Tag: Mallalli Falls

  • ನಿರಂತರ ಮಳೆಯಿಂದಾಗಿ ಜೀವಕಳೆ ಪಡೆದ ಕೊಡಗಿನ ಮಲ್ಲಳ್ಳಿ ಜಲಪಾತ

    ನಿರಂತರ ಮಳೆಯಿಂದಾಗಿ ಜೀವಕಳೆ ಪಡೆದ ಕೊಡಗಿನ ಮಲ್ಲಳ್ಳಿ ಜಲಪಾತ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಲ್ಲಳ್ಳಿ ಜಲಪಾತ (Mallalli Falls) ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

    ಧಾರಾಕಾರ ಮಳೆಯಿಂದಾಗಿ ಸೋಮವಾರಪೇಟೆ ತಾಲೂಕಿನ ಶಾಂತಹಳ್ಳಿ ಸಮೀಪವಿರುವ ಪ್ರಸಿದ್ಧ ಮಲ್ಲಳ್ಳಿ ಜಲಪಾತವು ಮೈದುಂಬಿ ಹರಿಯುತ್ತಾ ಜೀವಕಳೆ ಪಡೆದಿದೆ.ಇದನ್ನೂ ಓದಿ: ಸಕಲೇಶಪುರ | ಮಳೆಗೆ ರಸ್ತೆ ಕಾಣದೇ ಡಿವೈಡರ್‌ಗೆ ಕಾರು ಡಿಕ್ಕಿ – ಬೆಂಗಳೂರಿನ ಇಬ್ಬರು ಸಾವು

    ಹಾಲಿನ ನೊರೆಯಂತೆ ಬೋರ್ಗರೆಯುತ್ತಾ ಧುಮ್ಮಿಕ್ಕುವ ಈ ಜಲಧಾರೆಯು ಪ್ರಕೃತಿ ಪ್ರಿಯರಿಗೆ ರಮಣೀಯ ದೃಶ್ಯವನ್ನು ಸೃಷ್ಟಿಸಿದೆ. ಜಲಪಾತದ ವೈಭವ ಕಣ್ಮನ ಸೆಳೆಯುತ್ತಿದೆ. ದೇಶ-ವಿದೇಶಗಳಿಂದ ಆಗಮಿಸುತ್ತಿರುವ ನೂರಾರು ಪ್ರವಾಸಿಗರು ಜಲಪಾತದ ಬಳಿ ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ನದಿ ಜಲಪಾತಗಳಿಗೆ ಇಳಿಯದಂತೆ ಜಿಲ್ಲಾಡಳಿತ ಅದೇಶ ನೀಡಿದೆ.

    ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆಯುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹೀಗಾಗಿ ನದಿ, ತೊರೆ, ಜಲಪಾತಗಳಿಗೆ ಇಳಿಯುವುದು, ಸ್ನಾನ ಮಾಡುವುದನ್ನು ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಕೆ.ವೆಂಕಟರಾಜ ಅವರು ಆದೇಶ ಹೊರಡಿಸಿದ್ದಾರೆ.

    ನದಿಗಳು ತುಂಬಿ ಹರಿಯುತ್ತಿರುವುದರಿಂದ ಜಲಪಾತಗಳು ಕೂಡ ಮೈದುಂಬಿ ಧುಮ್ಮುಕ್ಕುತ್ತಿವೆ. ಈ ಸಂದರ್ಭದಲ್ಲಿ ಜಲಪಾತದ ತಳ ಭಾಗಕ್ಕೆ ಇಳಿಯುವ ಸಾಹಸ ಮಾಡಿ, ಬಹಳಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಜಲಪಾತದಲ್ಲಿ ಇಳಿಯದಂತೆ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸಿದರೇ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.ಇದನ್ನೂ ಓದಿ: ಪ್ರಜ್ವಲ್‌ ಮೊಬೈಲಿನಲ್ಲಿ 2000 ಮಹಿಳೆಯರ ಚಿತ್ರ: ಸಾಕ್ಷ್ಯ ನುಡಿದ ಚಾಲಕ

  • ಕೊಡಗಿನ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಇಬ್ಬರ ಸಾವು

    ಕೊಡಗಿನ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಇಬ್ಬರ ಸಾವು

    ಮಡಿಕೇರಿ: ವಾರಂತ್ಯವಾಗಿದ ಹಿನ್ನೆಲೆ ಜಲಪಾತದ ವೀಕ್ಷಣೆಗೆ ತೆರಳಿದ್ದವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ನಡೆದಿದೆ.

    ದಿವ್ಯಾ ಮತ್ತು ಶಶಿಕುಮಾರ್ ಮೃತದುರ್ದೈವಿಗಳು. ಇಂದು ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮದ ಆರು ಜನರ ತಂಡ ಜಲಪಾತಕ್ಕೆ ಪ್ರವಾಸಕ್ಕೆ ಹೋಗಿದ್ದರು. ಹತ್ತಿರದಿಂದ ಜಲಪಾತದ ವೀಕ್ಷಣೆ ಮಾಡುವ ಸಮಯದಲ್ಲಿ ಆಕಸ್ಮಿಕವಾಗಿ ಜಲಪಾತದ ಕೆಳಗೆ ಬೀಳುತ್ತಿದ್ದ ದಿವ್ಯಾಳನ್ನು ರಕ್ಷಿಸಲು ಹೋಗಿ ಶಶಿಕುಮಾರ್ ಸಹ ನೀರಿನ ಸೆಳೆತಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ಅನಿರೀಕ್ಷಿತ ಸಾವಿನಿಂದ ಎರಡು ಕುಟುಂಬದ ಸದಸ್ಯರ ಅಕ್ರಂದನ ಮಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.

    ಮಲ್ಲಳ್ಳಿ ಜಲಪಾತ ಎಷ್ಟು ನೈಸರ್ಗಿಕ ಸೊಬಗು ಹೊಂದಿದೆಯೋ ಅಷ್ಟೇ ಅಪಾಯವನ್ನು ಕೂಡ ತನ್ನ ಒಡಲೊಳಗೆ ಹುದುಗಿಸಿಟ್ಟುಕೊಂಡಿದೆ. ತನ್ನ ಮಡಿಲಿನವರೆಗೆ ನೋಡುಗರನ್ನು ಬರಮಾಡಿಕೊಳ್ಳುವ ಜಿಲ್ಲೆಯ ಏಕೈಕ ಜಲಪಾತ ಎಂಬ ಹೆಗ್ಗಳಿಕೆ ಮಲ್ಲಳ್ಳಿ ಫಾಲ್ಸ್ ಗೆ ಇದೆ. ಈ ಜಲಪಾತದ ಆಳ ನುರಿತ ಈಜು ತಜ್ಞರು ಮತ್ತು ಸ್ಥಳೀಯ ನಿವಾಸಿಗಳಿಗೆ ಮಾತ್ರವೆ ಅರಿವಿದೆ.

    ಹೊರ ಊರುಗಳಿಂದ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ನೀರಿನಲ್ಲಿ ಈಜಾಡಿ ಅನುಭವ ಇದ್ದರೂ ಕೂಡ, ಮಲ್ಲಳ್ಳಿ ಜಲಪಾತದಲ್ಲಿ ಈ ಅನುಭವ ಕೆಲಸಕ್ಕೆ ಬರೋದಿಲ್ಲ. ಹೀಗಾಗಿಯೇ ಮಲ್ಲಳ್ಳಿ ಜಲಪಾತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದಂದು ಫೋಟೋ ತೆಗೆಯಲು ಹೋದ 6 ಮಂದಿ ದುರ್ಮರಣ

    ಜಲಪಾತಕ್ಕೆ ಪ್ರವೇಶಿಸುವ ಮೇಲ್ಭಾಗದ ಮೆಟ್ಟಿಲಿನಲ್ಲೇ ಜಲಪಾತದ ಅಪಾಯ, ಇಲ್ಲಿಯವರೆಗೆ ಜೀವತೆತ್ತವರ ಸಂಖ್ಯೆಯ ಕುರಿತು ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ. ಜಲಪಾತಕ್ಕೆ ಇಳಿಯದಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ ಮೋಜುಮಸ್ತಿಯ ಗುಂಗಿನಲ್ಲಿ ಇಲ್ಲಿಗೆ ಬರುವ ಯುವ ಪ್ರವಾಸಿಗರು, ಎಚ್ಚರಿಕೆಯ ಫಲಕಗಳನ್ನು ನಿರ್ಲಕ್ಷಿಸಿ ನೀರಿಗೆ ಇಳಿದು ಅಪಾಯವನ್ನು ಮೈಮೇಲೆ ತಂದುಕೊಳ್ಳುತ್ತಿದ್ದಾರೆ ಎಂದು ಅಲ್ಲಿ ಗ್ರಾಮಸ್ಥರು ವಿಷಾದ ವ್ಯಕ್ತಪಡಿಸುತ್ತಾರೆ.

  • ಮಲ್ಲಳ್ಳಿ ಫಾಲ್ಸ್​ಗೆ ಬಿದ್ದಿದ್ದ ಯುವಕನ ಶವ 8 ದಿನಗಳ ಬಳಿಕ ಪತ್ತೆ

    ಮಲ್ಲಳ್ಳಿ ಫಾಲ್ಸ್​ಗೆ ಬಿದ್ದಿದ್ದ ಯುವಕನ ಶವ 8 ದಿನಗಳ ಬಳಿಕ ಪತ್ತೆ

    ಮಡಿಕೇರಿ: ಮೊಬೈಲ್‍ನಲ್ಲಿ ಸೆಲ್ಫಿ ಮೂಲಕ ನೀರಿನ ತೀವ್ರತೆಯ ಫೋಟೋ ತಗೆಯಲು ಹೋಗಿ ಮಲ್ಲಳ್ಳಿ ಫಾಲ್ಸ್​ಗೆ ಬಿದ್ದಿದ್ದ ಯುವಕನ ಮೃತ ದೇಹವು ಇಂದು ಪತ್ತೆಯಾಗಿದೆ.

    ಜೂನ್ 22 ಶುಕ್ರವಾರ ಸಂಜೆ ಮನೋಜ್(24) ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜಲಪಾತಕ್ಕೆ ಬಿದ್ದಿದ್ದ. ಶನಿವಾರ ಮಾಹಿತಿ ಪಡೆದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಶವ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ನಡೆಸಿದ್ದರು. ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಮನೋಜ್ ಮೃತ ದೇಹವು 2 ಕಿ.ಮೀ. ದೂರದಲ್ಲಿ ಸಿಕ್ಕಿದೆ.

    ಮೃತ ಮನೋಜ್ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದವನಾಗಿದ್ದು, ತನ್ನ 6 ಜನ ಸ್ನೇಹಿತರೊಂದಿಗೆ ಸೋಮವಾರಪೇಟೆ ಸಮೀಪದ ಶಾಂತಳ್ಳಿಗೆ ಮದುವೆ ರಿಸೆಪ್ಷನ್‍ಗೆಂದು ಹೋಗಿ, ಮರಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.

  • ಸೆಲ್ಫಿ ತಗೆದುಕೊಳ್ಳಲು ಹೋಗಿ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಜೀವ ಕಳೆದುಕೊಂಡ!

    ಸೆಲ್ಫಿ ತಗೆದುಕೊಳ್ಳಲು ಹೋಗಿ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಜೀವ ಕಳೆದುಕೊಂಡ!

    ಮಡಿಕೇರಿ: ಮೊಬೈಲ್‍ನಲ್ಲಿ ಸೆಲ್ಫಿ ಮೂಲಕ ನೀರಿನ ತೀವ್ರತೆ ಫೋಟೋ ತಗೆಯಲು ಹೋಗಿ ಯುವಕನೊಬ್ಬ ಜಲಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಸೋಮವಾರಪೇಟೆ ಸಮೀಪದ ಮಲ್ಲಳ್ಳಿ ಫಾಲ್ಸ್ ನಲ್ಲಿ ನಡೆದಿದೆ.

    ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದ ಮನೋಜ್ (24) ಮೃತ ಯುವಕ. ಶುಕ್ರವಾರ ಮನೋಜ್ ತನ್ನ 6 ಜನ ಸ್ನೇಹಿತರೊಂದಿಗೆ ಸೋಮವಾರಪೇಟೆ ಸಮೀಪದ ಶಾಂತಳ್ಳಿಗೆ ಮದುವೆ ರಿಸಪ್ಷನ್ ಗೆಂದು ಹೋಗಿ, ಮರಳುತ್ತಿರುವಾಗ ಘಟನೆ ಸಂಭವಿಸಿದೆ.

    ಮನೋಜ್ ತನ್ನ 6 ಜನ ಸ್ನೇಹಿತರೊಂದಿಗೆ ಬೈಕಿನಲ್ಲಿ ಶಾಂತವಳ್ಳಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ. ಅಲ್ಲಿಂದ ಮರಳುತ್ತಿರುವಾಗ ಮಲ್ಲಳ್ಳಿ ಫಾಲ್ಸ್ ನೋಡಿಕೊಂಡು ಬರುವುದಾಗಿ ಸ್ನೇಹಿತರು ನಿರ್ಧರಿಸಿದ್ದರು. ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಜಲಪಾತ ಮನಮೋಹಕವಾಗಿ ಕಂಡಿದ್ದು, ಆ ದೃಶ್ಯವನ್ನು ಸೆಲ್ಫಿ ಮೂಲಕ ಸೆರೆ ಹಿಡಿಯಲು ಮನೋಜ್ ಮುಂದಾಗಿದ್ದನು. ಉಳಿದ ಸ್ನೇಹಿತರು ಅಲ್ಲಿಗೆ ಹೋಗದಂತೆ ಹೇಳಿದ್ದರೂ ಅದನ್ನು ಲೆಕ್ಕಿಸದೆ ಮನೋಜ್ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದನು. ಪರಿಣಾಮ ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದನು. ಜಲಪಾತಕ್ಕೆ ಬಿಳ್ಳುತ್ತಿದ್ದಂತೆ ಮನೋಜ್ ದೇಹ ಕಾಣದಂತಾಗಿತ್ತು.

    ಮನೋಜ್ ಪೋಷಕರು ಘಟನಾ ಸ್ಥಳಕ್ಕೆ ಬಂದಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು, ದೇಹವನ್ನು ಹುಡುಕಲು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಮಳೆ ಹಾಗೂ ನೀರಿನ ರಭಸ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡಿ ಉಂಟಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಲ್ಲೇ ಇವೆ. ಅಪಾಯವಿರುವ ಜಾಗಕ್ಕೆ ತೆರಳದಂತೆ ಸೂಚನ ಫಲಕ ಹಾಕಿದ್ದರೂ ಪ್ರವಾಸಿಗರು ಅನುಸರಿಸದೆ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ.

     

  • ವರ್ಷಧಾರೆಗೆ ಮೈದುಂಬಿ ಹರಿಯುತ್ತಿದೆ ಕೊಡಗಿನ ಮಲ್ಲಳ್ಳಿ ಜಲಪಾತ: ವಿಡಿಯೋ ನೋಡಿ

    ವರ್ಷಧಾರೆಗೆ ಮೈದುಂಬಿ ಹರಿಯುತ್ತಿದೆ ಕೊಡಗಿನ ಮಲ್ಲಳ್ಳಿ ಜಲಪಾತ: ವಿಡಿಯೋ ನೋಡಿ

    ಮಡಿಕೇರಿ: ಕೊಡಗಿನಲ್ಲಿ ಮಳೆಗಾಲ ಶುರುವಾದರೆ ಸಾಕು ಗಿರಿಕಾನನದ ನಡುವಿನಿಂದ ಧುಮ್ಮುಕ್ಕೊ ಜಲಧಾರೆಗಳ ವಯ್ಯಾರವನ್ನ ನೋಡೋಕೆ ಎರಡು ಕಣ್ಣುಗಳು ಸಾಲುವುದಿಲ್ಲ. ಈ ಕೊಡಗಿನ ಅತಿ ಸುಂದರ ಜಲಕನ್ಯೆ ಮಲ್ಲಳ್ಳಿ ಜಲಪಾತ ಮಳೆಗೆ ತುಂಬಿ ಹರಿಯುತ್ತಿದ್ದು ನಯನ ಮನೋಹರವಾಗಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

    ಹೌದು, ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ ನೋಡಲು ಬಲು ಸುಂದರವಾಗಿದೆ. ಕಳೆದ ವಾರ ಸುರಿದ ವರ್ಷಧಾರೆಗೆ ಮೈದುಂಬಿ ಹರಿಯುತ್ತಿರುವ ಈ ಜಲಪಾತವನ್ನ ನೋಡುಗರ ಕಣ್ಣು ಸಾಲದಂತಾಗಿದೆ. ಮುಗಿಲೆತ್ತರದಿಂದ ಹಾಲ್ನೊರೆಯಂತೆ ಇಳಿಯುವ ಈ ಜಲಪಾತದ ಸೌಂದರ್ಯವನ್ನು ಬಣ್ಣಿಸಲು ಸಾಲದು. ಹಸಿರ ನಡುವಿನಿಂದ ಭೋರ್ಗರೆಯುತ್ತಾ ಕರಿಕಲ್ಲುಗಳನ್ನು ಸೀಳಿಕೊಂಡು ಈ ರುದ್ರರಮಣೀಯ ಜಲಪಾತವನ್ನು ನೋಡುವುದೆ ಅಂದ.

    ಇಲ್ಲಿನ ನಿಸರ್ಗದ ಸೌಂದರ್ಯ ಹಾಗೂ ಪ್ರಪಾತದಲ್ಲಿ ಕಾಣುವ ಜಲರಾಶಿಯನ್ನು ಪ್ರವಾಸಿಗರ ಮನಸ್ಸಿಗೆ ಮುದನೀಡುತ್ತದೆ. ಈ ಅಪರೂಪದ ಜಲಧಾರೆ ಬಳುಕುತ್ತಿರುವುದನ್ನು ನೋಡಿದರೆ ಕಣ್ಣುಗಳಿಗೆ ಹಿತ ನೀಡುತ್ತದೆ. ಹರಿಯೋ ನೀರಝರಿ ದಣಿದ ಮನಕ್ಕೆ ನೆಮ್ಮದಿನೀಡುತ್ತೆ. ಹಾಗೆ ನೋಡಿದಷ್ಟು ಮತ್ತೆ ಮತ್ತೆ ನೋಡಬೇಕು ಅಂತ ಅನಿಸುತ್ತೆ.

    ಎಲ್ಲಿದೆ? ಈ ಮಲ್ಲಳ್ಳಿ ಜಲಪಾತ ಮಡಿಕೇರಿಯಿಂದ ಸುಮಾರು 70 ಕಿ.ಮೀ ದೂರದಲ್ಲಿ ಇದೆ. ಸೋಮವಾರಪೇಟೆ ತಾಲೂಕಿನಿಂದ ಸುಮಾರು 30 ಕಿ.ಮೀ ಕ್ರಮಿಸಿದ್ದರೆ ಈ ಜಲಪಾತವನ್ನು ನೋಡಲು ಸಿಗುತ್ತದೆ. ಕೊಡಗು ಜಿಲ್ಲೆಗೆ ಅಗಮಿಸುವ ಪ್ರವಾಸಿಗರು ಈ ಜಲಪಾತಕ್ಕೆ ಭೇಟಿ ನೀಡಿ ಎಂಜಾಯ್ ಮಾಡಬಹುದು.

    ಒಟ್ಟಿನಲ್ಲಿ ಮಳೆಗಾಲದಲ್ಲಿ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡು ಪ್ರಕೃತಿಪ್ರಿಯರನ್ನ ಮನತಣಿಸುವ ಈ ನಿಸರ್ಗದ ಸೊಬಗು ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಈ ಮಲ್ಲಳ್ಳಿ ಅದ್ಭುತ ಜಲಪಾತಕ್ಕೆ ನೀವು ಒಮ್ಮೆ ಭೇಟಿನೀಡಿ ಈ ಜಲಪಾತದ ಸೊಬಗನ್ನು ಕಣ್ತುಂಬಿಸಿಕೊಳ್ಳಿ.

    ಮಲ್ಲಳ್ಳಿ ಜಲಪಾತದ ಸುಂದರ ವಿಡಿಯೋವನ್ನು ವಿಜಯ್ ಕುಮಾರ್ ಅವರು ಕ್ಯಾಮೆರಾ ಸೆರೆ ಹಿಡಿದಿದ್ದು ಇಲ್ಲಿ ನೀಡಲಾಗಿದೆ.