Tag: Mansoor ali khan

  • ಬೆಳ್ಳಂಬೆಳಗ್ಗೆ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ

    ಬೆಳ್ಳಂಬೆಳಗ್ಗೆ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ

    ಬೆಂಗಳೂರು: ಬಹುಕೋಟಿ ಐಎಂಎ ಹಗರಣ ಪ್ರಕರಣದಲ್ಲಿ ಮಾಜಿ ಶಾಸಕ ರೋಷನ್ ಬೇಗ್ ಭಾನುವಾರ ತಡರಾತ್ರಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಂದು ಬೆಳಗ್ಗೆ ಸಿಬಿಐನ ಏಳು ಅಧಿಕಾರಿಗಳ ತಂಡ ರೋಷನ್ ಬೇಗ್ ನಿವಾಸದ ಮೇಲೆ ದಾಳಿ ನಡೆಸಿದೆ.

    ಐಎಂಎ ಕಂಪನಿಯ ಸಂಸ್ಥಾಪಕ ಮನ್ಸೂರ್ ಖಾನ್ ಒತ್ತಡದಿಂದಾಗಿ ಸಿಬಿಐ ಭಾನುವಾರ ಮಾಜಿ ಮಂತ್ರಿ, ಶಿವಾಜಿ ನಗರದ ಮಾಜಿ ಶಾಸಕ ರೋಷನ್ ಬೇಗ್ ಅವರನ್ನು ಬಂಧಿಸಿದೆ. ರೋಷನ್ ಬೇಗ್ ಅವರನ್ನು ಬಂಧಿಸಿದ ಸಿಬಿಐ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿದ್ದಾರೆ.

    ಬಂಧನ ಯಾಕೆ?
    ಈ ಹಿಂದೆ ಸಿಬಿಐ ಎರಡು ಬಾರಿ ನೋಟಿಸ್ ನೀಡಿ ರೋಷನ್ ಬೇಗ್ ಅವರನ್ನು ವಿಚಾರಣೆ ನಡೆಸಿತ್ತು. ಬಳಿಕ ಯಾವುದೇ ವಿಚಾರಣೆ ನಡೆಸಿರಲಿಲ್ಲ. ಇದನ್ನೂ ಓದಿ: ಐಎಂಎ ವಂಚನೆಗೆ ಸ್ಫೋಟಕ ತಿರುವು- ಮನ್ಸೂರ್‌ನನ್ನು ಸಚಿವ್ರ ಬಳಿ ಕರ್ಕೊಂಡು ಹೋಗಿದ್ದ ಬೇಗ್

    ಈ ನಡುವೆ ಮನ್ಸೂರ್ ಖಾನ್ ನಾನು ರೋಷನ್ ಬೇಗ್ ಅವರಿಗೆ ಹಣ ನೀಡಿದ್ದೇನೆ. ಈ ಹಣವನ್ನು ರೋಷನ್ ಬೇಗ್ ಅವರಿಂದ ಪಡೆಯಲೇಬೇಕು ಎಂದು ಹೇಳಿದ್ದಾನೆ. ಒಂದು ವೇಳೆ ಹಣವನ್ನು ಪಡೆಯದೇ ಇದ್ದರೆ ನಿಮ್ಮ ವಿರುದ್ಧವೇ ನ್ಯಾಯಾಧೀಶರಿಗೆ ದೂರು ನೀಡುತ್ತೇನೆ ಎಂದು ಮನ್ಸೂರ್ ಖಾನ್ ಸಿಬಿಐ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮನ್ಸೂರ್‌ ಖಾನ್‌ ಒತ್ತಡ – ರೋಷನ್‌ ಬೇಗ್‌ ಅರೆಸ್ಟ್‌, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

    ರೋಷನ್ ಬೇಗ್ ಅವರಿಗೆ ಮನ್ಸೂರ್ ಖಾನ್ 200 ಕೋಟಿ ಸೇರಿದಂತೆ ಐಷಾರಾಮಿ ಕಾರು, ಉಡುಗೊರೆ ನೀಡಿದ್ದ ಆರೋಪ ಈ ಪ್ರಕರಣ ಬೆಳಕಿಗೆ ಬಂದಾಗಲೇ ಬಂದಿತ್ತು. ಆದರೆ ಈಗ ಮನ್ಸೂರ್ ಖಾನ್ ಒತ್ತಡ ಹಾಕಿದ್ದ ಕಾರಣ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಮನೆಗೆ ತೆರಳಿ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸಂಜೆಯ ವೇಳೆ ಬಂಧಿಸಿದೆ.

  • 14 ದಿನಗಳ ನ್ಯಾಯಾಂಗ ಬಂಧನಕ್ಕೆ ಮನ್ಸೂರ್ ಖಾನ್

    14 ದಿನಗಳ ನ್ಯಾಯಾಂಗ ಬಂಧನಕ್ಕೆ ಮನ್ಸೂರ್ ಖಾನ್

    ಬೆಂಗಳೂರು: ಐಎಂಎ ವಂಚಕ ಮನ್ಸೂರ್ ಖಾನ್ ನನ್ನು 14 ದಿನಗಳ ನ್ಯಾಯಾಂಗ ಬಂಧನದಲ್ಲಿರಿಸುವಂತೆ ಸಿಸಿಎಚ್ 1 ನ್ಯಾಯಾಲಯ ಆದೇಶ ನೀಡಿದೆ.

    ಇಂದು ಮನ್ಸೂರ್ ಖಾನ್ ನನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಮನ್ಸೂರ್ ಖಾನ್‍ಗೆ ಎದೆನೋವು ಇದೆ. ಅಂಜಿಯೋಗ್ರಾಂ ಮಾಡಿಸಬೇಕಿದ್ದು, ಜಯದೇವ ಆಸ್ಪತ್ರೆ ಜೊತೆ ಎರಡನೇ ಒಪಿನಿಯನ್ (ಇನ್ನೊಂದು ಆಸ್ಪತ್ರೆಯ ವೈದ್ಯರ ಸಲಹೆ) ತೆಗೆದುಕೊಳ್ಳಬೇಕಿದೆ. ಸೂಕ್ತ ಚಿಕಿತ್ಸೆ ಸಿಗದಿದ್ದರೆ ಕಕ್ಷಿದಾರರ ಪ್ರಾಣಕ್ಕೆ ಅಪಾಯವಿದೆ ಎಂದು ಮನ್ಸೂರ್ ಖಾನ್ ಪರ ವಕೀಲರು ವಾದ ಮಂಡಿಸಿದ್ದರು.

    ನಮ್ಮ ಬಳಿ ಹಲವು ಸಾಕ್ಷ್ಯಾಧಾರಗಳಿದ್ದು, ಆನಾರೋಗ್ಯದ ನೆಪವೊಡ್ಡಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಜಯದೇವ ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಇಡಿ ಪರ ವಕೀಲರು ವಾದಿಸಿದ್ದರು. ಬಳಿಕ ಎಸ್‍ಐಟಿ ಪರ ವಕೀಲರು, ನ್ಯಾಯಾಂಗ ಬಂಧನಕ್ಕೆ ಕೊಟ್ಟರೂ ಯಾರೂ ಭೇಟಿಯಾಗದಂತೆ ಆದೇಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.

    ವಾದಗಳನ್ನು ಆಲಿಸಿದ ನ್ಯಾಯಾಲಯ, ಮನ್ಸೂರ್ ಖಾನ್ ನನ್ನು 14 ದಿನ ನ್ಯಾಯಾಂಗ ಬಂಧನದಲ್ಲಿರಿಸುವಂತೆ ಆದೇಶ ನೀಡಿತು. ನ್ಯಾಯಾಂಗ ಬಂಧನದಲ್ಲಿ ವಕೀಲರು ಹೊರತುಪಡಿಸಿ ಕುಟುಂಬಸ್ಥರು ಸೇರಿದಂತೆ ಬೇರೆ ಯಾರು ಭೇಟಿಯಾಗುವಂತಿಲ್ಲ. ಜಯದೇವ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಿ, ಅಂಜಿಯೋಗ್ರಾಂ ಬಗ್ಗೆ ಎರಡನೇ ಒಪಿನಿಯನ್ ಕೇಳಲು ನ್ಯಾಯಾಲಯ ಸೂಚಿಸಿದೆ. ಮನ್ಸೂರ್ ಖಾನ್ ವಿಕ್ಟೋರಿಯಾ ಆಸ್ಪತ್ರೆಯ ಚಿಕಿತ್ಸೆಗೆ ಮನ್ಸೂರ್ ಪರ ವಕೀಲರು ಮನವಿ ಮಾಡಿಕೊಂಡಿದ್ದರು.

  • ತನಿಖೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮನ್ಸೂರ್ ಖಾನ್

    ತನಿಖೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮನ್ಸೂರ್ ಖಾನ್

    ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಪ್ರಾಥಮಿಕ ತನಿಖೆ ವೇಳೆ ಸ್ಫೋಟಕ ಮಾಹಿತಿ ತಿಳಿಸಿದ್ದಾನೆ.

    ಜಾರಿ ನಿದೇಶನಾಲಯ(ಇಡಿ) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದ ವೇಳೆ ಪ್ರಕರಣದ ಕುರಿತು ಸ್ಫೋಟಕ ಮಾಹಿತಿಯನ್ನು ಮನ್ಸೂರ್ ಬಾಯ್ಬಿಟ್ಟಿದ್ದಾನೆ. ಈ ವೇಳೆ 1000ಕ್ಕೂ ಹೆಚ್ಚು ಕೋಟಿ ಮೌಲ್ಯದ ವ್ಯವಹಾರದ ರಹಸ್ಯ ವಿವರವನ್ನು ಇಡಿ ಅಧಿಕಾರಿಗಳು ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೆಲ ಪ್ರಭಾವಿಗಳ ಹೆಸರುಗಳನ್ನು ಕೂಡ ಮನ್ಸೂರ್ ಪ್ರಸ್ತಾಪಿಸಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಪ್ರಭಾವಿಗಳ ಜೊತೆಗಿನ ನಂಟು ಹಾಗೂ ಪ್ರಭಾವಿಗಳಿಗೆ ಹಂಚಿಕೆಯಾಗಿರುವ ಐಎಂಎನ ಲಾಭಾಂಶದ ಕುರಿತು ಮನ್ಸೂರ್ ಬಾಯ್ಬಿಟ್ಟಿದ್ದಾನೆ. ಮನ್ಸೂರ್ ಗೆ ಜೀವ ಬೆದರಿಕೆ ಇರುವ ಹಿನ್ನೆಲೆ ಆತನಿಗೆ ಹೈ ಸೆಕ್ಯುರಿಟಿ ನೀಡಲಾಗಿದೆ. ಹೀಗಾಗಿ ಖಾನ್ ಗೆ ರಾತ್ರಿಯಿಡಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಸದ್ಯ ಶಾಂತಿನಗರದ ಇಡಿ ಕಚೇರಿಯಲ್ಲಿ ಮನ್ಸೂರ್ ನನ್ನು ಇಡಿ ಅಧಿಕಾರಿಗಳು ಇರಿಸಿದ್ದಾರೆ.

    ಶನಿವಾರ ಬೆಂಗಳೂರಿನ ಶಾಂತಿ ನಗರದಲ್ಲಿರುವ ಇಡಿ ಕಚೇರಿಗೆ ಕರೆತಂದ ಬಳಿಕ ಸಿವಿಲ್ ಕೋರ್ಟ್ ಗೆ ಇಡಿ ಅಧಿಕಾರಿಗಳು ಹಾಜರುಪಡಿಸಿದ್ದರು. ಹಲವು ವಿಷಯಗಳ ಕುರಿತು ವಿಚಾರಣೆ ನಡೆಸಬೇಕಿದೆ. ಆದ್ದರಿಂದ 15 ದಿನಗಳ ಕಾಲ ವಶಕ್ಕೆ ನೀಡಿ ಅಂತ ಇಡಿ ಕೇಳಿತು. ಆದರೆ, ಕೇವಲ 3 ದಿನಗಳಿಗೆ ಮಾತ್ರ ನೀಡೋದಾಗಿ ಜಡ್ಜ್ ಆದೇಶಿಸಿದರು. ಹೀಗಾಗಿ ಖಾನ್‍ನನ್ನು 3 ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.

    ಐಎಂಎ ಕಚೇರಿ ಸೇರಿದಂತೆ ಮನ್ಸೂರ್ ಖಾನ್ ಮನೆ ಮೇಲೆ ದಾಳಿ ನಡೆಸಿದ ವೇಳೆ ಲಭ್ಯವಾದ ಆಸ್ತಿಪಾಸ್ತಿ, ಚಿನ್ನಾಭರಣಗಳು, ದಾಖಲೆಗಳ ಕುರಿತು ಇಡಿ ವಿಚಾರಣೆ ನಡೆಸುತ್ತಿದೆ. ಇನ್ನೊಂದೆಡೆ, ಎಸ್‍ಐಟಿ ಹಾಗೂ ತೆಲಂಗಾಣ ಪೊಲೀಸರು ಕೂಡ ಮನ್ಸೂರ್ ನನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ.

    ವಂಚನೆ ಎಸಗಿ ಮನ್ಸೂರ್ ಖಾನ್ ದುಬೈಗೆ ತೆರಳಿದ್ದ. ಈತನ ಚಲನವಲನಗಳ ಕಣ್ಣಿಟ್ಟಿತ್ತ ಎಸ್‍ಐಟಿ ಭಾರತಕ್ಕೆ ಬರುವಂತೆ ಹೇಳಿತ್ತು. ಅಲ್ಲದೇ ರಕ್ಷಣೆ ನೀಡಲಾಗುವುದು ಎಂದು ಎಸ್‍ಐಟಿ ಹೇಳಿತ್ತು. ದುಬೈನಿಂದ ದೆಹಲಿಗೆ ಬಂದಿಳಿದ ಮನ್ಸೂರ್ ಖಾನ್‍ನನ್ನು ಗುರುವಾರ ಮಧ್ಯರಾತ್ರಿ 1:50ರ ಸುಮಾರಿಗೆ ಬಂಧಿಸಲಾಗಿತ್ತು. ಮನ್ಸೂರ್ ಖಾನ್‍ನನ್ನು ಇ.ಡಿ ಅಧಿಕಾರಿಗಳು ವಿಚಾರಣೆ ಪೂರ್ಣಗೊಳಿಸಿದ ಬಳಿಕ ಎಸ್‍ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ.