Tag: maneye mantralaya

  • ‘ಮನೆಯೇ ಮಂತ್ರಾಲಯ’ ಇಂಪ್ಯಾಕ್ಟ್- ಪಡಿತರ ಸಿಗದೆ ಪರದಾಡುತ್ತಿದ್ದ ಸಹೋದರಿಯರಿಗೆ ಸಹಾಯ

    ‘ಮನೆಯೇ ಮಂತ್ರಾಲಯ’ ಇಂಪ್ಯಾಕ್ಟ್- ಪಡಿತರ ಸಿಗದೆ ಪರದಾಡುತ್ತಿದ್ದ ಸಹೋದರಿಯರಿಗೆ ಸಹಾಯ

    ರಾಯಚೂರು: ಪಡಿತರ ಸಿಗದೆ ಪರದಾಡುವ ಸ್ಥಿತಿ ಎದುರಿಸುತ್ತಿದ್ದ ಜಿಲ್ಲೆಯ ದೇವದುರ್ಗ ತಾಲೂಕಿನ ಬೋಮ್ಮನಹಳ್ಳಿ ಗ್ರಾಮದ ಇಬ್ಬರೂ ಸಹೋದರಿಯರಿಗೆ ಇಂದು ಗ್ರಾಮ ಪಂಚಾಯಿತಿ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯ ‘ಮನೆಯೇ ಮಂತ್ರಾಲಯ’ಕ್ಕೆ ಸ್ಪಂಧಿಸಿದ ಹೊಸುರು ಸಿದ್ದಾಪುರ ಪಿಡಿಒ ಶಂಕರ್, ಗ್ರಾ.ಪಂ ಸದಸ್ಯ ಶಿವರಾಜ್ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಕರೆ ಮಾಡಿದ್ದರಿಂದ ಆಹಾರ ಕಿಟ್ ಹಾಗೂ ಪಡಿತರ ಸಿಗುತ್ತಿರುವುದಕ್ಕೆ ಸಹೋದರಿಯರು ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ.

    ತಂದೆ, ತಾಯಿ ಹಾಗೂ ಸಹೋದರ ದುಡಿಯಲು ಮುಂಬೈಗೆ ಗುಳೆ ಹೋಗಿದ್ದು, ಮನೆಯಲ್ಲಿ ಸಹೋದರಿಯರದ ದೇವಮ್ಮ, ಮಲ್ಲಮ್ಮ ಮಾತ್ರ ಇದ್ದಾರೆ. ಲಾಕ್ ಡೌನ್ ನಿಂದ ಕೆಲಸವು ಇಲ್ಲದೆ ಊಟಕ್ಕೂ ಕಷ್ಟವಾಗಿತ್ತು. ಅಲ್ಲದೆ ಪಡಿತರ ಚೀಟಿ ಯಲ್ಲಿ ಭಾವಚಿತ್ರವಿಲ್ಲದ ಕಾರಣ ಪಡಿತರವೂ ಸಿಕ್ಕಿರಲಿಲ್ಲ. ಈಗ ಸಮಸ್ಯೆ ಬಗೆಹರಿದಿದ್ದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನೀರಿಕ್ಷಕ ಬಸವರಾಜ್ ಸಿಂಗ್ ಸಹೊದರಿಯರಿಗೆ ಪಡಿತರ ನೀಡುವುದಾಗಿ ಭರವಸೆ ನೀಡಿದ್ದಾರೆ.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್: ಅಮ್ಮನಿಗಾಗಿ LLB ಮೊಟಕುಗೊಳಿಸಿದ್ದ ಯುವತಿಗೆ ಸಹಾಯ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್: ಅಮ್ಮನಿಗಾಗಿ LLB ಮೊಟಕುಗೊಳಿಸಿದ್ದ ಯುವತಿಗೆ ಸಹಾಯ

    ಉಡುಪಿ: ಲಾಕ್ ಡೌನ್‍ನಿಂದಾಗಿ ತಾನು ಅನುಭವಿಸುತ್ತಿರುವ ಕಷ್ಟವನ್ನು ಪಬ್ಲಿಕ್ ಟಿವಿ ಬಳಿ ತೋಡಿಕೊಂಡಿದ್ದ ಉಡುಪಿಯ ಯುವತಿಗೆ ಸಹಾಯ ಹಸ್ತ ದೊರೆತಿದೆ.

    ಜಿಲ್ಲೆಯ ಶನಯಾ ಎಂಬ ಯುವತಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುವ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದಳು. ಕರೆ ಮಾಡುತ್ತಲೇ ಕಣ್ಣೀರು ಹಾಕಿದ್ದ ಶನಯಾ, ತನ್ನ ಮೂರನೇ ವರ್ಷದಲ್ಲಿ ತಂದೆಯನ್ನು ಕಳೆದುಕೊಂಡು ಹುಟ್ಟಿನಿಂದಲೇ ಬಡತನದಿಂದ ಬೆಳೆದಿರುವುದಾಗಿ ತಿಳಿಸಿದ್ದಳು.

    ವರ್ಷದ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿರುವ ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ತನ್ನ ಎಲ್‍ಎಲ್‍ಬಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಾಳೆ ಅಂಗಡಿಯೊಂದರಲ್ಲಿ ತಿಂಗಳ ಸಂಬಳಕ್ಕೆ ದುಡಿಯುತ್ತಿದ್ದ ಈಕೆಗೆ ಲಾಕ್ ಡೌನ್ ಬಿಸಿತಟ್ಟಿದೆ. ಎರಡು ತಿಂಗಳಿನಿಂದ ಸಂಬಳ ಸಿಗದೇ ಕುಟುಂಬ ಕಂಗೆಟ್ಟಿತ್ತು.

     ಇದೀಗ ಪಬ್ಲಿಕ್ ಟಿವಿ ಮೊರೆ ಹೋಗಿದ್ದನ್ನು ಕಂಡ ಉಡುಪಿಯ ನಾಗೇಂದ್ರ ಕಾಮತ್, ಐದು ಸಾವಿರ ರೂಪಾಯಿ ನೀಡಿ ಕುಟುಂಬದ ಸಾಲದ ಹೊರೆಯನ್ನು ಇಳಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಅದಮಾರು ಮಠ ಸುಮಾರು ಒಂದು ತಿಂಗಳಿಗೆ ಆಗುವಷ್ಟು ದಿನಸಿ ವಸ್ತುಗಳನ್ನು ಪೂರೈಸಿದೆ. ಮುಂದೆ ಆಕೆ ವಿದ್ಯಾಭ್ಯಾಸ ಮಾಡುವುದಾದರೆ ಮೂರೂ ವರ್ಷ ಸಹಾಯ ಮಾಡುವುದಾಗಿ ಅದಮಾರು ಮಠದವರು ಭರವಸೆ ಕೊಟ್ಟಿದ್ದಾರೆ.

    ಯುವತಿ ಮತ್ತು ಆಕೆಯ ತಾಯಿ ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ. ರಾಜ್ಯ ಮತ್ತು ಹೊರ ದೇಶದಿಂದ ಪಬ್ಲಿಕ್ ಟಿವಿಗೆ ಹತ್ತಾರು ಕರೆಗಳು ಬಂದಿದ್ದು ಯುವತಿಗೆ ಆರ್ಥಿಕ, ಶೈಕ್ಷಣಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

    ಈ ಬಗ್ಗೆ ಮಾತನಾಡಿದ್ದ ಶನಯಾ, ತನ್ನ ಕಷ್ಟ ತೀರಿದ ನಂತರ ತನಗೊಂದು ಉದ್ಯೋಗ ಸಿಕ್ಕ ನಂತರ ನನ್ನ ಸುತ್ತಮುತ್ತಲೇ ಯಲ್ಲಿ ಯಾರೇ ಕಷ್ಟದಲ್ಲಿದ್ದರೂ ಅವರಿಗೆ ನನ್ನ ಕೈಲಾಗುವ ಸಹಾಯ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದಾರೆ.

  • ‘ಮನೆಯೇ’ ಮಂತ್ರಾಲಯದ ಕರೆಗೆ ಸ್ಪಂದನೆ – ನಾಲ್ಕು ಲಕ್ಷ ಮೌಲ್ಯದ ಆಹಾರ ಕಿಟ್‌ಗಳನ್ನು ವಿತರಿಸಿದ ಎಂ.ಆರ್ ಬ್ರದರ್ಸ್ ತಂಡ

    ‘ಮನೆಯೇ’ ಮಂತ್ರಾಲಯದ ಕರೆಗೆ ಸ್ಪಂದನೆ – ನಾಲ್ಕು ಲಕ್ಷ ಮೌಲ್ಯದ ಆಹಾರ ಕಿಟ್‌ಗಳನ್ನು ವಿತರಿಸಿದ ಎಂ.ಆರ್ ಬ್ರದರ್ಸ್ ತಂಡ

    ಕಾರವಾರ: ಲಾಕ್‍ಡೌನ್‍ನಿಂದ ಅದೆಷ್ಟೋ ಮಂದಿ ಕಷ್ಟಗಳನ್ನು ಅನುಭವಿಸುತ್ತಿದ್ದು, ಒಂದು ದಿನದ ತುತ್ತಿಗೂ ಕಷ್ಟಪಡುತ್ತಿದ್ದಾರೆ. ಹೀಗಾಗಿ ಇಂತಹ ಕಷ್ಟದಲ್ಲಿರುವ ಜನರಿಗೆ ಸ್ಪಂದಿಸಲು ಪಬ್ಲಿಕ್ ಟಿವಿ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮ ನಡೆಸುತ್ತಿದ್ದು, ಜನರು ಪ್ರತಿ ದಿನ ಕ್ರಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಸಹಾಯ ಪಡೆದಿದ್ದಾರೆ. ಈ ಕಾರ್ಯಕ್ರಮದ ಕರೆಗೆ ಸ್ಪಂದಿಸಿದ ಶಿರಸಿಯ ಎಂ.ಆರ್ ಬ್ರದರ್ಸ್ ತಂಡ ಬಡವರಿಗೆ ನಾಲ್ಕು ಲಕ್ಷ ರೂ. ಮೌಲ್ಯದ ಆಹಾರ ಕಿಟ್‍ಗಳನ್ನು ವಿತರಿಸಿ ನೆರವಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಗುಜುರಿ ವ್ಯಾಪಾರ ಮಾಡುತ್ತಿದ್ದ ನಾಗಪ್ಪ ಎಂಬವರು ಶುಕ್ರವಾರ ‘ಮನಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಸಹಾಯ ಬೇಡಿದ್ದರು. ಇದಕ್ಕೆ ಸ್ಪಂದಿಸಿದ ಪಬ್ಲಿಕ್ ಟಿವಿ ಅಭಿಮಾನಿಗಳು ಶಿರಸಿಯ ಫೈಯು ಚೌಟಿ ಅವರ ಸಹಕಾರದಲ್ಲಿ ಗುಜರಿ ವ್ಯಾಪಾರಿ ನಾಗಪ್ಪ ಅವರಿಗೆ ಅಗತ್ಯ ವಸ್ತುಗಳನ್ನು ನೀಡಿ, ಜೊತೆಗೆ ತಾತ್ಕಾಲಿಕವಾಗಿ ಸಹಾಯವಾಗಲು ಹಣ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಇದರ ಜೊತೆಗೆ ಫೈಯು ಚೌಟಿರವರ ಎಂ.ಆರ್ ಬ್ರದರ್ಸ್ ತಂಡವು ಇದೇ ಭಾಗದಲ್ಲಿ ತೊಂದರೆಗೊಳಗಾದ ಬಡವರಿಗೆ ನಾಲ್ಕು ಲಕ್ಷ ರೂ. ಮೌಲ್ಯದ ಆಹಾರ ಕಿಟ್‍ಗಳನ್ನು ವಿತರಿಸುವ ಮೂಲಕ ಸಂಕಷ್ಟದಲ್ಲಿರುವ ಜೀವಗಳಿಗೆ ಆಸರೆಯಾಗಿದ್ದಾರೆ.

  • ಮನೆಯೇ ಮಂತ್ರಾಲಯ ಇಂಪ್ಯಾಕ್ಟ್- ಪಡಿತರ ಕೊಡಲು ಹೋಗಿ ಕೆಲಸವೇ ನೀಡಿದ ಉದ್ಯಮಿ

    ಮನೆಯೇ ಮಂತ್ರಾಲಯ ಇಂಪ್ಯಾಕ್ಟ್- ಪಡಿತರ ಕೊಡಲು ಹೋಗಿ ಕೆಲಸವೇ ನೀಡಿದ ಉದ್ಯಮಿ

    -ಮನೆಯ ಬಡತನ ನೋಡಿ ಉದ್ಯೋಗ ಭರವಸೆ

    ಮೈಸೂರು: ಪಡಿತರ ಕೊಡಲು ಹೋಗಿ ಬಡತನ ನೋಡಿ ಮರುಗಿದ ಉದ್ಯಮಿಯೊಬ್ಬರು ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯಕ್ಕೆ ಕರೆ ಮಾಡಿದ್ದ ಮೈಸೂರಿನ ಮಂಜುಳಾ ಪಡಿತರ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಹಿಳೆ ಮನವಿಗೆ ಸ್ಪಂದಿಸಿದ ಉದ್ಯಮಿ ಎಸ್.ಎನ್. ಶಿವಪ್ರಕಾಶ್ ಖುದ್ದಾಗಿ ಅವರ ಮನೆಗೆ ಹೋಗಿ ಪಡಿತರದ ಕಿಟ್ ನೀಡಲು ಹೋಗಿದ್ದರು.

    ಪಡಿತರ ನೀಡಿದ ಬಳಿಕ ಮನೆಯ ಸದಸ್ಯರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅವರ ಬಡತನವನ್ನು ನೋಡಲಾಗದೇ ಮಂಜುಳಾರ ಹಿರಿಯ ಪುತ್ರಿಗೆ ತಮ್ಮ ಕಚೇರಿಯಲ್ಲಿಯೇ ಕೆಲಸ ನೀಡುವ ಭರವಸೆ ನೀಡಿದ್ದಾರೆ. ಮುಂದೆ ಏನೇ ಸಹಾಯ ಬೇಕಿದ್ದರು ತಮ್ಮನ್ನು ಸಂಪರ್ಕಿಸುವಂತೆ ಮೊಬೈಲ್ ನಂಬರ್ ನೀಡಿ ಬಂದಿದ್ದಾರೆ.

    ಎರಡು ದಿನಗಳ ಹಿಂದೆ ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯಕ್ಕೆ ಕರೆ ಮಾಡಿ ದಿನಸಿಯ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದೆ. ಅದರಂತೆ ಇಂದು ನಗರದ ಉದ್ಯಮಿಯಾಗಿರುವ ಶಿವಪ್ರಕಾಶ್ ಖುದ್ದಾಗಿ ಮನೆಗೆ ಬಂದು ರೇಷನ್ ನೀಡಿದ್ದಾರೆ ಎಂದು ಮಂಜುಳಾ ಹೇಳಿದ್ದಾರೆ.

    ಪಡಿತರ ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್.ಎನ್.ಶಿವಪ್ರಕಾಶ್, ಕಳೆದ 20 ದಿನಗಳಿಂದ ದಿನಸಿ ಮತ್ತು ತರಕಾರಿ ಹಂಚುತ್ತಿದ್ದೇವೆ. ಅವಶ್ಯಕತೆ ಇಲ್ಲದವರು ಸಹ ಬಂದು ಪಡಿತರ ಪಡೆದುಕೊಂಡು ಹೋಗುತ್ತಾರೆ. ಪಬ್ಲಿಕ್ ಟಿವಿಗೆ ಕರೆ ಮಾಡುವ ಜನರಿಗೆ ನೂರಕ್ಕೆ ನೂರರಷ್ಟು ಅವಶ್ಯಕತೆ ಇರೋ ಜನರು. ಪಬ್ಲಿಕ್ ಟಿವಿ ಮೂಲಕ ನಿರಾಶ್ರಿತರು ಎಲ್ಲಿದ್ದಾರೆಂಬ ವಿಷಯ ನಮಗೂ ತಿಳಿಯುತ್ತದೆ ಎಂದರು.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಬಡ ಕುಟುಂಬಕ್ಕೆ ಕರವೇ ಕಾರ್ಯಕರ್ತರ ಸ್ಪಂದನೆ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಬಡ ಕುಟುಂಬಕ್ಕೆ ಕರವೇ ಕಾರ್ಯಕರ್ತರ ಸ್ಪಂದನೆ

    ನೆಲಮಂಗಲ: ಪಬ್ಲಿಕ್ ಟಿವಿಯ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಆಟೋ ಡ್ರೈವರ್ ಧನಂಜಯ ಎಂಬವರು ಶುಕ್ರವಾರ ಕರೆ ಮಾಡಿ ತಮ್ಮ ಕಷ್ಟವನ್ನ ಹೇಳಿಕೊಂಡಿದ್ದರು.

    ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮನೆಯಿಂದ ಹೊರಬರದೆ ಹಾಗೂ ಬಡತನದ ಬೇಗೆಯಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದ ಕುಟುಂಬಕ್ಕೆ ನೆರವು ಸಿಕ್ಕಿದೆ. ಇಂದು ಈ ಬಡ ಕುಟುಂಬದ ಸದಸ್ಯರಿಗೆ ಕರವೇ ಶಿವರಾಮೇಗೌಡ ಬಣದ ನೆಲಮಂಗಲ ತಾಲೂಕು ಅಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಕರವೇ ಸ್ನೇಹಿತರು ಮಾನವೀಯತೆ ಮೆರೆದಿದ್ದಾರೆ.

    ಪಬ್ಲಿಕ್ ಟಿವಿಯ ಕರೆಗೆ ಸ್ಪಂದಿಸಿ ಈ ಕುಟುಂಬಕ್ಕೆ 15 ದಿನಕ್ಕೆ ಬೇಕಾಗುವ ಎಲ್ಲಾ ರೀತಿಯ ದಿನಸಿ ಪದಾರ್ಥಗಳು ಹಾಗೂ ತರಕಾರಿ ಹಣ್ಣುಗಳನ್ನು ನೀಡಿ ಸಂಕಷ್ಟದಲ್ಲಿದ್ದ ಆಟೋ ಡ್ರೈವರ್ ಧನಂಜಯ್ ಕುಟುಂಬಕ್ಕೆ ನೆರವು ನೀಡಿದ್ದಾರೆ. ನೆರವಿಗೆ ಧಾವಿಸಿದ ಪಬ್ಲಿಕ್ ಟಿವಿ ತಂಡ ಹಾಗೂ ಕರವೇ ಸ್ನೇಹಿತರಿಗೆ ಆಟೋ ಚಾಲಕನ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ನೆಲಮಂಗಲ ಕರವೇ ಅಧ್ಯಕ್ಷ ಸುರೇಶ್, ಇಂತಹ ಸಾಕಷ್ಟು ಜನರು ಈ ಲಾಕ್‍ಡೌನ್ ಸಮಯದಲ್ಲಿ ಸಮಸ್ಯೆ ಎದುರಿಸುತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ತಾಲೂಕಿನಲ್ಲಿ ನಮ್ಮ ಸೇವೆಯನ್ನು ಮುಂದುವರಿಸಿ ಜನರ ಏಳಿಗೆಗೆ ನಮ್ಮ ತಂಡ ಶ್ರಮಿಸುವುದಾಗಿ ತಿಳಿಸಿದ್ದಾರೆ.

     

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಕಿಡ್ನಿ ವೈಫಲ್ಯಗೊಂಡ ಯುವಕನಿಗೆ ಔಷಧಿ ವ್ಯವಸ್ಥೆ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಕಿಡ್ನಿ ವೈಫಲ್ಯಗೊಂಡ ಯುವಕನಿಗೆ ಔಷಧಿ ವ್ಯವಸ್ಥೆ

    ಚಿಕ್ಕಬಳ್ಳಾಪುರ: ‘ಮನೆಯೇ’ ಮಂತ್ರಾಲಯಕ್ಕೆ ಕರೆ ಮಾಡಿ ಮಾತ್ರೆಗಳಿಗಾಗಿ ಮನವಿ ಮಾಡಿಕೊಂಡಿದ್ದ ಚಿಕ್ಕಬಳ್ಳಾಪುರದ ಕಂದವಾರ ನಿವಾಸಿ ಅಮರ್ ಗೆ ಔಷಧಿಯ ವ್ಯವಸ್ಥೆಯನ್ನ ಮಾಡಲಾಗಿದೆ.

    ಕಿಡ್ನಿ ವೈಫಲ್ಯದಿಂದ ಬಳಲುತ್ತಿರೋ 32 ವರ್ಷದ ಅಮರ್ ಗೆ 65 ವರ್ಷದ ತಾಯಿ ಮಾತ್ರ ಇದ್ದು ಇಬ್ಬರು ದುಡಿಯುವ ಪರಿಸ್ಥಿತಿಯಲ್ಲಿಲ್ಲ. ಇಷ್ಟು ದಿನ ಸಂಕಷ್ಟಕ್ಕೆ ಸ್ನೇಹಿತರು, ಪರಿಚಯಸ್ಥರು ಸ್ಪಂದಿಸಿ ಮಾತ್ರೆಗಳನ್ನ ಕೊಡಿಸಿ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದರು. ಆದರೆ ಕೊರೊನಾದಿಂದಾಗಿ ಲಾಕ್ ಡೌನ್ ಆದ ಬಳಿಕ ಸ್ನೇಹಿತರಿಗೂ ಸಹಾಯ ಮಾಡೋಕೆ ಕಷ್ಟವಾಗಿತ್ತು. ಹೀಗಾಗಿ ದಿನಕ್ಕೆ ಎರಡು ಮೂರು ಬಾರಿ ತೆಗೆದುಕೊಳ್ಳಬೇಕಿದ್ದ ಮಾತ್ರೆ ಒಂದು ಬಾರಿ ತೆಗೆದುಕೊಂಡು ಸುಮ್ಮನಾಗುತ್ತಿದ್ದ.

    ಮಾತ್ರೆಗಳಿಲ್ಲದೆ ಪರಿತಪಿಸುತ್ತಿದ್ದ ಅಮರ್ ‘ಮನೆಯೇ’ ಮಂತ್ರಾಲಯಕ್ಕೆ ಕರೆ ಮಾಡಿ ಮಾತ್ರೆಗಳಿಗಾಗಿ ಮನವಿ ಮಾಡಿಕೊಂಡಿದ್ದ. ಅಮರ್ ಸಂಕಷ್ಟಕ್ಕೆ ಸ್ಪಂದಿಸಿದ ಪಬ್ಲಿಕ್ ಟಿವಿ ವೀಕ್ಷಕರು ಖುದ್ದು ತಾವೇ ಸ್ವಯಂಪ್ರೇರಿತವಾಗಿ ಅಮರ್ ಗೆ ಮಾತ್ರೆಗಳನ್ನ ಕೊಡಿಸಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಕೆಳಗಿನ ತೋಟ ಬಳಿಯ ಟೀಚರ್ಸ್ ಲೇಔಟ್ ನಿವಾಸಿ ಶಿಕ್ಷಕಿ ನಾಗರತ್ಮಮ್ಮ ಹಾಗೂ ಅವರ ಅಕ್ಕ ಪಕ್ಕದ ಮಹಿಳೆಯರೇ ಸೇರಿ ಒಂದು ತಿಂಗಳಿಗೆ ಬೇಕಾಗುವಷ್ಟು 2,709 ರೂ. ಮೌಲ್ಯದ ಮಾತ್ರೆಗಳನ್ನ ಕೊಡಿಸಿ ಮಾನವೀಯತೆ ಮರೆದಿದ್ದಾರೆ. ಇದಲ್ಲದೆ ನಗರದ ಕಂದವಾರ ಪೇಟೆಯ ದಿನಸಿ ಅಂಗಡಿ ಮಾಲೀಕರಾದ ಶಶಿ ಯವರು ದಿನಸಿ ಪದಾರ್ಥಗಳನ್ನ ಕೊಟ್ಟು ಸಹಾಯ ಮಾಡಿದ್ದಾರೆ.

    ಕಾರ್ತಿಕ್ ಎಂಬ ಯುವಕ ಇವರ ಮನೆ ಪರಿಸ್ಥಿತಿ ನೋಡಿ 500 ರೂಪಾಯಿ ಧನಸಹಾಯ ಮಾಡಿದ್ದಾರೆ. ಇನ್ನು ಯುವಕನ ಪರಿಸ್ಥಿತಿ ಮಾಹಿತಿ ಅರಿತ ಬಿಜೆಪಿ ಪಕ್ಷದ ಯುವಾಬ್ರಿಗೇಡ್ ನಿಂದಲೂ ಸಹ ಮಾತ್ರೆಗಳನ್ನ ಖರೀದಿಸಿ ಅಮರ್ ಗೆ ನೀಡಿದ್ದಾರೆ.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಸಂತ್ರಸ್ತ ಮಹಿಳೆಯ ಸಹಾಯಕ್ಕೆ ಧಾವಿಸಿದ ಸ್ಥಳೀಯರು

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಸಂತ್ರಸ್ತ ಮಹಿಳೆಯ ಸಹಾಯಕ್ಕೆ ಧಾವಿಸಿದ ಸ್ಥಳೀಯರು

    ನೆಲಮಂಗಲ: ಪಬ್ಲಿಕ್ ಟಿವಿಯಲ್ಲಿ ತನ್ನ ಕಷ್ಟ ತೋಡಿಕೊಂಡಿದ್ದ ಮಹಿಳೆಗೆ ಮಾದನಾಯಕನಹಳ್ಳಿ ಸ್ಥಳೀಯ ನಿವಾಸಿಗಳು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಹೌದು. ಪಬ್ಲಿಕ್ ಟಿವಿಯ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಬೆಂಗಳೂರು ಹೊರವಲಯದ ನೆಲಮಂಗಲದ ಮಾದನಾಯಕನಹಳ್ಳಿ ನಿವಾಸಿ ಮಹೇಶ್ವರಿ ಕರೆ ಮಾಡಿ ತನ್ನ ಕಷ್ಟ ಹೇಳಿಕೊಂಡಿದ್ದರು. ಇದೀಗ ಮಹಿಳೆಗೆ ಮಾದನಾಯಕನಹಳ್ಳಿ ನಿವಾಸಿಗಳು ನೆರವು ನೀಡಿದ್ದಾರೆ.

    ಮಾದನಾಯಕನಹಳ್ಳಿಯಲ್ಲಿ ನೆಲೆಸಿರುವ ಮಹೇಶ್ವರಿಗೆ ಗಂಡ ಹಾಗೂ ಮಗನಿದ್ದು ಇವರಿಂದ ದೂರವಾಗಿದ್ದಾರೆ. ಹೀಗಿರುವಾಗ ಲಾಕ್ ಡೌನ್ ಹಿನ್ನೆಲೆ ಮನೆಯಲ್ಲಿ ಗ್ಯಾಸ್ ಕನೆಕ್ಷನ್ ಹಾಗೂ ದಿನಸಿ ಪದಾರ್ಥಗಳು ಇಲ್ಲದೆ ಪರದಾಡುವಂತಾಗಿತ್ತು. ಈ ಸಂಬಂಧ ಮಹೇಶ್ವರಿ ಅವರು ಪಬ್ಲಿಕ್ ಟಿವಿಯ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿದ್ದರು. ಇಂದು ಮಾದನಾಯಕನಹಳ್ಳಿಯ, ಡಿವಿಜಿ ಮಂಜುನಾಥ್ ಹಾಗೂ ಸ್ನೇಹಿತರು ಆ ಮಹಿಳೆಯ ಮನೆಗೆ ತೆರಳಿ ಸಿಲಿಂಡರ್ ಚೆಕ್ ಮಾಡಿ, ಗ್ಯಾಸ್ ಕನೆಕ್ಷನ್ ಹಾಗೂ 15 ದಿನಕ್ಕೆ ಬೇಕಾಗುವಂತಹ ದಿನಸಿ ಪದಾರ್ಥಗಳು ಹಾಗೂ ತರಕಾರಿಗಳನ್ನ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಪಬ್ಲಿಕ್ ಟಿವಿಯ ಸಹಕಾರದಕ್ಕೆ ಕಂಬನಿ ಮಿಡಿದ ಮಹೇಶ್ವರಿ ಸಹಾಯಕ್ಕೆ ಸ್ಪಂದಿಸಿದ ಸ್ಥಳೀಯರಿಗೂ ಅಭಿನಂದನೆ ಸಲ್ಲಿಸಿ ಕಷ್ಟದ ಸಮಯದಲ್ಲಿ ನೆರವಾದವರಿಗೆ ನಮನ ಸಲ್ಲಿಸಿದ್ದಾರೆ.