Tag: Manikeshwari Matha

  • ಶಿವಲಿಂಗದಲ್ಲಿ ಶಿವೈಕ್ಯರಾದ ಮಾತೆ ಮಾಣಿಕೇಶ್ವರಿ ಇನ್ನು ನೆನಪು ಮಾತ್ರ

    ಶಿವಲಿಂಗದಲ್ಲಿ ಶಿವೈಕ್ಯರಾದ ಮಾತೆ ಮಾಣಿಕೇಶ್ವರಿ ಇನ್ನು ನೆನಪು ಮಾತ್ರ

    ಕಲಬುರಗಿ: ಕಳೆದ ಏಳು ದಶಕಗಳಿಂದ ಲಕ್ಷಾಂತರ ಭಕ್ತರ ಪಾಲಿನ ಆರಾಧ್ಯದೈವ, ಎಲ್ಲರಿಂದಲೂ ಅಮ್ಮಾ ಎಂದು ಭಕ್ತಿಯಿಂದ ಪ್ರೀತಿಗೆ ಪಾತ್ರವಾಗಿದ್ದ ಮಾತಾ ಮಾಣಿಕೇಶ್ವರಿ ಅಮ್ಮ ಇನ್ನು ನೆನಪು ಮಾತ್ರ. ಇಂದು ಅಮ್ಮನವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಈ ಮೂಲಕ ಮಾತಾ ಮಾಣಿಕೇಶ್ವರಿ ಅಮ್ಮ ಶಾಶ್ವತವಾಗಿ ಶಿವೈಕ್ಯರಾದರು.

    ಮಾತಾ ಮಾಣಿಕೇಶ್ವರಿ ಅವರ ಅಂತಿಮ ದರ್ಶನಕ್ಕೆ 1 ಲಕ್ಷಕ್ಕೂ ಅಧಿಕ ಭಕ್ತರು ಯಾನಾಗುಂದಿಗೆ ಆಗಮಿಸಿದ್ದು, ಕಣ್ಣು ಹಾಯಿಸಿದಲ್ಲೆಲ್ಲಾ ಅಮ್ಮನ ದರ್ಶನಕ್ಕೆ ಕಾದು ನಿಂತಿರುವ ಸಾವಿರಾರು ಭಕ್ತರು ಕಾಣುತ್ತಿದ್ದರು. ಈ ಮೂಲಕ ಕೊನೆಯ ಬಾರಿ ಅಮ್ಮನ ಮುಖವನ್ನು ನೋಡಿ ನಮ್ಮ ಜನ್ಮವನ್ನು ಪಾವನ ಮಾಡಿಕೊಳ್ಳೋಣ ಎಂದು ವೃದ್ಧರು, ಮಕ್ಕಳು, ಮಹಿಳೆಯರು ಸೇರಿದಂತೆ ಅಪಾರ ಭಕ್ತರು ಮಾತೆಯ ಅಂತಿಮ ದರ್ಶನ ಪಡೆದರು.

    ಸಾಗರೋಪಾದಿಯಲ್ಲಿ ಜನರು ಬಂದಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇನ್ನೊಂದೆಡೆ ಪೊಲೀಸರು ಬಾರದ ಲೋಕಕ್ಕೆ ಹೋದ ಮಹಾಮಾತೆಗೆ ಮೂರು ಸುತ್ತು ಗುಂಡು ಹಾರಿಸಿ ಗೌರವವನ್ನು ಸೂಚಿಸಿದರು.

    ಭಾನುವಾರ ಮುಂಜಾನೆಯಿಂದ ಮಾಣಿಕೇಶ್ವರಿ ಅಮ್ಮನ ಪ್ರಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಭಾನುವಾರದಿಂದ ಸಾವಿರಾರು ಜನರು ಆಶ್ರಮಕ್ಕೆ ಆಗಮಿಸಿ ಅಮ್ಮನ ದರ್ಶನ ಪಡೆದರು. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಇಂದು ಮಧ್ಯಾಹ್ನ ಹನ್ನೆರಡು ಗಂಟೆಯವರೆಗೆ ಮಾತ್ರ ಮಾತಾ ಮಾಣಿಕೇಶ್ವರಿ ಅಮ್ಮನ ಪ್ರಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ನಂತರ ಹಿಂದೂ ಧರ್ಮದ ಧಾರ್ಮಿಕ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ನೆರವೇರುತ್ತದೆ ಅಂತ ಟ್ರಸ್ಟ್ ನವರು ಹೇಳಿದ್ದರು.

    ಹೀಗಿದ್ದರೂ ಇಂದು ಸಾವಿರಾರು ಜನರು ಆಗಮಿಸಿದ್ದರಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಪ್ರಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ನಂತರ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವಗಳನ್ನು ಸಲ್ಲಿಸಿದರು. ರಾಜ್ಯ ಸರ್ಕಾರದ ಪರವಾಗಿ ಸಚಿವ ಪ್ರಭು ಚೌಹಾನ್ ಗೌರವ ಸಲ್ಲಿಸಿದರು.

    ನಮ್ಮೆಲ್ಲರಿಗೆ ತಾಯಿ ಸ್ವರೂಪಳಾಗಿದ್ದ ಮಾತಾ ಮಾಣಿಕೇಶ್ವರಿ ಅಮ್ಮ ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಭಕ್ತರು ಪ್ರಾರ್ಥಿಸಿದರು. ಪ್ರಾರ್ಥಿವ ಶರೀರದ ದರ್ಶನ ನಂತರ ಹಿಂದೂ ಧರ್ಮದ ಧಾರ್ಮಿಕ ವಿಧಿ ವಿಧಾನಗಳಂತೆ ಅಮ್ಮನ ಅಂತ್ಯಕ್ರಿಯೆ ಪ್ರಕ್ರಿಯೆಗಳು ನಡೆದವು. ಗಂಗಾ ಜಲದಿಂದ ಪ್ರಾರ್ಥಿವ ಶರೀರವನ್ನು ಶುದ್ಧೀಕರಿಸಲಾಯಿತು. ನಂತರ ಆಶ್ರಮದಲ್ಲಿರುವ ನಾಗದೇವತೆ ಮೇಲೆ ಪ್ರಾರ್ಥಿವ ಶರೀರವನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಇದಾದ ನಂತರ ಗುಹೆಯಲ್ಲಿರುವ ಶಿವಲಿಂಗದಲ್ಲಿಟ್ಟು, ವಿಭೂತಿಗಳನ್ನು ಜೋಡಿಸಿ ಅಂತಿಮ ಕ್ರಿಯೆಗಳನ್ನು ನೆರವೇರಿಸಲಾಯಿತು.

    ಮಾತಾ ಮಾಣಿಕೇಶ್ವರಿ ಅಮ್ಮ ಈ ಹಿಂದೆ ಜೀವಂತ ಸಮಾಧಿಯಾಗುವ ಇಚ್ಛೆ ಹೊಂದಿದ್ದರು. ಆದರೆ ಸರ್ಕಾರ ಅವಕಾಶ ನೀಡಿರಲಿಲ್ಲ. ಹೀಗಾಗಿ ಹದಿನೈದು ವರ್ಷಗಳ ಹಿಂದೆಯೇ ಅಮ್ಮ ಆಶ್ರಮದಲ್ಲಿ ಗುಹೆ ಮಾಡಿಸಿದ್ದರು. ಅಲ್ಲಿ ಬೃಹತ್ ಶಿವಲಿಂಗ ಕೂಡ ನಿರ್ಮಾಣ ಮಾಡಿಸಿದ್ದರು. ಅದೇ ಶಿವಲಿಂಗದಲ್ಲಿ ಅಮ್ಮನ ಪ್ರಾರ್ಥಿವ ಶರೀರವನ್ನು ಇಟ್ಟು, ವಿಭೂತಿ ಹಾಕಿ ಅಂತಿಮ ಸಂಸ್ಕಾರ ಸಲ್ಲಿಸಲಾಯಿತು. ಗುಹೆಯಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಹೋಗಲು ಅವಕಾಶವಿತ್ತು. ಹೀಗಾಗಿ ಆಶ್ರಮದ ಟ್ರಸ್ಟಿಗಳು ಮತ್ತು ಕೆಲ ಜನಪ್ರತಿನಿಧಿಗಳು ಮಾತ್ರ ಅಮ್ಮನ ಪ್ರಾರ್ಥಿವ ಶರೀರವನ್ನು ಗುಹೆಯೊಳಗಿನ ಶಿವಲಿಂಗದಲ್ಲಿಡುವ ಸಮಯದಲ್ಲಿ ಹಾಜರಿದ್ದರು.

    ಎಂಬತ್ತೇಳು ವರ್ಷದ ಮಾತಾ ಮಾಣಿಕೇಶ್ವರಿ ಅಮ್ಮ ಇದೇ ತಿಂಗಳು ಏಳರಂದು ಮಾಣಿಕೇಶ್ವರಿ ಆಶ್ರಮದಲ್ಲಿ ಶಿವೈಕ್ಯರಾಗಿದ್ದರು. ಕಳೆದ ಅನೇಕ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಮಾಣಿಕೇಶ್ವರಿ ಅಮ್ಮಾ ಚಿರನಿದ್ರೆಗೆ ಜಾರಿದ್ದರು.

  • ಮಾತೆ ಮಾಣಿಕೇಶ್ವರಿ ಅಂತಿಮ ದರ್ಶನ – ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ ಹಿಂದೂ, ಮುಸ್ಲಿಂ ಭಕ್ತರು

    ಮಾತೆ ಮಾಣಿಕೇಶ್ವರಿ ಅಂತಿಮ ದರ್ಶನ – ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ ಹಿಂದೂ, ಮುಸ್ಲಿಂ ಭಕ್ತರು

    ಕಲಬುರಗಿ: ಮಾತಾ ಮಾಣಿಕೇಶ್ವರಿ ಲಿಂಗೈಕ್ಯರಾದ ಹಿನ್ನೆಲೆ ಅವರ ಲಕ್ಷಾಂತರ ಸಂಖ್ಯೆಯ ಭಕ್ತರು ದುಃಖತಪ್ತರಾಗಿದ್ದಾರೆ. ವಿವಿಧ ರಾಜ್ಯಗಳಿಂದ ಸಾಗರೋಪಾದಿಯಲ್ಲಿ ಭಕ್ತರು ಯಾನಗುಂದಿಗೆ ಬರುತ್ತಿದ್ದಾರೆ. ಭಕ್ತರಲ್ಲಿ ಹಿಂದುಗಳಂತೆ ಮುಸ್ಲಿಮರು ಇದ್ದಾರೆ. ಯಾನಗುಂದಿಯ ಮಾಣಿಕ್ಯಗಿರಿ ಬೆಟ್ಟ ಹಿಂದು ಮುಸ್ಲಿಂರ ಭಾವೈಕ್ಯತೆಯ ಕೇಂದ್ರವಾಗಿದ್ದರಿಂದ ಮುಸ್ಲಿಂರು ಸಹ ಮಾತೆಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮಾತೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆ.

    ಮಾತಾ ಮಾಣಿಕೇಶ್ವರಿ ಲಿಂಗೈಕ್ಯರಾಗಿರುವ ಮಾಣಿಕ್ಯಗಿರಿ ಬೆಟ್ಟ ಸುಮಾರು ವರ್ಷಗಳಿಂದಲೂ ಹಿಂದೂ ಮುಸ್ಲಿಂ ಭಾವೈಕ್ಯತೆ ಕೇಂದ್ರವಾಗಿದೆ. ಬೆಟ್ಟದ ಹಜರತ್ ಮೌಲಾ ಅಲಿ ದರ್ಗಾಕ್ಕೂ ಮಾತಾ ಮಾಣಿಕ್ಕೇಶ್ವರಿಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ಹಿಂದೂ ಮುಸ್ಲಿಂ ಭಕ್ತರು ಸಾಗರೋಪಾದಿಯಲ್ಲಿ ಅಂತಿಮ ದರ್ಶನಕ್ಕೆ ಬರುತ್ತಿದ್ದಾರೆ. 800 ವರ್ಷಗಳ ಇತಿಹಾಸವಿರುವ ಹಜರತ್ ಮೌಲಾ ಅಲಿ ದರ್ಗಾದಲ್ಲೇ ಮಾತಾ ಮಾಣಿಕೇಶ್ವರಿ ಮೊದಲು ವಾಸಗಿದ್ದರು.

    ದರ್ಗಾದಲ್ಲಿನ ಪುರಾತನ ಬೃಹತ್ ಬಸರಿ ಮರದಲ್ಲೇ ಮಾತಾ ಮಾಣಿಕೇಶ್ವರಿ ಕುಳಿತುಕೊಳ್ಳುತ್ತಿದ್ದರು. ಆ ಮರದಲ್ಲೇ ತಮ್ಮ ಚಿಕ್ಕವಯಸ್ಸಿನಿಂದ ಆಶ್ರಯಪಡೆದಿದ್ದರು. ಬಳಿಕ ಬೆಟ್ಟದಲ್ಲೆ ಶಿವಲಿಂಗ ಸ್ಥಾಪಿಸಿ ವಾಸಿಸತೊಡಗಿದರು. ಹೀಗಾಗಿ ದರ್ಗಾಕ್ಕೆ ಬರುವ ಭಕ್ತರೆಲ್ಲಾ ಮಾತೆಯ ಭಕ್ತರು. ಮಾತೆಯ ದರ್ಶನಕ್ಕೆ ಬರುವ ಭಕ್ತರೆಲ್ಲಾ ದರ್ಗಾಕ್ಕೂ ಬಂದು ಹೋಗುತ್ತಾರೆ. ಹೀಗಾಗಿ ಮಾತಾ ಮಾಣಿಕೇಶ್ವರಿಯ ಮಾಣಿಕ್ಯಗಿರಿ ಭಾವೈಕ್ಯತೆಯ ಸಂಕೇತದಂತಿದೆ.

    ಹೈದರಾಬಾದ್ ಕರ್ನಾಟಕ ಭಾಗದ ನಡೆದಾಡುವ ದೇವರು, ಪೀಠಾಧಿಪತಿ ಮಾತಾ ಮಾಣಿಕೇಶ್ವರಿ ಅಮ್ಮನವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಮಠದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಲಿಂಗೈಕ್ಯರಾಗಿದ್ದರು.

  • ಹೈ.ಕ ಭಾಗದ ನಡೆದಾಡುವ ದೇವರು ಮಾತಾ ಮಾಣಿಕೇಶ್ವರಿ ಲಿಂಗೈಕ್ಯ

    ಹೈ.ಕ ಭಾಗದ ನಡೆದಾಡುವ ದೇವರು ಮಾತಾ ಮಾಣಿಕೇಶ್ವರಿ ಲಿಂಗೈಕ್ಯ

    ಕಲಬುರಗಿ: ಹೈದರಾಬಾದ್ ಕರ್ನಾಟಕ ಭಾಗದ ನಡೆದಾಡುವ ದೇವರು, ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಸಂಸ್ಥಾನದ ಪೀಠಾಧಿಪತಿ ಮಾತಾ ಮಾಣಿಕೇಶ್ವರಿ (87) ಲಿಂಗೈಕ್ಯರಾಗಿದ್ದಾರೆ.

    ಮಾತಾ ಮಾಣಿಕೇಶ್ವರಿ ಅಮ್ಮನವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಮಠದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಲಿಂಗೈಕ್ಯರಾಗಿದ್ದಾರೆ.

    ಮಾತಾ ಮಾಣಿಕೇಶ್ವರಿ ಅಮ್ಮನವರು ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ್ದರು. ಅವರು ಶಿವರಾತ್ರಿಯಂದು ಭಕ್ತರಿಗೆ ಕೊನೆಯದಾಗಿ ದರ್ಶನ ಕೊಟ್ಟಿದ್ದರು.

    ಅಮ್ಮನವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ದೇವಸ್ಥಾನಕ್ಕೆ ಭಕ್ತರು ದೌಡಾಯಿಸುತ್ತಿದ್ದಾರೆ. ಹೀಗಾಗಿ ದೇವಸ್ಥಾನದ ಸುತ್ತಲೂ ಪೊಲೀಸ್  ಬಂದೋಬಸ್ತ್ ಕಲ್ಪಿಸಿದ್ದಾರೆ.