Tag: Manohar Lal Khattar

  • ಕೇಜ್ರಿವಾಲ್, ಭಗವಂತ್ ಮಾನ್ ಹರಿಯಾಣದ ಜನತೆಗೆ ಕ್ಷಮೆಯಾಚಿಸಬೇಕು : ಮನೋಹರ್ ಲಾಲ್ ಖಟ್ಟರ್

    ಕೇಜ್ರಿವಾಲ್, ಭಗವಂತ್ ಮಾನ್ ಹರಿಯಾಣದ ಜನತೆಗೆ ಕ್ಷಮೆಯಾಚಿಸಬೇಕು : ಮನೋಹರ್ ಲಾಲ್ ಖಟ್ಟರ್

    ಚಂಡೀಗಢ: ಪಂಜಾಬ್‍ಗೆ ಚಂಡೀಗಢವನ್ನು ವರ್ಗಾಯಿಸುವ ನಿರ್ಣಯದ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಅಸಮಾಧಾನ ಹೊರಹಾಕಿದ್ದಾರೆ.

    ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹರಿಯಾಣದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನೇಪಾಳದ ಪ್ರಧಾನಿಗೆ ವಿಶಿಷ್ಟ ಉಡುಗೊರೆ ನೀಡಿದ ಪ್ರಧಾನಿ ಮೋದಿ

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್‍ಗೆ ಚಂಡೀಗಢವನ್ನು ವರ್ಗಾಯಿಸುತ್ತಿರುವುದು ಖಂಡನೀಯ ಮತ್ತು ಅವರು ಹೀಗೆ ಮಾಡಬಾರದಿತ್ತು. ಚಂಡೀಗಢವು ಹರಿಯಾಣ ಮತ್ತು ಪಂಜಾಬ್‍ನ ರಾಜಧಾನಿಯಾಗಿದೆ. ಹೀಗಾಗಿ ಕೇಜ್ರಿವಾಲ್ ಇದನ್ನು ಖಂಡಿಸಬೇಕು ಮತ್ತು ಹರಿಯಾಣದ ಜನರಲ್ಲಿ ಕ್ಷಮೆಯಾಚಿಸಬೇಕು. ಜೊತೆಗೆ ಭಗವಂತ್ ಮಾನ್ ಅವರು ಕೂಡ ಕ್ಷಮೆ ಕೇಳಬೇಕು ಎಂದು ತಿಳಿಸಿದ್ದಾರೆ.

    ಪಂಜಾಬ್‍ನಲ್ಲಿ ಎಎಪಿ ನೇತೃತ್ವದ ಸರ್ಕಾರವು ಮೊದಲು ಸಟ್ಲೆಜ್ ಯಮುನಾ ಲಿಂಕ್ ಕಾಲುವೆ ಸಮಸ್ಯೆಯನ್ನು ಪರಿಹರಿಸುವ ಕುರಿತು ಸುಪ್ರೀಂ ಕೋರ್ಟ್‍ಗೆ ಹೋಗಬೇಕು. ಹಿಂದಿ ಮಾತನಾಡುವ ಪ್ರದೇಶಗಳನ್ನು ಹರಿಯಾಣಕ್ಕೆ ನೀಡಲಿಲ್ಲ, ಇದು ಉಳಿದ ಸಮಸ್ಯೆಗಳನ್ನು ವಿಳಂಬಗೊಳಿಸಿತು. ಹರಿಯಾಣಕ್ಕೆ ಹಿಂದಿ ಭಾಷಿಕ ಪ್ರದೇಶಗಳನ್ನು ನೀಡಲು ಸಿದ್ಧ ಅಂತ ಹೇಳಬೇಕು ಎಂದು ಖಟ್ಟರ್ ಹೇಳಿದ್ದಾರೆ. ಇದನ್ನೂ ಓದಿ: 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಪಂಜಾಬ್ ಸರ್ಕಾರ ಬಚ್ಚಾ ಪಕ್ಷ. ಅವರಿಗೆ ಸಮಸ್ಯೆಗಳ ಸಂಪೂರ್ಣ ಜ್ಞಾನವಿಲ್ಲ. ಚಂಡೀಗಢ ಮಾತ್ರ ಸಮಸ್ಯೆಯಲ್ಲ. ಅದಕ್ಕೆ ಸಂಬಂಧಿಸಿದ ಇತರ ಹಲವು ಸಮಸ್ಯೆಗಳಿವೆ. ಹಿಂದಿ ಮಾತನಾಡುವ ಪ್ರದೇಶಗಳ ಸಮಸ್ಯೆಗಳಿವೆ. ಅವರು ಅದರ ಬಗ್ಗೆ ಏನನ್ನೂ ಹೇಳಲಿಲ್ಲ. ಅದು ಸಂಭವಿಸಿದಾಗಲೆಲ್ಲಾ ಒಂದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಹರಿಯಾಣ ಸಚಿವ ಮಿನ್ ಅನಿಲ್ ವಿಜ್ ಕಿಡಿ ಕಾರಿದ್ದಾರೆ.

    ಶುಕ್ರವಾರ ಚಂಡೀಗಢವನ್ನು ಕೇಂದ್ರ ಸೇವಾ ನಿಯಮಗಳಿಗೆ ಒಳಪಡಿಸುವ ಕೇಂದ್ರದ ನಿರ್ಧಾರದ ವಿರುದ್ಧ ಪಂಜಾಬ್ ಸಿಎಂ ಭಗವಂತ್ ಮಾನ್ ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದರು. ಚಂಡೀಗಢವನ್ನು ಪಂಜಾಬ್‍ಗೆ ವರ್ಗಾಯಿಸಲು ಮಾನ್ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಮುಂದಿಟ್ಟಿದ್ದರು. ಕೇಂದ್ರಾಡಳಿತ ಪ್ರದೇಶ ಮತ್ತು ಇತರ ಸಾಮಾನ್ಯ ಆಸ್ತಿಗಳ ಸಮತೋಲನವನ್ನು ಹಾಳುಮಾಡಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

     

  • ಚಂಡೀಗಢವು ಜಂಟಿ ರಾಜಧಾನಿಯಾಗಿಯೇ ಉಳಿಯುತ್ತೆ: ಹರಿಯಾಣ ಸಿಎಂ

    ಚಂಡೀಗಢವು ಜಂಟಿ ರಾಜಧಾನಿಯಾಗಿಯೇ ಉಳಿಯುತ್ತೆ: ಹರಿಯಾಣ ಸಿಎಂ

    ಚಂಡೀಗಢ: ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಜಂಟಿ ರಾಜಧಾನಿಯಾಗಿಯೇ ಚಂಡೀಗಢ ಉಳಿಯುತ್ತದೆ ಎಂದಯ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂಡೀಗಢವು ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿ ಉಳಿಯುತ್ತದೆ. ಎರಡೂ ರಾಜ್ಯಗಳು ಚಂಡೀಗಢದ ವಿಷಯವನ್ನು ಹೊರತುಪಡಿಸಿ ಚರ್ಚಿಸಲು ಹಲವಾರು ವಿಷಯಗಳನ್ನು ಹೊಂದಿವೆ ಎಂದರು.

    ಕೇಂದ್ರಾಡಳಿತ ಪ್ರದೇಶದ ನೌಕರರಿಗೆ ಕೇಂದ್ರ ಸೇವಾ ನಿಯಮಗಳನ್ನು ಅನ್ವಯಿಸುವಂತೆ ಮಾಡುವ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ ಅವರು, ಪಂಜಾಬ್ ಸರ್ಕಾರವು ಈ ವಿಷಯದ ಬಗ್ಗೆ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಚಂಡೀಗಢವನ್ನು ಪಂಜಾಬ್‌ಗೆ ವರ್ಗಾಯಿಸಿ: ಪಂಜಾಬ್ ಸಿಎಂ ನಿರ್ಣಯ ಮಂಡನೆ

    ಈ ಹಿಂದೆ, ಚಂಡೀಗಢದ ನೌಕರರು ಕೇಂದ್ರ ಸರ್ಕಾರದ ಪ್ರತಿಯೊಂದು ಆದೇಶಕ್ಕೂ ಪಂಜಾಬ್ ಸರ್ಕಾರವನ್ನು ಅವಲಂಬಿಸಬೇಕಾಗಿತ್ತು. ಅದಕ್ಕಾಗಿ ಕೇಂದ್ರವು ನೌಕರರ ಬೇಡಿಕೆಗಳು ಮತ್ತು ಹಿತಾಸಕ್ತಿಗಳನ್ನು ಪರಿಗಣಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಪಂಜಾಬ್ ಸರ್ಕಾರವು ಈ ವಿಷಯದಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ, ಈ ಕ್ರಮವು ನೌಕರರಿಗೆ ಅತ್ಯಂತ ಪ್ರಯೋಜನವನ್ನು ನೀಡುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಅಪೌಷ್ಠಿಕತೆ, ಮಧುಮೇಹ ಖಾಯಿಲೆಯಿಂದ ಬಳಲುವವರಿಗೆ ಕ್ಷಯರೋಗದ ಸಾಧ್ಯತೆ ಹೆಚ್ಚು: ಡಾ. ಮಹೇಶ್ ಎಂ.ಜಿ

    ಶುಕ್ರವಾರ ಪಂಜಾಬ್‍ನಲ್ಲಿ ಚಂಡೀಗಢವು ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿದೆ. ಚಂಡೀಗಢದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಸೇವಾ ನಿಯಮಗಳು ಅನ್ವಯಿಸುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಘೋಷಣೆಯಿಂದ ರಾಜಕೀಯ ಗದ್ದಲದ ನಡುವೆ ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗಿತ್ತು.

    ಈ ಅಧಿವೇಶನದಲ್ಲಿ ಚಂಡೀಗಢವನ್ನು ತಕ್ಷಣವೇ ಪಂಜಾಬ್‍ಗೆ ವರ್ಗಾಯಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಿರ್ಣಯ ಮಂಡಿಸಿದ್ದಾರೆ. ಜೊತೆಗೆ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಗೌರವಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಐಪಿಎಸ್ ಸೇವೆಗೆ ಭಾಸ್ಕರ್ ರಾವ್ ಗುಡ್ ಬೈ

  • ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಖಟ್ಟರ್

    ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಖಟ್ಟರ್

    -ದುಷ್ಯಂತ್ ಚೌಟಾಲಾ ಡಿಸಿಎಂ

    ಚಂಡೀಗಢ: ಬಿಜೆಪಿ ನಾಯಕ ಮನೋಹರ್ ಲಾಲ್ ಖಟ್ಟರ್ ಮತ್ತು ಜನ್‍ನಾಯಕ್ ಜನತಾ ಪಾರ್ಟಿಯ ಮುಖ್ಯಸ್ಥ ದುಷ್ಯಂತ್ ಚೌಟಾಲಾ ಇಂದು ಸಿಎಂ ಮತ್ತು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

    ಚಂಡೀಗಢನ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಖಟ್ಟರ್ ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಇತ್ತ ಮೈತ್ರಿ ಪಕ್ಷ ಜೆಜೆಪಿಯ ನಾಯಕ ದುಷ್ಯಂತ್ ಚೌಟಾಲಾ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗರ್ವನರ್ ಸತ್ಯದೋವೋ ನರೈನ್ ಆರ್ಯ ಇಬ್ಬರು ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು.

    ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಬಿಜೆಪಿಯ ಕಾರ್ಯನಿರತ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಜೆಜೆಪಿ ಮುಖಂಡರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಕಾಂಗ್ರೆಸ್ ನ ಭೂಪೀಂದ್ರ ಹೂಡಾ ಹಾಗೂ ಅಕಾಲಿದಳ ನಾಯಕ ಪ್ರಕಾಶ್ ಸಿಂಗ್ ಬಾದಲ್, ಪಕ್ಷದ ಮುಖಂಡರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಚುನಾವಣೆಯಲ್ಲಿ ಹರ್ಯಾಣದ ಜನತೆ ಯಾವ ಪಕ್ಷಕ್ಕೂ ಬಹುಮತವನ್ನು ನೀಡಿರಲಿಲ್ಲ. ಹಾಗಾಗಿ ಬಿಜೆಪಿ ತನ್ನ 40 ಶಾಸಕರೊಂದಿಗೆ ಜೆಜೆಪಿಯ 10 ಮತ್ತು ಪಕ್ಷೇತರ 7 ಶಾಸಕರ ಬೆಂಬಲದೊಂದಿಗೆ ಹರ್ಯಾಣದಲ್ಲಿ ಸರ್ಕಾರ ರಚಿಸಿದೆ.

    ಗುರುವಾರ ಪ್ರಕಟವಾದ ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶವು ಅಂತಂತ್ರ ಸ್ಥಿತಿಯನ್ನು ತಂದೊಡ್ಡಿತ್ತು. ಒಟ್ಟು 90 ಸ್ಥಾನಗಳ ಪೈಕಿ ಬಿಜೆಪಿ 40, ಕಾಂಗ್ರೆಸ್ 31 ಹಾಗೂ ಜನನಾಯಕ್ ಜನತಾ ಪಕ್ಷ 10 ಸೀಟ್‍ಗಳನ್ನು ಗೆದ್ದಿವೆ. ಪಕ್ಷೇತರರು 7 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಇತರೆ ಪಕ್ಷಗಳು ಎರಡು ಸ್ಥಾನಗಳನ್ನು ಪಡೆದಿವೆ. ಬಿಜೆಪಿ ಸರ್ಕಾರ ರಚಿಸಲು ಕೇವಲ 6 ಸ್ಥಾನಗಳ ಕೊರತೆ ಉಂಟಾಗಿತ್ತು. 31 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಜೆಜೆಪಿ ಹಾಗೂ ಪಕ್ಷೇತರರ ಬೆಂಬಲದಿಂದ ಸರ್ಕಾರ ರಚಿಸಲು ಮುಂದಾಗಿತ್ತು. ಹೀಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಮಧ್ಯೆ ಪೈಪೋಟಿ ಉಂಟಾಗಿತ್ತು.

  • ‘ದೆಹಲಿಗೆ ಕೂಡಲೇ ಬನ್ನಿ’- ಹರ್ಯಾಣ ಸಿಎಂಗೆ ಶಾ ತುರ್ತು ಬುಲಾವ್

    ‘ದೆಹಲಿಗೆ ಕೂಡಲೇ ಬನ್ನಿ’- ಹರ್ಯಾಣ ಸಿಎಂಗೆ ಶಾ ತುರ್ತು ಬುಲಾವ್

    ನವದೆಹಲಿ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಆಗುತ್ತಿದ್ದಂತೆ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರಿಗೆ ಬಿಜೆಪಿ ಹೈಕಮಾಂಡ್ ದೆಹಲಿಗೆ ಬರುವಂತೆ ತುರ್ತು ಬುಲಾವ್ ನೀಡಿದೆ.

    ಮತ ಎಣಿಕೆಯ ಆರಂಭದಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿದರೆ ನಂತರ ಕಾಂಗ್ರೆಸ್ ಮಧ್ಯೆ ಸಮಬಲದ ಹೋರಾಟ ನಡೆಯುತ್ತಿದೆ. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ದುಷ್ಯಂತ್ ಸಿಂಗ್ ಚೌತಾಲಾ ಅವರ ಜನನಾಯಕ್ ಜನತಾ ಪಕ್ಷ (ಜೆಜೆಪಿ) 14 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವುದರ ಜೊತೆ ಒಟ್ಟು 20 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದರಿಂದ ಫಲಿತಾಂಶ ದಿಢೀರ್ ತಿರುವು ಪಡೆದುಕೊಳ್ಳುತ್ತಿದೆ.

    ಬೆಳಗ್ಗೆ 11 ಗಂಟೆಯ ವೇಳೆಗೆ ಬಿಜೆಪಿ 42, ಕಾಂಗ್ರೆಸ್ 28, ಇತರರು 20 ಕ್ಷೇತ್ರಗಳಲ್ಲಿ ಮುನ್ನಡೆಯಲಿದ್ದಾರೆ. ಹೀಗಾಗಿ ಕೂಡಲೇ ದೆಹಲಿಗೆ ಬರುವಂತೆ ಅಮಿತ್ ಶಾ ಖಟ್ಟರ್ ಅವರಿಗೆ ಸೂಚಿಸಿದ್ದಾರೆ.

    ದುಷ್ಯಂತ್ ಸಿಂಗ್ ಚೌತಾಲಾ ಅವರು ಕಾಂಗ್ರೆಸ್, ಬಿಜೆಪಿಗೆ ಬಹುಮತ ಬಂದರೂ ನಿರ್ಣಯಕ ಪಾತ್ರ ನಮ್ಮದೆ ಎಂದು ಈಗಾಗಲೇ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ.

    90 ಕ್ಷೇತ್ರಗಳು ಇರುವ ಹರ್ಯಾಣದಲ್ಲಿ ಬಹುಮತ ಪಡೆಯಲು 46 ಸ್ಥಾನಗಳ ಅಗತ್ಯವಿದೆ. ಮತ ಎಣಿಕೆಯ ಮುನ್ನಡೆಯನ್ನು ಗಮನಿಸುತ್ತಿರುವಾಗ ಯಾರಿಗೂ ಸ್ಪಷ್ಟ ಬಹುಮತ ಸಿಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ದುಷ್ಯಂತ್ ಸಿಂಗ್ ಚೌತಾಲಾ ಅವರು ಮುಖ್ಯಮಂತ್ರಿ ಆಗುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

  • ಹರ್ಯಾಣ ಬಿಜೆಪಿ ಸಿಎಂ ಹೇಳಿಕೆ ಉಲ್ಲೇಖಿಸಿ ವಿಶ್ವಸಂಸ್ಥೆಗೆ ದೂರು ಕೊಟ್ಟ ಪಾಕ್

    ಹರ್ಯಾಣ ಬಿಜೆಪಿ ಸಿಎಂ ಹೇಳಿಕೆ ಉಲ್ಲೇಖಿಸಿ ವಿಶ್ವಸಂಸ್ಥೆಗೆ ದೂರು ಕೊಟ್ಟ ಪಾಕ್

    ನವದೆಹಲಿ: ಕಾಶ್ಮೀರ ಕನ್ಯೆಯರ ಬಗ್ಗೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹಾಗೂ ಉತ್ತರ ಪ್ರದೇಶ ಬಿಜೆಪಿ ಶಾಸಕ ವಿಕ್ರಂ ಸೈನಿ ನೀಡಿದ್ದ ಹೇಳಿಕೆಯನ್ನು ಪಾಕಿಸ್ತಾನ ವಿರೋಧಿಸಿದ್ದು, ಈ ಸಂಬಂಧ ವಿಶ್ವಸಂಸ್ಥೆಗೆ ದೂರು ನೀಡಿದೆ.

    ಭಾರತ ಸರ್ಕಾರ ಜಮ್ಮು-ಕಾಶ್ಮೀರ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಪಾಕಿಸ್ತಾನ ಸಿಡಿದೆದ್ದಿದೆ. ಅಲ್ಲದೆ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡು ಕಾಶ್ಮೀರಿಯರ ಮಾನವ ಹಕ್ಕಿಗೆ ಧಕ್ಕೆ ತಂದಿದೆ ಎಂದು ಪಾಕ್ ಆರೋಪಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದು ಭಾರತದ ಆಂತರಿಕ ವಿಚಾರ ಎಂದು ಟ್ವೀಟ್ ಮಾಡಿ ವಿರೋಧಿಸಿದ್ದರು. ಜೊತೆಗೆ ಬಿಜೆಪಿ ನಾಯಕರು ಕಾಶ್ಮೀರಿ ಕನ್ಯೆಯರ ಕುರಿತು ಹೇಳಿಕೆ ನೀಡಿದ್ದರು. ಇದನ್ನೆಲ್ಲಾ ಉಲ್ಲೇಖಿಸಿ ಪಾಕಿಸ್ತಾನದ ಮಾನವ ಹಕ್ಕು ಸಚಿವೆ ಶೆರೀನ್ ಮಜಾರಿ ವಿಶ್ವಸಂಸ್ಥೆಗೆ ದೂರಿನ ಪತ್ರ ಬರೆದಿದ್ದಾರೆ.

    ಈ ಪತ್ರದಲ್ಲಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಹೇಳಿಕೆಯನ್ನೂ ಕೂಡ ಉಲ್ಲೇಖಿಸಲಾಗಿದೆ. ಲಿಂಗತಾರತಮ್ಯದ ಹಿಂಸಾಚಾರದ ಅಡಿಯಲ್ಲಿ ಬಿಜೆಪಿ ನಾಯಕ ವಿಕ್ರಮ್ ಸೈನಿ ಅವರು ಹೇಳಿದ್ದ ಮಾತುಗಳನ್ನು ಪಾಕಿಸ್ತಾನ ಪತ್ರದಲ್ಲಿ ಉಲ್ಲೇಖಿಸಿದೆ. ಭಾರತೀಯ ಮುಸ್ಲಿಮರು ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಬೇಕು, ಯಾಕೆಂದರೆ ಇನ್ನು ಮುಂದೆ ಅವರು ಬಿಳಿ ಮೈ ಬಣ್ಣದ ಕಾಶ್ಮೀರಿ ಕನ್ಯೆಯರನ್ನು ಮದುವೆಯಾಗಬಹುದು ಎಂದು ಬಹಿರಂಗ ಭಾಷಣದಲ್ಲಿ ಹೇಳಿಕೆ ಕೊಟ್ಟಿದ್ದರು.

    ಈ ಹೇಳಿಕೆ ಬೆನ್ನಲ್ಲೇ ‘ಬೇಟಿ ಬಚಾವೋ ಬೇಟಿ ಪಡಾವೊ’ ಕಾರ್ಯಕ್ರಮದಲ್ಲಿ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಕಾಶ್ಮೀರಿ ಕನ್ಯೆಯರ ಕುರಿತು ಹೇಳಿಕೆ ಕೊಟ್ಟಿದ್ದರು. 370ನೇ ವಿಧಿ ರದ್ದತಿಯ ನಂತರ ಕಾಶ್ಮೀರ ಮುಕ್ತ ಪ್ರದೇಶವಾಗಿದೆ. ಅಲ್ಲಿಂದ ಸೊಸೆಯಂದಿರನ್ನು ತರಬಹುದು. ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು ಎಂದು ಹೇಳಿದ್ದರು.

    ಈ ರೀತಿ ಹೇಳಿಕೆಗಳು ಅವರ ಮನಸ್ಥಿತಿ ಹೇಗಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಬಿಎಸ್‍ಪಿ ವರಿಷ್ಠೆ ಮಾಯಾವತಿ ಕಿಡಿಕಾರಿದ್ದರು. ಬಳಿಕ ರಾಹುಲ್ ಗಾಂಧಿ ಕೂಡ ಕಾಶ್ಮೀರಿ ಮಹಿಳೆಯರ ಬಗ್ಗೆ ಖಟ್ಟರ್ ಹೇಳಿಕೆ ಕೀಳು ಮನಸ್ಥಿತಿಯದ್ದು ಎಂದು ಹರಿಹಾಯ್ದಿದ್ದರು.

    ಈ ವಿರೋಧಗಳಿಂದ ಎಚ್ಚೆತ್ತುಕೊಂಡ ಖಟ್ಟರ್ ಅವರು, ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿವೆ, ನಾನು ಹೆಣ್ಣು ಮಕ್ಕಳ ಬಗ್ಗೆ ಅತಿ ಹೆಚ್ಚಿನ ಗೌರವ ಹೊಂದಿದ್ದೇನೆ ಎಂದು ಆರೋಪವನ್ನು ತಳ್ಳಿಹಾಕಿದ್ದರು. ತನ್ನ ಹೇಳಿಕೆಯನ್ನು ಬಳಸಿ ಪಾಕಿಸ್ತಾನ ಲಾಭ ಪಡೆಯಲು ಮುಂದಾಗುತ್ತಿದ್ದಂತೆ ಎಚ್ಚೆತ್ತುಕೊಂಡು ರಾಹುಲ್ ಗಾಂಧಿ ಅವರು ಸಹ ಕಾಶ್ಮೀರ ದೇಶದ ಆಂತರಿಕ ವಿಷಯ. ಕಾಶ್ಮೀರದಲ್ಲಿನ ಪರಿಸ್ಥಿತಿಗೆ ನೆರೆಯ ಪಾಕಿಸ್ತಾನವೇ ಕಾರಣ ಎಂದು ಆರೋಪಿಸಿದ್ದರು.

    ಮೊದಲೇ ಭಾರತದ ವಿರುದ್ಧ ಕತ್ತಿ ಮಸಿಯುತ್ತಿದ್ದ ಪಾಕಿಸ್ತಾನ ಭಾರತೀಯ ರಾಜಕೀಯ ನಾಯಕರ ಹೇಳಿಕೆಯಿಂದ ಮತ್ತಷ್ಟು ರೊಚ್ಚಿಗೆದ್ದಿದೆ. ಭಾರತೀಯ ನಾಯಕರ ಹೇಳಿಕೆ ಕಾಶ್ಮೀರಿಯರ ಹಕ್ಕುಗಳಿಗೆ ಧಕ್ಕೆ ತಂದಿದೆ, ಇದು ಅಪರಾಧ ಎಂದು ಪಾಕಿಸ್ತಾನ ವಿಶ್ವಸಂಸ್ಥೆಗೆ ಈ ಸಂಬಂಧ ದೂರ ಪತ್ರ ಸಲ್ಲಿಸಿದೆ.

  • ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಯುವಕನಿಗೆ ಗೂಸಾ ಕೊಟ್ಟ ಹರ್ಯಾಣ ಸಿಎಂ – ವಿಡಿಯೋ ನೋಡಿ

    ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಯುವಕನಿಗೆ ಗೂಸಾ ಕೊಟ್ಟ ಹರ್ಯಾಣ ಸಿಎಂ – ವಿಡಿಯೋ ನೋಡಿ

    ಚಂಡೀಗಢ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಯುವಕನೊಬ್ಬನಿಗೆ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಗೂಸಾ ಕೊಟ್ಟಿದ್ದಾರೆ.

    ಹರ್ಯಾಣದ 10 ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಗಳಿದೆ. ಹೀಗಾಗಿ ಕರ್ನಾಲ್‍ನಲ್ಲಿ ಇಂದು ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಅಭಿನಂದನ ಕಾರ್ಯಕ್ರಮ ಆಯೋಜಿಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಯುವಕನೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.

    ಬಿಜೆಪಿ ಕಾರ್ಯಕರ್ತನೊಬ್ಬ ಮನೋಹರ್ ಲಾಲ್ ಖಟ್ಟರ್ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಾನೆ. ಬಳಿಕ ಅವರ ಜೊತೆಗೆ ಸೆಲ್ಫಿ ಫೋಟೋ ತೆಗೆದುಕೊಳ್ಳುವ ಸಲುವಾಗಿ ಮೊಬೈಲ್ ಹಿಡಿಯುತ್ತಾನೆ. ಈ ವೇಳೆ ಏಕಾಏಕಿ ಕೋಪಗೊಂಡ ಸಿಎಂ ಯುವಕನ ಕೈಗೆ ಹೊಡೆದು, ಹಿಂದಕ್ಕೆ ತಳ್ಳುತ್ತಾರೆ. ಮನೋಹರ್ ಲಾಲ್ ಖಟ್ಟರ್ ಅವರ ವರ್ತನೆಯಿಂದ ಮುಜುಗುರಕ್ಕೆ ಒಳಗಾದ ಯುವಕ ಕಾರ್ಯಕ್ರಮದಿಂದ ಹೊರ ನಡೆದಿದ್ದಾನೆ.

    ಈ ದೃಶ್ಯವನ್ನು ಸ್ಥಳದಲ್ಲಿದ್ದ ಸುದ್ದಿಗಾರರು ಹಾಗೂ ಸ್ಥಳೀಯರು ವಿಡಿಯೋ ಕ್ಯಾಮೆರಾ, ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಮನೋಹರ್ ಲಾಲ್ ಖಟ್ಟರ್ ಅವರು, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿಲ್ಲ, ಸುಳ್ಳು ದೂರುಗಳು ಹೆಚ್ಚುತ್ತಿವೆ ಎಂಬ ವಿವಾದತ್ಮಕ ಹೇಳಿಕೆ ನೀಡಿ, ರಾಜ್ಯದ ಹಾಗೂ ದೇಶದ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಪಂಚಕುಲ ಜಿಲ್ಲೆಯ ಕಾಲ್ಕಾ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಮಾಡಿದ್ದ ಅವರು, ಹೆಚ್ಚಿನ ಸಂಖ್ಯೆಯ ಅತ್ಯಾಚಾರ ಪ್ರಕರಣಗಳನ್ನು ಮಹಿಳೆಯರು ಪರಿಚಿತರ ವಿರುದ್ಧ ದಾಖಲಿಸುತ್ತಾರೆ. ಅದರಲ್ಲೂ ಸುಳ್ಳು ಆರೋಪಗಳೇ ಹೆಚ್ಚಾಗಿರುತ್ತದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿಲ್ಲ. ಆದರೇ ಹಿಂದೆ ಎಂದೋ ನಡೆದ ಘಟನೆಗಳು ಹಾಗೂ ಇಂದು ನಡೆಯುತ್ತಿರುವ ಘಟನೆಗಳನ್ನು ಮುಂದಿಟ್ಟುಕೊಂಡು ಬೇಕಂತಲೇ ಸುಳ್ಳು ಅತ್ಯಾಚಾರ ಕೇಸ್‍ಗಳನ್ನು ಕೆಲವರು ದಾಖಲಿಸುತ್ತಾರೆ. ಆದ್ದರಿಂದ ಇಂತಹ ಘಟನೆಗಳಿಗೆ ಸಂಬಂಧಪಟ್ಟ ದೂರುಗಳು ಹೆಚ್ಚಾಗುತ್ತಿದೆಯೇ ಹೊರತು ಪ್ರಕರಣಗಳಲ್ಲ ಎಂದು ಹೇಳಿಕೆ ನೀಡಿದ್ದರು.

  • ಬುಲೆಟ್ ಬೈಕ್ ಏರಿ ದಿಢೀರ್ ಸ್ಟೇಡಿಯಂಗೆ ಎಂಟ್ರಿ ಕೊಟ್ಟ ಹರ್ಯಾಣ ಸಿಎಂ!

    ಬುಲೆಟ್ ಬೈಕ್ ಏರಿ ದಿಢೀರ್ ಸ್ಟೇಡಿಯಂಗೆ ಎಂಟ್ರಿ ಕೊಟ್ಟ ಹರ್ಯಾಣ ಸಿಎಂ!

    ಚಂಡಿಘಡ್: ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಬೈಕ್ ರೈಡ್ ಮೂಲಕ ಕರ್ನಲ್‍ನಲ್ಲಿ ನಿರ್ಮಾಣವಾಗುತ್ತಿರುವ ಸ್ಟೇಡಿಯಂ ಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ.

    ಕರಣ್ ಸ್ಟೇಡಿಯಂ ನಲ್ಲಿ ಸ್ಪರ್ಧಾಳುಗಳಿಗೆ ಸೌಲಭ್ಯ ಕಲ್ಪಿಸಲು ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಸಿಎಂ ಮನೋಹರ್ ಲಾಲ್ ಖಟ್ಟರ್ ರಾಯಲ್ ಎನ್‍ಫೀಲ್ಡ್ ಬೈಕ್ ಏರಿ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಖಟ್ಟರ್ ಕರ್ನಾಲ್ ಶಾಸಕರಾಗಿದ್ದು, ಕರಣ್ ಸ್ಟೇಡಿಯಂ ಗೆ ದಿಢೀರ್ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸ್ಟೇಡಿಯಂ ನ ಫುಟ್ ಬಾಲ್ ಗ್ರೌಂಡ್, ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ಹಲವು ಕೆಲಸಗಳನ್ನು ವೀಕ್ಷಿಸಿದರು.

    ಬೆಳಗಿನ ಜಾವ ಏಕಾಏಕಿಯಾಗಿ ರಾಯಲ್ ಎನ್‍ಫೀಲ್ಡ್ ಬೈಕ್ ಏರಿ ಬಂದ ಸಿಎಂ ಫುಟ್ ಬಾಲ್ ಗ್ರೌಂಡ್ ಹಾಗೂ ಸಿಂಥೆಟಿಕ್ ಟ್ರ್ಯಾಕ್ ಗಳನ್ನು ನಿಗದಿತ ಸಮಯದೊಳಗ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಸಿಎಂ, ಆಟಗಾರರ ಸೌಲಭ್ಯಕ್ಕಾಗಿ ರಾಜ್ಯ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಸ್ಪರ್ಧಿಗಳು ಕೇವಲ ರಾಜ್ಯಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೇ ಕೀರ್ತಿ ತರುವಂತಾಗಬೇಕು ಎಂದರು. ಅಲ್ಲದೇ ಸ್ಟೇಡಿಯಂನ ಒಳಚರಂಡಿ ವ್ಯವಸ್ಥೆ ಕುರಿತು ಎಂಜಿನಿಯರ್ ರೊಂದಿಗೆ ಚರ್ಚೆ ನಡೆಸಿದರು.

    ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಸ್ಟೇಡಿಯಂ ನ ಅಧಿಕಾರಿಗಳು ಸಿಎಂ ನಿರ್ದೇಶನದಂತೆ ಫುಟ್ ಬಾಲ್ ಗ್ರೌಂಡ್ ಹಾಗೂ ಸಿಂಥೆಟಿಕ್ ಟ್ರ್ಯಾಕ್ ಗಳನ್ನು ಪೂರ್ಣಗೊಳಿಸಲು ಈ ವರ್ಷದ ಡಿಸೆಂಬರ್ ವರೆಗೂ ಅವಧಿ ಇದೆ. ಆದರೆ ನವೆಂಬರ್ ಒಳಗಡೆ ಪೂರ್ಣಗೊಳಿಸಲಾಗುವುದು ಎಂದರು.

    ಈ ಸಂದರ್ಭದಲ್ಲಿ ಆಟಗಾರರೊಂದಿಗೆ ಮಾತುಕತೆ ನಡೆಸಿದ ಸಿಎಂ ಸ್ಟೇಡಿಯಂನಲ್ಲಿ ಆಟಗಾರರಿಗೆ ಕುಡಿಯುವ ನೀರು, ಶೌಚಾಲಯ ಸೌಲಭ್ಯ ಸೇರಿದಂತೆ ಹಲವು ಅನುಕೂಲತೆಗಳನ್ನು ಒದಗಿಸಿಕೊಡುವುದಾಗಿ ಹೇಳಿದರು. ಆಟಗಾರರ ಬೇಡಿಕೆಯಂತೆ ಸ್ಟೇಡಿಯಂನಲ್ಲಿ ಸ್ಕೇಟಿಂಗ್ ಹಾಲ್ ನಿರ್ಮಾಣಕ್ಕೆ ಡೆಪ್ಯುಟಿ ಕಮಿಶನರ್ ಗೆ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಹೇಳಿದರು.

  • ಹರ್ಯಾಣ ಸಿಎಂ ತೆಗಳಿ, ಪಂಜಾಬ್ ಸಿಎಂ ಕ್ರಮವನ್ನು ಹೊಗಳಿದ ವೀರಪ್ಪ ಮೊಯ್ಲಿ

    ಹರ್ಯಾಣ ಸಿಎಂ ತೆಗಳಿ, ಪಂಜಾಬ್ ಸಿಎಂ ಕ್ರಮವನ್ನು ಹೊಗಳಿದ ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ವಿರುದ್ಧ ವಾಗ್ದಾಳಿ ನಡೆಸಿ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಸಂಸದ ವೀರಪ್ಪ ಮೊಯ್ಲಿ ಹೊಗಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂಸಾಚಾರವನ್ನು ನಿಭಾಯಿಸಲು ಆಗದ ಮನೋಹರ್ ಲಾಲ್ ಖಟ್ಟರ್ ಹರ್ಯಾಣದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅಯೋಗ್ಯ ಎಂದು ಸಂಸದ ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ.

    ಗುಪ್ತಚರ ಮಾಹಿತಿ ಇದ್ದರೂ ಅಲ್ಲಿ ಸೂಕ್ತ ಮಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿಲ್ಲ. ಹಿಂಸಾಚಾರ ನಡೆಸುವ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಕ್ರಮಗಳನ್ನು ಕೈಗೊಳ್ಳದ ಕಾರಣ ಮುಖ್ಯಮಂತ್ರಿ ಆಗಿರಲು ಖಟ್ಟರ್ ಆಯೋಗ್ಯ ಎಂದು ವಾಗ್ದಾಳಿ ನಡೆಸಿದರು.

    ಪಂಜಾಬ್ ನಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸರ್ಕಾರ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿತ್ತು ಎಂದು ಹೇಳುವ ಮೂಲಕ ಅಮರಿದಂದರ್ ಸಿಂಗ್ ಅವರನ್ನು ವೀರಪ್ಪ ಮೊಯ್ಲಿ ಸಮರ್ಥಿಸಿಕೊಂಡರು.