನಮುಟ್ಟುವ, ಕಾಡುವ ಚಿತ್ರವಾಗಿ ಮೂಡಿ ಬಂದಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಮಂಸೋರೆಯವರ ಎರಡನೇ ಮ್ಯಾಜಿಕ್ ಎಂಥಾದ್ದೆಂಬುದಕ್ಕೆ ಇನ್ನೊಂದು ವಾರದಲ್ಲಿ ಉತ್ತರ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv