Tag: Mankad Runout

  • ಫ್ರೀ ಹಿಟ್ ರೀತಿ, ಫ್ರೀ ಬಾಲ್ – ಔಟ್ ಆದ್ರೆ 5 ರನ್ ಕಡಿತಗೊಳಿಸಿ ಎಂದ ಅಶ್ವಿನ್

    ಫ್ರೀ ಹಿಟ್ ರೀತಿ, ಫ್ರೀ ಬಾಲ್ – ಔಟ್ ಆದ್ರೆ 5 ರನ್ ಕಡಿತಗೊಳಿಸಿ ಎಂದ ಅಶ್ವಿನ್

    ನವದೆಹಲಿ: ಮಂಕಡ್ ರನ್‍ಔಟ್ ಬಗ್ಗೆ ಭಾರತ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅವರು ಟ್ವೀಟ್ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.

    ಈ ಹಿಂದೆ 2019ರ ಐಪಿಎಲ್‍ನಲ್ಲಿ ಅಶ್ವಿನ್ ಜೋಸ್ ಬಟ್ಲರ್ ಅವರನ್ನು ಮಂಕಡ್ ರನ್‍ಔಟ್ ಮಾಡಿ ಬಹಳ ಟ್ರೋಲ್ ಆಗಿದ್ದರು. ಬೌಲರ್ ಬೌಲ್ ಮಾಡುವ ಮೊದಲೇ ನಾನ್ ಸ್ಟ್ರೈಕ್‍ನಲ್ಲಿ ನಿಂತಿರುವ ಬ್ಯಾಟ್ಸ್ ಮ್ಯಾನ್ ಕ್ರೀಸ್‍ನಿಂದ ಮುಂದೆ ಹೋದರೆ ಅವರನ್ನು ಬೌಲ್ ಮಾಡದೇ ರನ್ ಔಟ್ ಮಾಡುವುದಕ್ಕೆ ಮಂಕಡ್ ರನ್‍ಔಟ್ ಎನ್ನುತ್ತಾರೆ. ಇದು ಐಸಿಸಿ ನಿಯಮದಲ್ಲಿ ಇದ್ದರೂ ಜನಾಭಿಪ್ರಾಯದಲ್ಲಿ ಇದಕ್ಕೆ ಭಾರೀ ವಿರೋಧವಿದೆ.

    ಈ ವಿಚಾರದ ಬಗ್ಗೆ ಮೊದಲು ಮಾತನಾಡಿರುವ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು, ಮಂಕಡ್ ರನ್‍ಔಟ್ ನಿಯಮಬದ್ಧವಾಗಿದೆ ಎಂದು ಹಿರಿಯ ಆಟಗಾರಾದ ಸುನೀಲ್ ಗಾವಸ್ಕರ್, ಡಾನ್ ಬ್ರಾಡ್‍ಮನ್ ಅವರೇ ಒಪ್ಪಿಕೊಳ್ಳುತ್ತಾರೆ. ಇದಕ್ಕೆ ಐಸಿಸಿ ಮತ್ತು ಎಂಸಿಸಿ ಸಂಸ್ಥೆಗಳೇ ಒಪ್ಪಿಗೆ ಸೂಚಿಸಿವೆ. ಆದರೆ ಇದನ್ನು ಬಳಕೆ ಮಾಡಿದ ಆಟಗಾರರನ್ನು ಜನರು ಏಕೆ ಟ್ರೋಲ್ ಮಾಡುತ್ತಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಇದರ ಬಗ್ಗೆ ಬೇರೆಯವರು ಅಭಿಪ್ರಾಯ ಹಂಚಿಕೊಳ್ಳಿ ಎಂದು ಟ್ವೀಟ್ ಮಾಡಿದ್ದರೆ.

    ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಅಶ್ವಿನ್, ಬೌಲರ್ ಬೌಲ್ ಮಾಡುವ ಮುನ್ನ ನಾನ್ ಸ್ಟ್ರೈಕ್‍ನಲ್ಲಿ ನಿಂತಿರುವ ಬ್ಯಾಟ್ಸ್‍ಮ್ಯಾನ್ ಮುಂದೆ ಹೋದರೆ ಮುಂದಿನ ಎಸೆತವನ್ನು ಫ್ರಿ ಬಾಲ್ ಎಂದು ಘೋಷಿಸಬೇಕು. ಈ ಎಸೆತದಲ್ಲಿ ಬ್ಯಾಟ್ಸ್ ಮನ್ ಔಟ್ ಆದರೆ ತಂಡದ ಐದು ರನ್ ಕಡಿತಗೊಳಿಸಬೇಕು. ಬೌಲರ್‍ಗೂ ಒಂದು ಚಾನ್ಸ್ ಕೊಡಿ. ಈ ಮೂಲಕ ಬೌಲರ್ ಕೂಡ ಆಟವನ್ನು ಆನಂದಿಸಲಿ ಎಂದು ಬರೆದುಕೊಂಡಿದ್ದಾರೆ.

    2019ರ ಐಪಿಎಲ್‍ನಲ್ಲಿ ಮೊದಲ ಬಾರಿಗೆ ಅಶ್ವಿನ್ ಮಂಕಡ್ ರನ್ ಔಟ್ ಮಾಡಿ ಸುದ್ದಿಯಾಗಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಬೌಲ್ ಮಾಡುತ್ತಿದ್ದ ಅಶ್ವಿನ್ ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ ಅವರನ್ನು ಮಂಕಡ್ ರನ್ ಔಟ್ ಮಾಡಿದ್ದರು. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನ್ ಅವರನ್ನು ಸಖತ್ ಟ್ರೋಲ್ ಮಾಡಲಾಗಿತ್ತು.