Tag: maneye mantralaya

  • ಮನೆಯೇ ಮಂತ್ರಾಲಯ ಇಂಪ್ಯಾಕ್ಟ್- ವ್ಯಕ್ತಿಯ ಕಣ್ಣಿನ ಪೊರೆ ಚಿಕಿತ್ಸೆ ಯಶಸ್ವಿ

    ಮನೆಯೇ ಮಂತ್ರಾಲಯ ಇಂಪ್ಯಾಕ್ಟ್- ವ್ಯಕ್ತಿಯ ಕಣ್ಣಿನ ಪೊರೆ ಚಿಕಿತ್ಸೆ ಯಶಸ್ವಿ

    ಬೆಂಗಳೂರು: ಕಷ್ಟದಲ್ಲಿರುವವರ ಸಹಾಯಕ್ಕೆ ನಿಲ್ಲುವ ಪಬ್ಲಿಕ್ ಟಿವಿಯ ಜನಪ್ರಿಯ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮದ ಮೂಲಕ ಅದೆಷ್ಟೋ ಜನರಿಗೆ ಸಹಾಯವಾಗಿದೆ. ಈ ಸಾಲಿನಲ್ಲಿ ಇದೀಗ ಕಣ್ಣಿನ ಪೊರೆಯಿಂದ ಅಂಧಕಾರದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಬೆಳಕು ನೀಡಿದೆ.

    ನಂಜುಂಡೇಶ್ವರಯ್ಯನವರಿಗೆ ಕಣ್ಣಿನ ಪೊರೆಯ ಸಮಸ್ಯೆಯಿತ್ತು. ಇವರಿಗೆ ಮಕ್ಕಳು ಇರಲಿಲ್ಲ. ಪಬ್ಲಿಕ್ ಟಿವಿಯ ‘ಮನೆಯೇ ಮಂತ್ರಾಲಯ’ಕ್ಕೆ ಕರೆ ಮಾಡಿ ಸಹಾಯ ಕೇಳಿದ್ದರು. ಈ ಹಿನ್ನೆಲೆ ನಾರಾಯಣ ನೇತ್ರಾಲಯದ ಸಹಕಾರದಿಂದ ಕಣ್ಣಿನ ಪೊರೆ ಚಿಕಿತ್ಸೆಯನ್ನ ಯಶಸ್ವಿಯಾಗಿ ಮಾಡಿಸಲಾಗಿದೆ. ಇದೀಗ ನಂಜುಂಡೇಶ್ವರಯ್ಯನವರಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿದ್ದು, ಎಲ್ಲರಂತೆ ಪ್ರಪಂಚವನ್ನು ನೋಡುತ್ತಿದ್ದಾರೆ.

    ಈ ಕುರಿತು ನಾರಾಯಣ ನೇತ್ರಾಲಯದ ನಿರ್ದೇಶಕ ಭುಜಂಗ ಶೆಟ್ಟಿ ಅವರು ಸಂತಸ ವ್ಯಕ್ತಪಡಿಸಿದ್ದು, ಕೊರೊನಾ ಲಾಕ್‍ಡೌನ್‍ನಿಂದಾಗಿ ನಂಜುಂಡಯ್ಯನವರಿಗೆ ತುಂಬಾ ಸಮಸ್ಯೆಯಾಗಿತ್ತು. ರೇಷನ್ ಇರಲಿಲ್ಲ, ಅಗತ್ಯ ವಸ್ತುಗಳ ಕೊರತೆ ಇತ್ತು. ಪಬ್ಲಿಕ್ ಟಿವಿಯವರು ಇದನ್ನು ವ್ಯವಸ್ಥೆ ಮಾಡಿದರು. ಈ ವೇಳೆ ನಂಜುಂಡಯ್ಯನವರು ನಾನೊಬ್ಬ ಕಲಾವಿದ ನನಗೆ ಕಣ್ಣು ಕಾಣುವುದಿಲ್ಲ. ತುಂಬಾ ತೊಂದರೆಯಾಗಿದೆ, ಏನೂ ಕೆಲಸ ಮಾಡಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಪಬ್ಲಿಕ್ ಟಿವಿಯವರು ನಮ್ಮನ್ನು ಸಂಪರ್ಕಿಸಿ, ನೀವೇನಾದರೂ ಅವರಿಗೆ ಸಹಾಯ ಮಾಡಬಹುದಾ ಎಂದು ಕೇಳಿದರು.

    ಆಗ ತುಂಬಾ ಸಂತೋಷದಿಂದ ನನಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಕಳುಹಿಸಿಕೊಡಿ ಎಂದು ಹೇಳಿದೆ. ಅವರು ಬಂದ ತಕ್ಷಣ ಎರಡೂ ಕಣ್ಣನ್ನು ಪರೀಕ್ಷೆ ಮಾಡಲಾಯಿತು. ಆಗ ಪೊರೆ ಇರುವುದು ಕಂಡು ಬಂತು. ಹೀಗಾಗಿ ಅವರಿಗೆ ಏನೂ ಕಾಣುತ್ತಿರಲಿಲ್ಲ. ಪೊರೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆವು. ಆದರೆ ಆಗ ಅವರಿಗೆ ಶುಗರ್ ತುಂಬಾ ಜಾಸ್ತಿ ಇತ್ತು. ಹೀಗಾಗಿ ಒಂದು ವಾರ ಸಮಯಾವಕಾಶ ತೆಗೆದುಕೊಂಡು ಶುಗರ್ ನಿಯಂತ್ರಣಕ್ಕೆ ಬಂದ ಬಳಿಕ ಶನಿವಾರ ಅವರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿದೆವು. ನಂತರ ಪರೀಕ್ಷೆ ನಡೆಸಿದಾಗ ಅವರಿಗೆ ತುಂಬಾ ಚೆನ್ನಾಗಿ ದೃಷ್ಟಿ ಬಂದಿದೆ. ಮನೆಯೇ ಮಂತ್ರಾಲಯ ತುಂಬಾ ಒಳ್ಳೆಯ ಕಾರ್ಯಕ್ರಮ, ಇದರಿಂದ ಹಲವು ಜನರಿಗೆ ನಾನಾ ರೀತಿಯ ಸಹಾಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಈ ಕುರಿತು ನಂಜುಂಡೇಶ್ವರಯ್ಯನವರು ಮಾತನಾಡಿ, ಸೈನ್ ಬೋರ್ಡ್ ಹಾಗೂ ಬ್ಯಾನರ್ ಆರ್ಟಿಸ್ಟ್. ಕೊರೊನಾ ಲಾಕ್‍ಡೌನ್‍ನಿಂದಾಗಿ ಕೆಲಸ ನಿಂತಿತ್ತು. ಆದಾಯವಿಲ್ಲದೆ ಮನೆ ಬಾಡಿಗೆ ಕಟ್ಟಲೂ ಅಸಾಧ್ಯವಾಗಿತ್ತು. ಅಲ್ಲದೆ ನನಗೆ ಕಣ್ಣು ಕಾಣುತ್ತಿರಲಿಲ್ಲ. ಇದರಿಂದ ತುಂಬಾ ಸಮಸ್ಯೆಯಾಗಿತ್ತು. ಶುಗರ್ ಸಹ ಇದ್ದಿದ್ದರಿಂದ ಶಸ್ತ್ರಚಿಕಿತ್ಸೆಗೆ ತಡವಾಯಿತು. ನಂತರ ಶಸ್ತ್ರಚಿಕಿತ್ಸೆ ಮಾಡಿ ಕಣ್ಣು ಕಾಣುವ ಹಾಗಾಗಿದೆ. ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಕೊಡಿಸಿ ಸಹಾಯ ಮಾಡಿದರು. ಇದಕ್ಕೆಲ್ಲ ಕಾರಣ ಪಬ್ಲಿಕ್ ಟಿವಿಯ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮ. ಪಬ್ಲಿಕ್ ಟಿವಿಗೆ ಧನ್ಯವಾದ ಹೇಳುತ್ತೇನೆ ಎಂದರು.

    ನಂಜುಂಡೇಶ್ವರಯ್ಯನವರ ಪತ್ನಿ ನಿರ್ಮಲಾ ಅವರು ಮಾತನಾಡಿ, ಕಳೆದ ಮೂರು ವರ್ಷಗಳಿಂದ ಪತಿಗೆ ಕಣ್ಣು ಕಾಣುತ್ತಿರಲಿಲ್ಲ. ನಾರಾಯಣ ನೇತ್ರಾಲಯದಿಂದ ಶಸ್ತ್ರಚಕಿತ್ಸೆ ಮಾಡಿಸಿದ ಬಳಿಕ ಕಣ್ಣು ಕಾಣಿಸುತ್ತಿದೆ. ಪಬ್ಲಿಕ್ ಟಿವಿ ಹಾಗೂ ಭುಜಂಗ ಶೆಟ್ಟಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

  • ಕೊರೊನಾ ಸೋಂಕಿತೆ ಕುಟುಂಬಕ್ಕೆ ‘ಮನೆಯೇ ಮಂತ್ರಾಲಯ’ ಮೂಲಕ ನೆರವು

    ಕೊರೊನಾ ಸೋಂಕಿತೆ ಕುಟುಂಬಕ್ಕೆ ‘ಮನೆಯೇ ಮಂತ್ರಾಲಯ’ ಮೂಲಕ ನೆರವು

    ಮಂಗಳೂರು: ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಅಡುಗೆ ಸಹಾಯಕಿಯಾಗಿದ್ದ ಮಹಿಳೆಗೆ ಕೋವಿಡ್ ಸೋಂಕು ತಗುಲಿ ಜೀವನ ಸಾಗಿಸುವುದೇ ಕಷ್ಟವಾಗಿದ್ದಾಗ ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮ ಕುಟುಂಬಕ್ಕೆ ನೆರವಾಗಲು ಸಹಕಾರಿಯಾಗಿದೆ.

    ಪುತ್ತೂರು ತಾಲೂಕಿನ ಶಾಂತಿಗೋಡು ನಿವಾಸಿಯಾಗಿರುವ ಬಡ ಮಹಿಳೆಯ ಪುತ್ರಿ ಉಷಾ ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ ಸಂಕಷ್ಟ ಹೇಳಿಕೊಂಡಿದ್ದರು. ಸೋಂಕಿತ ತಾಯಿ ತಾಲೂಕು ಆಸ್ಪತ್ರೆಯಲ್ಲಿ ಅಡುಗೆ ಸಹಾಯಕಿಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಸೋಂಕು ತಗುಲಿ ಚಿಕಿತ್ಸೆ ಪಡೆದು ಹೋಂ ಕ್ವಾರಂಟೈನ್ ನಲ್ಲಿದ್ದರು. ಎರಡು ತಿಂಗಳಿಂದ ಸಂಬಳ ಆಗಿಲ್ಲ, ತಂದೆಗೂ ಕೆಲಸವಿಲ್ಲ. ಜೀವನ ನಿರ್ವಹಣೆ ಕಷ್ಟ ಅಗಿದೆ ಅಂತ ಅಳಲು ತೋಡಿಕೊಂಡಿದ್ದರು. ಕೊರೊನಾ ಭೀತಿಯಿಂದ ಸ್ಥಳೀಯವಾಗಿ ಯಾರೂ ಹತ್ತಿರ ಬರುತ್ತಿಲ್ಲ. ದಯವಿಟ್ಟು ಏನಾದ್ರೂ ಸಹಾಯ ಮಾಡಿ ಅಂತ ಮನವಿ ಮಾಡಿದ್ದರು.

    ಕಾರ್ಯಕ್ರಮ ವೀಕ್ಷಿಸಿದ ಕಡಬ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ರಫೀಕ್ ಕೊಡಾಜೆ, ಇವರು ಸೋಂಕಿತ ನೊಂದ ಮಹಿಳೆಯ ಕುಟುಂಬಕ್ಕೆ ನೆರವಾಗಲು ಮುಂದೆ ಬಂದರು. ಶಾಂತಿಗೋಡಿನಲ್ಲಿರುವ ಮಹಿಳೆಯ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬಿದ ರೊಟೇರಿಯನ್ ರಫೀಕ್ ಹಾಜಿ, ಮಹಿಳೆಯ ಕುಟುಂಬಕ್ಕೆ 25 ಕೆಜಿ. ಅಕ್ಕಿ ಹಾಗೂ ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿಗಳನ್ನು ನೀಡಿ ನೆರವಾಗಿದ್ದಾರೆ.

    ಸಂಕಷ್ಟದಲ್ಲಿದ್ದಾಗ ಯಾರೂ ನೆರವಾಗದೇ ಕಂಗಾಲಾಗಿದ್ದ ನಮಗೆ ಪಬ್ಲಿಕ್ ಟಿವಿಯಿಂದಾಗಿ ಹೋದ ಜೀವ ಬಂದಂತಾಗಿದೆ ಎಂದು ಸೋಂಕಿತ ಮಹಿಳೆ ಹೇಳಿದರು. ಕಷ್ಟ ಕಾಲದಲ್ಲಿ ನೆರವಾದ ರಫೀಕ್ ಹಾಜಿಯವರಿಗೂ ಮಹಿಳೆ ಹೃದಯಾಳದ ಕೃತಜ್ಞತೆ ಸಲ್ಲಿಸಿದರು. ಪಬ್ಲಿಕ್ ಟಿವಿ ಪ್ರತಿನಿಧಿಯ ಮಧ್ಯಪ್ರವೇಶದಿಂದ ಈಗ ಮಹಿಳೆಗೆ ಅಡುಗೆ ಗುತ್ತಿಗೆದಾರರು ಒಂದು ತಿಂಗಳ ಸಂಬಳ ನೀಡಿದ್ದು, ಬಾಕಿ ಹಣವನ್ನು ಶೀಘ್ರವೇ ನೀಡುವುದಾಗಿ ಭರವಸೆ ನೀಡಿದ್ದಾರೆ. ಕೊರೊನಾ ಸೋಂಕು ತಗುಲಿ ಸಂಕಷ್ಟದಲ್ಲಿದ್ದ ಬಡ ಮಹಿಳೆಯ ಕುಟುಂಬಕ್ಕೆ ಕಿರು ಸಹಾಯ ಮಾಡಲು ಅವಕಾಶ ನೀಡಿದ ಪಬ್ಲಿಕ್ ಟಿವಿ ಸಂಸ್ಥೆಗೆ ನಾನು ಆಭಾರಿಯಾಗಿದ್ದೇನೆ ಎಂದು ರೊಟೇರಿಯನ್ ಹಾಜಿ ರಫೀಕ್ ಕೊಡಾಜೆ ಧನ್ಯವಾದ ತಿಳಿಸಿದ್ದಾರೆ.

  • ಮಧ್ಯಾಹ್ನದ ಬಿಸಿಯೂಟ ಸಿಬ್ಬಂದಿ ಮಹಿಳೆಗೆ ನೆರವಾದ ಮನೆಯೇ ಮಂತ್ರಾಲಯ ಕಾರ್ಯಕ್ರಮ

    ಮಧ್ಯಾಹ್ನದ ಬಿಸಿಯೂಟ ಸಿಬ್ಬಂದಿ ಮಹಿಳೆಗೆ ನೆರವಾದ ಮನೆಯೇ ಮಂತ್ರಾಲಯ ಕಾರ್ಯಕ್ರಮ

    ಧಾರವಾಡ: ಮಕ್ಕಳಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲು ಹೋಗುತ್ತಿದ್ದ ಮಹಿಳೆಗೆ ಲಾಕ್‍ಡೌನ್ ಕಾರಣದಿಂದ ಊಟದ ಸಮಸ್ಯೆ ಎದುರಾಗಿತ್ತು. ಧಾರವಾಡ ನಗರದ ಗಾಂಧಿಚೌಕಿನ ಜೂಬಾಯಿ ಚಾಳ್ ನಿವಾಸಿಯಾದ ರೂಪಾ ಮಿರಜಕರ್ ಎಂಬುವವರು ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಅಳಲನ್ನು ತೊಡಿಕೊಂಡಿದ್ದರು.

    ಪತಿ ಟೈಲರಿಂಗ್ ಮಾಡುತ್ತಿದ್ದರು. ಆದರೆ ಲಾಕ್‍ಡೌನ್ ಕಾರಣಿದಿಂದ ಅವರಿಗೂ ಕೂಡಾ ಕೆಲಸ ಇರಲಿಲ್ಲ. ಇತ್ತ ರೂಪಾ ಅವರು ಕೆಲಸ ಇಲ್ಲದೇ ಮನೆ ನಡೆಸುವುದು ಕಷ್ಟವಾಗಿತ್ತು. ಅಲ್ಲದೇ ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆಯಾದ ಕಾರಣದಿಂದ ಮಹಿಳೆ ವಾಸಿಸುತ್ತಿದ್ದ ಬಡಾವಣೆಯೇ ಸೀಲ್‍ಡೌನ್ ಮಾಡಲಾಗಿತ್ತು. ಪರಿಣಾಮ ಯಾರು ಮನೆಯಿಂದ ಹೊರಗೆ ಬರಲು ಆಗದೇ ಸಮಸ್ಯೆ ಎದುರಿಸಿದ್ದರು.

    ಮನೆಯೇ ಮಂತ್ರಾಲಯಕ್ಕೆ ರೂಪಾ ಅವರು ಕರೆ ಸಮಸ್ಯೆ ಹೇಳಿಕೊಂಡಿದ್ದ ಗಮನಿಸಿದ್ದ ಧಾರವಾಡದ ವ್ಯಾಪಾರಿ ಅನಿಲ ಢಾಂಗೆ ಅವರು, ರೂಪಾ ಅವರಿಗೆ ಇಂದು ಎರಡು ತಿಂಗಳ ದಿನಸಿಯನ್ನು ನೀಡಿ ಸಹಾಯ ಮಾಡಿದ್ದಾರೆ. ಸಹಾಯ ಪಡೆದ ರೂಪಾ ಅವರು, ಪಬ್ಲಿಕ್ ಟಿವಿ ಹಾಗೂ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇತ್ತ ಅನಿಲ ಢಾಂಗೆ ಅವರು ಕೂಡ ಮುಂದೆಯೂ ಈ ರೀತಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್: 1 ತಿಂಗ್ಳ ಔಷಧಿ ಕೊಡಿಸಿದ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್: 1 ತಿಂಗ್ಳ ಔಷಧಿ ಕೊಡಿಸಿದ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ

    ಹಾಸನ: ಲಾಕ್‍ಡೌನ್‍ನಿಂದ ದುಡಿಮೆಯಿಲ್ಲದೆ ಮಗನಿಗೆ ಔಷಧಿ ಖರೀದಿಸೋದೇ ಕಷ್ಟ ಎಂದು ಪಬ್ಲಿಕ್ ಟಿವಿಗೆ ಕರೆ ಮಾಡಿ ಕಷ್ಟ ಹೇಳಿಕೊಂಡಿದ್ದ ಹಾಸನದ ಮಹಿಳೆಗೆ ಬಿಜೆಪಿ ಮುಖಂಡ ಹುಲ್ಲಹಳ್ಳಿ ಸುರೇಶ್ ಸಹಾಯ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ಮಹಿಳೆ ತನ್ನ ಪತಿ ಆರ್‍ಎಂಸಿ ಯಾರ್ಡಿನಲ್ಲಿ ಮೂಟೆ ಹೊರುವ ಕೆಲಸ ಮಾಡುತ್ತಿದ್ದಾರೆ. ಆದರೆ ಲಾಕ್‍ಡೌನ್ ನಿಂದ ಸರಿಯಾಗಿ ಕೂಲಿ ಸಿಗದೆ ಜೀವನೆ ನಿರ್ವಹಣೆ ಕಷ್ಟವಾಗಿದ್ದು, ಮಗನ ಔಷಧಿಗೆ ಹಣವಿಲ್ಲ ಎಂದು ಕಷ್ಟ ಹೇಳಿಕೊಂಡು ಸಹಾಯಕ್ಕೆ ಮನವಿ ಮಾಡಿದ್ರು.

    ಇದನ್ನು ಗಮನಿಸಿದ್ದ ಹಾಸನ ಬಿಜೆಪಿ ಮುಖಂಡ ಹುಲ್ಲಹಳ್ಳಿ ಸುರೇಶ್ ತಾವೇ ಸ್ವತಃ ತೆರಳಿ, ಒಂದು ತಿಂಗಳಿಗೆ ಆಗುವಷ್ಟು ಔಷಧಿ ಖರೀದಿಸಿ ಮಹಿಳೆಗೆ ತಲುಪಿಸುವ ವ್ಯವಸ್ಥೆ ಮಾಡಿ ಸಹಾಯ ಮಾಡಿದ್ದಾರೆ.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಬಾಲಕಿ ಮನವಿಗೆ ಮಹಾನಗರ ಪಾಲಿಕೆ ಸದಸ್ಯ ಸ್ಪಂದನೆ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಬಾಲಕಿ ಮನವಿಗೆ ಮಹಾನಗರ ಪಾಲಿಕೆ ಸದಸ್ಯ ಸ್ಪಂದನೆ

    ಶಿವಮೊಗ್ಗ: ಕೊರೊನಾ ಲಾಕ್‍ಡೌನ್ ಪರಿಣಾಮ ತನ್ನ ತಂದೆಗೆ ಕೆಲಸವಿಲ್ಲದೆ ಊಟಕ್ಕೂ ತೊಂದರೆ ಇದೆ. ಹೀಗಾಗಿ ದಿನಸಿ ಕಿಟ್ ಕೊಡಿಸುವಂತೆ ಶಿವಮೊಗ್ಗದ ತ್ರಿಮೂರ್ತಿನಗರದ ಐಶ್ವರ್ಯ ಎಂಬ ಬಾಲಕಿ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಫೋನ್ ಮಾಡಿ ಮನವಿ ಮಾಡಿಕೊಂಡಿದ್ದಳು.

    ಕಾರ್ಯಕ್ರಮ ವೀಕ್ಷಿಸಿದ್ದ ತ್ರಿಮೂರ್ತಿನಗರ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಧೀರರಾಜ್ ಹೊನ್ನುನವಿಲೆ ಅವರು ಬಾಲಕಿ ಐಶ್ವರ್ಯ ಮನೆಗೆ ದಿನಸಿ ಕಿಟ್ ನೊಂದಿಗೆ ಭೇಟಿ ನೀಡಿದ್ದಾರೆ. ಬಾಲಕಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಪದಾರ್ಥ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಸಂಕಷ್ಟದಲ್ಲಿರುವ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಹಾಯ ಮಾಡುವುದಾಗಿ ಹಾಗೂ ಬಾಲಕಿಯ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವುದಾಗಿ ಸಹ ಪಾಲಿಕೆ ಸದಸ್ಯ ಭರವಸೆ ನೀಡಿದ್ದಾರೆ. ಅಲ್ಲದೆ ಪಬ್ಲಿಕ್ ಟಿವಿಯ ಕಾರ್ಯಕ್ಕೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.

  • ಹೋಟೆಲ್ ಕಾರ್ಮಿಕನಿಗೆ ನೆರವಾದ ಮನೆಯೇ ಮಂತ್ರಾಲಯ ಕಾರ್ಯಕ್ರಮ

    ಹೋಟೆಲ್ ಕಾರ್ಮಿಕನಿಗೆ ನೆರವಾದ ಮನೆಯೇ ಮಂತ್ರಾಲಯ ಕಾರ್ಯಕ್ರಮ

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ಕಾರ್ಮಿಕರೊಬ್ಬರಿಗೆ ಗಂಧದ ನಾಡು ಜನಪರ ವೇದಿಕೆ ಸಂಘಟನೆಯ ಕಾರ್ಯಕರ್ತರು ನೆರವಾಗಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಪಬ್ಲಿಕ್ ಟಿವಿ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮ ನಡೆಸುತ್ತಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹಳೇ ಚಂದಾಪುರದಲ್ಲಿ ವಾಸವಿದ್ದ ರವಿ ಫೋನ್ ಮಾಡಿ ಅಳಲನ್ನು ತೋಡಿಕೊಂಡಿದ್ದರು. ಅವರಿಗೆ ಇಂದು ನೆರವು ಸಿಕ್ಕಿದೆ.

    ರವಿ ಅವರು ಲಾಕ್‍ಡೌನ್‍ನಿಂದಾಗಿ ಕೆಲಸ, ಆಹಾರ ಪದಾರ್ಥವಿಲ್ಲದೆ ಕಂಗಾಲಾಗಿದ್ದರು. ಹೀಗಾಗಿ ಭಾನುವಾರ ಪಬ್ಲಿಕ್ ಟಿವಿಗೆ ಕರೆ ಮಾಡಿ ಆಹಾರ ಪದಾರ್ಥ ಒದಗಿಸುವಂತೆ ಕೇಳಿಕೊಂಡಿದ್ದರು. ಈ ಹಿನ್ನೆಲೆ ಗಂಧದ ನಾಡು ಜನಪರ ವೇದಿಕೆ ಸಂಘಟನೆಯ ಕಾರ್ಯಕರ್ತರು ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ, ಬೇಳೆ, ಎಣ್ಣೆ, ಧವಸ ಧಾನ್ಯದ ಜೊತೆಗೆ ತರಕಾರಿ ನೀಡಿ ಮಾನವೀಯತೆ ಮೆರೆಸಿದ್ದಾರೆ.

    ನೆರವು ಪಡೆದ ರವಿ ಮಾತನಾಡಿ, ಲಾಕ್‍ಡೌನ್ ಆಗಿದ್ದರಿಂದ ಕೆಲಸ ಇಲ್ಲವಾಯಿತು. ಕೈಯಲ್ಲಿದ್ದ ಹಣದಲ್ಲಿ ಇಷ್ಟು ದಿನ ಜೀವನ ನಡೆಸಿದೆ. ಆದರೆ ತುತ್ತು ಅನ್ನಕ್ಕೂ ಕಾಸಿಲ್ಲದಗ ಪಬ್ಲಿಕ್ ಟಿವಿಗೆ ಕರೆ ಮಾಡಿದೆ. ಇದೀಗ ಒಂದು ತಿಂಗಳ ರೇಷನ್ ದೊರೆತಿರುವುದು ಖುಷಿಯಾಗಿದೆ ಎಂದರು.

    ಗಂಧದ ನಾಡು ಜನಪರ ವೇದಿಕೆಯ ಕಾರ್ಯಕರ್ತ ಮಂಜುನಾಥ್ ಮಾತನಾಡಿ, ಭಾನುವಾರ ಮನೆಯೇ ಮಂತ್ರಾಲಯ ಕಾರ್ಯಕ್ರಮ ನೋಡುವಾಗ ರವಿ ಕರೆ ಮಾಡಿದ್ದು ನೋಡಿದೆ. ನಮ್ಮ ಊರಿನವರೆ ತೊಂದರೆಯಲ್ಲಿರುವುದು ತಿಳಿಯಿತು. ಆನೇಕಲ್ ವರದಿಗಾರರ ಮೂಲಕ ರವಿ ಅವರ ವಿಳಾಸ ಪಡೆದು ನೆರವು ನೀಡಿದ್ದೇವೆ ಎಂದರು.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಅಂಗಾಂಗ ಸ್ವಾಧೀನವಿಲ್ಲದ ಮಗುವಿಗೆ ಸಹಾಯ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಅಂಗಾಂಗ ಸ್ವಾಧೀನವಿಲ್ಲದ ಮಗುವಿಗೆ ಸಹಾಯ

    ನೆಲಮಂಗಲ: ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ನೆಲಮಂಗಲ ವಿಧಾನ ಸಭಾ ಕ್ಷೇತ್ರದ ಸೋಲೂರು ಬಳಿಯ ಕಲ್ಯಾಣಪುರ ಗ್ರಾಮದ ನಿವಾಸಿ ಭಾಗ್ಯ ಎಂಬವರು ತಮ್ಮ ಮಗನ ವಿಚಾರದಲ್ಲಿ ನೋವನ್ನ ಹೇಳಿಕೊಂಡಿದ್ದರು.

    ಮಗನಿಗೆ ಅಂಗಾಂಗಗಳು ಸ್ವಾಧೀನ ಇಲ್ಲ, ಮಾತನಾಡಲ್ಲ. ಲಾಕ್ ಡೌನ್ ಸಮಯದಲ್ಲಿ ಈ ಮಗುವಿಗೆ ಔಷಧಿ ಹಾಗೂ ಆಹಾರದ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದರು. ಇದೀಗ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ ಎಂಬವರು ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ. ಮಗುವಿಗೆ ಔಷಧಿ, ಮಾತ್ರೆ ಹಾಗೂ ಒಂದು ತಿಂಗಳಿಗೆ ಬೇಕಾಗುವಷ್ಟು ದಿನಸಿ ಪದಾರ್ಥಗಳನ್ನ ನೀಡಿ ಪಬ್ಲಿಕ್ ಟಿವಿಯ ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ಸ್ಪಂದಿಸಿದ್ದಾರೆ.

    ಈ ವೇಳೆ ಮಾತನಾಡಿದ ಅಧ್ಯಕ್ಷ ಮಲ್ಲಯ್ಯ, ಸಾಕಷ್ಟು ಜನರು ತಮ್ಮ ನೋವನ್ನ ಅಕ್ಕಪಕ್ಕದ ಜನರಲ್ಲಿ ಹೇಳಿಕೊಳ್ಳಲಾಗದೆ ಈ ಕೊರೊನಾ ವೈರಸ್ ನ ಲಾಕ್ ಡೌನ್ ಸಮಯದಲ್ಲಿ ಸಮಸ್ಯೆಯನ್ನ ಅನುಭವಿಸುತ್ತಿದ್ದಾರೆ. ಜನರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿಯ ತಂಡ ಉತ್ತಮ ಕೆಲಸ ನಿರ್ವಹಿಸಿ ಜನ ಸಾಮಾನ್ಯರ ಸ್ಪಂದನೆಗೆ ಕೆಲಸ ಮಾಡುತ್ತಿದೆ ಎಂದರು. ಇದೇ ವೇಳೆ ನೆರವಿಗೆ ಧಾವಿಸಿದ ಎಲ್ಲರಿಗೂ ನೊಂದ ಬಡ ಕುಟುಂಬ ಕೃತಜ್ಞತೆ ತಿಳಿಸಿದೆ.

  • ಮನೆಯೇ ಮಂತ್ರಾಲಯ – ನೊಂದ ಕುಟುಂಬಕ್ಕೆ ದಿನಸಿ, 3 ಸಾವಿರ ರೂ. ವಿದ್ಯುತ್ ಬಿಲ್ ಪಾವತಿಸಿದ ಬಿ.ಸುರೇಶ್

    ಮನೆಯೇ ಮಂತ್ರಾಲಯ – ನೊಂದ ಕುಟುಂಬಕ್ಕೆ ದಿನಸಿ, 3 ಸಾವಿರ ರೂ. ವಿದ್ಯುತ್ ಬಿಲ್ ಪಾವತಿಸಿದ ಬಿ.ಸುರೇಶ್

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಸತತ ಎರಡು ತಿಂಗಳಿನಿಂದ ಲಾಕ್‍ಡೌನ್ ಜಾರಿಯಾಗಿದ್ದು, ಕೆಲಸ ವಿಲ್ಲದೆ, ಮನೆಯಲ್ಲಿ ದಿನಸಿ ಇಲ್ಲದೆ ಪರದಾಡುತಿದ್ದ ಕುಟುಂಬಕ್ಕೆ ನಿಮ್ಮ ಪಬ್ಲಿಕ್ ಟಿವಿ ಮನೆಯೇ ಮಂತ್ರಾಲಯ ಕಾರ್ಯಕ್ರಮದ ಮೂಲಕ ಕಷ್ಟ ನಿವಾರಿಸುವ ಕೆಲಸ ಮಾಡುತ್ತಿದೆ.

    ಮನೆಯೇ ಮಂತ್ರಾಲಯ ಕಾರ್ಯಕ್ರಮದಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದ ಪ್ರೇಮ ಅವರ ಬಡ ಕುಟುಂಬಕ್ಕೆ ಟಿ.ದಾಸರಹಳ್ಳಿ ಕ್ಷೇತ್ರದ ಶೆಟ್ಟಿಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಬಿ.ಸುರೇಶ್, ಶ್ರೀ ಸಾಯಿ ಫೌಂಡೇಶನ್ ನೊಂದಿಗೆ ನೆರವಿಗೆ ಧಾವಿಸಿದ್ದಾರೆ. ಕುಟುಂಬಕ್ಕೆ 20 ದಿನಕ್ಕೆ ಬೇಕಾಗಿರುವ ಎಲ್ಲ ರೀತಿಯ ದಿನಸಿ ಸಾಮಾಗ್ರಿಗಳು ಸೇರಿದಂತೆ ತರಕಾರಿ ಹಾಗೂ ಮನೆಯ ವಿದ್ಯುತ್ ಬಿಲ್ 3 ಸಾವಿರ ರೂ.ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

    ಪಬ್ಲಿಕ್ ಟಿವಿಯ ಕಾರ್ಯಕ್ರಮಕ್ಕೆ ಸ್ಪಂದಿಸಿ ಮೊದಲು ಪ್ರೇಮ ಅವರ ಮನೆಗೆ ಭೇಟಿ ನೀಡಿದಾಗ ಸುರೇಶ್ ಅವರು ಮಕ್ಕಳಿಗೆ ಮಾಸ್ಕ್ ಸ್ಯಾನಿಟೈಸರ್ ನೀಡಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು. ಪ್ರೇಮ ಅವರ ಪತಿ ಒಂದೂವರೆ ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇದೀಗ ಅತ್ತೆ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಕೂಲಿ ಕೆಲಸ ಮಾಡಿ ಸಾಕುತ್ತಿದ್ದಾರೆ. ಇವರ ಕಷ್ಟ ಅರಿತ ಶೆಟ್ಟಿಹಳ್ಳಿಯ ಸುರೇಶ್ ಅವರು ನೆರವಿಗೆ ಧಾವಿಸಿದ್ದಾರೆ. ಇದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಮನೆಯೇ ಮಂತ್ರಾಲಯ ಇಂಪ್ಯಾಕ್ಟ್- ಬಡ ಕುಟುಂಬಕ್ಕೆ ಪಡಿತರ ವಿತರಣೆ

    ಮನೆಯೇ ಮಂತ್ರಾಲಯ ಇಂಪ್ಯಾಕ್ಟ್- ಬಡ ಕುಟುಂಬಕ್ಕೆ ಪಡಿತರ ವಿತರಣೆ

    ಬೆಂಗಳೂರು: ಪಬ್ಲಿಕ್ ಟಿವಿಯ ಮನೆಯ ಮಂತ್ರಾಲಯಕ್ಕೆ ಕರೆ ಮಾಡಿ ಮಹಿಳೆಯೊಬ್ಬರು ಸಹಾಯ ಕೇಳಿದ್ದರು. ಮಹಿಳೆಯ ಸಹಾಯಕ್ಕೆ ಟಿ.ದಾಸರಹಳ್ಳಿಯ ರಾಜಗೋಪಾಲ ನಗರದ ಸಮಾಜ ಸೇವಕ ಎನ್. ನಾರಾಯಣ ಸ್ವಾಮಿ ನೆರವಿಗೆ ಧಾವಿಸಿದ್ದಾರೆ.

    ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಗೀತಾ ಲಾಕ್‍ಡೌನ್ ನಿಂದಾಗಿ ಮನೆಯಲ್ಲಿರುವಂತಾಗಿತ್ತು. ಒಂದು ಹೊತ್ತಿನ ಊಟಕ್ಕಾಗಿ ಗೀತಾ ಅವರ ಕುಟುಂಬ ಪರದಾಡುತ್ತಿತ್ತು. ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ಗೀತಾ, ದಿನಸಿಯ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಕಾರ್ಯಕ್ರಮ ನೋಡಿದ್ದ ಎನ್. ನಾರಾಯಣ ಸ್ವಾಮಿ ಮಹಿಳೆ ನೆರವಿಗೆ ಧಾವಿಸಿ 20 ದಿನಕ್ಕೆ ಬೇಕಾಗಿವ ಎಲ್ಲಾ ತರಹದ ದಿನಸಿ ಸಾಮಾಗ್ರಿಗಳು ಸೇರಿದಂತೆ ತರಕಾರಿಗಳನ್ನ ನೀಡಿದ್ದಾರೆ.

    ಪಬ್ಲಿಕ್ ಟಿವಿಯ ಕಾರ್ಯಕ್ರಮ ಸ್ಪೂರ್ತಿಯಾಗಿ ಇದೆ ಕೆಲಸವನ್ನ ನಿರಂತರವಾಗಿ ಮಾಡುವುದಾಗಿ ನಾರಾಯಣ ಸ್ವಾಮಿ ತಿಳಿಸಿದ್ದಾರೆ. ಗೀತಾ ಅವರು ಸಹ ಪಬ್ಲಿಕ್ ಟಿವಿ ತಂಡಕ್ಕೆ ಧನ್ಯವಾದಗಳನ್ನ ತಿಳಿಸಿ ನೆರವು ನೀಡಿದ ಸೇವಕರಿಗೆ ಕೃತಜ್ಞತೆ ತಿಳಿಸಿದ್ದಾರೆ.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಉಪವಾಸ ಇದ್ದ ದಂಪತಿಗೆ ಸಹಾಯ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಉಪವಾಸ ಇದ್ದ ದಂಪತಿಗೆ ಸಹಾಯ

    ಚಿಕ್ಕಬಳ್ಳಾಪುರ: ಕೊರೊನಾ ಎಫೆಕ್ಟ್ ನಡುವೆ ನೇಕಾರಿಕೆ ಕೆಲಸ ಇಲ್ಲದೆ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದ ದಂಪತಿಗೆ ದಿನಸಿ ಆಹಾರ ಪದಾರ್ಥಗಳ ಕಿಟ್ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ.

    ಊಟಕ್ಕೂ ಇಲ್ಲದೆ ಪರದಾಡುತ್ತಿದ್ದ ಸುಖ್‍ರಾಜ್ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ ಅಳಲು ತೋಡಿಕೊಂಡಿದ್ದರು. ಹೀಗಾಗಿ ದಂಪತಿಯ ಸಂಕಷ್ಟಕ್ಕೆ ಸ್ಪಂದಿಸಿದ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಚಂದ್ರಶೇಖರ್ ಹಾಗೂ ಅವರ ಸ್ನೇಹಿತರು ಸುಖ್‍ರಾಜ್ ಮನೆಗೆ ಹೋಗಿ ದಿನಸಿ ಕಿಟ್ ಕೊಟ್ಟು ಸಹಾಯ ಮಾಡಿದರು.

    ದಂಪತಿ ಹುಬ್ಬಳ್ಳಿ ಮೂಲದವರಾಗಿದ್ದು, ಸದ್ಯ ಲಾಕ್‍ಡೌನ್‍ನಿಂದ ನೇಕಾರಿಕೆ ಕೆಲಸವೂ ಇಲ್ಲದಂತಾಗಿದೆ. ಸುಖ್‍ರಾಜ್ ಫೈಂಟಿಂಗ್ ಕೆಲಸ ಮಾಡುವುದಾಗಿ ಹೇಳಿದ್ದು, ನಾಳೆಯಿಂದ ಫೈಂಟಿಂಗ್ ಕೆಲಸ ಸಹ ಕೊಡಿಸುವ ಭರವಸೆ ನೀಡಿದ್ದಾರೆ. ಇದಲ್ಲದೇ ಯುವಕ ಕಾರ್ತಿಕ್ ಎಂಬಾತ ಧನಸಹಾಯ ಸಹ ಮಾಡಿದ್ದಾರೆ. ಪಬ್ಲಿಕ್ ಟಿವಿ ಹಾಗೂ ದಾನಿಗಳಿಗೆ ಸುಖ್‍ರಾಜ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.