Tag: Mansoor Khan

  • ಬರೆದಿಟ್ಟುಕೊಳ್ಳಿ, ಮನ್ಸೂರ್ ಅಲಿ ಖಾನ್ ಜೀವಂತವಾಗಿ ಉಳಿಯಲ್ಲ: ಈಶ್ವರಪ್ಪ

    ಬರೆದಿಟ್ಟುಕೊಳ್ಳಿ, ಮನ್ಸೂರ್ ಅಲಿ ಖಾನ್ ಜೀವಂತವಾಗಿ ಉಳಿಯಲ್ಲ: ಈಶ್ವರಪ್ಪ

    – ಲೂಟಿಕೋರರೇ ಮನ್ಸೂರ್ ನ ಕೊಲೆ ಮಾಡ್ತಾರೆ

    ಶಿವಮೊಗ್ಗ: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಾದ ಮನ್ಸೂರ್ ಅಲಿ ಖಾನ್ ಜೀವಂತವಾಗಿ ಉಳಿಯಲ್ಲ, ಬರೆದಿಟ್ಟುಕೊಳ್ಳಿ. ಲೂಟಿಕೋರರೇ ಮನ್ಸೂರ್ ನ ಕೊಲೆ ಮಾಡ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಮೈತ್ರಿಕೂಟ ಸರ್ಕಾರದ ನಾಯಕರು ಐಎಂಎ ಪ್ರಕರಣದಲ್ಲಿ ಯಾರು ಯಾರು ಲೂಟಿ ಮಾಡಿದ್ದಾರೋ ಅವರು ಮನ್ಸೂರ್ ನನ್ನು ಕೊಲೆ ಮಾಡಲಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದರು. ಐಎಂಎ ಪ್ರಕರಣಕ್ಕೆ ಎಸ್‍ಐಟಿ ಮುಖಾಂತರ ನ್ಯಾಯ ಸಿಗಲು ಸಾಧ್ಯವಿಲ್ಲ. ನಾವು ಈ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದರೆ ಅದಕ್ಕೆ ಸರ್ಕಾರ ತಯಾರಿಲ್ಲ. ಮೈತ್ರಿ ಸರ್ಕಾರದ ಅನೇಕ ವ್ಯಕ್ತಿಗಳಿಗೆ ಕಿಕ್ ಬ್ಯಾಕ್ ಸಿಕ್ಕಿದೆ. ಮನ್ಸೂರ್ ಅಲಿ ಖಾನ್ ಸತ್ತರೆ ಕಿಕ್ ಬ್ಯಾಕ್ ಪಡೆದವರು ಉಳಿದುಬಿಡುತ್ತಾರೆ. ಹೀಗಾಗಿ, ಮನ್ಸೂರ್ ಗೆ ರಕ್ಷಣೆ ಕೊಡಿ ಎಂದು ಈಶ್ವರಪ್ಪ ಮನವಿ ಮಾಡಿಕೊಂಡರು.

    ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನ್ಸೂರ್ ಸಾವನ್ನ ತಪ್ಪಿಸಲು ಮನವಿ ಮಾಡಲಿ. ಮೈತ್ರಿಕೂಟ ಸರ್ಕಾರದ ಸ್ವಾಭಿಮಾನಿ ಶಾಸಕರು ಐಎಂಎ ಹಗರಣ, ಜಿಂದಾಲ್ ಹಗರಣ, ಲೂಟಿ ಮಾಡಿದವರ ವಿರುದ್ಧ ಬೇಸರಗೊಂಡಿದ್ದಾರೆ. ಹೀಗಾಗಿ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

    ಬಡವರ ಹಣ ತೆಗೆದುಕೊಂಡು, ರಾಜ್ಯ- ದೇಶ ಬಿಟ್ಟು ಓಡಿ ಹೋದ ಮನ್ಸೂರ್‍ನನ್ನು ಯಾಕೆ ಅರೆಸ್ಟ್ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಮನ್ಸೂರ್ ಅಲಿ ಖಾನ್ ದೇಶ ಬಿಡಲು ಇದೇ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಕಾರಣವಾಗಿದ್ದು, ಕೂಲಿ ಮಾಡುತ್ತಿದ್ದ ಬಡವರ ಲಕ್ಷಾಂತರ ಹಣ ದೋಚಲು ಇದೇ ಮೈತ್ರಿ ಸರ್ಕಾರವೇ ಕಾರಣ ತಾನೆ ಎಂದು ಆರೋಪಿಸಿದರು.

    ಮೈತ್ರಿಕೂಟದಲ್ಲಿ ಗೊಂದಲ ಮುಂದುವರಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಏಕವಚನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟೀಕೆ ಮಾಡಿದರೆ ಅವರ ವಿರುದ್ಧ ಇನ್ನೂ ಕೆಟ್ಟ ಭಾಷೆ ಬಳಕೆ ಮಾಡಬೇಕಾಗುತ್ತೆ. ಇದರಲ್ಲಿ ಸಿದ್ದರಾಮಯ್ಯ ಅವರ ಸಂಸ್ಕೃತಿ ತೋರುತ್ತದೆ. ಮೊದಲು ಅವರು ಗೌರವದಿಂದ ನಡೆದುಕೊಳ್ಳುವುದನ್ನು ಕಳಿತುಕೊಳ್ಳಲಿ ಎಂದು ವಾರ್ನಿಂಗ್ ನೀಡಿದರು.

  • ಐಎಂಎ ನಿರ್ದೇಶಕ ಮುಜಾಹಿದ್ದೀನ್ ನಿವಾಸದ ಮೇಲೆ ಎಸ್‍ಐಟಿ ದಾಳಿ

    ಐಎಂಎ ನಿರ್ದೇಶಕ ಮುಜಾಹಿದ್ದೀನ್ ನಿವಾಸದ ಮೇಲೆ ಎಸ್‍ಐಟಿ ದಾಳಿ

    -ಮನ್ಸೂರ್ ನಿಂದ 10 ಕೋಟಿ ಪಡೆದಿದ್ದ ಮುಜಾಹಿದ್ದೀನ್

    ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಶಿಷ್ಯ ಹಾಗೂ ಐಎಂಎ ನಿರ್ದೇಶಕ ಮುಜಾಹಿದ್ದೀನ್ ಅಲಿಯಾಸ್ ಖರ್ಚಿಪ್ ಮಜ್ಜುನ ಪ್ರೇಜರ್ ಟೌನ್ ಎಂಎಂ ರಸ್ತೆಯಲ್ಲಿರುವ ಮನೆ ಮೇಲೆ ಹತ್ತಕ್ಕು ಹೆಚ್ಚು ಎಸ್‍ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಿಶೀಲನೆ ನಂತರ ಮುಜಾಹಿದೀನ್‍ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

    ಡಿಸಿಪಿ ಗಿರೀಶ್ ಮತ್ತು ಇಬ್ಬರು ಡಿವೈಎಸ್‍ಪಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮುಜಾಹಿದ್ದೀನ್‍ಗೆ ಸೇರಿದ ಫಾರ್ಚೂನರ್ ಕಾರ್ ವಶಕ್ಕೆ ಪಡೆದು ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಕಾರಿನ ಡಿಕ್ಕಿಯಲ್ಲಿದ್ದ ಬುಕ್ಸ್, ಡೈರಿ, ರೆಕಾಡ್ರ್ಸ್‍ಗಳನ್ನು ಎಸ್‍ಐಟಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಮುಜಾಹೀದ್ ಅಲಿಯಾಸ್ ಖರ್ಚಿಪ್ ಮಜ್ಜು ಶಿವಾಜಿನಗರದಲ್ಲಿ ಬಿಬಿಎಂಪಿ ಕಾರ್ಪೋರೇಟರ್ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಅಲ್ಲದೆ, ಮುಜಾಹಿದ್ದೀನ್ ಯಾವಾಗಲೂ ಜಮೀರ್ ಜೊತೆಯಲ್ಲಿಯೇ ಇರುತ್ತಿದ್ದ ಎಂದು ತಿಳಿದು ಬಂದಿದೆ.

    ಎಸ್‍ಐಟಿ ಅಧಿಕಾರಿಗಳು ಮುಜಾಹೀದ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮನ್ಸೂರ್ ಖಾನ್‍ನಿಂದಲೇ 10 ಕೋಟಿ ರೂ. ಹಣ ಪಡೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮನ್ಸೂರ್ ಖಾನ್ ವಿರುದ್ಧ ಯಾರೂ ತಿರುಗಿ ಬೀಳಬಾರದು ಎಂದು ಮನ್ಸೂರ್ ಖಾನ್ ಬಳಿ ಹಣ ಪಡೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

    ಐಎಎಸ್ ಅಧಿಕಾರಿಗಳ ಬಾಯಿ ಮುಚ್ಚಿಸಲು ಐಪಿಎಸ್ ಅಧಿಕಾರಿಗಳಿಗೆ ಹಣ ನೀಡಿದ್ದು, ಮನ್ಸೂರ್ ವಿರುದ್ಧ ಯಾರೂ ಪ್ರಶ್ನೆ ಮಾಡದಂತೆ ಸಹಾಯ ಮಾಡಲು ಹಣ ಪಡೆದು ಅಧಿಕಾರಿಗಳಿಗೆ ನೀಡುತ್ತಿದ್ದ ಎಂದು ಎಸ್‍ಐಟಿ ವಿಚಾರಣೆ ವೇಳೆ ತಿಳಿದು ಬಂದಿದೆ. ಸದ್ಯ ಮುಜಾಹಿದ್ದೀನ್ ಮಾಹಿತಿ ಮೇರೆಗೆ ಐಪಿಎಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಹೆಸರನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

  • 90 ಕೋಟಿಯ ಜಾಗ 9.38 ಕೋಟಿಗೆ ಮಾರಾಟ: ಜಮೀರ್ ವಿರುದ್ಧ ಅಕ್ರಮದ ಆರೋಪ

    90 ಕೋಟಿಯ ಜಾಗ 9.38 ಕೋಟಿಗೆ ಮಾರಾಟ: ಜಮೀರ್ ವಿರುದ್ಧ ಅಕ್ರಮದ ಆರೋಪ

    – ಎನ್.ಆರ್. ರಮೇಶ್‍ರಿಂದ ಗಂಭೀರ ಆರೋಪ
    – ಜಮೀರ್ಗೆ 80 ಕೋಟಿ ಕಪ್ಪು ಹಣ ಸಂದಾಯ

    ಬೆಂಗಳೂರು: 90 ಕೋಟಿ ಬೆಲೆಬಾಳುವ ನಿವೇಶನವನ್ನು ಐಎಂಎಗೆ 9.38 ಕೋಟಿ ರೂ.ಗಳಿಗೆ ಮಾರಾಟ ಮಾಡಿ, ಬಾಕಿ 80 ಕೋಟಿ ರೂ.ಗಳನ್ನು ಹವಾಲಾ ರೂಪದಲ್ಲಿ ಪಡೆದಿದ್ದಾರೆ ಎಂದು ಬಿಬಿಎಂಪಿ ಮಾಜಿ ಆಡಳಿತ ಪಕ್ಷ ನಾಯಕ, ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

    ಸಚಿವ ಜಮೀರ್ ಅಹಮದ್ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 90 ಕೋಟಿ ರೂ. ಮೌಲ್ಯದ ನಿವೇಶನವನ್ನು ಕೇವಲ 9.38 ಕೋಟಿ ರೂ.ಗೆ ಮಾರಾಟ ಮಾಡಿದ್ದು, ಉಳಿದ 80 ಕೋಟಿ ರೂ.ಗಳನ್ನು ಕಪ್ಪು ಹಣ ಹವಾಲಾ ರೂಪದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಪಡೆದಿದ್ದಾರೆ. ವಿವಾದಿತ ನಿವೇಶನವನ್ನು ಅಕ್ರಮ ಮಾರಾಟ ಮಾಡಿ ಉಳಿದ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. 2001ರಲ್ಲಿ ಕೇವಲ ಎರಡೂವರೆ ಕೋಟಿ ರೂ.ಗೆ ನಿವೇಶನವನ್ನು ಖರೀದಿಸಿ ಅಕ್ರಮವಾಗಿ ಐಎಂಎಗೆ ಮಾರಾಟ ಮಾಡಿದ್ದಾರೆ ಎಂದು ಎನ್. ರಮೇಶ್ ದೂರಿದ್ದಾರೆ.

    ಭೂ ಮಾಲೀಕನಿಗೆ ಕೇವಲ ಎರಡೂವರೆ ಕೋಟಿ ರೂ.ಗಳನ್ನು ನೀಡಿ ಜಮೀನು ಖರೀದಿಸಿದ್ದು, ಅದೇ ಜಮೀನನ್ನು 9 ಕೋಟಿ ರೂ.ಗೆ ಐಎಂಎ ಮಾಲೀಕನಿಗೆ ಮಾರಾಟ ಮಾಡಿದ್ದಾರೆ. ಆದರೆ ಆ ಜಮೀನಿನ ಸದ್ಯದ ಮಾರುಕಟ್ಟೆ ಬೆಲೆ ಕನಿಷ್ಟ 90 ಕೋಟಿ ರೂ.ಗಳಾಗಿದ್ದು, 2018ರಲ್ಲಿ ಮನ್ಸೂರ್ ಖಾನ್‍ಗೆ ಕೇವಲ 9.38 ಕೋಟಿ ರೂ.ಗೆ ಜಮೀರ್ ಅಹ್ಮದ್ ಖಾನ್ ಮಾರಾಟ ಮಾಡಿದ್ದಾರೆ. ಉಳಿದ 80 ಕೋಟಿ ರೂ. ಕಪ್ಪು ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

    19 ವರ್ಷಗಳಿಂದ ರಿಚ್ಮಂಡ್ ಟೌನ್‍ನ ಸರ್ಪಟೈನ್ ಸ್ಟ್ರೀಟ್‍ನಲ್ಲಿರುವ ವಿವಾದಿತ ನಿವೇಶನ ಕೋರ್ಟ್ ಅಂಗಳದಲ್ಲಿದ್ದು, 2014ರಲ್ಲಿ ಆಸ್ತಿ ಪ್ರಕರಣ ಕೋರ್ಟ್‍ನಲ್ಲಿರುವಾಗಲೇ ಜಮೀರ್ ಪಾಲಿಕೆಗೆ ಪತ್ರ ಬರೆದು ಆಸ್ತಿಯನ್ನು ನಾನು ಖರೀದಿಸಿದ್ದೇನೆ ಖಾತೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ. ಆಗಲೇ ಪಾಲಿಕೆ ನೌಕರರು ಈ ಆಸ್ತಿ ವ್ಯಾಜ್ಯ ಕೋರ್ಟ್‍ನಲ್ಲಿದೆ ಹೀಗಾಗಿ ಖಾತೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಹೀಗಿದ್ದರೂ ಸಹ ಹತ್ತು ಹಲವು ಬಾರಿ ಪತ್ರ ವ್ಯವಹಾರ ನಡೆಸಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.

    ತಾವು ಖಾತೆ ಮಾಡಿಸಿದ ನಂತರ ಮನ್ಸೂರ್ ಖಾನ್‍ಗೆ ಮಾರಾಟ ಮಾಡಿರುವ ಜಮೀನಿಗೆ ಖಾತೆ ಮಾಡಿಸಲು ಜಮೀರ್ ಕಸರತ್ತು ಮಾಡಿದ್ದಾರೆ. ಸಚಿವ ಜಮೀರ್ ಸುಳ್ಳು ಲೆಕ್ಕ ಕೊಡುವುದರಲ್ಲಿ ಎಕ್ಸ್‍ಪರ್ಟ್. ಚುನಾವಣಾ ಪ್ರಮಾಣಪತ್ರದಲ್ಲೇ ತಪ್ಪು ಮಾಹಿತಿ ನೀಡಿದ್ದು, 2018ರ ವಿಧಾನಸಭೆ ಚುನಾವಣೆಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಯೂ ಮಾಜಿ ಶಾಸಕ ಚೆಲುವರಾಯ ಸ್ವಾಮಿಯಿಂದ 42 ಲಕ್ಷ ಸಾಲ ಪಡೆದಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ, ಚೆಲುವರಾಯ ಸ್ವಾಮಿ ಅದೇ 2018ರ ವಿಧಾನಸಭಾ ಚುನಾವಣೆಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಜಮೀರ್ ಅಹ್ಮದ್ ಖಾನ್ ಸಾಲ ನೀಡಿರುವ ಮಾಹಿತಿಯನ್ನೇ ನೀಡಿಲ್ಲ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

  • ಐಎಂಎ ಮಹಾ ವಂಚನೆ ಕೇಸ್‍ಗೆ ಸಿಬಿಐ ಎಂಟ್ರಿ?

    ಐಎಂಎ ಮಹಾ ವಂಚನೆ ಕೇಸ್‍ಗೆ ಸಿಬಿಐ ಎಂಟ್ರಿ?

    ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಖಾನ್ ದೋಖಾ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಜಾರಿ ನಿರ್ದೇಶನಾಲಯ (ಇಡಿ) ಕಣ್ಣು ಸಚಿವ ಜಮೀರ್ ಅಹ್ಮದ್ ಖಾನ್ ಮೇಲೆ ಬಿದ್ದಾಯ್ತು, ಮುಂದೆ ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ.

    ಸಾವಿರಾರು ಮಂದಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಓಡಿ ಹೋಗಿರೋ ಮನ್ಸೂರ್ ಖಾನ್ ಕಂಬಿ ಎಣಿಸೋ ಕಾಲ ಹತ್ತಿರವಾಗುತ್ತಿದೆ. ಯಾಕೆಂದರೆ ಐಎಂಎ ಕೇಸಲ್ಲಿ ಸೋಮವಾರ ಸಿಬಿಐ ಎಂಟ್ರಿಯಾಗುತ್ತಿದೆ. ಶುಕ್ರವಾರವಷ್ಟೇ ಇಡಿ ಅಧಿಕಾರಿಗಳಿಂದ ಸಿಬಿಐ ಎಲ್ಲ ಮಾಹಿತಿ ಪಡೆದುಕೊಂಡಿದ್ದು, ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆಸ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ಜಮೀರ್‍ಗೆ ಇಡಿ ಈಗಾಗಲೇ ನೋಟಿಸ್ ನೀಡಿದ್ದು, ಸಿಬಿಐ ಉರುಳಿಗೆ ಸಿಲುಕಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ಐಎಂಎ ಹಗರಣ – ವಿಚಾರಣೆಗೆ ಹಾಜರಾಗುವಂತೆ ಜಮೀರ್‌ಗೆ ಇಡಿ ನೋಟಿಸ್

    ಸಿಬಿಐಗೆ ಕೇಸ್ ಕೈಗೆತ್ತಿಕೊಂಡರೆ ಸಚಿವ ಜಮೀರ್, ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್, ಜೆಡಿಎಸ್‍ನ ಎಂಎಲ್‍ಸಿ ಶರವಣ ಸೇರಿದಂತೆ ಸಾಕಷ್ಟು ಜನನಾಯಕರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಕಾಂಗ್ರೆಸ್‍ನ ಉಚ್ಛಾಟಿತ ಮುಖಂಡರಿಗೂ ಸಂಕಷ್ಟ ತಪ್ಪಿದ್ದಲ್ಲ. ಮನ್ಸೂರ್ ವಿಡಿಯೋದಲ್ಲಿ ಯಾರ್ಯಾರ ಹೆಸರು ಹೇಳಿದ್ದಾನೋ ಅವರೆಲ್ಲರನ್ನು ಸಿಬಿಐ ಡ್ರಿಲ್ ಮಾಡಲಿದೆ. ಇದೇ ಅಸ್ತ್ರ ಮುಂದಿಟ್ಟುಕೊಂಡು ದೋಸ್ತಿ ಸರ್ಕಾರ ಉರುಳಿಸಲು ಮೋದಿ ಸರ್ಕಾರ ಪ್ಲಾನ್ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

  • ಐಎಂಎ ಹಗರಣ – ವಿಚಾರಣೆಗೆ ಹಾಜರಾಗುವಂತೆ ಜಮೀರ್‌ಗೆ  ಇಡಿ ನೋಟಿಸ್

    ಐಎಂಎ ಹಗರಣ – ವಿಚಾರಣೆಗೆ ಹಾಜರಾಗುವಂತೆ ಜಮೀರ್‌ಗೆ ಇಡಿ ನೋಟಿಸ್

    ಬೆಂಗಳೂರು: ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಪರವಾಗಿ ಮಾತನಾಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಜು.7ರ ಒಳಗಡೆ ವಿಚಾರಣೆಗೆ ಹಾಜರಾಗುವಂತೆ ಇಡಿ(ಜಾರಿ ನಿರ್ದೇಶನಾಲಯ) ಸಮನ್ಸ್ ಜಾರಿ ಮಾಡಿದೆ.

    ಈ ಬಗ್ಗೆ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿ, ಜಾರಿ ನಿರ್ದೇಶನಾಲಯ ಜುಲೈ 7ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿರುವುದು ನಿಜ, ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.

    ಜು.7ರೊಳಗೆ ವಿವರ ನೀಡುವಂತೆ ಜಾರಿ ನಿರ್ದೇಶನಾಲಯದ ನೋಟಿಸಿನಲ್ಲಿ ತಿಳಿಸಲಾಗಿದೆ. ಈ ಕುರಿತು ಇಡಿಗೆ ಮಾಹಿತಿ ನೀಡುತ್ತೇನೆ. ಇದನ್ನೇ ಮಾಧ್ಯಮದವರು ದೊಡ್ಡದು ಮಾಡುತ್ತಿದ್ದಾರೆ. ರಿಚ್ಮಂಡ್ ಟೌನ್‍ನಲ್ಲಿ ಖರೀದಿಸಿದ ಎರಡು ಪ್ರಾಪರ್ಟಿ ಕುರಿತು ಮಾಹಿತಿ ಕೇಳಿದ್ದಾರೆ. ಈ ಪ್ರಾಪರ್ಟಿ ಖರೀದಿಸಲು 2 ಕೋಟಿ ರೂ. ಮುಂಗಡ ಹಣ ಪಾವತಿಸಿ ಜೂನ್‍ನಲ್ಲಿ ನೋಂದಾಯಿಸಿಕೊಂಡಿದ್ದೇನೆ. ಈ ಕುರಿತು ಮಾಧ್ಯಮಗಳಿಗೂ ವಿವರ ನೀಡಿದ್ದೇನೆ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

    ಇಡಿ ಸಮನ್ಸ್ ನೀಡಿರುವುದೂ ಇದೇ ಕಾರಣಕ್ಕೆ. ಮುಂದಿನ ತಿಂಗಳು ವಿಚವಾರಣೆಗೆ ಹಾಜರಾಗಿ ಮಾಹಿತಿ ನೀಡುತ್ತೇನೆ. ಸಮನ್ಸ್ ಬರುವ ಕುರಿತು ನನಗೆ ನಿರೀಕ್ಷೆ ಇತ್ತು. ಅದರಂತೆ ಇಂದು ಬಂದಿದೆ. ಸೂಕ್ತ ದಾಖಲೆಗಳೊಂದಿಗೆ ಉತ್ತರಿಸುತ್ತೇನೆ. ಮನ್ಸೂರ್ ಖಾನ್ ಬರಬೇಕು. ರಾಜಕಾರಣಿಗಳಿಗೆ ದುಡ್ಡು ನೀಡಿದ್ದೇನೆ ಎನ್ನುತ್ತಾರೆ. ಈ ಕುರಿತು ಯಾರು ದುಡ್ಡು ಪಡೆದಿದ್ದಾರೆ. ಯಾರಿಗೆ ದುಡ್ಡು ನೀಡಬೇಕು ಎಂಬುದರ ಸಂಪೂರ್ಣ ಮಾಹಿತಿ ನೀಡಿದರೆ ಸಮಸ್ಯೆ ಬಗೆಹರಿಸಬಹುದು ಎಂದು ಜಮೀರ್ ತಿಳಿಸಿದ್ದಾರೆ.

    ಎಸ್‍ಐಟಿ ತನಿಖೆಯಿಂದ ಪ್ರಕರಣ ಇತ್ಯರ್ಥವಾಗದಿದ್ದಲ್ಲಿ ಸಿಬಿಐಗೆ ವಹಿಸುವಂತೆ ನಾನೇ ಮನವಿ ಮಾಡುತ್ತೇನೆ. ಇಡಿ ಈಗಾಗಲೇ ತನಿಖೆ ನಡೆಸುತ್ತಿದೆ. ಈ ವರೆಗೆ ಎಸ್‍ಐಟಿಯಿಂದ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ನಾನು ಎಲ್ಲ ರೀತಿಯ ಐಟಿ ಫೈಲ್ ಮಾಡಿದ್ದೇನೆ. ಯಾವುದೇ ತೊಂದರೆ ಇಲ್ಲ. ಎಸ್‍ಐಟಿ, ಇಡಿ, ಸಿಬಿಐ ಯಾವ ತನಿಖೆಯನ್ನಾದರೂ ನಡೆಸಲಿ ಒಟ್ಟಿನಲ್ಲಿ ಬಡವರಿಗೆ ನ್ಯಾಯ ಸಿಗಬೇಕು ಎಂದು ಜಮೀರ್ ಹೇಳಿದರು.

  • ಮೂರ್ನಾಲ್ಕು ದಿನದಲ್ಲಿ ಖಾಕಿ ವಶಕ್ಕೆ ಮನ್ಸೂರ್ ಖಾನ್?

    ಮೂರ್ನಾಲ್ಕು ದಿನದಲ್ಲಿ ಖಾಕಿ ವಶಕ್ಕೆ ಮನ್ಸೂರ್ ಖಾನ್?

    ಬೆಂಗಳೂರು: ನಗರದ ಪೊಲೀಸರು ಭರ್ಜರಿ ಬೇಟೆಗೆ ಕೌಂಟ್‍ಡೌನ್ ಶುರು ಮಾಡಿದ್ದಾರೆ. ಐಎಂಎ ಮಾಲೀಕ ಮನ್ಸೂರ್ ಖಾನ್ ಜೊತೆ ಪೊಲೀಸರು ಸಂಪರ್ಕ ಸಾಧಿಸಿದ್ದು, ಮೂರ್ನಾಲ್ಕು ದಿನದಲ್ಲಿ ಐಎಂಎ ವಂಚಕ ಮನ್ಸೂರ್ ಖಾನ್ ನನ್ನು ವಶಕ್ಕೆ ಪಡೆಯಲಿದ್ದಾರೆ. ಇನ್ನೊಂದು ವಾರದಲ್ಲಿ ಐಎಂಎ ವಂಚಕನನ್ನ ಬೆಂಗಳೂರಿಗೆ ಕರೆತರಲು ಪೊಲೀಸರು ಪ್ಲಾನ್ ಮಾಡಿದ್ದಾರೆ ಎಂಬುದಾಗಿ ಪಬ್ಲಿಕ್ ಟಿವಿಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

    ಅರಬ್ ದೇಶದ ರಾಸ್-ಅಲ್-ಖೈಮಾ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿರುವ ಬೆಂಗಳೂರು ಪೊಲೀಸರು ಕಾನೂನು ಪ್ರಕ್ರಿಯೆ ಮುಗಿದ್ರೆ ಇನ್ನೊಂದೆ ಒಂದು ವಾರದಲ್ಲಿ ಬೆಂಗಳೂರಿಗೆ ಕರೆತರಲಿದ್ದಾರೆ. ಹೆಚ್ಚಿನ ಕಾನೂನು ಪ್ರಕ್ರಿಯೆ ಇಲ್ಲದೆ ನೇರವಾಗಿ ಡಿಪೋರ್ಟ್ ಮಾಡಲು ತಯಾರಿ ನಡೆಸಲಾಗಿದೆ. ಇಬ್ಬರು ಅಧಿಕಾರಗಳ ಜೊತೆ ಕೂರಿಸಿ ಮನ್ಸೂರ್ ಅನ್ನು ಬೆಂಗಳೂರಿಗೆ ಕರೆತರಲು ಸಿದ್ಧತೆ ನಡೆಸಲಾಗಿದೆ.

    ಸಂಸತ್ತಿನಲ್ಲಿ ಐಎಂಎ ದೋಖಾ ಪ್ರಕರಣ ಪ್ರಸ್ತಾಪವಾಗುತ್ತಿದ್ದಂತೆಯೇ ಚುರುಕಾದ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಅರಬ್ ದೇಶದ ರಾಸ್ ಆಲ್ ಖೈಮಾದಲ್ಲಿರುವ ಮನ್ಸೂರ್‍ಖಾನ್‍ನನ್ನು ಭಾರತಕ್ಕೆ ಕರೆತರುವ ರಾಜತಾಂತ್ರಿಕ ಪ್ರಕ್ರಿಯೆಗಳನ್ನು ಶುರು ಮಾಡಿತು. ಜೊತೆಗೆ ಮನ್ಸೂರ್ ಖಾನ್ ಇತ್ತೀಚಿಗಷ್ಟೇ ವಿಡಿಯೋ ಅಪ್‍ಲೋಡ್ ಮಾಡಿ ತಮ್ಮ ಪ್ರಾಣಕ್ಕೆ ಸಂಚಕಾರ ಎದುರಾಗುವ ಸಾಧ್ಯತೆ ಇದ್ದು, ತನ್ನ ರಕ್ಷಣೆಗೆ ನಿಂತರೆ ಬೆಂಗಳೂರಿಗೆ ಬರೋದಾಗಿ ಘೋಷಿಸಿದ್ದನು.

    ತನ್ನನ್ನು ವಾಟ್ಸಪ್ ನಂಬರ್ ಮೂಲಕ ಸಂಪರ್ಕಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್‍ಗೆ ಮನವಿ ಮಾಡಿದ್ದನು. ಕಳೆದ ಹದಿನೈದು ದಿನದ ಹಿಂದೆಯೇ ಪಬ್ಲಿಕ್ ಟಿವಿ, ರಾಸ್ ಆಲ್ ಖೈಮಾದಲ್ಲಿ ಮನ್ಸೂರ್ ಖಾನ್ ತಲೆ ಮರೆಸಿಕೊಂಡಿರುವ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು. ಮನ್ಸೂರ್‍ಖಾನ್‍ರನ್ನು ಬೆಂಗಳೂರಿಗೆ ಕರೆ ತಂದರೆ ದೊಡ್ಡ ದೊಡ್ಡವರ ಮತ್ತಷ್ಟು ಜಾತಕ ಬಯಲಾಗೋದ್ರಲ್ಲಿ ಯಾವುದೇ ಸಂಶಯ ಇಲ್ಲ.

  • ಎಸ್ಕೇಪ್ ಮುನ್ನ 3ನೇ ಹೆಂಡ್ತಿಗೆ ಮರು ಮದುವೆ – ಐಎಂಎನಲ್ಲಿ ಮತ್ತಷ್ಟು ಚಿನ್ನ, ಗನ್ ಪತ್ತೆ

    ಎಸ್ಕೇಪ್ ಮುನ್ನ 3ನೇ ಹೆಂಡ್ತಿಗೆ ಮರು ಮದುವೆ – ಐಎಂಎನಲ್ಲಿ ಮತ್ತಷ್ಟು ಚಿನ್ನ, ಗನ್ ಪತ್ತೆ

    ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಹಾರಿರುವ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾಗುವ ಮುನ್ನ ಮಹಾನ್ ಕಾರ್ಯವನ್ನು ಮಾಡಿದ್ದು, ತನ್ನ ಮೂರನೇ ಹೆಂಡತಿಗೆ ಮರುಮದುವೆ ಮಾಡಿ ಸೂರು ಕಲ್ಪಿಸಿದ್ದಾನೆ.

    ಮನ್ಸೂರ್ ಖಾನ್ ಮೂರನೇ ಹೆಂಡತಿ ತನ್ನ ಮೊದಲ ಗಂಡನನ್ನು ಬಿಟ್ಟು ಬಂದಿದ್ದಳು. ಆದರೆ ದಿನ ಕಳೆಯುತ್ತಾ ಅದೇನಾಯಿತೋ, ವಿದೇಶಕ್ಕೆ ಹಾರುವ ಮುನ್ನ ತನ್ನ ಮೂರನೇ ಹೆಂಡತಿಗೆ ಆಕೆಯ ಮೊದಲ ಗಂಡನ ಜೊತೆಗೆ ತಿಂಗಳ ಹಿಂದಷ್ಟೇ ವಿವಾಹ ಮಾಡಿಸಿದ್ದಾನೆ.

    ಇತ್ತ ಮನ್ಸೂರ್ ಖಾನ್ 2ನೇ ವಿಡಿಯೋ ಆಧಾರವಾಗಿಟ್ಟುಕೊಂಡು ಜಾಲಾಡಿದ ಪೊಲೀಸರಿಗೆ ಮತ್ತಷ್ಟು ಚಿನ್ನಾಭರಣ, ಹಣ ಮತ್ತು ಗನ್ ಪತ್ತೆಯಾಗಿದೆ. ಹೂಡಿಕೆದಾರರ ಮನಸ್ಸಲ್ಲಿ ಒಳ್ಳೆಯವನಾಗಲು 2ನೇ ವಿಡಿಯೋ ಬಿಡುಗಡೆ ಮಾಡಿದ್ದ ಮನ್ಸೂರ್ ಖಾನ್, ಡೈರೆಕ್ಟರ್ಸ್ ಹಾಗೂ ಸಂಬಂಧಿಗಳು ಚಿನ್ನ ಸಾಗಿಸಿದ್ದಾರೆ ಎಂದು ವಿಡಿಯೋದಲ್ಲಿ ಆರೋಪ ಮಾಡಿದ್ದ. ಇದರಿಂದ ಪುನಃ ಐಎಂಎ ಜ್ಯುವೆಲರ್ಸ್ ಮಳಿಗೆ ಜಾಲಾಡಿ ಪೊಲೀಸರಿಗೆ ಮತ್ತಷ್ಟು ಚಿನ್ನ ಹಾಗೂ ಗನ್ ಪತ್ತೆಯಾಗಿದೆ.

    ಇತ್ತ ಎಸ್‍ಐಟಿ ತಂಡದ ವಿಚಾರಣೆ ವೇಳೆ ಮನ್ಸೂರ್ ಖಾನ್ ಬಗ್ಗೆ ಐಎಂಎ ಡೈರೆಕ್ಟರ್ಸ್ ಗೌಪ್ಯತೆ ಕಾಪಾಡಿದ್ದರು ಎನ್ನಲಾಗಿದೆ. ಆದರೆ ಮನ್ಸೂರ್ ಖಾನ್ ಅವರ ಮೇಲೆಯೇ ಆರೋಪ ಮಾಡಿದ್ದ. ಈ ವಿಡಿಯೋವನ್ನ ಪೊಲೀಸರು ಡೈರೆಕ್ಟರ್ಸ್ ಮುಂದೇ ಇಟ್ಟಿದ್ದರು. ವಿಡಿಯೋ ನೋಡಿದ ಡೈರೆಕ್ಟರ್ಸ್ ಐಎಂಎ ಜ್ಯುವೆಲರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದರು. ಈ ವೇಳೆ ಮಾಹಿತಿ ಪಡೆದು ದಾಳಿ ನಡೆಸಿದ ಎಸ್‍ಐಟಿ ಅಧಿಕಾರಿಗಳಿಗೆ ಮತ್ತಷ್ಟು ಚಿನ್ನ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

  • ಐಎಂಎ ವಂಚನೆಯಲ್ಲಿ ಸರ್ಕಾರದ ಮಂತ್ರಿಗಳು, ಶಾಸಕರು ಭಾಗಿ – ಅಶ್ವತ್ಥನಾರಾಯಣ

    ಐಎಂಎ ವಂಚನೆಯಲ್ಲಿ ಸರ್ಕಾರದ ಮಂತ್ರಿಗಳು, ಶಾಸಕರು ಭಾಗಿ – ಅಶ್ವತ್ಥನಾರಾಯಣ

    ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಸರ್ಕಾರದ ಮಂತ್ರಿಗಳು, ಶಾಸಕರು ಭಾಗಿಯಾಗಿದ್ದಾರೆ. ಹೀಗಾಗಿ ಈ ಹಗರಣವನ್ನು ಸಿಬಿಐಗೆ ನೀಡಬೇಕೆಂದು ಮಲ್ಲೇಶ್ವರ ಶಾಸಕ ಡಾ.ಅಶ್ವತ್ಥನಾರಾಯಣ ಅವರು ಆಗ್ರಹಿಸಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಎಂಎ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದರೂ, ಎಸ್‍ಐಟಿಗೆ ವಹಿಸಲಾಗಿದೆ. 2019ರಿಂದಲೇ ಈ ಸಂಸ್ಥೆಯ ವಂಚನೆ ಬಗ್ಗೆ ರಿಸರ್ವ್ ಬ್ಯಾಂಕ್ ನೇರವಾಗಿ ಸರ್ಕಾರ ಹಾಗೂ ವಿವಿಧ ತನಿಖಾ ಸಂಸ್ಥೆಗಳ ಗಮನಕ್ಕೆ ತಂದು ಎಚ್ಚರಿಕೆ ನೀಡುತ್ತಲೇ ಇದೆ. ಆದರೆ ಆರ್ಥಿಕ ಇಲಾಖೆ ಶಿಫಾರಸ್ಸಿನಂತೆ ಸಿಐಡಿ ತನಿಖೆ ಮಾಡಿ ಐಎಂಎಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಆರೋಪಿಸಿದರು.

    ಐಎಂಎ ಸಂಸ್ಥೆ ಹೂಡಿಕೆದಾರ ಸಂಸ್ಥೆ ಎಂದು ಸರ್ಕಾರ ವಾದಿಸುತಿತ್ತು. ಆದರೆ ವಾಸ್ತವದಲ್ಲಿ ಐಎಂಎ ಬ್ಯಾಂಕಿಂಗ್ ವ್ಯವಹಾರವನ್ನೂ ನಡೆಸಿದ್ದು, ಅದಕ್ಕೆ ಪೂರಕ ದಾಖಲೆಗಳಿವೆ. ಆದರೂ ಸರ್ಕಾರ ಕೇವಲ ಕಂದಾಯ ಇಲಾಖೆ ಮತ್ತು ಕಾನೂನು ಇಲಾಖೆ ನಡುವೆ ಪತ್ರ ವ್ಯವಹಾರ ಮಾಡಿ ಸಮಯ ವ್ಯರ್ಥ ಮಾಡಿವೆ. ರಾಜ್ಯ ಸರ್ಕಾರದಿಂದಲೂ ಐಎಂಎಗೆ 600 ಕೋಟಿ ರೂ. ಸಾಲಕ್ಕೆ ಗ್ಯಾರಂಟಿ ಕೊಡಲು ಸಿದ್ದವಾಗಿತ್ತು ಎಂದು ಅಶ್ವತ್ಥ ನಾರಾಯಣ ಕಿಡಿ ಕಾರಿದ್ದಾರೆ.

    ಕಳ್ಳನಿಂದಲೇ ಕಳ್ಳತನ: ಮನ್ಸೂರ್ ಕಳ್ಳ ಅವನಿಂದಲೇ ಅಧಿಕಾರಿಗಳು ಹಾಗೂ ಸರ್ಕಾರದ ಪ್ರಮುಖರು ಕಳ್ಳತನ ಮಾಡಿದ್ದಾರೆ. ಐಎಂಎ ಕಂಪನಿಯದ್ದು ಶೇರ್ ಯೋಜನೆಯಲ್ಲ, ಅದು ಠೇವಣಿ ಯೋಜನೆ ಎಂಬುದು ಖಚಿತವಾಗಿದೆ. ಐಎಂಎ ಸಂಸ್ಥೆ ವಾರ್ಷಿಕ ಲೆಕ್ಕ ತಪಾಸಣೆ ಹಾಗೂ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿ ಎಷ್ಟೋ ವರ್ಷಗಳಾಗಿವೆ. ಮನ್ಸೂರ್ ಖಾನ್ ಯಾವ ದೇಶದಲ್ಲಿದ್ದಾನೆ ಎಂಬುದೇ ಸರ್ಕಾರಕ್ಕೆ ಇನ್ನೂ ಖಚಿತವಿಲ್ಲ. ಅಲ್ಲದೆ, ಅವನನ್ನು ಬೆಂಗಳೂರಿಗೆ ಕರೆತರುವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದರು.

    ಸರ್ಕಾರದಿಂದಲೇ ರಕ್ಷಣೆ: ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖರ ರಕ್ಷಣೆಗೆ ಸರ್ಕಾರ ಪ್ರಯತ್ನಿಸುತ್ತಿದ್ದು, ಎಸ್‍ಐಟಿ ತನಿಖೆಯಿಂದ ಪ್ರಯೋಜನವಿಲ್ಲ. ಹೀಗಾಗಿ ಸಿಬಿಐ ತನಿಖೆಯೇ ಆಗಬೇಕು. ಐಎಂಎ ಪ್ರಕರಣದಲ್ಲಿ ಸರ್ಕಾರವೇ ಭಾಗಿಯಾಗಿದ್ದು, ಸಚಿವರು, ಶಾಸಕರು ಶಾಮೀಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‍ಐಟಿ ತನಿಖೆಯಿಂದ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಎಸ್‍ಐಟಿ ಮೂಲಕ ಸಾಕ್ಷ್ಯ ನಾಶಕ್ಕೂ ಪ್ರಯತ್ನಗಳು ನಡೆಸಬಹುದು. ಹೀಗಾಗಿ ಸಾಕ್ಷ್ಯ ನಾಶದ ಭೀತಿ ಇದೆ ಎಂದು ಶಾಸಕ ಅಶ್ವಥನಾರಾಯಣ ಅನುಮಾನ ವ್ಯಕ್ತಪಡಿಸಿದರ

  • ಮನ್ಸೂರ್ ಖಾನ್ ಜೊತೆ ಸಂಬಂಧವಿಲ್ಲ – ರೆಹಮಾನ್ ಖಾನ್ ಸ್ಪಷ್ಟನೆ

    ಮನ್ಸೂರ್ ಖಾನ್ ಜೊತೆ ಸಂಬಂಧವಿಲ್ಲ – ರೆಹಮಾನ್ ಖಾನ್ ಸ್ಪಷ್ಟನೆ

    ಬೆಂಗಳೂರು: ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ ಯಾಕೆ ನನ್ನ ಹೆಸರು ಹೇಳಿದ್ದಾನೋ ಗೊತ್ತಿಲ್ಲ. ವೈಯಕ್ತಿಕವಾಗಿ ಆ ವ್ಯಕ್ತಿ ಜೊತೆ ನಂಗೆ ಯಾವುದೇ ಸಂಬಂಧ ಇಲ್ಲ ಎಂದು ಮಾಜಿ ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಮುಖಂಡ ರೆಹಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.

    ಭಾನುವಾರ ವಿಡಿಯೋ ರಿಲೀಸ್ ಮಾಡಿದ್ದ ಮನ್ಸೂರ್ ಖಾನ್, ರೆಹಮಾನ್ ಖಾನ್ ಹೆಸರನ್ನ ಪ್ರಸ್ತಾಪಿಸಿದ್ದನು. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೆಹಮಾನ್, ನನಗೂ ಅವನಿಗೂ ಏನೂ ಸಂಬಂಧವಿಲ್ಲ. ಒಂದು ಬಾರಿ ನಾನಿದ್ದಲ್ಲಿಗೆ ರೋಷನ್ ಬೇಗ್ ಅವರು ಭೇಟಿಯಾಗಲೆಂದು ಕರೆದುಕೊಂಡು ಬಂದಿದ್ದರು ಅಷ್ಟೇ ಎಂದು ತಿಳಿಸಿದರು.

    ಐಎಂಎ ಕಂಪನಿ ಸರಿಯಿಲ್ಲ ಎಂದು ಜನಕ್ಕೆ ಹೇಳುತ್ತಿದ್ದೆವು. ಅದಕ್ಕೆ ನನ್ನ ಹೆಸರು ಬಳಸಿರಬಹುದು. ಲಂಚ ಕೊಟ್ಟು ಐಎಂಎ ಕಟ್ಟಬೇಕು ಎಂದು ಹೇಳಿದವರು ಯಾರು? ಮನ್ಸೂರ್ ಭಾರತಕ್ಕೆ ಬರಲಿ, ಪೊಲೀಸ್ ರಕ್ಷಣೆ ಕೊಡುತ್ತಾರೆ. ಎಸ್‍ಐಟಿ ಪೊಲೀಸರ ತನಿಖೆ ವೇಳೆ ವಿಚಾರಣೆಗೆ ಕರೆದರೆ ನಾನು ಹೋಗ್ತೀನಿ ಎಂದು ತಿಳಿಸಿದರು.

    ಮನ್ಸೂರ್ ಖಾನ್ ಎಲ್ಲಿದ್ದರೂ ವಾಪಸ್ಸು ಬಾ, ಜನರಿಗೆ ಎಷ್ಟು ಹಣ ಕೊಡೋಕೆ ಸಾಧ್ಯನೋ ಅಷ್ಟು ಹಣ ವಾಪಸ್ಸು ಕೊಡು ಎಂದು ಇದೇ ವೇಳೆ ರೆಹಮಾನ್ ಖಾನ್ ಮನವಿ ಮಾಡಿದ್ದಾರೆ.

  • ನಿಜವಾಯ್ತು ಮನ್ಸೂರ್ ಖಾನ್ ಬಗ್ಗೆ ಪಬ್ಲಿಕ್ ಟಿವಿ ಸಿಡಿಸಿದ ಸ್ಫೋಟಕ ಸುದ್ದಿ

    ನಿಜವಾಯ್ತು ಮನ್ಸೂರ್ ಖಾನ್ ಬಗ್ಗೆ ಪಬ್ಲಿಕ್ ಟಿವಿ ಸಿಡಿಸಿದ ಸ್ಫೋಟಕ ಸುದ್ದಿ

    ಬೆಂಗಳೂರು: ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಎಲ್ಲಿದ್ದಾನೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದ್ದ ಸುದ್ದಿ ನಿಜವಾಗಿದೆ.

    ಮನ್ಸೂರ್ ಖಾನ್ ವಿಮಾನದ ಮೂಲಕ ರಸ್-ಅಲ್-ಖೈಮಾ ಹೋಗಿದ್ದನು. ಈ ಎಲ್ಲ ಮಾಹಿತಿಯನ್ನು ಪೊಲೀಸ್ ಮೂಲಗಳಿಂದ ಖಚಿತಪಡಿಸಿಕೊಂಡು ಜೂನ್ 18 ರಂದೇ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಈಗ ಮನ್ಸೂರ್ ಖಾನ್ ವಿದೇಶದಲ್ಲಿದ್ದುಕೊಂಡೇ ವಿಡಿಯೋ ರಿಲೀಸ್ ಮಾಡಿ ಸ್ಫೋಟಕ ಮಾಹಿತಿಗಳನ್ನು ತಿಳಿಸಿದ್ದಾನೆ.

    ಆರೋಪಿ ಮನ್ಸೂರ್ ಖಾನ್ ಬಗ್ಗೆ ರಾ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಅವನು ಎಲ್ಲೂ ಪರಾರಿಯಾಗುತ್ತಿಲ್ಲ, ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವ ಪ್ರಯತ್ನ ಕೂಡ ಮಾಡುತ್ತಿಲ್ಲ. ಸದ್ಯದಲ್ಲಿಯೇ ಬೆಂಗಳೂರಿಗೆ ಕರೆತರಲು ತಯಾರಿ ನಡೆದಿದೆ. ಪೊಲೀಸರು ಬ್ಲೂಕಾರ್ನರ್ ನೋಟೀಸ್ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

    ಮನ್ಸೂರ್ ಖಾನ್ ಮಾತನಾಡುತ್ತಿರುವ ವಿಡಿಯೋ ರಿಲೀಸ್ ಇಂದು ಆಗಿದ್ದು, ಈ ವಿಡಿಯೋದಲ್ಲಿ ತನ್ನ ಸಂಸ್ಥೆಯನ್ನು ಮುಚ್ಚಲು ಪ್ರಯತ್ನ ಪಟ್ಟಿದ್ದಕ್ಕೆ ರಾಜಕಾರಣಿಗಳು, ಉದ್ಯಮಿಗಳಿಗೆ ಮನ್ಸೂರ್ ಧನ್ಯವಾದ ತಿಳಿಸಿದ್ದಾನೆ.

    ವಿಡಿಯೋದಲ್ಲಿ ಹೇಳಿದ್ದೇನು?
    ರಾಜ್ಯಸಭಾ ಮಾಜಿ ಸದಸ್ಯ ರೆಹಮಾನ್ ಖಾನ್, ಮೊಹಮದ್ ಉಬೇದುಲ್ಲಾ ಶರೀಫ್, ಪಾಸ್‍ಬನ್ ಪತ್ರಿಕೆ ಸಂಪಾದಕ ಶರೀಫ್, ಟಾಡಾ ಟೆರರಿಸ್ಟ್ ಮುಕ್ತಾರ ಅಹಮದ್, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ, ರಿಯಲ್ ಎಸ್ಟೇಟ್ ಉದ್ಯಮಿ ಫೈರೋಜ್ ಅಬ್ದುಲ್ಲಾ, ಪ್ರೆಸ್ಟೀಜ್ ಗ್ರೂಪ್ ಇರ್ಫಾನ್ ಸೇರಿ ನನ್ನನ್ನು ಮುಗಿಸಿದ್ದಾರೆ. ಐಎಂಎ ಮುಗಿಸಲು ಎಲ್ಲರೂ ಸಫಲರಾಗಿದ್ದಕ್ಕೆ ಅವರಿಗೆ ಧನ್ಯವಾದಗಳು.

    ರಾಜಕಾರಣಿಗಳು, ಹೂಡಿಕೆದಾರರು ನನ್ನ ಕುತ್ತಿಗೆ ಮೇಲೆ ಬಂದು ಕುಳಿತಿದ್ದರು. ಅವರಿಂದ ತಪ್ಪಿಸಿಕೊಳ್ಳಲು, ನನ್ನ ಸಹಾಯಕ್ಕೆ ಯಾರು ಇಲ್ಲದ ಕಾರಣ ನಾನು ಕುಟುಂಬದ ಜೊತೆ ಹೊರಡಬೇಕಾಯಿತು. ಜೂನ್ 24ರಂದು ಮರಳಿ ಬೆಂಗಳೂರಿಗೆ ಬರುವ ಪ್ಲಾನ್ ಮಾಡಿದ್ದೆ. ಆದರೆ ನನ್ನ ಪಾಸ್‍ಪೋರ್ಟ್, ಟಿಕೆಟ್ ತಡೆ ಹಿಡಿಯಲಾಯಿತು.

    ನಾನು ಭಾರತಕ್ಕೆ ಬಂದರೆ ಜೀವ ಬೆದರಿಕೆಯಿದೆ. ಪೊಲೀಸ್ ಕಸ್ಟಡಿಯಲ್ಲಿಯೇ ನನ್ನನ್ನು ಹೊಡೆದು ಹಾಕಲು ಕೆಲವರು ಸಂಚು ರೂಪಿಸಿದ್ದರು. ಹೀಗಾಗಿ ಕುಟುಂಬ ಸಮೇತ ಬೆಂಗಳೂರು ಬಿಟ್ಟು ಬಂದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೆ ನಾನು ಎದುರಿಸಲು ಸಿದ್ಧನಿದ್ದೇನೆ. ನಾನು ತಪ್ಪಿತಸ್ಥ ಎನ್ನುವುದಾದರೆ ನನ್ನ ಹಿಂದೆ ಅನೇಕರು ಇದ್ದಾರೆ. ಅವರಿಗೂ ಶಿಕ್ಷೆಯಾಗಲಿ ಎಂದು ಮನ್ಸೂರ್ ಖಾನ್ ಹೇಳಿದ್ದಾನೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]