Tag: Manifesto

  • ಬಿಹಾರ ಜನತೆಗೆ ಉಚಿತ ಕೊರೊನಾ ವ್ಯಾಕ್ಸಿನ್ – ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

    ಬಿಹಾರ ಜನತೆಗೆ ಉಚಿತ ಕೊರೊನಾ ವ್ಯಾಕ್ಸಿನ್ – ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

    ಪಾಟ್ನಾ: ದೇಶದಲ್ಲಿ ಕೊರೊನಾ ನಡುವೆಯೇ ಚುನಾವಣೆಗಳು ನಡೆಯುತ್ತಿವೆ. ಇಂದು ಬಿಜೆಪಿ ಬಿಹಾರ ಚುನಾವಣೆಗಾಗಿ ಪಕ್ಷದ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿನ ಬಿಜೆಪಿಯ ಒಂದು ವಾಗ್ದಾನ ಸಾರ್ವಜನಿಕರು ಸೇರಿದಂತೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ #Vaccineelectionism ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.

    ಬಿಜೆಪಿಯ ಚುನಾವಣೆ ಪ್ರಣಾಳಿಕೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುವುದು ಎಂದು ವಾಗ್ದಾನ ನೀಡಿದೆ. ಬಿಹಾರ ಜನತೆಗೆ ಬಿಜೆಪಿ ನೀಡುತ್ತಿರುವ ಮೊದಲ ವಾಗ್ದಾನ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಭಾರತ ಸೇರಿದಂತೆ ವಿಶ್ವದಾದ್ಯಂತ ಕೊರೊನಾ ಲಸಿಕೆಗೆ ಸಂಶೋಧನೆಗಳು ನಡೆಯುತ್ತಿವೆ. ಕೊರೊನಾ ವ್ಯಾಕ್ಸಿನ್ ಬರುವ ಮುನ್ನವೇ ಬಿಜೆಪಿ ಚುನಾವಣೆಯಲ್ಲಿ ಲಾಭ ಪಡೆಯಲು ಮುಂದಾಗಿದೆ ಎಂದು ವಿಪಕ್ಷಗಳು ಕಿಡಿಕಾರಿವೆ. ಇನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕ, ಬಿಜೆಪಿಯೇತರ ಸರ್ಕಾರಗಳು ಅಧಿಕಾರದಲ್ಲಿರುವ ರಾಜ್ಯಗಳ ಪರಿಸ್ಥಿತಿ ಏನು? ಭಾರತೀಯರು ಬಿಜೆಪಿಗೆ ಮತ ನೀಡದಿದ್ರೆ ಉಚಿತ ಕೊರೊನ ಲಸಿಕೆ ಸಿಗುವದಿಲ್ವಾ ಎಂದು ಕೇಂದ್ರ ಸರ್ಕಾರವನ್ನ ಪ್ರಶ್ನೆ ಮಾಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅಶ್ವಿನಿ ಚೌಬೆ, ಕೊರೊನಾ ವ್ಯಾಕ್ಸಿನ್ ಗಾಗಿ ಇಡೀ ವಿಶ್ವದಲ್ಲಿಯೇ ಸಂಶೋಧನೆಗಳು ನಡೆಯುತ್ತಿವೆ. ವ್ಯಾಕ್ಸಿನ್ ಕಂಡು ಹಿಡಿದಾಗ ಅದನ್ನ ಸಮಾನವಾಗಿ ವಿತರಿಸುವ ಕುರಿತು ಸಿದ್ಧತೆಗಳು ನಡೆದಿವೆ. ಪ್ರಾಥಮಿಕ ಅವಶ್ಯಕತೆ ಇರೋ ಜನರು ಸೇರಿದಂತೆ ಎಲ್ಲ ವರ್ಗದವರಿಗೂ ಉಚಿತ ಕೊರೊನಾ ವ್ಯಾಕ್ಸಿನ್ ನೀಡಲಾಗುವುದು ಎಂದು ಹೇಳಿದ್ದಾರೆ.

  • ಕೊಲೆ ಬೆದರಿಕೆ ಹಾಕಿದವರ ಬಗ್ಗೆ ಕನಿಕರ ಇದೆ: ಯು.ಟಿ.ಖಾದರ್

    ಕೊಲೆ ಬೆದರಿಕೆ ಹಾಕಿದವರ ಬಗ್ಗೆ ಕನಿಕರ ಇದೆ: ಯು.ಟಿ.ಖಾದರ್

    ಮಂಗಳೂರು: ಸಿಎಎ ಪರ ಮಂಗಳೂರಿನಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಕೊಲೆ ಬೆದರಿಕೆ ಘೋಷಣೆ ಬಗ್ಗೆ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದು, ಘೋಷಣೆ ಕೂಗಿದವರ ಬಗ್ಗೆ ಕನಿಕರ ಇದೆ ಎಂದಿದ್ದಾರೆ.

    ಅವರ ವಿರುದ್ಧವಾಗಿ ಯಾವುದೇ ಕೇಸ್ ನೀಡುವುದಿಲ್ಲ. ಕೊಲೆ ಬೆದರಿಕೆಯ ಘೋಷಣೆ ಕೂಗಿದವರು ಯಾರೂ ಜಿಲ್ಲೆಯವರಲ್ಲ. ಎಲ್ಲರೂ ಹೊರಗಿನಿಂದ ಬಂದರವರು. ಅವರೆಲ್ಲಾ ಮಲಯಾಳಂ ಮಾತನಾಡುತ್ತಿದ್ದರು. ಅವರನ್ನು ಜೈಲಿಗೆ ಕಳುಹಿಸೋದು ದೊಡ್ಡ ವಿಷಯವೇನಲ್ಲ. ಆದರೆ ಅವರ ಮನೆಯವರ ಪರಿಸ್ಥಿತಿ ಬಗ್ಗೆ ಆಲೋಚನೆ ಮಾಡಿ ದೂರು ನೀಡೋ ವಿಷಯಕ್ಕೆ ಹೋಗೋದಿಲ್ಲ ಎಂದು ಯುಟಿ ಖಾದರ್ ಹೇಳಿದ್ದಾರೆ.

    ಇದೇ ವೇಳೆ ಸಿಎಎ ಸಮಾವೇಶದ ಬಗ್ಗೆ ಟೀಕಿಸಿದ ಖಾದರ್, ಸಮಾವೇಶದಲ್ಲಿ ಯಾರ ಕೈಯಲ್ಲೂ ರಾಷ್ಟ್ರಧ್ವಜ ಇರಲಿಲ್ಲ. ಸಮಾವೇಶ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂದು ಹೇಳಿದ್ದಾರೆ.

    ನಡೆದಿದ್ದೇನು?
    ಮಂಗಳೂರಿನ ಕೂಳೂರು ಗೋಲ್ಡ್ ಫಿಂಚ್ ಸಿಟಿಯ ಮೈದಾನದಲ್ಲಿ ಸೋಮವಾರ ನಡೆದ ಸಿಎಎ ಪರ ಜನಜಾಗೃತಿ ಸಭೆಗೆ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರ ಯುವಕರ ಗುಂಪೊಂದು ಘೋಷಣೆ ಕೂಗುತ್ತಿದ್ದು, ಖಾದರ್ ವಿರುದ್ಧ ಕೊಲೆ ಬೆದರಿಕೆ ಹಾಕಿದ್ದಾರೆ. ಮಲಯಾಳಂ ಭಾಷೆಯಲ್ಲಿ ‘ನಾಯಿಯ ಮಗ ಖಾದರ್, ನಮ್ಮ ಸುದ್ದಿಗೆ ಬರಬೇಡ’. ‘ನಮ್ಮ ಸುದ್ದಿಗೆ ಬಂದರೆ, ಕೈ ಕಾಲು ಎರಡೂ ಕಟ್’. ‘ಬೇಕಾಗಿದ್ದಲ್ಲಿ ತಲೆಯನ್ನೂ ಕಡಿಯುವೆವು’ ಈ ರೀತಿ ಬೆದರಿಕೆ ಹಾಕುವ ಘೋಷಣೆ ಹಾಕಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್ ಆಗಿದೆ.

  • 1 ರೂ. ಆರೋಗ್ಯ ಕ್ಲಿನಿಕ್, 10 ರೂ. ಊಟ- ಶಿವಸೇನೆ ಪ್ರಣಾಳಿಕೆ ಬಿಡುಗಡೆ

    1 ರೂ. ಆರೋಗ್ಯ ಕ್ಲಿನಿಕ್, 10 ರೂ. ಊಟ- ಶಿವಸೇನೆ ಪ್ರಣಾಳಿಕೆ ಬಿಡುಗಡೆ

    ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಮಿತ್ರಪಕ್ಷ ಶಿವಸೇನೆ ಶನಿವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ಸುಮಾರು 200 ಕಾಯಿಲೆಗಳಿಗೆ 1 ರೂಪಾಯಿಯಲ್ಲಿ ತಪಾಸಣೆ ಸೌಲಭ್ಯ, ಹತ್ತು ರೂಪಾಯಿಗೆ ಫುಲ್ ಮೀಲ್ಸ್, ವಿದ್ಯುತ್ ಬಿಲ್ ಕಡಿತ, ರೈತರ ಋಣ­ಭಾರ ಇಳಿಕೆ ಹೀಗೆ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ.

    ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಅವರು ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಿದರು. ಅ. 21ರಂದು 288 ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದ್ದು, ಶಿವಸೇನೆ 124 ಸ್ಥಾನಗಳಲ್ಲಿ ಸ್ಪರ್ಧೆಗಿಳಿಯುತ್ತಿದೆ. ಬಿಜೆಪಿ ಮತ್ತು ಇತರೆ ಸಣ್ಣ ಮಿತ್ರಪಕ್ಷಗಳು ಉಳಿದ 164 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಚುನಾವಣ ಅಖಾಡಕ್ಕೆ ಇಳಿಸಲಿದೆ.

    ಚುನಾವಣೆಯಲ್ಲಿ ಗೆದ್ದು, ಅಧಿಕಾರಕ್ಕೆ ಬಂದರೆ “ರೂ. 1 ಆರೋಗ್ಯ ಕ್ಲಿನಿಕ್” ಯೋಜನೆಯಡಿಯಲ್ಲಿ ಜನರಿಗೆ 200ಕ್ಕೂ ಹೆಚ್ಚು ಕಾಯಿಲೆಗಳಿಗೆ ಕೈಗೆಟುಕುವ ದರದಲ್ಲಿ ತಪಾಸಣೆ ಒದಗಿಸುತ್ತದೆ ಎಂದು ಉದ್ಧವ್ ಅವರು ಹೇಳಿದರು. ಜೊತೆಗೆ ವಿದ್ಯುತ್ ದರ ಕಡಿತ ಹಾಗೂ ರಾಜ್ಯಾದ್ಯಂತ 1 ಸಾವಿರ ಭೋಜನಾಲಯ ಸ್ಥಾಪಿಸಿ ಅಲ್ಲಿ 10 ರೂಪಾಯಿಗೆ ಗುಣಮಟ್ಟದ ಊಟ ನೀಡುವ ಭರವಸೆಯನ್ನು ನೀಡಿದರು. ಪ್ರತಿ ಜಿಲ್ಲೆಯಲ್ಲೂ ಭೋಜನಾಲಯ ತೆರೆಯುತ್ತೇವೆ. ಇದನ್ನು ನಡೆಸಲು ಮಹಿಳಾ ಸ್ವಸಹಾಯ ಗುಂಪುಗಳ ಸಹಾಯ ಪಡೆಯುತ್ತೇವೆ ಎಂದು ಉದ್ಧವ್ ಠಾಕ್ರೆ ತಿಳಿಸಿದರು.

    ಹಾಗೆಯೇ 300 ಯುನಿಟ್‍ಗಳ ವರೆಗೆ ಬಳಸುವ ವಿದ್ಯುತ್‍ಗೆ ಶೇ. 30ರಷ್ಟು ದರ ಕಡಿತ ಮಾಡಲಾಗುತ್ತೆ. ಹಳ್ಳಿಗಳಿಗೆ ವಿಶೇಷ ಬಸ್ ಸೇವೆ, ಬಡ ರೈತರಿಗೆ ವಾರ್ಷಿಕ 10 ಸಾವಿರ ರೂಪಾಯಿ ನೆರವು, ರೈತರ ಸಾಲಮನ್ನಾ ಹಾಗೂ ರಸಗೊಬ್ಬರ ಬೆಲೆ ನಿಗದಿ ಸೇರಿದಂತೆ ಹಲವು ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿ ಶಿವಸೇನೆ ಪ್ರಸ್ತಾಪಿಸಿದೆ.

    ಅತ್ತ ಕಾಂಗ್ರೆಸ್-ಎನ್‍ಸಿಪಿ ಮೈತ್ರಿಕೂಟ, ಸಂಚಾರಿ ನಿಯಮ ಉಲ್ಲಂಘನೆ ದಂಡದ ಮೊತ್ತ ಕಡಿಮೆ ಮಾಡುವುದಾಗಿ ಹಾಗೂ ತಕ್ಷಣ ರೈತರ ಸಾಲ ಮನ್ನಾ ಮಾಡುವ ವಿಚಾರ ಸೇರಿ ಹಲವು ಭರವಸೆಗಳ ಪ್ರಣಾಳಿಕೆಯನ್ನು ಅಕ್ಟೋಬರ್ 7ರಂದು ಬಿಡುಗಡೆ ಮಾಡಿದೆ. ಇತ್ತ ಶಿವಸೇನಾ ಮಿತ್ರ ಪಕ್ಷ ಬಿಜೆಪಿ ಇನ್ನೂ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ.

  • ನಮ್ಮದು ಒನ್ ಮಿಷನ್, ಒನ್ ಡೈರೆಕ್ಷನ್ ಮಂತ್ರ: ಪ್ರಧಾನಿ ಮೋದಿ

    ನಮ್ಮದು ಒನ್ ಮಿಷನ್, ಒನ್ ಡೈರೆಕ್ಷನ್ ಮಂತ್ರ: ಪ್ರಧಾನಿ ಮೋದಿ

    – ನೀರಿನ ಬಗ್ಗೆ ಮಾತನಾಡುತ್ತಿದ್ದಂತೆ ನೀರಡಿಕೆ ಆಯಿತು
    – ದೇಶದ 130 ಕೋಟಿ ಜನರಿಗೂ ದೇಶದ ಅಭಿವೃದ್ಧಿ ಬೇಕಾಗಿದೆ

    ನವದೆಹಲಿ: ದೇಶದ ಅಭಿವೃದ್ಧಿ ದೃಷ್ಟಿಯಿಂದ ನಾವು ಒನ್ ಮಿಷನ್, ಒನ್ ಡೈರೆಕ್ಷನ್ ಮಂತ್ರವನ್ನು ಅನುಸರಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಕಳೆದ ಎರಡ್ಮೂರು ತಿಂಗಳುಗಳಿಂದ ಸಾಕಷ್ಟು ಕಾರ್ಯಗಳನ್ನು ಮಾಡಿದ್ದೇವೆ. ಜನರ ಆಸೆ ಆಕಾಂಕ್ಷೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಎಲ್ಲವನ್ನೂ ಇಲ್ಲಿ ಪರಿಗಣಿಸಲು ಸಾಧ್ಯವಾಗದ್ದರೂ ಮೂಲ ಅವಶ್ಯಕತೆಗಳನ್ನು ಪರಿಗಣಿಸಿದ್ದೇವೆ. ಜನರು ನೀಡಿದ ಬೆಂಬಲದಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು. ಇಂತಹ ಅವಕಾಶ ನೀಡಿದ ನಿಮಗೆ ನಾನು ಆಭಾರಿಯಾಗಿದ್ದೇನೆ ಎಂದು ಮತದಾರರಿಗೆ ತಿಳಿಸಿದರು.

    ಚುನಾವಣೆ ವೇಳೆ ರಾಜನೀತಿಯಂತೆ ಪ್ರಣಾಳಿಕೆಯನ್ನು ಜನರ ಮುಂದೆ ಇಡಬೇಕಾಗುತ್ತದೆ. ಹೀಗಾಗಿ ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಮಿತಿಯು ದೇಶದ ಜನರ ಆಸೆ, ಆಕಾಂಕ್ಷೆಗಳನ್ನು ಗಮನದಲ್ಲಿ ಇಟ್ಟುಕೊಂಡು ಉತ್ತಮ ಪ್ರಣಾಳಿಕೆ ರೂಪಿಸಿದೆ. ದೇಶದ ಜನರ ನಿರೀಕ್ಷೆಗಳನ್ನು ಹಾಗೂ ನಾವು ಕೊಟ್ಟ ಭರವಸೆಯನ್ನು ಪ್ರಮಾಣಿಕವಾಗಿ ಈಡೇರಿಸಲು ಶ್ರಮಿಸುತ್ತೇವೆ ಎಂದು ಮೋದಿ ಹೇಳಿದರು.

    ದೇಶವನ್ನು ಸಮೃದ್ಧವಾಗಿ ಬೆಳೆಸಲು, 75 ಯೋಜನೆಗಳನ್ನು ರೂಪಿಸಲಾಗುತ್ತದೆ. ದೇಶದಲ್ಲಿ ಭಾಷೆ, ಜೀವನ ಶೈಲಿ, ಶಿಕ್ಷಣ ಸೇರಿದಂತೆ ಅನೇಕ ವಿಚಾರಗಳಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವಿವಿಧತೆ ಕಂಡು ಬರುತ್ತದೆ. ಹೀಗಾಗಿ ಎಲ್ಲಾ ಭಾಗದ ಜನರ ಅಭಿವೃದ್ಧಿಗಾಗಿ ಮಲ್ಟಿ ಲೇಯರ್ ವಿಧಾನ ಅನುಸರಿಸಲಾಗುತ್ತದೆ. ಗ್ರಾಮೀಣ, ನಗರ ವಾಸಿಗಳು, ದಲಿತರು, ಅಲೆಮಾರಿಗಳು, ಆದಿವಾಸಿಗಳು, ಶೋಷಿತ ವರ್ಗ ಸೇರಿದಂತೆ ಎಲ್ಲರ ಏಳಿಗೆಗಾಗಿ ಶ್ರಮಿಸಲಾಗುತ್ತದೆ ಎಂದು ಭರವಸೆ ನೀಡಿದರು.

    ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಮುನ್ನೆಚ್ಚರಿಕೆಯಿಂದ ನಿವಾರಣೆ ಮಾಡಲಾಗುತ್ತದೆ. ಉದಾಹರಣೆಗೆ ಗುಜರಾತ್, ರಾಜಸ್ಥಾನ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು. ಹೀಗಾಗಿ ಸುದೀರ್ಘ ಕಾಲಕ್ಕೆ ಅನುಕೂಲವಾಗುವ ಯೋಜನೆ ರೂಪಿಸಿ ಸಮಸ್ಯೆ ನಿವಾರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ವೇಳೆ ನೀರು ಕುಡಿದ ಪ್ರಧಾನಿ ಮೋದಿ ಅವರು, ನೀರಿನ ಬಗ್ಗೆ ಮಾತನಾಡುತ್ತಿದ್ದಂತೆ ನೀರಡಿಕೆ ಆಯಿತು ಎಂದರು.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಜಲಮಂತ್ರಾಲಯಗಳನ್ನು ವಿಭಾಗಗಳನ್ನಾಗಿ ಮಾಡಲಾಗುತ್ತದೆ. ನದಿ ಪ್ರದೇಶದಲ್ಲಿ ಮೀನಾಗಾರಿಕೆ ಮಾಡುವವರಿಗೆ ಈ ಬಾರಿಯ ಬಜೆಟ್‍ನಲ್ಲಿ ಅನೇಕ ಸವಲತ್ತುಗಳನ್ನು ನೀಡಿಲಾಗುತ್ತದೆ. ಅಷ್ಟೇ ಅಲ್ಲದೆ ಮೀನುಗಾರರಿಗೆ ಪ್ರತ್ಯೇಕ ಜಲ ಶಕ್ತಿ ಸಚಿವಾಲಯ ಸ್ಥಾಪನೆ ಮಾಡಲಾಗುತ್ತದೆ. ನದಿ ನೀರನ್ನು ಸದುಪಯೋಗಪಡಿಸಿಕೊಳ್ಳಲಾಗುತ್ತದೆ. ಪ್ರತಿಯೊಂದು ಪ್ರದೇಶದ ಜನರಿಗೂ ನಲ್ಲಿಯ ಮೂಲಕ ನದಿಯ ನೀರು ಸಿಗುವಂತೆ ಯೋಜನೆ ರೂಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಒಂದು ಬಲಿಷ್ಠ ತಂಡವನ್ನು ನೇಮಿಸಲಾಗುತ್ತದೆ ಎಂದು ತಿಳಿಸಿದರು.

    ಸ್ವಚ್ಛತಾ ಆಂದೋಲನಲ್ಲಿಯೂ ದೇಶದ ಜನರ ಬೆಂಬಲ ಸಿಕ್ಕಿದೆ. ಅಭಿವೃದ್ಧಿಗೂ ದೇಶದ ಜನರ ಬೆಂಬಲ ಸಿಕ್ಕಿದೆ. ದೆಹಲಿಯಲ್ಲಿ ಎಸಿ ರೂಂನಲ್ಲಿ ಕೂರುವುದರಿಂದ ಬಡತನ ನಿರ್ಮೂಲನೆ ಸಾಧ್ಯವಿಲ್ಲ. ಬಡತನವನ್ನು ಬಡತನದಿಂದ ಹೋಗಲಾಡಿಸಬೇಕು. ದೇಶದ ಜನರಿಗೆ ಏನು ಕೊಟ್ಟು ಕಡಿಮೆ ಎನ್ನುವ ಮಾತಿದೆ. ಇದು ತಪ್ಪು ಕಲ್ಪನೆ, ದೇಶದ ಜನರಿಗೆ ಮಾಡುವ ಅವಮಾನ. ಸಾಕಷ್ಟು ಜನರು ಗ್ಯಾಸ್ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. 50 ಲಕ್ಷ ಹಿರಿಯ ನಾಯಕರು ರೈಲ್ವೇಯಲ್ಲಿ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. 130 ಕೋಟಿ ಜನರಿಗೂ ದೇಶದ ಅಭಿವೃದ್ಧಿ ಬೇಕಾಗಿದೆ. ಆ ಎಲ್ಲ ಜನರು ಶಕ್ತಿಯನ್ನು ಅಭಿವೃದ್ಧಿಯಾಗಿ ಬದಲಾಯಿಸ್ತೇವೆ ಎಂದು ತಿಳಿಸಿದರು.

    ನಮ್ಮ ಸಂಕಲ್ಪ ಪತ್ರ ಶಾಸನ ಪತ್ರ, ದೇಶದ ಸಂರಕ್ಷಣೆ ಪತ್ರ, ದೇಶದ ಸಮೃದ್ಧಿಯ ಪತ್ರವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 2022ರ ವೇಳೆಗೆ 75 ವರ್ಷವಾಗುತ್ತದೆ. ಇಂತಹ ಸನ್ನಿವೇಶಗಳು ಪ್ರೇರಣೆಗೆ ಸಾಕ್ಷಿ ಆಗಲಿದೆ. ಪ್ರೇರಣೆಯನ್ನು ಮುನ್ನಡೆಸುವರು ಬೇಕು. 2019-24 ಗಟ್ಟಿಯಾದ ಅಭಿವೃದ್ಧಿ ಅಡಿಪಾಯ ಹಾಕಲಿದ್ದೇವೆ. ಸಕಾರಾತ್ಮಕ ದೃಷ್ಟಿಯಿಂದ ದೇಶವನ್ನು ಮುಂದೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಿದ್ದೇವೆ. 2047ಕ್ಕೆ ದೇಶದ ಕನಸು ಸಹಕಾರ ಆಗಬೇಕಿದೆ. ಅದಕ್ಕೆ ಅಡಿಪಾಯ ಹಾಕುವ ರೀತಿಯ ಕೆಲಸ 2019-24ರಲ್ಲಿ ಕೆಲಸವಾಗಬೇಕಿದೆ ಎಂದರು.

  • ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ – ಸೋನಿಯಾ ಗಾಂಧಿ ಅಸಮಾಧಾನ?

    ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ – ಸೋನಿಯಾ ಗಾಂಧಿ ಅಸಮಾಧಾನ?

    ನವದೆಹಲಿ: ಮಂಗಳವಾರ ಬಿಡುಗಡೆಯಾಗಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಮುಖಪುಟವನ್ನು ನೋಡಿ ಸೋನಿಯಾ ಗಾಂಧಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

    ಪ್ರಣಾಳಿಕೆಯ ಮುಖಪುಟದಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯೊಂದಿಗೆ ರಾಹುಲ್ ಗಾಂಧಿಯ ಫೋಟೋವನ್ನು ಕೂಡ ನೀಡಲಾಗಿದ್ದು, ಈ ಕುರಿತಂತೆ ಸೋನಿಯಾ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.

    ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದ ವೇದಿಕೆಗೆ ತೆರಳುವ ಮುನ್ನ ಸೋನಿಯಾ ಅವರಿಗೆ ಪ್ರಣಾಳಿಕೆಯ ಪ್ರತಿಯನ್ನ ಎಐಸಿಸಿ ಸಂಶೋಧನಾ ತಂಡ ಮುಖ್ಯಸ್ಥ ರಾಜೀವ್ ಗೌಡ ಅವರು ನೀಡಿದ್ದು, ಈ ವೇಳೆಯೇ ಸೋನಿಯಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ರಾಜೀವ್ ಗೌಡ ವಿವರಣೆ ನೀಡಿ ಸಮರ್ಥನೆ ನೀಡಿದ್ದರೂ ಕೂಡ ಸೋನಿಯಾ ಅಸಮಾಧಾನ ದೂರ ಆಗಿರಲಿಲ್ಲ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಮುಖಪುಟದಲ್ಲಿ ಜನ ಸಾಗರದ ದೃಶ್ಯದೊಂದಿಗೆ ಪಕ್ಷದ ಚಿಹ್ನೆ ಪಕ್ಕದಲ್ಲೇ ರಾಹುಲ್ ಗಾಂಧಿ ಫೋಟೋ ನೀಡಲಾಗಿತ್ತು.

    ಅಸಮಾಧಾನಕ್ಕೆ ಕಾರಣವೇನು?
    ಸೋನಿಯಾ ಗಾಂಧಿ ಅಸಮಾಧಾನಗೊಳ್ಳಲು ಪ್ರಮುಖ ಕಾರಣ ಮುಖ ಪುಟದ ವಿನ್ಯಾಸ ರಚನೆ ಎನ್ನಲಾಗಿದೆ. ಭಾರೀ ಸಂಖ್ಯೆಯಲ್ಲಿ ಸೇರಿದ ಜನಸ್ತೋಮದ ಫೋಟೋವನ್ನು ನೋಡಿ ಸೋನಿಯಾ ಗಾಂಧಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಘೋಷವಾಕ್ಯವನ್ನು ದೊಡ್ಡ ಅಕ್ಷರಗಳಲ್ಲಿ ಮುದ್ರಣ ಮಾಡಿ ಅದರ ಕೆಳಗಡೆ ಸಣ್ಣ ವಿನ್ಯಾಸದಲ್ಲಿ ಪಕ್ಷದ ಚಿಹ್ನೆ ಹಾಗೂ ರಾಹುಲ್ ಗಾಂಧಿ ಫೋಟೋ ಪ್ರಕಟಿಸಿದ್ದಕ್ಕೆ ಸೋನಿಯಾ ಗಾಂಧಿ ಗರಂ ಆಗಿದ್ದಾರೆ ಎನ್ನಲಾಗಿದೆ.

    ಪ್ರಣಾಳಿಕೆ ಬಿಡುಗಡೆ ಸಮಾರಂಭದ ಆರಂಭದಿಂದಲೂ ಸೋನಿಯಾಗಾಂಧಿ ಸಿಟ್ಟಾದಂತೆ ಕಂಡು ಬಂದಿದ್ದರು. ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಮಾತನಾಡಲಿಲ್ಲ. ಅಷ್ಟೇ ಅಲ್ಲದೇ ಸಭಿಕರ ಪ್ರಶ್ನೆಯನ್ನು ಸಹ ಸೋನಿಯಾ ಗಾಂಧಿ ತೆಗೆದುಕೊಂಡಿರಲಿಲ್ಲ. ಪಕ್ಷದ ಹಿರಿಯ ನಾಯಕರಾದ ಮನಮೋಹನ್ ಸಿಂಗ್ ಮತ್ತು ಚಿದಂಬರಂ ಅವರು ಮೈಕ್ ನಲ್ಲಿ ಮಾತನಾಡಿದ್ದರು.

    2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಅಧ್ಯಕ್ಷ ರಾಹುಲ್ ಗಾಂಧಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದೆ ಎಂದು ವಿವರಿಸಿದ್ದರು. ಉದ್ಯಮ, ಉದ್ಯೋಗ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಹೊಸ ಸಚಿವಾಲಯ, 2020 ಮಾರ್ಚ್ ರೊಳಗೆ ಕೇಂದ್ರ, ಸಾರ್ವಜನಿಕ ಸೇವಾ ವಲಯ ಸೇರಿದಂತೆ ಸರ್ಕಾರದಲ್ಲಿರುವ ಖಾಲಿ ಇರುವ 4 ಲಕ್ಷ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳವುದು, ಸರ್ಕಾರಿ ಹುದ್ದೆಗಳಿಗೆ ಉಚಿತವಾಗಿ ಪರೀಕ್ಷೆ ಸೇರಿದಂತೆ ಯುವ ಜನತೆಯನ್ನು ದೃಷ್ಟಿಯಲ್ಲಿಟ್ಟು ಹಲವು ಅಶ್ವಾಸನೆಗಳನ್ನು ನೀಡಿದ್ದರು.

  • ಬಾದಾಮಿ ಅಭಿವೃದ್ಧಿಗೆ ಬಿಜೆಪಿಯಿಂದ ಪ್ರತ್ಯೇಕ ಪ್ರಣಾಳಿಕೆ- ಯಾವೆಲ್ಲ ಭರವಸೆಗಳಿವೆ?

    ಬಾದಾಮಿ ಅಭಿವೃದ್ಧಿಗೆ ಬಿಜೆಪಿಯಿಂದ ಪ್ರತ್ಯೇಕ ಪ್ರಣಾಳಿಕೆ- ಯಾವೆಲ್ಲ ಭರವಸೆಗಳಿವೆ?

    ಬಾಗಲಕೋಟೆ: ಕಾಂಗ್ರೆಸ್‍ನಿಂದ ಬಾದಾಮಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಬೆನ್ನೆಲ್ಲೇ ಬಿಜೆಪಿ ಕೂಡ ಬಾದಾಮಿಯ ಮುನ್ನೋಟ ಕೈಪಿಡಿ ಬಿಡುಗಡೆ ಮಾಡಿದೆ.

    24*7 ವಿದ್ಯುತ್ ಪೂರೈಕೆ, ಎಪಿಎಂಸಿ ಮಾರುಕಟ್ಟೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ಕೆಂದೂರು ಕೆರೆ ಹೂಳೆತ್ತುವುದು, ರಸ್ತೆಗಳ ಕಾಂಕ್ರಿಟೀಕರಣ, ಕೆರೂರುನಲ್ಲಿ ನೂತನ ಕಣ್ಣಿನ ಆಸ್ಪತ್ರೆ ನಿರ್ಮಾಣ, ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರತಿ ಬ್ಲಾಕ್‍ಗೆ ಉಚಿತ ಆಂಬುಲೆನ್ಸ್ ಸೇವೆ, ಕೈಮಗ್ಗ ಉತ್ತೇಜಿಸಲು ಕಾರ್ಖಾನೆ ನಿರ್ಮಾಣ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದಾರೆ.

    ಕೈಪಿಡಿ ಬಿಡುಗಡೆ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಸಿದ್ದರಾಮಯ್ಯಗೆ ಹಣದಿಂದ ಗೆಲ್ಲುವ ಅಹಂಕಾರ ತುಂಬಿದೆ ಅಂತ ಏಕವಚನದಲ್ಲಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯನ ಪಾಪದ ಮೂಟೆ ಅವರನ್ನು ಬಾದಾಮಿಯಲ್ಲಿ ಸೋಲಿಸುತ್ತೆ ಅಂತ ವಾಗ್ದಾಳಿ ನಡೆಸಿದ್ದಾರೆ.

  • ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಬಳಿಕ ಬೇರೆ ಪಕ್ಷದೊಂದಿಗೆ ಹೋಲಿಕೆ ಮಾಡಿ- ದೇವೇಗೌಡ

    ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಬಳಿಕ ಬೇರೆ ಪಕ್ಷದೊಂದಿಗೆ ಹೋಲಿಕೆ ಮಾಡಿ- ದೇವೇಗೌಡ

    ತುಮಕೂರು: ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ನಾಳೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಆ ನಂತ್ರ ಬೇರೆ ಪಕ್ಷದೊಂದಿಗೆ ಹೋಲಿಕೆ ಮಾಡಿ ಅಂತ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

    ಜಿಲ್ಲೆಯ ಕುಣಿಗಲ್ ತಾಲೂಕಿನ ಸಂತೆಪೇಟೆಯಲ್ಲಿ ಬಿಜೆಪಿ ಪ್ರಣಾಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಲು ಬಿಜೆಪಿಗೆ ಈಗ ಎಚ್ಚರವಾಗಿದೆಯಾ? ಇಷ್ಟುದಿನ ಏನು ಮಾಡುತ್ತಿದ್ದರು? ಸಾಲ ಮನ್ನಾ ಮಾಡುವ ವಿಚಾರದಲ್ಲಿ ಕುಮಾರಸ್ವಾಮಿ ಹೋರಾಟ ಮಾಡ್ತಾ ಇದ್ದರು. ಅವರ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಅಣಕ ಮಾಡುತಿದ್ರು ಅಂತ ಕಿಡಿಕಾರಿದ್ರು.

    ಕುಮಾರಸ್ವಾಮಿಗೆ ಜನಬೆಂಬಲ ಸಿಗುತ್ತಿರುವುದನ್ನು ನೋಡಿ ಬಿಜೆಪಿಯವರು ರಾಷ್ಟ್ರಿಕೃತ ಬ್ಯಾಂಕ್ ಸಾಲ ಮನ್ನಾ ಮಾಡಲು ಹೊರಟಿದ್ದಾರೆ. ಉತ್ತಮ ಆಡಳಿತ ನೀಡಿದ್ರೆ ಉಚಿತವಾಗಿ ಮೊಬೈಲ್ ಕೊಡುವ ಅವಶ್ಯಕತೆ ಇಲ್ಲ. ಈ ಮೂಲಕ ಮಹಿಳೆಯರಿಗೆ ತಾತ್ಕಾಲಿಕ ಸಮಾಧಾನ ಮಾಡಲು ಹೊರಟಿದ್ದಾರೆ. ನಾಳೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಆಗಲಿದೆ. ಬಡವರ ಶ್ರಮಿಕರ ರೈತರ ಪರವಾಗಿ ಪ್ರಣಾಳಿಕೆ ಹೊರಬರಲಿದೆ ಅಂತ ಅವರು ಹೇಳಿದ್ರು.

  • ರೈತರ ಸಾಲಮನ್ನಾ ಘೋಷಿಸಿರುವ ಬಿಜೆಪಿ ಪ್ರಣಾಳಿಕೆಯಲ್ಲಿ ಏನಿದೆ?

    ರೈತರ ಸಾಲಮನ್ನಾ ಘೋಷಿಸಿರುವ ಬಿಜೆಪಿ ಪ್ರಣಾಳಿಕೆಯಲ್ಲಿ ಏನಿದೆ?

    ಬೆಂಗಳೂರು: ನಗರದ ಖಾಸಗಿ ಹೊಟೇಲ್‍ನಲ್ಲಿ `ನಮ್ಮ ಕರ್ನಾಟಕಕ್ಕೆ ನಮ್ಮ ವಚನ’ ಹೆಸರಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ.

    ರೈತರ ಸಾಲಮನ್ನಾ ಘೋಷಣೆ ಮಾಡಿರುವ ಪ್ರಣಾಳಿಕೆಯಲ್ಲಿ ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಹಲವು ವಲಯಗಳಿಗೆ ಪ್ರತ್ಯೇಕ ಯೋಜನೆಗಳನ್ನು ರೂಪಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆ ಮುಖ್ಯಾಂಶಗಳು ಇಂತಿವೆ. ಇದನ್ನೂ ಓದಿ; ಬಿಜೆಪಿ ಪ್ರಣಾಳಿಕೆ ರಿಲೀಸ್: ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಘೋಷಣೆ

    ಬೆಂಗಳೂರಿಗೆ:
    * ಬೆಂಗಳೂರಿಗರ ಅಗತ್ಯ ಪೂರೈಸಲು ನವ ಬೆಂಗಳೂರು ಕಾಯ್ದೆ ಹೊಸ ಕಾನೂನು
    * ನಗರದ ಎಲ್ಲಾ ಭಾಗಕ್ಕೆ ಹಂತ ಹಂತವಾಗಿ ಮೆಟ್ರೋ ವಿಸ್ತರಣೆ
    * ಉಪನಗರ ರೈಲ್ವೆ ಜಾಲ ಪೂರ್ಣಗೊಳಿಸಲು ಬಿ- ರೈಡ್ ಸ್ಥಾಪನೆ
    * ಮಹಿಳೆಯರ ತೊಂದರೆಗೆ ಸ್ಪಂದಿಸಲು ಕಿತ್ತೂರು ರಾಣಿ ಚನ್ನಮ್ಮ ಫ್ಲೈಯಿಂಗ್ ಸ್ಕ್ವಾಡ್ ರಚನೆ
    * ಕೆಂಪೇಗೌಡ ನಿಧಿಯಡಿ ಕೆರೆ ಸ್ವಚ್ಛತೆ ಮತ್ತು ಪುನರುಜ್ಜೀವನಕ್ಕೆ 2500 ಕೋಟಿ ರೂ.

    ರೈತರ ಕಲ್ಯಾಣ:
    * ರೈತರ 1 ಲಕ್ಷದವರೆಗಿನ ಬೆಳ ಸಾಲ ಮನ್ನಾ
    * ನೇಗಿಲಯೋಗಿ ಯೋಜನೆಯಡಿ 20 ಲಕ್ಷ ರೈತರಿಗೆ 10 ಸಾವಿರ ಆರ್ಥಿಕ ನೆರವು
    * ರೈತಬಂಧು ಆವರ್ತ ನಿಧಿಯಡಿ ಬೆಂಬಲ ಬೆಲೆ ನೀಡಲು 5 ಸಾವಿರ ಕೋಟಿ ಮೀಸಲು
    * ಸಿಎಂ ರೈತ ಸುರಕ್ಷಾ ವಿಮಾ ಯೋಜನೆಯಡಿ 2 ಲಕ್ಷ ರೂ.ಗಳ ರೆಗೆ ಉಚಿತ ಅಪಘಾತ ವಿಮೆ
    * ನೀರಾವರಿ ಯೋಜನೆಗಳು 1.5 ಲಕ್ಷ ಕೋಟಿ ಮೀಸಲು
    * ರೈತರ ಪಂಪ್ ಸೆಟ್ ಗೆ 10 ಗಂಟೆ ತ್ರೀ ಫೇಸ್ ವಿದ್ಯುತ್
    * ರೈತ ಬಂಧು ವಿದ್ಯಾರ್ಥಿ ವೇತನದಡಿ 100 ಕೋಟಿ
    * ಸಿಎಂ ಕೃಷಿ ಫೆಲೋಶಿಪ್ ಅಡಿ ಸಾವಿರ ರೈತರಿಗೆ ಇಸ್ರೇಲ್,ಚೀನಾ ಪ್ರವಾಸ
    * ಗೋಹತ್ಯ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ 2012ಕ್ಕೆ ಮರುಚಾಲನೆ
    * ರೈತ ಬಂಧು ಕಚೇರಿ ಸ್ಥಾಪನೆ
    * ನೀರಾವರಿ ಯೋಜನೆ ಪೂರ್ಣಗೊಳಿಸಲು ಒಂದೂವರೆ ಲಕ್ಷ ಕೋಟಿ ಅನುದಾನ
    * ರೈತರಿಗೆ ಚೀನಾ, ಇಸ್ರೇಲ್ ಪ್ರವಾಸ

    ಮಹಿಳಾ ಸಬಲೀಕರಣ:
    * ಸ್ತ್ರೀ ಉನ್ನತಿ ನಿಧಿಯಡಿ 10 ಸಾವಿರ ಕೋಟಿ ಮೀಸಲು
    * ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಮಹಿಳೆಯರಿಗೆ ಶೇ.1 ರ ಬಡ್ಡಿದರದಲ್ಲಿ 2 ಲಕ್ಷ ಸಾಲ ಸೌಲಭ್ಯ
    * ಹೈನುಗಾರಿಕೆ ಕ್ಷೇತ್ರದಲ್ಲಿ 100 ಕೋಟಿ
    * ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಸಿಎಂ ಸ್ಮಾರ್ಟ್ ಫೋನ್ ಯೋಜನೆಯಡಿ ಉಚಿತ ಸ್ಮಾರ್ಟ್ ಫೋನ್ ನೀಡಿಕೆ
    * ಸ್ತ್ರೀ ಸುವಿಧಾ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರು ವಿದ್ಯಾರ್ಥಿನಿಯರಿಗೆ ಉಚಿತ ಹಾಗು ಉಳಿದವರಿಗೆ 1 ರೂ.ಗೆ ಸ್ಯಾನಿಟರಿ ನ್ಯಾಪ್ ಕಿನ್ ನೀಡಿಕೆ
    * ಭಾಗ್ಯಲಕ್ಷ್ಮೀ ಯೋಜನೆ ಮೊತ್ತ 3 ಲಕ್ಷಕ್ಕೆ ಹೆಚ್ಚಳ
    * ವಿವಾಹ ಮಂಗಳ ಯೋಜನೆಯಡಿ ಬಿಪಿಎಲ್ ಕುಟುಂಬದ ಯುವತಿಯರ ಮದುವೆಗೆ 25 ಸಾವಿರ ನಗದು, 3 ಗ್ರಾಂ ಚಿನ್ನದ ತಾಳಿ

    ಯುವಜನತೆಗೆ:
    ಸಿಎಂ ಲ್ಯಾಪ್ ಟಾಪ್ ಯೋಜನೆಯಡಿ ಕಾಲೇಜು ಸೇರುವ ಪ್ರತಿ ವಿದ್ಯಾರ್ಥಿಗೆ ಉಚಿತ ಲ್ಯಾಪ್‍ಟಾಪ್ ವಿತರಣೆ

    ಎಲ್ಲರ ವಿಕಾಸ:
    * 300 ಕ್ಕೂ ಹೆಚ್ಚು ಸಿಎಂ ಅನ್ನಪೂರ್ಣ ಕ್ಯಾಂಟೀನ್ ಆರಂಭ
    * ಮದಕರಿ ನಾಯಕ ವಸತಿ ಯೋಜನೆಯಡಿ ಎಸ್ಟಿ ಸಮುದಾಯಗಳ ವಸತಿ ನಿರ್ಮಿಸಲು 6500 ಕೋಟಿ
    * 8,500 ರೂ. ವೆಚ್ಚದಲ್ಲಿ ಮಾದಾರ ಚನ್ನಯ್ಯ ವಸತಿ ಯೋಜನೆಯಡಿ ಎಸ್ಸಿ ಸಮುದಾಯದವರಿಗೆ ಆಧುನಿಕ ಮನೆ ನಿರ್ಮಾಣ
    * ನೇಕಾರರ 1 ಲಕ್ಷ ಸಾಲ ಮನ್ನಾ
    * ಅಮರಶಿಲ್ಪಿ ಜಕಣಾಚಾರಿ ಜಯಂತಿ

    ಬಿಜೆಪಿ ಪ್ರಣಾಳಿಕೆಯ ಪಿಡಿಎಫ್ ಕಾಪಿಯನ್ನು ಓದಲು ಕ್ಲಿಕ್ ಮಾಡಿ: BJP Karnataka 2018 Manifesto Kannada

     ದಕ್ಷ ಆಡಳಿತಕ್ಕೆ:
    * ಜ್ಞಾನ ಆಯೋಗ ಮತ್ತು ಯೋಜನಾ ಮಂಡಳಿ ಬದಲಿಸಿ ಕೀರ್ತಿ ಆಯೋಗ ಸ್ಥಾಪನೆ
    * ಸಕಾಲ ಕಾಯ್ದೆ ಸರ್ಕಾರದ ಎಲ್ಲಾ ಸೇವೆಗಳಿಗೆ ವಿಸ್ತರಣೆ
    * ಲೋಕಾಯುಕ್ತ ಸಂಸ್ಥೆಯನ್ನು ಸಂಪೂರ್ಣ ಅಧಿಕಾರದೊಂದಿಗೆ ಮರುಸ್ಥಾಪನೆ
    * ಮರಳು, ಭೂ ಮತ್ತು ಕಾನೂನು ಬಾಹಿರ ಗಣಿಗಾರಿಕೆ ಮಾಫಿಯಾ ಕೊನೆಗೊಳಿಸಲು ಶಾಶ್ವತ ವಿಶೇಷ ಕಾರ್ಯಪಡೆ ರಚನೆ
    * ಪಿಎಫ್‍ಐ ಕೆಎಫ್ ಡಿ ಮುಂತಾದ ಗುಂಪು ನಿಷೇಧಕ್ಕೆ ಕೇಂದ್ರಕ್ಕೆ ಶಿಫಾರಸ್ಸು

    ಶಿಕ್ಷಣ:
    * ಶುಲ್ಕ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ
    * 1300 ಕೋಟಿ ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜುಗಳ ಸ್ಥಾಪನೆ
    * ಕುವೆಂಪು ಜ್ಞಾನ ಯೋಜನೆಯಡಿ 70 ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಿ ತಮಾಣ ಹಾಗು ಇರುವ ಕಾಲೇಜು ಮೇಲ್ದರ್ಜೆಗೆ 3 ಸಾವಿರ ಕೋಟಿ
    * ವೃತ್ತಿಪರ ಕೋರ್ಸ್ ಹೊರತುಪಡಿಸಿ ಎಲ್ಲರಿಗೂ ಪದವಿ ಮಟ್ಟದವರೆಗೆ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ

    ಆರೋಗ್ಯ:
    * ದೆಹಲಿಯ ಏಮ್ಸ್ ಮಾದರಿ ಎರಡು ಕರ್ನಾಟಕ ರಾಜ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆ
    * ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಕೇಂದ್ರ ಸ್ಥಾಪನೆ
    * ಆಯುಷ್ಮಾನ್ ಕರ್ನಾಟಕ ಯೋಜನೆಯಡಿ ಬಡ ದುರ್ಬಲರ ಚಿಕಿತ್ಸೆಗೆ 5 ಲಕ್ಷ ವಿಮೆ
    * ಪ್ರತಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಗುರಿ

    ಮೂಲಸೌಕರ್ಯ:
    * ಸೌಭಾಗ್ಯ ಯೋಜನೆಯಡಿ ಮನೆಗಳಿಗೆ ದಿನವಿಡೀ ವಿದ್ಯುತ್
    * 20 ಸಾವಿರ ಮೆಗಾವ್ಯಾಟ್ ಗೆ ವಿದ್ಯುತ್ ಉತ್ಪಾದನಾ ಸಾಮಥ್ರ್ಯ ಹೆಚ್ಚಳ, ಸೌರಶಕ್ತಿ 4 ಸಾವಿರ ಹೆಚ್ಚುವರಿ ಉತ್ಪಾದನೆ ಕ್ರಮ
    * ಎಲ್ಲಾ ಜಿಲ್ಲೆ ಸಂಪರ್ಕಿಸುವ ಷಟ್ಪಥ ಯೋಜನೆ ಕರ್ನಾಟಕ ಮಾಲಾ ಹೆದ್ದಾರಿ ಯೋಜನೆಯಡಿ ಅನುಷ್ಠಾನ
    * 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣಗಳಿಗೆ ಕೊಳವೆ ಮೂಲಕ ಅನಿಲ ಪೂರೈಕೆ ಸೌಕರ್ಯ
    * ಇಂದಿರಾ ಕ್ಯಾಂಟೀನ್ ಬದಲು ಅನ್ನಪೂರ್ಣ ಕ್ಯಾಂಟೀನ್
    * ಜಿಲ್ಲೆಗೆ ಮೂರು, ತಾಲೂಕಿಗೆ ಒಂದು ಕ್ಯಾಂಟೀನ್

    ಕಾರ್ಯಕ್ರಮಕ್ಕೂ ಮೊದಲು ಶಾಸಕ ವಿಜಯಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸುರೇಶ್ ಕುಮಾರ್, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ರಾಜ್ಯ ಉಸ್ತುವಾರಿ ಮುರುಳೀಧರರಾವ್, ಸಂಸದ ಪಿ.ಸಿ ಮೋಹನ್ ಮತ್ತಿರರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

  • ಬಿಜೆಪಿ ಪ್ರಣಾಳಿಕೆ ರಿಲೀಸ್: ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಘೋಷಣೆ

    ಬಿಜೆಪಿ ಪ್ರಣಾಳಿಕೆ ರಿಲೀಸ್: ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಘೋಷಣೆ

    ಬೆಂಗಳೂರು: ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ 1 ಲಕ್ಷ ರೂ.ಗಳ ಸಾಲ ಮನ್ನಾ ಹಾಗು ಸಹಕಾರಿ ಸಂಘಗಳಲ್ಲಿನ ಸಾಲಮನ್ನಾವನ್ನು 50 ಸಾವಿರದಿಂದ 1 ಲಕ್ಷಕ್ಕೆ ವಿಸ್ತರಣೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

    ನಗರದ ಖಾಸಗಿ ಹೋಟೆಲ್ ನಲ್ಲಿ ಪ್ರಸಕ್ತ ವಿಧಾನಸಭಾ ಚುನಾವಣೆಗೆ ಸುರೇಶ್ ಕುಮಾರ್ ನೇತೃತ್ವದ ಸಮಿತಿ ರಚಿಸಿರುವ ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಬಿಎಸ್‍ವೈ, ಸಹಕಾರಿ ಸಂಘದಲ್ಲಿನ ರೈತರ 50 ಸಾವಿರ ರೂ.ಗಳವರೆಗಿನ ಸಾಲಮನ್ನಾ ಮಾಡಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮನ್ನಾ ಮಾಡುವಂತೆ ಹೋದಲ್ಲೆಲ್ಲಾ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕ ಆಗ್ರಹಿಸಿ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದ ಕೂಡಲೇ ಕೇಂದ್ರದ ಕಡೆ ನೋಡದೇ ರಾಷ್ಟ್ರೀಕೃತ ಬ್ಯಾಂಕ್ ಗಳ 1 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡುಸುತ್ತೇನೆ. ಜೊತೆಗೆ ಸಹಕಾರಿ ಸಂಘದ ಸಾಲ ಮನ್ನಾವನ್ನು 50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಳ ಮಾಡುತ್ತೇನೆ. ಜೊತೆಗೆ ಮೂರು ತಿಂಗಳ ಒಳಗೆ ನೇಕಾರರ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ಪ್ರಕಟಿಸಿದರು. ಇದನ್ನೂ ಓದಿ: ಕಾಂಗ್ರೆಸ್‍ನಿಂದ ಚುನಾವಣಾ ಪ್ರಣಾಳಿಕೆ ರಿಲೀಸ್ – ರಾಜ್ಯದ ಜನತೆಗೆ ಭರವಸೆಗಳ ಮಹಾಪೂರ

    ರಾಜ್ಯ ಪ್ರವಾಸದ ವೇಳೆ ಕಂಡುಬಂದ 224 ಕ್ಷೇತ್ರಗಳ ಸಮಸ್ಯೆಗಳನ್ನು ಕ್ರೂಢೀಕರಿಸಿ ಪ್ರಣಾಳಿಕೆ ಸಿದ್ದಪಡಿಸಿದ್ದೇವೆ. ಅದನ್ನು ಗೌರವದಿಂದ ನಾಡಿನ ಜನತೆಗೆ ಅರ್ಪಣೆ ಮಾಡುತ್ತಿದ್ದೇವೆ. ಮುಂದಿನ 5 ವರ್ಷ ರಾಜ್ಯದ ಅಭಿವೃದ್ಧಿಗೆ ಪೂರಕ ರೀತಿಯಲ್ಲಿ ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಜನರ ಆಶೋತ್ತರ ತಿಳಿದು ಪ್ರಣಾಳಿಕೆ ಸಿದ್ಧ ಪಡಿಸಲಾಗಿದೆ. ಮೋದಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಮಾರ್ಗಸೂಚಿ ಇದಾಗಿದೆ ಎಂದು ಪ್ರಣಾಳಿಕೆಯನ್ನು ಸಮರ್ಥಿಸಿಕೊಂಡರು.

    ಈಡೇರಿಸಲಾಗದ ಭರವಸೆಯ ಪಟ್ಟಿ ಇದಲ್ಲ, ನಮ್ಮನ್ನು ಅಧಿಕಾರಕ್ಕೆ ತರುವುದು ಖಚಿತ ಹಾಗಾಗಿ ಹಣಕಾಸು ವಿವರ. ಕರ್ನಾಟಕದ ಯುವ ಜನತೆ ಭವಿಷ್ಯ, ಸರ್ವರಿಗೂ ಸಮಪಾಲು ಸಮಬಾಳು ಸಾಮಾಜಿಕ ನ್ಯಾಯ, ಮಕ್ಕಳ ಶಿಕ್ಷಣಕ್ಕೆ ಕಾಯಕಲ್ಪ, ಆರೋಗ್ಯ ಕರ್ನಾಟಕ, ಮೂಲಸೌಕರ್ಯ ವಿಸ್ತರಣೆ, ಆರ್ಥಿಕ ಔದ್ಯೋಗಿಕ ವಿಸ್ತರಣೆ, ನವ ಭಾರತಕ್ಕಾಗಿ ನವ ಬೆಂಗಳೂರು ಸೇರಿದಂತೆ ಹತ್ತು ಹಲವು ಅಂಶ ಒಳಗೊಂಡ ಪ್ರಣಾಳಿಕೆ ಇದಾಗಿದೆ ಸರ್ಕಾರದ ಬದಲಿಸಿ ಬಿಜೆಪಿ ಗೆಲ್ಲಿಸಿ ಉದ್ದೇಶದೊಂದಿಗೆ ಪ್ರಣಾಳಿಕೆ ರಚಿಸಲಾಗಿದೆ ಎಂದರು.

    ಕಾರ್ಯಕ್ರಮಕ್ಕೂ ಮೊದಲು ಶಾಸಕ ವಿಜಯಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸುರೇಶ್ ಕುಮಾರ್, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ರಾಜ್ಯ ಉಸ್ತುವಾರಿ ಮುರುಳೀಧರರಾವ್, ಸಂಸದ ಪಿ.ಸಿ ಮೋಹನ್ ಮತ್ತಿರರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

    ಬಿಜೆಪಿ ಪ್ರಣಾಳಿಕೆಯ ಪಿಡಿಎಫ್ ಕಾಪಿಯನ್ನು ಓದಲು ಕ್ಲಿಕ್ ಮಾಡಿ: BJP Karnataka 2018 Manifesto Kannada

  • ಕಾಂಗ್ರೆಸ್‍ನಿಂದ ಬೆಂಗಳೂರು ವಿಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ

    ಕಾಂಗ್ರೆಸ್‍ನಿಂದ ಬೆಂಗಳೂರು ವಿಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ

    ಬೆಂಗಳೂರು: ಶುಕ್ರವಾರ ಮಂಗಳೂರಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ರು. ಆದ್ರೆ ಇಂದು ಬೆಂಗಳೂರು ವಲಕ್ಕೆ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.

    ಪ್ರತ್ಯೇಕ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನಗರಕ್ಕೆ ಸಾಕಷ್ಟು ಭರವಸೆಗಳನ್ನು ನೀಡಿದೆ. ನಗರದ ಜ್ಞಾನ ಜ್ಯೋತಿ ಸಂಭಾಗಣದಲ್ಲಿ ವೀರಪ್ಪ ಮೊಯ್ಲಿ, ಬಿಕೆ ಹರಿಪ್ರಸಾದ್, ಮಾಜಿ ಪ್ರಧಾನಿಗಳ ಸಲಹೆಗಾರ ಶ್ಯಾಮ್ ಪೀತ್ರೋಡ್, ಕೆಜೆ ಜಾರ್ಜ್, ದಿನೇಶ್ ಗೂಂಡುರಾವ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ರು.

    ಪ್ರಣಾಳಿಕೆಯ ಪ್ರಮುಖ ಭರವಸೆಗಳು ಹೀಗಿವೆ.
    * ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಕ್ಕೆ ಒಂದು ಲಕ್ಷ ಕೋಟಿ ವಿಶೇಷ ಪ್ಯಾಕೇಜ್.
    * ಟೆಂಡರ್ ಶ್ಯೂರ್ ರಸ್ತೆಗಳ ವ್ಯಾಪ್ತಿ ವಿಸ್ತರಣೆ.
    * ಮೆಟ್ರೊ ಸೌಲಭ್ಯ ವಿಸ್ತರಣೆ.
    * ಜನದಟ್ಟಣೆ ಪ್ರದೇಶದಲ್ಲಿ ಸ್ಕೈವಾಕ್ ನಿರ್ಮಾಣ.
    * ಹಸಿರು ಮನೆಗಳ ಉತ್ತೇಜನಕ್ಕೆ ಉದ್ಯಾನವನಗಳ ನವೀಕರಣ.
    * ಲಕ್ಷ್ಮಣರಾವ್ ವರದಿ ಪ್ರಕಾರ ಕೆರೆಗಳ ಜೀರ್ಣೋದ್ಧಾರ
    * ನಗರ ಪ್ರಮುಖ ರಸ್ತೆಗಳಲ್ಲಿ ವೈಟ್ ಟ್ಯಾಪಿಂಗ್ ಪೂರ್ಣ.
    * ಬೆಂಗಳೂರಿನ ಪಕ್ಕದ ಜಿಲ್ಲೆಗಳಿಗೆ ಮೆಟ್ರೊ ವಿಸ್ತರಣೆ.
    * ಖಾಸಗಿ ಬಸ್‍ಗಳು ನಗರ ಪ್ರವೇಶಿಸದಂತೆ ನಿರ್ಬಂಧ.
    * ಬೆಂಗಳೂರು ಹೊರವಲಯದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ.
    * ಡೆಲ್ಲಿ ಮೆಟ್ರೊ ಅಂಡರ್ ಗ್ರೌಂಡ್  ಮಾದರಿಯಲ್ಲಿ ಅಂಡರ್ ಗ್ರೌಂಡ್  ಪಥ ನಿರ್ಮಾಣ.
    * ಎಲ್ಲಾ ಪ್ರಮುಖ ಜಂಕ್ಷನ್‍ಗಳಲ್ಲಿ ಸಿಸಿಟಿವಿ.
    * ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನಗಳಿಗೆ ಪ್ರತ್ಯೇಕ ಪಥ.
    * ಘನತ್ಯಾಜ್ಯ ಬೇರ್ಪಡಿಸುವಿಕೆ ಕಡ್ಡಾಯ.
    * ಮೇಕೆದಾಟು ಅಣೆಕಟ್ಟು ನಿರ್ಮಾಣ – ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ.
    * ಬೆಂಗಳೂರು ಅಭಿವೃದ್ಧಿಗಾಗಿ ಮೆಟ್ರೊಪಾಲಿಟಿನ್ ಯೋಜನೆ.
    * ಪ್ರತಿ ಮನೆಗಳಿಗೆ 125 ಎಮ್‍ಎಲ್‍ಡಿ ನೀರು ನೀಡುವುದು.
    * ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ.
    * ಸಾರಿಗೆ ಅನೂಕಲಕ್ಕೆ ಹೆಚ್ಚಿನ ಫ್ಲೈ ಓವರ್ ನಿರ್ಮಾಣ.
    * ಹೆಚ್ಚಿನ ತಂತ್ರಜ್ಞಾನದ ಒಳಚರಂಡಿ, ನೀರು ಶುದ್ದೀಕರಣ ಘಟಕ, ಕೆರೆಗಳ ಅಭಿವೃದ್ಧಿ.

    ಒಟ್ಟಿನಲ್ಲಿ ಕಾಂಗ್ರೆಸ್ ಬೆಂಗಳೂರಿನ ಎಲ್ಲಾ ಕ್ಷೇತ್ರಗಳನ್ನು ಪಾರುಪತ್ಯ ಸಾಧಿಸಲು ಭರಪೂರ ಭರವಸೆಗಳನ್ನ ನೀಡಿದೆ.