Tag: Mamtha Banerjee

  • 40 ಟಿಎಂಸಿ ಶಾಸಕರು ನಮ್ಮ ಸಂಪರ್ಕದಲ್ಲಿ – ದೀದಿಗೆ ಶಾಕ್ ಕೊಟ್ಟ ಮೋದಿ

    40 ಟಿಎಂಸಿ ಶಾಸಕರು ನಮ್ಮ ಸಂಪರ್ಕದಲ್ಲಿ – ದೀದಿಗೆ ಶಾಕ್ ಕೊಟ್ಟ ಮೋದಿ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾಂಬ್ ಸಿಡಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಶಾಕ್ ನೀಡಿದ್ದಾರೆ.

    ಪಶ್ಚಿಮ ಬಂಗಾಳದ ಸೆರಾಂಪುರ್ ಸಮಾವೇಶದಲ್ಲಿ ಮಾತನಾಡಿದ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ, ಮೇ 23ರ ಬಳಿಕ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಸ್ತಿತ್ವಕ್ಕೆ ಬರಲಿದೆ. ಆ ಬಳಿಕ ಎಲ್ಲೆಲ್ಲೂ ಬಿಜೆಪಿ ಇರಲಿದೆ. ಟಿಎಂಸಿ ಪಕ್ಷದ ನಿಮ್ಮ ಶಾಸಕರು ಕೂಡ ನಿಮ್ಮನ್ನು ತೊರೆದು ಬರಲಿದ್ದಾರೆ. ಈಗಾಗಲೇ 40 ಮಂದಿ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಏಕೆಂದರೆ ನಿಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಅವರು ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿಮಗೆ ಈ ಸಂಗತಿ ಕಷ್ಟವಾಗಬಹುದು ಎಂದು ಹೇಳಿದ್ದಾರೆ.

    ಕಳೆದ ಸೋಮವಾರವೂ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿದ್ದ ಮೋದಿ ಅವರು, ಲೋಕಸಭಾ ಚುನಾವಣೆ 4ನೇ ಹಂತದ ಮತದಾನದ ವೇಳೆ ಉಂಟಾದ ಘರ್ಷಣೆಗಳ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಟಿಎಂಸಿ ಕಾರ್ಯಕರ್ತರನ್ನು ಗೂಂಡಾಗಳ ಗುಂಪು ಎಂದು ಕರೆದಿದ್ದರು. ಅಲ್ಲದೇ ಗೂಂಡಾಗಳು ಚುನಾವಣೆಯಲ್ಲಿ ಮತದಾನವನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ನಡೆಸಿದ ಟಿವಿ ಸಂದರ್ಶನದಲ್ಲಿ ಪ್ರಧಾನಿ ಮೋದಿ, ಪ್ರತಿಪಕ್ಷಗಳಲ್ಲೂ ನನಗೆ ‘ಒಳ್ಳೆಯ ಸ್ನೇಹಿತರಿದ್ದಾರೆ’ ಎಂದು ಹೇಳಿದ್ದರು. ಜತೆಗೆ ಮಮತಾ ಬ್ಯಾನರ್ಜಿ ಅವರು ಖುದ್ದಾಗಿ ವರ್ಷಕ್ಕೆ ಎರಡು ಜತೆ ಕುರ್ತಾಗಳನ್ನು ಮತ್ತು ಸ್ವತಃ ತಯಾರಿಸಿದ ಸಿಹಿತಿಂಡಿಗಳನ್ನು ಕಳುಹಿಸುತ್ತಾರೆ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದ್ದರು.

    ಈ ವಿಚಾರ ಬಹಿರಂಗವಾದ ಬಳಿಕ ಮಮತಾ ಬ್ಯಾನರ್ಜಿ, ಮಣ್ಣಿನಿಂದ ಸಿಹಿತಿಂಡಿ ತಯಾರಿಸಿ ಅದರೊಳಗೆ ಕಲ್ಲುಗಳನ್ನು ತುಂಬಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿ ಕೊಡುತ್ತೇನೆ. ಲಡ್ಡು ತಯಾರಿಸುವಾಗ ಗೋಡಂಬಿ ಮತ್ತು ಒಣ ದ್ರಾಕ್ಷೆಗಳನ್ನು ಹಾಕುವಂತೆ ಮಣ್ಣಿನಿಂದ ತಯಾರಿಸಿದ ಸಿಹಿತಿಂಡಿಗೆ ಕಲ್ಲುಗಳನ್ನು ತುಂಬಿಸಿ ಮೋದಿಗೆ ಕಳುಹಿಸುತ್ತೇನೆ. ಅವರು ಅದನ್ನು ತಿನ್ನುವಾಗ ಹಲ್ಲುಗಳು ಮುರಿದು ಹೋಗಲಿ ಎನ್ನುವ ಆಘಾತಕಾರಿ ಹೇಳಿಕೆ ನೀಡಿದ್ದರು.

    ಕುರ್ತಾಗಳು ಮತ್ತು ಸ್ವೀಟ್‍ಗಳನ್ನು ಕಳುಹಿಸುವುದರಲ್ಲಿ ಯಾವ ತಪ್ಪೂ ಇಲ್ಲ. ದುರ್ಗಾ ಪೂಜೆ ಸಂದರ್ಭದಲ್ಲಿ ನಾವು ಪ್ರಮುಖ ವ್ಯಕ್ತಿಗಳ ಜತೆಗೆ ಸಿಹಿ ಹಂಚಿಕೊಳ್ಳುತ್ತೇವೆ. ಈ ವಿಷಯವನ್ನು ಬಹಿರಂಗಪಡಿಸುವ ಮೂಲಕ ಮೋದಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಮಮತಾ ಟೀಕಿಸಿದ್ದರು.