ಬೆಂಗಳೂರು: ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಎಸ್‍ಐಟಿ ತಂಡ ಇಂದು ಅಧಿಕೃತವಾಗಿ ಐಎಂಎ ಕಚೇರಿ ಸೀಜ್ ಮಾಡಿದೆ.
ನಗರದ ಶಿವಾಜಿನಗರದಲ್ಲಿರುವ ಐಎಂಎ ಜ್ಯುವೆಲರ್ಸ್ ಕಚೇರಿಗೆ ಅಧಿಕೃತವಾಗಿ ಬೀಗ ಮುದ್ರೆ ಹಾಕಿದ್ದಾರೆ. ಐಎಂಎ ವಂಚನೆ ಪ್ರಕರಣ ತನಿಖಾ ಹಂತದಲ್ಲಿರುವ ಹಿನ್ನೆಲೆ ಎಸ್‍ಐಟಿ ಮಳಿಗೆಯನ್ನು ಸೀಜ್ ಮಾಡಿದೆ.
ಇತ್ತ ಮನ್ಸೂರ್ ಖಾನ್ ಕಾರು ಬೆಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ಕೆಐಎಎಲ್ ನಲ್ಲಿ ಕಾರು ವಶಕ್ಕೆ ಪಡೆದಿದ್ದಾರೆ. ಸದ್ಯ ಮನ್ಸೂರ್ ಕಾರು ಕೆಐಎಎಲ್‍ನಲ್ಲಿ ಪತ್ತೆ ಆಗಿರುವುದರಿಂದ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾಗಿರುವ ಕುರಿತು ಅನುಮಾನ ವ್ಯಕ್ತವಾಗಿದೆ.
ಸದ್ಯ ಲಭ್ಯವಾಗಿರುವ ಮಾಹಿತಿ ಅನ್ವಯ ಮನ್ಸೂರ್ ಖಾನ್ ಜೂನ್ 06 ರಂದು ಕೆಐಎಎಲ್ ನಲ್ಲಿ ಕಾರು ಬಿಟ್ಟು ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗಿದ್ದು, ರೇಂಜ್ ರೋವಾರ್ ಕಾರನ್ನು ನಿಲ್ಲಿಸಿ ಬಹಳ ದಿನಗಳಾದರು ಕಾರು ತೆಗೆಯಲು ಯಾರು ಬಾರದ ಹಿನ್ನೆಲೆ ವಿಮಾನ ನಿಲ್ದಾಣದ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಕಾರನ್ನ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಆಡಿಯೋ ಬಿಡುಗಡೆ ಮಾಡಿ ನಾಪತ್ತೆಯಾಗಿದ್ದ ಮನ್ಸೂರ್ ಖಾನ್ ವಿದೇಶಕ್ಕೆ ತೆರಳಿದ್ದಾನೆ ಎಂಬ ಮಾತಿಗೆ ಸದ್ಯ ಸಾಕಷ್ಟು ಪುಷ್ಠಿ ನೀಡಿದ್ದು, ಅಂತರಾಷ್ಟ್ರಿಯ ವಿಮಾನದಲ್ಲಿ ಮನ್ಸೂರ್ ಖಾನ್ ಪತ್ತೆ ಆಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಆತ ನಿಜಕ್ಕೂ ವಿದೇಶಕ್ಕೆ ತೆರಳಿದ್ದಾನಾ ಅಥವಾ ಬೇರೆ ಕಡೆ ತೆರಳಿದ್ದಾನಾ ಎಂಬದನ್ನು ಪೊಲೀಸರು ಖಚಿತ ಪಡಿಸಿಕೊಳ್ಳಲು ತನಿಖೆ ಚುರುಕುಗೊಳಿಸಿದ್ದಾರೆ.
ಬೆಂಗಳೂರು: ಸಾವಿರಾರು ಜನರಿಗೆ ವಂಚನೆಗೈದು ಐಎಂಎ ಸಂಸ್ಥೆ ಮಾಲೀಕ ಮನ್ಸೂರ್ ಖಾನ್ ನಾಪತ್ತೆಯಾದ ಬಳಿಕ ಆತ ದತ್ತು ಪಡೆದಿದ್ದ ಶಾಲೆಯ 960 ವಿದ್ಯಾರ್ಥಿಗಳು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮನ್ಸೂರ್ ಖಾನ್ 2 ವರ್ಷಗಳ ಹಿಂದೆ ತಾನು ಪ್ರಾಥಮಿಕ ಶಿಕ್ಷಣ ಪಡೆದಿದ್ದ ಶಿವಾಜಿನಗರದ ಸರ್ಕಾರಿ ವಿಕೆಒ ಪಬ್ಲಿಕ್ ಶಾಲೆಯನ್ನು ದತ್ತು ಪಡೆದಿದ್ದ. ಈ ಶಾಲೆಗೆ ಐಎಂಎ ಸಂಸ್ಥೆಯ ಮೂಲಕ 76 ಶಿಕ್ಷಕರನ್ನು ನೇಮಿಸಿ ಖಾಸಗಿ ಸಂಸ್ಥೆಗಳು ನಾಚುವಂತೆ ಅಭಿವೃದ್ಧಿಪಡಿಸಿದ್ದ. ಹಳೆ ಕಟ್ಟಡದ ನವೀಕರಣಗೊಳಿಸಿ, ಶಾಲೆಗೆ ಕಂಪ್ಯೂಟರ್ ಗಳನ್ನು ನೀಡಿ ಹೈಟೆಕ್ ಶಾಲೆಯಂತೆ ರೂಪಿಸಿದ್ದ. ಶಾಲೆಯ ವಿನ್ಯಾಸ ಬದಲಾದ ನಂತರ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು.
ವಿಕೆಒ ಪಬ್ಲಿಕೆ ಶಾಲೆಯಲ್ಲಿ ಕಿರಿಯ ಪ್ರಾಥಮಿಕ ತರಗತಿಯಿಂದ ಕಾಲೇಜು ಶಿಕ್ಷಣವರೆಗೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಗೆ ಸರ್ಕಾರ ಇಬ್ಬರು ಶಿಕ್ಷಕರನ್ನು ನೇಮಿಸಿದ್ದು, ಇನ್ನುಳಿದ 76 ಶಿಕ್ಷಕರು ಮನ್ಸೂರ್ ಖಾನ್‍ನ ಐಎಂಎ ಸಂಸ್ಥೆ ಮೂಲಕ ನೇಮಕಗೊಂಡಿದ್ದ. ಈಗ ಮನ್ಸೂರ್ ನಾಪತ್ತೆಯಾದ ಬೆನ್ನಲ್ಲೇ 56 ಶಿಕ್ಷಕರು ಶಾಲೆಗೆ ಬರಲು ಹಿಂದೇಟು ಹಾಕಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಾಂಶುಪಾಲೆ ನಫೀವುನ್ನೀಸಾ, ಶಾಲೆಯ ಶಿಕ್ಷಕರ ಮತ್ತು ಸಿಬ್ಬಂದಿ ವೇತನ ಸೇರಿದಂತೆ ಇತರೆ ವೆಚ್ಚಗಳಿಗೆ ಪ್ರತಿ ತಿಂಗಳು 32 ಲಕ್ಷ ಹಣವನ್ನು ಮನ್ಸೂರ್ ವಿನಿಯೋಗಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಐಎಂಎ ಸಂಸ್ಥೆಯಿಂದ ನೇಮಕಗೊಂಡಿರುವ ಶಿಕ್ಷಕರಿಗೆ ವೇತನ ಸಮಸ್ಯೆಯ ಜೊತೆ ಭವಿಷ್ಯದ ಚಿಂತೆ ಆರಂಭವಾಗಿದೆ. ನಮ್ಮ ಸಂಬಳ ಸಮಸ್ಯೆ ಇತ್ಯರ್ಥವಾಗುವವರೆಗೆ ಪಾಠ ಮಾಡುವುದಿಲ್ಲ ಎಂದು ಹಠ ಹಿಡಿದ ಹಿನ್ನೆಲೆಯಲ್ಲಿ ಶಾಲೆಗೆ ಅನಿವಾರ್ಯವಾಗಿ ರಜೆ ನೀಡಲಾಗಿದೆ.
ಬೆಂಗಳೂರು: ಸರ್ಕಾರ ನಿಮ್ಮೊಂದಿಗೆ ಇದೆ, ಕೂತು ಮಾತಾಡೋಣ ಎಂದು ಸಚಿವ ಜಮೀರ್ ಖಾನ್ ಅವರು ಐಎಂಎ ಮಾಲೀಕ ಮನ್ಸೂರ್ ಖಾನ್ ಬಳಿ ಮಾಧ್ಯಮಗಳ ಮೂಲಕ ಕೇಳಿಕೊಂಡಿದ್ದಾರೆ.
ಜಮೀರ್ ಖಾನ್ ಮಾಧ್ಯಮಗಳ ಜೊತೆ ಮಾತನಾಡಿದ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ಅದಕ್ಕೆ, ‘ಐಎಂಎ ಜ್ಯುವೆಲ್ಸ್ ಮಾಲೀಕ ಜನಾಬ್ ಮೊಹಮ್ಮದ್ ಮನ್ಸೂರ್ ಖಾನ್‍ಗೆ ಸಂದೇಶ’ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಮಾಧ್ಯಮಗಳ ಮೂಲಕ ನಾನು ಒಂದು ವಿಚಾರವನ್ನು ಹೇಳಲು ಬಯಸುತ್ತೇನೆ. ಮನ್ಸೂರ್ ಖಾನ್ ಬನ್ನಿ ನೀವು ಭಯಪಡಬೇಡಿ. ನಿಮ್ಮೊಂದಿಗೆ ನಾವೇದ್ದೇವೆ, ಈ ಸರ್ಕಾರವಿದೆ. ಆಗಿದ್ದು ಆಗಿಹೋಯ್ತು. ನೀವು ಆಡಿಯೋದಲ್ಲಿ ಹೇಳಿರುವುದು ಸತ್ಯವಾದ್ರೆ ಮುಖಾಮುಖಿಯಾಗಿ ಕುಳಿತುಕೊಳ್ಳಿ, ನಿಮ್ಮ ಜೊತೆ ನಾವೇದ್ದೇವೆ. ನೀವು ಯಾರಿಗೆ ದುಡ್ಡು ಕೊಟ್ಟಿದ್ದೀರಾ ಅದನ್ನ ಹೇಳಿ. ಆ ದುಡ್ಡನ್ನು ರಿಕವರಿ ಮಾಡೋಣ ಅದನ್ನು ಬಡವರಿಗೆ ಹಂಚೋಣ. ನೀವು ಯಾವ ರಾಜಕಾರಣಿಗೆ ದುಡ್ಡು ಕೊಟ್ಟಿದ್ದೀರ ಎನ್ನುವುದ್ದನ್ನು ಹೇಳಿ. ಅದನ್ನು ರಿಕವರಿ ಮಾಡೋಣ, ಬಡವರ ದುಡ್ಡನ್ನು ಬಡವರಿಗೆ ಹಂಚೋಣ. ಮನ್ಸೂರ್ ಖಾನ್ ಬಂದು ಹೇಳಿದ್ರೆ ಎಲ್ಲಾ ಸತ್ಯ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು: ಐಎಂಎ ಎಂಡಿ ಮನ್ಸೂರ್ ಖಾನ್ ತನ್ನ ಎರಡನೇ ಪತ್ನಿ ಹಾಗೂ ಮಕ್ಕಳ ಜೊತೆ ಶನಿವಾರ ರಾತ್ರಿ ದುಬೈಗೆ ಎಸ್ಕೇಪ್ ಆಗಿದ್ದಾನೆ. ಆದರೆ ಮನ್ಸೂರ್ ಈಗ ಫೇಸ್‍ಬುಕ್‍ನಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾನೆ.
ಮನ್ಸೂರ್ ಖಾನ್ ಸಾಯ್ತೀನಿ, ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಹೇಳಿ ದುಬೈನಲ್ಲಿ ಕುಳಿತುಕೊಂಡು ಫೇಸ್‍ಬುಕ್‍ನಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾನೆ. ಅಲ್ಲದೆ ಬೆಂಗಳೂರಲ್ಲಿ ನಡೆಯುತ್ತಿರೋದರ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯುತ್ತಿದ್ದಾನೆ. ಯಾರಾದರೂ ಮೆಸೆಂಜರ್ ಅಲ್ಲಿ ಮೆಸೇಜ್ ಮಾಡಿದ್ರೆ ಮನ್ಸೂಲ್ ಅದಕ್ಕೆ ಪ್ರತಿಕ್ರಿಯಿಸುತ್ತಿಲ್ಲ. ಮನ್ಸೂರ್ ಫೇಸ್‍ಬುಕ್‍ನಲ್ಲಿ ಆ್ಯಕ್ಟೀವ್ ಇದ್ದು, ವಾಟ್ಸಾಪ್ ಡೀ ಆಕ್ಟೀವ್ ಮಾಡಿದ್ದಾನೆ. ಅಲ್ಲದೆ ತನ್ನ ಮೊಬೈಲ್ ಕೂಡ ಸ್ವೀಚ್ ಆಪ್ ಮಾಡಿಕೊಂಡಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ ಖಾನ್ ಎಲ್ಲಿ ಇದ್ದಾನೆ, ಏನು ಮಾಡುತ್ತಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಪೊಲೀಸರ ಪ್ರಕಾರ ಆತ ದೇಶ ಬಿಟ್ಟು ಹೋಗಿದ್ದಾನೆ ಎಂಬುದು ತಿಳಿದು ಬಂದಿದೆ. ಮನ್ಸೂರ್ ಪ್ರತಿ ಗಂಟೆಗೊಮ್ಮೆ ಫೇಸ್‍ಬುಕ್‍ನಲ್ಲಿ ಆ್ಯಕ್ಟೀವ್ ಆಗಿ ಮತ್ತೆ ಡಿ ಆಕ್ಟೀವ್ ಮಾಡುತ್ತಿದ್ದಾನೆ. ಯಾರಾದರೂ ಮೆಸೆಂಜರ್‍ನಲ್ಲಿ ಮೆಸೇಜ್ ಮಾಡಿದ್ದರೆ, ಆ ಮೆಸೇಜ್ ಕೂಡ ಆತ ನೋಡುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಏನು ಚರ್ಚೆಯಾಗುತ್ತಿದೆ ಎನ್ನುವ ಕುತೂಹಲದಿಂದ ಮನ್ಸೂರ್ ಫೇಸ್‍ಬುಕ್‍ನಲ್ಲಿ ಆ್ಯಕ್ಟೀವ್ ಆಗಿದ್ದಾನೆ.
ಮನ್ಸೂರ್ ವಾಯ್ಸ್ ಮೆಸೇಜ್ ಬಂದಾಗ ವಾಟ್ಸಾಪ್‍ನಲ್ಲಿ ಆಕ್ಟೀವ್ ಆಗಿದ್ದನು. ಅದಾದ ಬಳಿಕ ಆತ ತನ್ನ ವಾಟ್ಸಾಪ್ ಅನ್ನು ಡಿ ಆಕ್ಟೀವ್ ಮಾಡಿದ್ದಾನೆ. ಮನ್ಸೂರ್ ಇದುವರೆಗೂ ಮತ್ತೆ ವಾಟ್ಸಾಪ್‍ನಲ್ಲಿ ಆನ್ ಮಾಡಿಲ್ಲ. ಆತನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ.
-ಐಎಂಎ ವಿರುದ್ಧ 8 ಸಾವಿರ ದೂರು
-ಮತ್ತೊಂದು ಆಡಿಯೋ ರಿಲೀಸ್
-ಬೀದಿಗೆ ಬಂದ 1,800 ಉದ್ಯೋಗಿಗಳು
ಬೆಂಗಳೂರು: ಹೂಡಿಕೆಯ ಹೆಸರಿನಲ್ಲಿ ಲಕ್ಷಾಂತರ ಮಂದಿಗೆ ವಂಚಿಸಿರುವ ಐಎಂಎ ಜ್ಯುವೆಲ್ಲರ್ಸ್ ಮಾಲೀಕನ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದೋಖಾ ಪ್ರಕರಣವನ್ನು ಎಸ್‍ಐಟಿಗೆ ವಹಿಸಿದೆ. ಮೊದಲು ಈ ಪ್ರಕರಣವನ್ನು ಸಿಸಿಬಿಗೆ ವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದರು. ಆದರೆ ಸಚಿವ ಜಮೀರ್ ಅಹ್ಮದ್ ನಿಯೋಗದ ಮನವಿ ಮೇರೆಗೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಎಸ್‍ಐಟಿ ಗೆ ವಹಿಸಿದೆ.
ನಿಗೂಢವಾಗಿ ನಾಪತ್ತೆಯಾಗಿರುವ ಮನ್ಸೂರ್ ಖಾನ್ ಪತ್ತೆಗಾಗಿ ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಈ ನಡುವೆ ಇಂದು ಕೂಡ ಐಎಂಎಯಿಂದ ಮೋಸ ಹೋಗಿರುವ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಆಕ್ರೋಶ ಹೊರ ಹಾಕಿದರು. ಸಮದ್ ಹೌಸ್‍ಗೆ ತೆರಳಿ ಅಲ್ಲಿ ತೆರೆಯಲಾಗಿರುವ ವಿಶೇಷ ಕೌಂಟರ್ ಗಳಲ್ಲಿ ದೂರು ಸಲ್ಲಿಸಿದರು. ಇದುವರೆಗೂ ಸುಮಾರು 8 ಸಾವಿರ ದೂರುಗಳು ಐಎಂಎ ವಿರುದ್ಧ ದಾಖಲಾಗಿವೆ.
ದೂರಿನ ಬಳಿಕ ಐಎಂಎ ಹೂಡಿಕೆದಾರರು ನಗರ ಪೊಲೀಸ್ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನ್ಯಾಯಕ್ಕಾಗಿ ಮನವಿ ಸಲ್ಲಿಸಿದರು. ಈ ಮಧ್ಯೆ ಐಎಂಎ ಜ್ಯುವೆಲ್ಲರಿಯ ಮೊಬೈಲ್ ಆ್ಯಪ್ ಕೂಡ ಸ್ಥಗಿತಗೊಂಡಿದೆ. ಈ ಆ್ಯಪ್‍ನಲ್ಲಿ ಹೂಡಿಕೆ, ಬಡ್ಡಿ, ತಿಂಗಳ ರಿಟರ್ನ್ಸ್ ಮಾಹಿತಿ ಲಭ್ಯವಾಗುತ್ತಿತ್ತು. ಇತ್ತ ಅದ್ಯಾಕೋ ಏನೋ ರೋಷನ್ ಬೇಗ್ ಮಾಲೀಕತ್ವದ ಉರ್ದು ಪತ್ರಿಕೆ ಸಿಯಾಸತ್ ಕೂಡ ಇವತ್ತು ಮುದ್ರಣಗೊಂಡಿಲ್ಲ. ಇತ್ತ ಐಎಂಎ ಜ್ಯುವೆಲ್ಲರಿಯಲ್ಲಿ ಕೆಲಸಕ್ಕಿದ್ದ 1,800 ಉದ್ಯೋಗಿಗಳು ಇದೀಗ ಬೀದಿಗೆ ಬಿದ್ದಿದ್ದಾರೆ.
ಜಮೀರ್ ಹೆಸರು ತಳುಕು:
ಸೋಮವಾರ ಮಾಜಿ ಸಚಿವ ರೋಷನ್ ಬೇಗ್ ಹೆಸರು ಐಎಂಎ ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ಇವತ್ತು ಸಚಿವ ಜಮೀರ್ ಅಹ್ಮದ್ ಖಾನ್ ಸರದಿ. ಚುನಾವಣೆ ಸಂದರ್ಭದಲ್ಲಿ ಜಮೀರ್ ಅಹ್ಮದ್ ಸಲ್ಲಿಸಿರೋ ಅಫಿಡವಿಟ್ ಈಗ ವೈರಲ್ ಆಗಿದೆ. ಇದರಲ್ಲಿ ರಿಚ್ಮಂಡ್ ಸರ್ಕಲ್ ಬಳಿ ಇರುವ ಎರಡೂವರೆ ಕೋಟಿ ಮೌಲ್ಯದ ಆಸ್ತಿಯನ್ನು ನೀಡಿ ಐಎಂಎ ಬಳಿ 5 ಕೋಟಿ ಸಾಲ ಪಡೆದಿರುವುದಾಗಿ ಜಮೀರ್ ಅಹ್ಮದ್ ಹೇಳಿಕೊಂಡಿದ್ದಾರೆ. ಈ ದಾಖಲೆ ಬಹಿರಂಗವಾಗುತ್ತಿದ್ದಂತೆ, ಐಎಂಎ ಮಾಲೀಕನ ಜೊತೆ ಸಚಿವ ಜಮೀರ್ ಪಾರ್ಟಿ ಮಾಡುವ ಫೋಟೋ ಇದೀಗ ವೈರಲ್ ಆಗಿದೆ.
ಪಕ್ಷಗಳ ಫೋಟೋ ವಾರ್:
ವಂಚಕ ಮನ್ಸೂರ್ ಜೊತೆಗೆ ಸಿಎಂ ಮತ್ತು ರೋಷನ್ ಬೇಗ್ ಊಟ ಮಾಡುತ್ತಿರುವ ಫೋಟೋವನ್ನು ಟ್ವೀಟಿಸಿರೋ ಬಿಜೆಪಿ, ಬಿರಿಯಾನಿ ಡೇ ಅಂತ ಕಾಲೆಳೆದಿದೆ. ನೀನೂ ತಿನ್ನು ನಾನು ತಿಂತೀನಿ ಅನ್ನೋದು ಜೆಡಿಎಸ್ ಪದ್ಧತಿ. ಖಾನ್‍ನಂತವರು ತಿಂದು ಲೂಟಿ ಮಾಡಿ ಓಡಿಹೋಗೋರು. ಇಂತಹ ವಂಚಕರ ಜೊತೆಗೆ ಸಿಎಂ ಬಿರಿಯಾನಿ ಡೇ ಸಾಕಷ್ಟು ವಿಷಯವನ್ನ ಹೇಳುತ್ತೆ ಅಂತ ಬಿಜೆಪಿ ಟೀಕಿಸಿದೆ. ಹಳೆ ಫೋಟೋವನ್ನು ಟ್ಯಾಗ್ ಮಾಡಿ ಬಿಜೆಪಿ ಜನರ ಹಾದಿ ತಪ್ಪಿಸ್ತಿದೆ ಅಂತ ಸಿಎಂ ತಿರುಗೇಟು ನೀಡಿದ್ದಾರೆ.
ಸಿಎಂ ಪ್ರತಿಕ್ರಿಯೆಗೆ ಮತ್ತೆ ತಿರುಗೇಟು ಕೊಟ್ಟಿರುವ ಬಿಜೆಪಿ ನಿಮ್ಮನ್ನು ನೀವು ಬಲಿಪಶು ಅಂತ ಕಣ್ಣೀರು ಹಾಕೋ ಬದಲು ವಂಚಕನ ವಿರುದ್ಧ ಕ್ರಮ ಕೈಗೊಳ್ಳುವುದು ನಿಮ್ಮ ಮೊದಲ ಆದ್ಯತೆ ಆಗಿರಲಿ ಅಂತ ಟ್ವೀಟಿಸಿದೆ. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಐಎಂಎಗೆ ಪಿಎಫ್‍ಐ ನಂಟಿರುವ ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ರೋಷನ್ ಬೇಗ್, ಜಮೀರ್ ಹೆಸರು ಕೇಳಿ ಬರ್ತಿದ್ದು, ಇವರ ಆಸ್ತಿ ಜಪ್ತಿ ಮಾಡಿ, ಸಿಬಿಐನಿಂದ ತನಿಖೆ ಮಾಡಿಸಬೇಕು ಅಂತಾ ಆಗ್ರಹಿಸಿದ್ದಾರೆ. ಆಡಿಯೋದಲ್ಲಿರೋದೆಲ್ಲಾ ಸತ್ಯ, ರೋಷನ್ ಬೇಗ್ ಹೆಸರು ಕೂಡ ಕೇಳಿಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ಆಗ್ಬೇಕು ಅಂತಾ ಬಿಜೆಪಿಯ ಅಬ್ದುಲ್ ಅಜೀಮ್ ಒತ್ತಾಯಿಸಿದ್ದಾರೆ.
ಮತ್ತೊಂದು ಆಡಿಯೋ ರಿಲೀಸ್:
ಈ ಎಲ್ಲಾ ಬೆಳವಣಿಗೆ ನಡುವೆ ಐಎಂಎ ಜ್ಯುವೆಲ್ಲರಿ ಎಂಡಿ ಮನ್ಸೂರ್‍ದು ಎನ್ನಲಾದ ಮತ್ತೊಂದು ಆಡಿಯೋ ರಿಲೀಸ್ ಆಗಿದೆ. ಐಎಂಎ ಎಂಡಿ ಮನ್ಸೂರ್ ಆದ ನಾನು ಜೀವಂತವಾಗಿದ್ದಾರೆ. ನನ್ನ ವಿರುದ್ಧ ರೋಷನ್ ಬೇಗ್ ಮತ್ತಿತರರು ದೊಡ್ಡಮಟ್ಟದಲ್ಲಿ ಷಡ್ಯಂತ್ರ್ಯ ನಡೆದಿದೆ. ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಸುದ್ದಿ ಹರಡಲಾಗಿದೆ. ನಾನು ನನ್ನ ಕುಟುಂಬ ಸದಸ್ಯರು ಓಡಿಹೋಗಿದ್ದಾರೆ ಎಂದು ಹಬ್ಬಿಸಲಾಗುತ್ತಿದೆ. ಇದೆಲ್ಲಾ ಸುಳ್ಳು ನಾನು ಜೀವಂತವಾಗಿದ್ದೇನೆ. ಎಲ್ಲಾ ಹೂಡಿಕೆದಾರರಿಗೆ ಜೂನ್ 15ರಿಂದ ಹಂತಹಂತವಾಗಿ ಹಣ ಹಿಂದಿರುಗಿಸ್ತೇನೆ ಎಂಬ ಮಾಹಿತಿ ಆಡಿಯೋದಲ್ಲಿದೆ. ಜೊತೆಗೆ ಇಂದು ಸಂಜೆ ಸಮದ್ ಹೌಸ್‍ನಲ್ಲಿ ರಾಹೀಲ್ ಸಭೆ ನಡೆಸುತ್ತಾನೆ ಎನ್ನಲಾಗಿತ್ತು. ಆದ್ರೆ ಅಂತಹ ಯಾವುದೇ ಸಭೆ ನಡೆಯಲಿಲ್ಲ. ಜೊತೆಗೆ ಇದು ಅಸಲಿ ಆಡಿಯೋನಾ ಅಥ್ವಾ ನಕಲಿ ಆಡಿಯೋನಾ..? ಹೂಡಿಕೆದಾರರ ದಾರಿ ತಪ್ಪಿಸಲು ಈ ಆಡಿಯೋ ಹರಿಬಿಡಲಾಗಿದ್ಯಾ ಅನ್ನೋ ಪ್ರಶ್ನೆ ಎದ್ದಿದೆ.
ಆಡಿಯೋದಲ್ಲಿ ಏನಿದೆ?
ನಾನು ಮನ್ಸೂರ್ ಖಾನ್, ಐಎಂಎ ಸಂಸ್ಥಾಪಕ. ನಾನು ಜೀವಂತವಾಗಿದ್ದೇನೆ. ನನ್ನ ಹಿಂದೆ ಷಡ್ಯಂತ್ರ ನಡೆಯುತ್ತಿದೆ. ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಸುದ್ದಿ ಹರಡಿಸಲಾಗಿದೆ. ನನ್ನ ಕುಟುಂಬ ಹಾಗೂ ನಾನು ಓಡಿ ಹೋಗಿದ್ದೇನೆಂದು ಸುದ್ದಿ ಹರಡಿಸಲಾಗಿದೆ. ಅದೆಲ್ಲಾ ಸುಳ್ಳು. ನಾನು ಅಲ್ಲಾಹನ ಆಶೀರ್ವಾದದಿಂದ ಚೆನ್ನಾಗಿದ್ದು, ಬೆಂಗಳೂರಿನಲ್ಲೇ ಇದ್ದೇನೆ. ನನ್ನನ್ನು ಓಡಿಸಲು ಸಾಕಷ್ಟು ಷಡ್ಯಂತ್ರ ನಡೆಯುತ್ತಿದೆ. ಈ ಷಡ್ಯಂತ್ರ್ಯ ಅವರಿಗೆ ಮುಳವಾಗುತ್ತೆ. ಸ್ಥಳೀಯ ಶಾಸಕ ರೋಷನ್ ಬೇಗ್, ಶಕೀಲ್ ಅಹಮದ್ ನನ್ನನ್ನು ಓಡಿಸಲು ಷಡ್ಯಂತ್ರ ಮಾಡಿದ್ದಾರೆ. ಇದರ ಹಿಂದೆ ದೊಡ್ಡ ದೊಡ್ಡವರ ಕೈವಾಡವಿದೆ. ನಾನು ಎಲ್ಲರ ಆಸ್ತಿ ಒಡವೆ, ಪಡೆದು ಹೂಡಿಕೆ ಮಾಡಿದ್ದೇನೆ. ಸದ್ಯದ ನನ್ನ ಪರಿಸ್ಥಿತಿ ಬಿಗಡಾಯಿಸಿದೆ.
ನನ್ನ ಬಳಿ ಏನೇನಿದೆ ಎಲ್ಲಾ ಮಾಹಿತಿಯನ್ನ ರಾಹೀಲ್‍ಗೆ ಕೊಟ್ಟಿದ್ದೇನೆ. ಸಂಜೆ 5 ಗಂಟೆಗೆ ರಾಹೀಲ್ ಸಭೆ ನಡೆಸುತ್ತಾರೆ. ಸಭೆಯಲ್ಲಿ ರಾಹೀಲ್‍ನನ್ನ ಪ್ರಶ್ನೆ ಮಾಡಿ, ನಿಮ್ಮ ಹಣ ಎಲ್ಲೂ ಹೋಗಲ್ಲ. ಹಣವನ್ನ ಹಿಂದಿರುಗಿಸುತ್ತೇನೆ. ಜೂನ್ 15 ರೊಳಗೆ ನಿಮ್ಮ ಹಣವನ್ನ ಹಿಂದಿರುಗಿಸುತ್ತೇನೆ. ಮೊದಲಿಗೆ ಸಣ್ಣ ಹೂಡಿಕೆದಾರರು ನಂತರ ಮಧ್ಯಮ ಹೂಡಿಕೆದಾರರು ತದ ನಂತರ ಬೃಹತ್ ಹೂಡಿಕೆದಾರರಿಗೆ ಹಣ ಹಿಂತಿರುಗಿಸುತ್ತೇನೆ. ನಾನು ಎಲ್ಲಿಯೂ ಹೋಗಿಲ್ಲ. ಬೆಂಗಳೂರಿನಲ್ಲೇ ಇದ್ದೇನೆ.