Tag: Mandya constituency

  • ಅಂಬರೀಶ್ ಮನವೊಲಿಕೆಗೆ ಮುಂದಾದ ಕೈ ಬಳಗ

    ಅಂಬರೀಶ್ ಮನವೊಲಿಕೆಗೆ ಮುಂದಾದ ಕೈ ಬಳಗ

    ಬೆಂಗಳೂರು: ಚುನಾವಣೆ ಹಾಗೂ ಪ್ರಚಾರದ ಕುರಿತಾಗಿ ಏನನ್ನು ಮಾತನಾಡದೇ ಸಿಎಂ ಹಾಗೂ ಕಾಂಗ್ರೆಸ್ ಮುಖಂಡರನ್ನು ಸತಾಯಿಸುತ್ತಿರುವ ನಟ ಅಂಬರೀಶ್ ಅವರ ಮನವೊಲಿಸಲು ಕೈ ಬಳಗವೇ ಮುಂದಾಗಿದೆ.

    ಇಲ್ಲಿನ ಗಾಲ್ಫ್ ರಸ್ತೆಯಲ್ಲಿರುವ ನಟ ಅಂಬರೀಶ್ ನಿವಾಸಕ್ಕೆ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿ ಮಂಡ್ಯ ಮತಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಚುನಾವಣೆ ಪ್ರಚಾರಕ್ಕೆ ಸಿದ್ಧರಾಗುವಂತೆ ಒಂದು ಗಂಟೆ ಜಾರ್ಜ್ ಅವರು ಅಂಬರೀಶ್ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

    ಈ ಮುನ್ನ ಟಿಕೆಟ್ ಸಿಗಲಿ ನೋಡೋಣ ಎನ್ನುತ್ತಿದ್ದ ಅಂಬರೀಶ್, ಟಿಕೆಟ್ ಸಿಕ್ಕ ಮೇಲೂ ಪಕ್ಷದ ಮುಖಂಡರನ್ನು ಸಂಪರ್ಕಿಸಿಲ್ಲ. ಅಲ್ಲದೇ ಬಿ ಫಾರ್ಮ್ ಅನ್ನು ಕೂಡ ಪಡೆದಿಲ್ಲ. ಸ್ಪರ್ಧೆ ಮಾಡುವ ಕುರಿತಾಗಿಯೂ ಅವರು ಏನನ್ನೂ ಹೇಳದೆ ಕಾಂಗ್ರೆಸ್ ನಾಯಕರನ್ನು ಸತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮತ್ತು ಸಿಎಂ ಸಿದ್ದರಾಮಯ್ಯನವರ ಸಲಹೆಯಂತೆ ಸಚಿವ ಕೆ.ಜೆ.ಜಾರ್ಜ್ ಅವರನ್ನು ಅಂಬಿ ನಿವಾಸಕ್ಕೆ ಸಂಧಾನಕ್ಕೆ ಕಳುಹಿಸಲಾಗಿತ್ತು ಎನ್ನಲಾಗಿದೆ.

    ಅಂಬರೀಶ್ ಭೇಟಿ ನಂತರ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ನಾನು ಅಂಬರೀಶ್ ಒಳ್ಳೆಯ ಸ್ನೇಹಿತರು. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಅವರನ್ನು ಭೇಟಿ ಮಾಡುತ್ತೇನೆ. ಯಾವುದೇ ಸಂಧಾನ ಮಾತುಕತೆಗೆ ನಾನು ಇಲ್ಲಿಗೆ ಬಂದಿಲ್ಲ. ನನ್ನ ಮತಕ್ಷೇತ್ರದ ಪ್ರಚಾರಕ್ಕೆ ಬೆಂಬಲ ನೀಡುವಂತೆ ಕೇಳಲು ಬಂದಿದ್ದೆ. ಅವರಿಗೆ ಟಿಕೆಟ್ ಸಿಕ್ಕಿದೆ. ಬಿ ಫಾರ್ಮ್ ಪಡೆಯುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ನನಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಪ್ರಚಾರದ ಕುರಿತಾಗಿ ಏನು ಹೇಳಿಲ್ಲ. ಅವರ ಆರೋಗ್ಯ ಚೆನ್ನಾಗಿದೆ. ಸಿನಿಮಾ ಚಿತ್ರೀಕರಣಕ್ಕೂ ಹೋಗುತ್ತಿದ್ದಾರೆ. ಅವರು ಸಿನಿಮಾ ಹೀರೋ. ಹೀಗಾಗಿ ಅವರಿಗೆ ಬಿ ಫಾರ್ಮ್ ಅನ್ನು ಮನೆಗೆ ಕೊಟ್ಟು ಕಳಿಸಬಹುದು ಎಂದು ತಿಳಿಸಿದ್ದಾರೆ.