Tag: mann ki baat

  • ಮನ್ ಕಿ ಬಾತ್‍ನಲ್ಲಿ ಸೂಲಗಿತ್ತಿ ನರಸಮ್ಮರನ್ನು ನೆನೆದ ಪ್ರಧಾನಿ ಮೋದಿ

    ಮನ್ ಕಿ ಬಾತ್‍ನಲ್ಲಿ ಸೂಲಗಿತ್ತಿ ನರಸಮ್ಮರನ್ನು ನೆನೆದ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 51 ನೇ ಹಾಗೂ ವರ್ಷದ ಕೊನೆಯ ‘ಮನ್ ಕಿ ಬಾತ್’ ಕಾರ್ಯಕ್ರಮಲ್ಲಿ ತುಮಕೂರು ಜಿಲ್ಲೆಯ ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ರವರ ಸಾಧನೆಯನ್ನು ನೆನೆದು, ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ 2018ರಲ್ಲಿ ದೇಶ ಸಾಧಿಸಿದ ವಿವಿಧ ಮೈಲಿಗಲ್ಲುಗಳನ್ನು ವಿವರಿಸಿದರು. ಜೊತೆಗೆ ದೇಶದ ಜನತೆಗೆ 2019ರ ಹೊಸ ವರ್ಷದ ಶುಭಶಯ ತಿಳಿಸಿದ್ದಾರೆ.

    ದೇಶದಲ್ಲಿ ಪರಮಾಣು ಸಾಮಥ್ರ್ಯ ಹೆಚ್ಚಾಗಿದ್ದು, ಭೂ ಸೇವೆ, ಜಲಪಡೆ ಹಾಗೂ ವಾಯುಪಡೆಯಲ್ಲಿ ಹೋರಾಡುವ ನ್ಯೂಕ್ಲಿಯರ್ ಟ್ರಯಾಡ್ ಸಾಧನೆ ಈ ವರ್ಷ ಲಭಿಸಿದೆ. 2018ರಲ್ಲಿ ನಡೆದ ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಹೆಚ್ಚು ಪದಕಗಳನ್ನು ಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಪ್ರಪಂಚದಲ್ಲೇ ಅತಿ ದೊಡ್ಡ ಆರೋಗ್ಯ ವಿಮೆ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ, ದೇಶದ ಪ್ರತಿ ಗ್ರಾಮಕ್ಕೂ ವಿದ್ಯುತ್ ಸಂಪರ್ಕ, ಸರ್ದಾರ್ ಪಟೇಲ್‍ರ ‘ಏಕತಾ ಪ್ರತಿಮೆ’ ಅನಾವರಣ ಸೇರಿದಂತೆ ಅನೇಕ ಬೆಳಗವಣಿಗೆಯನ್ನು 2018ರಲ್ಲಿ ಕಂಡಿದ್ದೇವೆ. ಇತ್ತ ವಿಶ್ವಸಂಸ್ಥೆ ನೀಡುವ ಅತ್ಯುನ್ನತ ಪರಿಸರ ಪ್ರಶಸ್ತಿ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಗೆ ಭಾರತ ಪಾತ್ರವಾಗಿದೆ ಎಂದು ಹೇಳಿದರು.

    ಇದು 2018ರ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮ. ಮತ್ತೆ 2019ರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭೇಟಿಯಾಗೋಣ ಎಂದು ತಿಳಿಸಿದ ಮೋದಿ, ದೇಶದ ಜನತೆಗೆ ಹೊಸ ವರ್ಷದ ಶುಭಶಯ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನ್ ಕಿ ಬಾತ್‍ನಲ್ಲಿ ಮೈಸೂರಿನ ದರ್ಶನ್‍ರನ್ನು ಪ್ರಸ್ತಾಪಿಸಿದ ಮೋದಿ

    ಮನ್ ಕಿ ಬಾತ್‍ನಲ್ಲಿ ಮೈಸೂರಿನ ದರ್ಶನ್‍ರನ್ನು ಪ್ರಸ್ತಾಪಿಸಿದ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವರ್ಷದ ಮೊದಲ ಮನ್ ಕಿ ಬಾತ್ ಭಾಷಣದಲ್ಲಿ ಕರ್ನಾಟಕ ಹಾಗೂ ಕನ್ನಡಿಗರ ಹೆಸರನ್ನು ಪ್ರಸ್ತಾಪ ಮಾಡಿದ್ದು, ಪ್ರಮುಖವಾಗಿ ಮೈಸೂರು ಹುಡುಗನ ಕಥೆಯನ್ನು ಹಂಚಿಕೊಂಡರು.

    ಮೋದಿ ಅವರು ಪ್ರಧಾನಿಯಾದ ಬಳಿಕ ನಡೆಸಿಕೊಡುತ್ತಿರುವ 40ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮ ಇದಾಗಿದ್ದು, ಪ್ರಮುಖವಾಗಿ ಮಹಿಳಾ ಸಬಲೀಕರಣ, ಜನಔಷಧಿ ಹಾಗೂ ಗಣರಾಜೋತ್ಸವದ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು.

    ಈ ಬಾರಿಯ ಮನ್ ಕಿ ಬಾತ್‍ನಲ್ಲಿ ಮೋದಿ ಕರ್ನಾಟಕದ ಮೈಸೂರು ಹುಡುನ ಬಗ್ಗೆ ಪ್ರಸ್ತಾಪಿಸಿ, ಮೈಸೂರಿನ ದರ್ಶನ್ ಎನ್ನುವವರು ಮೈ ಗವರ್ನಮೆಂಟ್ ಆಪ್ ನಲ್ಲಿ ಪ್ರಧಾನ ಮಂತ್ರಿ ಜನಔಷಧಿ ಯೋಜನೆ ಅಡಿಯಲ್ಲಿ ಔಷಧಿ ಖರೀದಿಸಿದರೆ ಎಷ್ಟು ಉಳಿತಾಯ ಆಗುತ್ತಿದೆ ಎಂಬುದರ ಬಗ್ಗೆ ವಿಸ್ತೃತವಾಗಿ ವಿವರಿಸಿದ್ದಾರೆ ಎಂದು ಮೋದಿ ಹೇಳಿದರು. ಈ ಯೋಜನೆಯಿಂದ ದರ್ಶನ್ ಅವರು ತಾವು ಈ ಮೊದಲು ನೀಡುತ್ತಿದ್ದ ಹಣದಲ್ಲಿ ಶೇ.75 ರಷ್ಟು ಉಳಿತಾಯ ಮಾಡಿದ್ದಾರೆ ಎಂದು ಹೇಳಿದರು.

    ಮಹಿಳಾ ಸಬಲೀಕರಣ ವಿಚಾರವಾಗಿ ಕಲ್ಪನಾ ಚಾವ್ಲಾ ಅವರ ಸಾಧನೆಯನ್ನು ಸ್ಮರಿಸಿದ ಅವರು, ನಮ್ಮ ಸಂಸ್ಕೃತ ಭಾಷೆ ಬೋಧನೆಯಲ್ಲಿ ಮಹಿಳೆಯರ ಸ್ಥಾನಮಾನದ ಕುರಿತು ತಿಳಿಸಲಾಗಿದ್ದು, ನಮಗೇ ಒಂದು ಹೆಣ್ಣು ಮಗು ಇದ್ದಾರೆ 10 ಗಂಡು ಮಕ್ಕಳಿಗೆ ಸಮಾನ ಎಂಬ ವಾಕ್ಯವನ್ನು ಸ್ಮರಿಸಿದರು.

    ಬೆಳಗಾವಿಯ ಸೀತವ್ವ ಜೋಡಟ್ಟ ಅವರ ಹೆಸರನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ಅವರು, ಸೀತವ್ವ ಅವರನ್ನು ಸಬಲೀಕರಣದ ದೇವಿ ಎಂದರೆ ತಪ್ಪಾಗುವುದಿಲ್ಲ. ಏಳನೇ ವಯಸ್ಸಿಗೆ ದೇವದಾಸಿಯನ್ನಾಗಿ ಮಾಡಲಾಗಿತ್ತು. ಆದರೆ ಸೀತವ್ವ ದೇವದಾಸಿಯರ ಕಲ್ಯಾಣಕ್ಕೋಸ್ಕರ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅಲ್ಲದೇ 30 ವರ್ಷಗಳ ಕಾಲ ಹಲವು ದಲಿತ ಮಹಿಳೆಯ ಸಬಲೀಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಹೊಗಳಿದರು.

    ಈ ಬಾರಿಯ ಗಣರಾಜ್ಯೋತ್ಸವವ ಹಿನ್ನೆಲೆಯಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗೆ ಸೀತವ್ವ ಅವರನ್ನು ಆಯ್ಕೆ ಮಾಡಲಾಗಿದೆ.

     

  • ಮನ್ ಕೀ ಬಾತ್ ಒಂದು ಕಾರ್ಯಕ್ರಮವೇ: ಮೋದಿ ವಿರುದ್ಧ ಸಿಎಂ ವಾಗ್ದಾಳಿ

    ಮನ್ ಕೀ ಬಾತ್ ಒಂದು ಕಾರ್ಯಕ್ರಮವೇ: ಮೋದಿ ವಿರುದ್ಧ ಸಿಎಂ ವಾಗ್ದಾಳಿ

    ಬೆಂಗಳೂರು: ಮನ್ ಕೀ ಬಾತ್ ಅದು ಒಂದು ಕಾರ್ಯಕ್ರಮವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ವಿಧಾನಸೌಧದ ಆವರಣದಲ್ಲಿ ಇರುವ ಗಾಂಧಿ ಪ್ರತಿಮೆ ಹಾಗೂ ಶಾಸ್ತ್ರಿ ಪುತ್ಥಳಿಗೆ ಗೌರವ ಸಲ್ಲಿಸಿದರು. ಈ ವೇಳೆ ಕನ್ನಡಿಗರು ‘ಕಾಮ್ ಕೀ ಬಾತ್’ ಎಂದು ಹಿಂದಿ ಹೆಸರು ಇಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೋದಿಯವರ ಮನ್ ಕೀ ಬಾತ್‍ಗೆ ಪ್ರತಿಯಾಗಿ ಪ್ರಾಸ ಬರುವಂತೆ ಕಾಮ್ ಕೀ ಬಾತ್ ಎಂದು ಹೇಳಿದ್ದೇನೆ ಅಷ್ಟೇ ಎಂದರು.

    ಮಾತನ್ನು ಮುಂದುವರಿಸಿ, ಮನ್ ಕೀ ಬಾತ್ ಅದು ಒಂದು ಕಾರ್ಯಕ್ರಮವೇ? ಪ್ರಧಾನಿ ಅವರು ಏನು ಮಾಡದೇ ಮನ್ ಕೀ ಬಾತ್ ಮಾಡುತ್ತಿದ್ದಾರೆ. ನಾವು ಕೆಲಸ ಮಾಡಿ ಕಾಮ್ ಕೀ ಬಾತ್ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಮತ್ತೆ ಕನ್ನಡ ಪಾಠ: ಕಾಮ್ ಕೀ ಬಾತ್ ಹೆಸರು ಇಡುವ ಬಗ್ಗೆ ಸಮರ್ಥಿಸಿದ ಅವರು, ಅನ್ಯ ಭಾಷೆಯ ಶಬ್ಧಗಳಿಗೆ ‘ಉ’ ಕಾರ ಸೇರಿಸಿದರೆ ಅದು ಕನ್ನಡ ಶಬ್ದ ಆಗುತ್ತದೆ ಎಂದು ಕುವೆಂಪು ಹೇಳಿದ್ದಾರೆ. ಬಸ್ – ಬಸ್ಸು, ಕಾರ್ – ಕಾರು ಎಂದು ಹೇಳುವುದಿಲ್ಲವೇ? ಹಾಗೆ ಕಾಮ್ ಕಿ ಬಾತ್ ಎನ್ನುವುದು ಕನ್ನಡ ಪದವೇ ಎಂದು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.

    ಗಾಂಧಿ ನಾಯಕತ್ವದಲ್ಲಿ ಅನೇಕ ಜನ ಸ್ವಾತಂತ್ರ್ಯ ಹೋರಾಟಗಾರರು ಚಳುವಳಿಯಲ್ಲಿ ಭಾಗವಹಿಸಿದ್ದಾರೆ. ಗಾಂಧೀಜಿ ನಮಗೆ ಮಾತ್ರ ಅಲ್ಲ ಅವರು ವಿಶ್ವನಾಯಕರು. ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದರೆ ಅದು ಗಾಂಧೀಜಿ ಕೊಡುಗೆ. ಅಂತಹ ಮಹಾನ್ ನಾಯಕರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಒಬ್ಬ ಮತಾಂಧನ ಗುಂಡಿಗೆ ಅವರು ಬಲಿಯಾದರು. ಗಾಂಧೀಜಿ ಅವರನ್ನು ಮರೆತರೆ ದೇಶವೇ ಇಲ್ಲ ಎಂದು ಹೇಳಿ ಸ್ಮರಿಸಿದರು.

    ಲಾಲ್ ಬಹದ್ದೂರ್ ಶಾಸ್ತ್ರಿಯವರೂ ಕೂಡಾ ದೇಶ ಕಂಡಂತಹ ಪ್ರಾಮಾಣಿಕ ಪ್ರಧಾನಿ. ಬಹಳ ಮೌಲ್ಯಯುತವಾಗಿ ಬದುಕಿದ್ದ ಶಾಸ್ತ್ರೀಜಿ ಅವರ ಜೈಜವಾನ್ ಜೈಕಿಸಾನ್ ಘೋಷಣೆ ಜನಪ್ರಿಯ. ರೈತರಿಗೆ, ಸೈನಿಕರಿಗೆ ಬಹಳ ಗೌರವ ಕೊಡುತ್ತಿದ್ದರು ಎಂದು ಕೊಂಡಾಡಿದರು.

  • ನವಭಾರತದ ನಿರ್ಮಾಣದಲ್ಲಿ ಮನ್ ಕೀ ಬಾತ್ ಹೆಚ್ಚು ಸಹಾಯಕಾರಿ: ಪ್ರಧಾನಿ ಮೋದಿ

    ನವಭಾರತದ ನಿರ್ಮಾಣದಲ್ಲಿ ಮನ್ ಕೀ ಬಾತ್ ಹೆಚ್ಚು ಸಹಾಯಕಾರಿ: ಪ್ರಧಾನಿ ಮೋದಿ

    ನವದೆಹಲಿ: ಕನಸಿನ ನವ ಭಾರತದ ನಿರ್ಮಾಣದಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    36ನೇ ಮನ್ ಕೀ ಬಾತ್ ಆಕಾಶವಾಣಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ಅವರು, ಸರ್ಕಾರದ ಆಡಳಿತದಲ್ಲಿ ಜನ ಸಾಮಾನ್ಯರ ಸಲಹೆಗಳನ್ನು ಪಡೆದು ನವಭಾರತದ ಕನಸಿಗೆ ಮಾರ್ಗದರ್ಶನವಾಗಿ ರೂಪುಗೊಂಡಿರುವ ಮನ್ ಕಿ ಬಾತ್ ಕಾರ್ಯಕ್ರಮ ಸರ್ಕಾರದ ಉತ್ತಮ ಕ್ರಮವಾಗಿದೆ ಎಂದು ಹೇಳಿದರು.

    ಮನ್ ಕಿ ಬಾತ್ ಕಾರ್ಯಕ್ರಮವಾಗಿ ಆರಂಭವಾಗಿ ಮೂರು ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಜನರ ಹೊಸ ಚಿಂತನೆಗಳು ಹಾಗೂ ಸಲಹೆಗಳನ್ನು ಪಡೆಯಲು ಕಾರ್ಯಕ್ರಮ ಹೆಚ್ಚು ಸಹಾಕಾರಿಯಾಗಿದೆ. ಅಚಾರ್ಯ ವಿನೋಬ ಭಾವೆಯವರ `ಎ-ಸರ್ಕಾರಿ ಇಸ್ ಅಸರ್ಕಾರಿ’ ಎಂಬ ಮಾತು ನನಗೆ ಸದಾ ನನಗೆ ನೆನಪಿದೆ. ಅಂದರೆ, ಸರ್ಕಾರದ ಪರಿಭಾಷೆಯಿಂದ ಹೊರಗಿರುವ ಯಾವುದಾದರು ಪರಿಣಾಮಕಾರಿಯಾಗಿರುತ್ತದೆ ಎಂಬ ಅರ್ಥವನ್ನು ನೀಡುತ್ತದೆ. ಈ ಕಾರ್ಯವನ್ನು ನಾನು ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಇದನ್ನು ಸಾಧ್ಯವಾಗಿಸಿ, ದೇಶದ ಪ್ರತಿ ಪ್ರಜೆಯನ್ನು ಕೇಂದ್ರವಾಗಿ ಮಾಡಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಿಳಿಸಿದರು.

    ಕಳೆದ ಮೂರು ವರ್ಷಗಳಲ್ಲಿ ಪ್ರಪಂಚಕ್ಕೆ ಭಾರತದ ಶಕ್ತಿಯನ್ನು ಪ್ರದರ್ಶಿಸುವ ವೇದಿಕೆಯಾಗಿ ಮನ್ ಕೀ ಬಾತ್ ಕಾರ್ಯನಿರ್ವಹಿಸಿದೆ. ಪ್ರಧಾನಿ ಈ ಕಾರ್ಯಕ್ರಮದ ಮೂಲಕ ಸ್ವಚ್ಛ ಭಾರತ ಅಭಿಯಾನ, ಮಹಿಳಾ ಸಬಲೀಕರಣ, ಹಾಗೂ ಸರ್ಕಾರವು ಕಾರ್ಯನಿರ್ವಹಿಸ ಬೇಕಾದ ವಿಧಾನಗಳ ಬಗ್ಗೆ ಜನರಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದಿದ್ದಾರೆ. ಅಲ್ಲದೇ ಉತ್ತಮ ಸಲಹೆಗಳನ್ನು ನೀಡಿರುವ ಜನರನ್ನು ಪ್ರತ್ಯೇಕವಾಗಿ ಅಭಿನಂದಿಸಿದ್ದಾರೆ.

    ಈ ಬಾರಿಯ ಭಾಷಣದಲ್ಲಿ ಕಾಶ್ಮೀರದ ಬಿಲಾಲ್ ದಾರ್(18) ಎಂಬ ಯುವಕ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿರುವ ಕುರಿತು ಪ್ರಸ್ತಾಪಿಸಿದರು. ಬಿಲಾಲ್‍ನನ್ನು ಶ್ರೀನಗರ ಸ್ವಚ್ಛತ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಯುವಕ ದಾಲ್ ಸರೋವರವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸುಮಾರು 12 ಟನ್ ಕಸವನ್ನು ಸಂಗ್ರಹಿಸಿದ್ದ ಎಂದು ಹೊಗಳಿದರು. ಅಷ್ಟೇ ಅಲ್ಲದೇ ಈ ಮೂಲಕ ದೇಶದ ಮಾದರಿ ವ್ಯಕ್ತಿಯಾಗಿದ್ದಾನೆ ಎಂದು ಹೇಳಿದರು.

    ಅಲ್ಲದೆ ಈ ತಮ್ಮ ಕಾರ್ಯಕ್ಕಾಗಿ ಬೆಂಬಲವನ್ನು ನೀಡಿರುವ ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಗಾಂಧಿ ಜಯಂತಿಯ ಅಂಗವಾಗಿ ಎಲ್ಲರೂ ಖಾದೀ ಬಟ್ಟೆಗಳನ್ನು ಕೊಳ್ಳುವಂತೆ ಮನವಿ ಮಾಡಿಕೊಂಡ ಮೋದಿ ಈ ಕಾರ್ಯದಿಂದ ಹಲವು ಬಡ ಖಾದಿ ತಯಾರಿಕರಿಗೆ ಸಹಾಯವನ್ನು ಮಾಡಿದಂತೆ ಆಗುತ್ತದೆ. ಇಂತಹ ಬಡ ಮನೆಗಳಲ್ಲಿ ದೀಪವನ್ನು ಹಚ್ಚುವ ಕಾರ್ಯವನ್ನು ಮಾಡಬೇಕಿದೆ ಎಂದರು.

    ತಮ್ಮ ಆಪ್, ಇ-ಮೇಲ್, ಮೊಬೈಲ್ ಮತ್ತು ಹಲವು ಸಾಮಾಜಿಕ ಜಾಲತಾಣಗಾಳ ಮೂಲಕ ಮಹತ್ವ ಮಾಹಿತಿಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದ ಮೋದಿ ಈ ಮಾಹಿತಿ, ಸಲಹೆಗಳನ್ನು ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

    ಈ ವರ್ಷದ ಸ್ವಾತಂತ್ರ್ಯ ದಿನಚಾರಣೆ ದಿನದಂದು ಪ್ರಸ್ತಾಪಿಸ ಬೇಕಾದ ಅಂಶಗಳ ಕುರಿತು ಮಾಹಿತಿ ನೀಡಿ ಎಂದು ಪ್ರಧಾನಿಗಳು ಸಲಹೆಗಳನ್ನು ಕೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುಮಾರು 8 ಸಾವಿರ ಪ್ರತಿಕ್ರಿಯೆಗಳು ಲಭಿಸಿದ್ದವು. ಅಲ್ಲದೆ ಕಡಿಮೆ ಅವಧಿಯ ಭಾಷಣವನ್ನು ಮಾಡುವಂತೆ ಬಂದ ಕೋರಿಕೆಗೆ ಸ್ಪಂದಿಸಿದ ಅವರು ತಮ್ಮ ಭಾಷಣದ ಅವಧಿಯನ್ನು ಕಡಿಮೆ ಮಾಡಿದ್ದರು.

  • ಭಾರತ ಹಿಂಸಾಚಾರವನ್ನು ಸಹಿಸಲ್ಲ, ಮುಸ್ಲಿಮ್ ಸಂಘಟನೆಯನ್ನು ಮನ್ ಕೀ ಬಾತ್‍ನಲ್ಲಿ ಹೊಗಳಿದ ಮೋದಿ

    ಭಾರತ ಹಿಂಸಾಚಾರವನ್ನು ಸಹಿಸಲ್ಲ, ಮುಸ್ಲಿಮ್ ಸಂಘಟನೆಯನ್ನು ಮನ್ ಕೀ ಬಾತ್‍ನಲ್ಲಿ ಹೊಗಳಿದ ಮೋದಿ

    ನವದೆಹಲಿ: ಹರ್ಯಾಣ ಮತ್ತು ಪಂಚಕುಲಾದಲ್ಲಿ ನಡೆದ ಹಿಂಸಾಚಾರವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ಆಕಾಶವಾಣಿ ಕಾರ್ಯಕ್ರಮದಲ್ಲಿ ಖಂಡಿಸಿದ್ದಾರೆ.

    ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದ ಬಗ್ಗೆ ನೇರವಾಗಿ ವಿಚಾರವನ್ನು ಪ್ರಸ್ತಾಪ ಮಾಡದ ಮೋದಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳಲು ಅವರು ಯಾರು? ಒಂದು ಕಡೆ, ಉತ್ಸವ ಹರಡಿದ್ದರೆ ಇನ್ನೊಂದು ಕಡೆ ಹಿಂಸಾಚಾರ ಕೇಳಿ ಬರುತ್ತಿದೆ. ಭಾರತ ಬುದ್ಧ, ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಹುಟ್ಟಿದ ದೇಶವಾಗಿದ್ದು ಯಾವುದೇ ಹಿಂಸಾಚಾರವನ್ನು ಸಹಿಸುವುದಿಲ್ಲ. ನಂಬಿಕೆಯ ಹೆಸರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸುವ ಹಕ್ಕು ಯಾರಿಗೂ ಇಲ್ಲ. ಹಿಂಸಾಚಾರ ಸುದ್ದಿ ಬಂದರೆ ಹೆದರಿಕೆ ಆಗುವುದು ಸಹಜ ಎಂದು ಮೋದಿ ಹೇಳಿದರು.

    ಗುಜರಾತ್‍ನಲ್ಲಿ ಪ್ರವಾಹದ ಸಮಯದಲ್ಲಿ ಇಸ್ಲಾಮಿಕ್ ಸಂಘಟನೆ ಜಮೈತ್ ಉಲೆಮಾ-ಇ-ಹಿಂದ್ ಕಾರ್ಯವನ್ನು ಹೊಗಳಿದ ಅವರು, ಭನಸ್ಕಾಂತ ಜಿಲ್ಲೆಯ ದನೇರದಲ್ಲಿ ನೆರೆಯಿಂದ ಹಾನಿಯಾಗಿದ್ದ 22 ದೇವಾಲಯ ಹಾಗೂ 2 ಮಸೀದಿಯನ್ನು ಈ ಸಂಘಟನೆಯ ಸದಸ್ಯರು ಶುದ್ಧೀಕರಿಸಿದರು. ಅವರು ಒಟ್ಟಾಗಿ ಬಂದು ಕೆಲಸ ಮುಗಿಸಿದ್ದಾರೆ. ಜಮೈತ್-ಉಲೆಮಾ-ಇ-ಹಿಂದ್‍ನ ಸ್ವಯಂ ಸೇವಕರು ಸ್ವಚ್ಛತೆಗಾಗಿ ಒಂದು ಒಳ್ಳೆ ಸ್ಪೂರ್ತಿದಾಯಕ ಉದಾಹರಣೆಯಾಗಿದ್ದಾರೆ ಎಂದು ಮೋದಿ ಶ್ಲಾಘಿಸಿದರು.

    ಇದೇ ವೇಳೆ ಯುವ ಜನತೆ ಕ್ರೀಡೆಯತ್ತ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದ ಮೋದಿ ಹಿಂದೆ ಹೇಗಿತ್ತು ಈಗ ಹೇಗೆ ಕುಟುಂಬ ಬದಲಾಗಿದೆ ಎನ್ನುವುದನ್ನು ವಿವರಿಸಿದರು. ಹಿಂದಿನ ದಿನಗಳಲ್ಲಿ ಕುಟುಂಬದ ಮಕ್ಕಳು ಆಟವಾಡಲು ಹೋದಾಗ ತಾಯಿ “ನೀನು ಯಾವಾಗ ಮರಳಿ ಮನೆಗೆ ಬರುತ್ತೀಯಾ” ಎಂದು ಪ್ರಶ್ನಿಸುತ್ತಿದ್ದಳು. ಆದರೆ ಈಗ, “ನೀನು ಯಾವಾಗ ಹೊರಗಡೆ ಹೋಗುತ್ತೀಯಾ” ಎಂದು ಪ್ರಶ್ನಿಸಿ ಬೈಯುತ್ತಾಳೆ. ಕಾಲ ಹೇಗೆ ಬದಲಾಗಿದೆ ಅಲ್ಲವೇ ಎಂದು ಅವರು ಪ್ರಶ್ನಿಸಿದರು.

    ಅಕ್ಟೋಬರ್ 2ಕ್ಕೆ ಸ್ವಚ್ಛ ಭಾರತ ಅಭಿಯಾನಕ್ಕೆ ಮೂರನೇ ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಮೋದಿ, ಈ ದಿನ ‘ಸ್ವಚ್ಛತಾ ಹೀ ಸೇವಾ’ ಅಭಿಯಾನದ ಅಡಿಯಲ್ಲಿ ದೊಡ್ಡ ಅಂದೋಲವನ್ನು ಕೈಗೊಂಡು ಹತ್ತಿರದ ಪ್ರದೇಶಗಳನ್ನು ಭೇಟಿ ಮಾಡಿ ಸ್ವಚ್ಛ ಭಾರತದ ಬಗ್ಗೆ ಅರಿವು ಮೂಡಿಸೋಣ ಎಂದು ಜನರಲ್ಲಿ ಮನವಿ ಮಾಡಿದರು.

  • ಮೋದಿಯ ಮನ್ ಕೀ ಬಾತ್‍ನಿಂದ ಆಲ್ ಇಂಡಿಯಾ ರೇಡಿಯೋ ಗಳಿಸಿದ ಆದಾಯ ಇಷ್ಟು

    ಮೋದಿಯ ಮನ್ ಕೀ ಬಾತ್‍ನಿಂದ ಆಲ್ ಇಂಡಿಯಾ ರೇಡಿಯೋ ಗಳಿಸಿದ ಆದಾಯ ಇಷ್ಟು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಆಲ್ ಇಂಡಿಯಾ ರೇಡಿಯೋ ಕೋಟಿ ಕೋಟಿ ಆದಾಯ ಗಳಿಸಿದೆ.

    ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋಡ್ ಬುಧವಾರದಂದು ಲೋಕಸಭೆಗೆ ಈ ಬಗ್ಗೆ ಲಿಖಿತ ಉತ್ತರ ನೀಡಿದ್ದು, ಮನ್ ಕೀ ಬಾತ್ ಕಾರ್ಯಕ್ರಮದಿಂದ ಆಲ್ ಇಂಡಿಯಾ ರೇಡಿಯೋ ಕಳೆದ ಎರಡು ವರ್ಷಗಳಲ್ಲಿ 10 ಕೋಟಿ ರೂ. ಆದಾಯ ಗಳಿಸಿದೆ ಎಂದು ತಿಳಿಸಿದ್ದಾರೆ.

    ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ 2015-16ರ ಹಣಕಾಸು ವರ್ಷದಲ್ಲಿ ಆಲ್ ಇಂಡಿಯಾ ರೇಡಿಯೋ 4.78 ಕೋಟಿ ರೂ. ಗಳಿಸಿದೆ. ಹಾಗೇ 2016-17ನೇ ಹಣಕಾಸು ವರ್ಷದಲ್ಲಿ 5.19 ಕೋಟಿ ರೂ ಆದಾಯ ಗಳಿಸಿದೆ ಎಂದು ಹೇಳಿದ್ದಾರೆ.

    ಕಾರ್ಯಕ್ರಮದ ಪ್ರಸಾರ ಸಂಪೂರ್ಣವಾದ ಬಳಿಕ ಪ್ರಾದೇಶಿಕ ಆವೃತ್ತಿಯನ್ನು 18 ಭಾಷೆಗಳು ಹಾಗೂ 33 ಉಪಭಾಷೆಗಳಲ್ಲಿ ಅದೇ ದಿನ ಪ್ರಸಾರ ಮಾಡಲಾಗುತ್ತದೆ. ಇಂಗ್ಲಿಷ್ ಹಾಗೂ ಸಂಸ್ಕೃತದಲ್ಲೂ ಕಾರ್ಯಕ್ರಮ ಪ್ರಸಾರವಾಗುತ್ತದೆ. ದೇಶದ ಜನರಿಗಾಗಿ ಟ್ರಾನ್ಸ್‍ಮಿಟ್ಟರ್‍ಗಳ ಮೂಲಕ ಹಾಗೂ ವಿಶ್ವದಾದ್ಯಂತ ಕೇಳುಗರಿಗಾಗಿ ಅಂತರ್ಜಾಲ ಹಾಗೂ ಶಾರ್ಟ್ ವೇವ್ ಮೂಲಕ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಜಾಹಿರಾತುಗಳಿಂದ ರೇಡಿಯೋಗೆ ಆದಾಯ ಹರಿದು ಬರುತ್ತದೆ. 2014ರ ಅಕ್ಟೋಬರ್ 3 ರಂದು ಮೋದಿಯ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಚಾಲನೆ ದೊರಕಿತ್ತು. ಪ್ರತಿ ತಿಂಗಳು ನಿರ್ದಿಷ್ಟ ಭಾನುವಾರದಂದು ಕಾರ್ಯಕ್ರಮ ಪ್ರಸಾರವಾಗುತ್ತದೆ. ಕಾರ್ಯಕ್ರಮದಲ್ಲಿ ಮೋದಿ ಭಾಷಣದ ಮುಂಚೆ ಹಾಗೂ ನಂತರ ಹಲವಾರು ಬ್ರ್ಯಾಂಡ್‍ಗಳು ಲಕ್ಷಾಂತರ ಕೇಳುಗರನ್ನ ತಲುಪಲು ಜಾಹಿರಾತು ನೀಡಲು ಬಯಸುತ್ತವೆ.

    ಕಾರ್ಯಕ್ರಮದಲ್ಲಿ ಮೋದಿ ರಾಷ್ಟ್ರ ಹಾಗೂ ಸಾಮಾಜದ ಪ್ರಸ್ತುತ ವಿಷಯಗಳ ಬಗ್ಗೆ ಮಾತನಾಡ್ತಾರೆ. 2015ರ ಜನವರಿಯಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಅಲ್ಲದೆ ಯಾವ ವಿಷಯದ ಬಗ್ಗೆ ನಾನು ಮಾತನಾಡ್ಬೇಕು ಎಂದು ಮೋದಿ ಜನರಿಗೆ ಸಲಹೆ ಕೇಳಿದ್ದು, ನರೇಂದ್ರ ಮೋದಿ ಹಾಗೂ ಮೈ ಗವರ್ನಮೆಂಟ್ ವೆಬ್‍ಸೈಟ್ ಮತ್ತು ಆ್ಯಪ್ ಮೂಲಕ ಜನರು ಸೂಚಿಸಿದ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನ ಹಂಚಿಕೊಳ್ತಾರೆ.