ಕಲಬುರಗಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮಗೆ 224 ಮೊಮ್ಮಕ್ಕಳಿಲ್ಲ ಯಾಕೆ ಇಲ್ಲ? ಇದಿದ್ದರೆ ಎಲ್ಲರಿಗೂ ಸೀಟು ಕೊಡಿಸಬಹುದಿತ್ತು ಎಂಬ ಚಿಂತೆ ಅವರಿಗೆ ಕಾಡುತ್ತಿದೆ ಎಂದು ಕಲಬುರಗಿಯಲ್ಲಿ ನಡೆದ ಕೋಲಿ ಸಮಾಜ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ವ್ಯಂಗ್ಯವಾಡಿದ್ದಾರೆ.
ಸಭೆಯಲ್ಲಿ ಕುಟುಂಬ ರಾಜಕಾರಣ ಬಗ್ಗೆ ಪ್ರಸ್ತಾಪಿಸಿ ಚಿಂಚನಸೂರ್, ದೇವೇಗೌಡರಿಗೆ 224 ಮೊಮ್ಮಕ್ಕಳಿದ್ದಿದ್ದರೆ ಎಲ್ಲ ಕ್ಷೇತ್ರಗಳಲ್ಲಿ ಅವರೇ ಸ್ಪರ್ಧೆ ಮಾಡುತ್ತಿದ್ದರು. ಆದ್ರೆ ಅಷ್ಟು ಮಂದಿ ಯಾಕೆ ಮೊಮ್ಮಕ್ಕಳಿಲ್ಲ ಅಂತ ಅವರು ಚಿಂತೆ ಮಾಡುತ್ತಿದ್ದಾರೆ. ಅಲ್ಲದೆ ಕಲಬುರಗಿಯಲ್ಲಿಯೂ ತಂದೆ, ಮಗ ಅಷ್ಟೇ ಇರಬೇಕು ಅಂತಾ ಎಲ್ಲರನ್ನೂ ಹೊರಗೆ ಹೋಗೋ ಹಾಗೇ ಮಾಡಿದ್ದಾರೆ ಅಂತ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಬಾಬುರಾವ್ ಚಿಂಚನಸೂರು ವಾಗ್ದಾಳಿ ನಡೆಸಿದರು.
ಕೇಂದ್ರದಲ್ಲಿ ಈ ಬಾರಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ಕೋಲಿ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರಿಸಲಾಗುವುದು ಎಂದು ಭರವಸೆಯನ್ನು ನೀಡಿದರು.
– ಕಾಂಗ್ರೆಸ್‍ಗೆ ಜನರಿಂದ ಚೋರ್ ಬಿರುದು
– ಜಾಧವ್ ನಮ್ಮ ಅಭ್ಯರ್ಥಿ, ಖರ್ಗೆ ವಿರುದ್ಧ ಗೆಲುವು ನಿಶ್ಚಿತ
ಕಲಬುರಗಿ: ಸಿಎಂ ಎಚ್.ಡಿ ಕುಮಾರಸ್ವಾಮಿ ಸುಳ್ಳಿನ ಸರದಾರ, ಕುಣಿಯೋಕೆ ಬರದಿದ್ದರೆ ನೆಲ ಡೊಂಕು ಅಂತಾರೆ ಎಂದು ಕುಮಾರಸ್ವಾಮಿ ವಿರುದ್ಧ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಾಲಮನ್ನಾದ ಬಗ್ಗೆ ಪದೇ ಪದೇ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ, ಆದರೆ ಸಾಲ ಮನ್ನಾದ ಬಗ್ಗೆ ಇದೂವರೆಗೆ ಸ್ಪಷ್ಟವಾದಂತಹ ನಿರ್ಧಾರ ತೆಗೆದುಕೊಂಡಿಲ್ಲ. ನಿನ್ನೆ ಕಾಂಗ್ರೆಸ್ ಪರಿವರ್ತನಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಹಾಗೂ ಖರ್ಗೆ ಕೆಂಡದಂತಹ ಬಿಸಿಲಿನಲ್ಲೂ ಹಸಿ ಸುಳ್ಳಿನ ಭಾಷಣ ಮಾಡಿದ್ದು, ಜನರು ಕಾಂಗ್ರೆಸ್‍ಗೆ ಚೋರ್ ಎಂಬ ಬಿರುದು ಕೊಟ್ಟಿದ್ದಾರೆ. ರಫೆಲ್ ಎಂಬುದು ಹಗರಣವಲ್ಲ, ಬದಲಿಗೆ ಅದು ವಿವಾದತ್ಮಕ ಪ್ರಕರಣ, ಆದ್ರೆ ಯುಪಿಎ ಸರ್ಕಾರ ಬೊಫೋರ್ಸ್ ಹಿಡಿದು ಅದನ್ನು ಹಗರಣ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಬಳಿಕ ಚಿಂಚೋಳಿ ಶಾಸಕರಾಗಿದ್ದ ಉಮೇಶ್ ಜಾಧವ್ ಅವರೇ ನಮ್ಮ ಪಕ್ಷದ ಅಭ್ಯರ್ಥಿ, ಖರ್ಗೆ ವಿರುದ್ಧ ಜಾಧವ್ ಗೆಲವು ನಿಶ್ಚಿತ ಅಂತ ವಿಶ್ವಾಸ ವ್ಯಕ್ತಪಡಿಸಿದರು. ಹಾಗೆಯೇ ಜಾಧವ್ ಅವರು ಸ್ವ ಇಚ್ಚೆಯಿಂದ ರಾಜೀನಾಮೆ ಸಲ್ಲಿಸಿದಾರೆ, ರಾಜೀನಾಮೆ ಅಂಗೀಕರಿಸುವುದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಒಪ್ಪಿಕೊಳ್ಳಲೇಬೇಕು. ಜಾಧವ್ ಅವರ ರಾಜೀನಾಮೆ ಅಂಗೀಕಾರ ಮಾಡಲು ಸಮ್ಮಿಶ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಅಂತ ಆರೋಪಿಸಿದರು.
ಉಡುಪಿ: ಕರ್ನಾಟಕದಲ್ಲಿ ಲೋಕಾಯುಕ್ತ ಮುಗಿಸಿದಂತೆ ದೇಶದಲ್ಲಿ ಕಾಂಗ್ರೆಸ್ ಲೋಕಪಾಲನ್ನು ಮುಗಿಸ್ತೀರಾ ಅಂತ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ದಾರೆ. ಲೋಕಪಾಲ್ ಆಯ್ಕೆ ಸಂಬಂಧ ಐದು ವರ್ಷದಲ್ಲಿ ಒಂದೇ ಒಂದು ಸಭೆಯಲ್ಲಿ ಪಾಲ್ಗೊಳ್ಳದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕೋಟ ಗರಂ ಆಗಿದ್ದಾರೆ.
ಉಡುಪಿಯಲ್ಲಿ ಮಾತಮಾಡಿದ ಕೋಟ, ಲೋಕಪಾಲ್ ಬಗ್ಗೆ ಅಣ್ಣಾ ಹಜಾರೆ ಧರಣಿ ಕುಳಿತು ದೊಡ್ಡ ಹೋರಾಟ ಕೊಟ್ಟಿದ್ದರು. ದೇಶದ ಜನರ ಕನಸು ಈಗ ನೆರವೇರಿದೆ. ಆದ್ರೆ ಲೋಕಪಾಲ್ ಬಿಲ್ ವಿಚಾರದಲ್ಲಿ ಕಾಂಗ್ರೆಸ್ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಬೇಕು ಅಂತ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ದಾರೆ. ಮಸೂದೆ ಅನುಷ್ಠಾನ ಕುರಿತು 5 ವರ್ಷದಲ್ಲಿ 7 ಮೀಟಿಂಗ್ ಆಗಿದೆ. ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕ ಅಲ್ಲದಿದ್ದರೂ ಅವರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಕಾಂಗ್ರೆಸ್ ಸಂಸದೀಯ ನಾಯಕನ ನೆಲೆಯಲ್ಲಿ ಖರ್ಗೆಗೆ ಮೋದಿ ಆಹ್ವಾನ ನೀಡಿದ್ದರು. ಆದರೆ ಒಂದು ಸಭೆಗೆ ಖರ್ಗೆ ಹಾಜರಾಗಲಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಲೋಕಪಾಲ್ ಬಿಲ್ ಪರವೋ ವಿರುದ್ಧವೋ? ಗೊತ್ತಾಗುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಇದನ್ನು ಕೂಡಲೇ ಸ್ಪಷ್ಟಪಡಿಸಬೇಕು. ಅವರು ಏಳು ಬಾರಿಯೂ ಸಭೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈಗ ಅವರು ಉತ್ತರಿಸಬೇಕು. ಲೋಕಪಾಲ್ ಮಸೂದೆಯನ್ನು ನಿರ್ಲಕ್ಷ್ಯ ಮಾಡುತ್ತೀರಾ ಎಂದು ಕೋಟ ಪ್ರಶ್ನೆ ಹಾಕಿದ್ದಾರೆ. ಕರ್ನಾಟಕದಲ್ಲಿ ಲೋಕಾಯುಕ್ತವನ್ನು ಮುಗಿಸಿದ್ದೀರಿ. ದೇಶದಲ್ಲಿ ಲೋಕಪಾಲ್ ಮುಗಿಸುವ ಆಲೋಚನೆಯಲ್ಲಿದ್ದೀರಾ ಅಂತ ಖರ್ಗೆ ಮತ್ತು ಕಾಂಗ್ರೆಸ್ ವಿರುದ್ಧ ಕೋಟ ಕುಟುಕಿದ್ದಾರೆ.
ಖರ್ಗೆ ಗೈರಾಗಿದ್ದು ಯಾಕೆ?
ಲೋಕಪಾಲರ ನೇಮಕ ಸಂಬಂಧ ಇರುವ ಸಮಿತಿಯಲ್ಲಿ ವಿರೋಧ ಪಕ್ಷ ನಾಯಕರು ಸದಸ್ಯರಾಗಿರುತ್ತಾರೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಕ್ಕೆ ಬೇಕಾಗುವಷ್ಟು ಸ್ಥಾನಗಳನ್ನು ಯಾರು ಪಡೆಯದ ಕಾರಣ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಪಕ್ಷ ನಾಯಕನ ಸ್ಥಾನವನ್ನು ನೀಡಿರಲಿಲ್ಲ. ಖರ್ಗೆ ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು. ಲೋಕಪಾಲ್ ನೇಮಕ ಸಂಬಂಧ ಖರ್ಗೆ ಅವರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಲಾಗಿತ್ತು. ವಿಶೇಷ ಆಹ್ವಾನಿತರಾಗಿ ನಾನು ತೆರಳುವುದಿಲ್ಲ ಎಂದು ಹೇಳಿ ಖರ್ಗೆ ಲೋಕಪಾಲ್ ಆಯ್ಕೆ ಸಂಬಂಧ ಕರೆದಿದ್ದ ಸಭೆಗೆ ಗೈರು ಹಾಜರಿ ಹಾಕಿದ್ದರು.
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಜೊತೆ ಮದ್ವೆಯಾಗಬಹುದು, ಆದರೆ ಅವರಿಗೆ ಮಕ್ಕಳಾಗಲ್ಲ ಎಂದು ಬಸವಕಲ್ಯಾಣ ಕೈ ಶಾಸಕ ಬಿ ನಾರಾಯಣ್‍ರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ನಡೆದ ಕೈ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಹಿಂದೆ ಇಡೀ ದೇಶವಿದೆ. ಆದರೆ ಅದು ಮೋದಿಗೆ ಅರ್ಥವಾಗುತ್ತಿಲ್ಲ. ನಾಮರ್ಧ್ ಕೇ ಸಾಥ್ ಶಾದಿ ಹೋ ಸಕ್ತಿ ಹೈ, ಮಗರ್ ಔಲಾದ್ ನಹೀ ಹೋತಿ ಹೈ (ಷಂಡರ ಜೊತೆ ಮದ್ವೆಯಾಗುತ್ತದೆ. ಆದರೆ ಮಕ್ಕಳಾಗಲ್ಲ). ಮೋದಿ ಸೇ ಶಾದಿ ಹೋ ಸಕ್ತಿ ಹೈ, ಮಗರ್ ಔಲಾದ್ ನಹೀ ಹೋತೆ ಹೈ(ಮೋದಿ ಜೊತೆ ಮದ್ವೆಯಾಗಬಹುದು, ಆದರೆ ಮೋದಿಗೆ ಮಕ್ಕಳಾಗಲ್ಲ) ಎಂದು ಹೇಳಿ ಪ್ರಧಾನಿ ಅವರನ್ನು ಷಂಡರಿಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯನ್ನು ಎದುರಿಸೋ ಶಕ್ತಿ ಮೋದಿಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಮುಂದೊಂದು ದಿನ ದೇಶದ ಪ್ರಧಾನಿಯಾಗಲಿದ್ದಾರೆ ಎನ್ನುತ್ತ ಹಿಂದಿಯ ಶಾಯರಿಯೊಂದನ್ನು ಬಳಸಿ ಮೋದಿ ಅವರಿಗೆ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನಾರಾಯಣ್‍ರಾವ್ ನೀಡಿದ್ದಾರೆ.
ಕಲಬುರಗಿ: ಭಾರತದ ಪ್ರಧಾನಿಯಾಗಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೂಕ್ತವಲ್ಲ. ಅವರು ಇನ್ನೂ ಪ್ರಧಾನಿಯಾಗುವ ಮಟ್ಟಿಗೆ ಸಿದ್ಧವಾಗಿಲ್ಲ ಎಂದು ಕಾಂಗ್ರೆಸ್ ಮಾಜಿ ಸಚಿವ ಮಾಲಕರೆಡ್ಡಿ ನೀಡಿದ್ದಾರೆ.
ಬಿಜೆಪಿ ಸೇರ್ಪಡೆ ವದಂತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಲಕರೆಡ್ಡಿ, ನಾನು ಕಾಂಗ್ರೆಸ್ ಬಿಡುವುದಿಲ್ಲ. ಅನಾರೋಗ್ಯದ ಕಾರಣದಿಂದ ಚುನಾವಣೆ ವಿಚಾರದಲ್ಲಿ ದೂರವಿದ್ದೇನೆ. ದೇಶದ ಪ್ರಧಾನಿ ಹುದ್ದೆಗೆ ರಾಹುಲ್ ಸೂಕ್ತವಲ್ಲ. ಅವರು ಪ್ರಧಾನಿ ಹುದ್ದೆ ನಿರ್ವಹಿಸಲು ಸಿದ್ಧರಾಗಿಲ್ಲ. ದೇಶದ ರಕ್ಷಣೆ ಮುಖ್ಯ, ಸದ್ಯ ಇರುವ ಪರಿಸ್ಥತಿಯಲ್ಲಿ ಮೋದಿ ಅವರು ದೇಶದ ರಕ್ಷಣಾ ವಿಚಾರದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಈ ವಿಷಯದಲ್ಲಿ ನಾನು ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತೆನೆ. ರಾಷ್ಟ್ರ ಮಟ್ಟದಲ್ಲಿ ರಾಜಕಾರಣ ಮಾಡಿ ಅನುಭವವಿರುವ ನಾಯಕರೇ ಮೋದಿ ನಾಯಕತ್ವವನ್ನು ಒಪ್ಪಿದ್ದಾರೆ ಎಂದು ಹೇಳಿದರು.
ಸೋನಿಯಾ ಗಾಂಧಿ ಅವರಿಗೆ ರಾಜಕೀಯದ ಮೇಲಿದ್ದ ಜಾಣ್ಮೆ ರಾಹುಲ್ ಅವರಲ್ಲಿ ನಾನು ಕಂಡಿಲ್ಲ. ಅವರು ಇನ್ನೂ ರಾಜಕೀಯದಲ್ಲಿರುವ ಅನುಭವ ಸಾಲದು. ನಾನು ಪಕ್ಷ ಬಿಡುವ ಆಲೋಚನೆ ಮಾಡಿಲ್ಲ. ನನಗೆ ಯಾವುದೇ ಅಸಮಾಧಾನ ಇಲ್ಲ. ನಾನು ಖರ್ಗೆ ಪರ ಪ್ರಚಾರ ಮಾಡಲ್ಲ, ಪಕ್ಷದ ಪರವಾಗಿ ಪ್ರಚಾರ ಮಾಡುತ್ತೆನೆ. ಯಾಕೆಂದರೆ ಇತ್ತೀಚಿಗೆ ಕ್ಷೇತ್ರದಲ್ಲಿ ಖರ್ಗೆಯವರ ವರ್ಚಸ್ಸು ಕಡಿಮೆ ಆಗಿದೆ. ಅದಕ್ಕಾಗಿ ಖರ್ಗೆ ಆಪ್ತರು ಅವರನ್ನು ಬಿಟ್ಟು ಹೋಗುತ್ತಿದ್ದಾರೆ. ನಾನು ಖರ್ಗೆಯ ನಾಯಕತ್ವ ಸಹ ಒಪ್ಪಲ್ಲ ಎಂದು ಹೇಳುವ ಮೂಲಕ ಸ್ಥಳೀಯ ನಾಯಕತ್ವದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ರಾಷ್ಟ್ರವ್ಯಾಪಿ ಚರ್ಚೆಗೆ ಒಳಗಾಗುತ್ತಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ್ ಜಾಧವ್ ಈ ಬಾರಿಯ ಕಮಲದ ಅಭ್ಯರ್ಥಿ ಎಂದು ಬಿಂಬಿತರಾಗಿದ್ದಾರೆ. ಇದೀಗ ತಂದೆಯ ಕುಚುಕು ಗೆಳೆಯ ಮಲ್ಲಿಕಾರ್ಜುನ ಖರ್ಗೆಯರನ್ನು ಸೋಲಿಸಲು ಮಾಜಿ ಸಿಎಂ ಧರಂಸಿಂಗ್ ಪುತ್ರ ಅಜಯ್ ಸಿಂಗ್ ಮುಂದಾದ್ರಾ ಎಂದು ಕೈ ವಲಯದಲ್ಲಿ ಚರ್ಚೆ ಶುರುವಾಗಿದೆ.
ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ಬಳಿಕ ನನ್ನ ಬಳಿಯೂ ಅಸ್ತ್ರಗಳಿವೆ. ಸಮಯ ಬಂದಾಗ ಪ್ರಯೋಗಿಸುತ್ತೇನೆ ಎಂದು ಹೇಳಿಕೆಯನ್ನು ನೀಡಿದ್ದರು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ವೈಬ್‍ಸೈಟ್ ಪ್ರಕಟಿಸಿತ್ತು. ಈ ಸುದ್ದಿಗೆ ಫೇಸ್‍ಬುಕ್ ನಲ್ಲಿ ಶಾಸಕ ಅಜಯ್ ಸಿಂಗ್ ಖಾತೆಯಿಂದ ‘ಗ್ರೇಟ್ ಜಾಧವ್ ಜೀ’ ಎಂದು ಕಮೆಂಟ್ ಮಾಡುವ ಮೂಲಕ ಪರೋಕ್ಷವಾಗಿ ಬಿಜೆಪಿ ಬೆಂಬಲಕ್ಕೆ ನಿಂತ್ರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಅಜಯ್ ಸಿಂಗ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಮೇಶ್ ಜಾಧವ್ ಅವರನ್ನು ಬೆಂಬಲಿಸುತ್ತಾರಾ ಎಂಬುದರ ಬಗ್ಗೆ ತೀವ್ರ ಚರ್ಚೆಗಳು ಆರಂಭಗೊಂಡಿವೆ. ಇತ್ತ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮತ್ತು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಇಬ್ಬರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಚುನಾವಣಾ ತಂತ್ರಗಳನ್ನು ರಚಿಸುತ್ತಿದ್ದಾರೆ.
ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎದುರು ಡಾ.ಉಮೇಶ್ ಜಾಧವ್ ಸ್ಪರ್ಧೆಯಿಂದ ಕಲಬುರಗಿ ಲೋಕಸಭೆ ಇದೀಗ ಸ್ಟಾರ್ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಈ ಬಾರಿ ಕನಿಷ್ಟ ಅಂದ್ರು 200 ಕೋಟಿಗೂ ಅಧಿಕ ಕುರುಡು ಕಾಂಚಾಣ ಹರಿಯಲ್ಲಿದೆಯಂತೆ. ಹೀಗಾಗಿ ಚುನಾವಣಾ ಆಯೋಗ ಈ ಕ್ಷೇತ್ರದ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಜಯ್ ಸಿಂಗ್, ಕಮೆಂಟ್ ಬಂದಿರುವ ಫೇಸ್ ಬುಕ್ ಖಾತೆ ನನ್ನದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎದುರು ಡಾ.ಉಮೇಶ್ ಜಾಧವ್ ಸ್ಪರ್ಧೆಯಿಂದ ಕಲಬುರಗಿ ಲೋಕಸಭೆ ಇದೀಗ ಸ್ಟಾರ್ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಈ ಬಾರಿ ಕನಿಷ್ಟ ಅಂದ್ರು 200 ಕೋಟಿಗೂ ಅಧಿಕ ಕುರುಡು ಕಾಂಚಾಣ ಹರಿಯಲ್ಲಿದೆಯಂತೆ. ಹೀಗಾಗಿ ಚುನಾವಣಾ ಆಯೋಗ ಈ ಕ್ಷೇತ್ರದ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಕಲಬುರಗಿ ಲೋಕಸಭೆ ಮೀಸಲು ಕ್ಷೇತ್ರ ಇದೀಗ ರಾಷ್ಟ್ರಮಟ್ಟದ ಟಾಪ್ 10 ಕ್ಷೇತ್ರಗಳಲ್ಲಿ ಒಂದಾಗಿದೆ. ಯಾಕಂದ್ರೆ ಈ ಕ್ಷೇತ್ರದಿಂದ ಕಾಂಗ್ರೆಸ್ ಸಂಸದ ಹಾಗೂ ಸೋಲಿಲ್ಲದ ಸರ್ದಾರ ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿಯಾದ್ರೆ, ಇತ್ತ ಬಿಜೆಪಿಯಿಂದ ಕಾಂಗ್ರೆಸ್ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಬಹುತೇಕ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಇವರಿಬ್ಬರ ನಡುವಿನ ಫೈಟ್ ಜಿಲ್ಲೆಯ ರಾಜಕಾರಣದಲ್ಲಿ ಹುಬ್ಬೆರಿಸುವಂತೆ ಮಾಡಿದೆ. ಚುನಾವಣೆಯ ದಿನಾಂಕ ನಿಗದಿಯಾಗದಿದ್ರು ಈ ಇಬ್ಬರು ಅಭ್ಯರ್ಥಿಗಳು ಇದೀಗ ಜಿಲ್ಲೆಯ ಗಲ್ಲಿ ಗಲ್ಲಿಗಳಿಗೆ ತೆರಳಿ ಮತ ಬೇಟೆ ಶುರು ಮಾಡಿದ್ದಾರೆ.
ಶತಾಯಗತಾಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿಸಬೇಕೆಂದು ಬಿಜೆಪಿ ಟೊಂಕ ಕಟ್ಟಿ ನಿಂತಿದೆ. ಇತ್ತ ಸೋಲಿಲ್ಲದ ಸರ್ದಾರ ಪಟ್ಟ ಉಳಿಸಿಕೊಳ್ಳಲು ಖರ್ಗೆ ಸಹ ಫೀಲ್ಡ್ ಗಿಳಿದಿದ್ದಾರೆ. ಈ ಮದಗಜಗಳ ಜಗಳದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲಬೇಕು ಅಂತಾ ಎರಡು ರಾಷ್ಟ್ರೀಯ ಪಕ್ಷಗಳು ಪ್ರತಿಷ್ಟೆಯಾಗಿ ತೆಗೆದುಕೊಂಡಿವೆ. ಪರಿಣಾಮ ಕಲಬುರಗಿ ಲೋಕಸಭಾ ಕ್ಷೇತ್ರವೊಂದರಲ್ಲೇ 200 ಕೋಟಿಗೂ ಹೆಚ್ಚು ಹಣದ ಹೊಳೆ ಹರಿಸಲು ಎರಡು ಪಕ್ಷಗಳ ಸಿದ್ದತೆ ನಡೆಸಿವೆಯಂತೆ. ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ಕ್ಷೇತ್ರಕ್ಕೆ ಕನಿಷ್ಟ ಅಂದ್ರು 12 ರಿಂದ 15 ಕೋಟಿ ರೂಪಾಯಿ ಹಂಚಲು ಎರಡು ಪಕ್ಷಗಳು ನಿರ್ಧರಿಸಿದ್ದು, ಈಗಾಗಲೇ ಹಣ ಹಂಚಿಕೆಯ ಬ್ಲೂ ಪ್ರಿಂಟ್ ಕೂಡ ರೆಡಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕುರುಡು ಕಾಂಚಾಣಾ ಹರಿಯುವ ಹಿನ್ನೆಲೆ ಕಲಬುರಗಿ ಲೋಕಸಭೆ ಮೇಲೆ ಕೇಂದ್ರ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಬೇಟೆಯಾಡಲು ಸಜ್ಜಾಗಿದೆ.
– ಖರ್ಗೆ ಅಡ್ಡದಲ್ಲಿ ಮೋದಿ ನೀರಸ ಭಾಷಣ
– ಯಡಿಯೂರಪ್ಪ ಮತ್ತೆ ಸೈಡ್‍ಲೈನ್ ಆದ್ರಾ?
ಬೆಂಗಳೂರು: ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕೋಟೆಗೆ ಪ್ರಧಾನಿ ಮೋದಿ ಆಗಮಿಸಿ ಎಲ್ಲಿಯೂ ಖರ್ಗೆ ಅವರ ಬಗ್ಗೆ ಮಾತನಾಡಲಿಲ್ಲ.
ಹೌದು, ತಮ್ಮ ಸುದೀರ್ಘ 45 ನಿಮಿಷಗಳ ಭಾಷಣದಲ್ಲಿ ಎಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮೋದಿ ಮಾತನಾಡಲಿಲ್ಲ. ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದ್ದ ಹಲವು ಯೋಜನೆಗಳ ಬಗ್ಗೆಯೇ ಪ್ರಧಾನಿಗಳು ಮಾತನಾಡಿದರು. ಕೇವಲ ಮೈತ್ರಿ ಸರ್ಕಾರವನ್ನ ಟೀಕಿಸಿದ ಮೋದಿ ಅವರ ಭಾಷಣ ನಿರಸವಾಗಿತ್ತು ಎನ್ನುವ ಮಾತುಗಳು ಈಗ ಕೇಳಿ ಬಂದಿದೆ. ಇದನ್ನೂ ಓದಿ:ಮೋದಿ ಇರೋವರೆಗೂ ಕಳ್ಳರ ಅಂಗಡಿ ಬಂದ್ – ಖರ್ಗೆ ಕೋಟೆಯಲ್ಲಿ ನಮೋ ರಣಕಹಳೆ
ಕಾಂಗ್ರೆಸ್ ಭದ್ರಕೋಟೆಯಾಗಿರುವ ಕಲಬುರಗಿಯನ್ನ ಈ ಬಾರಿ ತಮ್ಮ ವಶಕ್ಕೆ ಪಡೆದುಕೊಳ್ಳಲು ರಾಜ್ಯ ಬಿಜೆಪಿ ಘಟಕ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಆಯೋಜಿಸಿತ್ತು. ಹೀಗಾಗಿ ಖರ್ಗೆ ಅವರನ್ನು ಮೋದಿ ಟೀಕಿಸಲಿದ್ದಾರೆ ಎನ್ನುವ ನಿರೀಕ್ಷೆಯನ್ನು ಬಿಜೆಪಿ ಕಾರ್ಯಕರ್ತರು ಇಟ್ಟುಕೊಂಡಿದ್ದರು. ಆದರೆ ಪ್ರಧಾನಿಗಳು ಎಲ್ಲಿಯೂ ಖರ್ಗೆ ಅಥವಾ ಉಮೇಶ್ ಜಾಧವ್ ಬಗ್ಗೆ ಮಾತನಾಡಲಿಲ್ಲ. ಇದನ್ನೂ ಓದಿ: 8 ಕೋಟಿ ಜನ ಕಾಗದದಲ್ಲಿ ಜೀವಂತ, ನಿಮ್ಮ ಬೆಂಬಲವಿದ್ರೆ ಯಾರಿಗೂ ಹೆದರಲ್ಲ: ಮೋದಿ
ಮೋದಿ ಕಲಬುರಗಿ ಕ್ಷೇತ್ರಕ್ಕೆ ಆಗಮಿಸುರತ್ತಿದ್ದಾರೆ ಎಂಬ ಸುದ್ದಿ ತಿಳಿದ ಕೂಡಲೇ ಖರ್ಗೆ ವಿರುದ್ಧ ವಾಗ್ದಾಳಿ ನಡೆಸುತ್ತಾರೆ ಎಂದು ಭಾವಿಸಲಾಗಿತ್ತು. ಇತ್ತ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಉಮೇಶ್ ಜಾಧವ್ ಅವರನ್ನು ಕಾರ್ಯಕರ್ತರಿಗೆ ಪರಿಚಯಿಸಲು ಮುಂದಾಗಿಲಿಲ್ಲ. ಕೇವಲ ಶಾಲು ಹಾಕಿ ಪೇಟ ತೊಡಿಸುವಾಗ ಮಾತ್ರ ರಾಜ್ಯ ಬಿಜೆಪಿ ನಾಯಕರು ಉಮೇಶ್ ಜಾಧವ್ ಅವರನ್ನು ಪರಿಚಯ ಮಾಡಿಸಿದರು. ತಮ್ಮ ಭಾಷಣದಲ್ಲಿ ಎಲ್ಲಿಯೂ ಉಮೇಶ್ ಜಾಧವ್ ಬಿಜೆಪಿ ಅಭ್ಯರ್ಥಿ ಎಂಬುದನ್ನು ಹೇಳಲಿಲ್ಲ. ಜಾಧವ್ ರಾಜೀನಾಮೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಉಮೇಶ್ ಜಾಧವ್ ಅವರ ಹೆಸರನ್ನು ಮೋದಿ ಪ್ರಸ್ತಾಪಿಸಲಿಲ್ಲ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಪ್ರಧಾನಿಗಳು ವೇದಿಕೆಗೆ ಆಗಮಿಸುವ ಮೊದಲೇ ಉಮೇಶ್ ಜಾಧವ್ ಅವರನ್ನು ಯಡಿಯೂರಪ್ಪ ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಇತ್ತ ಭಾಷಣದಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸಲಿಲ್ಲ ಎಂದು ಉಮೇಶ್ ಜಾಧವ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಕಾರ್ಯಕ್ರಮದಲ್ಲಿಯೂ ಎಲ್ಲಿಯೂ ಪ್ರಧಾನಿಗಳು ಯಡಿಯೂರಪ್ಪರೊಂದಿಗೆ ಮೋದಿ ಮಾತನಾಡಲಿಲ್ಲ. ಹುಬ್ಬಳ್ಳಿಯ ಸಮಾವೇಶದಂತೆ ಇಲ್ಲಿಯೂ ಅವರನ್ನ ಸೈಡ್ ಲೈನ್ ಮಾಡಿದ್ರಾ ಎಂಬ ಚರ್ಚೆ ರಾಜಕೀಯ ಅಂಗಳದಲ್ಲಿ ಶುರುವಾಗಿದೆ.
– ಕರ್ನಾಟಕ ಸರ್ಕಾರ ರೈತರ ದುಷ್ಮನ್!
– ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಆಯ್ತಾ..?
– ಕರ್ನಾಟಕ ಸರ್ಕಾರ ರೈತರ ಮಾಹಿತಿ ನೀಡುತ್ತಿಲ್ಲ
ಕಲಬುರಗಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಲಬುರಗಿ ಕೋಟೆಗೆ ಪ್ರಧಾನಿ ಮೋದಿ ಆಗಮಿಸಿದ್ದು, ಜಿಲ್ಲೆಯ ಹಲವು ಸರ್ಕಾರಿ ಯೋಜನೆಗಳಿಗೆ ಚಾಲನೆ ನೀಡಿದರು. ಇದಾದ ಬಳಿಕ ಬಿಜೆಪಿ ಸಮಾವೇಶದಲ್ಲಿ ಭಾಗಿಯಾದ ಮೋದಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಎಂದಿನಂತೆ ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿಗಳು ಜಿಲ್ಲೆಯ ಅಣ್ಣ ಬಸವಣ್ಣರಿಗೆ ನಮಸ್ಕರಿಸಿದರು.
ವಿಧಾನಸಭೆ ಚುನಾವಣೆ ವೇಳೆಯೂ ನಾನು ನಿಮ್ಮ ಬಳಿ ಬಂದಿದೆ. ಇಲ್ಲಿಯ ಜನರ ಅಭಿವೃದ್ಧಿಗೆ ಎಂದು ಹಿಂದೇಟು ಹಾಕಲ್ಲ ಎಂದು ಹೇಳಿದ್ದೆ. ಅಂದು ನೀಡಿದ ಮಾತಿನಂತೆ ನಡೆದುಕೊಂಡು ಬಂದಿದ್ದೇನೆ. ಕಾಂಗ್ರೆಸ್ ಸರ್ಕಾರದ ಕುಂಠಿತಗೊಂಡ ಹಲವು ಯೋಜನೆಗಳನ್ನು ನಮ್ಮ ಸರ್ಕಾರವೇ ಪೂರ್ಣಗೊಳಿಸಿದೆ. ರೈಲ್ವೇ ಯೋಜನೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ. ಕೆಲವು ಸಮಯ ಹಿಂದೆ ಒಂದು ಸಾವಿರ ಕೋಟಿಗೂ ಅಧಿಕ ಯೋಜನೆಗಳಿಗೆ ಚಾಲನೆ ನೀಡಿ ಬಂದಿದ್ದೇನೆ ಎಂದ್ರು.
Karnataka has a 'Mazboor' govt but I hope you don't want such a govt in the centre. Sometimes we have to pay a heavy price for a small mistake. The people of Karnataka must be experiencing the same : PM Shri @narendramodi#ModiMattomme
ಕಾಂಗ್ರೆಸ್ ಸಾಧನೆಗೆ ಇಲ್ಲಿಯ ಮೆಡಿಕಲ್ ಕಾಲೇಜ್ ಸಾಕ್ಷಿಯಾಗಿದೆ. 2009ರಲ್ಲಿ ಈ ಕಾಲೇಜ್ ಸ್ಥಾಪನೆ ಮಾಡಲಾಗುವುದು ಎಂದು ಹೇಳಿತ್ತು. 2011ರಲ್ಲಿ ಜನರಿಗೆ ಕಾಣಲೆಂದು ನಿಧಾನಗತಿಯಲ್ಲಿ ಕಾಮಗಾರಿಯನ್ನು ಆರಂಭಿಸಿತ್ತು. ಆದರೆ ಇಂದು ನಾವು ಈ ಕೆಲಸವನ್ನು ಮಾಡಿದ್ದೇವೆ. ಹೀಗೆ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆ, ಕಾರ್ಮಿಕರಿಗೆ ಪಿಂಚಣಿ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಹೇಳಿದರು.
ಬಂಜಾರ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ವಿಭಾಗವನ್ನೇ ಸರ್ಕಾರ ಆರಂಭಿಸಿದೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಮೊದಲ ಹಂತದ ಕಂತನ್ನು ಸರ್ಕಾರ ನೀಡಿದೆ. ಕರ್ನಾಟಕ ಸರ್ಕಾರಕ್ಕೆ ರೈತರ ಪರವಾಗಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ನಮಗೆ ರೈತರ ಮಾಹಿತಿಯನ್ನು ನೀಡುತ್ತಿಲ್ಲ. ಕಾಂಗ್ರೆಸ್ ಹಿಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದ್ದು, ಮುಖ್ಯಮಂತ್ರಿಗಳು ರಿಮೋಟ್ ಅನತಿಯಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕರ್ನಾಟಕದ ರೈತರಿಗೆ ಅನ್ಯಾಯ ಮಾಡುತ್ತಿದ್ದು, ಖಾತೆಗೆ ನಗದು ಜಮೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಡ್ಡಿಯಾಗಿದೆ ಎಂದು ಕಿಡಿಕಾರಿದರು.
ಸಾಲಮನ್ನಾದ ಹೆಸರಲ್ಲಿ ಮತ ಕೇಳಿದ್ದ ಜೆಡಿಎಸ್, ಗೆದ್ದ ಬಳಿಕ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಸರ್ಕಾರ ಕರ್ನಾಟಕದ ರೈತರ ಮೇಲೆ ಕೇಸ್ ಮಾಡುತ್ತಿದೆ. ಮಾತಿನಂತೆ ಕೆಲಸ ಮಾಡುತ್ತಿರುವ ನಮಗೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಇಂತಹ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಮಾತು ತಪ್ಪಿದವರ ಲೆಕ್ಕಾ ಚುಕ್ತಾ ಸಮಯ ಇದೀಗ ಬಂದಿದೆ ಎಂದರು.
ಸಮಾವೇಶದಲ್ಲಿ ಭಗವಂತ ಖೂಬಾ ಮತ್ತು ಉಮೇಶ್ ಜಾಧವ್ ಪ್ರಧಾನಿಗಳಿಗೆ ಶಾಲು ಹೊದಿಸಿ ಪೇಟ ತೊಡಿಸಿ, ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಮೂರ್ತಿಯನ್ನು ನೀಡಿ ಸ್ವಾಗತಿಸಿದ್ರು. ಇದೇ ವೇಳೆ ವಾಯುಪುತ್ರನ ಗದೆಯನ್ನು ನೀಡುವ ಮೂಲಕ ಬರಮಾಡಿಕೊಳ್ಳಲಾಯ್ತು.
ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದ ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ಇಂದು ಅಧಿಕೃತವಾಗಿ ಕಮಲ ಹಿಡಿದರು. ಸಂಸತ್ತಿನಲ್ಲಿ ಏಟಿಗೆ ಎದಿರೇಟು ನೀಡುವ ಸೋನಿಯಾ ಗಾಂಧಿಯವರ ಬಲಗೈ ಬಂಟನಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಮೋದಿ ಶಪಥ ಮಾಡಿದ್ದಾರಂತೆ. ಹೀಗಾಗಿ ಕಾಂಗ್ರೆಸ್‍ನಲ್ಲಿ ಪಳಗಿದ್ದ ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್ ಮತ್ತು ಉಮೇಶ್ ಜಾಧವ್ ತ್ರಿಮೂರ್ತಿಗಳ ಮೂಲಕವೇ ಸೋಲಿಲ್ಲದ ಸರದಾರರಾಗಿರುವ ಖರ್ಗೆ ಅವರನ್ನು ಸೋಲಿಸಲು ಮೋದಿ ಪ್ಲಾನ್ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಲಬುರಗಿ ಆಗಮಿಸಿದ ಪ್ರಧಾನಿಗಳನ್ನು ಜಿಲ್ಲಾಡಳಿತ ಹಾಗೂ ಸಚಿವರಾದ ರಾಜಶೇಖರ್ ಪಾಟೀಲ್ ಬರಮಾಡಿಕೊಂಡರು. ನೇರವಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಉದ್ಘಾಟನೆ ನೆರವೇರಿಸಿದರು. ಬಿಪಿಸಿಎಲ್ ಕಲಬುರ್ಗಿ ಡಿಪೋ, ಬೆಂಗಳೂರಿನ ಇನ್ಕಮ್ ಟ್ಯಾಕ್ಸ್ ಅಪಲೇಟ್ ಟ್ರಿಬ್ಯುನಲ್ ಬಿಲ್ಡಿಂಗ್, ಹುಬ್ಬಳ್ಳಿಯ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಬ್ಲಾಕ್, ಬೆಂಗಳೂರು ವಿವಿಯಲ್ಲಿ ಈಶಾನ್ಯ ವಲಯದ ವಿದ್ಯಾರ್ಥಿಗಳಿಗಾಗಿ ಮಹಿಳಾ ಮಹಿಳಾ ಹಾಸ್ಟೆಲ್ ಉದ್ಘಾಟಿಸಿದರು.
-ಖರ್ಗೆ ಕೋಟೆಯಲ್ಲಿ ಮೋದಿ ರಣ ಕಹಳೆ
-ಖರ್ಗೆ ಸೋಲಿಗೆ ಕಾದು ಕುಳಿತು ತ್ರಿಮೂರ್ತಿಗಳು!
ಕಲಬುರಗಿ: ಪಾಕಿಸ್ತಾನಕ್ಕೆ ಮಧ್ಯರಾತ್ರಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಅದರ ಬೆನ್ನು ಮುಳೆ ಮುರಿದ ಮೋದಿ, ಇದೀಗ ಸಂಸತ್ತಿನಲ್ಲಿ ಅವರಿಗೆ ಪ್ರಬಲವಾಗಿ ದಿಟ್ಟ ಉತ್ತರ ನೀಡುವ ಮಲ್ಲಿಕಾರ್ಜುನ ಖರ್ಗೆ ಮಣಿಸಲು ಬುಧವಾರ ಮಧ್ಯಾಹ್ನವೇ ಖುದ್ದು ಮೋದಿ ಕಲಬುರಗಿಗೇ ಆಗಮಿಸುತ್ತಿದ್ದಾರೆ.
ಸದ್ಯ ಸಂಸತ್ತಿನಲ್ಲಿ ಪ್ರಧಾನಿ ಮೋದಿಯ ಪ್ರತಿ ಮಾತಿಗೂ ಹರಿತವಾಗಿ ದಿಟ್ಟ ಉತ್ತರ ನೀಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆಗೇ, ಈ ಬಾರಿ ಶತಾಯಗತಾಯ ಸೋಲಿಸಲು ಪ್ರಧಾನಿ ಮೋದಿ ಟೀಂ ಇದೀಗ ಸಿದ್ಧವಾಗಿದೆ. ಈ ಬಾರಿ ಕಲಬುರಗಿ ಕ್ಷೇತ್ರದಲ್ಲಿ ಖರ್ಗೆರನ್ನು ಸೋಲಿಸಿ ಕಮಲ ಅರಳಿಸಲು ಖುದ್ದು ಮೋದಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು, ಖರ್ಗೆ ಸೋಲಿಸಲು ಕೈ ಶಾಸಕ ಡಾ.ಉಮೇಶ್ ಜಾಧವ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮೂಲಕ ಖರ್ಗೆ ಅವರ ಕಲಬುರಗಿ ಕೋಟೆ ಭೇಧಿಸಲು ಮೋದಿ ಆ್ಯಂಡ್ ಟೀಂ ಸಜ್ಜಾಗಿದ್ದಾರೆ. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಬಿಜೆಪಿಯ ಬೃಹತ ಸಮಾವೇಶ ನಡೆಯಲ್ಲಿದ್ದು, ಕಾರ್ಯಕರ್ತರನ್ನು ಪ್ರಧಾನಿ ಮೋದಿ ತಮ್ಮ ಮಾತುಗಳಿಂದ ಹುರಿದುಂಬಿಸಲಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಕಲಬುರಗಿ ಕೋಟೆಯ ಮೇಲೆ ಕಮಲ ಅರಳಿಸಲು ತ್ರಿಮೂತ್ರಿಗಳಾದ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಬಾಬುರಾವ್ ಚಿಂಚನಸೂರ್ ಮತ್ತು ಉಮೇಶ್ ಜಾಧವ್ ರಣತಂತ್ರ ರಚಿಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಾಳಯ ಸೇರುತ್ತಿರುವ ಡಾ.ಉಮೇಶ್ ಜಾಧವ್ ಅವರನ್ನು ಖರ್ಗೆ ಎದುರಿಗೆ ನಿಲ್ಲಿಸಲು ಎಲ್ಲ ರೀತಿಯ ತಯಾರಿಗಳು ನಡೆದಿವೆ. ಈ ಚುನಾವಣೆಯನ್ನು ಬಿಜೆಪಿಯ ಮೂರು ಜನ ಶಾಸಕರು ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಮೋದಿ ಕರೆ ಕೊಟ್ಟಿದ್ದು, ಈ ಬಾರಿ ಶತಾಯ ಗತಾಯ ಖರ್ಗೆ ಸೋಲಿಸಲು ಕೇಸರಿ ಪಕ್ಷ ಪಣ ತೊಟ್ಟಿದೆ ಎನ್ನಲಾಗುತ್ತಿದೆ.
ಒಂದೆಡೆ ಜಿಲ್ಲೆಯ ಕೋಲಿ ಸಮಾಜದ ಮುಖಂಡ ಬಾಬುರಾವ್ ಚಿಂಚನಸೂರ್, ಇನ್ನೊಂದಡೆ ಮಾಲೀಕಯ್ಯ ಗುತ್ತೇದಾರ ಖರ್ಗೆ ಸಹ ಸೋಲಿಸಲು ಮುಂದಾಗಿದ್ದಾರೆ. ಇತ್ತ ಖಮರುಲ್ ಅವರನ್ನ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ವಂಚಿತರಾಗಿ ಮಾಡಿರುವ ಹಿನ್ನೆಲೆ ಮುಸ್ಲಿಂ ಮತದಾರರು ಸಹ ಖರ್ಗೆ ಪರ ಮತ ಚಲಾಯಿಸದೇ ತಟಸ್ಥರಾಗಿರಲು ಯೋಚಿಸುತ್ತಿದ್ದಾರೆ. ಸೋಲಿನ ಹತಾಶೆಯಲ್ಲಿರುವ ಖರ್ಗೆ ಇದು ನನ್ನ ಕೊನೆಯ ಚುನಾವಣೆ ಅಂತಾ ಜನರಿಗೆ ಎಮೋಷನಲ್ ಮಾಡಿ ಮತಗಳಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯ ಮಾಡುತ್ತಿದೆ.
ಸದ್ಯ ಮೇಲನೋಟಕ್ಕೆ ಖರ್ಗೆ ಪ್ರಬಲವಾಗಿದ್ರು ಬದಲಾದ ರಾಜಕೀಯದಲ್ಲಿ ಅವರು ಇದೀಗ ಒಂಟಿಯಾದಂತಾಗಿದೆ. ಇನ್ನು ಧರಂಸಿಂಗ್ ಮತ್ತು ಖಮರುಲ್ ಇಸ್ಲಾಂ ಇಲ್ಲದ ಈ ಚುನಾವಣೆಯಲ್ಲಿ ಖರ್ಗೆ ಏಕಾಂಗಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.