Tag: Manju

  • ಬಿಗ್‍ಬಾಸ್ ಮನೆಗೆ ಬಂತು ನಾಯಿಮರಿ!

    ಬಿಗ್‍ಬಾಸ್ ಮನೆಗೆ ಬಂತು ನಾಯಿಮರಿ!

    ಇಷ್ಟು ದಿನ ಸ್ಪರ್ಧಿಗಳಷ್ಟೇ ಇದ್ದ ಬಿಗ್‍ಬಾಸ್ ಮನೆಗೆ ನಿನ್ನೆ ನಾಯಿ ಮರಿಯೊಂದು ಎಂಟ್ರಿ ನೀಡಿತ್ತು. ಬಿಗ್‍ಬಾಸ್ ಕಾರ್ಯಕ್ರಮ ಶುರುವಾದಾಗಿನಿಂದಲೂ ವಿವಿಧ  ಟಾಸ್ಕ್‌ಗಳನ್ನು ನೀಡಿದ್ದ ಬಿಗ್‍ಬಾಸ್, ನಿನ್ನೆ ಮನೆಯ ಸದಸ್ಯರಿಗೆ ವಿಭಿನ್ನವಾದ ಟಾಸ್ಕ್ ನೀಡಿದ್ದಾರೆ.

    ಯೆಸ್, ನಿನ್ನೆ ಮನೆಯ ಸದಸ್ಯರಿಗೆ ಬಿಗ್‍ಬಾಸ್ ಕೃತಕ ನಾಯಿಮರಿಯೊಂದನ್ನು ಕಳುಹಿಸಿದ್ದರು. ಆ ನಾಯಿಯನ್ನು ಮನೆಯ ಸದಸ್ಯರು ಪ್ರೀತಿಯಿಂದ ನೋಡಿಕೊಳ್ಳಬೇಕಾಗಿತ್ತು. ಆ ನಾಯಿಮರಿಗೆ ಕೋಪಬಂದಾಗ ಬೋಗಳುತ್ತದೆ. ಬೇಸರವಾದಾಗ ಅಳುತ್ತದೆ. ಹಾಗಾಗಿ ಅದಕ್ಕೆ ಕೋಪ ಹಾಗೂ ಅಳು ಬರದಂತೆ ನೋಡಿಕೊಳ್ಳಬೇಕು ಹಾಗೂ ಸದಸ್ಯರು ಬಜರ್ ಆದ ನಂತರ ಒಬ್ಬೊಬ್ಬರಾಗಿ ನಾಯಿಮರಿಯನ್ನು ವರ್ಗಾಯಿಸಿ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದರು.

    ಅದರಂತೆ ಮೊದಲಿಗೆ ದಿವ್ಯಾ ಸುರೇಶ್ ಎತ್ತಿಕೊಂಡು ಕುಣಿದಾಡುತ್ತಾ ನೋಡಿಕೊಳ್ಳುತ್ತಾರೆ. ಜೊತೆಗೆ ನಾಯಿ ಮರಿಯೊಂದಿಗೆ ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡು ಮಾತನಾಡುತ್ತಾರೆ. ಬಳಿಕ ದಿವ್ಯಾ ಸುರೇಶ್, ಶುಭಾಗೆ ನಾಯಿ ಮರಿಯನ್ನು ವರ್ಗಾಯಿಸುತ್ತಾರೆ. ಆಗ ಶುಭ ನಾಯಿಮರಿಯೊಂದಿಗೆ ಮಾತನಾಡುತ್ತಾ ಆಟ ಆಡಿಸುತ್ತಾರೆ. ನಂತರ ಕಿಚನ್ ಏರಿಯಾಗೆ ಹೋಗಿ ನಾಯಿಮರಿ ವೈಷ್ಣವಿ ಅಕ್ಕ ಚಿಕನ್ ಕೊಡಿ ಎಂದು ನಾಯಿ ತರ ಮುದ್ದು-ಮುದ್ದಾಗಿ ಮಾತನಾಡುತ್ತಾರೆ. ಆಗ ಎಲ್ಲರೂ… ನಾಯಿಮರಿಗೆ ಚಿಕನ್ ಬೇಕಾ ಅಥವಾ ನಿನಗೆ ಬೇಕಾ ಎಂದು ದಿವ್ಯಾ ಉರುಡುಗ, ವೈಷ್ಣವಿ ಶುಭಾರನ್ನು ಕೇಳುತ್ತಾರೆ.

    ನಂತರ ಶುಭಾಯಿಂದ ನಾಯಿಮರಿಯನ್ನು ವೈಷ್ಣವಿ ಸ್ವೀಕರಿಸಿ ಆಟ ಆಡಿಸುತ್ತಿರುತ್ತಾರೆ. ಈ ವೇಳೆ ರಘು ಕೂಡ ನಾಯಿ ಜೊತೆ ಆಟವಾಡುತ್ತಾರೆ. ಆಗ ಮಂಜು ಕೂಡ ಆಟವಾಡಲು ಹೋದಾಗ ನಾಯಿಮರಿ ಬೋಗಳುತ್ತದೆ. ಈ ವೇಳೆ ಮಂಜು, ಥೂ ನಿನ್ನ ಜನ್ಮಕ್ಕೆ ಬೆಂಕಿ ಇಕ್ಕ, ಇಷ್ಟು ಕಷ್ಟಪಟ್ಟು ಆಟ ಆಡಿಸಲು ಬಂದರೆ ಬೋಗಳುತ್ತಿಯಾ? ಎಂದು ಬೈಯ್ಯುತ್ತಾರೆ. ಇದನ್ನು ಕಂಡು ಮನೆಯ ಸದಸ್ಯರೆಲ್ಲ ಎರ್ರಾಬಿರ್ರಿ ನಗ್ತಾರೆ.

  • ಟಾಸ್ಕ್ ವೇಳೆ ಮಂಜು ಎಸಗಿದ ದೊಡ್ಡ ತಪ್ಪನ್ನು ತಿಳಿಸಿದ ಸುದೀಪ್

    ಟಾಸ್ಕ್ ವೇಳೆ ಮಂಜು ಎಸಗಿದ ದೊಡ್ಡ ತಪ್ಪನ್ನು ತಿಳಿಸಿದ ಸುದೀಪ್

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಪ್ರತಿದಿನ ಟಾಸ್ಕ್, ಮಾತು, ಜಗಳ, ಹರಟೆ ಎಲ್ಲವೂ ಸ್ಪರ್ಧಿಗಳ ನಡುವೆ ನಡೆಯುತ್ತದೆ. ಇವೆಲ್ಲದರ ಕುರಿತು ವಾರದ ಕೊನೆಯ ಎರಡು ದಿನ ಸುದೀಪ್ ಮಾತನಾಡುತ್ತಾರೆ. ಈ ವಾರದ ಸಂಚಿಕೆಯಲ್ಲಿ ಬಿಗ್‍ಮನೆಯಲ್ಲಿ ಮಂಜು ಮಾಡಿದ ದೊಡ್ಡ ತಪ್ಪೊಂದನ್ನು ತಿಳಿಸಿದ್ದಾರೆ.

    ‘ನೀರಿಗೊಂದು ಎಲ್ಲೆ ಎಲ್ಲಿದೆ’ ಟಾಸ್ಕ್ ನಲ್ಲಿ ನೀರೊಳಗೆ ಬಿದ್ದರೆ ಆಟದಿಂದ ಔಟ್ ಎಂಬ ನಿಯಮ ಇತ್ತು. ಈ ಸಂದರ್ಭ ದಿವ್ಯ ಅವರು ರಾಘುವನ್ನು ನೀರಿಗೆ ತಳ್ಳುತ್ತಾರೆ. ಇದನ್ನು ನೋಡಿದ ಮಂಜು ಅವರಿಗೆ ಕೋಪ ಬರುತ್ತದೆ. ಕೋಪದ ಭರದಲ್ಲಿ ತನ್ನನ್ನು ತಡೆಯುತ್ತಿದ್ದ ಅರವಿಂದ್ ಅವರನ್ನು ಹಿಡಿದುಕೊಂಡು ನೀರಿಗೆ ಬೀಳುತ್ತಾರೆ. ಇದಾದ ಬಳಿಕ ದಿವ್ಯ ಅವರನ್ನು ಎಳೆತಂದು ನೀರಿಗೆ ದೂಡುತ್ತಾರೆ. ಈ ವಿಚಾರವನ್ನು ಪ್ರಸ್ತಾಪ ಮಾಡಿದ ಸುದೀಪ್, ದಿವ್ಯ ಅವರನ್ನು ನೀರಿಗೆ ಎಳೆದು ತಂದು ಹಾಕಿದ್ದು ನಿಯಮದ ಪ್ರಕಾರ ವಿರುದ್ಧ ಅಲ್ಲವೇ ಎಂದು ಮಂಜು ಅವರನ್ನು ಪ್ರಶ್ನಿಸಿದರು.

    ಕಿಚ್ಚ ಅವರ ಪ್ರಶ್ನೆಗೆ ಯೋಚನೆ ಮಾಡಿ ಉತ್ತರಿಸಿದ ಮಂಜು ಹೌದು ಇದು ನಿಯಮದ ವಿರುದ್ಧವಾಗಿತ್ತು ಎಂದು ಅರಿತುಕೊಂಡರು. ಇದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕಿಚ್ಚ, ಆಟದ ಜೋಶ್‍ನಲ್ಲಿ ಕೋಪ ಮತ್ತು ಹಠಕ್ಕೆ ಬಿದ್ದು ಎದುರಾಳಿಗಳು ಮಾಡಿದ ತಪ್ಪನ್ನೇ ನೀವು ಮಾಡಿದ್ದೀರಿ ಅದು ತಪ್ಪಲ್ಲ. ಆದರೆ ಆ ಆಟದಲ್ಲಿ ಆ ನಿಮಿಷಕ್ಕೆ ನಿಮ್ಮ ನಿರ್ಧಾರದಿಂದ ನಿಮ್ಮ ತಂಡ ಸೋಲನ್ನು ಕಾಣಬೇಕಾಯಿತು ಎಂದರು. ಇದಕ್ಕೆ ಉತ್ತರಿಸಿದ ಮಂಜು ಹೌದು ಆಟದ ವೇಳೆ ನನಗೆ ಗೊತ್ತಾಗಲಿಲ್ಲ. ನೀವು ತಿಳಿಸಿದ ನಂತರ ಇದೀಗ ಈ ಕುರಿತು ತಿಳಿಯಿತು ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡರು.

    ಈ ಮೊದಲು ಮಂಜು ಅವರ ಹಲ್ಲಿನ ಕುರಿತು ನಿಮ್ಮ ಹಲ್ಲು ಒಂದು ‘ದಂತಕಥೆ’ಯಾಗಿದೆ ಎಂದು ಕಿಚ್ಚ ಸುದೀಪ್ ಹಾಸ್ಯ ಮಾಡಿದರು. ಟಾಸ್ಕ್ ವೇಳೆ ರಾಜೀವ್ ಅವರ ಕೈ ತಾಗಿ ಮಂಜು ಅವರ ಹಲ್ಲು ಮುರಿದಿತ್ತು. ಇದೀಗ ಮಂಜು ಅವರು ಹಲ್ಲನ್ನು ಹಾಕಿಸಿಕೊಂಡಿದ್ದಾರೆ. ಇದನ್ನು ಗಮನಿಸಿದ ಕಿಚ್ಚ ನಿಮ್ಮ ಒಂದು ಹಲ್ಲು ಎದ್ದು ಕಾಣುತ್ತಿದೆ. ನೀವು ನಗುತ್ತಿದ್ದಾಗ ನಿಮ್ಮನ್ನು ನೋಡಿದವರು ಈ ವ್ಯಕ್ತಿ ಒಂದು ಹಲ್ಲನ್ನು ಉಜ್ಜಿಲ್ಲ ಎಂದುಕೊಳ್ಳಬಹುದು ಎಂದು ಕಾಲೆಳೆದುಕೊಂಡರು.

    ಸದಾ ಬಿಗ್ ಮನೆಯಲ್ಲಿ ಹಾಸ್ಯ ಮಾಡುವ ಮಂಜು ಅವರಿಗೆ ಕಿಚ್ಚ ಹಾಸ್ಯ ಮಾಡಿ ನಗಿಸಿರುವುದು ನೋಡುಗರಿಗೆ ಖುಷಿಕೊಟ್ಟಿದೆ.

  • ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಮಂಜು ನಿರೀಕ್ಷಿಸಿದ್ದು ಯಾರನ್ನು ಗೊತ್ತಾ?

    ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಮಂಜು ನಿರೀಕ್ಷಿಸಿದ್ದು ಯಾರನ್ನು ಗೊತ್ತಾ?

    ಬೆಂಗಳೂರು: ಬಿಗ್‍ಬಾಸ್ ಮನೆಗೆ ಹೊಸ ಅತಿಥಿಯ ಆಗಮನವಾಗಿ ಎರಡೂವರೆ ದಿನ ಕಳೆದಿದೆ. ಈ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸುದೀಪ್ ಸ್ಪರ್ಧಿಗಳಿಗೆ ವೈಲ್ಡ್ ಕಾರ್ಡ್ ಎಂಟ್ರಿಯಾದ ವ್ಯಕ್ತಿಯ ಕುರಿತು ಅಭಿಪ್ರಾಯ ತಿಳಿಸಿ ಎಂದಾಗ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ನನ್ನ ನಿರೀಕ್ಷೆ ಬೇರೆನೇ ಇತ್ತು ಎನ್ನುವ ಮೂಲಕ ಮಂಜು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.

    ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮನೆಯಲ್ಲಿರುವ ಕೆಲವರಲ್ಲಿ ಅಸಮಾಧಾನ ಇದೆ. ಯಾರಿಗೆಲ್ಲ ಅಸಮಾಧಾನ ಇದೆ ತಮ್ಮ ಕೈಗಳನ್ನು ಮೇಲೆತ್ತಿ ಕಾರಣ ಕೊಡಿ ಎಂದರು. ಈ ವೇಳೆ ದಿವ್ಯ ಉರುಡುಗ, ವಿಶ್ವ ಮತ್ತು ಮಂಜು ಅವರು ಅಸಮಾಧಾನದ ಕುರಿತು ಕಾರಣ ತಿಳಿಸಲು ಮುಂದಾದರು. ಈ ವೇಳೆ ಮಂಜು ತನ್ನ ಸರದಿ ಬಂದಾಗ ನನ್ನ ನಿರೀಕ್ಷೆ ಯಾರದ್ರು ಹುಡುಗಿ ಬರಬಹುದ ಎಂದು ಇತ್ತು ಎಂದರು. ಈ ವೇಳೆ ಇತರ ಸ್ಪರ್ಧಿಗಳು ನಗಲು ಪ್ರಾರಂಭಿಸಿದರು.

    ನಂತರ ಕಿಚ್ಚ ನಿಮಗೆ ಬಿಗ್‍ಬಾಸ್ ಯಾವರೀತಿ ಕಾಣಿಸುತ್ತಿದೆ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಮಂಜು, ಐದು ಜನ ಹುಡುಗಿಯರು ಈಗಾಗಲೇ ಬಿಗ್ ಮನೆಯಲ್ಲಿ ಇದ್ದಾರೆ. ಅವರೊಂದಿಗೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಒಬ್ಬರು ಹುಡುಗಿ ಬಂದಿದ್ದರೆ ಹುಡುಗಿಯರ ಮಧ್ಯೆ ಅಲ್ಲೋಲಕಲ್ಲೋಲ ಆಗಬಹುದಿತ್ತೋ ಏನೋ ಎಂದರು.

    ನಂತರ ಮಾತು ಮುಂದುವರಿಸಿದ ಮಂಜು ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ಓಡಾಡಿಕೊಂಡು ಚೆನ್ನಾಗಿ ಇರುತ್ತಾರೆ. ನಮಗೆ ನೋಡಲು ಚೆನ್ನಾಗಿರುತ್ತದೆ ಎಂದರು. ಇದಕ್ಕೆ ಮರು ಪ್ರಶ್ನೆ ಹಾಕಿದ ಅಭಿನಯ ಚಕ್ರವರ್ತಿ, ಇಷ್ಟು ಜನರಲ್ಲಿ ನಿಮಗೆ ಯಾರು ಓಡಾಡಿಕೊಂಡಿದ್ದರೆ ಖುಷಿಯಾಗುತ್ತದೆ ಎಂದರು. ಇದಕ್ಕೆ ಉತ್ತರಿಸಿದ ಮಂಜು ದಿವ್ಯ ಸುರೇಶ್ ಓಡಾಡಿಕೊಂಡಿದ್ದರೆ ಖುಷಿಯಾಗುತ್ತದೆ ಎಂದರು.

    ಬಿಗ್‍ಮನೆಯ ವೈಲ್ಡ್ ಕಾರ್ಡ್ ಎಂಟ್ರಿ ಕೆಲವರಿಗೆ ಖುಷಿಕೊಟ್ಟರೆ ಕೆಲವಲ್ಲಿ ಭಿನ್ನಾಭಿಪ್ರಾಯ ಮೂಡಿಸಿದೆ. ಭಿನ್ನಾಭಿಪ್ರಾಯವನ್ನು ಯಾವರೀತಿ ಸ್ಪರ್ಧಿಗಳು ಸರಿದೂಗಿಸಿಕೊಂಡು ಹೋಗುತ್ತಾರೆ ಎಂಬುವುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

  • ತಂದೆಯಿಂದ ಮಂಜುಗೆ ಬಂತು ಸಂದೇಶ!

    ತಂದೆಯಿಂದ ಮಂಜುಗೆ ಬಂತು ಸಂದೇಶ!

    ಬೆಂಗಳೂರು: ಬಿಗ್‍ಬಾಸ್ ಸೀಸನ್ 8ರ ಸ್ಪರ್ಧಿಯಾಗಿ ಬಂದಿರುವ ಮಜಾ ಭಾರತ ಖ್ಯಾತಿಯ ಲ್ಯಾಗ್ ಮಂಜು ತಮ್ಮ ಹಾಸ್ಯ, ಇತರ ಸ್ಪರ್ಧಿಗಳೊಂದಿಗಿನ ಒಡನಾಟ, ಮಾತಿನ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಈ ನಡುವೆ ಮಂಜು ಅವರಿಗೆ ಅವರ ತಂದೆ ಕರೆಮಾಡಿ ವಿಶೇಷ ಸಂದೇಶ ಒಂದನ್ನು ನೀಡಿದ್ದಾರೆ.

    ಮನೆಮಂದಿಯೆಲ್ಲ ಒಂದಾಗಿ ಸೇರಿ ಮಾತನಾಡುತ್ತಿದ್ದಂತೆ ಸಡನ್ ಆಗಿ ಮಂಜು ಅವರನ್ನು ಅವರ ತಂದೆ ಧ್ವನಿ ಮೂಲಕ ಕರೆದು ಚೆನ್ನಾಗಿದ್ದೀಯಾ? ಎಂದು ವಿಚಾರಿಸಿ, ನೀನು ಬಿಗ್‍ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿರುವುದು ನಮಗೆ ತುಂಬಾ ಸಂತೋಷ ನೀಡಿದೆ. ನೀನು ಕ್ಯಾಪ್ಟನ್ ಪಟ್ಟವನ್ನು ಉತ್ತಮವಾಗಿ ನಿಭಾಯಿಸಿಕೊಂಡು ಹೋಗು. ಮನೆಯಲ್ಲಿದ್ದಾಗ ಯಾವರೀತಿ ಎಲ್ಲರ ಪ್ರೀತಿ ವಿಶ್ವಾಸಗಳಿಸಿಕೊಂಡು ಜನರೊಂದಿಗೆ ಬೆರೆಯುತ್ತಿದ್ದೆ ಅದೇ ರೀತಿ ಬಿಗ್‍ಬಾಸ್ ಮನೆಯಲ್ಲೂ ಇದ್ದು, ನಿನ್ನ ಕ್ಯಾಪ್ಟನ್ ಪಟ್ಟಕ್ಕೆ ಕೀರ್ತಿ ಸಿಗುವಂತಾಗಲಿ ಎಂದು ವಿಶೇಷವಾಗಿ ಹಾರೈಸಿದಿದ್ದಾರೆ.

    ನಂತರ ಮಾತು ಮುಂದುವರಿಸಿ ನೀನು ಬಿಗ್‍ಬಾಸ್‍ಗೆ ಹೋಗುವ ಮುನ್ನ ಬಿದ್ದು ಕೈಗೆ ಗಾಯ ಮಾಡಿಕೊಂಡಿದ್ದೆ ಎಂದು ತಿಳಿದು ಬಂದಿತ್ತು. ಇದರಿಂದ ನಮ್ಮ ಮನಸ್ಸಿಗೆ ನೋವಾಯಿತು. ಆದರೂ ಕೂಡ ನಾವು ನಿನ್ನ ಕಷ್ಟ ಸುಖಗಳಿಗೆ ನಿನ್ನೊಂದಿಗೆ ಸದಾ ಜೊತೆಗಿರುವುದಾಗಿ ಧೈರ್ಯ ತುಂಬಿದರು.

    ನಂತರ ಮಂಜು ನಾನು ನಮ್ಮ ಅಪ್ಪನನ್ನು ಇದುವರೆಗು ಮುಟ್ಟಿಲ್ಲ. ಅಪ್ಪನನ್ನು ತಬ್ಬಿಕೊಳ್ಳಬೇಕೆಂಬ ಆಸೆ ಇದೆ. ಆದರೆ ಇದುವರೆಗು ತಬ್ಬಿಕೊಂಡಿಲ್ಲ ಆದರೆ ನನ್ನ ತಮ್ಮ ಮಾತ್ರ ಅಪ್ಪನೊಂದಿಗೆ ಚೆನ್ನಾಗಿ ಬೆರೆಯುತ್ತಾನೆ. ನಾನು ಮನೆಯಲ್ಲಿ ಎದುರುಗಡೆ ಅಪ್ಪ ಇದ್ದರು ಮಾತನಾಡುವುದಿಲ್ಲ. ನಮಗೇನಿದ್ದರೂ ಅಮ್ಮ, ಅಮ್ಮನೊಂದಿಗೆ ಎಲ್ಲವನ್ನು ಹೇಳಿಕೊಳ್ಳುತ್ತೇನೆ ಎಂದು ಮನೆಯವರನ್ನು ನೆನಪಿಸಿಕೊಂಡರು.

    ಮಂಜು ಅವರ ತಂದೆ ಮಾತನಾಡುತ್ತಿದ್ದಂತೆ, ಇತ್ತ ರಾಜೀವ್ ತಮ್ಮ ತಂದೆಯನ್ನು ನೆನೆದುಕೊಂಡು ಕಣ್ಣೀರು ಹಾಕಿದರು. ಇವರೊಂದಿಗೆ ವಿಶ್ವ ಕೂಡ ತಮ್ಮ ಕುಟುಂಬದವರನ್ನು ನೆನೆದುಕೊಂಡು ಭಾವುಕರಾದ್ರು.

    ಮನೆಯಲ್ಲಿ ಕುಟುಂಬದವರೊಂದಿಗೆ ಜೊತೆಗಿದ್ದಾಗ ಕಳೆದುಕೊಂಡ ಕ್ಷಣಗಳನ್ನು ನೆನೆದುಕೊಂಡು ಇದೀಗ ಬಿಗ್‍ಬಾಸ್ ಸ್ಪರ್ಧಿಗಳು ಎಮೋಷನಲ್ ಆಗುತ್ತಿದ್ದಾರೆ. ಇದರಿಂದ ಜೊತೆಗಿದ್ದಾಗ ತಿಳಿಯದ ಮನುಷ್ಯನ ಬೆಲೆ ಜೊತೆಗಿಲ್ಲದೆ ಇದ್ದಾಗ ತಿಳಿಯುತ್ತದೆ ಎನ್ನುವಂತಿದೆ.

  • ಅಂದು ಅವಮಾನ, ಇಂದು ಸನ್ಮಾನ- ವೈಷ್ಣವಿ ಬಗ್ಗೆ ಮಂಜು ಮೆಚ್ಚುಗೆ ಮಾತು

    ಅಂದು ಅವಮಾನ, ಇಂದು ಸನ್ಮಾನ- ವೈಷ್ಣವಿ ಬಗ್ಗೆ ಮಂಜು ಮೆಚ್ಚುಗೆ ಮಾತು

    ಎರಡೇ ಟಾಸ್ಕ್ ನಲ್ಲಿ ಮನೆ ಮಂದಿಯ ಆಲೋಚನೆ ಬದಲಿಸಿದ ವೈಷ್ಣವಿ ಗೌಡ?!

    ಬೆಂಗಳೂರು: ಬಿಗ್ ಬಾಸ್ ಸೀಸನ್ 8 ಶುರುವಾಗಿ ಹತ್ತತ್ತಿರ ಐದನೇ ವಾರ ಕಂಪ್ಲೀಟ್ ಆಗ್ತಾ ಬರ್ತಾ ಇದೆ. ಈ ಐದು ವಾರದಲ್ಲಿ ಯಾವ ಕಂಟೆಸ್ಟೆಂಟ್ ಹೇಗೆ..? ಅವರು ಸ್ಟ್ರಾಂಗಾ..? ವೀಕಾ ಅನ್ನೋದು ಒಂದು ರೌಂಡ್ ಪಿಚ್ಚರ್ ಸಿಕ್ಕಿದೆ. ಆರಂಭದಿಂದಲೂ ಬಿಗ್ ಮನೆಯಲ್ಲಿ ವೀಕ್ ಎನಿಸಿಕೊಂಡವರು ಈ ವಾರ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅವರೇ ವೈಷ್ಣವಿ ಗೌಡ.. ವೈಷ್ಣವಿ ಗೌಡ ನಿನ್ನೆ ಮೊನ್ನೆ ನಡೆದ ಎರಡು ಟಾಸ್ಕ್ ನಲ್ಲಿ ಯಾರೂ ನಿರೀಕ್ಷಿಸಿರದ ಪರ್ಫಾರ್ಮೆನ್ಸ್ ಕೊಟ್ಟಿದ್ದಾರೆ.

    ಬಿಗ್ ಬಾಸ್ ಕ್ಯಾಪ್ಟನ್ಸಿ ಅಂಗವಾಗಿ ನೀರಿಗೆ ಎಲ್ಲೆ ಎಲ್ಲಿದೆ ಹಾಗೂ ಸುತ್ತಮುತ್ತಲು ಹಗ್ಗಸುತ್ತಲು ಟಾಸ್ಕ್ ನೀಡಿದ್ದರು. ಈ ಎರಡು ಟಾಸ್ಕ್ ನಲ್ಲಿ ವೈಷ್ಣವಿ ಗೌಡ ಉತ್ತಮ ಪ್ರದರ್ಶನ ನೀಡಿ ಶುಭಾ ನೇತೃತ್ವದ ಜಾತ್ರೆ ಟೀಂ ಗೆಲುವಿಗೆ ಕಾರಣರಾಗಿದ್ದಾರೆ. ರಾತ್ರಿ, ಹಗಲು, ಊಟ ತಿಂಡಿ ಎಲ್ಲವನ್ನೂ ಬಿಟ್ಟು ನೀರಿಗೆ ಎಲ್ಲೆ ಎಲ್ಲಿದೆ ಟಾಸ್ಕ್ ಕಂಪ್ಲೀಟ್ ಮಾಡಿದ್ದರು. ಅದೇ ರೀತಿ ಸುತ್ತಮುತ್ತಲು ಹಗ್ಗಸುತ್ತಲು ಟಾಸ್ಕ್ ನಲ್ಲಿ ದೇಹಕ್ಕೆ ಹಗ್ಗ ಸುತ್ತಿಕೊಂಡು ಕಂಬಕ್ಕೆ ವರ್ಗಾವಣೆ ಮಾಡುವಲ್ಲಿ ಮೊದಲು ಯಶಸ್ಸು ಗಳಿಸಿದರು. ವೈಷ್ಣವಿ ಈ ಉತ್ಸಾಹ, ಆಟದ ಪರ್ಫಾರ್ಮೆನ್ಸ್ ಕಂಡು ಎದುರಾಳಿ ಟೀಂನ ಕ್ಯಾಪ್ಟನ್ ದಿವ್ಯಾ ಉರುಡುಗ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಅದೇ ರೀತಿ ವೈಷ್ಣವಿ ಆಟಕ್ಕೆ ಮನೆ ಮಂದಿಯೆಲ್ಲಾ ಶಾಬ್ಬಾಸ್ ಗಿರಿ ಕೊಟ್ಟಿದ್ದಾರೆ. ಅದ್ರಲ್ಲೂ ಮಂಜು ವೈಷ್ಣವಿ ವೀಕ್.. ಅವರು ಇನ್ನೂ ಆಟವಾಡ್ತಿಲ್ಲ.. ಮನೆಯಲ್ಲಿ ಎಲ್ಲರೊಂದಿಗೆ ಓಪನ್ ಅಪ್ ಆಗ್ತಿಲ್ಲ ಅಂತಾ ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದರು. ಬಿಗ್ ಬಾಸ್ ನೀಡಿದ್ದ ಚಟುವಟಿಕೆಯೊಂದರಲ್ಲಿ ತಮ್ಮ ಸ್ಪರ್ಧಿಯಲ್ಲ ಎಂದು ಲ್ಯಾಗ್ ಮಂಜು ವೈಷ್ಣವಿ ಫೋಟೋವನ್ನು ಕಸದ ಬುಟ್ಟಿಗೆ ಹಾಕುತ್ತಿದ್ದರು. ನಾಮಿನೇಟ್ ಸಂದರ್ಭದಲ್ಲಿಯೂ ವೈಷ್ಣವಿ ವೀಕ್ ಎಂದು ನಾಮಿನೇಟ್ ಮಾಡುತ್ತಿದ್ದರು. ಆದ್ರೆ ಈ ವಾರದ ಟಾಸ್ಕ್ ನಲ್ಲಿ ವೈಷ್ಣವಿ ಗೌಡ ಆಟ ಕಂಡು ಲ್ಯಾಗ್ ಮಂಜು ಸಖತ್ ಖುಷಿಪಟ್ಟಿದ್ದಾರೆ.

    ಈ ಬಗ್ಗೆ ನಿನ್ನೆ ವೈಷ್ಣವಿಯೊಂದಿಗೆ ಲ್ಯಾಗ್ ಮಂಜು ಚರ್ಚೆ ನಡೆಸಿದ್ದಾರೆ. ಗಾರ್ಡನ್ ಏರಿಯಾದಲ್ಲಿದ್ದ ವೈಷ್ಣವಿ ತಬ್ಬಿಕೊಂಡು ಮಂಜು, ನಾನು ಅಂದುಕೊಂಡಿರಲಿಲ್ಲ ಅದ್ಭುತವಾಗಿ ಆಡವಾಡಿದೆ. ನಿನ್ನ ಆಟ ನೋಡಿ ಸಿಕ್ಕಾಪಟ್ಟೆ ಖುಷಿಯಾಯ್ತು. ನಿನ್ನ ಬಗ್ಗೆ ಇದ್ದ ಗೌರವ ಎರಡು ಟಾಸ್ಕ್ ನಿಂದ ಡಬ್ಬಲ್ ಆಗಿದೆ ಎಂದು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ವೈಷ್ಣವಿ ಮಂಜು ಮಾತುಗಳನ್ನು ಕೇಳಿ ಖುಷಿಯಾಗಿ ಧನ್ಯವಾದ ತಿಳಿಸಿದ್ದಾರೆ.

    ಒಟ್ನಲ್ಲಿ ವೈಷ್ಣವಿ ತಮ್ಮನ್ನು ವೀಕ್ ಎಂದು ಹೇಳಿದವರಿಗೆ ತಮ್ಮದೇ ಧಾಟಿಯಲ್ಲಿ ತಕ್ಕ ಉತ್ತರ ನೀಡಿದ್ದಾರೆ. ವೈಷ್ಣವಿಯ ಪರ್ಫಾರ್ಮೆನ್ಸ್ ಕಂಡು ಇತರೆ ಸ್ಪರ್ಧಿಗಳಲ್ಲಿ ಇದೇ ರೀತಿ ಆಟವಾಡುವ ಉತ್ಸಾಹ, ಹಂಬಲ ಹೆಚ್ಚುತ್ತಾ..? ಯಾವುದಕ್ಕೂ ಕಾದು ನೋಡಬೇಕು.

  • ಭಾವುಕನಾಗಿದ್ದ ಮಂಜನಿಗೆ ತಬ್ಬಿಕೊಂಡು ಸಮಾಧಾನ ಹೇಳಿದ ಅರವಿಂದ್

    ಭಾವುಕನಾಗಿದ್ದ ಮಂಜನಿಗೆ ತಬ್ಬಿಕೊಂಡು ಸಮಾಧಾನ ಹೇಳಿದ ಅರವಿಂದ್

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ನಿನ್ನೆ ನಡೆದ ಗಡಿಗೋಪುರ ಟಾಸ್ಕ್ ವೇಳೆ ಶುಭಾ ಅವರ ಸಾರಥ್ಯದ ಜಾತ್ರೆ ಟೀಂ ಮತ್ತು ದಿವ್ಯ ಉರುಡುಗ ಮುಂದಾಳತ್ವದ ಅನುಬಂಧ ತಂಡಗಳ ನಡುವೆ ಜಿದ್ದಾಜಿದ್ದಿನ ಕಾದಾಟ ನಡೆದಿದೆ. ಈ ವೇಳೆ ಹಲ್ಲು ಮುರಿದುಕೊಂಡ ಜಾತ್ರೆ ಟೀಂನ ಮಂಜು ಅವರನ್ನು ಅನುಬಂಧ ತಂಡದ ಸದಸ್ಯ ಅರವಿಂದ್ ಅವರು ತಬ್ಬಿಕೊಂಡು ಸಮಾಧಾನ ಹೇಳಿದ್ದಾರೆ.

    ಬಿಗ್‍ಬಾಸ್ ಕೊಟ್ಟ ಗಡಿಗೋಪುರ ಟಾಸ್ಕ್ ವೇಳೆ ಜಾತ್ರೆ ಟೀಂನ ಮಂಜು ಮತ್ತು ಅನುಬಂಧ ಟೀಂನ ರಾಜೀವ್ ನಡುವೆ ನಡೆದ ಆಟದಲ್ಲಿ ರಾಜೀವ್‍ನ ಮುಂಗೈ ಮಂಜು ಹಲ್ಲಿಗೆ ತಾಕಿ ಅರ್ಧ ಹಲ್ಲು ತುಂಡಾಗಿ ನೆಲಕ್ಕೆ ಬಿತ್ತು. ನಂತರ ಮಂಜು ಹಲ್ಲುಮುರಿದನ್ನು ಕಂಡು ತಂಡದ ಸದಸ್ಯರು ಗಾಬರಿಗೊಂಡರೆ, ಇತ್ತ ರಾಜೀವ್ ಮುಂಗೈಗಾದ ಗಾಯದಿಂದ ನರಳಾಡಿದರು. ನಂತರ ಕೆಲ ಹೊತ್ತಿನ ನಂತರ ಟಾಸ್ಕ್ ಮುಂದುವರಿಯಿತು.

    ಬಣ್ಣದ ಇಟ್ಟಿಗೆ ಜೋಡಿಸುವ ಟಾಸ್ಕ್ ನಂತರ ಕೋಳಿ ಜಗಳ ಟಾಸ್ಕ್ ನಡೆಯುತ್ತದೆ. ಇದರಲ್ಲಿ ಮಂಜುವನ್ನು ಅರವಿಂದ್ ಸೋಲಿಸುತ್ತಾರೆ. ನಂತರ ಶಮಂತ್ ಅವರು ಪ್ರಶಾಂತ್ ಸಂಬರಗಿ ಅವರನ್ನು ಸೋಲಿಸಿ ಅನುಬಂಧ ತಂಡ ಗೆಲ್ಲುವಂತೆ ಮಾಡುತ್ತಾರೆ.

    ಈ ಟಾಸ್ಕ್ ಮುಗಿದ ಬಳಿಕ ಅರವಿಂದ್ ಮಂಜುವನ್ನು ತಬ್ಬಿಕೊಂಡರು. ನಂತರ ಎರಡು ನಿಮಿಷ ಹೀಗೆ ಇರು ಅಂದಾಗ ಮಂಜು ಅವರ ಕಣ್ಣಲ್ಲಿ ಕಣ್ಣೀರು ಹರಿಯತೊಡಗಿತು. ಈ ವೇಳೆ ಅರವಿಂದ್ ಏನಾಯಿತು ನೀನು ಅಳಬಾರದು ಎಂದು ಸಮಾಧಾನ ಮಾಡಿದರೆ, ನಂತರ ಅವರ ಬಳಿ ಬಂದ ಶುಭಾ ನೀನು ಈ ರೀತಿ ಆಡ್‍ಬೇಡ ಎಂದು ಹೇಳಿದರೆ, ದಿವ್ಯ ಉರುಡುಗ ನಿನಗೆ ಇದು ಸೂಟ್ ಆಗಲ್ಲ ಮಂಜ “ಡೋಂಟ್ ಡೂ ದಿಸ್” ಎಂದರು.

    ನಂತರ ಬ್ರೋ ಗೌಡ ಮಂಜುವನ್ನು ನಗಾಡಿಸಲು ಪ್ರಯತ್ನಿಸಿದರು. ಈ ವೇಳೆ ಮಂಜು ಬಳಿ ಬಂದ ರಾಜೀವ್ ನೀನು ಹಲ್ಲು ಹೋಗಿರುವ ಕುರಿತು ತಲೆಕೆಡಿಸಿಕೊಳ್ಳಬೇಡ. ನೀನು ಮುಂದಿನ ಟಾಸ್ಕ್ ಬಗ್ಗೆ ಯೋಚನೆ ಮಾಡು ಎಂದು ಸಮಾಧಾನ ಮಾಡಿದರು.

  • ಗಂಡ ಹೆಂಡ್ತಿ ಸಮಸ್ಯೆಗೆ ಸಲ್ಯೂಷನ್ ಕೊಟ್ಟ ವೈಷ್ಣವಿ!

    ಗಂಡ ಹೆಂಡ್ತಿ ಸಮಸ್ಯೆಗೆ ಸಲ್ಯೂಷನ್ ಕೊಟ್ಟ ವೈಷ್ಣವಿ!

    ಬಿಗ್‍ಬಾಸ್ ಮನೆಯ ಪ್ರಣಯ ಪಕ್ಷಿಗಳಂತೆ ಇರುವ ಮಂಜು ಹಾಗೂ ದಿವ್ಯಾ ಸುರೇಶ್ ನಿನ್ನೆ ಗಂಡ ಹೆಂಡ್ತಿಯಂತೆ ಸಂಧಾನಕ್ಕಾಗಿ ವೈಷ್ಣವಿ ಬಳಿ ಹೋಗಿದ್ದಾರೆ. ಸದ್ಯ ಇವರಿಬ್ಬರ ಕೋಳಿ ಜಗಳ ಬಿಡಿಸಲು ವೈಷ್ಣವಿ ಮಧ್ಯೆ ಪ್ರವೇಶಿಸಿದ್ದು, ನಿನ್ನೆ ಇಬ್ಬರಿಗೂ ತಿಳಿ ಹೇಳಿ ಸಂಧಾನ ಮಾಡಿದ್ದಾರೆ.

    ಮಂಜು ಇತ್ತೀಚೆಗೆ ದಿವ್ಯಾ ನನ್ನ ಮೇಲೆ ಸುಮ್ನೆ ಸುಮ್ನೆ ಸಿಟ್ಟು ಮಾಡಿಕೊಳ್ಳುತ್ತಾಳೆ ಎಂದು ಆರೋಪಿಸುತ್ತಾರೆ. ಆಗ ವೈಷ್ಣವಿ ಹೆಣ್ಣು ಅಂದ ಮೇಲೆ ಮುಂಗೋಪ ಸಹಜ ಅನುಸರಿಸಿಕೊಂಡು ಹೋಗುವ ಭಾವನೆನೇ ಇಲ್ವಾ ನಿಮಗೆ ಎಂದು ಪ್ರಶ್ನಿಸುತ್ತಾರೆ. ನಾನು ಅನುಸರಿಸಿಕೊಂಡು ಹೋಗುತ್ತೇನೆ ಆದ್ರೆ ಕೋಪಕ್ಕೆ ಕಾರಣವೇನು ಎಂದಾಗ ಅದು ಪ್ರೀತಿ, ಪ್ರೀತಿ ಹೆಚ್ಚಾದರೆ ಒಂದು ಸ್ವಲ್ಪ ಮೂಗಿನ ತುದಿ ಕೋಪವಿದ್ದೆ ಇರುತ್ತದೆ ಎಂದು ವೈಷ್ಣವಿ ಹೇಳುತ್ತಾರೆ. ಬಳಿಕ ಮಂಜು, ಮೂಗಿನ ತುದಿ ಅಲ್ಲ ದಿವ್ಯಾ ಮೂಗಿನ ಪೂರ್ತಿ ಸಿಟ್ಟಿರುತ್ತದೆ ಎನ್ನುತ್ತಾರೆ.

    ಇದಕ್ಕೆ ದಿವ್ಯಾ ಸುರೇಶ್ ನನಗೆ ಮಂಜು ಜೊತೆ ಅನುಸರಿಸಿಕೊಂಡು ಹೋಗಲು ಆಗುತ್ತಿಲ್ಲ. ಸುಮ್ನೆ ಸುಮ್ನೆ ಅಣುಗಿಸುವುದು, ಕೋಪದಲ್ಲಿರುವಾಗ ಬೇಕು ಬೇಕು ಎಂದು ಕೋಪವನ್ನು ಮತ್ತಷ್ಟು ಏರಿಸುವುದು ಎಂದು ಕಂಪ್ಲೇಟ್ ಮಾಡುತ್ತಾರೆ. ಆಗ ಮಂಜು ರೇಗಿಸುವುದು ಎಂದರೆ ಪ್ರೀತಿ ಅಲ್ಲವಾ ಅಂತಾರೆ? ಅದಕ್ಕೆ ವೈಷ್ಣವಿ ಕೋಪ ಎಂದರೂ ಪ್ರೀತಿ ಅಲ್ವಾ.. ಜೀವನ ಅಂದ ಮೇಲೆ ಏಳು ಬೀಳು, ಕಷ್ಟ ಸುಖ, ದುಃಖ ಎಲ್ಲಾ ಇದ್ದೆ ಇರುತ್ತದೆ. ಎಲ್ಲವನ್ನು ಅನುಸರಿಸಿಕೊಂಡು ಹೋಗಬೇಕು ಎಂದು ಹೇಳುತ್ತಾರೆ.

    ನಂತರ ಮಂಜು ಗೇಮ್ಸ್‍ನಲ್ಲಿ ಒಂದು ಬಾರಿ ಮೇಲಿರುತ್ತಾರೆ ಮತ್ತೊಂದು ಬಾರಿ ಕೆಳಗಿರುತ್ತಾರೆ. ಹಾಗಾಗಿ ಅಡ್ಜೆಸ್ಟ್ ಮಾಡಿಕೊಂಡು ಹೋಗ್ಬೇಕು. ಓಕೆ ಇಂದು ಊಟದ ಬಳಿಕ ನಾಳೆ ತನಕ ಟೈಂ ಕೊಟ್ಟರೆ ಪ್ರೀತಿ ಹಂಚಿಕೊಳ್ಳುತ್ತೇವೆ ಎನ್ನುತ್ತಾರೆ. ಇದಕ್ಕೆ ವೈಷ್ಣವಿ ನಾಳೆ ಏನು, ಹೇಗೆ, ಏನಾಗುತ್ತದೆ ಎಂಬುವುದನ್ನು ನನಗೆ ಬಂದು ಹೇಳಿ ಎಂದು ಹಾಸ್ಯ ಮಾಡುತ್ತಾ, ನೀವಿಬ್ಬರು ಒಂದು ರೀತಿಯ ಐಡಿಯಲ್ ಕಪಲ್. ನಿಮ್ಮನ್ನು ನೋಡಿದರೆ ಪ್ರತಿಯೊಬ್ಬರು ಹೀಗೆ ಬದುಕಬೇಕು ಅನಿಸುತ್ತದೆ ಅಂತಹ ಕಪಲ್ ನೀವು. ಸೋ ಬಿಟ್ಟುಕೊಡಬಿಡಿ ಎನ್ನುತ್ತಾರೆ.

    ಹಾಗದರೆ ನಿಮ್ಮ ತನಕ ಈ ವಿಚಾರ ಬಂದಿದ್ದು ತಪ್ಪಾ? ಗಂಡ ಹೆಂಡತಿ ಜಗಳ ಇಲ್ಲಿಯತನಕ ಬರಬಾರದಿತ್ತು ಎಂದು ಹೇಳುತ್ತಿದ್ದಿರಾ? ಎಂದು ಕೇಳುತ್ತಾರೆ. ನಮ್ಮ ಶೋಗೆ ಬಂದು ಹೀಗೆಲ್ಲಾ ಮಾತನಾಡಬೇಡಪ್ಪಾ. ನೀವು ಬಂದ್ರಲ್ಲಾ ಅದಕ್ಕೆ ಗೌರವ ನೀಡುತ್ತೇವೆ ಅಂತಾರೆ ವೈಷ್ಣವಿ.

    ಬಳಿಕ ಮಂಜು ನಮ್ಮ ‘ಪ್ರೀತಿ ಯಾರಿಗೆ ಕಮ್ಮಿ’ ಎಂದು ದಿವ್ಯಾ ನೋಡುತ್ತಾ ಹಾಡು ಆಡುತ್ತಾರೆ. ಆಗ ದಿವ್ಯಾ ನಿನ್ನ ಪ್ರೀತಿ ಎಲ್ಲರಿಗೂ ಜಾಸ್ತಿನೇ ನೀಡುತ್ತಿದ್ದಿಯಾ ಅದಕ್ಕೆ ಸಮಸ್ಯೆ ಆಗಿರುವುದು ಎಂದಾಗ, ವೈಷ್ಣವಿ ಕೂಡ ಹೌದಪ್ಪಾ ಹೆಂಡತಿ ಬಿಟ್ಟು ಎಲ್ಲರಿಗೂ ಪ್ರೀತಿ ಕೊಟ್ಟರೆ ಹೇಗೆ? ದಿವ್ಯಾಗೆ ನಿನ್ನ ಜೀವನದಲ್ಲಿ ಯಾವ ಸ್ಥಾನ ಕೊಟ್ಟಿದ್ಯಾ? ಎಂದು ಪ್ರಶ್ನಿಸುತ್ತಾರೆ. ದಿವ್ಯಾಗೆ ಪ್ರಥಮ ಸ್ಥಾನ ಕೊಟ್ಟಿದ್ದೇನೆ. ದಿವ್ಯಾ ಪೊಸೆಸಿವ್ ನೆಸ್ ನನಗೆ ಇಷ್ಟ. ಆದರೆ ಅತೀ ಆದರೆ ಕಷ್ಟ ಎಂದು ಮಂಜು ಹೇಳುತ್ತಾರೆ.

    ಕೊನೆಯದಾಗಿ ವೈಷ್ಣವಿ ಇಂತಹ ಇಷ್ಟು ಚೆಂದದ ಹೆಂಡ್ತಿ ನಿಮ್ಮ ಜೀವನದಲ್ಲಿ ಹುಡುಕಿದರೂ ಸಿಗುವುದಿಲ್ಲ ಬರೆದಿಟ್ಟುಕೊಳ್ಳಿ ಎಂದು ಹೇಳಿ ಈ ನಾಟಕವನ್ನು ಹಾಸ್ಯಮಯವಾಗಿ ಮುಗಿಸಿದ್ದಾರೆ.

  • ನಿಧಿ ಸುಬ್ಬಯ್ಯ ಒಂದು ರೀತಿ ಕ್ಯೂಟ್ ದಡ್ಡಿ ಅಂದಿದ್ಯಾಕೆ ರಘು!

    ನಿಧಿ ಸುಬ್ಬಯ್ಯ ಒಂದು ರೀತಿ ಕ್ಯೂಟ್ ದಡ್ಡಿ ಅಂದಿದ್ಯಾಕೆ ರಘು!

    ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಪ್ರತಿವಾರ ನಡೆಯುವಂತೆ ನಿನ್ನೆ ಕೂಡ ‘ಯೆಸ್’ ಆರ್ ‘ನೋ’ ರೌಂಡ್ಸ್ ನಡೆಯಿತು. ಈ ವೇಳೆ ಮನೆಯ ಸದಸ್ಯರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ ಕಿಚ್ಚ ಕೊನೆಯದಾಗಿ ನಿಧಿ ಸುಬ್ಬಯ್ಯ ಕೆಲವು ಸಲ ದಡ್ಡಿ ಎಂಬ ಪ್ರಶ್ನೆ ಕೇಳುತ್ತಾರೆ.

    ಬಳಿಕ ನೋ ಯಾಕೆ ರಾಜೀವ್‍ರವರೇ ಎಂದು ಕೇಳಿದಾಗ, ನಿಧಿ ಯಾವಾಗಲೂ ನನ್ನ ಭಾವನೆಗಳನ್ನು ಹೇಗೆ ಎಕ್ಸ್‍ಪ್ರೆಸ್ ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳುತ್ತಿರುತ್ತಾರೆ. ಅವರು ಹೇಳಬೇಕೆಂದು ಕೊಂಡ ವಿಚಾರವನ್ನು ಕನ್ನಡದಲ್ಲಿ ಹೇಗೆ ಹೇಳಬೇಕೆಂದು ಗೊತ್ತಾಗದೇ ಯೋಚನೆ ಮಾಡುತ್ತಿರುತ್ತಾರೆ. ಈ ಗ್ಯಾಪ್‍ನಲ್ಲಿ ಕೆಲವೊಂದನ್ನು ಹೇಗೆ ಹೇಳಬೇಕೆಂದು ಗೊತ್ತಾಗದೇ ಹೇಳಿ ಬಿಡುತ್ತಾರೆ. ಆಗ ನಾವು ನಿಧಿ ಕನ್ಫೂಷನ್‍ನಲ್ಲಿ ಹೇಳುತ್ತಿದ್ದಾರೆ ಎಂದು ಕೊಳ್ಳುತ್ತೇವೆ. ಆದರೆ ಅವರಿಗೆ ಏನು ಹೇಳುತ್ತಿದ್ದೇನೆ ಎಂಬ ವಿಚಾರದ ಬಗ್ಗೆ ಅವರಿಗೆ ಬಹಳ ಅರಿವಿರುತ್ತದೆ ಎನ್ನುತ್ತಾರೆ.

    ನಂತರ ಯೆಸ್ ಬೋರ್ಡ್ ತೋರಿಸಿದ್ದ ರಘು, ನಿಧಿ ಕೆಲವು ಸಲ ನನ್ನ ರೀತಿಯೇ ಸ್ಲೋ ಮೋಷನ್. ಏನಾದರೂ ಹೇಳಲು ಸಮಯ ತೆಗೆದುಕೊಳ್ಳುತ್ತಾರೆ. ಯೋಚನೆ ಮಾಡುವ ಸಮಯದ ಮಧ್ಯೆ ಏನಾದರೂ ಹೇಳಿ ಬಿಡುತ್ತಾರೆ. ಅದಕ್ಕೆ ಅವರು ಒಂದು ರೀತಿ ಕ್ಯೂಟ್ ರೀತಿಯ ದಡ್ಡಿ ಎಂದು ಅವರತ್ತಾ ನೋಡುತ್ತಾರೆ. ಈ ವೇಳೆ ಕಿಚ್ಚ ಆಯಿತು ಆದರೆ ನೀವು ಯಾಕೆ ಅವರನ್ನು ಹಾಗೇ ನೋಡುತ್ತಿದ್ದೀರಾ? ನಿಧಿ ನಿಮಗೆ ಗೊತ್ತಾಗ್ತಿದ್ಯಾ ಅವರು ಯಾವ ರೀತಿ ನೋಡುತ್ತಿದ್ದಾರೆ ಎಂದು ಹಾಸ್ಯ ಮಾಡುತ್ತಾರೆ. ಈ ವೇಳೆ ನಿಧಿ ಮುಖ ಮುಚ್ಚಿಕೊಂಡು ನಗುತ್ತಾ ಗೊತ್ತಿಲ್ಲ ಸರ್ ಅವರು ಹೇಗೆ ನೋಡಿದ್ರು ಎನ್ನುತ್ತಾರೆ.

    ನಂತರ ಮಾತನಾಡಿದ ಮಂಜು, ಒಂದೊಂದು ಬಾರಿ ನಿಧಿ ಏನು ಮಾತನಾಡುತ್ತಾರೆ ಎಂಬುವುದು ಅವರಿಗೆ ಗೊತ್ತಾಗುವುದಿಲ್ಲ. ಅಂದರೆ ಅವರಿಗೆ ಎಲ್ಲ ಗೊತ್ತಿದೆ. ಆದರೆ ಆ ಮಾತುಗಳನ್ನು ಹೇಗೆ ಆಡಬೇಕೆಂದು ತಿಳಿದಿರುವುದಿಲ್ಲ. ಥಟ್ ಅಂತ ಮಾತಾನಾಡಿಬಿಡುತ್ತಾರೆ. ಆಗ ಬೇರೆಯವರಿಗೆ ಬೇಸರವಾಗುತ್ತದೆ. 5 ನಿಮಿಷದ ನಂತರ ಹೌದು ನನಗೆ ಗೊತ್ತಾಗಲಿಲ್ಲ ಎಂದು ಅರ್ಥಮಾಡಿಕೊಂಡು ಹೇಳುತ್ತಾರೆ.

    ಇದಕ್ಕೆ ಪ್ರತಿಯುತ್ತರ ನೀಡಿದ ನಿಧಿ, ಹೌದು, ನಾನು ಸಡನ್ ರಿಯಾಕ್ಟ್ ಮಾಡುವುದು, ಓವರ್ ಥಿಂಕ್ ಮಾಡುವುದು ನಿಜ. ನನ್ನ ಪ್ರಕಾರ ಇವರೆಲ್ಲರೂ ನನ್ನ ದಡ್ಡಿ ಅಂದುಕೊಂಡರೆ ಅದು ನನ್ನ ಸ್ಟ್ರೆಂಥ್. ಯಾಕಂದ್ರೆ ನನ್ನ ಆಯ್ಕೆ ಇವರ್ಯಾರಿಗೂ ಇನ್ನೂ ಗೊತ್ತಿಲ್ಲ ಎಂದು ಹೇಳುತ್ತಾರೆ.

  • ಮಂಜು ಒಲೈಕೆಗೆ ಹಾಡಿನ ಮಳೆ ಸುರಿಸಿದ ದಿವ್ಯಾ

    ಮಂಜು ಒಲೈಕೆಗೆ ಹಾಡಿನ ಮಳೆ ಸುರಿಸಿದ ದಿವ್ಯಾ

    ಬಿಗ್‍ಬಾಸ್ ಮನೆಯ ಪ್ರಣಯ ಪಕ್ಷಿಗಳಂತಿದ್ದ ಲ್ಯಾಗ್ ಮಂಜು ಹಾಗೂ ದಿವ್ಯಾ ಸುರೇಶ್ ಗುರುವಾರ ಪಾತ್ರೆ ತೊಳೆಯುವ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.

    ಇದರಿಂದ ದಿವ್ಯಾ ಮೇಲೆ ಮುನಿಸಿಕೊಂಡಿದ್ದ ಮಂಜುನನ್ನು ಒಲೈಸಿಕೊಳ್ಳಲು ದಿವ್ಯಾ ಸುರೇಶ್ ಹಾಡುಗಳ ಮೂಲಕ ಭಾವನೆಗಳನ್ನು ಹೊರಹಾಕಿದ್ದಾರೆ. ಹೌದು, ಮೊದಲಿಗೆ ‘ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ’ ಎಂದು ದಿವ್ಯಾ ಹಾಡು ಶುರು ಮಾಡುತ್ತಾರೆ. ಇದಕ್ಕೆ ಮಂಜು ‘ಪ್ರೇಮಮಂ ಶರಣಂ ಗಚ್ಛಾಮೀ ಅಲ್ಲಿ ಮೋಸವೋ’ ಎಂದು ಹಾಡುತ್ತಾರೆ. ಬಳಿಕ ದಿವ್ಯಾ ಸುರೇಶ್ ನೀನೆಂದರೆ ನನಗೆ ಇಷ್ಟ ಕಣೋ.. ಎಂದಾಗ ಮಂಜು ಮೆಟ್ಟಲಿ ಹೊಡಿತೀನಿ ಸಮ್ನೆ ಇರು ಎಂದು ಹಾಡುತ್ತಾರೆ. ಇದಕ್ಕೆ ದಿವ್ಯಾ ‘ಏಕೆ ಹೀಗಾಯ್ತೋ ನಾನು ಕಾಣೇನೋ’ ಎಂದು ಹಾಡು ಹೇಳುತ್ತಾರೆ ಈ ವೇಳೆ ರಾಜೀವ್ ಹಾಗೂ ಚಂದ್ರಕಲಾ ಕೂಡ ದಿವ್ಯಾಗೆ ಸಾಥ್ ನೀಡುತ್ತಾರೆ. ನಂತರ ಮಂಜು ‘ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯ ಬರಹ’ ಎಂದು ಕಿಚ್ಚ ಸುದೀಪ್ ಸಿನಿಮಾದ ಹಾಡೊಂದನ್ನು ಹಾಡುತ್ತಾರೆ.

    ಮತ್ತೆ ಮಂಜು ‘ಯಾರೇ ಕೂಗಡಾಲಿ ಊರೇ ಹೋರಾಡಲಿ’ ಮಂಜ ನಿನಗೆ ಸಾಟಿ ಇಲ್ಲ ಎಂದು ತಮ್ಮನ್ನು ತಾವು ಬಣ್ಣಿಸಿಕೊಂಡು ಹಾಡು ಹಾಡುತ್ತಾರೆ. ಇದಕ್ಕೆ ದಿವ್ಯಾ ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೆ ಎಲ್ಲರೆದುರು ಮಾನ ಹೋಗಿ ಕೊನೆಗೆ ಮನೆಗೆ ಹೋಗುವೆ ಎಂದು ಹೇಳುತ್ತಾರೆ. ಇದಕ್ಕೆ ಮಂಜು ಓ ಭ್ರಮೆ.. ಎಂಬ ಡೈಲಾಗ್‍ನನ್ನು ಹೇಳುತ್ತಾ.. ಕಣ್ಣೀರಿದು ರಕ್ತ ಕಣ್ಣೀರಿದು ಪರರ ಕಣ್ಣಿರಿನ ಪ್ರತಿಬಿಂಬ ಇದು ಎಂದು ಹಾಡುತ್ತಾರೆ. ಆಗ ದಿವ್ಯಾ ಅಳಬ್ಯಾಡ ಕಣೋ ಸಮ್ಮಕ್ಕಿರು ನನ್ನ ಮುದ್ದಿನ ರಾಜ ಅಂದಾಗ ಮಂಜು ಹಾವಾದ್ರೂ ಕಚ್ಚಾಬಾರ್ದ ಚೇಳಾದ್ರೂ ಕುಕ್ಕಾಬಾರ್ದ ಎಂದು ಬೈಯ್ಯುವಂತೆ ಹಾಡುತ್ತಾರೆ. ಅದಕ್ಕೆ ದಿವ್ಯಾ ಸುರೇಶ್ ಮಂಜುರನ್ನು ಸಮಾಧಾನಗೊಳಿಸಲು ಸಿಟ್ಯಾಕೋ ಸಿಡುಕು ಯಾಕೋ ನನ್ನ ಜಾಣ ಎಂದು ಹಾಡುತ್ತಾರೆ.

    ಹೀಗೆ ಮಂಜುರ ಕೋಪವನ್ನು ತಣ್ಣಗೆ ಮಾಡಲು ದಿವ್ಯಾ ಸುರೇಶ್ ಪದಗಳ ಬದಲಾಗಿ ಹಾಡುಗಳ ಜೋಡಣೆ ಮಾಡಿ ಹಾಡುಗಳನ್ನು ಹಾಡುತ್ತಾರೆ. ಇದಕ್ಕೆ ಪ್ರತಿ ಉತ್ತರವಾಗಿ ಕೂಡ ಕೆಲವೊಂದು ಗೀತೆಗಳನ್ನು ಹೇಳುತ್ತಾರೆ. ಒಟ್ಟಾರೆ ಇವರಿಬ್ಬರ ನಡುವಿನ ನೀನಾ ನಾನಾ ಹಾಡಿನ ಜಟಾಪಟಿ ನೋಡಿ ಮನೆಮಂದಿಯೆಲ್ಲ ಫುಲ್ ಎಂಜಾಯ್ ಮಾಡುತ್ತಾರೆ.

  • ಮಾತುಗಾರ ಮಂಜು ಬಾಯಿಗೆ ಪ್ಲಾಸ್ಟರ್ ಹಾಕಿದ ಬಿಗ್‍ಬಾಸ್!

    ಮಾತುಗಾರ ಮಂಜು ಬಾಯಿಗೆ ಪ್ಲಾಸ್ಟರ್ ಹಾಕಿದ ಬಿಗ್‍ಬಾಸ್!

    ಮಾತು ಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತನ್ನು ನಾವೆಲ್ಲ ಕೇಳಿರಬಹುದು. ಹಾಗೆಯೇ ಬಿಗ್‍ಬಾಸ್ ಮನೆಯಲ್ಲಿ ಹೆಚ್ಚಾಗಿ ಯಾರು ಮಾತನಾಡುತ್ತಾರೆ ಎಂದು ಕೇಳಿದರೆ ಅದು ಮಂಜು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸದ್ಯ ಬಿಗ್‍ಬಾಸ್.. ದೊಡ್ಮನೆ ಸದಸ್ಯರಿಗೆ ಮಾತುಗಾರ ಎಂಬ ಚಟುವಟಿಕೆಯೊಂದನ್ನು ನೀಡಿದ್ದರು. ಅದರ ಅನುಸಾರ ಮನೆಯ ಎಲ್ಲ ಸದಸ್ಯರು ಇಡೀ ಮನೆಯಲ್ಲಿ ಹೆಚ್ಚಾಗಿ ಮಾತನಾಡುವ ಸದಸ್ಯರನ್ನು ಆರಿಸಿ ಪ್ಲಾಸ್ಟರ್ ಬ್ಯಾಡ್ಜ್‍ನನ್ನು ನೀಡಬೇಕು ಹಾಗೂ ಅತೀ ಕಡಿಮೆ ಮಾತನಾಡುವ ಸದಸ್ಯರಿಗೆ ಮೈಕ್ ಬ್ಯಾಡ್ಜ್ ನನ್ನು ನೀಡಬೇಕು ಎಂದು ಸೂಚಿಸಿದ್ದರು.

    ಈ ಚಟುವಟಿಕೆ ಆರಂಭಿಸಿದ ನಿಧಿ, ಮಂಜು ಮಾತೆಂದರೆ ನನಗೆ ಬಹಳ ಇಷ್ಟ. ಆದರೆ ಒಮ್ಮೊಮ್ಮೆ ಅವರ ಮಾತು ನನಗೆ ತಲೆನೋವು ಬರಿಸುತ್ತದೆ ಅಂತಾರೆ. ಇನ್ನು ನೋವಿಗೆ ಸ್ಪಂದಿಸುವ ಹಾಗೂ ಎಲ್ಲರನ್ನು ಮಾತಿನ ಮೂಲಕ ಆಕರ್ಷಿಸುವ ವ್ಯಕ್ತಿ ಮಂಜು ಎಂದು ಶಂಕರ್ ಹೇಳುತ್ತಾರೆ. ನಂತರ ಪ್ರಶಾಂತ್ ಸಂಬರ್ಗಿ ಮಾತು ಬೆಳ್ಳಿ, ಮೌನ ಚಿನ್ನ ಆದರೆ ಮಾತು ಹೆಚ್ಚಾದರೆ ಗಾರ್ಬೆಜ್ ಎಂದು ಹೇಳಿ ಪ್ಲಾಸ್ಟರ್ ನೀಡುತ್ತಾರೆ. ಮಂಜು ಮಾತನಾಡುವಾಗ ಸ್ವಲ್ಪ ವಾಲ್ಯೂಮ್ ಕಡಿಮೆ ಮಾಡಿಕೊಂಡರೆ ಒಳ್ಳೆಯದು ಅಂತ ಶಮಂತ್ ಹೇಳಿದರೆ, ಅರವಿಂದ್.. ನಿದ್ರೆಯ ಗೋರಕೆಯಲ್ಲಿ ಮಾತನಾಡುವ ವ್ಯಕ್ತಿ ಅಂದರೆ ಅದು ಮಂಜು ಅಂತ ಸೂಚಿಸುತ್ತಾರೆ. ಹೀಗೆ ವೈಷ್ಣವಿ ಸೇರಿದಂತೆ ಮನೆಯ ಬಹುತೇಕ ಮಂದಿ ಮಂಜುರನ್ನು ಮಾತುಗಾರ ಎಂದು ಸೂಚಿಸಿ ಪ್ಲಾಸ್ಟರ್ ನೀಡುತ್ತಾರೆ.

    ಮನೆಯಲ್ಲಿ ಕಡಿಮೆ ಮಾತನಾಡುವ ವ್ಯಕ್ತಿ ಎಂದರೆ ವೈಷ್ಣವಿ ಅವರು ಹೆಚ್ಚಾಗಿ ಮಾತನಾಡಬೇಕು ಎಂದು ದಿವ್ಯಾ ಸುರೇಶ್, ಶಂಕರ್, ಶಮಂತ್, ಶುಭ ಹೀಗೆ ಮನೆಯ ಹೆಚ್ಚಿನ ಮಂದಿ ಸೂಚಿಸುತ್ತಾರೆ.

    ಹೀಗೆ ಮನೆಯಲ್ಲಿ ಹೆಚ್ಚು ಮಾತನಾಡುವ ಸದಸ್ಯ ಮಂಜುಗೆ ಪ್ಲಾಸ್ಟರ್ ಬ್ಯಾಡ್ಜ್ ದೊರೆತ ಹಿನ್ನೆಲೆ ನಿನ್ನೆ ಬಿಗ್‍ಬಾಸ್ ತಮ್ಮ ಮುಂದಿನ ಆದೇಶದವರೆಗೂ ಮಂಜು ಮಾತನಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ತಾವು ಏನೇ ಮಾತನಾಡಬೇಕದರೂ ನೇರವಾಗಿ ಮಾತನಾಡದೇ ವೈಷ್ಣವಿ ಮೂಲಕವೇ ಮಾತನಾಡಬೇಕೆಂದು ಹೇಳಿದರು. ಜೊತೆಗೆ ವೈಷ್ಣವಿಯೊಂದಿಗೆ ಕೂಡ ಪದ ಬಳಕೆ ಮಾಡದೇ ಸನ್ನೆ, ಮೂಕ ಅಭಿನಯ, ನಟನೆಯೊಂದಿಗೆ ಅರ್ಥಮಾಡಿಸಬೇಕು ಎಂದು ತಿಳಿಸಿದರು. ಇದನ್ನು ಕೇಳಿದ ಮನೆಯ ಸದಸ್ಯರು ಹೊಟ್ಟೆ ಬಿರಿಯುಷ್ಟು ನಗುತ್ತಾ ಎಂಜಾಯ್ ಮಾಡಿದರು.

    ಒಟ್ಟಾರೆ ಪಟಾಕಿಯಂತೆ ಯಾವಾಗಲೂ ಮಾತನಾಡುತ್ತಿದ್ದ ಮಂಜು ಬಾಯಿಗೆ ಬಿಗ್‍ಬಾಸ್ ಬೀಗ ಹಾಕಿದ್ದಾರೆ ಎಂದರೆ ತಪ್ಪಾಗಲಾರದು.