Tag: Mandya Public TV

  • ರೈತರು ಸ್ವಂತಕ್ಕೇನು ಹೋರಾಟ ಮಾಡಲಿಲ್ಲ, ಕಾವೇರಿ ನೀರಿಗಾಗಿ ಹೋರಾಡಿದ್ರು: ಜಿ.ಮಾದೇಗೌಡ

    ರೈತರು ಸ್ವಂತಕ್ಕೇನು ಹೋರಾಟ ಮಾಡಲಿಲ್ಲ, ಕಾವೇರಿ ನೀರಿಗಾಗಿ ಹೋರಾಡಿದ್ರು: ಜಿ.ಮಾದೇಗೌಡ

    ಮಂಡ್ಯ: ಕಾವೇರಿ ಹೋರಾಟಗಾರರ ಮೇಲಿನ ಕೇಸನ್ನು ಸರ್ಕಾರ ವಾಪಸ್ ಪಡೆದ ಹಿನ್ನೆಲೆ ರೈತರು ಸ್ವಂತಕ್ಕೇನು ಹೋರಾಟ ಮಾಡಲಿಲ್ಲ, ಕಾವೇರಿ ನೀರಿಗಾಗಿ ಹೋರಾಡಿದ್ದರು ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ರೈತರು. ಅವರಿಗೆ ರೈತರ ಕಷ್ಟ ಗೊತ್ತು. ರೈತರು ಸ್ವಂತಕ್ಕೇನು ಹೋರಾಟ ಮಾಡಲಿಲ್ಲ. ಕಾವೇರಿ ನೀರಿಗಾಗಿ ಹೋರಾಡಿದ್ದರು. ರೈತರ ಕಷ್ಟ ಅರ್ಥ ಮಾಡಿಕೊಂಡು ಕೇಸುಗಳನ್ನು ಸಿಎಂ ವಾಪಸ್ ಪಡೆದಿದ್ದಾರೆ. ಆದರಿಂದ ಸಿಎಂ ಕುಮಾರಸ್ವಾಮಿ ಅವರಿಗೆ ಕೇಸು ವಾಪಸ್ ಪಡೆದಿದ್ದಕ್ಕೆ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ:ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

    ನೀರಿಗಾಗಿ ರೈತರು ಹೋರಾಟ ಮಾಡಿದ್ದರು, ಬೆಳೆ ಬೆಳೆಯಲು ನೀರು ಬೇಕು ಎಂದು ಸರ್ಕಾರ ವಿರುದ್ಧ ನಿಂತಿದ್ದರು ಅಷ್ಟೆ. ಹೋರಾಟದಲ್ಲಿ ಭಾಗಿಯಾಗಿದ್ದ ರೈತರ ಮೇಲೆ ಇನ್ನುಳಿದ ಅಲ್ಪಸ್ವಲ್ಪ ಕೇಸನ್ನು ಕೂಡ ಸಿಎಂ ವಾಪಸ್ ಪಡೆಯಬೇಕೆಂದು ಮಾದೇಗೌಡ ಅವರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೆಳೆಯನ ಅಂತ್ಯಕ್ರಿಯೆಗೆ ಬಂದು ಕಣ್ಣೀರಿಟ್ಟ ಬಸವ- ಮೂಕಪ್ರಾಣಿಯ ಪ್ರೀತಿಗೆ ಮಮ್ಮಲ ಮರುಗಿದ ಜನ

    ಗೆಳೆಯನ ಅಂತ್ಯಕ್ರಿಯೆಗೆ ಬಂದು ಕಣ್ಣೀರಿಟ್ಟ ಬಸವ- ಮೂಕಪ್ರಾಣಿಯ ಪ್ರೀತಿಗೆ ಮಮ್ಮಲ ಮರುಗಿದ ಜನ

    ಮಂಡ್ಯ: ಅನಾರೋಗ್ಯದಿಂದ ಸಾವನ್ನಪ್ಪಿದ ಬಸವನ ಅಂತ್ಯಕ್ರಿಯೆಗೆ ಬಂದ ಮತ್ತೊಂದು ಬಸವ ತನ್ನ ಗೆಳೆಯನನ್ನು ಬಿಟ್ಟು ಹೋಗಲಾಗದೆ ಮೂಕವೇದನೆ ಅನುಭವಿಸಿದ ದೃಶ್ಯ ಕಂಡು ಸಾವಿರಾರು ಜನರು ಕಣ್ಣೀರಿಟ್ಟ ಮನಕಲಕುವ ಘಟನೆ ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ನಡೆದಿದೆ.

    ಗುತ್ತಲು ಬಡಾವಣೆಯ ಮಾರುತಿ ನಗರದ ಮುತ್ತುರಾಯ ದೇವಸ್ಥಾನದ ಬಸವ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು ಬುಧವಾರ ಮೃತಪಟ್ಟಿದೆ. ತಮ್ಮ ಪ್ರೀತಿಯ ಬಸವ ಸಾವನ್ನಪ್ಪಿದ್ದರಿಂದ ಬಸವನನ್ನು ಮೆರವಣಿಗೆಯ ಮೂಲಕ ತಂದು ಗುತ್ತಲು ಯುವಕರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಈ ವೇಳೆ ಮೃತ ಬಸವನನ್ನು ಹಿಂಬಾಲಿಸುತ್ತ ಮತ್ತೊಂದು ಬಸವ ಬಂದಿದೆ. ಬಳಿಕ ಅಂತ್ಯ ಸಂಸ್ಕಾರದ ಜಾಗದಲ್ಲಿ ಬಸವನ ಬಳಿ ನಿಂತು ಮೂಕವೇದನೆ ಅನುಭವಿಸಿದೆ.

    ಇದನ್ನು ಕಂಡ ಜನ ಕಣ್ಣೀರಿಡುತ್ತಿದ್ದ ಬಸವನನ್ನು ಸ್ಥಳದಿಂದ ಓಡಿಸಲು ಯತ್ನಿಸಿದ್ದಾರೆ. ಆದರೆ ತನ್ನ ಗೆಳೆಯನನ್ನು ಬಿಟ್ಟು ಹೋಗಲು ಒಪ್ಪದ ಬಸವ, ಮೃತ ಬಸವನ ಸುತ್ತ ಮೂಕರೋದನೆಯಿಂದ ಸುತ್ತಾಡಿದೆ. ಇದನ್ನು ನೋಡಿದ ಸಾವಿರಾರು ಜನ ಮೂಕ ಪ್ರಾಣಿಯ ಪ್ರೀತಿಗೆ ಕಣ್ಣೀರಿಟ್ಟಿದ್ದಾರೆ.

    ಈ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರಿಸಿರುವ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಪ್ರಾಣಿಗಳ ಮೂಕ ಪ್ರೀತಿಗೆ ಜನ ಮಮ್ಮಲ ಮರುಗಿದ್ದಾರೆ. ದೃಶ್ಯವನ್ನು ನೋಡಿದ ಜನ ಮನುಷ್ಯರು ಪ್ರಾಣಿಗಳಿಂದ ಕಲಿಯಬೇಕಾದ್ದು ಬೇಕಾದಷ್ಟಿದೆ ಎಂದು ಕಮೆಂಟ್ ಮಾಡುತ್ತಾ ಸಂತಾಪ ಸೂಚಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಲ್ಲಿ ಶುರುವಾಯಿತು ನೋಟಾ ಅಭಿಯಾನ!

    ಮಂಡ್ಯದಲ್ಲಿ ಶುರುವಾಯಿತು ನೋಟಾ ಅಭಿಯಾನ!

    ಮಂಡ್ಯ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿಗೆ ಉಪಚುನಾವಣೆ ಪ್ರತಿಷ್ಠೆಯ ವಿಚಾರವಾಗಿದೆ. ಆದರೆ ಮಂಡ್ಯದಲ್ಲಿ ಮಾತ್ರ ಮತದಾರರಿಂದ ತೀವ್ರ ನಿರಾಸಕ್ತಿ ಉಂಟಾಗಿದ್ದು, ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ನೋಟಾ ಅಭಿಯಾನದ ಮೊರೆ ಹೋಗುತ್ತಿದ್ದಾರೆ.

    ಲೋಕಸಭಾ ಚುನಾವಣೆಗೆ ಐದು ತಿಂಗಳು ಬಾಕಿ ಇರುವಾಗ ಉಪಚುನಾವಣೆ ಅನಿವಾರ್ಯವಿತ್ತೇ ಎನ್ನುವುದು ಕ್ಷೇತ್ರದ ಕೆಲ ಮತದಾರರ ವಾದ. ಮಾಜಿ ಸಂಸದೆ ರಮ್ಯಾ ಅವರಿಗೆ ಟಿಕೆಟ್ ನೀಡಿಲ್ಲ ಅಂತಾ ಅವರ ಅಭಿಮಾನಿಗಳು ನೋಟಾ ಅಭಿಯಾನಕ್ಕೆ ಮುಂದಾಗಿದ್ದಾರಂತೆ. ಅಷ್ಟೇ ಅಲ್ಲದೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸೋಲಲು ಎಲ್.ಆರ್.ಶಿವರಾಮೇಗೌಡ ಅವರೇ ಕಾರಣ. ಆದರೂ ಮೈತ್ರಿ ಸರ್ಕಾರವು ಅವರಿಗೆ ಟಿಕೆಟ್ ನೀಡಿದ್ದಕ್ಕೆ ರಮ್ಯಾ ಅಭಿಮಾನಿಗಳು ಕಿಡಿಕಾರಿದ್ದಾರೆ.

    ಸಮ್ಮಿಶ್ರ ಸರ್ಕಾರ ಅಥವಾ ಕೇಂದ್ರದ ಬಿಜೆಪಿ ಸರ್ಕಾರ ರೈತರ ಸಾಲಮನ್ನಾ ಬಗ್ಗೆ ಗಮನಹರಿಸುತ್ತಿಲ್ಲ. ಹೀಗಾಗಿ ಗ್ರಾಮಕ್ಕೆ ಯಾವುದೇ ಅಭ್ಯರ್ಥಿ ಮತ ಕೇಳಲು ಬಂದರೂ, ಮೊದಲು ಸಾಲಮನ್ನಾ ಮಾಡಿ. ಆ ನಂತರ ಮತ ಕೇಳಲು ಬನ್ನಿ ಅಂತಾ ಮತದಾರರು ಪಟ್ಟು ಹಿಡಿದಿದ್ದಾರೆ. ಸಾಲ ಮನ್ನಾ ವಿಚಾರವಾಗಿ ಪ್ರಶ್ನೆ ಮಾಡುವಂತೆ ಎಲ್ಲ ರೈತರಿಗೂ ಹೇಳಿದ್ದೇವೆ ಎಂದು ರೈತ ಮುಂಖಡರು ಹೇಳಿದ್ದಾರೆ.

    ಇತ್ತ ಸಾಮಾನ್ಯ ಮತದಾರರು ಕೂಡ, ಇಷ್ಟು ಕಡಿಮೆ ಅವಧಿಗೆ ಚುನಾವಣೆ ನಡೆಸುತ್ತಿರುವುದಕ್ಕೆ ನಮಗೆ ಬೇಸರವಿದ್ದು, ನಾವು ನೋಟಾ ಆಯ್ಕೆ ಮಾಡುವ ಮೂಲಕ ನಮ್ಮ ಪ್ರತಿಭಟನೆ ಸಂದೇಶ ತಲುಪಿಸುತ್ತೇವೆ ಎನ್ನುತ್ತಿದ್ದಾರೆ. ಬಿಸಿಲು, ಮಳೆ ಲೆಕ್ಕಿಸದೆ ಮಂಡ್ಯದಾದ್ಯಂತ ಸಂಚರಿಸಿ ಮತ ಕೇಳುತ್ತಿರುವ ಅಭ್ಯರ್ಥಿಗಳಿಗೆ ಮತದಾರರ ನೋಟಾ ನಿರ್ಧಾರ ತಲೆನೋವಾಗಿ ಪರಿಣಮಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv