Tag: Mangaluru Airport

  • ಮಾಹಿತಿ ಪಡೆದು ಏರ್‌ಪೋರ್ಟ್‌ಗೆ ಬನ್ನಿ – ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಗೆ ಸೂಚನೆ

    ಮಾಹಿತಿ ಪಡೆದು ಏರ್‌ಪೋರ್ಟ್‌ಗೆ ಬನ್ನಿ – ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಗೆ ಸೂಚನೆ

    ಮಂಗಳೂರು: ಪಾಕಿಸ್ತಾನದ (Pakistan) ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದ ಹಿನ್ನೆಲೆ, ಕೆಲ ವಾಯು ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಇದರಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಮಂಗಳೂರು ವಿಮಾನ ನಿಲ್ದಾಣದ (Mangaluru Airport) ಆಡಳಿತ ವಿಭಾಗ ಮಾಹಿತಿ ನೀಡಿದೆ

    ವಿಮಾನ ಸಂಚಾರದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇರುವುದರಿಂದ, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮುನ್ನವೇ ಪ್ರಯಾಣಿಕರು ವಿಮಾನವನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಏರ್‍ಲೈನ್‍ಗಳೊಂದಿಗೆ ಪರಿಶೀಲಿಸಿ ಮಾಹಿತಿ ಪಡೆದುಕೊಳ್ಳುವಂತೆ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

    ಭಾರತವು ಪಾಕಿಸ್ತಾನದ (Pakistan) ಉಗ್ರರ ತಾಣಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ವಾಯುನೆಲೆಯನ್ನು ನಿರ್ಬಂಧಿಸಲಾಗಿದ್ದು, ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ(Indigo) 165ಕ್ಕೂ ಹೆಚ್ಚು ವಿಮಾನಯಾನವನ್ನು ಸ್ಥಗಿತಗೊಳಿಸಿದೆ. ಜಮ್ಮು, ಶ್ರೀನಗರ, ಅಮೃತಸರ, ಲೇಹ್, ಚಂಡೀಗಢ, ಜೋಧ್‌ಪುರ, ಧರ್ಮಶಾಲಾ, ಬಿಕಾನೇರ್, ಗ್ವಾಲಿಯರ್, ಕಿಶನ್‌ಗಢ ಮತ್ತು ರಾಜ್‌ಕೋಟ್‌ಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಮೇ 10ರವರೆಗೆ ಇಂಡಿಗೋ ರದ್ದುಗೊಳಿಸಿದೆ.

    ಪರಿಸ್ಥಿತಿ ಸೂಕ್ಷ್ಮತೆಯನ್ನು ಗಮನಿಸಿ ಇತರ ನಿಲ್ದಾಣಗಳಿಗೆ ವಿಮಾನ ಹಾರಾಟವನ್ನು ಹೊಂದಾಣಿಕೆ ಮಾಡಲಾಗುವುದು. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಪ್ರಯಾಣಿಕರು ತಮ್ಮ ಪ್ರಯಾಣದ ಸ್ಥಿತಿಯನ್ನು ಪರಿಶೀಲಿಸುವಂತೆ ಗ್ರಾಹಕರಿಗೆ ಇಂಡಿಗೋ ಸಲಹೆ ನೀಡಿದೆ. ಅಲ್ಲದೇ ಏರ್ ಇಂಡಿಯಾ(Air India) ಸಂಸ್ಥೆ ಕೂಡ ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್ ನಿಲ್ದಾಣಗಳಿಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳ ಹಾರಾಟಗಳನ್ನು ಮೇ 10ರ ವರೆಗೆ ಬಂದ್ ಮಾಡಿದೆ ಎಂದು ಎಕ್ಸ್ ಮೂಲಕ ತಿಳಿಸಿದೆ.

  • ಮಂಗಳೂರು ಏರ್‌ಪೋರ್ಟ್‌ಗೆ ಹೆಚ್ಚುವರಿ ಭೂಸ್ವಾಧೀನಕ್ಕೆ ತುರ್ತು ಕ್ರಮ ಜರುಗಿಸಲು ಆಗ್ರಹ

    ಮಂಗಳೂರು ಏರ್‌ಪೋರ್ಟ್‌ಗೆ ಹೆಚ್ಚುವರಿ ಭೂಸ್ವಾಧೀನಕ್ಕೆ ತುರ್ತು ಕ್ರಮ ಜರುಗಿಸಲು ಆಗ್ರಹ

    – ರನ್‌ವೇ ಸುರಕ್ಷತೆಯ ಅಗತ್ಯತೆ ಬಗ್ಗೆ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ. ಚೌಟ

    ನವದೆಹಲಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Mangaluru Airport) ರನ್‌ವೇ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೆಚ್ಚುವರಿ ಭೂಸ್ವಾಧೀನಕ್ಕೆ ಎದುರಾಗಿರುವ ಅಡೆತಡೆಗಳ ನಿವಾರಿಸುವುದಕ್ಕೆ ವಿಮಾನಯಾನ ಸಚಿವಾಲಯ ವಿಶೇಷ ಮುತುವರ್ಜಿ ವಹಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ (Captain Brijesh Chowta) ಅವರು ಸಂಸತ್ತಿನಲ್ಲಿ ಒತ್ತಾಯಿಸಿದ್ದಾರೆ.

    ಲೋಕಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ಕ್ಯಾ. ಚೌಟ, ಮಂಗಳೂರು ಏರ್‌ಪೋರ್ಟ್ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯು ನೋಡಿಕೊಳ್ಳುತ್ತಿದ್ದು, ನಿಲ್ದಾಣದ ರನ್‌ವೇ ಸುರಕ್ಷತೆ ಸಂಬಂಧಿಸಂತೆ ಹೆಚ್ಚುವರಿ ಭೂಮಿಯ ಅವಶ್ಯಕತೆಯಿದೆ ಎಂದು ಜಿಲ್ಲಾಡಳಿತವನ್ನು ಕೇಳಿಕೊಂಡಿದೆ. ಇದನ್ನೂ ಓದಿ: ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬಲು ಎಐಸಿಸಿಯಿಂದ ಕಾರ್ಯಕ್ರಮ: ಡಿ.ಕೆ ಶಿವಕುಮಾರ್

    ಅದರಂತೆ ರಾಜ್ಯ ಸರ್ಕಾರ ಮೂಲಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI)ಕ್ಕೂ ಪತ್ರ ಬರೆದ್ದು, ಆ ಮೂಲಕ ಭೂಸ್ವಾಧೀನ ಪ್ರಕ್ರಿಯೆಯನ್ನು ಮಾಡುವುದಕ್ಕೂ ಸಿದ್ಧವಿರುವುದಾಗಿ ಹೇಳಿಕೊಂಡಿದೆ. ಈ ಹಿನ್ನಲೆಯಲ್ಲಿ ನಾನು ಖುದ್ದು ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಗಳನ್ನು ಭೇಟಿಯಾಗಿದ್ದು ಅವರು ಕೂಡ ಇದಕ್ಕೆ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

    ಆದರೆ, ಈ ಪ್ರಕ್ರಿಯೆಯು ಇದೀಗ ಅಲ್ಲಿಗೇ ನಿಂತಿದ್ದು, ಮುಂದಿನ ಹಂತಕ್ಕೆ ಯಾವುದೇ ರೀತಿಯ ಬೆಳವಣಿಗೆಗಳು ಆಗಿಲ್ಲ. ರಾಜ್ಯ ಸರ್ಕಾರ ಸೇರಿದಂತೆ ಎಲ್ಲ ಏಜೆನ್ಸಿಗಳು ರನ್‌ವೇ ವಿಸ್ತರಣೆಗೆ ಬೇಕಾಗುವ ಭೂಸ್ವಾಧೀನ ವಿಚಾರದ ಬಗ್ಗೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದರೂ ಅದನ್ನು ಕಾರ್ಯಗತಗೊಳಿಸುವಲ್ಲಿ ಯಾವುದೇ ಕ್ರಮ ಆಗಿಲ್ಲ. ಮುಖ್ಯ ಸಮಸ್ಯೆ ಅಂದರೆ, ವಿಮಾನ ನಿಲ್ದಾಣ ಪ್ರಾಧಿಕಾರದಿಂದ ರಾಜ್ಯ ಸರ್ಕಾರಕ್ಕೆ ಆಗಲಿ ಅಥವಾ ಏರ್‌ಪೋರ್ಟ್ ಆಗಲಿ ನಿರ್ವಹಣೆ ನೋಡಿಕೊಳ್ಳುತ್ತಿರುವ ಖಾಸಗಿ ಸಂಸ್ಥೆಗೆ ಮುಂದಿನ ಕಾರ್ಯ ಯೋಜನೆಗೆ ಬಗ್ಗೆ ಯಾವುದೇ ನಿರ್ದೇಶನಗಳು ಬಂದಿಲ್ಲ ಎಂದು ಕ್ಯಾ. ಚೌಟ ಅವರು ಸದನದ ಗಮನಸೆಳೆದರು. ಇದನ್ನೂ ಓದಿ: ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿಯ ಕಪಿಮುಷ್ಟಿಯಲ್ಲಿದೆ: ಹೆಚ್‌ಡಿಕೆ

    ನಿಲ್ದಾಣದ ಸಮಗ್ರ ಅಭಿವೃದ್ದಿ ಹಾಗೂ ಸುರಕ್ಷತೆ ಹಿನ್ನಲೆಯಲ್ಲಿ ರನ್‌ವೇಗೆ ಹೆಚ್ಚುವರಿ ಭೂಮಿ ಸ್ವಾಧೀನಪಡಿಸುವ ಅಗತ್ಯತೆಯನ್ನು ಒತ್ತಿ ಹೇಳಿದ ಸಂಸದರು, ಈ ವಿಚಾರದಲ್ಲಿ ಆಡಳಿತಾತ್ಮಕವಾದ ವಿಳಂಬ ನೀತಿಯಿಂದಾಗಿ ಮಂಗಳೂರು ವಿಮಾನ ನಿಲ್ದಾಣದ ಸುರಕ್ಷತೆ, ರನ್‌ವೇ ವಿಸ್ತರಣೆ ಯೋಜನೆ ಮೇಲೆ ಪರಿಣಾಮ ಬೀರುತ್ತಿದೆ. ಹೀಗಿರುವಾಗ, ಏರ್‌ಪೋರ್ಟ್‌ಗೆ ಹೆಚ್ಚುವರಿ ಭೂಮಿ ಒದಗಿಸುವ ಏಜೆನ್ಸಿಗಳ ಜತೆಗೆ ಸಮಾಲೋಚನೆ ನಡೆಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕಾರ್ಯರೂಪಕ್ಕೆ ತರುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕ್ಯಾ. ಚೌಟ ಅವರು ಸದನದಲ್ಲಿ ಆಗ್ರಹಿಸಿದ್ದಾರೆ.

    ಈ ಕುರಿತು ಬಳಿಕ ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಚೌಟ, ಹೆಚ್ಚುವರಿ ಭೂಮಿ ಸ್ವಾಧೀನಪಡಿಸುವುದರಿಂದ ಮಂಗಳೂರು ವಿಮಾನ ನಿಲ್ದಾಣದ ಸಮಗ್ರ ಅಭಿವೃದ್ಧಿಯಾಗಲಿದೆ. ಈಗಾಗಲೇ ವಾಣಿಜ್ಯ ನಗರಿಯಾಗಿ ಬೆಳವಣಿಗೆ ಸಾಧಿಸುತ್ತಿರುವ ಮಂಗಳೂರಿನ ಈ ಏರ್‌ಪೋರ್ಟ್‌ನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರೆ ಕರಾವಳಿ ಭಾಗದ ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕಗಳಿಗೂ ಮತ್ತಷ್ಟು ಉತ್ತೇಜನ ದೊರೆಯಲಿದೆ. ಇದನ್ನೂ ಓದಿ: ಶಾಸಕ ಪೂಂಜ ಜತೆಗೂಡಿ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಭೇಟಿಯಾದ ಸಂಸದ ಕ್ಯಾ. ಚೌಟ

    ಜೊತೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ಮತ್ತಷ್ಟು ದೇಶ-ವಿದೇಶದ ನಗರಗಳಿಗೆ ಹೆಚ್ಚಿನ ವಿಮಾನಗಳ ಹಾರಾಟ ಸೇವೆ ಪ್ರಾರಂಭಿಸುವುದಕ್ಕೂ ಅನುಕೂಲವಾಗಲಿದೆ. ಹೀಗಾಗಿ, ಮಂಗಳೂರು ಏರ್‌ಪೋರ್ಟ್ ಗೆ ಹೆಚ್ಚುವರಿ ಭೂಮಿ ಒದಗಿಸುವುದಕ್ಕೆ ರಾಜ್ಯ ಸರ್ಕಾರ ಸೇರಿದಂತೆ ಸಂಬಂಧಪಟ್ಟ ಏಜೆನ್ಸಿಗಳು ಜರೂರಾಗಿ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕೆಂದು ಕೋರಿದ್ದಾರೆ.

  • ಮಂಗಳೂರು| ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ಅಡಚಣೆ – ಪ್ರಯಾಣಿಕರ ಪರದಾಟ

    ಮಂಗಳೂರು| ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ಅಡಚಣೆ – ಪ್ರಯಾಣಿಕರ ಪರದಾಟ

    ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದ ತಾಂತ್ರಿಕ ಅಡಚಣೆಯಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.

    ಮಂಗಳೂರು-ದಮಾಮ್ ನಡುವಿನ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂತು. ಪರಿಣಾಮವಾಗಿ, ಟೇಕಾಫ್‌ಗೆ ಸಿದ್ಧವಾಗಿದ್ದ ವಿಮಾನದಲ್ಲಿ ಲೈಟ್ ಆಫ್ ಆಯಿತು. ಲೈಟ್ ಆಫ್ ಆಗಿ ಕತ್ತಲೆಯಲ್ಲಿ ಕುಳಿತ ಪ್ರಯಾಣಿಕರಿಗೆ ಆತಂಕವಾಗಿತ್ತು.

    ವಿಮಾನವೇರಿ ಕೂತಿದ್ದ ಪ್ರಯಾಣಿಕರನ್ನು ಮತ್ತೆ ಏರ್ಪೋರ್ಟ್ ಲಾಂಜ್‌ಗೆ ಸಿಬ್ಬಂದಿ ಕಳುಹಿಸಿದರು. ಟೇಕಾಫ್ ರದ್ದುಗೊಳಿಸಿ ಪ್ರಯಾಣಿಕರನ್ನು ಮತ್ತೆ ಲಾಂಚ್‌ಗೆ ಏರ್ ಇಂಡಿಯಾ ಕಳುಹಿಸಿತು.

  • ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಉಡುಪಿ: ಮಲ್ಪೆಯಲ್ಲಿ (Malpe)  ಕಳೆದ ಮೂರು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ7 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು (Bangladesh Citizen) ಉಡುಪಿ ಪೊಲೀಸರು ಬಂಧಿಸಿದ್ದಾರೆ.

    ಹಕೀಂ ಅಲಿ, ಸುಜೋನ್, ಇಸ್ಮಾಯಿಲ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್, ಕಾಜೋಲ್, ಉಸ್ಮಾನ್ ಬಂಧಿತರು. ಮೀನುಗಾರಿಕಾ ಕಾರ್ಮಿಕರಾಗಿ ಉದ್ಯೋಗ ಆರಿಸಿಕೊಂಡು ಬಂದಿದ್ದ ಬಾಂಗ್ಲಾದೇಶೀಯರನ್ನು ಮಲ್ಪೆ ವಡಬಾಂಡೇಶ್ವರ ಬಸ್ ನಿಲ್ದಾಣ ಬಳಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪೈಕಿ ಉಸ್ಮಾನ್ ಕರೆತಂದು ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದ. ಆರೋಪಿಗಳು ಸಿಕ್ಕಿಂನಲ್ಲಿ ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿದ್ದರು.

     

    ಸಿಕ್ಕಿಬಿದ್ದಿದ್ದು ಹೇಗೆ?
    ಬಂಧನಕ್ಕೆ ಒಳಗಾಗಿರುವ ಮಾಣಿಕ್‌ ಹುಸೈನ್‌ ನಕಲಿ ಪಾಸ್‌ಪೋರ್ಟ್‌ ಬಳಸಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈ ಪರಾರಿಯಾಗಲು ಯತ್ನಿಸಿದ್ದ. ವಿಮಾನ‌ ನಿಲ್ದಾಣದಲ್ಲಿ ದಾಖಲಾತಿ ಪರಿಶೀಲಿಸುವ ಸಂದರ್ಭದಲ್ಲಿ ಅನುಮಾನಗೊಂಡ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಈ ವೇಳೆ ಆತ ಅಕ್ರಮವಾಗಿ ಬಾಂಗ್ಲಾದೇಶದಿಂದ ನುಸುಳಿ ನಕಲಿ ಆಧಾರ್‌ ಕಾರ್ಡ್‌, ಪಾಸ್‌ಪೋರ್ಟ್‌ ಪಡೆದ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ವಿಮಾನ ನಿಲ್ದಾಣದ ಅಧಿಕಾರಿಗಳು ಈತನ ಬಗ್ಗೆ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈತನನ್ನು ಬಂಧಿಸಿದ ಬಳಿಕ ಈತನೊಂದಿಗೆ ಮತ್ತಷ್ಟು ಜನ ಬಾಂಗ್ಲಾದೇಶಿ ಪ್ರಜೆಗಳು ದೇಶದೊಳಗೆ ನುಸುಳಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈತ ನೀಡಿದ ಮಾಹಿತಿ ಆಧಾರದಲ್ಲಿ ಮತ್ತೆ 6 ಮಂದಿಯನ್ನು ಉಡುಪಿಯ (Udupi) ಮಲ್ಪೆ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಯುತ್ತಿದೆ.

  • ಮಂಗಳೂರು ಏರ್‌ಪೋರ್ಟ್‌ನಲ್ಲಿ ಲೈಟ್‌ ಪ್ರಾಬ್ಲಂ – ಮುಂಬೈನಿಂದ ಬಂದಿದ್ದ ವಿಮಾನ ಲ್ಯಾಂಡ್‌ ಆಗದೇ ವಾಪಸ್‌

    ಮಂಗಳೂರು ಏರ್‌ಪೋರ್ಟ್‌ನಲ್ಲಿ ಲೈಟ್‌ ಪ್ರಾಬ್ಲಂ – ಮುಂಬೈನಿಂದ ಬಂದಿದ್ದ ವಿಮಾನ ಲ್ಯಾಂಡ್‌ ಆಗದೇ ವಾಪಸ್‌

    ಮಂಗಳೂರು: ಮಂಗಳೂರು ಏರ್ಪೋರ್ಟ್ (Mangaluru Airport) ರನ್ ವೇಯಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಮುಂಬೈನಿಂದ ಆಗಮಿಸಿದ ವಿಮಾನ ಲ್ಯಾಂಡ್‌ ಆಗದೇ ವಾಪಸ್‌ ಹೋಗಿದೆ.

    ವಿದ್ಯುತ್ ವೈಫಲ್ಯದಿಂದ ಮಂಗಳೂರು ಏರ್ಪೋರ್ಟ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಯಿತು. ರನ್ ವೇ ದೀಪಗಳಲ್ಲಿ ತಾಂತ್ರಿಕ ತೊಂದರೆಯಿಂದ ಲೈಟ್ಸ್ ಆಫ್ ಆಯಿತು. ಇದರಿಂದ ಮುಂಬೈ ವಿಮಾನ ವಾಪಸ್‌ ಹೋಗಿ ಕೇರಳದ ಕಣ್ಣೂರಿನ ಏರ್ಪೋರ್ಟ್‌ನಲ್ಲಿ ಲ್ಯಾಂಡ್‌ ಆಗಿದೆ. ಇದನ್ನೂ ಓದಿ: ಕೊಪ್ಪಳದಲ್ಲಿ ಭೀಕರ ಅಪಘಾತಕ್ಕೆ ಕಾರು ಅಪ್ಪಚ್ಚಿ – ಸ್ಥಳದಲ್ಲೇ 6 ಮಂದಿ ದುರ್ಮರಣ

    ಎಟಿಸಿ ಸೂಚನೆ ಹಿನ್ನೆಲೆ ಕೇರಳದ ಕಣ್ಣೂರಿಗೆ ವಿಮಾನ ವಾಪಾಸ್ ಆಯಿತು. ತಾಂತ್ರಿಕ ಸಮಸ್ಯೆ ಸರಿಪಡಿಸುವ ವರೆಗೆ ಮಂಗಳೂರು ಏರ್ಪೋರ್ಟ್‌ನಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ. ತಾಂತ್ರಿಕ ಸಮಸ್ಯೆ ಸರಿಪಡಿಸಿ ಮತ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಏರ್‌ಪೋರ್ಟ್ ಸಿಬ್ಬಂದಿ ತಾಂತ್ರಿಕ ಸಮಸ್ಯೆ ಸರಿಪಡಿಸುವ ಕೆಲಸ ಕೈಗೊಂಡಿದ್ದಾರೆ.

    ಮುಂಬೈನಿಂದ ಬಂದಿದ್ದ ಇಂಡಿಗೋ 6E5188 ವಿಮಾನ ಕಣ್ಣೂರಿಗೆ ಡೈವರ್ಟ್ ಆಯಿತು. ಬಹರೈನ್‌ಗೆ ತೆರಳಬೇಕಿದ್ದ ಏರ್ ಇಂಡಿಯಾ IX 789 ಸಂಚಾರ ವಿಳಂಬವಾಯಿತು. ಚೆನ್ನೈ ಹಾಗೂ ಬೆಂಗಳೂರಿನಿಂದ ಬರಬೇಕಿದ್ದ ವಿಮಾನಗಳ ಲ್ಯಾಂಡಿಂಗ್ ಕೂಡ ವಿಳಂಬವಾಗಿದೆ. ಇದನ್ನೂ ಓದಿ: ನೂತನ ಸಚಿವರಿಗೆ ಟಾರ್ಗೆಟ್‌ ಕೊಟ್ಟ ಸಿಎಂ

  • ಮಂಗಳೂರು ಏರ್ ಪೋರ್ಟ್ ರ್‍ಯಾಪಿಡ್ ಪಿಸಿಆರ್ ಟೆಸ್ಟ್ – ಅನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ ದ.ಕ. ಡಿಸಿ

    ಮಂಗಳೂರು ಏರ್ ಪೋರ್ಟ್ ರ್‍ಯಾಪಿಡ್ ಪಿಸಿಆರ್ ಟೆಸ್ಟ್ – ಅನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ ದ.ಕ. ಡಿಸಿ

    ಮಂಗಳೂರು: ಭಾರತದಿಂದ ಯುಎಇಗೆ ತೆರಳುವ ವಿಮಾನಕ್ಕೆ ಹಲವು ತಿಂಗಳು ನಿಷೇಧ ಹೇರಿದ್ದ ಯುಎಇ ಸರ್ಕಾರ ಆಗಸ್ಟ್ 5ರಂದು ನಿಷೇಧ ಹಿಂತೆಗೆದು ಹಲವು ಷರತ್ತು ಗಳೊಂದಿಗೆ ಪ್ರಯಾಣಿಸಲು ಅನುಮತಿ ನೀಡಿತ್ತು.

    ಯುಎಇ ರೆಸಿಡೆನ್ಸ್ ವಿಸಾ ಹೊಂದಿರಬೇಕು, ಎರಡು ವ್ಯಾಕ್ಸೀನೇಷನ್ ಪಡೆದಿರಬೇಕು, 48 ಘಂಟೆ ಮುಂಚೆ ಪಿಸಿಆರ್ ಟೆಸ್ಟ್ ನಲ್ಲಿ ಕೊರೊನಾ ನೆಗೆಟಿವ್ ರಿಪೋರ್ಟ್ ಪಡೆದಿರಬೇಕು ಎಂಬ ಷರತ್ತಿನೊಂದಿಗೆ ಪ್ರಯಾಣ ಹೊರಡುವ ಮುನ್ನ ವಿಮಾನ ನಿಲ್ದಾಣದಲ್ಲಿಯೂ ರ್‍ಯಾಪಿಡ್ ಆರ್ಟಿ ಪಿಸಿಆರ್ ಟೆಸ್ಟ್ ನಡೆಸಬೇಕು ಎಂಬ ಹೊಸ ಷರತ್ತು ಸೇರ್ಪಡೆ ಮಾಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ರ್‍ಯಾಪಿಡ್ ಆರ್ಟಿ ಪಿಸಿಆರ್ ಟೆಸ್ಟ್ ವ್ಯವಸ್ಥೆ ಇಲ್ಲದ ಕಾರಣ ಮಂಗಳೂರಿನಿಂದ ಯುಎಇಗೆ ವಿಮಾನಯಾನ ಆರಂಭವಾಗಿಲ್ಲ. ಕರಾವಳಿಯ ಕರ್ನಾಟಕದ ಸಾವಿರಾರು ಅನಿವಾಸಿಗಳು ಯುಎಇಗೆ ತೆರಳಲು ಬೆಂಗಳೂರು, ಮುಂಬೈ ವಿಮಾನ ನಿಲ್ದಾಣದ ಮೊರೆ ಹೋಗಬೇಕಾಗಿತ್ತು. ಇದನ್ನೂ ಓದಿ: ಮೂರನೇ ದೀರ್ಘ ಭಾಷಣ ಮಾಡಿದ ಪ್ರಧಾನಿ ಮೋದಿ

    ಅನಿವಾಸಿ ಕನ್ನಡಿಗರ ಈ ಸಮಸ್ಯೆಗಳ ಕುರಿತು ಕನ್ನಡಿಗಾಸ್ ಫೆಡರೇಷನ್ ಸಂಚಾಲಕರಾದ ಹಿದಾಯತ್ ಅಡ್ಡೂರ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿರವರ ಗಮನಕ್ಕೆ ತಂದಾಗ ಅತೀ ಶೀಘ್ರದಲ್ಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಅವರು ನೀಡಿದ ಭರವಸೆಯಂತೆ ಇಂದು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ರ್‍ಯಾಪಿಡ್ ಆರ್ಟಿ ಪಿಸಿಆರ್ ಟೆಸ್ಟ್ ಮಾಡುವ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಶೀಘ್ರವೇ ಮಂಗಳೂರು ಮೂಲಕ ಯುಎಇ ವಿಮಾನಯಾನ ಆರಂಭಗೊಳ್ಳಲಿದೆ.

    ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸ್ಪಂದನೆಗೆ ಹಿದಾಯತ್ ಅಡ್ಡೂರ್, ಕೆಎನ್‍ಆರ್‍ಐ ಯುಎಇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಇ ಮೂಳೂರು, ಬಿ.ಡಬ್ಲ್ಯು.ಎಫ್ ಅಧ್ಯಕ್ಷ ಮಹಮ್ಮದ್ ಆಲಿ ಉಚ್ಚಿಲ್, ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಸಲೀಂ, ಕನ್ನಡ ಮಿತ್ರರು ಯುಎಇ ಅಧ್ಯಕ್ಷ ಶಶಿಧರ ನಾಗರಾಜಪ್ಪ ಹಾಗೂ ಇತರ ಕನ್ನಡ ಪರ ಸಂಘಟನೆಗಳು, ಕನ್ನಡಿಗರು ಧನ್ಯವಾದ ವ್ಯಕ್ತಪಡಿಸಿದ್ದಾರೆ.

  • ಮಂಗಳೂರಿನಿಂದ ಮೈಸೂರಿಗೆ ವಿಮಾನದಲ್ಲಿ ೧ ಗಂಟೆಯಲ್ಲಿ ತಲುಪಿ!

    ಮಂಗಳೂರಿನಿಂದ ಮೈಸೂರಿಗೆ ವಿಮಾನದಲ್ಲಿ ೧ ಗಂಟೆಯಲ್ಲಿ ತಲುಪಿ!

    – ಮಂಗಳೂರು – ಮೈಸೂರು ಅಲಯನ್ಸ್‌ ಏರ್‌ ವಿಮಾನ ಸೇವೆ ಆರಂಭ

    ಮಂಗಳೂರು: ಮಂಗಳೂರು – ಮೈಸೂರು ನಡುವಿನ ವಿಮಾನಯಾನ ಇಂದು ಆರಂಭವಾಗಿದೆ. ಮೈಸೂರಿನಿಂದ ಅಲಯನ್ಸ್ ಏರ್‌ನ ಮೊದಲ ವಿಮಾನ ಶುಕ್ರವಾರ ಮಂಗಳೂರು ಏರ್‌ಪೋರ್ಟ್‌ಗೆ ಬಂದಿಳಿಯಿತು.

    ಅಲಯನ್ಸ್ ಏರ್‌ನ ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ವಾಟರ್‌ ಸೆಲ್ಯೂಟ್ ಮೂಲಕ ವಿಮಾನಕ್ಕೆ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕರಾದ ವಿ.ವಿ.ರಾವ್‌, ಅದಾನಿ ಸಂಸ್ಥೆಯ ಅಧಿಕಾರಿಗಳು ಹಾಜರಿದ್ದರು.

    ಉಡಾನ್‌ ಯೋಜನೆಯಡಿ ಅಲಯನ್ಸ್‌ ಏರ್‌ ವಿಮಾನ ವಾರದಲ್ಲಿ ನಾಲ್ಕು ದಿನ ಮೈಸೂರು-ಮಂಗಳೂರು ನಡುವೆ ಸಂಚರಿಸಲಿದೆ. ಬುಧವಾರ, ಶುಕ್ರವಾರ, ಶನಿವಾರ, ರವಿವಾರ ಈ ಸೇವೆ ಲಭ್ಯವಾಗಲಿದೆ.

    ಮೈಸೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಸದ ಪ್ರತಾಪ್‌ ಸಿಂಹ ಅವರು ವಿಮಾನ ಸೇವೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಖ ಆರ್‌. ಮಂಜುನಾಥ್‌ ಅವರು, ಹಲವು ತಿಂಗಳ ಹಿಂದೆಯೇ ಈ ಸೇವೆ ಆರಂಭಿಸಲು ಬೇಡಿಕೆ ಇತ್ತು. ಆದರೆ ಕೋವಿಡ್‌ 19 ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸೇವೆ ಆರಂಭವಾಗಿರಲಿಲ್ಲ. ಈಗ ಸೋಂಕು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಆರಂಭವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಈ ವಿಮಾನ ಸೇವೆಯ ಸವಿನೆನಪಿಗಾಗಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು.

    ಮಂಗಳೂರು- ಮೈಸೂರು ನಡುವೆ 255 ಕಿ.ಮೀ ದೂರವಿದ್ದು, ಬಸ್ ಮೂಲಕ ಸಂಚಾರಕ್ಕೆ ಸುಮಾರು ಆರರಿಂದ ಏಳು ಗಂಟೆ ಕಾಲ ಬೇಕಾಗುತ್ತದೆ. ಕಾರಲ್ಲಿ ಸಂಚರಿಸುವುದಿದ್ದರೂ 5 ಗಂಟೆ ಬೇಕಾಗುತ್ತದೆ.

    ಆದರೆ ಇದೀಗ ವಿಮಾನಯಾನ ಆರಂಭವಾದ ಕಾರಣ ಕೇವಲ ಒಂದು ಗಂಟೆಯಲ್ಲಿ ಬಂದರು ನಗರಿ ಮಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರನ್ನು ತಲುಪಬಹುದಾಗಿದೆ. 11.20ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 12.30 ಕ್ಕೆ‌ ತಲುಪಿದೆ. ಅದೇ ವಿಮಾನ 12.55ಕ್ಕೆ ಹೊರಟು ಮಧ್ಯಾಹ್ನ 1.55ಕ್ಕೆ‌ಮೈಸೂರು ತಲುಪಲಿದೆ.

  • ಮಂಗಳೂರು ಏರ್‌ಪೋರ್ಟ್‌ಗೆ ‘ಕೋಟಿ-ಚೆನ್ನಯ್ಯ’ ಹೆಸರಿಡಲು ಸಿಎಂಗೆ ಮನವಿ

    ಮಂಗಳೂರು ಏರ್‌ಪೋರ್ಟ್‌ಗೆ ‘ಕೋಟಿ-ಚೆನ್ನಯ್ಯ’ ಹೆಸರಿಡಲು ಸಿಎಂಗೆ ಮನವಿ

    – ನಾಮಕರಣಕ್ಕೆ‌ ಮನವಿ‌ ಮಾಡಿದ ಕರಾವಳಿ ಶಾಸಕರ ನಿಯೋಗ

    ಮಂಗಳೂರು: ತುಳುನಾಡಿನ ವೀರಪುರುಷರಾದ ಅವಳಿ ಸಹೋದರರಾದ ಕೋಟಿ-ಚೆನ್ನಯ್ಯರ ಹೆಸರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಕರಾವಳಿಯ ಶಾಸಕರು ಒತ್ತಾಯಿಸಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅವಿಭಜಿತ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯ ಶಾಸಕರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.

    ತುಳುನಾಡಿನಲ್ಲಿ ಇತಿಹಾಸ ಸೃಷ್ಟಿಸಿ ಬಾಳಿ ಬದುಕಿದ ವೀರಪುರುಷರಾದ ಕೋಟಿ-ಚೆನ್ನಯ್ಯನವರು ಇಂದಿಗೂ ಸಾವಿರಾರು ಕಡೆಗಳಲ್ಲಿ ಆರಾಧನೆಗೊಳ್ಳುತ್ತಿದ್ದಾರೆ. ಇವರ ಹೆಸರನ್ನು ಈ ವಿಮಾನ ನಿಲ್ದಾಣಕ್ಕೆ ಇಡೋದ್ರಿಂದ ದೇಶ ವಿದೇಶಗಳಲ್ಲಿ ಈ ಅವಳಿ ವೀರ ಪುರುಷರ ಹೆಸರು ಅಜರಾಮರವಾಗಿ ಉಳಿಯುವಂತಾಗುತ್ತದೆ. ವಿಶ್ವದೆಲ್ಲೆಡೆ ಇರುವ ತುಳುವರಿಗೂ ಇವರ ಹೆಸರಿಡೋದ್ರಿಂದ ಭಾವನಾತ್ಮಕ ಸಂಬಂಧ ಇರುತ್ತದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ‌ ಮುಖ್ಯಮಂತ್ರಿ ಮನವಿ ಸಲ್ಲಿಸಬೇಕೆಂದು ನಿಯೋಗದ ಸದಸ್ಯರು ಒತ್ತಾಯಿಸಿದರು.

    ನಿಯೋಗದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಸಭೆಯ ಮುಖ್ಯ ಸಚೇತಕರಾದ ಸುನೀಲ್ ಕುಮಾರ್ ಕಾರ್ಕಳ, ಶಾಸಕರಾದ ಸಂಜೀವ ಮಠಂದೂರು, ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಉಡುಪಿ ಶಾಸಕ ರಘುಪತಿ ಭಟ್ ಉಪಸ್ಥಿತರಿದ್ದರು.

  • ಮಂಗ್ಳೂರು ಬಾಂಬರ್ ಆದಿತ್ಯ ರಾವ್‌ನನ್ನು ಎನ್‍ಐಎ ವಶಕ್ಕೆ ಪಡೆಯುತ್ತಾ..?

    ಮಂಗ್ಳೂರು ಬಾಂಬರ್ ಆದಿತ್ಯ ರಾವ್‌ನನ್ನು ಎನ್‍ಐಎ ವಶಕ್ಕೆ ಪಡೆಯುತ್ತಾ..?

    – ಕೇಂದ್ರಕ್ಕೆ ವರದಿ ಸಲ್ಲಿಸಿದ ತನಿಖಾ ತಂಡ
    – ಸ್ಥಳ ಮಹಜರು ವೇಳೆ ಸತ್ಯ ಬಾಯ್ಬಿಟ್ಟ ಆದಿತ್ಯ

    ಮಂಗಳೂರು: ಭಯೋತ್ಪಾದಕ ಕೃತ್ಯ ಎಂದೇ ಪರಿಗಣಿತವಾಗಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಂಗಳೂರು ಪೊಲೀಸರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಆದಿತ್ಯ ರಾವ್ ಬಗ್ಗೆ ಕೇಂದ್ರಕ್ಕೆ ವರದಿ ರವಾನೆಯಾಗಿದೆ. ಪೊಲೀಸರ ಪ್ರಾಥಮಿಕ ವರದಿಯನ್ನು ಕೇಂದ್ರ ಗೃಹ ಇಲಾಖೆ ಪರಿಶೀಲಿಸಲಿದ್ದು, ಎನ್‍ಐಎ ತನಿಖೆ ಅಗತ್ಯವಿದೆಯೇ ಅನ್ನುವ ಬಗ್ಗೆ ನಿರ್ಧರಿಸಲಿದೆ.

    ಬಾಂಬರ್ ಆದಿತ್ಯನನ್ನು ಪೊಲೀಸರು ಮಂಗಳೂರು ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಆರೋಪಿ ಆದಿತ್ಯನನ್ನು ವಿಚಾರಣೆ ನಡೆಸಿದ ಪೊಲೀಸರು, ಸಮಗ್ರ ವರದಿಯನ್ನು ರೆಡಿ ಮಾಡಿದ್ದರು. ಬಾಂಬ್ ತಯಾರಿಕೆ, ಅದಕ್ಕೆ ಬಳಸಿದ ವಸ್ತುಗಳು, ಏರ್ ಪೋರ್ಟ್ ಅಧಿಕಾರಿಗಳು ಟಾರ್ಗೆಟ್ ಆಗಿರುವುದು ಇತ್ಯಾದಿ ವಿಚಾರಗಳ ಬಗ್ಗೆ ಆರೋಪಿ ನೀಡಿದ್ದ ಮಾಹಿತಿಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇಡೀ ಪ್ರಕರಣದ ಕುರಿತ ವರದಿಯನ್ನು ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳು ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ಚೆನ್ನೈನಿಂದ ರಾಸಾಯನಿಕ ತರಿಸಿದ್ದ ಬಾಂಬರ್- ಸ್ಫೋಟಕ ವಿಚಾರ ಬಾಯ್ಬಿಟ್ಟ ಆದಿತ್ಯ

    ತನಿಖಾಧಿಕಾರಿ ಮಂಗಳೂರು ಉತ್ತರ ಎಸಿಪಿ ಕೆ.ಯು ಬೆಳ್ಳಿಯಪ್ಪ ರೆಡಿ ಮಾಡಿದ್ದ ವಿಚಾರಣಾ ವರದಿ ರಾಜ್ಯ ಗೃಹ ಇಲಾಖೆಗೆ ಸಲ್ಲಿಕೆಯಾಗಿದ್ದು ಅಲ್ಲಿಂದ ಕೇಂದ್ರ ಸರ್ಕಾರಕ್ಕೆ ರವಾನೆಯಾಗಿದೆ. ಆರೋಪಿ ನೀಡಿರುವ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇನ್ನಷ್ಟು ತನಿಖೆ ಅಗತ್ಯವಿದ್ದರೆ ವಿಚಾರಣೆಗೆ ಪ್ರತ್ಯೇಕ ತಂಡವನ್ನು ಕಳಿಸಿಕೊಡುವ ಸಾಧ್ಯತೆಯಿದೆ.

    ಅಗತ್ಯ ಕಂಡು ಬಂದಲ್ಲಿ ಭಯೋತ್ಪಾದಕ ಕೃತ್ಯಗಳ ಬಗ್ಗೆ ತನಿಖೆ ನಡೆಸುವ ರಾಷ್ಟ್ರೀಯ ತನಿಖಾ ದಳ ಆರೋಪಿಯನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಹೀಗಾಗಿ ಮಂಗಳೂರು ಪೊಲೀಸರು ನೀಡಿರುವ ರಿಪೋರ್ಟ್ ಮಹತ್ವದ್ದಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತೆಗೆದುಕೊಳ್ಳುವ ನಿರ್ಣಯದ ಮೇಲೆ ಪ್ರಕರಣ ಯಾವ ರೀತಿಯ ತಿರುವು ಪಡೆಯುತ್ತೆ ಅನ್ನೋದು ನಿರ್ಧಾರವಾಗಲಿದೆ. ಇದನ್ನೂ ಓದಿ: ಮಂಗಳೂರು ಬಾಂಬರ್ ಮೇಲೆ ಮತ್ತೊಂದು ಕೇಸ್ ದಾಖಲು

    ಭಯೋತ್ಪಾದಕರಿಗೆ ಬಳಸುವಂತಹ ಕಠಿಣ ಕಾನೂನುಗಳನ್ನು ಪೊಲೀಸರು ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ತಂಡಗಳು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಿದೆ. ಇದೇ ವೇಳೆ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ಕೊಂಡೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಜೀವಂತ ಬಾಂಬ್ ಪತ್ತೆ ವಿಚಾರ ಇಡೀ ದೇಶದ ಗಮನ ಸೆಳೆದ ಪ್ರಕರಣವಾಗಿದ್ದು ಸಹಜವಾಗೇ ಆದಿತ್ಯ ರಾವ್ ಹೈಪ್ರೊಫೈಲ್ ಆರೋಪಿಯಾಗಿ ಬದಲಾಗಿದ್ದಾನೆ.

    ಆರೋಪಿ ಉತ್ತರದಿಂದ ಅಚ್ಚರಿಗೊಂಡ ಪೊಲೀಸರು:
    ಪೊಲೀಸರು ಸ್ಥಳ ಮಹಜರು ನಡೆಸಿದ ವೇಳೆ ತೀರಾ ಸಹಜವಾಗಿ ಆರೋಪಿ ಉತ್ತರ ನೀಡುತ್ತಿದ್ದುದು ಪೊಲೀಸರನ್ನೇ ಅಚ್ಚರಿಗೊಳಿಸಿತ್ತು. ಬಾಂಬ್ ಇದ್ದ ಬ್ಯಾಗ್ ಇಟ್ಟಿದ್ದ ಟಿಕೆಟ್ ಕೌಂಟರ್ ಬಳಿಯ ಕುರ್ಚಿಯನ್ನು ತೋರಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾನೆ. ಪೊಲೀಸರ ಜೊತೆ ತುಳುವಿನಲ್ಲಿಯೇ ಸಂಭಾಷಣೆ ನಡೆಸುತ್ತಾ ಆಟೋ ಇಳಿದು ಎಸ್ಕಲೇಟರ್ ಮೂಲಕ ಮೇಲಿಂದ ಹತ್ತಿ ಬಂದಿದ್ದನ್ನು ತೋರಿಸಿದ್ದಾನೆ. ಮುಖಕ್ಕೆ ಮಾಸ್ಕ್ ಹಾಕಿದ್ದರೂ, ಯಾವುದನ್ನೂ ಆಲಕ್ಷಿಸದೆ ಪೊಲೀಸರ ಪ್ರಶ್ನೆಗಳಿಗೆ ಉತ್ತರ ನೀಡಿದ್ದನು. ಬಳಿಕ ಏರ್ ಪೋರ್ಟ್ ಬಳಿಯಿಂದ ಆಟೋ ಮೂಲಕ ಕೆಂಜಾರು ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿನ ಸೆಲೂನ್ ಬಳಿಯಿದ್ದ ಬ್ಯಾಗ್ ತೆಗೆದುಕೊಂಡಿದ್ದನ್ನೂ ಉಲ್ಲೇಖಿಸಿದ್ದಾನೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್

    ಪೊಲೀಸರು ಈಗಾಗಲೇ ಆರೋಪಿಯನ್ನು ಹತ್ತು ದಿನಗಳ ಕಸ್ಟಡಿಗೆ ಪಡೆದಿದ್ದು ತನಿಖೆಯನ್ನು ಚೆನ್ನೈಗೆ ವಿಸ್ತರಿಸಲಿದ್ದಾರೆ. ಚೆನ್ನೈನಿಂದ ಬಾಂಬ್ ತಯಾರಿಕೆಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿದ್ದು, ಆ ಬಗ್ಗೆ ಪೊಲೀಸರು ಅಲ್ಲಿಗೆ ಕೊಂಡೊಯ್ದು ವಿಚಾರಣೆ ನಡೆಸಲಿದ್ದಾರೆ. ಒಟ್ಟಿನಲ್ಲಿ ಆದಿತ್ಯ ರಾವ್ ಸಂಪೂರ್ಣ ಜಾತಕ ಈಗ ಪೊಲೀಸರ ಕೈಸೇರಿದ್ದು, ಇನ್ನು ಯಾವ ರೀತಿಯ ತನಿಖೆಗೆ ಒಳಪಡಲಿದ್ದಾನೆ ಅನ್ನೋದು ಕುತೂಹಲ ಅಷ್ಟೇ. ಇದನ್ನೂ ಓದಿ: ಮಂಗ್ಳೂರು ಸ್ಫೋಟ ಪ್ರಕರಣ- ಪಬ್ಲಿಕ್ ಟಿವಿಗೆ ಶಂಕಿತ ಉಗ್ರನ ವಿಡಿಯೋಗಳು ಲಭ್ಯ

  • ಮಂಗಳೂರು ಬಾಂಬರ್ ಮೇಲೆ ಮತ್ತೊಂದು ಕೇಸ್ ದಾಖಲು

    ಮಂಗಳೂರು ಬಾಂಬರ್ ಮೇಲೆ ಮತ್ತೊಂದು ಕೇಸ್ ದಾಖಲು

    ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಆದಿತ್ಯ ರಾವ್ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ.

    ಬಜ್ಪೆ ವಿಮಾನ ನಿಲ್ದಾಣದ ಸಿಬ್ಬಂದಿ ಅಬ್ದುಲ್ ಹಮೀದ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಆದಿತ್ಯ ರಾವ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಜ.20ರ ಮಧ್ಯಾಹ್ನ 2.30ಕ್ಕೆ ಆದಿತ್ಯರಾವ್ ಇಂಡಿಗೋ ಮ್ಯಾನೇಜರ್ ಅವರಿಗೆ, ಹೈದರಾಬಾದಿಗೆ ತೆರಳುತ್ತಿರುವ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬೆದರಿಕೆ ಕರೆ ಮಾಡಿದ್ದ. ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ಬಾಂಬರ್ ಆದಿತ್ಯರಾವ್ ಮಾಸ್ಟರ್ ಪ್ಲಾನ್ ಕೇಳಿ ದಂಗಾದ ಬೆಂಗಳೂರು ಪೊಲೀಸರು

    ಮಧ್ಯಾಹ್ನ 2.15ಕ್ಕೆ ಹೈದರಾಬಾದ್‍ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೋ ವಿಮಾನ ಮರಳಿ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್‍ಗೆ ತೆರಳಬೇಕಿತ್ತು. ಚೆಕ್ ಇನ್ ಆಗಿ ಎಲ್ಲ ಪ್ರಯಾಣಿಕರನ್ನು ವಿಮಾನದ ಒಳಗಡೆ ಕಳುಹಿಸಲಾಗಿತ್ತು.

    ವಿಮಾನ ಟೇಕಾಫ್ ಆಗಲು ಸಿದ್ಧತೆ ನಡೆಯುತ್ತಿದ್ದಾಗ ಇಂಡಿಗೋ ಕಚೇರಿಗೆ ದೂರವಾಣಿ ಕರೆ ಬಂದಿತ್ತು. ಹೈದರಾಬಾದ್‍ಗೆ ತೆರಳುವ ಇಂಡಿಗೋ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಆಗಂತುಕನೊಬ್ಬ ಕರೆ ಮಾಡಿ ಬೆದರಿಸಿದ್ದ.

    ಬೆದರಿಕೆ ಕರೆ ಬಂದ ಬಗ್ಗೆ ಸಿಬ್ಬಂದಿ ನಿಲ್ದಾಣದ ಭದ್ರತಾ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಕೂಡಲೇ ಜಾಗೃತರಾದ ನಿಲ್ದಾಣದ ಭದ್ರತಾ ಸಿಬ್ಬಂದಿ ಇಂಡಿಗೋ ವಿಮಾನ ಸಂಚಾರಕ್ಕೆ ತಡೆ ನೀಡಿ ಎಲ್ಲ ಪ್ರಯಾಣಿಕರನ್ನು ಮರಳಿ ಟರ್ಮಿನಲ್‍ಗೆ ಕರೆತಂದಿದ್ದರು.

    ವಿಮಾನದಲ್ಲಿದ್ದ ಪ್ರತಿಯೊಂದು ಬ್ಯಾಗ್‍ನ್ನು ಹೊರತೆಗೆದು ಕೂಲಂಕಷವಾಗಿ ತಪಾಸಣೆ ಮಾಡಲಾಯಿತು. ಸಂಜೆ 4 ಗಂಟೆಗೆ ಆರಂಭಗೊಂಡ ತಪಾಸಣೆ ರಾತ್ರಿ 7.30ರವರೆಗೂ ನಡೆದಿತ್ತು. ತಪಾಸಣೆ ಪೂರ್ಣಗೊಂಡ ಬಳಿಕ ಇದೊಂದು ಹುಸಿ ಕರೆ ಎಂಬ ತೀರ್ಮಾನಕ್ಕೆ ಭದ್ರತಾ ಸಿಬ್ಬಂದಿ ಬಂದ ನಂತರ ಇಂಡಿಗೋ ವಿಮಾನ ಹೈದರಾಬಾದಿಗೆ ಪ್ರಯಾಣ ಬೆಳೆಸಿತ್ತು.