Tag: Malfunctions

  • ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್ ಮುರಿದು ಒಬ್ಬರ ಮೇಲೋಬ್ಬರು ಬಿದ್ರು: ವಿಡಿಯೋ

    ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್ ಮುರಿದು ಒಬ್ಬರ ಮೇಲೋಬ್ಬರು ಬಿದ್ರು: ವಿಡಿಯೋ

    ರೋಮ್: ವೇಗವಾಗಿ ಚಲಿಸುತ್ತಿದ್ದ ಎಸ್ಕಲೇಟರ್ ಮುರಿದು 20 ಮಂದಿ ಗಾಯಗೊಂಡ ಘಟನೆ ಇಟಲಿಯ ರೋಮ್‍ನಲ್ಲಿ ನಡೆದಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು, ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.

    ರೋಮ್ ನಗರದ ರಿಪಬ್ಲಿಕ್ ಮೆಟ್ರೋ ಸ್ಟೇಷನ್‍ನಲ್ಲಿ ಈ ಅವಘಡ ಸಂಭವಿಸಿದ್ದು, ಪ್ರಯಾಣಿಕರು ಸೇರಿದಂತೆ ರಷ್ಯಾ ಫುಟ್‍ಬಾಲ್ ತಂಡ ಅಭಿಮಾನಿಗಳು ಗಾಯಗೊಂಡಿದ್ದಾರೆ. ರೋಮಾ ಹಾಗೂ ಸಿಎಸ್‍ಕೆಎ ಮಾಸ್ಕೋ ಫುಟ್‍ಬಾಲ್ ತಂಡಗಳ ನಡುವೆ ಇಂದು ಚಾಂಪಿಯನ್ಸ್ ಲೀಗ್ ಪಂದ್ಯವು ರೋಮ್‍ನಲ್ಲಿ ನಡೆಯುತ್ತಿತ್ತು. ಹೀಗಾಗಿ ಪಂದ್ಯ ವಿಕ್ಷಣೆಗಾಗಿ ರಷ್ಯಾದ ಅನೇಕ ಫುಟ್‍ಬಾಲ್ ಅಭಿಮಾನಿಗಳು ನಗರಕ್ಕೆ ಆಗಮಿಸಿದ್ದರು.

    ಮೆಟ್ರೋ ಸ್ಟೇಷನ್‍ನ ಎಸ್ಕಲೇಟರ್ ಮೇಲೆ ಹೆಚ್ಚು ಜನರು ಹತ್ತಿದ್ದಾರೆ. ಪರಿಣಾಮ ಅತಿಯಾದ ಭಾರ ತಾಳಲಾರದೇ ಎಸ್ಕಲೇಟರ್‍ನ ಒಂದು ಭಾಗ ಮುರಿದಿದೆ. ಎಸ್ಕಲೇಟರ್ ವೇಗವಾಗಿ ಚಲಿಸುತ್ತಿದ್ದರಿಂದ ಪ್ರಯಾಣಿಕರು ಕೆಳಗೆ ಕುಸಿದು, ಒಬ್ಬರ ಮೇಲೋಬ್ಬರು ಬಿದ್ದು ಗಾಯಗೊಂಡಿದ್ದಾರೆ. ಇದೇ ವೇಳೆ ಯುವಕನೊಬ್ಬ ಅನಾಹುತದಿಂದ ಪಾರಾಗಲು, ಎಸ್ಕೇಲೇಟರ್ ಪಕ್ಕದ ಕಟ್ಟಿಯ ಮೇಲೆ ಜೀಗಿದು ಅನಾಹುತದಿಂದ ತಪ್ಪಿಸಿಕೊಂಡಿದ್ದಾನೆ. ಎಸ್ಕಲೇಟರ್ ನಿಲ್ಲುತ್ತಿದ್ದಂತೆ ಸ್ಥಳದಲ್ಲಿದ್ದ ಅನೇಕರು ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಇತ್ತ ಜನರ ಕೆಳಗೆ ಸಿಕ್ಕು, ಗಂಭೀರವಾಗಿ ಗಾಯಗೊಂಡಿದ್ದ 20 ಜನರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಕುರಿತು ರೋಮ್ ಮೇಯರ್ ವರ್ಜಿನಿಯಾ ರಾಗ್ಗಿ ಅವರು ಪ್ರತಿಕ್ರಿಯೆ ನೀಡಿ, ರಷ್ಯಾ ಫುಟ್‍ಬಾಲ್ ಅಭಿಮಾನಿಗಳು 1,500 ಜನರು ನಗರಕ್ಕೆ ಆಗಮಿಸಿದ್ದು, ಅವರು ಎಸ್ಕಲೇಟರ್ ಮೇಲೆ ಡಾನ್ಸ್ ಮಾಡಿದ್ದಾರೆ. ಪಂದ್ಯ ವೀಕ್ಷಣೆಗೆ ತಾ ಮುಂದು, ನಾ ಮುಂದು ಅಂತಾ ಹೋಗಲು, ರೌಡಿಗಳಂತೆ ವರ್ತಿಸಿದ್ದಾರೆ, ಹೀಗಾಗಿ ಅನಾಹುತ ಸಂಭವಿಸಿದೆ ಎಂದು ದೂರಿದ್ದಾರೆ.

    ಎಸ್ಕಲೇಟರ್ ಅಸಮರ್ಪಕ ಕಾರ್ಯನಿರ್ವಹಿಸದ ಪರಿಣಾಮ ಭಾರೀ ಅನಾಹುತ ಸಂಭವಿಸಿದೆ ಅಂತಾ ಕೆಲವರು ದೂರಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೇವಲ 20 ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv