Tag: Manohar Parikkar

  • ಗೋವಾದಿಂದ ಕರ್ನಾಟಕದ ಗಡಿ ಜನರಿಗೆ ಮತ್ತೊಂದು ಬಿಗ್ ಶಾಕಿಂಗ್ ನ್ಯೂಸ್!

    ಗೋವಾದಿಂದ ಕರ್ನಾಟಕದ ಗಡಿ ಜನರಿಗೆ ಮತ್ತೊಂದು ಬಿಗ್ ಶಾಕಿಂಗ್ ನ್ಯೂಸ್!

    ಕಾರವಾರ: ಕಾರವಾರ ಸೇರಿದಂತೆ ಕರ್ನಾಟಕದ ಬೇರೆ ಜಿಲ್ಲೆಯ ರೋಗಿಗಳಿಗೆ ಗೋವಾ ಸರ್ಕಾರ ಉಚಿತ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಶಾಕ್ ನೀಡಿದೆ.

    ಗೋವಾ ರಾಜ್ಯದ ನಾಲ್ಕು ಆಸ್ಪತ್ರೆಗಳಲ್ಲಿ ಜನವರಿ ಮೊದಲ ದಿನದಿಂದಲೇ ಶುಲ್ಕ ಪಡೆಯಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಪ್ರಮುಖವಾಗಿ ಕರ್ನಾಟಕದಿಂದ ಗೋವಾದ ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಾದ 80 ಜನ ಹೊರ ರೋಗಿಗಳನ್ನು ದಾಖಲಿಸಿಕೊಂಡಿದ್ದು, ಪ್ರತಿ ರೋಗಿಗಳಲ್ಲಿಯೂ ಶುಲ್ಕ ವಸೂಲಿ ಮಾಡಿದೆ. ಹೊರ ರಾಜ್ಯದಿಂದ ಬಂದ ರೋಗಿಗಳು ಇಷ್ಟು ಶುಲ್ಕ ಕಟ್ಟಲೇಬೇಕಾಗಿದೆ. ಹೊರ ರೋಗಿಗಳಾಗಿ ನೊಂದಾಯಿಸಿಕೊಳ್ಳಲು 50 ರೂ ಗಳಿಂದ 100 ರೂ ಗಳಿಗೆ ಹೆಚ್ಚಳ ಮಾಡಲಾಗಿದೆ.

    ತುರ್ತು ಪರಿಸ್ಥಿತಿಯಲ್ಲಿ ಬಂದವರೂ ಕಡ್ಡಾಯವಾಗಿ ಹಣ ಕಟ್ಟಬೇಕು. ಇನ್ನು ಉಚಿತ ಸೇವೆ ಪಡೆಯುತ್ತಿದ್ದ ಕರ್ನಾಟಕದ ಕಾರವಾರದ ಜನರಿಗೂ ಬಿಸಿ ತಟ್ಟಿದೆ. ಸ್ಕ್ಯಾನಿಂಗ್, ಇಸಿಜಿ ಸೇರಿದಂತೆ ಪ್ರಮುಖ ಸೇವೆಗಳಿಗೂ ಶುಲ್ಕ ವಿಧಿಸಲಾಗಿದೆ. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಕುಮಟಾ, ಜೋಯಿಡಾ, ಹಳಿಯಾಳ ಸೇರಿದಂತೆ ಕರ್ನಾಟಕದ ಗಡಿಭಾಗದ ಜನರು ಈ ಭಾಗದಲ್ಲಿ ವೈದ್ಯಕೀಯ ಸೇವೆ ಉತ್ತಮವಾಗಿರದ ಕಾರಣ ಗೋವಾ ರಾಜ್ಯದ ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯುತಿದ್ದರು. ಆದ್ರೆ ಗೋವಾ ಸರ್ಕಾರ ಹೊಸ ವರ್ಷದಲ್ಲಿಯೇ ಕರ್ನಾಟಕದ ಗಡಿಭಾಗದ ಜನರಿಗೆ ಮಹದಾಯಿ ನಂತರ ಮತ್ತೊಂದು ಶಾಕ್ ನೀಡಿದೆ.

    ಗೋವಾದಲ್ಲೇ ಯಾಕೆ ಚಿಕಿತ್ಸೆ?: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಭಾಗದ ಸರ್ಕಾರಿ ಆಸ್ಪತ್ರೆಯಲ್ಲಿ ಅಪಘಾತ ಹಾಗೂ ಕೆಲವು ರೋಗಗಳಿಗೆ ಚಿಕಿತ್ಸೆ ನೀಡಲು ಉಪಕರಣಗಳಾಗಲಿ ತಜ್ಞ ವೈದ್ಯರಾಗಲಿ ಇಲ್ಲ. ಇನ್ನು ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗಿಂತ ಕೆಳಮಟ್ಟದ ವೈದ್ಯಕೀಯ ಸೇವೆ ನೀಡುತ್ತಿವೆ. ಕಾರವಾರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಿದ್ದರೂ ಇರಬೇಕಾದ ಸವಲತ್ತುಗಳು ರೋಗಿಗಳಿಗೆ ಸಿಗುತ್ತಿಲ್ಲ. ಈ ಕಾರಣದಿಂದ ಈ ಭಾಗದ ಜನರು ನೆರೆಯ ಗೋವಾದ ಪಣಜಿಯಲ್ಲಿರುವ ಬಾಂಬೋಲಿಂ ಆಸ್ಪತ್ರೆಗೆ ಹೋಗುತ್ತಾರೆ.

    ಕರ್ನಾಟಕದಿಂದ ಗೋವಾ ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದಾಗಿ ಗೋವಾ ಜನರಿಗೆ ಆಸ್ಪತ್ರೆಯ ಸವಲತ್ತುಗಳು ಸಿಗುವುದರಲ್ಲಿ ತೊಂದರೆಯಾಗುತ್ತಿತ್ತು. ಅಲ್ಲದೇ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಇದನ್ನು ತಡೆಯಲು ಬಿಜೆಪಿ ನೇತೃತ್ವದ ಮನೋಹರ್ ಪರಿಕ್ಕರ್ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಕಳೆದ ಮೂರು ದಿನಗಳಿಂದ ಕರ್ನಾಟಕದಿಂದ ಹೊರ ರೋಗಿಗಳು ಹಾಗೂ ವಿವಿಧ ಶಸ್ತ್ರ ಚಿಕಿತ್ಸೆಗಾಗಿ ಬಂದವರಲ್ಲಿ ಶುಲ್ಕ ವಸೂಲಿ ಮಾಡಲಾಗಿದ್ದು, ಈಗಾಗಲೇ ಎರಡೂವರೆ ಲಕ್ಷ ರುಪಾಯಿಗಳು ಜಮಾ ಆಗಿದೆ ಎಂದು ಬಾಂಬೋಲಿಂ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ. ಶಿವಾನಂದ ಬಾಂದೇಕರ್ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪ್ರತಿಕ್ರಿಯಿಸಿದ್ದು, ಹೊರ ರಾಜ್ಯದಿಂದ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಾರವಾರ ಭಾಗದಿಂದ ಬರುವ ಅಪಘಾತ ಮತ್ತು ತುರ್ತು ಸೇವೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಮುಂದುವರೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.

    ನಿರ್ಣಯ ಮರು ಪರಿಶೀಲಿಸಿ: ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ಹೊರ ರಾಜ್ಯದಿಂದ ಬರುವ ರೋಗಿಗಳಿಗೆ ಎಲ್ಲಾ ವೈದ್ಯಕೀಯ ಸೇವೆಗಳಿಗೆ ಪ್ರತ್ಯೇಕ ಶುಲ್ಕ ಪಡೆಯುವ ನಿರ್ಣಯ ಹಿಂಪಡೆಯಬೇಕೆಂದು ಮನವಿ ಮಾಡಲಾಗಿದೆ. ಕಾರವಾರ, ಜೋಯಿಡಾ, ಮಹಾರಾಷ್ಟ್ರ, ಸಿಂಧುದುರ್ಗದ ಜನತೆಯ ವತಿಯಿಂದ ವಕೀಲ ಆರ್.ವಿ.ನಾಯ್ಕರವರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ವಿರೋಧ ಪಕ್ಷದ ನಾಯಕ ಚಂದ್ರಕಾಂತ್ ಕವಳೇಕರ್ ಈ ಮನವಿಯನ್ನು ಸಲ್ಲಿಸಿದ್ದಾರೆ.

  • ಮಹದಾಯಿ ವಿವಾದಕ್ಕೆ ಸ್ಫೋಟಕ ತಿರುವು- ಪರಿಕ್ಕರ್ ವಿರುದ್ಧವೇ ಬಿಎಸ್‍ವೈ ದೂರು

    ಮಹದಾಯಿ ವಿವಾದಕ್ಕೆ ಸ್ಫೋಟಕ ತಿರುವು- ಪರಿಕ್ಕರ್ ವಿರುದ್ಧವೇ ಬಿಎಸ್‍ವೈ ದೂರು

    ಬೆಂಗಳೂರು: ಮಹದಾಯಿ ವಿವಾದ ಇದೀಗ ಮತ್ತೊಂದು ಸ್ಫೋಟಕ ತಿರುವು ಪಡೆದುಕೊಂಡಿದ್ದು, ಗೋವಾ ಬಿಜೆಪಿ ಇಬ್ಬಗೆ ನೀತಿ ವಿರುದ್ಧ ಕರ್ನಾಟಕ ಬಿಜೆಪಿಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

    ಮಹದಾಯಿ ಕುರಿತು ಮಾತುಕತೆಗೆ ಒಪ್ಪಿ ಬರೆದಿರುವ ಪತ್ರದ ಬಗ್ಗೆ ಗೋವಾ ಬಿಜೆಪಿ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಇತ್ತ ಮಹದಾಯಿ ಭಾಗದ ರೈತರು ತಮ್ಮ ಹೋರಾಟ ತೀವ್ರಗೊಳಿಸಿದ್ದಾರೆ. ಗೋವಾ ಬಿಜೆಪಿಯ ಇಬ್ಬಗೆ ನೀತಿಯಿಂದ ಕರ್ನಾಟಕದಲ್ಲಿ ನಮ್ಮ ಇಮೇಜ್‍ಗೆ ಧಕ್ಕೆ ಆಗಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ.

    ಒಟ್ಟಿನಲ್ಲಿ ಮಹದಾಯಿ ವಿವಾದದ ಕುರಿತು ಮಾತುಕತೆ ಸಂಬಂಧ ಗೋವಾ ಸಿಎಂ ಮನೋಹರ್ ಪರಿಕ್ಕರ್‍ಗೆ ಸ್ಪಷ್ಟ ನಿರ್ದೇಶನ ನೀಡಿ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒತ್ತಾಯಿಸಿದ್ದಾರೆ. ಆದರೆ ಅಮಿತ್ ಶಾ ಅವರು ಗೋವಾ-ಕರ್ನಾಟಕ ಬಿಜೆಪಿ ನಡುವೆ ಸಂಧಾನದ ಭರವಸೆ ನೀಡಿಲ್ಲ ಎಂದು ವರದಿಯಾಗಿದೆ.

  • ಇಂದಿನಿಂದ ಮಹದಾಯಿ ನೀರಿನ ಚಿಂತೆಯನ್ನು ಬಿಟ್ಟು ಬಿಡಿ: ಬಿಎಸ್‍ವೈ

    ಇಂದಿನಿಂದ ಮಹದಾಯಿ ನೀರಿನ ಚಿಂತೆಯನ್ನು ಬಿಟ್ಟು ಬಿಡಿ: ಬಿಎಸ್‍ವೈ

    ಹುಬ್ಬಳ್ಳಿ: ಬೇರೆಯವರ ಮಾತಿಗೆ ನೀವು ಯಾರು ಕಿವಿಗೊಡಬೇಡಿ. ಕುಡಿಯಲು ನಾವು ಮಹದಾಯಿ ನೀರನ್ನು ತಂದೇ ತರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

    ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಹಲವು ಪ್ರಯತ್ನಗಳ ಫಲವಾಗಿ ಅಮಿತ್ ಶಾ ನೇತೃತ್ವದಲ್ಲಿ ಬುಧವಾರ ರಾಜ್ಯ ಬಿಜೆಪಿ ನಾಯಕರು ಮತ್ತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮಾತುಕತೆ ನಡೆಸಿದ್ದೇವೆ. ಕುಡಿಯುವ ನೀರನ್ನು ತರುವ ಜವಾಬ್ದಾರಿಯನ್ನು ನಾನು, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ತೆಗೆದುಕೊಳ್ಳುತ್ತೇವೆ. ಇಂದಿನಿಂದ ನೀರಿನ ಚಿಂತೆಯನ್ನು ಬಿಟ್ಟು ಬಿಡಿ ಎಂದು ಹೇಳಿದರು.

    ಪರಿಕ್ಕರ್ ಬರೆದ ಪತ್ರವನ್ನು ಇಟ್ಟುಕೊಂಡು ಯಾರೋ ಆಗದವರು ಹೀಗೆ ಮಾಡಿದ್ದಾರೆ. ನೀರನ್ನು ನಾನು ತಂದೆ ತರುವೆ. ಬೇರೆಯವರ ಮಾತಿಗೆ ಕಿವಿ ಗೊಡಬೇಡಿ. ನಾನು ಇಂದು ಹೇಳಿದ ಮಾತಿನಂತೆ ನೀರು ತಂದೆ ತರುವೆ. ಉತ್ತರ ಕರ್ನಾಟಕದ ಎಲ್ಲ ಕೆರೆಗಳ ನೀರು ತುಂಬಿಸುವ ಜವಾಬ್ದಾರಿ ನಮ್ಮದು ಎಂದು ಬಿಎಸ್‍ವೈ ಭರವಸೆ ನೀಡಿದರು. ಇದನ್ನೂ ಓದಿ: ಮಾತುಕತೆಗಷ್ಟೇ ಒಪ್ಪಿಗೆ, ನಮ್ಮ ಹಕ್ಕುಗಳಿಗೆ ತೊಂದರೆ ಆಗಬಾರದು ಪರಿಕ್ಕರ್ ಬರೆದ ಪತ್ರದಲ್ಲಿ ಏನಿದೆ?

    ನಾವು ಅಮಿತ್ ಶಾ ಸಮ್ಮುಖದಲ್ಲಿ ಒಂದು ಗಂಟೆ ಚರ್ಚೆ ಮಾಡಿದ್ದು ನ್ಯಾಯ ಒದಗಿಸಲು ನಾವು ಬದ್ಧರಾಗಿದ್ದೇವೆ. ನಮ್ಮೆಲ್ಲರ ಜವಾಬ್ದಾರಿಯನ್ನು ಪೂರ್ಣ ಮಾಡುತ್ತೇವೆ ಎನ್ನುವ ಭರವಸೆ ನೀಡುತ್ತೇವೆ. ನ್ಯಾಯಾಧಿಕರದಲ್ಲಿ ಸಮರ್ಪಕವಾದ ಮಾಹಿತಿ ಸಲ್ಲಿಸಿ ಅರ್ಜಿ ಹಾಕಿ ಮಹದಾಯಿ ನೀರನ್ನು ತರುತ್ತೇವೆ ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದರು.

    https://www.youtube.com/watch?v=TZ9qqTLPXD0

    https://www.youtube.com/watch?v=IgAGJ9tffNg

    https://www.youtube.com/watch?v=k8H4IP59_Sk

    https://www.youtube.com/watch?v=c5Mb4OAwpa8

     

  • ಮಹದಾಯಿ ವಿವಾದಕ್ಕೆ ಇಂದು ಬೀಳುತ್ತಾ ಬ್ರೇಕ್-ನೀರು ಹರಿಸಿದ್ರೆ ಗೋವಾ ಮೇಲಾಗುವ ಪರಿಣಾಮವೇನು?

    ಮಹದಾಯಿ ವಿವಾದಕ್ಕೆ ಇಂದು ಬೀಳುತ್ತಾ ಬ್ರೇಕ್-ನೀರು ಹರಿಸಿದ್ರೆ ಗೋವಾ ಮೇಲಾಗುವ ಪರಿಣಾಮವೇನು?

    ಬೆಂಗಳೂರು: ಎಲೆಕ್ಷನ್ ಹತ್ತಿರವಿರುವ ಹೊತ್ತಿನಲ್ಲಿ ಮುಂಬೈ ಕರ್ನಾಟಕದ ಮಂದಿಗೆ ಮಹಾ ಸಿಹಿ ಸುದ್ದಿ ಸಿಗ್ತಿದೆ. ಹುಬ್ಬಳ್ಳಿ ಭಾಗದ ಜನರ ದಶಕಗಳ ಹೋರಾಟಕ್ಕೆ ಇದೀಗ ಬೆಲೆ ಸಿಗುತ್ತಿದೆ. ಎಷ್ಟೇ ಪ್ರಯತ್ನಪಟ್ಟರೂ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗದ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿರುವಂತೆ ಕಾಣುತ್ತಿದೆ.

    ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಹುತೇಕ ಇತ್ಯರ್ಥವಾಗುವ ಮುನ್ಸೂಚನೆ ಸಿಕ್ಕಿದ್ದು, ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ನಾಯಕರು ಮಹದಾಯಿ ನದಿ ವಿವಾದ ಸಂಬಂಧ ಮಹತ್ವದ ಘೋಷಣೆ ಹೊರಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಒಂದು ವೇಳೆ ಗೋವಾದಿಂದ ಮಹದಾಯಿ ನೀರು ಬಂದರೂ ಅದಕ್ಕೆ ಕರ್ನಾಟಕ ಭಾರೀ ಮೊತ್ತವನ್ನು ವ್ಯಯಿಸಬೇಕಾಗುತ್ತದೆ. ಮಹದಾಯಿ ನದಿ ಶುದ್ಧೀಕರಣಕ್ಕಾಗಿ ಗೋವಾ ಸರ್ಕಾರ 800 ಕೋಟಿ ರೂಪಾಯಿ ಸುರಿದಿದೆ. ಒಂದು ವೇಳೆ ಅಗತ್ಯವಿರುವ 7 ಟಿಎಂಸಿ ನೀರು ಬೇಕಾದರೂ ಕರ್ನಾಟಕದಿಂದ ಗೋವಾ ಪಾಲುಬಯಸುವ ಲಕ್ಷಣಗಳಿವೆ. 2 ವರ್ಷಗಳಲ್ಲಿ ಗೋವಾದಲ್ಲಿ ಆರ್ಥಿಕತೆಯ ಭಾಗವಾಗಿರೋ ಮೀನುಗಾರಿಕೆಯಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯೆತೆಗಳಿವೆ. ಮಹದಾಯಿ ನದಿ ವಿಚಾರದಲ್ಲಿ ಗೋವಾದಲ್ಲಿ ವಿದ್ಯಾರ್ಥಿಗಳು, ನಾಗರಿಕ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಇಂತಹ ಸಮಯದಲ್ಲಿ ತನ್ನ ಅತೀ ದೊಡ್ಡ ನದಿ ಮಹದಾಯಿ ನದಿಯ ನೀರನ್ನು ಕರ್ನಾಟಕಕ್ಕೆ ಹರಿಸುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

    ಬುಧವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿವಾಸದಲ್ಲಿ ನಡೆದ ಸಭೆಯಲ್ಲಿ 4 ದಶಕಗಳ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು. ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಗೋವಾ ಸಿಎಂ ಮನೋಹರ್ ಪರಿಕ್ಕರ್, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಪಿಯೂಶ್ ಗೋಯಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಸಭೆ ಬಳಿಕ ಮಾತಾಡಿದ ಯಡಿಯೂರಪ್ಪ, ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಗೋವಾ ಮುಖ್ಯಮಂತ್ರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಅಂತಾ ಹೇಳಿದ್ದಾರೆ.

    ಇಂದು ನಡೆಯುವ ಹುಬ್ಬಳ್ಳಿ ಪರಿವರ್ತನಾ ಸಮಾವೇಶದೊಳಗೆ ಅವರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರಾ ಅಥವಾ ಅಲ್ಲಿಯೇ ಘೋಷಣೆ ಮಾಡುತ್ತಾರಾ ಎಂಬುದು ತಿಳಿಯಬೇಕಿದೆ. ಆದರೆ ಅಮಿತ್ ಶಾ ಮನೆಯಿಂದ ಮೊದಲು ಹೊರಗೆ ಬಂದಿದ್ದು ಪರಿಕ್ಕರ್. ಎಲ್ಲೋ ಒಂದು ಕಡೆ ಪರಿಕ್ಕರ್ ಪೂರ್ಣ ಪ್ರಮಾಣದ ಒಪ್ಪಿಗೆ ಸೂಚಿಸಿಲ್ವಾ..? ಹೈಕಮಾಂಡ್ ಬಲವಂತಕ್ಕೆ ಒಪ್ಪಿಕೊಂಡ್ರಾ ಅನ್ನೋ ಪ್ರಶ್ನೆಗಳು ಉದ್ಭವಿಸುತ್ತವೆ.

  • ವಯಸ್ಕರ ಚಿತ್ರ ನೋಡಿದ ಅನುಭವವನ್ನು ಮಕ್ಕಳೊಂದಿಗೆ ಹಂಚಿಕೊಂಡ ಗೋವಾ ಸಿಎಂ

    ವಯಸ್ಕರ ಚಿತ್ರ ನೋಡಿದ ಅನುಭವವನ್ನು ಮಕ್ಕಳೊಂದಿಗೆ ಹಂಚಿಕೊಂಡ ಗೋವಾ ಸಿಎಂ

    ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಾವು ಮೊದಲ ಬಾರಿಗೆ ವಯಸ್ಕರ ಚಿತ್ರವನ್ನು ನೋಡಿದ ಅನುಭವವನ್ನು ಮಕ್ಕಳ ದಿನಾಚರಣೆಯಂದು ನಡೆದ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಹಂಚಿಕೊಂಡಿದ್ದಾರೆ.

    ಪರಿಕ್ಕರ್ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳೊಂದಿಗೆ ಸಂವಾದದಲ್ಲಿ ತೊಡಗಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ನೀವು ಯುವಕರಾಗಿದ್ದಾಗ ಯಾವ ತರಹದ ಸಿನಿಮಾಗಳನ್ನು ನೋಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಪರಿಕ್ಕರ್, ನಾನು ಯುವಕನಿದ್ದಾಗ ಕೇವಲ ಸಿನಿಮಾಗಳಲ್ಲ, ಅದರ ಜೊತೆಗೆ ವಯಸ್ಕರ ಚಿತ್ರಗಳನ್ನು ನೋಡುತ್ತಿದ್ದೆವು. ಅಂದು ನಾವು ಏನು ವಯಸ್ಕರ ಚಿತ್ರಗಳು ಎಂದು ಕರೆಯಲ್ಪಡುತ್ತಿದ್ದ ಆ ಚಿತ್ರಗಳ ಹೆಚ್ಚಿನ ದೃಶ್ಯಗಳು ಈಗ ಟಿವಿಯಲ್ಲಿ ಪ್ರಸಾರಗೊಳ್ಳುತ್ತಿದೆ ಎಂದು ಉತ್ತರಿಸಿದ್ದಾರೆ.

    ನಾನು ಯುವಕನಾಗಿದ್ದಾಗ ಪಾಪ್ಯೂಲರ್ ಅಡಲ್ಟ್ ಮೂವಿ ಬಂದಿತ್ತು. ನಾನು ಮತ್ತು ನನ್ನ ಸಹೋದರ ಇಬ್ಬರೂ ಸಿನಿಮಾ ನೋಡಲು ಥಿಯೇಟರ್ ಗೆ ಹೋಗಿದ್ದೆವು. ಸಿನಿಮಾದಲ್ಲಿ ಇಂಟರ್ ವೆಲ್ ನಲ್ಲಿ ಥಿಯೇಟರ್ ಲೈಟ್ ಗಳೆಲ್ಲಾ ಹಚ್ಚಲಾಯಿತು. ನೋಡಿದರೆ ನಮ್ಮ ನೆರೆ ಮನೆಯ ವ್ಯಕ್ತಿಯೊಬ್ಬ ನಮ್ಮ ಪಕ್ಕದಲ್ಲಿಯೇ ಕುಳಿತಿದ್ದ. ಆ ವ್ಯಕ್ತಿ ಪ್ರತಿದಿನ ನನ್ನ ತಾಯಿಯ ಜೊತೆ ಮಾತನಾಡುತ್ತಿದ್ದರಿಂದ ಅವರಿಗೆ ನಮ್ಮಿಬ್ಬರ ಪರಿಚಯವಿತ್ತು. ಆ ಕ್ಷಣದಲ್ಲಿ ಭಯಗೊಂಡ ನಾನು ನಾವು ಸತ್ತೆ ಹೋದೆವು ಎಂದು ಹೇಳಿದೆ ಅಂತಾ ಪರಿಕ್ಕರ್ ತಿಳಿಸಿದರು.

    ಥಿಯೇಟರ್ ನಲ್ಲಿ ನೆರೆಮನೆಯ ವ್ಯಕ್ತಿಯನ್ನು ನೋಡುತ್ತಲೇ ನಾವಿಬ್ಬರು ಸಿನಿಮಾವನ್ನು ಅರ್ಧಕ್ಕೆ ಬಿಟ್ಟು ಓಡಿ ಬಂದೆವು. ಮನೆಗೆ ಹೋಗುವ ದಾರಿ ಮಧ್ಯೆಯೇ ಈ ಸಮಸ್ಯೆಯನ್ನು ಬಗಹರಿಸುವ ಪ್ಲಾನ್ ಮಾಡಿಕೊಂಡು ಹೊರಟೆವು. ಮನೆಗೆ ಹೋದ ಮೇಲೆ ತಾಯಿಯ ಜೊತೆ, ನಾವು ಇವತ್ತು ಸಿನಿಮಾಗೆ ಹೋಗಿದ್ದೆವು. ಆದರೆ ನಮಗೆ ಅದು ಯಾವ ಸಿನಿಮಾ ಎಂದು ಗೊತ್ತಿರಲಿಲ್ಲ. ಅಲ್ಲಿಗೆ ಹೋದ ಮೇಲೆ ಅದು ಕೆಟ್ಟ ಸಿನಿಮಾ ಎಂದು ಗೊತ್ತಾಯಿತು. ಕೂಡಲೇ ಚಿತ್ರ ನೋಡುವುದನ್ನು ಬಿಟ್ಟು ಅರ್ಧಕ್ಕೆ ಚಿತ್ರ ಮಂದಿರದಿಂದ ಹೊರ ಬಂದೆವು. ಮತ್ತೆ ನಿಧಾನವಾಗಿ ನಮ್ಮ ನೆರೆಮನೆಯ ವ್ಯಕ್ತಿಯೂ ಆ ಸಿನಿಮಾವನ್ನು ನೋಡಲು ಬಂದಿದ್ದ ಎನ್ನುವುದನ್ನು ಎಂದು ತಿಳಿಸಿದೆವು ಎಂದರು.

    ಮರುದಿನ ಆ ವ್ಯಕ್ತಿ ನಮ್ಮ ತಾಯಿಯನ್ನು ಕರೆದು ನಿಮ್ಮ ಮಕ್ಕಳಿಬ್ಬರು ಥಿಯೇಟರ್ ಗೆ ಬಂದಿದ್ದರು ಎಂದು ಹೇಳಿದರು. ಕೂಡಲೇ ನಮ್ಮ ತಾಯಿ ನನ್ನ ಮಕ್ಕಳು ಯಾವ ಸಿನಿಮಾಗೆ ಹೋಗಿದ್ದರು ಎಂದು ನನಗೆ ಗೊತ್ತಿದೆ. ಆದರೆ ನೀವ್ಯಾಕೆ ಅಂತಹ ಸಿನಿಮಾ ನೋಡಲು ಹೋಗಿದ್ರಿ ಎಂದು ಮರು ಪ್ರಶ್ನೆ ಮಾಡಿದರು. ನಾವು ಮೊದಲೇ ಎಲ್ಲವನ್ನು ಪ್ಲಾನ್ ಮಾಡಿದ್ದರಿಂದ ನಾವು ಬಚಾವ್ ಆಗಿದ್ದೆವು ಎಂದು ಹೇಳಿ ಪರಿಕ್ಕರ್ ನಕ್ಕರು.

     

  • ಪಂಜಾಬ್‍ನಲ್ಲಿಂದು ಅಮರಿಂದರ್ ಅಧಿಕಾರ ಗ್ರಹಣ – ಗೋವಾದಲ್ಲಿ ಪರಿಕ್ಕರ್‍ಗೆ ಮತ ಪರೀಕ್ಷೆ

    ಪಂಜಾಬ್‍ನಲ್ಲಿಂದು ಅಮರಿಂದರ್ ಅಧಿಕಾರ ಗ್ರಹಣ – ಗೋವಾದಲ್ಲಿ ಪರಿಕ್ಕರ್‍ಗೆ ಮತ ಪರೀಕ್ಷೆ

    – ಉತ್ತರಪ್ರದೇಶ ಸಿಎಂ ಆಯ್ಕೆ ಇನ್ನೂ ವಿಳಂಬ

    ನವದೆಹಲಿ: 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಮುಳುಗಿ ಹೋಗುತ್ತಿರುವ ಹಡಗಿಗೆ ಆಸರೆಯಂತಿರುವ ಪಂಜಾಬ್‍ನಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಮರಿಂದರ್ ಸಿಂಗ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‍ನಲ್ಲಿ ಮಾತ್ರ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ರಾಜಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ವಿಪಿ ಬಡ್ನೋರ್ ಪ್ರಮಾಣವಚನ ಬೋಧಿಸಲಿದ್ದಾರೆ. ನವಜೋತ್ ಸಿಂಗ್ ಸಿಧು, ಮನ್‍ಪ್ರೀತ್ ಸಿಂಗ್ ಬಾದಲ್ ಸೇರಿ ಒಟ್ಟು 9 ಮಂದಿ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ 77 ಶಾಸಕರನ್ನು ಹೊಂದಿದೆ. ಆಮ್ ಆದ್ಮಿ ಪಾರ್ಟಿ 20, ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟ 15 ಶಾಸಕರನ್ನು ಹೊಂದಿದೆ.

    ಮಂಗಳವಾರವಷ್ಟೇ ಗೋವಾದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಹಣೆಬರಹ ಇವತ್ತು ನಿರ್ಧಾರವಾಗಲಿದೆ. ವಿಧಾನಸಭೆಯಲ್ಲಿ ನೂತನ ಸಿಎಂ ಮನೋಹರ್ ಪರಿಕ್ಕರ್ ಇಂದು ಬಹುಮತ ಸಾಬೀತುಪಡಿಸಬೇಕಿದೆ. 40 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ 17, ಬಿಜೆಪಿ 13, ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ(ಎಂಜಿಪಿ), ಗೋವಾ ಫಾವರ್ಡ್(ಜಿಎಫ್‍ಪಿ) ಪಾರ್ಟಿ ತಲಾ ಮೂವರು ಶಾಸಕರನ್ನು ಹೊಂದಿದೆ. ಮೂವರು ಪಕ್ಷೇತರ ಮತ್ತು ಓರ್ವ ಎನ್‍ಸಿಪಿ ಶಾಸಕರಿದ್ದಾರೆ. ಇವರಲ್ಲಿ ಎಂಜಿಪಿ, ಜಿಎಫ್‍ಪಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಇಬ್ಬರು ಪಕ್ಷೇತರರೂ ಬೆಂಬಲ ಸೂಚಿಸಿದ್ದಾರೆ. ಅಲ್ಲಿಗೆ ಅಗತ್ಯ ಸರಳ ಬಹುಮತದ ಸಂಖ್ಯೆ 21ನ್ನು ದಾಟುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 8 ಮಂದಿ ಸಚಿವರಲ್ಲಿ ಎಂಜಿಪಿಯ ಇಬ್ಬರು, ಜಿಎಫ್‍ಪಿಯ ಮೂವರು ಮತ್ತು ಸ್ವತಂತ್ರ ಶಾಸಕರು ಸೇರಿದ್ದಾರೆ. ಈ ಮೂಲಕ ಯಾವುದೇ ಕಾರಣಕ್ಕೂ ಸರ್ಕಾರ ಬೀಳದಂತೆ ನೋಡಿಕೊಳ್ಳುವ ಕಸರತ್ತನ್ನು ಬಿಜೆಪಿ ಮಾಡಿಕೊಂಡಿದೆ.

    ಈ ನಡುವೆ ಅತೀ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆಗೆ ಆಹ್ವಾನ ನೀಡಿರಲಿಲ್ಲ ಎಂದು ರಾಜ್ಯಪಾಲರ ವಿರುದ್ಧ ದೂರಿದ್ದ ಕಾಂಗ್ರೆಸ್ ಸುಪ್ರೀಂಕೋರ್ಟ್ ಕದ ತಟ್ಟಿತ್ತು. ಈ ಹಿನ್ನೆಲೆಯಲ್ಲಿ ಗುರುವಾರವೇ ಬಹುಮತ ಸಾಬೀತುಪಡಿಸುವಂತೆ ನ್ಯಾಯಾಲಯ ಬಿಜೆಪಿಗೆ ಸೂಚಿಸಿತ್ತು.

    ಸೀಟು ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ. ಆದ್ರೆ ಕಂಡುಕೇಳರಿಯದ ಜಯದ ಬಳಿಕವೂ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆ ವಿಳಂಬವಾಗಿದೆ. ನಾಲ್ಕು ದಶಕಗಳ ಬಳಿಕ ಸಿಕ್ಕಿರುವ ಪ್ರಚಂಡ ಬಹುಮತದ ಹಿನ್ನೆಲೆಯಲ್ಲಿ ಸರ್ವ ಸಮುದಾಯಗಳನ್ನು ಓಲೈಸಬಲ್ಲ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸುವುದೇ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ನೂತನ ಮುಖ್ಯಮಂತ್ರಿಯನ್ನು ಅಂತಿಮಗೊಳಿಸುವ ಹೊಣೆ ಹೊತ್ತಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಭೂಪೇಂದರ್ ಯಾದವ್ ಶನಿವಾರದಷ್ಟೊತ್ತಿಗೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

    ರಾಜ್ಯದಲ್ಲಿ ಕಟ್ಟಕಡೆಯ ಬಿಜೆಪಿ ಸಿಎಂ ಆಗಿರುವ ರಾಜನಾಥ್ ಸಿಂಗ್‍ರ ಹೆಸರು ಮುಂಚೂಣಿಯಲ್ಲಿದೆಯಾದರೂ ಅದರ ಬಗ್ಗೆ ಚರ್ಚೆಯೇ ಅಪ್ರಯೋಜಕ ಎಂದು ಮಾಧ್ಯಮಗಳಿಗೆ ತಿರುಗೇಟು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಕುರಿತ ಚರ್ಚೆ ನಡೆಸದಂತೆ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ. ಮೂಲಗಳ ಪ್ರಕಾರ ನಾಳೆ ಪ್ರಧಾನಿ ನರೇಂದ್ರ ಮೋದಿ ಲಕ್ನೋಗೆ ಭೇಟಿ ನೀಡುವ ಸಾಧ್ಯತೆ ಇದೆ. ಪ್ರಚಂಡ ಫಲಿತಾಂಶದ ನಂತರ ರಾಜ್ಯಕ್ಕೆ ಪ್ರಧಾನಿ ನೀಡುತ್ತಿರುವ ಮೊಟ್ಟ ಮೊದಲ ಭೇಟಿ ಇದಾಗಲಿದೆ. ಉತ್ತರಪ್ರದೇಶ ಜೊತೆಗೆ ಉತ್ತರಾಖಂಡ್‍ನಲ್ಲೂ ಅದ್ಭುತ ಬಹುಮತ ಸಿಕ್ಕಿದ್ದರೂ ಮುಖ್ಯಮಂತ್ರಿ ಯಾರೆಂಬುದು ಇನ್ನೂ ಖಾತ್ರಿಯಾಗಿಲ್ಲ.

  • ಇಂದೇ ಪರಿಕ್ಕರ್ ಪ್ರಮಾಣವಚನ ಸ್ವೀಕಾರ- ಗುರುವಾರದಂದು ಬಹುಮತ ಸಾಬೀತು

    ಇಂದೇ ಪರಿಕ್ಕರ್ ಪ್ರಮಾಣವಚನ ಸ್ವೀಕಾರ- ಗುರುವಾರದಂದು ಬಹುಮತ ಸಾಬೀತು

    ನವದೆಹಲಿ: ಗೋವಾ ಸಿಎಂ ಆಗಿ ಮನೋಹರ್ ಪರಿಕ್ಕರ್ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಬಹುದು, ಆದರೆ ಗುರುವಾರದಂದು ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಇದರಿಂದ ಕಾಂಗ್ರೆಸ್‍ಗೆ ತೀವ್ರ ಹಿನ್ನಡೆಯಾಗಿದೆ.

    ಗೋವಾದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ರಾಜ್ಯಪಾಲರ ಆಹ್ವಾನವನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸುಪ್ರೀಂಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಖೇಹರ್ ಪೀಠ, ಮೊದಲು ನೀವೇಕೆ ರಾಜ್ಯಪಾಲರನ್ನು ಸರ್ಕಾರ ರಚಿಸಲು ಹಕ್ಕು ಮಂಡಿಸಲಿಲ್ಲ? ಇಂತಹ ಸಂದರ್ಭದಲ್ಲಿ ಒಂದು ಪಕ್ಷಕ್ಕೆ ಮಾತ್ರ ಸಂಖ್ಯಾಬಲ ಇದ್ದಿದ್ದರಿಂದ ಕಾಂಗ್ರೆಸ್‍ಗೆ ಆಹ್ವಾನ ನೀಡುವ ಪ್ರಶ್ನೆಯೇ ಇಲ್ಲ. ನಿಮಗೆ ಸಂಖ್ಯಾಬಲವಿದ್ದರೆ ಅದನ್ನು ಈಗಲೇ ಸಾಬೀತುಪಡಿಸಿ ಎಂದು ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಸಿಂಗ್ವಿ ಅವರಿಗೆ ನ್ಯಾ. ಪ್ರಶ್ನಿಸಿತು.

    ಅಲ್ಲದೆ ಮನೋಹರ್ ಪರಿಕ್ಕರ್ ಅವರ ಪ್ರಮಾಣವಚನ ಸ್ವೀಕಾರಕ್ಕೆ ತಡೆ ನೀಡಲು ಕೋರ್ಟ್ ನಿರಾಕರಿಸಿದ್ದು, ಮಾರ್ಚ್ 16ರಂದು ಬಹುಮತ ಸಾಬೀತುಪಡಿಸುವಂತೆ ಸೂಚನೆ ನೀಡಿತು. ಈ ನಡುವೆ ಇಂದು ಮಧ್ಯಾಹ್ನ 1.30ಕ್ಕೆ ಕಾಂಗ್ರೆಸ್ ನಿಯೋಗ ರಾಜ್ಯಪಾಲ ಮೃದುಲಾ ಸಿನ್ಹಾ ಅವರನ್ನ ಭೇಟಿಯಾಗಲಿದೆ.

    ಗೋವಾ ವಿಧಾನಸಭೆಯ ಒಟ್ಟು 40 ಸ್ಥಾನಗಳಲ್ಲಿ ಕಾಂಗ್ರೆಸ್ 17 ಹಾಗೂ ಬಿಜೆಪಿ 13 ಸ್ಥಾನಗಳನ್ನ ಗೆದ್ದಿದವು. ಬಹುಮತಕ್ಕೆ ಬೇಕಾಗಿದ್ದಿದ್ದು 21 ಸ್ಥಾನಗಳು. ಬಿಜೆಪಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರು ಇತರೆ ಪ್ರಾದೇಶಿಕ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಪಡೆದು ಭಾನುವಾರದಂದು ಸರ್ಕಾರ ರಚನೆಗೆ ಹಕ್ಕು ಮಂಡಿಸಿತ್ತು.

  • ಗೋವಾ ಸಿಎಂ ಆಗಿ ಪರಿಕ್ಕರ್ ನೇಮಕ – 15 ದಿನಗಳಲ್ಲಿ ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ

    ಗೋವಾ ಸಿಎಂ ಆಗಿ ಪರಿಕ್ಕರ್ ನೇಮಕ – 15 ದಿನಗಳಲ್ಲಿ ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ

    ನವದೆಹಲಿ: ಉತ್ತರ ಪ್ರದೇಶ, ಉತ್ತರಾಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಬಂದಿದ್ದು ಈಗಾಗ್ಲೇ ಅಧಿಕಾರ ಹಿಡಿಯಲು ಸನ್ನದ್ಧವಾಗಿದೆ. ಆದ್ರೆ ಗೋವಾ ಮತ್ತು ಮಣಿಪುರದಲ್ಲಿ 2ನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಸಣ್ಣಪುಟ್ಟ ಪಕ್ಷಗಳ ಬೆಂಬಲ ಪಡೆದು ಎರಡೂ ಕಡೆ ಸರ್ಕಾರ ರಚಿಸಲು ಸರ್ಕಸ್ ಮಾಡ್ತಿದೆ.

    ಗೋವಾದಲ್ಲಿ 13 ಸ್ಥಾನ ಗೆದ್ದಿರುವ ಬಿಜೆಪಿ ಹೊಸ ಸರ್ಕಾರ ರಚಿಸಲು ಅವಕಾಶ ಕೋರಿ ರಾಜ್ಯಪಾಲರಾದ ಮೃದುಲಾ ಸಿನ್ಹಾರಿಗೆ ಮನವಿ ಸಲ್ಲಿಸಿದೆ. ಮನವಿ ಪುರಸ್ಕರಿಸಿರುವ ರಾಜ್ಯಪಾಲರು ಮನೋಹರ್ ಪರಿಕ್ಕರ್ ಅವರನ್ನು ಗೋವಾ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ಜೊತೆಗೆ ಪ್ರಮಾಣ ವಚನ ಸ್ವೀಕರಿಸಿದ 15 ದಿನಗಳಲ್ಲಿ ಬಹುಮತ ಸಾಬೀತು ಪಡಿಸಲು ಪರಿಕ್ಕರ್ ಅವರಿಗೆ ಸೂಚಿಸಿದ್ದಾರೆ.

    ಗೋವಾದಲ್ಲಿ ಬಹುಮತಕ್ಕೆ ಬೇಕಾಗಿರುವುದು 21 ಸದಸ್ಯರ ಸಂಖ್ಯಾಬಲ. ಎನ್‍ಸಿಪಿ 1, ಎಂಜಿಪಿ 3, ಜಿಎಫ್‍ಪಿ 3, ಇಬ್ಬರು ಪಕ್ಷೇತರರನ್ನು ಸೇರಿಸಿಕೊಂಡು ಸರ್ಕಾರ ರಚಿಸಲು ಬಿಜೆಪಿ ಮುಂದಾಗಿದೆ. ಇನ್ನು ಗೋವಾದಲ್ಲಿ 17 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದೆ ಅಂತ ಉನ್ನತ ಮೂಲಗಳು ತಿಳಿಸಿವೆ.

    ಮಣಿಪುರದಲ್ಲಿ 21 ಸ್ಥಾನಗಳನ್ನ ಗೆದ್ದಿರುವ ಬಿಜೆಪಿಗೆ ಬಹುಮತ ಸಾಬೀತುಪಡಿಸಲು 31 ಸದ್ಯಸರ ಅಗತ್ಯವಿದೆ. ಇತರೆ ಪಕ್ಷದ 10 ಮಂದಿ ಸದಸ್ಯರ ಬೆಂಬಲ ಪಡೆಯಲು ಬಿಜೆಪಿ ಸರ್ಕಸ್ ಮಾಡ್ತಿದೆ. ಇಲ್ಲಿಯೂ ಬಿಜೆಪಿಗೆ ಸ್ಪಷ್ಟ ಬೆಂಬಲ ಸಿಕ್ಕಿದ್ರೆ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಹಿಡಿದಂತಾಗುತ್ತದೆ.