Tag: Malleswaram. Public TV

  • ದಸರಾ ಸ್ಪೆಷಲ್ – ಬೆಂಗಳೂರಲ್ಲಿ ಬೊಂಬೆಗಳ ದರ್ಬಾರ್

    ದಸರಾ ಸ್ಪೆಷಲ್ – ಬೆಂಗಳೂರಲ್ಲಿ ಬೊಂಬೆಗಳ ದರ್ಬಾರ್

    ಬೆಂಗಳೂರು: ನಾಡಹಬ್ಬ ದಸರಾಕ್ಕೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ದಸರಾ ಅಂದರೆ ಮೊದಲು ನೆನಪಾಗೋದು ಜಂಬು ಸವಾರಿ ಹಾಗೂ ಗೊಂಬೆಗಳು. ನವರಾತ್ರಿಯ ಪೂರ್ವ ತಯಾರಿಯಾಗಿ ಅಂದ-ಚೆಂದದ ಗೊಂಬೆಗಳು ಬೆಂಗಳೂರಿಗೆ ಲಗ್ಗೆಯಿಟ್ಟಿದ್ದು, ಎಲ್ಲರನ್ನು ಕೈ ಬೀಸಿ ಕರೆಯುತ್ತಿವೆ.

    ನಗರದ ಮಲ್ಲೇಶ್ವರಂ, ಗಾಂಧಿ ಬಜಾರ್, ಚಿಕ್ಕಪೇಟೆ, ಕೆ.ಆರ್ ಮಾರುಕಟ್ಟೆ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಎಲ್ಲೆಡೆ ದಸರಾ ಗೊಂಬೆಗಳು ಮಾರಾಟವಾಗುತ್ತಿವೆ. ಇಲ್ಲಿ ಸರಿಸುಮಾರು 500 ವರ್ಷಗಳಿಂದ ಮೈಸೂರು ಸೇರಿದಂತೆ ಹಲವೆಡೆಯಿಂದ ಬಂದಿರೋ ಬೊಂಬೆ ಕೂಡಿಸುವ ಪದ್ಧತಿಯಿದೆ. ಇಲ್ಲಿ ಕಟ್ಟಿಗೆಯಲ್ಲಿ ಕಟ್ಟಿದ ಮೈಸೂರು ಅರಮನೆ, ಅದರ ಮುಂದೆ ಜಂಬೂ ಸವಾರಿ ಮತ್ತು ರಾಜದರ್ಬಾರ್ ಗೊಂಬೆಗಳು ಮನಸೂರೆಗೊಳಿಸುತ್ತಿವೆ.

    ಜೊತೆಗೆ ತಲೆಯಾಡಿಸುವ ನರ್ತಕಿ, ಗಣೇಶ, ಸಂಗೀತಗಾರರು, ಮಕ್ಕಳ ಆಟಿಕೆಗಳು ಎಲ್ಲರನ್ನೂ ಆಕರ್ಷಣೆ ಮಾಡುತ್ತಿವೆ. ಈ ಬಾರಿಯ ವಿಶೇಷವೆಂದರೆ ದಶವತಾರ ಗೊಂಬೆಗಳು. ಈ ಮುದ್ದು ಮುದ್ದಾದ ಗೊಂಬೆಗಳಿಗೆ ಆಭರಣಗಳಿಂದ ಅಲಂಕಾರ ಮಾಡಲಾಗಿದೆ. ಒಂದೊಂದು ಗೊಂಬೆಗಳು ಒಂದೊಂದು ಕಥೆ ಹೇಳುತ್ತಿದ್ದು, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿವೆ. 50 ರೂಪಾಯಿಂದ ಹಿಡಿದು 5 ಸಾವಿರ ರೂ. ಮೌಲ್ಯದ ಗೊಂಬೆಗಳೂ ಸಿಗುತ್ತಿವೆ.