Tag: Mamatha banerji

  • ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿ, ಕೇಂದ್ರದ ವಿರುದ್ಧ ಹರಿಹಾಯ್ದ ದೀದಿ

    ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿ, ಕೇಂದ್ರದ ವಿರುದ್ಧ ಹರಿಹಾಯ್ದ ದೀದಿ

    ಕೋಲ್ಕತ್ತಾ: ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ಸಾವಿನ ಸುದ್ದಿ ತಿಳಿದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ  ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಸಿದ್ಧಾರ್ಥ್ ಅವರಿಗೆ ನೆಮ್ಮದಿಯಿಂದ ಉದ್ಯಮ ನಡೆಸಲು ತೆರಿಗೆ ಇಲಾಖೆ ಹಾಗೂ ಇತರೆ ಸಂಸ್ಥೆಗಳು ಬಿಡುತ್ತಿರಲಿಲ್ಲ. ಮನನೊಂದು ಈ ನಿರ್ಧಾರವನ್ನು ಸಿದ್ಧಾರ್ಥ್ ತೆಗೆದುಕೊಂಡಿದ್ದರು ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರ ಶಾಂತಿಯುತವಾಗಿ ಆಡಳಿತ ನಡೆಸಿ, ದ್ವೇಷ ರಾಜಕಾರಣವನ್ನು ಬದಿಗಿಟ್ಟು ತನಿಖಾ ಸಂಸ್ಥೆಗಳನ್ನು ದೇಶದ ಭವಿಷ್ಯವನ್ನು ನಾಶಮಾಡದಂತೆ ನೋಡಿಕೊಳ್ಳಬೇಕಿದೆ ಎಂದು ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಸಂಸತ್ತಿನಲ್ಲಿ ಸಿದ್ಧಾರ್ಥ್ ಸಾವು ಪ್ರಸ್ತಾಪ – ತನಿಖೆಗೆ ಮನೀಷ್ ತಿವಾರಿ ಆಗ್ರಹ

    ಪೋಸ್ಟ್ ನಲ್ಲಿ ಏನಿದೆ?
    ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ ಸಿದ್ದಾರ್ಥ್ ಅವರ ಅಕಾಲಿಕ ಹಾಗೂ ಅನಿರೀಕ್ಷಿತ ಮರಣದಿಂದ ತೀವ್ರ ಆಘಾತವಾಗಿದೆ. ಇದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ ಸಂಗತಿಯಾಗಿದೆ.

    ಸಿದ್ದಾರ್ಥ್ ಅವರಿಗೆ ತಮ್ಮ ಉದ್ಯಮವನ್ನು ನೆಮ್ಮದಿಯಿಂದ ನಡೆಸಲು ತೆರಿಗೆ ಇಲಾಖೆಯೂ ಸೇರಿದಂತೆ ನಾನಾ ಸಂಸ್ಥೆಗಳ ಕಿರುಕುಳದಿಂದ ಸಾಧ್ಯವಾಗಲಿಲ್ಲ ಎಂಬುದು ಅವರು ಬರೆದಿರುವ ಪತ್ರದಿಂದ ತಿಳಿದಿದೆ. ಈ ಬಗ್ಗೆ ಕೇಳಿದಾಗ ತುಂಬ ನೋವಾಯಿತು. ಅಂತಹ ಕಿರುಕುಳವನ್ನು ತಡೆದುಕೊಳ್ಳುವ ಶಕ್ತಿ ಅವರಿಗಿರಲಿಲ್ಲ. ಇದರಿಂದ ಅವರು ಹೆಚ್ಚು ಒತ್ತಡದಲ್ಲಿದ್ದರು ಎನ್ನಲಾಗಿದೆ. ದೇಶದಲ್ಲಿ ಉದ್ಯಮಿಗಳಿಗೆ ಉಂಟಾಗುತ್ತಿರುವ ಕಿರುಕುಳಗಳನ್ನು ತಡೆಯಲು ಏನಾದರೂ ಮಾಡಲೇಬೇಕಿದೆ. ರಾಜಕೀಯ ದ್ವೇಷ ಸಾಧನೆಗಾಗಿ ಕುದುರೆ ವ್ಯಾಪಾರ ಮತ್ತು ಕಿರುಕುಳ ನೀಡಲಾಗುತ್ತಿರುವ ವಿಚಾರ ಪ್ರತಿಪಕ್ಷಗಳಲ್ಲಿ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ:ಯೋಧನಾಗುವ ಆಸೆ ಕಂಡಿದ್ದ ಸಿದ್ಧಾರ್ಥ್ ಕಾಫಿ ಕಿಂಗ್ ಆದ ಕಹಾನಿ

    ಒಂದೆಡೆ ದೇಶದ ಆರ್ಥಿಕ ಬೆಳವಣಿಗೆ ತೀವ್ರವಾಗಿ ಕುಸಿದಿದೆ. 2018-19ರ ಕೊನೆಯ ತ್ರೈಮಾಸಿಕ ವರದಿಯಲ್ಲಿ ಆರ್ಥಿಕ ಬೆಳವಣಿಗೆ ದರ ಶೇ.5.8ಕ್ಕೆ ಕುಸಿದಿತ್ತು. ಇದು ಕಳೆದ 5 ವರ್ಷಗಳಲ್ಲೇ ಅತಿ ಕಡಿಮೆ. ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತ್ಯಧಿಕ ಎನ್ನುವ ಹಾಗೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಶಸ್ತ್ರಾಸ್ತ್ರ ಕಾರ್ಖಾನೆಯಿಂದ ಹಿಡಿದು ಬಿಎಸ್‍ಎನ್‍ಎಲ್ ವರೆಗೆ, ಏರ್ ಇಂಡಿಯಾದಿಂದ ರೈಲ್ವೇ ಇಲಾಖೆ ತನಕ ಎಲ್ಲಾ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಬಂಡವಾಳವನ್ನು ಹಿಂತೆಗೆದುಕೊಳ್ಳಲು ಮುಂದಾಗಿದೆ.

    ಸರ್ಕಾರದ ಈ ನಿರ್ಧಾರದಿಂದ ಅರ್ಥ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗುತ್ತಿದೆ. ಜನಸಾಮಾನ್ಯರು ತೊಂದರೆಯಲ್ಲಿ ಸಿಲುಕುತ್ತಿದ್ದಾರೆ. ಉದ್ಯಮ, ಕೃಷಿ ಹಾಗೂ ಉದ್ಯೋಗಾವಕಾಶಗಳ ಸೃಷ್ಟಿಸುವಲ್ಲಿಯೇ ದೇಶದ ಭವಿಷ್ಯ ಅಡಕವಾಗಿದೆ. ಉದ್ಯಮ ವಲಯವನ್ನು ನಿರಾಶೆಗೊಳಿಸಿದರೆ ದೇಶದಲ್ಲಿ ಆರ್ಥಿಕತೆ ಮತ್ತು ಉದ್ಯೋಗಾವಕಾಶಗಳ ಬೆಳವಣಿಗೆ ಇರುವುದಿಲ್ಲ. ಹೀಗಾಗಿ ಹೆಚ್ಚು ಹೆಚ್ಚು ಜನ ನಿರುದ್ಯೋಗಿ ಆಗುತ್ತಾರೆ. ಇದನ್ನೂ ಓದಿ:ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ- ಬಳ್ಳಾರಿ ಐಜಿಯಿಂದ ಭಾವನಾತ್ಮಕ ಪತ್ರ

    ಸರ್ಕಾರವು ಶಾಂತಿಯುತವಾಗಿ ಕೆಲಸ ನಿರ್ವಹಿಕೊಂಡು ಜನರು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ರಾಜಕೀಯ ದ್ವೇಷ ಹಾಗೂ ತನಿಖಾ ಸಂಸ್ಥೆಗಳು ದೇಶದ ಭವಿಷ್ಯವನ್ನು ನಾಶಗೊಳಿಸದಂತೆ ನೋಡಿಕೊಳ್ಳಬೇಕು ಎಂದು ನಾನು ಕೇಂದ್ರ ಸರ್ಕಾರಕ್ಕೆ ಮಾನವಿ ಮಾಡುತ್ತಿದ್ದೇನೆ.

    ಈ ದುರದೃಷ್ಟಕರ ಸುದ್ದಿ ತಿಳಿದು ನನಗೆ ನಿಜಕ್ಕೂ ನೋವಾಗಿದೆ. ಸಿದ್ಧಾರ್ಥ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸುತ್ತಿದ್ದೇನೆ. ನಿಮ್ಮೆಲ್ಲರ ಜೊತೆ ನನ್ನ ಭಾವನೆ ಮತ್ತು ಮಾತುಗಳನ್ನು ತಿಳಿಸಬೇಕೆಂದು ಅನಿಸಿಕೆಗಳನ್ನು ಹಂಚಿಕೊಂಡೆ ಎಂದು ಫೇಸ್‍ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

    https://www.facebook.com/MamataBanerjeeOfficial/posts/2603989656335026

  • ಪ್ರಿಯಾಂಕಾ ಗಾಂಧಿಗೆ ‘ಪಪ್ಪು ಕಿ ಪಪ್ಪಿ’ ಅಂದ್ರು ಮಹೇಶ್ ಶರ್ಮಾ!

    ಪ್ರಿಯಾಂಕಾ ಗಾಂಧಿಗೆ ‘ಪಪ್ಪು ಕಿ ಪಪ್ಪಿ’ ಅಂದ್ರು ಮಹೇಶ್ ಶರ್ಮಾ!

    ಸಿಕಂದರಾಬಾದ್: ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಮಹೇಶ್ ಶರ್ಮಾ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ‘ಪಪ್ಪು ಕಿ ಪಪ್ಪಿ’ ಎಂದು ಕರೆದು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಸಿಕಂದರಾಬಾದ್‍ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಶರ್ಮಾ, ಒಂದುವೇಳೆ ಮಮತಾ ಬ್ಯಾನರ್ಜಿ ಇಲ್ಲಿಗೆ ಬಂದು ಕಥಕ್ ಡ್ಯಾನ್ಸ್ ಮಾಡುತ್ತಿದ್ದರೆ, ಕರ್ನಾಟಕ ಸಿಎಂ ಹಾಡು ಹಾಡಿದರೆ ಕೇಳುವವರು ಯಾರು? ಪಪ್ಪು(ರಾಹುಲ್ ಗಾಂಧಿ) ತಾನು ಪ್ರಧಾನಿಯಾಗುತ್ತೇನೆ ಎಂದು ಹೇಳ್ತಾರೆ. ಅದಕ್ಕಾಗಿ ಪಪ್ಪು ಒಂದು ಪಪ್ಪಿಯನ್ನು (ಪ್ರಿಯಾಂಕಾ ಗಾಂಧಿ) ತಂದಿದ್ದಾರೆ. ಆದ್ರೆ ಇವರೆಲ್ಲರಿಗಿಂತ ಮೇಲಿರುವುದು ನಮ್ಮ ಹುಲಿ ಮೋದಿ ಅವರು ಎಂದು ಹೇಳಿದರು.

    ಇದೇ ವೇಳೆ ಕರ್ನಾಟಕದ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪ್ರಾದೇಶಿಕ ನಾಯಕರಷ್ಟೇ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ನಾಯಕರು ಎಂದು ಶರ್ಮಾ ಹೇಳಿದರು.

    ಈ ಹಿಂದೆ ಶುಕ್ರವಾರದಂದು, ಉದ್ಯೋಗಾವಕಾಶ, ಶಿಕ್ಷಣ ಮತ್ತು ಇತರ ಮೂಲ ಸೌಕರ್ಯಗಳ ಕುರಿತು ಮಾತನಾಡುತ್ತ, ದೇವರು ಕೂಡ ಎಲ್ಲ ನಿಮ್ಮ ಬೇಡಿಕೆಯನ್ನು ಈಡೇರಿಸಲ್ಲ, ಹಾಗಿದ್ದರೆ ಒಬ್ಬ ಸಂಸದ ಹೇಗೆ ತಾನೇ ಜನರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸಾಧ್ಯ ಎಂದು ಪ್ರಶ್ನಿಸಿದರು.

    ಈ ಮಧ್ಯೆ ಪ್ರಿಯಾಂಕಾ ಗಾಂಧಿ ವಾದ್ರ ಅವರು ಮೂರು ದಿನಗಳ ಕಾಲ ಗಂಗಾ ಯಾತ್ರೆ ಮಾಡುವ ಪ್ಲಾನ್ ಹಾಕಿದ್ದು, ಪ್ರಯಾಗ್‍ರಾಜ್‍ನಿಂದ ವಾರಾಣಸಿಗೆ ದೋಣಿಯ ಮೂಲಕ ಯಾತ್ರೆ ನಡೆಸುವ ಅವರು, ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ಗಂಗಾ ಯಾತ್ರೆ ನಡೆಸುವುದರಿಂದ ಈ ಭಾಗದ ಜನರ ಜೊತೆ ಬೆರೆಯುವ ಅವಕಾಶ ನನಗೆ ಸಿಗುತ್ತಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.