Tag: mann ki baat

  • ಮನ್‌ ಕಿ ಬಾತ್‌: ಕೋವಿಡ್‌ ಇನ್ನೂ ಹೋಗಿಲ್ಲ- ದೇಶದ ಜನತೆಗೆ ಪ್ರಧಾನಿ ಮೋದಿ ಎಚ್ಚರಿಕೆ

    ಮನ್‌ ಕಿ ಬಾತ್‌: ಕೋವಿಡ್‌ ಇನ್ನೂ ಹೋಗಿಲ್ಲ- ದೇಶದ ಜನತೆಗೆ ಪ್ರಧಾನಿ ಮೋದಿ ಎಚ್ಚರಿಕೆ

    ನವದೆಹಲಿ: ಕೋವಿಡ್‌ ಇನ್ನೂ ಹೋಗಿಲ್ಲ. ಕೊರೊನಾ ಸಾಂಕ್ರಾಮಿಕ ವಿರುದ್ಧ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ತಿಂಗಳ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ನ 83ನೇ ಕಂತಿನಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಈ ವೇಳೆ ಮುಂದಿನ ತಿಂಗಳು ನಡೆಯಲಿರುವ ನೌಕಾ ದಳ ದಿನ ಹಾಗೂ ರಾಷ್ಟ್ರೀಯ ಧ್ವಜಾ ದಿನಾಚರಣೆ ಹಿನ್ನೆಲೆಯಲ್ಲಿ ದೇಶದ ಯೋಧರಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದರು. 1971ರ ಯುದ್ಧದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಗೂ ಪ್ರಧಾನಿ ವಂದಿಸಿದರು. ಇದನ್ನೂ ಓದಿ: ಸರ್ಕಾರಿ ಶಾಲೆಯ 25 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು

    ನಂತರ ಮಾತನಾಡಿದ ಅವರು, ಆಯುಷ್ಮಾನ್‌ ಭಾರತ್‌ ಹೆಲ್ತ್‌ ಮಿಷನ್‌ ಯೋಜನೆಯನ್ನು ದೇಶದ ಬಡ, ಮಧ್ಯಮ ವರ್ಗದ ಕುಟುಂಬಗಳಿ ಹಿತದೃಷ್ಟಿಯಿಂದ ಜಾರಿಗೊಳಿಸಲಾಗಿದೆ. ಫಲಾನುಭವಿಗಳು ಯೋಜನೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಂಬಂಧಪಟ್ಟವರು ಯೋಜನೆ ಕುರಿತು ಜನತೆಯಲ್ಲಿ ಅರಿವು ಮೂಡಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.

    ಇದೇ ಡಿ.6 ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಪರಿನಿಬ್ಬಾಣದ ದಿನ. ಅವರ ಜೀವನಾದರ್ಶನಗಳನ್ನು ನಾವು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ಅಂಬೇಡ್ಕರರು ತಮ್ಮ ಇಡೀ ಜೀವನವನ್ನು ದೇಶ ಮತ್ತು ಸಮಾಜಕ್ಕಾಗಿ ಮುಡಿಪಾಗಿಟ್ಟರು.‌ ನಮ್ಮ ಸಂವಿಧಾನವು ನಮ್ಮಿಂದ ಮೂಲಭೂತ ಕರ್ತವ್ಯಗಳನ್ನು ನಿರೀಕ್ಷಿಸುತ್ತದೆ ಎಂಬುದನ್ನು ದೇಶವಾಸಿಗಳಾದ ನಾವು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಒಮಿಕ್ರಾನ್ ಆತಂಕ – ಮಾಸ್ಕ್ ಇಲ್ಲದವರಿಗೆ ಮೆಟ್ರೋಗೆ ನೋ ಎಂಟ್ರಿ

    ಭಾರತದಲ್ಲಿ 70 ಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ಗಳಿದ್ದು (ನವೋದ್ಯಮ), ಅವುಗಳ ಮೌಲ್ಯ 1 ಮಿಲಿಯನ್‌ಗೂ ಹೆಚ್ಚು ದಾಟಿದೆ. ಅನೇಕ ಭಾರತೀಯರು ತಮ್ಮ ಸ್ಟಾರ್ಟ್‌ ಅಪ್‌ಗಳ ಮೂಲಕ ಜಾಗತಿಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

    PM MODI

    ಇದು ಸ್ಟಾರ್ಟ್‌ ಅಪ್‌ ಯುಗ. ಈ ಕ್ಷೇತ್ರದಲ್ಲಿ ಭಾರತವು ಜಗತ್ತನ್ನು ಮುನ್ನಡೆಸುತ್ತಿದೆ. ವರ್ಷದಿಂದ ವರ್ಷಕ್ಕೆ ಸ್ಟಾರ್ಟ್‌ ಅಪ್‌ಗಳು ದಾಖಲೆ ಪ್ರಮಾಣದಲ್ಲಿ ಹೂಡಿಕೆಯನ್ನು ಪಡೆಯುತ್ತಿವೆ. ಈ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ದೇಶದ ಸಣ್ಣ ನಗರಗಳಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

  • ಮಿಥಾಲಿ ರಾಜ್ ಇತರ ಕ್ರಿಕೆಟಿಗರಿಗೆ ಸ್ಫೂರ್ತಿ – ನರೇಂದ್ರ ಮೋದಿ

    ಮಿಥಾಲಿ ರಾಜ್ ಇತರ ಕ್ರಿಕೆಟಿಗರಿಗೆ ಸ್ಫೂರ್ತಿ – ನರೇಂದ್ರ ಮೋದಿ

    ನವದೆಹಲಿ: ಭಾರತ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಇತರ ಕ್ರಿಕೆಟ್ ಆಟಗಾರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಿಥಾಲಿ ರಾಜ್ ಕೆಲದಿನಗಳ ಹಿಂದೆ ಮಹಿಳಾ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ್ದರು. ಈ ಮೂಲಕ 10 ಸಾವಿರ ರನ್ ಪೇರಿಸಿದ ವಿಶ್ವದ ಮೊದಲ  ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

    ಮೋದಿ ತಮ್ಮ 75ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ 10 ಸಾವಿರ ರನ್ ಪೂರೈಸಿದ ಶ್ವದ ಮೊದಲ  ಮಹಿಳಾ ಆಟಗಾರ್ತಿಯಾಗಿದ್ದಾರೆ, ಅವರಿಗೆ ಮೊದಲು ಅಭಿನಂದನೆ ತಿಳಿಸುತ್ತೇನೆ. ಮಿಥಾಲಿ 10,000 ರನ್ ಸಾಧನೆಯೊಂದಿಗೆ ಏಕದಿನ ಕ್ರಿಕೆಟ್‍ನಲ್ಲಿ 7,000 ರನ್ ಸಿಡಿಸಿದ ಮೊದಲ ಮಹಿಳಾ ಆಟಗಾರ್ತಿಯಾಗಿ ವಿಶ್ವದಾಖಲೆ ನಿರ್ಮಿಸಿದ್ದರು. ಭಾರತೀಯ ಮಹಿಳಾ ಕ್ರಿಕೆಟ್‍ಗೆ ಇವರ ಸಾಧನೆ ಮೆಚ್ಚುವಂತದ್ದು ಎಂಬುದಾಗಿ ಮೋದಿ ಶ್ಲಾಘಿಸಿದ್ದಾರೆ.

    ಮಿಥಾಲಿಯವರ ಎರಡು ದಶಕಗಳ ಕ್ರಿಕೆಟ್ ಜೀವನ ಹಲವರಿಗೆ ಸ್ಫೂರ್ತಿದಾಯಕವಾಗಿದ್ದು, ಅವರ ಕಠಿಣ ಪರಿಶ್ರಮ ಮತ್ತು ಯಶಸ್ಸಿನ ಕಥೆ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷ ಕ್ರಿಕೆಟಿಗರಿಗು ಸ್ಫೂರ್ತಿಯಾಗಿದ್ದಾರೆ ಎಂದರು.

    ಮೋದಿ ಮಿಥಾಲಿ ಸಾಧನೆಯೊಂದಿಗೆ ಭಾರತದಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ ಪದಕ ಜಯಿಸಿರುವ ಶೂಟರ್ ಗಳಿಗೆ  ಅಭಿನಂದನೆ ಸಲ್ಲಿಸಿದ್ದಾರೆ. ಈಗಾಗಲೇ ಶೂಟಿಂಗ್ ವಿಶ್ವಕಪ್‍ನಲ್ಲಿ ಭಾರತದ ಸ್ಪರ್ಧಿಗಳು 13 ಚಿನ್ನದ ಪದಕದೊಂದಿಗೆ ಒಟ್ಟು 28 ಪದಕವನ್ನು ಭಾರತದ ಮುಕುಟಕ್ಕೆ ತೊಡಿಸಿದ್ದಾರೆ.

    ಒಂದು ತಿಂಗಳ ಹಿಂದೆ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿವಿ ಸಿಂಧು ರನ್ನರ್ ಅಪ್ ಆಗಿದ್ದರು ಅವರನ್ನು ಕೂಡ ಮೋದಿ ಸ್ಮರಿಸಿಕೊಂಡಿದ್ದಾರೆ. ಇದರೊಂದಿಗೆ ಈ ವರ್ಷ ಮಾರ್ಚ್‍ನಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ಈ ಎಲ್ಲಾ ಸಾಧನೆಗಳಿಂದ ಮಹಿಳಾ ಆಟಗಾರ್ತಿಯರು ಇನ್ನಷ್ಟು ಸಂಭ್ರಮಿಸುವಂತೆ ಮಾಡಿದ್ದಾರೆ ಎಂದು ಮೋದಿ ನುಡಿದರು.

  • ಗಾಂಧೀಜಿಯ ಆರ್ಥಿಕ ನೀತಿ ಅನುಸರಿಸಿದ್ರೆ ಆತ್ಮನಿರ್ಭರ ಭಾರತ್ ಅಭಿಯಾನ ಅಗತ್ಯವಿರಲಿಲ್ಲ- ಮೋದಿ

    ಗಾಂಧೀಜಿಯ ಆರ್ಥಿಕ ನೀತಿ ಅನುಸರಿಸಿದ್ರೆ ಆತ್ಮನಿರ್ಭರ ಭಾರತ್ ಅಭಿಯಾನ ಅಗತ್ಯವಿರಲಿಲ್ಲ- ಮೋದಿ

    ನವದೆಹಲಿ: ಮಹಾತ್ಮ ಗಾಂಧಿಯವರ ಆರ್ಥಿಕ ತತ್ತ್ವಶಾಸ್ತ್ರವನ್ನು ಅನುಸರಿಸಿದ್ರೆ, ಇಂದು ಆತ್ಮನಿರ್ಭರ ಭಾರತ್ ಅಭಿಯಾನ ಅಗತ್ಯವಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    69ನೇ ಮನ್ ಕೀ ಬಾತ್‍ನನಲ್ಲಿ ಕೃಷಿ ಮಸೂದೆಯ ಬಗ್ಗೆ ಮಾತನಾಡಿ ರೈತರಿಗೆ ಮತ್ತೊಮ್ಮೆ ಅಭಯ ನೀಡಿದರು. ಮಹಾತ್ಮ ಗಾಂಧಿಯವರ ಆರ್ಥಿಕ ತತ್ತ್ವಶಾಸ್ತ್ರವನ್ನು ಅನುಸರಿಸಿದ್ದರೆ ಭಾರತ ಎಂದೋ ಸ್ವಾವಲಂಬಿಯಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

    ಆತ್ಮನಿರ್ಭರ ಭಾರತದ ನಿರ್ಮಾಣದಲ್ಲಿ ರೈತರ ಪಾತ್ರ ಪ್ರಮುಖ. ತಮ್ಮ ಉತ್ಪನ್ನಗಳನ್ನು ಮಂಡಿಗಳ ಹೊರಗೆ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ರೈತರಿಗೆ ಸರ್ಕಾರ ನೀಡಿದೆ ಎಂದು ಕೃಷಿ ಮಸೂದೆಯನ್ನು ಸಮರ್ಥಿಸಿಕೊಂಡರು.

    ನೂತನ ಕೃಷಿ ವಿಧೇಯಕಗಳು ರೈತರ ಪರವಾಗಿದ್ದು, ಇವುಗಳ ಲಾಭವನ್ನು ದೇಶದ ರೈತ ಸಮುದಾಯ ಅರಿಯಬೇಕಿದೆ. ರೈತರು ತಮ್ಮ ಉತ್ಪನ್ನಗಳನ್ನು ತಮಗೆ ಇಷ್ಟಬಂದ ಜಾಗದಲ್ಲಿ, ಇಷ್ಟಬಂದ ಬೆಲೆಗೆ ಮಾರಾಟ ಮಾಡುವ ಸ್ವಾತಂತ್ರ್ಯ ಮತ್ತು ಶಕ್ತಿಯನ್ನು ಪಡೆದಿದ್ದಾರೆ ಎಂದು ಹೇಳಿದರು.

    ಇತ್ತ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದ್ದರೂ ಕೃಷಿ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.

  • ಚನ್ನಪಟ್ಟಣದ ಬಗ್ಗೆ ‘ಮನ್ ಕಿ ಬಾತ್’ನಲ್ಲಿ ಮೋದಿ ಮಾತು

    ಚನ್ನಪಟ್ಟಣದ ಬಗ್ಗೆ ‘ಮನ್ ಕಿ ಬಾತ್’ನಲ್ಲಿ ಮೋದಿ ಮಾತು

    – ಭಾರತವನ್ನ ಸ್ವಾವಲಂಬಿಗಳನ್ನಾಗಿ ಮಾಡೋದು ನಮ್ಮ ಜವಾಬ್ದಾರಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಮನಗರದ ಚನ್ನಪಟ್ಟಣದ ಬಗ್ಗೆ ಮಾತನಾಡಿದ್ದಾರೆ.

    ಇಂದು ಪ್ರಧಾನಿ ಮೋದಿ ಅವರು 68ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ. ಮೊದಲಿಗೆ ಪ್ರಧಾನಿ ಮೋದಿ ಅವರು ಕೊರೊನಾ ವೈರಸ್ ಮಧ್ಯೆ ತಂತ್ರಜ್ಞಾನಕ್ಕೆ ಹೊಂದಿಕೊಂಡು ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರನ್ನು ಶ್ಲಾಘಿಸಿದರು. ಈ ವೇಳೆ ಚೀನಾದಿಂದ ಆಟಿಕೆಗಳನ್ನು ಕಡಿಮೆ ಮಾಡಿ ಭಾರತದ ಆಟಿಕೆಗಳನ್ನು ಖರೀದಿಸಬೇಕೆಂದು ಪರೋಕ್ಷವಾಗಿ ತಿಳಿಸಿದರು.

    ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ನಮ್ಮ ದೇಶದಲ್ಲಿ ಸ್ಥಳೀಯ ಆಟಿಕೆಗಳ ಶ್ರೀಮಂತ ಸಂಪ್ರದಾಯವಿದೆ. ಉತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿರುವ ಅನೇಕ ಪ್ರತಿಭಾವಂತ ಮತ್ತು ನುರಿತ ಕುಶಲಕರ್ಮಿಗಳು ಇದ್ದಾರೆ. ಭಾರತದ ಕೆಲವು ಭಾಗಗಳಿಂದು ಆಟಿಕೆ ಸಮೂಹಗಳಾಗಿ ಬೆಳೆಯುತ್ತಿದೆ. ಅಂದರೆ ಆಟಿಕೆಗಳ ಕೇಂದ್ರಗಳಾಗಿ ರೂಪುಗೊಳ್ಳುತ್ತಿವೆ. ಹಾಗೆ ರಾಮನಗರದ ಚನ್ನಪಟ್ಟಣ (ಕರ್ನಾಟಕ), ಕೃಷ್ಣದಲ್ಲಿ ಕೊಂಡಪಲ್ಲಿ (ಆಂಧ್ರಪ್ರದೇಶ), ತಮಿಳುನಾಡಿನ ತಂಜಾವೂರು, ಅಸ್ಸಾಂನ ಧುಬ್ರಿ, ಯುಪಿಯಲ್ಲಿ ವಾರಣಾಸಿ ಆಟಿಕೆಗಳ ಕೇಂದ್ರಗಳಾಗಿವೆ. ಇಷ್ಟೇ ಅಲ್ಲ ಇನ್ನೂ ಅನೇಕ ಹೆಸರುಗಳನ್ನು ಭಾರತದಲ್ಲಿ ಎಣಿಸಬಹುದು ಎಂದರು.

    ನಾವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಆಟಿಕೆಗಳತ್ತ ಗಮನ ಹರಿಸಿದ್ದೇವೆ. ಆಡುವಾಗ ಕಲಿಯುವುದು, ಆಟಿಕೆಗಳು ತಯಾರಿಸುವುದು ಇತ್ಯಾದಿಗಳನ್ನು ಪಠ್ಯಕ್ರಮದ ಒಂದು ಭಾಗವನ್ನಾಗಿ ಮಾಡಲಾಗಿದೆ. ಜಾಗತಿಕೆ ಆಟಿಕೆ ವ್ಯವಹಾರ ಸುಮಾರು 7 ಲಕ್ಷ ಕೋಟಿ ರೂ. ಆಗಿದ್ದು, ಇದರಲ್ಲಿ ಭಾರತದ ಪಾಲು ತುಂಬಾ ಕಡಿಮೆ ಇದೆ. ಹಿಗಾಗಿ ಆಟಿಕೆ ಉದ್ಯಮಕ್ಕೆ ಹೊಸ ರೂಪ ನೀಡಲು ನಮ್ಮ ಸರ್ಕಾರ ಯೋಜನೆ ರೂಪಿಸಲಿದೆ ಎಂದು ತಿಳಿಸಿದರು.

    ನಮ್ಮ ಹಬ್ಬಗಳು ಮತ್ತು ಪರಿಸರದ ನಡುವೆ ಬಲವಾದ ಬಂಧವಿದೆ. ನಮ್ಮ ಪರಿಸರದ ರಕ್ಷಣೆಗೆ ಸಂಬಂಧಿಸಿದ ಅನೇಕ ಹಬ್ಬಗಳು ನಮ್ಮಲ್ಲಿವೆ. ಓಣಂ ಹಬ್ಬವನ್ನು ಸಹ ಸಂತೋಷದಿಂದ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಚಿಂಗಂ ತಿಂಗಳಲ್ಲಿ ಬರುತ್ತದೆ. ಈ ಅವಧಿಯಲ್ಲಿ, ಜನರು ಹೊಸದನ್ನು ಖರೀದಿಸುತ್ತಾರೆ. ಮನೆಗಳನ್ನು ಅಲಂಕರಿಸುತ್ತಾರೆ, ಪೂಕಲಂ ತಯಾರಿಸುತ್ತಾರೆ, ಓಣಂ-ಸಾದಿಯಾವನ್ನು ಆನಂದಿಸುತ್ತಾರೆ. ವೈವಿಧ್ಯಮಯ ಆಟಗಳು, ಸ್ಪರ್ಧೆಗಳು ಸಹ ನಡೆಯುತ್ತವೆ. ಇದು ಹಬ್ಬಗಳ ಸಮಯ. ಆದರೆ ಅದೇ ಸಮಯದಲ್ಲಿ ಕೊರೊನಾ ಪರಿಸ್ಥಿತಿಯಿಂದಾಗಿ ಜನರಲ್ಲಿ ಶಿಸ್ತಿನ ಪ್ರಜ್ಞೆಯೂ ಇದೆ ಎಂದು ಮೋದಿ ಹೇಳಿದರು.

    ಈ ತಿಂಗಳ ಆರಂಭದಲ್ಲಿ ಅಪ್ಲಿಕೇಶನ್ ಸಂಶೋಧನಾ ಸವಾಲನ್ನು ದೇಶದ ಯುವಕರ ಮುಂದೆ ಇಡಲಾಗಿತ್ತು. ಆತ್ಮನಿರ್ಭರ್ ಭಾರತ್ ಆ್ಯಪ್ ಇನ್ನೋವೇಶನ್ ಚಾಲೆಂಜ್‍ನ ಅಡಿಯಲ್ಲಿ kutuki kids ಹೆಸರಿನ ಕಲಿಕಾ ಆಪ್ಯ ಒಂದು ಸಿದ್ಧವಾಗಿದೆ. ಇದರ ಮೂಲಕ ಗಣಿತ, ವಿಜ್ಞಾನದ ಅನೇಕ ವಿಷಯಗಳನ್ನು ಹಾಡು ಮತ್ತು ಕತೆಗಳ ಮೂಲಕ ಮಕ್ಕಳು ಸುಲಭವಾಗಿ ಕಲಿಯಬಹುದು ಎಂದು ತಿಳಿಸಿದರು.

    ನಾವು ದೇಶದಲ್ಲಿ ತಯಾರಾದ ಹಲವು ವಿಭಿನ್ನ ಅಪ್ಲಿಕೇಶನ್‍ಗಳನ್ನು ಹೊಂದಿದ್ದೇವೆ. ಮತ್ತೊಂದು ಆ್ಯಪ್ ಇದೆ. ಅದರ ಹೆಸರು ಸ್ಟಪ್ ಸೆಟ್ ಗೋ. ಇದೊಂದು ಫಿಟ್‍ನೆಸ್ ಆ್ಯಪ್ ಆಗಿದ್ದು, ನೀವು ಎಷ್ಟು ದೂರ ಹೋಗಿದ್ದೀರಿ ಮತ್ತು ಎಷ್ಟು ಕ್ಯಾಲರಿ ಬರ್ನ್ ಮಾಡಿದ್ದೀರಿ ಎಂಬ ಮಾಹಿತಿಯನ್ನು ನೀಡುತ್ತದೆ. ಈ ಮೂಲಕ ನೀವು ಫಿಟ್ ಆಗಿರಲು ಉತ್ಸಾಹ ತುಂಬುತ್ತದೆ. ಅದೇ ರೀತಿ ಭಾರತೀಯರಲ್ಲಿ ‘ಚಿಂಗಾರಿ ಆ್ಯಪ್’ ಪ್ರಖ್ಯಾತವಾಗಿದೆ ಎಂದರು.

    ಕೋವಿಡ್ 19 ಸಮಯದಲ್ಲಿ ನಮ್ಮ ರೈತರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇನ್ನೂ ರಾಷ್ಟ್ರದ ಭದ್ರತಾ ಕಾರ್ಯಾಚರಣೆಯಲ್ಲಿ ಶ್ವಾನಗಳ ಪಾತ್ರವನ್ನು ಪ್ರಮುಖವಾಗಿದೆ ಎಂದು ಶ್ಲಾಘಿಸಿದರು.

  • ಗುಡ್ಡಗಾಡಿನಲ್ಲಿ 16 ಕೆರೆ- ಮಂಡ್ಯದ ಕಾಮೇಗೌಡರ ಸಾಧನೆಗೆ ಮೋದಿ ಮೆಚ್ಚುಗೆ

    ಗುಡ್ಡಗಾಡಿನಲ್ಲಿ 16 ಕೆರೆ- ಮಂಡ್ಯದ ಕಾಮೇಗೌಡರ ಸಾಧನೆಗೆ ಮೋದಿ ಮೆಚ್ಚುಗೆ

    ಬೆಂಗಳೂರು: ಸ್ವಂತ ಕೆಲಸದೊಂದಿಗೆ ಗುಡ್ಡಗಾಡು ಪ್ರದೇಶದಲ್ಲಿ 16 ಕೆರೆಗಳನ್ನು ನಿರ್ಮಿಸಿದ ಮಂಡ್ಯ ಜಿಲ್ಲೆಯ ಕಾಮೇಗೌಡರ ಸಾಮಾಜಿಕ ಕಳಕಳಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಡಿಹೊಗಳಿದ್ದಾರೆ.

    ಪ್ರಧಾನಿ ಮೋದಿ ಇಂದಿನ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ, ರಾಜ್ಯೋತ್ಸವ ಪುರಷ್ಕೃತ ಕಾಮೇಗೌಡ ಅವರನ್ನು ಶ್ಲಾಘಿಸಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸಮದೊಡ್ಡಿ ಗ್ರಾಮದ ಕುರಿಗಾಹಿ 83 ವರ್ಷದ ಕಾಮೇಗೌಡ ಅವರು 16 ಕೆರೆಗಳನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಎರಡು ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ.

    ನೀಲಿ ವೆಂಕಟಗೌಡ, ರಾಜಮ್ಮ ದಂಪತಿಯ ಮಗ ಕ್ಯಾಮೆಗೌಡ ಅವರು ಶಾಲೆಯ ಮೆಟ್ಟಿಲು ಏರಿದವರಲ್ಲ. ಆದರೆ ತಮಗಿರುವ ಪರಿಸರ ಕಾಳಜಿಯಿಂದ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಕೆಲಸವನ್ನು ಗುರುತಿಸಿದ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು ಪ್ರಧಾನಿ ಮೋದಿ ಕ್ಯಾಮೇಗೌಡರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ದೇಶಕ್ಕೆ ಪರಿಚಯಿಸಿದ್ದಾರೆ.

    ಕೆರೆ ನಿರ್ಮಾಣಕ್ಕೆ ಕೈ ಹಾಕಿದ್ಯಾಕೆ?:
    ಕುರಿಗಾಹಿಯಾಗಿರುವ ಕ್ಯಾಮೇಗೌಡ ಅವರು ಸುಮಾರು 13 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿ ಮೇಯಿಸಲು ಹೋಗಿದ್ದರು. ಆಗ ವಿಪರೀತ ದಾಹವಾಗಿ ನೀರಿಗಾಗಿ ಪರದಾಟಿದ್ದರು. ಬಳಿಕ ಸ್ವಲ್ಪ ದೂರದ ಮನೆಗೆ ಹೋಗಿ ನೀರು ಕೇಳಿಪಡೆದಿದ್ದರು. ನಾನು ದಾಹ ತೀರಿಸಿಕೊಂಡೆ ಆದ್ರೆ ಪ್ರಾಣಿಗಳ ಪರಿಸ್ಥಿತಿ ಏನು ಎನ್ನುವ ಚಿಂತೆ ಅವರಿಗೆ ಕಾಡಿತ್ತು. ಹೀಗಾಗಿ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾದರು.

    ಕ್ಯಾಮೇಗೌಡರು ಗುಡ್ಡದಲ್ಲಿ ಕೆರೆ ತೋಡುತ್ತಿದ್ದನ್ನ ಕಂಡು ಅನೇಕರು ಗೇಲಿ ಮಾಡಿದ್ದರು. ಇವನಿಗೆ ಹುಚ್ಚು ಹಿಡಿದಿದೆ, ಅದಕ್ಕೆ ಇಲ್ಲಿ ಕೆರೆ ತೋಡುತ್ತಿದ್ದಾನೆ ಎಂದು ಮಾತನಾಡಿದ್ದರು. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮುಂದುವರಿಸಿದ ಕ್ಯಾಮೇಗೌಡರು ಸದ್ಯ 16 ಕೆರೆಗಳನ್ನು ನಿರ್ಮಿಸಿ ಪ್ರಧಾನಿ ಮೋದಿ, ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕ್ಯಾಮೇಗೌಡರು ತೋಡಿದ ಕೆರೆಗಳಲ್ಲಿ ಕಡು ಬೇಸಿಗೆಯಲ್ಲಿ ಕೂಡ ನೀರು ತುಂಬಿರುತ್ತದೆ. ದಕ್ಷಿಣ ಕರ್ನಾಟಕದ ಇತರ ಭಾಗಗಳಲ್ಲಿ ನೀರು ಕಡಿಮೆಯಾದರೂ ಸಹ ಅವರು ತೋಡಿದ ಕೆರೆಗಳಲ್ಲಿ ನೀರು ಸಾಕಷ್ಟು ಇರುತ್ತದೆ. ತಮ್ಮ ಕುರಿಗಳನ್ನು ಮತ್ತು ಜಾನುವಾರುಗಳನ್ನು ಮೇಯಿಸುವಾಗ ಪರ್ವತ ಪ್ರದೇಶದ ಕಣಿವೆಗಳಲ್ಲಿ ನೀರು ಸಿಗದೆ ಪರಿತಪಿಸುತ್ತಿರುವ ಪ್ರಾಣಿ-ಪಕ್ಷಿಗಳನ್ನು ಕಂಡು ಕೆರೆಗಳನ್ನು ಅಗೆಯುವ ಆಲೋಚನೆ ಹೊಳೆಯಿತು ಎಂದು ಕಾಮೇಗೌಡರು ಈ ಹಿಂದೆ ಹೇಳಿದ್ದರು.

    ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿ, ಮಂಡ್ಯ ಜಿಲ್ಲೆಯ ಮಲವಳ್ಳಿ ತಾಲೂಕಿನ ದಾಸನಡೋಡ್ಡಿ ಗ್ರಾಮದ ಕಾಮೇಗೌಡ ಅವರು ಇಡೀ ಬೆಟ್ಟದ ಪ್ರದೇಶವನ್ನು ಹಸಿರೀಕರಣಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅಸಾಮಾನ್ಯ ವ್ಯಕ್ತಿತ್ವವನ್ನು ಹೊಂದಿದ್ದರೂ ಅವರು ಸಾಮಾನ್ಯ ಕೃಷಿಕರಾಗಿ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

     

  • ಕೊರೊನಾ ಸಂಕಷ್ಟ ಬಾರದಿದ್ರೆ ಜೀವನದ ಬೆಲೆ ಅರಿವಾಗ್ತಿರಲಿಲ್ಲ: ಪ್ರಧಾನಿ ಮೋದಿ

    ಕೊರೊನಾ ಸಂಕಷ್ಟ ಬಾರದಿದ್ರೆ ಜೀವನದ ಬೆಲೆ ಅರಿವಾಗ್ತಿರಲಿಲ್ಲ: ಪ್ರಧಾನಿ ಮೋದಿ

    – ಅನ್‍ಲಾಕ್‍ನಲ್ಲಿ ಎರಡು ಮಹತ್ವದ ಜವಾಬ್ದಾರಿಗಳಿವೆ
    – ಕರ್ನಾಟಕ ಅಳಿಗುಳಿ ಬಗ್ಗೆ ಮೋದಿ ಮಾತು
    – ರಾಜ್ಯದ ಕಾಮೇಗೌಡರ ಬಗ್ಗೆ ಮೆಚ್ಚುಗೆ

    ನವದೆಹಲಿ: ಅನ್‍ಲಾಕ್‍ನಲ್ಲಿ ಎರಡು ಮಹತ್ವದ ಜವಾಬ್ದಾರಿಗಳಿವೆ. ಒಂದು ಕೊರೊನಾ ಸೋಲಿಸುವುದು ಮತ್ತೊಂದು ಆರ್ಥಿಕತೆ ಸುಧಾರಿಸುವುದು. ಹೀಗಾಗಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಎಂದು ಪ್ರಧಾನಿ ಮೋದಿ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.

    ‘ಮನ್ ಕೀ ಬಾತ್’ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ 2020 ಸರಿ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಕೊರೊನಾ ಸಂಕಷ್ಟದ ನಡುವೆ ಒಮ್ಮಲೇ ಎಲ್ಲ ಸಮಸ್ಯೆಗಳು ಎದುರಾಗುತ್ತಿದೆ. ಭೂಕಂಪಗಳು, ಸೈಕ್ಲೋನ್, ಕೊರೊನಾ ಸಾಲು ಸಾಲು ಸಮಸ್ಯೆ ಬರುತ್ತಿದೆ. ಹೀಗಾಗಿ ಈ ವರ್ಷ ಸರಿಯಾಗಿಲ್ಲ ಎನಿಸುತ್ತಿದೆ. ಆದರೆ ಹೀಗೆ ಭಾವಿಸಬಾರದು, ಸಮಸ್ಯೆಗಳು ಬರುತ್ತವೆ, ನಾವು ಅದನ್ನು ಎದುರಿಸಬೇಕು. ಹಿಂದೆಯೂ ಸಾಕಷ್ಟು ಸಮಸ್ಯೆಗಳನ್ನು ಭಾರತ ಎದುರಿಸಿದೆ. ದೇಶ ಇದನೆಲ್ಲ ಎದುರಿಸಿ ಮುಂದುವರಿಯುತ್ತಲೇ ಇದೆ. ಇದೇ ಭಾವನೆಯಲ್ಲಿ ಮುಂದುವರಿಬೇಕು. ಎಲ್ಲ ರೀತಿಯ ಅಪಾಯಗಳನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುವುದು ಭಾರತ ಇತಿಹಾಸ. ನನಗೆ ದೇಶದ 13 ಕೋಟಿ ಜನರ ಮೇಲೆ ಅಚಲ ವಿಶ್ವಾಸವಿದೆ ಎಂದು ದೇಶದ ಜನರಿಗೆ ಧೈರ್ಯ ತುಂಬಿದರು.

    ಭಾರತಕ್ಕೆ ಗೆಳೆತನವನ್ನು ನಿಭಾಯಿಸಲು ಬರುತ್ತೆ. ಕಣ್ಣಲ್ಲಿ ಕಣ್ಣಿಟ್ಟು ಉತ್ತರ ಕೊಡುವ ಶಕ್ತಿಯೂ ಇದೆ. ಭಾರತದ ನೆಲದ ಮೇಲೆ ಕಣ್ಣಿಟ್ಟರೆ ಉತ್ತರ ಕೊಡದೆ ಬಿಡಲ್ಲ. ಶತ್ರುಗಳಿಗೆ ಸೂಕ್ತ ಪಾಠವನ್ನು ನಮ್ಮ ಸೈನಿಕರು ನೀಡುತ್ತಾರೆ. ಯೋಧರ ತ್ಯಾಗ ಮತ್ತು ಬಲಿದಾನವನ್ನು ಈ ದೇಶ ಮರೆಯುವುದಿಲ್ಲ. ಪುತ್ರರನ್ನು ಕಳೆದುಕೊಂಡ ಪೋಷಕರು ತಮ್ಮ ಇತರೇ ಮಕ್ಕಳು ಮೊಮ್ಮಕ್ಕಳನ್ನು ಸೇನೆಗೆ ಕಳುಹಿಸುವ ಸಂಕಲ್ಪ ಮಾಡಿದ್ದಾರೆ ಎಂದು ಲಡಾಕ್‍ನ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆ ಬಗ್ಗೆ ಮಾತನಾಡಿದರು.

    ಭಾರತೀಯ ಸೇನೆಯಲ್ಲಿ ಸ್ವಾವಲಂಬನೆ ಸಾಧಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಜನರ ಭಾಗವಹಿಸುವಿಕೆ ಇಲ್ಲದೇ ಅಭಿಯಾನವೊಂದು ಯಶಸ್ವಿಯಾಗದು. ಜನರು ದೇಶಿಯ ಉತ್ಪನ್ನಗಳನ್ನು ಖರೀದಿಸಬೇಕು. ಇದು ಒಂದು ರೀತಿಯ ದೇಶದ ಸೇವೆಯಾಗಲಿದೆ. ಅನ್‍ಲಾಕ್‍ನಲ್ಲಿ ಎರಡು ಮಹತ್ವದ ಜವಬ್ದಾರಿಗಳಿವೆ. ಒಂದು ಕೊರೊನಾ ಸೋಲಿಸುವುದು ಮತ್ತೊಂದು ಆರ್ಥಿಕತೆ ಸುಧಾರಿಸುವುದು. ಹೀಗಾಗಿ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಸಾಮಾಜಿಕ ಅಂತರ, ಮಾಸ್ಕ್ ಧರಿಸಿದಿದ್ದರೆ ನೀವೂ ಇತರಿಗೆ ಕಂಟಕವಾಗಲಿದ್ದೀರಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಓಡಾಡುವುದು ಉತ್ತಮ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.

    ಕೊರೊನಾ ಸಂಕಷ್ಟ ಬಾರದಿದ್ದರೇ ಜೀವನದ ಬೆಲೆ ಅರಿವಾಗುತ್ತಿರಲಿಲ್ಲ. ಅಲ್ಲದೇ ಜೀವನ ಯಾಕೆ, ಏನು, ಹೇಗೆ ಅನ್ನೊ ಕಲ್ಪನೆಯೇ ನಮಗೆ ನೆನಪಿಗೆ ಬರುತ್ತಿರಲಿಲ್ಲ. ಈಗ ಜನರು ಕೊರೊನಾದಿಂದ ಜೀವನ ಪ್ರತಿ ಕ್ಷಣ ಖುಷಿಯಾಗಿದ್ದಾರೆ. ಕರ್ನಾಟಕ ಅಳಿಗುಳಿ ಮನೆ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಸಾಂಪ್ರದಾಯಿಕ ಆಟ ಆಡುತ್ತಿದ್ದದ್ದಾರೆ. ಲಾಕ್‍ಡೌನ್‍ನಿಂದಾಗಿ ಸಣ್ಣ ಪುಟ್ಟ ಖುಷಿ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಈ ರೀತಿಯ ದೇಶಿಯ ಆಟಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡುತ್ತೇವೆ. ಮಕ್ಕಳು ಮನೆಯಲ್ಲಿರುವ ಅಜ್ಜ ಅಜ್ಜಿಯ ಜೊತೆ ಬೆರೆಯಿರಿ. ಅವರ ಹಳೆ ನೆನೆಪುಗಳನ್ನು ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಅವರ ಸಂದರ್ಶನವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ. ಇದು ನಮ್ಮ ಪುರಾತನ ಸಂಸ್ಕೃತಿ ಬಗ್ಗೆ ತಿಳಿಯಲು ಸಹಾಯವಾಗಲಿದೆ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.

    ಕರ್ನಾಟಕ ಮೂಲದ ಕಾಮೇಗೌಡ ಒಬ್ಬ ಸಾಮಾನ್ಯ ರೈತ. 80 ವರ್ಷದ ಕಾಮೇಗೌಡ 16 ಕೆರೆಗಳನ್ನು ತೊಡಿದಿದ್ದಾರೆ. ಇದು ಹಲವು ಜನರ ಬದುಕಿಗೆ ದಾರಿ ಮಾಡಿಕೊಟ್ಟಿದೆ. ಸ್ವತಃ ಕೆಲಸದ ಜೊತೆಗೆ ಸಾಮಾಜಿಕ ಸೇವೆ ಮಾಡುವ ಇಚ್ಛೆ ಕಾಮೇಗೌಡ ಹೊಂದಿದ್ದಾರೆ ಎಂದರು. ಹೀಗೆ ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ವರ್ತಮಾನದ ಸ್ಥಿತಿಗತಿಗಳ ಬಗ್ಗೆ ಮಾತನಾಡಿದರು. ಅಲ್ಲದೇ ಈ ಎಲ್ಲಾ ಸಂಕಷ್ಟಗಳನ್ನು ಮೀರಿ ಭಾರತ ಜಯ ಸಾಧಿಸಲಿದೆ ಎಂದು ಜನರಲ್ಲಿ  ಭರವಸೆ ವ್ಯಕ್ತಪಡಿಸಿದರು.

  • ಪ್ರಧಾನಿ ಮೋದಿ ಮನಗೆದ್ದ ನಾಸಿಕ್ ರೈತನ ಕೊರೊನಾ ನಿಯಂತ್ರಣ ಕ್ರಮ

    ಪ್ರಧಾನಿ ಮೋದಿ ಮನಗೆದ್ದ ನಾಸಿಕ್ ರೈತನ ಕೊರೊನಾ ನಿಯಂತ್ರಣ ಕ್ರಮ

    – ಕೊರೊನಾ ನಿಯಂತ್ರಣಕ್ಕೆ ಸಂಶೋಧನೆಗಳು ಅಗತ್ಯ
    – ಸೇವಾ ಮನೋಭಾವ ಬೆಳೆಸಿಕೊಳ್ಳಲು ಮೋದಿ ಕರೆ

    ನವದೆಹಲಿ: ಮಹಾರಾಷ್ಟ್ರ ರೈತರೊಬ್ಬರ ಸಂಶೋಧನೆ ಪ್ರಧಾನಿ ನರೇಂದ್ರ ಮೋದಿ ಅವರ ಮನ ಗೆದ್ದಿದೆ. ಈ ವಿಚಾರವನ್ನು ‘ಮನ್ ಕೀ ಬಾತ್’ನಲ್ಲಿ ತಿಳಿಸಿದ್ದಾರೆ. ಜೊತೆಗೆ ಆರ್ಥಿಕ ಚೇತರಿಕೆ, ಕೊರೊನಾ ವಿರುದ್ಧದ ಹೋರಾಟದ ಬಗ್ಗೆ ಮೋದಿ ಮಾತನಾಡಿದ್ದಾರೆ.

    ಕಳೆದ ಬಾರಿ ನಾನು ನಿಮ್ಮೊಂದಿಗೆ ಮನ್ ಕೀ ಬಾತ್‍ನಲ್ಲಿ ಮಾತನಾಡಿದಾಗ, ಪ್ರಯಾಣಿಕರ ರೈಲು, ಬಸ್‍ಗಳು, ವಿಮಾನಯಾನ ಸೇವೆಗಳನ್ನು ಮುಚ್ಚಲಾಗಿತ್ತು. ಆದರೆ ಈ ಬಾರಿ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಶ್ರಮಿಕ್ ವಿಶೇಷ ರೈಲುಗಳು, ಇತರ ವಿಶೇಷ ರೈಲುಗಳು ಮತ್ತು ವಿಮಾನಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪುನರಾರಂಭಗೊಂಡಿವೆ ಎಂದು ತಿಳಿಸಿದರು.

    ಆರ್ಥಿಕತೆಯ ಪ್ರಮುಖ ಭಾಗವು ಈಗ ಸಕ್ರಿಯವಾಗಿದೆ. ಜನರು ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು ಮತ್ತು ಸಾಧ್ಯವಾದಷ್ಟು ಮನೆಯೊಳಗೆ ಉಳಿಯಲು ಪ್ರಯತ್ನಿಸಬೇಕು. ನಾವು ಈಗ ಹೆಚ್ಚು ಜಾಗರೂಕರಾಗಿರಬೇಕಿದೆ. ಎಲ್ಲರ ಬೆಂಬಲವಿದ್ದರೆ ಕೊರೊನಾ ವಿರುದ್ಧ ಹೋರಾಟ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ನನ್ನ ಹೃದಯವನ್ನು ಮುಟ್ಟಿದ ಇನ್ನೊಂದು ವಿಷಯವೆಂದರೆ ಈ ಬಿಕ್ಕಟ್ಟಿನ ಕ್ಷಣದಲ್ಲಿ ಸಂಶೋಧನೆ ನಡೆಸಿರುವುದು. ಹಳ್ಳಿಗಳು ಮತ್ತು ನಗರಗಳಿಂದ, ಸಣ್ಣ ಪ್ರಮಾಣದ ವ್ಯಾಪಾರಿಗಳಿಂದ ಹಿಡಿದು ಸ್ಟಾರ್ಟ್‍ಅಪ್‍ಗಳವರೆಗೆ ಅನೇಕರು ಕೊರೊನಾ ವಿರುದ್ಧ ಹೋರಾಡುವ ಹೊಸ ಮಾರ್ಗಗಳನ್ನು ರೂಪಿಸಿದ್ದಾರೆ. ನಾಸಿಕ್ ರೈತ ರಾಜೇಂದ್ರ ಎಂಬವರು ತಮ್ಮ ಗ್ರಾಮದಲ್ಲಿ ಕೊರೊನಾ ನಿಯಂತ್ರಿಸಲು ತಮ್ಮ ಟ್ರ್ಯಾಕ್ಟರ್ ನಿಂದ ಸ್ಯಾನಿಟೈಜರ್ ಸಿಂಪಡಣೆ ಮಾಡುತ್ತಿದ್ದಾರೆ. ಇಂತಹ ಹೊಸ ಹೊಸ ಸಂಶೋಧನೆಗಳಿಂದ ಕೊರೊನಾ ವಿರುದ್ಧ ಹೋರಾಟಕ್ಕೆ ಸಹಾಯಕವಾಗಲಿದೆ. ಕೊರೊನಾ ವಿರುದ್ಧದ ಹೋರಾಟ ಸುದೀರ್ಘವಾಗಿದೆ ಎಂದು ಹೇಳಿದರು.

    ನಾವು ಇತರ ದೇಶಗಳನ್ನು ನೋಡಿದಾಗ ಭಾರತೀಯರ ಸಾಧನೆ ಎಷ್ಟು ದೊಡ್ಡದಾಗಿದೆ ಎಂದು ನಮಗೆ ಅರ್ಥವಾಗುತ್ತದೆ. ನಮ್ಮ ದೇಶದ ಜನಸಂಖ್ಯೆಯು ಇತರ ದೇಶಗಳಿಗಿಂತ ಹಲವು ಪಟ್ಟು ಹೆಚ್ಚಾಗಿದೆ. ಆದರೂ ಕೊರೊನಾ ವೈರಸ್ ಇತರ ದೇಶಗಳಂತೆ ವೇಗವಾಗಿ ಹರಡಲಿಲ್ಲ ಹಾಗೂ ಸಾವು ಕೂಡ ಹೆಚ್ಚಾಗಲಿಲ್ಲ. ಪ್ರಸ್ತುತ ದಿನಗಳಲ್ಲಿ ಸಾವಿನ ಪ್ರಮಾಣವೂ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.

    ರೈಲ್ವೆ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಕೇಂದ್ರವಾಗಲಿ, ರಾಜ್ಯವಾಗಲಿ, ಸ್ಥಳೀಯ ಸ್ವರಾಜ್ ಸಂಸ್ಥೆಗಳಾಗಲಿ ಎಲ್ಲರೂ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ರೈಲ್ವೆ ನೌಕರರು ಕೊರೊನಾ ವಿರುದ್ಧ ಹೋರಾಟದಲ್ಲಿ ಎಲ್ಲ ರೀತಿ ಸಿದ್ಧರಾಗಿದ್ದಾರೆ. ಅವರು ಕೂಡ ಕೊರೊನಾ ವಾರಿಯರ್ಸ್ ಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಲೂನ್ ನಡೆಸುತ್ತಿರುವ ತಮಿಳುನಾಡಿನ ಸಿ ಮೋಹನ್ ಎಂಬವರು ಮಗಳ ಮದುವೆಗಾಗಿ 5 ಲಕ್ಷ ರೂ. ಕೂಡಿಟ್ಟಿದ್ದರು. ಆದರೆ ಆ ಹಣವನ್ನು ಸಂಕಷ್ಟದಲ್ಲಿರುವ ಜನರಿಗಾಗಿ ನೀಡಿದ್ದಾರೆ. ಪಂಜಾಬ್‍ನ ಪಠಾಣ್‍ಕೋಟ್‍ನ ಅಂಗವಿಕಲ ರಾಜು ಎಂಬವರು ಇತರರ ಸಹಾಯದಿಂದ 3,000ಕ್ಕೂ ಹೆಚ್ಚು ಮಾಸ್ಕ್ ಗಳನ್ನು ತಯಾರಿಸಿದ್ದಾರೆ. ಅವುಗಳನ್ನು ಮಾರಿ 100 ಬಡ ಕುಟುಂಬಗಳಿಗೆ ರೇಷನ್ ವಿತರಿಸಿದ್ದಾರೆ. ಇಂತಹ ಸೇವಾ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ. ಸೇವಾ ಮನೋಭಾವದಿಂದ ಮಾನಸಿಕ ನೆಮ್ಮದಿ, ಆರೋಗ್ಯ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.

    ಭಾರತದ ಪೂರ್ವ ಭಾಗವು ಚಂಡಮಾರುತದಿಂದ ಉಂಟಾಗುವ ನೈಸರ್ಗಿಕ ವಿಪತ್ತನ್ನು ಎದುರಿಸುತ್ತಿದ್ದರೆ ದೇಶದ ಅನೇಕ ಭಾಗಗಳು ಮಿಡತೆಗಳ ದಾಳಿಗೆ ಒಳಗಾಗುತ್ತಿವೆ. ಇದರಿಂದ ಮತ್ತಷ್ಟು ತೊಂದರೆ ಉಂಟಾಗಿದೆ ಎಂದು ಹೇಳಿದರು.

    ನಿಧಾನವಾಗಿ ರೈಲು ಪ್ರಾರಂಭವಾಗಲಿದ್ದು, ದೇಶದ ಆರ್ಥಿಕತೆ ಚಟುವಟಿಕೆ ಚೇತರಿಕೆ ಸಿಗಲಿದೆ. ದೇಶದ ವಿವಿಧ ಪ್ರದೇಶದಲ್ಲಿ ‘ಮೇಕ್ ಇನ್ ಇಂಡಿಯಾ’ ಯಶಸ್ವಿಯಾಗುತ್ತಿದೆ. ಕೊರೊನಾ ಬಿಕ್ಕಟ್ಟು ಮುಕ್ತಾಯದ ವೇಳೆ ಭಾರತದ ಆಮದು ಪ್ರಮಾಣ ಕಡಿಮೆಯಾಗಲಿದ್ದು, ರಫ್ತು ಹೆಚ್ಚಾಗುವ ಸಾಧ್ಯತೆ ಇದೆ. ದೇಶದಲ್ಲಿ ಬಿದಿರಿನಿಂದ ತಯಾರಿಸಿದ ವಸ್ತುಗಳಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

    ವಿಶ್ವ ಯೋಗ ದಿನವನ್ನು ಮುಂದಿನ ತಿಂಗಳು ಆಚರಿಸಲಾಗುತ್ತದೆ. ಯೋಗದಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಎಲ್ಲವರೂ ಯೋಗಾಸನವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನೀರು ಸಂರಕ್ಷಣೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೆರೆ, ಇಂಗು ಗುಂಡಿ ನಿರ್ಮಾಣ ನಡೆಯಬೇಕು ಎಂದು ತಿಳಿಸಿದರು.

  • ಸಾಮಾಜಿಕ ದೂರ ಹೆಚ್ಚಿಸಿ, ಭಾವನಾತ್ಮಕ ದೂರ ಕಡಿಮೆ ಮಾಡ್ಬೇಡಿ: ಮೋದಿ ಮನವಿ

    ಸಾಮಾಜಿಕ ದೂರ ಹೆಚ್ಚಿಸಿ, ಭಾವನಾತ್ಮಕ ದೂರ ಕಡಿಮೆ ಮಾಡ್ಬೇಡಿ: ಮೋದಿ ಮನವಿ

    ನವದೆಹಲಿ: ಹೋಮ್ ಕ್ವಾರೆಂಟೈನ್‍ಗಳೊಂದಿಗೆ ಕೆಲವರು ಕೆಟ್ಟದಾಗಿ ವರ್ತಿಸುತ್ತಿದ್ದಾರೆಂದು ತಿಳಿದಾಗ ನನಗೆ ತುಂಬಾ ನೋವಾಯಿತು. ನಾವು ಸೂಕ್ಷ್ಮ ಮತ್ತು ತಿಳುವಳಿಕೆ ಹೊಂದಬೇಕಿದೆ. ಸಾಮಾಜಿಕ ದೂರವನ್ನು ಹೆಚ್ಚಿಸಿ. ಆದರೆ ಭಾವನಾತ್ಮಕ ದೂರವನ್ನು ಕಡಿಮೆ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.

    ಕೊರೊನಾ ವಿಚಾರದ ಬಗ್ಗೆ ಮನ್ ಕೀ ಬಾತ್‍ನಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ತಡೆಯಲು ಸಂಪರ್ಕತಡೆಯನ್ನು ಮಾಡಬೇಕಾಗಿದೆ. ಆದರೆ ಹೋಮ್ ಕ್ವಾರೆಂಟೈನ್‍ನಲ್ಲಿರುವವನ್ನು ಕೆಟ್ಟದಾಗಿ ಕಾಣಬೇಡಿ. ಅವರು ಅನಿವಾರ್ಯವಾಗಿ ಕೆಲವು ದಿನಗಳ ಕಾಲ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಅವರೊಂದಿಗೆ ನಾವು ಭಾವನಾತ್ಮಕ ಸಂಬಂಧವನ್ನು ಕಾಪಾಡಿಕೊಳ್ಳಬೇಕು. ಇದು ಸಂಬಂಧಗಳನ್ನು ಪುನಶ್ಚೇತನಗೊಳಿಸುವ ಸಮಯವಾಗಿದೆ ಎಂದು ತಿಳಿಸಿದರು.

    ಮನೆಗಳಲ್ಲಿ ಉಳಿಯುವಂತೆ ನಿಮ್ಮಲ್ಲಿ ಮನವಿ ಮಾಡಿಕೊಂಡೆ. ಆದರೆ ನಿಮ್ಮ ಮನಸ್ಸನ್ನು ಅದನ್ನು ಕೇಳುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಾವು ಲಾಕ್‍ಡೌನ್ ಎಂಬ ಲಕ್ಷ್ಮಣ ರೇಖೆಯನ್ನು ಪಾಲಿಸಲೇಬೇಕಿದೆ. ನಾನು ಫಿಟ್‍ನೆಸ್ ತರಬೇತುದಾರನಲ್ಲ. ಆದರೆ ಕೆಲವು ಯೋಗಗಳಿಂದ ಬಲಿಷ್ಠವಾಗಿದ್ದೇನೆ ಎಂದರು.

    ಸಹಾಯ ಮಾಡಿ:
    ದೇಶಾದ್ಯಂತ ಲಾಕ್‍ಡೌನ್‍ನಿಂದಾಗಿ ಬಡವನು ಹಸಿವಿನಿಂದ ಕಂಗೆಟ್ಟಿದ್ದಾರೆ ಅಥವಾ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ದಯವಿಟ್ಟು ಅಂಥವರ ಸಹಾಯ ನಿಲ್ಲಿ. ಇಂದು ದೇಶವನ್ನು ಉಳಿಸಲು ನಾವು ಜಾತಿ, ಧರ್ಮ, ಮೇಲೂ, ಕೀಳು ಎಂಬ ಎಲ್ಲಾ ಗೋಡೆಗಳನ್ನು ಮುರಿಯಬೇಕಾಗಿದೆ. ನೀವು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ. ನಾವು ಈ ಯುದ್ಧವನ್ನು ಗೆಲ್ಲಬೇಕಿದೆ. ನಾನು ನಿಮಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದರು.

  • ದೇಶವಾಸಿಗಳಲ್ಲಿ ಕ್ಷಮೆ ಕೋರಿದ ಪ್ರಧಾನಿ ಮೋದಿ

    ದೇಶವಾಸಿಗಳಲ್ಲಿ ಕ್ಷಮೆ ಕೋರಿದ ಪ್ರಧಾನಿ ಮೋದಿ

    ನವದೆಹಲಿ: ನಿಮ್ಮ ಜೀವನದಲ್ಲಿ, ವಿಶೇಷವಾಗಿ ಬಡ ಜನರಿಗೆ ತೊಂದರೆ ಉಂಟುಮಾಡಿದ ಲಾಕ್‍ಡೌನ್ ಕಠಿಣ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಕೊರೊನಾ ವಿಚಾರದ ಬಗ್ಗೆ ಮನ್ ಕಿ ಬಾತ್‍ನಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದಕ್ಕೆ ಕೆಲವರು ನನ್ನ ಮೇಲೆ ಕೋಪಗೊಂಡಿದ್ದಾರೆ ಅಂತ ನನಗೆ ತಿಳಿದಿದೆ. ಬಡವರಿಗೆ ಇದರಿಂದ ಸಮಸ್ಯೆಯಾಗಿದೆ ಎನ್ನುವುದು ನನಗೆ ಗೊತ್ತಾಗಿದೆ. ಆದರೆ ಈ ಯುದ್ಧವನ್ನು ಗೆಲ್ಲಲು ಇಂತಹ ಕಠಿಣ ಕ್ರಮಗಳು ಅಗತ್ಯವಾಗಿತ್ತು.ದೇಶದ ಎಲ್ಲರ ರಕ್ಷಣೆಗಾಗಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದರು.

    ಕೋವಿಡ್-19 ವಿರುದ್ಧದ ಯುದ್ಧವು ಕಠಿಣವಾದದ್ದು ಮತ್ತು ಅದಕ್ಕೆ ಇಂತಹ ಕಠಿಣ ನಿರ್ಧಾರಗಳು ಬೇಕಾಗುತ್ತವೆ. ಭಾರತದ ಜನರನ್ನು ಸುರಕ್ಷಿತವಾಗಿಡುವುದು ಸರ್ಕಾರದ ಮುಖ್ಯ ಉದ್ದೇಶ. ಯಾರೂ ಉದ್ದೇಶಪೂರ್ವಕವಾಗಿ ಲಾಕ್‍ಡೌನ್ ಘೋಷಣೆಯನ್ನು ಮುರಿಯಲು ಬಯಸುವುದಿಲ್ಲ ಎಂದು ನಂಬಿಕೆ ಹೊಂದಿದ್ದೇನೆ. ಆದರೆ ಕೆಲವರು ಲಾಕ್‍ಡೌನ್ ನಡುವೆಯೂ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಅಂತವರಿಂದ ಕೊರೊವಾ ವೈರಸ್ ಮತ್ತಷ್ಟು ಹೆಚ್ಚಾಗುತ್ತಿದ್ದು, ನಮ್ಮನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದರು.

    ಕೊರೊನಾ ವೈರಸ್ ವಿರುದ್ಧ ಹೋರಾಡುವ ಅನೇಕ ಸೈನಿಕರು ಇದ್ದಾರೆ. ನಮ್ಮ ಸಹೋದರ, ಸಹೋದರಿಯರಾದ ದಾದಿಯರು, ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ನಮಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೀವು ಅವರ ಸೇವೆ, ತ್ಯಾಗವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಈ ವೇಳೆ ಮನವಿ ಮಾಡಿಕೊಂಡರು.

    ಈ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ಫೋನ್ ಮೂಲಕ ಮಾತನಾಡಿ ಆಗ್ರಾದ ಅಶೋಕ್ ಕಪೂರ್ ಅವರು, ತಮ್ಮ ಇಡೀ ಕುಟುಂಬದ ಆರು ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಎಲ್ಲರೂ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇವೆ. ನಮಗೆ ಚಿಕಿತ್ಸೆ ನೀಡಿದ ವೈದ್ಯರು, ಅಧಿಕಾರಿಗಳು ಹಾಗೂ ಸರ್ಕಾರಿ ಸಿಬ್ಬಂದಿಗೆ ಧನ್ಯವಾದ ತಿಳಿಸಲು ಇಚ್ಛಿಸುತ್ತೇವೆ ಎಂದರು.

    ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಯಾವುದೇ ಲಾಭ ಅಪೇಕ್ಷಿಸದೆ ರೋಗಿಗಳಿಗೆ ಸೇವೆ ಸಲ್ಲಿಸುವವರು ಅತ್ಯುತ್ತಮ ವೈದ್ಯ ಎಂದು ಆಚಾರ್ಯ ಚರಕ್ ಹೇಳಿದ್ದಾರೆ. ಅಂತಹ ಪ್ರತಿಯೊಬ್ಬ ದಾದಿಯರಿಗೆ ನಾನು ಇಂದು ನಮಸ್ಕರಿಸುತ್ತೇನೆ. ನೀವೆಲ್ಲರೂ ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತಿದ್ದೀರಿ. ವಿಶ್ವವು 2020ಅನ್ನು ನರ್ಸ್, ವೈದ್ಯಕೀಯ ಸಿಬ್ಬಂದಿಯ ಅಂತರರಾಷ್ಟ್ರೀಯ ವರ್ಷವಾಗಿ ಆಚರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ಮನ್‍ಕೀ ಬಾತ್ ಆರಂಭದಲ್ಲೇ ಸಿದ್ದಗಂಗಾ ಶ್ರೀಗಳನ್ನು ಸ್ಮರಿಸಿ ಗೌರವ ಸಲ್ಲಿಸಿದ ಮೋದಿ

    ಮನ್‍ಕೀ ಬಾತ್ ಆರಂಭದಲ್ಲೇ ಸಿದ್ದಗಂಗಾ ಶ್ರೀಗಳನ್ನು ಸ್ಮರಿಸಿ ಗೌರವ ಸಲ್ಲಿಸಿದ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಲಿಂಗೈಕ್ಯರಾದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರನ್ನು ನೆನಪಿಸಿಕೊಂಡಿದ್ದಾರೆ.

    ಮನ್‍ಕೀ ಬಾತ್ ಆರಂಭದಲ್ಲೇ ಶ್ರೀಗಳನ್ನು ನೆನೆದ ಮೋದಿ, ಜನವರಿ 21ರಂದು ದೇಶಕ್ಕೆ ಶಾಕಿಂಗ್ ನ್ಯೂಸ್ ಎಂಬಂತೆ 111 ವರ್ಷದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ಬಂತು. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ಮಾತಿನಂತೆ ಶಿವಕುಮಾರ ಸ್ವಾಮೀಜಿ ಬದುಕಿದ್ದರು. ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದು ಹೇಳಿ ಸ್ಮರಿಸಿಕೊಂಡರು.

    ಇಂಗ್ಲಿಷ್, ಸಂಸ್ಕೃತ, ಕನ್ನಡದಲ್ಲಿ ವಿದ್ವಾಂಸರಾಗಿದ್ದ ಶ್ರೀಗಳು ಸಾವಿರಾರು ಜನರ ಬಾಳಿಗೆ ಬೆಳಕು ನೀಡಿದ್ದಾರೆ. ಆಧ್ಯಾತ್ಮ, ದಾಸೋಹ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಕೃಷಿ ಮೇಳ, ಪಶು ಮೇಳವನ್ನು ಆಯೋಜಿಸುವ ಮೂಲಕ ರೈತರ ಕಲ್ಯಾಣಕ್ಕೆ ಶ್ರಮಿಸಿದ್ದರು ಎಂದು ಹೇಳಿದರು.

    ನನಗೆ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವ ಸೌಭಾಗ್ಯ ಸಿಕ್ಕಿತ್ತು ಎಂದು ಹೇಳಿ ಗುರುಗಳ ಗುರುವಂದನಾ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಭಾಗವಹಿಸಿದ್ದನ್ನು ಮೋದಿ ಉಲ್ಲೇಖಿಸಿದರು. ಅಷ್ಟೇ ಅಲ್ಲದೇ ಶ್ರೀಗಳ ಬಗ್ಗೆ ಕಲಾಂ ಬರೆದ ಕವಿತೆಯನ್ನು ಓದಿ ಮತ್ತೊಮ್ಮೆ ಶಿವಕುಮಾರ ಸ್ವಾಮೀಜಿ ಅವರಿಗೆ ಗೌರವವನ್ನು ಸಲ್ಲಿಸಿದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    https://www.youtube.com/watch?v=FQVmZkPXCOo&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv