Tag: Mangaluru Airport

  • ಬಾಂಬರ್ ಆದಿತ್ಯರಾವ್ ಮಾಸ್ಟರ್ ಪ್ಲಾನ್ ಕೇಳಿ ದಂಗಾದ ಬೆಂಗಳೂರು ಪೊಲೀಸರು

    ಬಾಂಬರ್ ಆದಿತ್ಯರಾವ್ ಮಾಸ್ಟರ್ ಪ್ಲಾನ್ ಕೇಳಿ ದಂಗಾದ ಬೆಂಗಳೂರು ಪೊಲೀಸರು

    ಬೆಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಶರಣಾಗಿರುವ ಆರೋಪಿ ಆದಿತ್ಯ ರಾವ್ ಮಾಸ್ಟರ್ ಪ್ಲಾನ್ ಕೇಳಿ ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದಾರೆ.

    ಹೌದು. ಮಂಗಳವಾರ ಬೆಳಗ್ಗೆ ಆದಿತ್ಯ ರಾವ್ ಬೆಂಗಳೂರಿನಲ್ಲಿರುವ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದ. ಶರಣಾದ ನಂತರ ಬೆಂಗಳೂರಿನಲ್ಲೇ ಶರಣಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಆದಿತ್ಯ ರಾವ್ ನೀಡಿದ ಉತ್ತರವನ್ನು ಕೇಳಿ ಪೊಲೀಸರು ದಂಗಾಗಿದ್ದಾರೆ.

    ಯಾವುದೇ ಕೃತ್ಯ ಮಾಡಿದ ನಂತರ ಆರೋಪಿಗಳು ಪರಾರಿಯಾಗುವುದು ಸಾಮಾನ್ಯ ಸಂಗತಿ. ಆದರಲ್ಲೂ ಅಪರೂಪದ ಪ್ರಕರಣದಲ್ಲಿ ಆರೋಪಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ನ್ಯಾಯಾಲಯಕ್ಕೆ ಹಾಜರಾಗಿ ಶರಣಾಗುತ್ತಾರೆ ಹೊರತು ಡಿಜಿ ಐಜಿಪಿ ಕಚೇರಿಗೆ ಹಾಜರಾಗಿ ಶರಣಾಗುವುದಿಲ್ಲ. ಆದರೆ ಉಡುಪಿ ಮೂಲದ ಆದಿತ್ಯ ರಾವ್ ನೇರವಾಗಿ ಬೆಳಗ್ಗೆ ಬೆಂಗಳೂರಿನ ಡಿಜಿ ಕಚೇರಿಗೆ ಆಗಮಿಸಿ ಶರಣಾಗಿದ್ದನ್ನು ನೋಡಿ ಪೊಲೀಸರಲ್ಲಿ ಕುತೂಹಲ ಮೂಡಿಸಿತ್ತು. ಹೀಗಾಗಿ ಆತನ ಪ್ರಾಥಮಿಕ ವಿಚಾರಣೆಯಲ್ಲಿ ಈ ಬಗ್ಗೆ ಪೊಲೀಸರು ಪ್ರಶ್ನೆ ಕೇಳಿದ್ದಾರೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್

    ಈ ಪ್ರಶ್ನೆಗೆ ಆದಿತ್ಯ ರಾವ್, ಸಿಸಿಟಿವಿ ವಿಡಿಯೋ, ಫೋಟೋ ಬಿಡುಗಡೆ ಮಾಡಿದ ನಂತರ ಹೇಗೂ ಪೊಲೀಸರು ನನ್ನನ್ನು ಬಂಧಿಸುತ್ತಾರೆ ಎನ್ನುವುದು ಖಚಿತವಾಯಿತು. ಪೊಲೀಸರು ಬಂಧಿಸುವ ಮೊದಲು ನಾನೇ ಶರಣಾದರೆ ಉತ್ತಮ ಎಂಬ ತೀರ್ಮಾನಕ್ಕೆ ಬಂದೆ. ಬಂಧಿಸುವ ಮೊದಲು ನಾನು ದೊಡ್ಡ ಸುದ್ದಿಯಾಗಬೇಕು. ಮಂಗಳೂರಿನಲ್ಲಿ ಶರಣಾದರೆ ಅದಕ್ಕೆ ದೊಡ್ಡ ಮಟ್ಟದ ಪ್ರಚಾರ ಸಿಗುವುದಿಲ್ಲ. ದೊಡ್ಡ ಮಟ್ಟದ ಪ್ರಚಾರ ಪಡೆಯುವ ಆಸೆಯಿಂದಲೇ ನಾನು ಡಿಜಿ ಕಚೇರಿಯಲ್ಲಿ ಶರಣಾಗಿದ್ದೇನೆ ಎಂದು ಹೇಳಿದ್ದಾನೆ. ಆದಿತ್ಯ ರಾವ್ ತನ್ನ ಪ್ರಚಾರದ ತಂತ್ರವನ್ನು ಬಿಚ್ಚಿಡುತ್ತಿದ್ದಂತೆ ವಿಚಾರಣೆ ನಡೆಸುತ್ತಿದ್ದ ಪೊಲೀಸರು ಸಹ ಒಂದು ಕ್ಷಣ ಕಕ್ಕಾಬಿಕ್ಕಿ ಆಗಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಅಪರಾಧ ಪ್ರಕರಣದ ಆರೋಪಿಗಳು ವೇಷ ಮರೆಸಿಕೊಂಡು ತಲೆ ಮರೆಸಿಕೊಳ್ಳುವುದೇ ಹೆಚ್ಚು. ಹಾಗಿರುವಾಗ ಆರೋಪಿಗಳು ಡಿಜಿ ಕಚೇರಿಗೆ ಆಗಮಿಸಿ ಶರಣಾಗಿದ್ದು ನೋಡಿಲ್ಲ ಎಂದು ಹಲವು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಒಬ್ಬನೇ ಬಾಂಬ್ ಫಿಕ್ಸ್ ಮಾಡಲು ಸಾಧ್ಯವಿಲ್ಲ, ಬೇರೆಯವ್ರ ಸಹಾಯದಿಂದ ಮಾಡಿದ್ದಾನೆ: ಖಾದರ್

    ಸೋಮವಾರ ರಾತ್ರಿಯೇ ಉಡುಪಿ ಬಿಟ್ಟಿದ್ದ ಆದಿತ್ಯ ರಾವ್, ಶಿವಮೊಗ್ಗಕ್ಕೆ ಹೋಗಿ ಅಲ್ಲಿಂದ ಲಾರಿಯಲ್ಲಿ ಬೆಂಗಳೂರು ತಲುಪಿದ್ದಾನೆ. ಮಂಗಳವಾರ ಬೆಳಗ್ಗೆ ಡಿಜಿಪಿ ನೀಲಮಣಿ ರಾಜು ಎದುರು ಶರಣಾಗಿದ್ದಾನೆ. ಕೂಡಲೇ ಪೊಲೀಸರು, ಆತನನ್ನ ಹಲಸೂರು ಗೇಟ್ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದರು. ಮಧ್ಯಾಹ್ನ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಂತರ 1ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿ ಟ್ರಾನ್ಸಿಟ್ ವಾರೆಂಟ್ ಮೂಲಕ ಆರೋಪಿಯನ್ನು ಮಂಗಳೂರು ಪೊಲೀಸರು ವಶಕ್ಕೆ ಕೂಡ ಪಡೆದರು. ಸಂಜೆ 7.30ರ ವಿಮಾನದಲ್ಲಿ ಮಂಗಳೂರಿಗೆ ಕರೆದೊಯ್ಯಲಾಯ್ತು. ಇದೀಗ ಸಿಸಿಬಿ ಕಚೇರಿಯಲ್ಲಿ ಆದಿತ್ಯನನ್ನು ಇರಿಸಲಾಗಿದ್ದು, ಇಂದು ಮಂಗಳೂರು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ.

  • ಮಂಗಳೂರು ಬಾಂಬ್ ಪ್ರಕರಣ ತನಿಖೆಯ ನಂತರವೇ ಎಲ್ಲವೂ ಹೊರಬರಬೇಕು: ಬೊಮ್ಮಾಯಿ

    ಮಂಗಳೂರು ಬಾಂಬ್ ಪ್ರಕರಣ ತನಿಖೆಯ ನಂತರವೇ ಎಲ್ಲವೂ ಹೊರಬರಬೇಕು: ಬೊಮ್ಮಾಯಿ

    ಧಾರವಾಡ/ಹುಬ್ಬಳ್ಳಿ: ಮಂಗಳೂರು ಬಾಂಬ್ ಪ್ರಕರಣ ಹಿನ್ನೆಲೆಯಲ್ಲಿ ಆದಿತ್ಯ ರಾವ್ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. ತನಿಖೆಯಿಂದಲೇ ಎಲ್ಲವೂ ಹೊರಬರಬೇಕು. ಬಂಧನವಾದ ಆರೋಪಿಯ ಸಮಗ್ರವಾದ ತನಿಖೆ ಆದ ಮೇಲೆ ಅವನ ಜತೆ ಯಾರಿದ್ದಾರೆಂದು ತಿಳಿಯುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಬಾಂಬ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯಿಂದಲೂ ತನಿಖೆಗಳು ಆಗುತ್ತದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಮಾನಸಿಕ ಅಸ್ವಸ್ಥ ಎಂದಿರುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆದಿತ್ಯರಾವ್ ಮಾನಸಿಕ ಅಸ್ವಸ್ಥ ಎಂದು ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

    ಬಾಂಬ್ ಇಟ್ಟ ಯುವಕನ ಹಿನ್ನೆಲೆಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬಾಂಬ್ ಸಿಕ್ಕ ತಕ್ಷಣ ಸಿಸಿಟಿವಿ ದೃಶ್ಯ ಕಲೆ ಹಾಕಿ ಮೂರು ತಂಡಗಳನ್ನ ರಚನೆ ಮಾಡಲಾಗಿತ್ತು. ಅಲ್ಲದೇ ಅವನ ಮನೆಯವರು ಹಲವಾರು ವಿಚಾರಗಳನ್ನ ಆತನ ಬಗ್ಗೆ ಹೇಳಿದ್ದಾರೆ. ಆದರೆ ಯಾವುದೂ ಕೂಡ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅವನು ಮಾನಸಿಕ ಅಸ್ವಸ್ಥ ಎಂದು ಎಲ್ಲಿಯೂ ನಾನು ಹೇಳಿಲ್ಲ, ತನಿಖೆ ಆಗದ ಹೊರತು ನಿಖರವಾಗಿ ಏನೂ ಹೇಳುವುದಿಲ್ಲ ಎಂದರು.

    ಕುಮಾರಸ್ವಾಮಿಯವರು ಎಫ್‍ಎಸ್‍ಎಲ್ ತಜ್ಞರಂತೆ ಮಾತನಾಡುತ್ತಿದ್ದಾರೆ. ಅವರು ಸರ್ಟಿಫಿಕೇಟ್ ಕೊಡಲಿಕ್ಕೆ ಬರುತ್ತಾ? ಕುಮಾರಸ್ವಾಮಿಯವರು ಅಲ್ಪಸಂಖ್ಯಾತ ಓಲೈಕೆ ರಾಜಕಾರಣದಲ್ಲಿ ಕಾಂಗ್ರೆಸ್ ಜೊತೆ ಪೈಪೋಟಿ ಮಾಡ್ತಾ ಇದ್ದಾರೆ. ಹೀಗಾಗಿ ಅವರು ತೀವ್ರ ಗತಿಯಲ್ಲಿ ರಿಯಾಕ್ಟ್ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರು ಪೊಲೀಸರ ಬಗ್ಗೆ ಮಾತನಾಡುತ್ತಾರೆ, ನಾವು ಅಲ್ಲಿ ಪೊಲೀಸರನ್ನು ನೇಮಕ ಮಾಡಿಲ್ಲ. ಎಲ್ಲರೂ ಕುಮಾರಸ್ವಾಮಿ ಸಿಎಂ ಇದ್ದ ಅವಧಿಯಲ್ಲಿ ನೇಮಕವಾದವರು ಎಂದರು.

    ಉಗ್ರ ನಿಗ್ರಹ ದಳದ ಕುರಿತು ಮಾತನಾಡಿದ ಅವರು, ಉಗ್ರ ನಿಗ್ರಹ ದಳ ರಾಜ್ಯಕ್ಕೆ ಒಂದಿದೆ, ಅದನ್ನ ಇನ್ನಷ್ಟು ಬಲ ಪಡಿಸುತ್ತೆವೆ ಎಂದರು.

  • ಹೆಚ್‍ಡಿಕೆ ಮಾನಸಿಕ ಸ್ಥಿಮಿತಕ್ಕೆ ಸರ್ಕಾರದಿಂದಲೇ ಚಿಕಿತ್ಸೆ ನೀಡಬೇಕಿದೆ: ಯತ್ನಾಳ್

    ಹೆಚ್‍ಡಿಕೆ ಮಾನಸಿಕ ಸ್ಥಿಮಿತಕ್ಕೆ ಸರ್ಕಾರದಿಂದಲೇ ಚಿಕಿತ್ಸೆ ನೀಡಬೇಕಿದೆ: ಯತ್ನಾಳ್

    -ಕರ್ನಾಟಕದ ಓವೈಸಿಯಾಗಲು ಹೆಚ್‍ಡಿಕೆ ಪ್ರಯತ್ನ
    -ಇಮ್ರಾನ್ ಖಾನ್ ಅಳಿಯ ಕುಮಾರಸ್ವಾಮಿ
    -ಸಿಎಂ ಇಬ್ರಾಹಿಂ ಒರಿಜಿನಲ್ ಮುಸ್ಲಿಂ ಅಲ್ಲ

    ವಿಜಯಪುರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಸರ್ಕಾರದ ವತಿಯಿಂದಲೇ ಅವರಿಗೆ ಮಾನಸಿಕ ಚಿಕಿತ್ಸೆ ನೀಡಬೇಕಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

    ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕ ಬಾಂಬ್ ಅಣಕು ಪ್ರದರ್ಶನದಂತಿದೆ ಎಂದಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನಾಚಿಗೇಡಿತನ ಹಾಗೂ ಬೇಜವಾಬ್ದಾರಿ ಹೇಳಿಕೆಯಾಗಿದೆ. ಅವರು ಸಿಎಂ ಆಗಿದ್ದೇ ಅಣಕು ಪ್ರದರ್ಶನದಂತಿದೆ. ಕುಮಾರಸ್ವಾಮಿ ಅವರ ಜೀವನ ಹಾಗೂ ರಾಜಕೀಯ ಅಣುಕು ಪ್ರದರ್ಶನದಂತಿದೆ ಎಂದು ವ್ಯಂಗ್ಯವಾಡಿದರು. ಅವರಿಗೆ ದೇಶ, ಸೈನಿಕರು, ರಾಜ್ಯದ ಹಿತ ಯಾವುದೂ ಕಾಣಿಸಲ್ಲಾ. ಕುಮಾರಸ್ವಾಮಿ ಕರ್ನಾಟಕದ ಓವೈಸಿ ಆಗಲು ಈ ಮೂಲಕ ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಶಂಕಿತ ಆರೋಪಿ ಆದಿತ್ಯ ರಾವ್ ಓರ್ವ ಬ್ಲಾಕ್ ಮೇಲರ್. ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾನೆ. ಆತ ಓರ್ವ ಹಿಂದೂ, ಆತನ ಬಂಧನವಾಗಿದೆ. ಪೊಲೀಸ್ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಸರ್ಕಾರ ಮತ್ತು ಗೃಹ ಇಲಾಖೆ ಬಾಂಬ್ ಪತ್ತೆ ವಿಚಾರದಲ್ಲಿ ಗಂಭೀರವಾಗಿವೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆಂದು ತಿಳಿಸಿದರು.

    ಕಲಬುರಗಿಯಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ಸಮಾವೇಶದಲ್ಲಿ ಕುಮಾರಸ್ವಾಮಿ, ಪಾಕಿಸ್ತಾನ ಲೀಡರ್ ಮಾತನಾಡಿದಂತೆ ಮಾತನಾಡಿದ್ದಾರೆ. ದಾವುದ್ ಇಬ್ರಾಹಿಂ ತಮ್ಮ ಇಮ್ರಾನ್ ಖಾನ್, ಇಮ್ರಾನ್ ಖಾನ್ ತಮ್ಮ ರಾಹುಲ್ ಗಾಂಧಿ, ಇಮ್ರಾನ್ ಖಾನ್ ಅಳಿಯ ಕುಮಾರಸ್ವಾಮಿ ಎಂಬಂತೆ ಅವರು ಮಾತನಾಡಿದ್ದಾರೆಂದು ಕಿಡಿಕಾರಿದರು.

    ಕುಮಾರಸ್ವಾಮಿ ಈಗಾಗಲೇ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ನಾಳೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದರೆ ಹಳೆ ಮೈಸೂರು ಭಾಗದ ಅಸ್ತಿತ್ವ ಕಳೆದುಕೊಳ್ಳುತ್ತಾರೆ. ಇನ್ನು ನಮ್ಮ ದೇಶದ ಅನ್ನ ತಿನ್ನುವ ಅಧಿಕಾರಿಗಳು ರಾಜಕಾರಣಿಗಳು ಪಾಕಿಸ್ತಾನದ ಎಜೆಂಟರಾಗಿ ಕೆಲಸ ಮಾಡಿದ ಉದಾಹರಣೆಗಳಿವೆ. ಮೋದಿ ಸರ್ಕಾರ ಬಂದ ಬಳಿಕ ಇವೆಲ್ಲ ಬಹಿರಂಗವಾಗುತ್ತಿವೆ ಎಂದರು.

    ಮೋದಿ ಅವರ ಕುಟುಂಬದ ಹಿನ್ನಲೆ ಮಾತನಾಡಿದ್ದ ಇಬ್ರಾಹಿಂ ಮುತ್ತಜ್ಜ ಯಾವ ಜಾತಿಯವನಿದ್ದ ಎಂದು ಇಬ್ರಾಹಿಂಗೆ ಕೇಳಿ. ಆತ ಪಕ್ಕಾ ಮುಸ್ಲಿಂ ಅಲ್ಲಾ. ಅರಬಸ್ಥಾನದಿಂದ ಬಂದ ಒರಿಜನಲ್ ಮುಸ್ಲಿಂ ಅಲ್ಲಾ. ಟಿಪ್ಪು ದಾಳಿಯ ಕಾಲದಲ್ಲಿ ಮತಾಂತರದಲ್ಲಿ ಮುಸ್ಲಿಂ ಆಗಿರುವ ಹೇಡಿಗಳು. ಅವರ ಬಗ್ಗೆ ಅವರಿಗೆ ಗೊತ್ತಿಲ್ಲ. ಇವರೇನು ಮೋದಿ ಅವರ ಬಗ್ಗೆ ಕೇಳೋದು ಎಂದು ಸಿಎಂ ಇಬ್ರಾಹಿಂ ವಿರುದ್ಧ ಆಕ್ರೋಶ ಹೊರಹಾಕಿದರು.

  • ಅವಿವೇಕಿತನ ಹೇಳಿಕೆ ನಿಮಗೆ ಶೋಭೆ ತರಲ್ಲ- ಹೆಚ್‍ಡಿಕೆ ವಿರುದ್ಧ ಬಿ.ಸಿ ಪಾಟೀಲ್ ಗರಂ

    ಅವಿವೇಕಿತನ ಹೇಳಿಕೆ ನಿಮಗೆ ಶೋಭೆ ತರಲ್ಲ- ಹೆಚ್‍ಡಿಕೆ ವಿರುದ್ಧ ಬಿ.ಸಿ ಪಾಟೀಲ್ ಗರಂ

    ಹಾವೇರಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಶಾಸಕರು, ಮಾಜಿ ಮುಖ್ಯಮಂತ್ರಿ ಆಗಿರೋ ನೀವು ಈ ರೀತಿಯ ಹೇಳಿಕೆ ನೀಡುವುದಕ್ಕೆ ನೂರು ಸಾರಿ ಯೋಚನೆ ಮಾಡಬೇಕು. ಮಾಜಿ ಸಿಎಂ ಆದ ನೀವು ಪೊಲೀಸ್ ಇಲಾಖೆಯನ್ನ ಪದೇ ಪದೇ ಹೀಯಾಳಿಸಿ, ಶಂಕಿಸಿ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಬಾರದು. ಇಂಥ ಅವಿವೇಕಿತನದ ಹೇಳಿಕೆ ನೀಡಿರುವುದು ನಿಮಗೆ ಶೋಭೆ ತರುವುದಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಕುಮಾರಸ್ವಾಮಿ ಹೇಳಿದ್ದೇನು?
    ಮಂಗಳೂರಿನ ಉಳ್ಳಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ನ್ನು ಹರಸಾಹಸಪಟ್ಟು ನಿಷ್ಕರಿಯಗೊಳಿಸಿದ್ದೆಲ್ಲವೂ ಪೊಲೀಸರು ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯೋತ್ಸವದಂದು ನಡೆಸುವ ಅಣುಕು ಪ್ರದರ್ಶನದಂತಿತ್ತು ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಹೌದು, ಬಾಂಬ್ ಇಟ್ಟಿದ್ದು ನಾನೇ – ತಪ್ಪೊಪ್ಪಿಕೊಂಡ ಆದಿತ್ಯ ರಾವ್

    ಅಲ್ಲದೆ ಜನರ ಮಧ್ಯೆ ಕಂಕದ ನಿರ್ಮಿಸುವ ಉದ್ದೇಶದಿಂದ ಯಾವುದೋ ಸಂಘಟನೆ ಮುಖಾಂತರ ಈ ಪ್ರಹಸನ ನಡೆಸಿದ್ದು ಸರ್ಕಾರವೇ ಅದರ ಸತ್ಯಾಸತ್ಯತೆ ಜನತೆ ಮುಂದೆ ಇಡಬೇಕಾಗಿದೆ ಎಂದು ಕೂಡ ಅವರು ಹೇಳಿದ್ದರು. ಇದನ್ನೂ ಓದಿ: ಏರ್‌ಪೋರ್ಟ್‌ ಬಳಿ ಬಾಂಬ್ ಇಡಲು ಸಿಸಿಟಿವಿ ಆಫ್ ಮಾಡಿಸಿದ್ರಾ?: ಎಚ್‍ಡಿಕೆ

  • ಮೊದಲೇ ಮಾಹಿತಿ ಸಿಕ್ಕಿತ್ತು, ಪೊಲೀಸರ ತನಿಖೆಗೆ ಭಯಗೊಂಡು ಆರೋಪಿ ಶರಣಾಗಿದ್ದಾನೆ: ಬೊಮ್ಮಾಯಿ

    ಮೊದಲೇ ಮಾಹಿತಿ ಸಿಕ್ಕಿತ್ತು, ಪೊಲೀಸರ ತನಿಖೆಗೆ ಭಯಗೊಂಡು ಆರೋಪಿ ಶರಣಾಗಿದ್ದಾನೆ: ಬೊಮ್ಮಾಯಿ

    ಬೆಂಗಳೂರು: ಪೊಲೀಸರು ತನಿಖೆ ನಡೆಸಿದ ರೀತಿಯಿಂದಲೇ ಆರೋಪಿ ಶರಣಾಗಿದ್ದಾನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಆರೋಪಿಯ ವಿರುದ್ಧ ಸಿಕ್ಕ ಸಿಸಿಟಿವಿ ದೃಶ್ಯಾವಳಿ, ಆಟೋ ಹಾಗೂ ಇತರೆ ಸಾಕ್ಷ್ಯಗಳ ಜಾಲವನ್ನು ಹುಡುಕಿ ಹೊರಟಾಗ ಆದಿತ್ಯ ರಾವ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಉಡುಪಿಯಲ್ಲಿರುವ ಆತನ ಮನೆಗೆ ಹೋಗಿ ತಂದೆ, ತಾಯಿ ಹಾಗೂ ಕುಟುಂಬಸ್ಥರ ಬಳಿ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಆ ಬಳಿಕ ಮೂರು ತನಿಖಾ ತಂಡ ರಚಿಸಿ ಈ ಸಂಬಂಧ ತನಿಖೆ ನಡೆಸಲಾಗುತ್ತಿತ್ತು. ಆದರೆ ಆರೋಪಿ ಉಡುಪಿಯಿಂದ ಬೆಂಗಳೂರಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಈ ಕೃತ್ಯವೆಸಗಲು ಏನು ಕಾರಣ? ಆತನ ಹಿಂದೆ ಯಾರಿದ್ದಾರೆ? ಎನ್ನುವ ಎಲ್ಲಾ ಮಾಹಿತಿ ತನಿಖೆ ಬಳಿಕ ತಿಳಿದು ಬರಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಇದನ್ನೂ ಓದಿ: ಹೌದು, ಬಾಂಬ್ ಇಟ್ಟಿದ್ದು ನಾನೇ – ತಪ್ಪೊಪ್ಪಿಕೊಂಡ ಆದಿತ್ಯ ರಾವ್

    ಈ ಪ್ರಕರಣದಲ್ಲಿ ನಮ್ಮ ಪೊಲೀಸರು ಕ್ಷಿಪ್ರವಾಗಿ ಕೆಲಸ ಮಾಡಿರುವುದು ಅವರ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹೀಗಾಗಿ ಅನಾವಶ್ಯಕವಾಗಿ ಪೊಲೀಸರ ಬಗ್ಗೆ ಟೀಕೆ ಮಾಡಿ ಅವರ ನೈತಿಕತೆಯನ್ನು ಕುಗ್ಗಿಸುವ ಕೆಲಸವನ್ನು ಯಾರು ಮಾಡಬಾರದು. ಪೊಲೀಸರು ತನಿಖೆ ನಡೆಸಿದ ರೀತಿಯಿಂದಲೇ ಆರೋಪಿ ಶರಣಾಗಿದ್ದಾನೆ. ಅದಕ್ಕೆ ನಾವು ಮೊದಲು ಆರೋಪಿ ಇಂತಹ ಸಂಘಟನೆಗೆ ಸೇರಿದವರು ಅಥವಾ ಇಂತಹ ವ್ಯಕ್ತಿ ಎಂದು ಹೇಳಿರಲಿಲ್ಲ. ಯಾರೇ ಆರೋಪಿ ಇದ್ದರು ಅವನನ್ನು ಕಂಡು ಹಿಡಿಯುತ್ತೇನೆ ಎಂದಿದ್ದೆವು. ಆ ಪ್ರಕಾರ ಪೊಲೀಸರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಗೃಹ ಸಚಿವರು ಪೊಲೀಸರನ್ನು ಶ್ಲಾಘಿಸಿದರು. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಗದ್ದಕ್ಕೆ ಬೆದರಿಕೆ ಕರೆ ಮಾಡಿದ್ದ ಬಾಂಬರ್ ಈಗ ಬಾಂಬ್ ಇಟ್ಟ

    ಆರೋಪಿ ಬೇರೆ ಬೇರೆ ಮಾರ್ಗದಿಂದ ಬೆಂಗಳೂರಿಗೆ ಬಂದಿದ್ದಾನೆ. ಸರ್ಕಾರಿ ಬಸ್ ಅಥವಾ ಸಾಮಾನ್ಯ ಬಸ್‍ಗಳಲ್ಲಿ ಆತ ಬೆಂಗಳೂರಿಗೆ ಬಂದಿಲ್ಲ. ಪೊಲೀಸರ ಕಣ್ತಪ್ಪಿಸಿ ರಾತ್ರೋರಾತ್ರಿ ಬೆಂಗಳೂರಿಗೆ ಬಂದಿದ್ದಾನೆ. ಉಗ್ರ ಸಂಘಟನೆ ಜೊತೆ ಆರೋಪಿಗೆ ಲಿಂಕ್ ಇದೆಯೇ? ಇಲ್ಲವಾ? ಎನ್ನೋದು ಮುಂದಿನ ತನಿಖೆಯಲ್ಲಿ ಪತ್ತೆಯಾಗುತ್ತೆ ಎಂದರು.

    ಸಾಮಾನ್ಯವಾಗಿ ಬಾಂಬ್ ಪತ್ತೆ, ಬ್ಲಾಸ್ಟ್ ಪ್ರಕರಣ ನಡೆದಾಗ ಕೇಂದ್ರ ಸರ್ಕಾರಕ್ಕೆ ಮಾಹಿತಿ ತಲುಪಿರುತ್ತದೆ. ಈಗಾಗಲೇ ಎನ್‍ಎಸ್‍ಜಿ(ರಾಷ್ಟ್ರೀಯ ಭದ್ರತಾ ಗಾರ್ಡ್) ಸಿಬ್ಬಂದಿ ಮಂಗಳೂರು ಏರ್‌ಪೋರ್ಟ್‌ ಹಾಗೂ ಇತರೆ ಪ್ರದೇಶಗಳಲ್ಲಿ ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ತನಿಖೆ ಮೇಲೆ ಏನು ಬಯಲಾಗುತ್ತದೋ ಅದರ ಆಧಾರದ ಮೇಲೆ ಕ್ರಮ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು ಮಾಹಿತಿ ನೀಡಿದರು. ಇದನ್ನೂ ಓದಿ: ಮಂಗ್ಳೂರು ಸ್ಫೋಟ ಪ್ರಕರಣ- ಪಬ್ಲಿಕ್ ಟಿವಿಗೆ ಶಂಕಿತ ಉಗ್ರನ ವಿಡಿಯೋಗಳು ಲಭ್ಯ

    ಆರೋಪಿಯು ಪದವಿಧರನಾಗಿದ್ದು, ಮಂಗಳೂರಿನಲ್ಲಿ ಕೆಲಸ ಪಡೆಯುವಲ್ಲಿ ವಿಫಲವಾಗಿದ್ದನು. ಈ ಹಿಂದೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಆಗಿ ಕೆಲಸಕ್ಕೆ ಸೇರಲು ಪ್ರಯತ್ನಿಸಿದ್ದ. ಮುಂಜಾನೆ ಆರೋಪಿ ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಲಿದೆ.

  • ಮಂಗಳೂರು ವಿಮಾನ ನಿಲ್ದಾಣಕ್ಕೆ ಎನ್‍ಎಸ್‍ಜಿ ಸಿಬ್ಬಂದಿ ಆಗಮನ – ಸೆಕ್ಯೂರಿಟಿ ಫುಲ್ ಟೈಟ್

    ಮಂಗಳೂರು ವಿಮಾನ ನಿಲ್ದಾಣಕ್ಕೆ ಎನ್‍ಎಸ್‍ಜಿ ಸಿಬ್ಬಂದಿ ಆಗಮನ – ಸೆಕ್ಯೂರಿಟಿ ಫುಲ್ ಟೈಟ್

    ಮಂಗಳೂರು: ನಗರದ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ನಂತರ ವಿಮಾನ ನಿಲ್ದಾಣದ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ಕೆಎಸ್‌ಆರ್‌ಪಿ ಪೊಲೀಸರ ನಿಯೋಜನೆ ಮಾಡಿ, ಪ್ರವೇಶ ದ್ವಾರದಲ್ಲಿ ಟೈಟ್ ಸೆಕ್ಯೂರಿಟಿ ನಿಯೋಜನೆ ಮಾಡಲಾಗಿದೆ.

    ಮಂಗಳೂರು ವಿಮಾನ ನಿಲ್ದಾಣ ಭದ್ರತೆಗೆ ರಾಷ್ಟ್ರೀಯ ಭದ್ರತಾ ಪಡೆಯ(ಎನ್‍ಎಸ್‍ಜಿ) ಸಿಬ್ಬಂದಿ ಆಗಮನವಾಗಿದೆ. ತಮಿಳುನಾಡಿನಿಂದ ಎರಡು ವಾಹನಗಳಲ್ಲಿ ಬಂದ ಎನ್‍ಎಸ್‍ಜಿ ಸಿಬ್ಬಂದಿ ವಿಮಾನ ನಿಲ್ದಾಣವನ್ನು ಸುಪರ್ದಿಗೆ ತೆಗೆದುಕೊಂಡಿದ್ದಾರೆ.

    ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ವಾಹನಗಳ ಇಂಚಿಂಚೂ ತಪಾಸಣೆ ನಡೆಸಲಾಗುತ್ತಿದ್ದು, ಕಿಲೋಮೀಟರ್ ಗಟ್ಟಲೆ ವಾಹನ ರಸ್ತೆಯಲ್ಲಿಯೇ ನಿಂತು ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ತಪಾಸಣೆ ವೇಳೆ ಪ್ರಯಾಣಿಕರ ಹೆಸರು, ವಾಹನ ಸಂಖ್ಯೆ ದಾಖಲೆಗಳನ್ನು ಪರಿಶೀಲನೆ ಮಾಡಿ ಪೊಲೀಸರು ವಾಹನವನ್ನು ವಿಮಾನ ನಿಲ್ದಾಣದ ಒಳಗೆ ಬಿಡುತ್ತಿದ್ದಾರೆ.

    ನಡೆದಿದ್ದೇನು?
    ಸೋಮವಾರ ಆಟೋದಲ್ಲಿ ಬಂದ ಅಪರಿಚಿತ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಬ್ಯಾಗ್ ಇರಿಸಿ ನಾಪತ್ತೆ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಆ ಬ್ಯಾಗ್‍ನಲ್ಲಿ ಸಜೀವ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಕಚ್ಚೆಚ್ಚರ ವಹಿಸಲಾಗಿತ್ತು. ಶಂಕಿತ ಉಡುಪಿ ಮೂಲಕವೇ ಬೇರೆ ಕಡೆ ತೆರಳಿರುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ಸಂಬಂಧ ಉಡುಪಿ ಪ್ರಮುಖ ರಸ್ತೆ, ಕೃಷ್ಣ ಮಠ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು.

    ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ 10 ಕೆಜಿ ತೂಕವುಳ್ಳ ಸಜೀವ ಬಾಂಬ್‍ನ್ನು ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯಗೊಳಿಸಲು ತೆಗೆದುಕೊಂಡು ಹೋಗಲಾಗಿತ್ತು. ಬಾಂಬ್ ನಿಷ್ಕ್ರಿಯಗೊಳ್ಳದ ಹಿನ್ನೆಲೆಯಲ್ಲಿ ರಿಮೋಟ್ ಕಂಟ್ರೋಲರ್ ಮೂಲಕ ಅದನ್ನು ಸ್ಫೋಟಿಸಲಾಯಿತು.

    ಇದೇ ವೇಳೆ ಇಂಡಿಗೋ ವಿಮಾನಯಾನ ಸಂಸ್ಥೆಗೆ ಬೆದರಿಕೆ ಕರೆಯೊಂದು ಬಂದಿತ್ತು. ಬೆದರಿಕೆ ಕರೆ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಮಂಗಳೂರಿನಿಂದ ಹೈದರಾಬಾದ್‍ಗೆ ಟೇಕಾಫ್ ಆಗುತ್ತಿದ್ದ ವಿಮಾನವನ್ನು ತಡೆದಿದ್ದರು. ಮುಂಜಾಗ್ರತ ಕ್ರಮವಾಗಿ ವಿಮಾನದಲ್ಲಿದ್ದ ಎಲ್ಲ 126 ಪ್ರಯಾಣಿಕರನ್ನು ಕೆಳಗಿಳಿಸಿ ಪರಿಶೀಲನೆ ನಡೆಸಿದ್ದರು. ವಿಮಾನ ನಿಲ್ದಾಣದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶಿಲಿಸಿದಾಗ ಶಂಕಿತ ನಿಲ್ದಾಣಕ್ಕೆ ಬಂದು ಟಿಕೆಟ್ ಕೌಂಟರ್ ಬಳಿ ಬಾಂಬ್ ಇರುವ ಬ್ಯಾಗ್ ಇಟ್ಟು ನಾಪತ್ತೆಯಾದ ದೃಶ್ಯಾವಳಿ ಲಭ್ಯವಾಗಿತ್ತು.

  • ಸ್ಫೋಟಿಸುವ ಮೂಲಕ ಬಾಂಬ್ ನಿಷ್ಕ್ರಿಯ

    ಸ್ಫೋಟಿಸುವ ಮೂಲಕ ಬಾಂಬ್ ನಿಷ್ಕ್ರಿಯ

    ಮಂಗಳೂರು: ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಂಬ್ ನ್ನು ಸ್ಫೋಟಿಸುವ ಮೂಲಕ ನಿಷ್ಕ್ರಿಯಗೊಳಿಸಲಾಗಿದೆ.

    ಇಂದು ಬೆಳಗ್ಗೆ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಸಜೀವ ಬಾಂಬ್ ನ್ನು ಕೆಂಜಾರು ಮೈದಾನದಲ್ಲಿ ಬಾಂಬ್ ಸ್ಕ್ವಾಡ್ ಸ್ಫೋಟಿಸಿ, ಭಾರೀ ದುರಂತವೊಂದನ್ನು ತಪ್ಪಿಸಿದ್ದಾರೆ. ಆಟೋದಲ್ಲಿ ಬಂದ ಅಪರಿಚಿತ ಟಿಕೆಟ್ ಕೌಂಟರ್ ಬಳಿ ಬ್ಯಾಗ್ ಇರಿಸಿ ನಾಪತ್ತೆ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಮಂಗಳೂರು ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಗಳ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಕ್ಯಾಪ್ ಹಾಕಿರುವ ಒಬ್ಬ ಕೈಯಲ್ಲಿ ಬುಕ್ ಹಿಡಿದಿದ್ದಾನೆ. ಈ ವ್ಯಕ್ತಿ ನಿಲ್ದಾಣದಿಂದ ಹೊರಹೋಗುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಹಾಗೆಯೇ ಶಂಕಿತ ಬಂದಿದ್ದ ಎನ್ನಲಾದ ಆಟೋದ ಎರಡು ಫೋಟೋಗಳು ಸಹ ಪಬ್ಲಿಕ್ ಟಿವಿಗೆ ಲಭಿಸಿವೆ.

    ಸಜೀವ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಕಚ್ಚೆಚ್ಚರ ವಹಿಸಲಾಗಿದೆ. ಶಂಕಿತ ಉಡುಪಿ ಮೂಲಕವೇ ಬೇರೆ ಕಡೆ ತೆರಳಿರುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ಸಂಬಂಧ ಉಡುಪಿ ಪ್ರಮುಖ ರಸ್ತೆ, ಕೃಷ್ಣ ಮಠ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

    ಇತ್ತ ಮಂಗಳೂರಿನಿಂದ ಉಡುಪಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ನಗರದ ಪ್ರಮುಖ ರಸ್ತೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಶಂಕಿತ ಮಂಗಳೂರಿನಿಂದ ಉಡುಪಿಗೆ ರೈಲ್ವೇ ಮೂಲಕ ಪ್ರಯಾಣ ಬೆಳೆಸಿರುವ ಅನುಮಾನದ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಕೆಲವು ದಿನಗಳ ಹಿಂದ ತಮಿಳುನಾಡಿನ ಪೊಲೀಸ್ ಅಧಿಕಾರಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಇಬ್ಬರು ಯುವಕರನ್ನು ಬಂಧಿಸಲಾಗಿತ್ತು. ಹೀಗಾಗಿ ಉಡುಪಿ ಸೇರಿದಂತೆ ದಕ್ಷಿಣ ಕನ್ನಡದ ಅಕ್ಕಪಕ್ಕ ಜಿಲ್ಲೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

  • ಮಂಗ್ಳೂರಲ್ಲಿ ಇನ್ನೂ ಬಾಂಬ್ ಭೀತಿ- ಇಂಡಿಗೋ ವಿಮಾನಯಾನ ಸಂಸ್ಥೆಗೆ ಬೆದರಿಕೆ ಕರೆ

    ಮಂಗ್ಳೂರಲ್ಲಿ ಇನ್ನೂ ಬಾಂಬ್ ಭೀತಿ- ಇಂಡಿಗೋ ವಿಮಾನಯಾನ ಸಂಸ್ಥೆಗೆ ಬೆದರಿಕೆ ಕರೆ

    ಮಂಗಳೂರು: ವಿಮಾನ ನಿಲ್ದಾಣದ ಆವರಣದಲ್ಲಿ ಪತ್ತೆಯಾದ ಬಾಂಬ್ ನ್ನು ನಿಷ್ಕ್ರಿಯಗೊಳಿಸಲು ಅಧಿಕಾರಿಗಳು ಕೆಂಜಾರು ಮೈದಾನದಲ್ಲಿ ನಿರತರಾಗಿದ್ದಾರೆ. ಇತ್ತ ಮಂಗಳೂರಿನಿಂದ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬೆದರಿಕೆ ಕರೆಯೊಂದು ಬಂದಿದೆ.

    ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ತಡೆದು ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮುಂಜಾಗ್ರತ ಕ್ರಮವಾಗಿ ವಿಮಾನದಲ್ಲಿದ್ದ ಎಲ್ಲ 126 ಪ್ರಯಾಣಿಕರನ್ನು ಕೆಳಗಿಳಿಸಿ ವಿಮಾನ ತಪಾಸಣೆಗೆ ಬಾಂಬ್ ಸ್ಕ್ವಾಡ್ ತಂಡ ಮುಂದಾಗಿದೆ. ವಿಮಾನ ಮಂಗಳೂರಿನಿಂದ ಹೈದರಾಬಾದ್ ನತ್ತ ತೆರಳಲು ಸಿದ್ಧಗೊಂಡಾಗ ಇಂಡಿಗೋ ವಿಮಾನಯಾನ ಸಂಸ್ಥೆಗೆ ಬೆದರಿಕೆ ಕರೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಇಂದು ಬೆಳಗ್ಗೆ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅನುಮಾನಾಸ್ಪದ ಲ್ಯಾಪ್‍ಟಾಪ್ ಬ್ಯಾಗ್ ಪತ್ತೆಯಾಗಿತ್ತು, ಬ್ಯಾಗ್ ಒಳಗಡೆ 10 ಕೆಜಿ ತೂಕವುಳ್ಳ ಸಜೀವ ಬಾಂಬ್ ಇತ್ತು. ಸಿಐಎಸ್‍ಎಫ್ ಸಿಬ್ಬಂದಿ ನಿಲ್ದಾಣದಲ್ಲಿಯ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಪತ್ತೆಯಾದ ಬ್ಯಾಗ್ ನ್ನು ಬಾಂಬ್ ನಿಷ್ಕ್ರಿಯ ವಾಹನದಲ್ಲಿ ಇರಿಸಿದ್ದರು. ಕೆಲ ಸಮಯದ ಬಳಿಕ ಬಾಂಬ್ ನ್ನು ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯಗೊಳಿಸಲು ಮುಂದಾಗಿದ್ದಾರೆ.

  • ಮಂಗಳೂರು ಬಾಂಬ್ ಪ್ರಕರಣ ಶೀಘ್ರವಾಗಿ ಭೇದಿಸುತ್ತೇವೆ: ಬೊಮ್ಮಾಯಿ

    ಮಂಗಳೂರು ಬಾಂಬ್ ಪ್ರಕರಣ ಶೀಘ್ರವಾಗಿ ಭೇದಿಸುತ್ತೇವೆ: ಬೊಮ್ಮಾಯಿ

    ಧಾರವಾಡ/ಹುಬ್ಬಳ್ಳಿ: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಸುಮಾರು 10.15ಕ್ಕೆ ಟಿಕೆಟ್ ಕೌಂಟರ್ ಹತ್ತಿರ ಸ್ಫೋಟಕ ವಸ್ತು ಪತ್ತೆ ಆಗಿದ್ದು, ಬಾಂಬ್ ಇರುವ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಮೊದಲ ಹಂತದ ಇನ್ವೆಸ್ಟಿಗೇಷನ್ ಆಗಿದೆ. ಈ ಪ್ರಕರಣವನ್ನು ಶೀಘ್ರದಲ್ಲೇ ಭೇದಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಹೇಳಿದರು.

    ನಗರದಲ್ಲಿಂದು ಮಂಗಳೂರು ಬಾಂಬ್ ಪ್ರಕರಣ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ರೀತಿ ಭಯ ಹುಟ್ಟಿಸುವ ಪ್ರಕ್ರಿಯೆ ಮೇಲಿಂದ ಮೇಲೆ ನಡೆಯುತ್ತಿವೆ. ಈ ರೀತಿಯ ಪ್ರಯತ್ನ ಹತ್ತಿಕ್ಕಲು ನಾವು ಕಟ್ಟೆಚ್ಚರ ವಹಿಸಿದ್ದೇವೆ ಎಂದರು.

    ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಒಟ್ಟಾರೆಯಾಗಿ ಇದು ದೇಶದ್ರೋಹದ ಕೆಲಸವಾಗಿದೆ ಎಂದರು.

  • ಮಂಗ್ಳೂರಲ್ಲಿ ಪತ್ತೆಯಾಗಿದ್ದು 10 ಕೆಜಿ ತೂಕದ ಸಜೀವ ಬಾಂಬ್

    ಮಂಗ್ಳೂರಲ್ಲಿ ಪತ್ತೆಯಾಗಿದ್ದು 10 ಕೆಜಿ ತೂಕದ ಸಜೀವ ಬಾಂಬ್

    -ಸ್ಫೋಟವಾಗಿದ್ರೆ 500 ಮೀಟರ್ ಹಾನಿ ಸಾಧ್ಯತೆ
    -ಉಡುಪಿಯಲ್ಲಿಯೂ ಕಟ್ಟೆಚ್ಚರ

    ಮಂಗಳೂರು: ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 10 ಕೆಜಿ ತೂಕದ ಬಾಂಬ್ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ 10 ಕೆಜಿ ತೂಕದ ಬಾಂಬ್ ಸ್ಫೋಟವಾಗಿದ್ರೆ ಸುಮಾರು 500 ಮೀಟರ್ ಸುತ್ತಲಿನ ವ್ಯಾಪ್ತಿಯಲ್ಲಿ ಹಾನಿಯಾಗುವ ಸಾಧ್ಯತೆ ಇತ್ತು.

    ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅನುಮಾನಾಸ್ಪದವಾದ ಲ್ಯಾಪ್‍ಟಾಪ್ ಬ್ಯಾಗ್ ಪತ್ತೆಯಾಗಿತ್ತು. ಸಂಶಯದ ಮೇಲೆ ಬ್ಯಾಗ್ ಪರಿಶೀಲನೆ ನಡೆಸಿದಾಗ ಜೀವಂತ ಬಾಂಬ್ ಪತ್ತೆಯಾಗಿತ್ತು. ಕೂಡಲೇ ಎಚ್ಚೆತ್ತ ಸಿಬ್ಬಂದಿ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ, ನಿಲ್ದಾಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ಇತ್ತ ಸಿಐಎಸ್‍ಎಫ್ ಸಿಬ್ಬಂದಿ ಸಜೀವ್ ಬಾಂಬ್ ನ್ನು ನಿಲ್ದಾಣದಿಂದ ಹೊರ ತಂದು ನಿಷ್ಕ್ರಿಯ ವಾಹನದಲ್ಲಿ ಇರಿಸಲಾಗಿದೆ.

    ಆಟೋದಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಬ್ಯಾಗ್ ನ್ನು ಟಿಕೆಟ್ ಕೌಂಟರ್ ಬಳಿ ಬಿಟ್ಟು ಹೋಗಿರುವ ಬಗ್ಗೆ ಮಾಹಿತಿಗಳೂ ಲಭ್ಯವಾಗುತ್ತಿದೆ. ಬೆಂಗಳೂರಿನ ಮಾದರಿಯಲ್ಲಿಯೇ ಮಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

    ಇತ್ತ ಮಂಗಳೂರಿನಿಂದ ಉಡುಪಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ನಗರದ ಪ್ರಮುಖ ರಸ್ತೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಶಂಕಿತ ಮಂಗಳೂರಿನಿಂದ ಉಡುಪಿಗೆ ರೈಲ್ವೇ ಮೂಲಕ ಪ್ರಯಾಣ ಬೆಳೆಸಿರುವ ಅನುಮಾನದ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಕೆಲವು ದಿನಗಳ ಹಿಂದ ತಮಿಳುನಾಡಿನ ಪೊಲೀಸ್ ಅಧಿಕಾರಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಇಬ್ಬರು ಯುವಕರನ್ನು ಬಂಧಿಸಲಾಗಿತ್ತು. ಹೀಗಾಗಿ ಉಡುಪಿ ಸೇರಿದಂತೆ ದಕ್ಷಿಣ ಕನ್ನಡದ  ಅಕ್ಕಪಕ್ಕದ ಜಿಲ್ಲೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.