Tag: Malenadu

  • ಚಿಕ್ಕಮಗ್ಳೂರು, ಮಲೆನಾಡಲ್ಲಿ ಧಾರಾಕಾರ ಮಳೆ-ಮನೆ ಗೋಡೆಗಳು ಕುಸಿತ!

    ಚಿಕ್ಕಮಗ್ಳೂರು, ಮಲೆನಾಡಲ್ಲಿ ಧಾರಾಕಾರ ಮಳೆ-ಮನೆ ಗೋಡೆಗಳು ಕುಸಿತ!

    – ಪರಿಹಾರಕ್ಕೆ ವೃದ್ಧೆ ಮನವಿ

    ಚಿಕ್ಕಮಗಳೂರು: ಮುಂದುವರಿದ ಧಾರಾಕಾರ ಮಳೆಯಿಂದಾಗಿ ಮನೆ ಗೋಡೆಗಳು ಕುಸಿದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ.

    ಜಯಮ್ಮ ಎಂಬವರಿಗೆ ಸೇರಿದ ಮನೆಯ ಗೋಡೆ ಸಂಪೂರ್ಣ ಕುಸಿದಿದ್ದು, ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಮಣ್ಣುಪಾಲಾಗಿವೆ. ಇದರಿಂದಾಗಿ ಕಂಗಾಲಾದ ವೃದ್ಧೆ ಜಯಮ್ಮ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಅಷ್ಟೇ ಅಲ್ಲದೇ ಮಲೆನಾಡಲ್ಲಿ ಕೂಡ ಮಳೆ ಆರ್ಭಟ ಮುಂದುವರಿದಿದ್ದು, ಕೊಪ್ಪ ತಾಲೂಕಿನ ಹೇರೂರು, ಮೇಗೂರು ಗ್ರಾಮದಲ್ಲಿ ಮೂರು ಮನೆಗಳ ಗೋಡೆ ಕುಸಿದಿವೆ. ಆ ಮನೆಗಳು ಹೇರೂರು ಗ್ರಾಮದ ಶಂಕರ, ರಾಮು ಹಾಗೂ ಮೇಗೂರಿನ ತಿಮ್ಮೆಗೌಡ ಎಂಬವರಿಗೆ ಸೇರಿವೆ. ಮನೆಯ ಗೋಡೆ ಸಂಪೂರ್ಣ ಕುಸಿದು ಹೋಗಿರೋದ್ರಿಂದ ಮನೆಯವರು ಕಂಗಾಲಾಗಿದ್ದು, ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ನಾಶವಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾರವಾರ, ಹಾಸನ, ಮಲೆನಾಡಿನಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತ!

    ಕಾರವಾರ, ಹಾಸನ, ಮಲೆನಾಡಿನಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತ!

    ಕಾರವಾರ: ಹಾಸನ, ಕಾರವಾರ, ಮಲೆನಾಡಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮೇಲೆ ಗುಡ್ಡ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.

    ಈ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ಬಳಿ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಸಂಚರಿಸುತ್ತಿದ್ದ ಶ್ರೀದುರ್ಗಾಂಬಾ ಖಾಸಗಿ ಬಸ್ ಮೇಲೆ ಗುಡ್ಡ ಕುಸಿದಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಜಾನೆ ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 63 ಹುಬ್ಬಳ್ಳಿ-ಅಂಕೋಲಾ ನಡುವಿನ ಸಂಚಾರ ಕೆಲವು ಗಂಟೆಗಳ ಕಾಲ ಸ್ಥಗಿತವಾಗಿದ್ದು, ಸ್ಥಳಕ್ಕೆ ಆಗಮಿಸಿದ ಯಲ್ಲಾಪುರ ಪೊಲೀಸರು ಕುಸಿದ ಮಣ್ಣನ್ನು ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ಅಷ್ಟೇ ಅಲ್ಲದೇ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿಯಲ್ಲಿ ನಿರಂತರ ಮಳೆ ಹಿನ್ನೆಲೆ ರಸ್ತೆ ಮೇಲೆ ಗುಡ್ಡ ಕುಸಿದಿದ್ದು, ರಾಷ್ಟ್ರೀಯ ಹೆದ್ದಾರಿ 75 ರ ಮಾರನಹಳ್ಳಿ ಬಳಿ ಘಟನೆ ನಡೆದಿದೆ. ಇದರಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಶಿರಾಡಿಘಾಟ್ ರಸ್ತೆ ಸಂಚಾರ ತಾತ್ಕಾಲಿಕ ಬಂದ್ ಮಾಡಲಾಗಿದೆ. ಗುಡ್ಡ ತೆರವು ಕಾರ್ಯ ಆರಂಭವಾಗಿದ್ದು, ಬಂದ್ ಹಿನ್ನೆಲೆ ಚಾರ್ಮಾಡಿ ಘಾಟ್ ಮೂಲಕ ವಾಹನ ಸಂಚಾರಕ್ಕೆ ದಾರಿ ಮಾಡಿಕೊಡಲಾಗಿದೆ.

    ಇನ್ನು ಮಲೆನಾಡಿನಲ್ಲೂ ಧಾರಾಕಾರ ಮಳೆ ಹಿನ್ನಲೆ ಸೋಲ್ಲಾಪುರ- ಮಂಗಳೂರು ರಾಜ್ಯ ಹೆದ್ದಾರಿ 169 ಮುಳುಗಡೆಯಾಗಿದೆ. ನೆಮ್ಮಾರು ಗ್ರಾಮದ ಬಳಿ ಮುಳುಗಡೆಯಾದ ರಾಜ್ಯ ಹೆದ್ದಾರಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ನೆಮ್ಮಾರು ರಸ್ತೆಯ ಮೇಲೆ ಹುಕ್ಕಿ ಹರಿಯುತ್ತಿರುವ ತುಂಗಾ ನದಿಯಿಂದಾಗಿ ರಾಜ್ಯ ಹೆದ್ದಾರಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ವಾಹನ ಸವಾರರು ರಸ್ತೆ ಸಂಪರ್ಕವಿಲ್ಲದೆ ಪರದಾಟ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪುರಂದರಗಡ ಅಲ್ಲ, ತೀರ್ಥಹಳ್ಳಿ ತಾಲೂಕಿನ ಆರಗ ಪುರಂದರ ದಾಸರ ಜನ್ಮಸ್ಥಳ!

    ಪುರಂದರಗಡ ಅಲ್ಲ, ತೀರ್ಥಹಳ್ಳಿ ತಾಲೂಕಿನ ಆರಗ ಪುರಂದರ ದಾಸರ ಜನ್ಮಸ್ಥಳ!

    ಶಿವಮೊಗ್ಗ: ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಎಂದೇ ಖ್ಯಾತಿಗಳಿಸಿರುವ ಪುರಂದರದಾಸರ ಮೂಲ ಸ್ಥಳ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಪ್ರದೇಶ ಎಂದು ಸಂಶೋಧಕರು ಗುರುತಿಸಿದ್ದಾರೆ.

    ಇದೂವರೆಗೂ ಮಹಾರಾಷ್ಟ್ರದ ಪುರಂದರಘಡ ಇವರ ಮೂಲಸ್ಥಾನ ಎಂದು ಗುರುತಿಸಿಲಾಗಿತ್ತು. ಆದರೆ, ಪುರಂದರಗಡದಲ್ಲಿ ಪುರಂದರ ಎಂಬ ಹೆಸರನ್ನು ಬಿಟ್ಟರೆ ಬೇರೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಇತಿಹಾಸಕಾರರು ಪತ್ತೆ ಹಚ್ಚಿದ್ದಾರೆ. 2016ರಲ್ಲಿ ಪುರಂದರದಾಸರ ಹುಟ್ಟೂರಿನ ಬಗ್ಗೆ ಸಂಶೋಧನೆ ನಡೆಸಿ, ವರದಿ ಸಲ್ಲಿಸಲು ಸರ್ಕಾರ ಪದ್ಮಭೂಷಣ ಆರ್.ಕೆ.ಪದ್ಮನಾಭ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು.

    ಈ ಸಮಿತಿ ತನ್ನ ವರದಿಯನ್ನು ಸಲ್ಲಿಸಿದ್ದು, ಪುರಂದರದಾಸರ ಮೂಲಸ್ಥಳ ಆರಗ ಎಂದು ದೃಢಪಡಿಸಿದೆ. 1484ರಲ್ಲಿ ಜನಿಸಿದ್ದ ಪುರಂದರದಾಸರು 1564ರಲ್ಲಿ ಕಾಲವಾದರು. ಐದು ಲಕ್ಷ ಕೀರ್ತನೆ ಬರೆಯುವ ಗುರಿ ಇಟ್ಟುಕೊಂಡಿದ್ದ ಪುರಂದರದಾಸರು 4 ಲಕ್ಷದ 75 ಸಾವಿರ ಕೀರ್ತನೆಗಳನ್ನು ಬರೆದಿದ್ದಾರೆ. ಇವರ ಮೂಲಕವೇ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ್ದರು,

    ಸಂಗೀತ ಪಿತಾಮಹಾರ ಮೂಲಕ ಕರ್ನಾಟಕ ಅದರಲ್ಲೂ ಮಲೆನಾಡಿನ ತೀರ್ಥಹಳ್ಳಿ ಎಂಬ ವಿಷಯ ಸಂಗೀತಾಸಕ್ತರು ಹಾಗೂ ಇತಿಹಾಸ ಪ್ರೇಮಿಗಳಲ್ಲಿ ರೋಮಾಂಚನ ಮೂಡಿಸಿದೆ. ರಾಜ್ಯ ಸರ್ಕಾರ ಪ್ರದೇಶವನ್ನು ವಿಶೇಷ ಸ್ಮಾರಕವನ್ನಾಗಿ ಘೋಷಣೆ ಮಾಡಬೇಕೆಂಬ ಬೇಡಿಕೆ ಈಗ ಸಂಗೀತಾ ಪ್ರೇಮಿಗಳಿಂದ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ https://www.instagram.com/publictvnews/

  • ರಾಜ್ಯದಲ್ಲಿ ನಿಲ್ಲದ ಮಳೆ, ತಗ್ಗದ ಪ್ರವಾಹ – ಆಗುಂಬೆ ಸೂರ್ಯಾಸ್ತ ಗೋಪುರ ರಸ್ತೆ ಕುಸಿತ – KRS, ಹೇಮಾವತಿ ಇಂದು ಸಂಪೂರ್ಣ

    ರಾಜ್ಯದಲ್ಲಿ ನಿಲ್ಲದ ಮಳೆ, ತಗ್ಗದ ಪ್ರವಾಹ – ಆಗುಂಬೆ ಸೂರ್ಯಾಸ್ತ ಗೋಪುರ ರಸ್ತೆ ಕುಸಿತ – KRS, ಹೇಮಾವತಿ ಇಂದು ಸಂಪೂರ್ಣ

    ಬೆಂಗಳೂರು: ರಾಜ್ಯಾದ್ಯಂತ ಮಳೆರಾಯನ ಅಬ್ಬರ ಮತ್ತಷ್ಟು ಜೋರಾಗಿದೆ. ಕರಾವಳಿ, ಮಲೆನಾಡು ಜನರಿಗೆ ಸಾಕು ಅನ್ನಿಸುವಷ್ಟು ಮಳೆಯಾಗುತ್ತಿದ್ದರೆ, ಬಯಲು ಸೀಮೆಯ ಜನರಲ್ಲಿ ಖುಷಿಯೋ ಖುಷಿ. ಯಾಕಂದ್ರೆ ಎಲ್ಲಾ ಡ್ಯಾಮ್‍ಗಳಿಗೂ ಜೀವಕಳೆ ಬಂದಿದೆ.

    124.80 ಅಡಿ ಸಾಮರ್ಥ್ಯದ ಕೆಆರ್ ಎಸ್‍ನಲ್ಲೀಗ 121.40 ಅಡಿ ನೀರು ಬಂದಿದ್ದು, ಭರ್ತಿಗೆ ಮೂರು ಅಡಿ ಬಾಕಿ ಇದೆ. ಹೇಮಾವತಿಗೂ 3 ಅಡಿ ಬಾಕಿಯಿದ್ದು, ಎರಡು ಜಲಾಶಯಗಳು ಇವತ್ತೇ ಬಹುತೇಕ ತುಂಬಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನದಿ ತಟದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

    ಕಬಿನಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ನಂಜನಗೂಡಲ್ಲಿರುವ ಕಪಿಲಾ ನದಿ ಅಕ್ಕ-ಪಕ್ಕದ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಮನೆಗಳು ಜಲಾವೃತಗೊಂಡಿದ್ದು, ಸ್ಥಳೀಯರು ಮನೆ ತೊರೆದು ಸಾಮಾನು ಸರಂಜಾಮುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಅತ್ತ, ಮಹಾರಾಷ್ಟ್ರದಲ್ಲಿ ವಿಪರೀತ ಮಳೆ ಆಗುತ್ತಿರೋ ಕಾರಣ ಕೃಷ್ಣಾನದಿಗೆ ಮತ್ತಷ್ಟು ನೀರು ಹರಿದು ಬಂದಿದೆ. ಚಿಕ್ಕೋಡಿ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಮಾಲತಿ ನದಿ ತುಂಬಿ ಹರಿಯುತ್ತಿದೆ. ಗುಡ್ಡೇಕೇರಿ- ಬಿದರಗೋಡು ರಸ್ತೆ ಮೇಲೆ ಮೂರು ಅಡಿ ನೀರು ನಿಂತಿದ್ದು, ಶೃಂಗೇರಿ-ತೀರ್ಥಹಳ್ಳಿ ಸಂಪರ್ಕ ಬಂದ್ ಆಗಿದೆ. ಗ್ರಾಮೀಣ ಪ್ರದೇಶದ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಆಗುಂಬೆ ಘಾಟ್‍ನಲ್ಲಿ ಮತ್ತೆ ಭೂ ಕುಸಿತವಾಗಿದೆ. ಆಗುಂಬೆ ಸನ್ ಸೆಟ್ ಪಾಯಿಂಟ್ ಬಳಿ ರಸ್ತೆ ಪಕ್ಕದಲ್ಲಿ ಭೂ ಕುಸಿದಿದ್ದು, ಸೂರ್ಯಾಸ್ತ ವೀಕ್ಷಣೆಗೆ ಸಾರ್ವಜನಿಕರಿಗೆ ನಿಷೇಧ ಹೇರಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿಕ್ಕ ಆಣೆಕಟ್ಟುಗಳೆಲ್ಲಾ ಭರ್ತಿ ಆಗಿದ್ದು, ರಸ್ತೆ, ಸೇತುವೆ, ಮನೆ ಗೋಡೆ, ಗುಡ್ಡಗಳೆಲ್ಲಾ ಕುಸಿಯುತ್ತಿವೆ.

    ರಾಮನಗರದ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಚನ್ನಪಟ್ಟಣ, ಕನಕಪುರದಲ್ಲಿ ಸೇರಿ ಹಲವೆಡೆ ಮಳೆಯಾಗಿದ್ದು ರಸ್ತೆಯ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಅನುಭವಿಸಿದರು.

    ಮಲೆನಾಡಿನಲ್ಲಿ ಸಾಕು ಅನ್ನುವಷ್ಟು ಮಳೆಯಾಗ್ತಿದ್ರೆ, ಬಿಸಿಲನಾಡು ರಾಯಚೂರು, ಧಾರವಾಡ, ಹಾವೇರಿಯಲ್ಲಿ ಮಾತ್ರ ವರುಣದೇವ ತನ್ನ ಕೃಪೆ ತೋರಿಲ್ಲ. ಉದ್ದು, ಹೆಸರು, ಎಳ್ಳು ಬಿತ್ತನೆ ಮಾಡಿದ್ದ ರೈತರು ಮೊಳಕೆ ಬಾರದೆ ನಷ್ಟ ಅನುಭವಿಸಿದ್ದಾರೆ. ಮೋಡಕವಿದ ವಾತಾವರಣವಿದ್ದರೂ ದೊಡ್ಡ ಮಳೆ ಬಾರದೆ ಕಂಗಾಲಾಗಿ ವಿಶೇಷ ಪೂಜೆಗಳನ್ನ ಮಾಡುತ್ತಿದ್ದಾರೆ. ಇತ್ತ ನವಲಗುಂದ ಪಟ್ಟಣದ ಬಿರಲಿಂಗೇಶ್ವರ ಯುವಕ ಮಂಡಳಿಯವರು ಮಳೆಗಾಗಿ ಕತ್ತೆಗಳ ಮದುವೆ ಮಾಡಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಭಾರೀ ಮಳೆಯಾಗಿದೆ. ಮಳೆ ರುದ್ರನರ್ತನಕ್ಕೆ ನಗರದ ರಸ್ತೆಗಳು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನರು ಪರದಾಡುತ್ತಿದ್ದಾರೆ. ಮಿಂಟೋ ಸೇತುವೆಯ ಅಡಿ ಮಳೆ ನೀರು ತುಂಬಿ ಹೋಗಿದೆ. ರಸ್ತೆಗಳು ಕೆರೆಯಂತಾಗಿದ್ದು, ಹಲವಾರು ಬಸ್‍ಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ಯಗೊಂಡಿದೆ.

  • ರಕ್ತ ಕೊಟ್ಟೇವು, ನೀರು ಕೊಡೆವು: ಹೋರಾಟಕ್ಕೆ ಸಜ್ಜಾದ ಮಲೆನಾಡಿಗರು

    ರಕ್ತ ಕೊಟ್ಟೇವು, ನೀರು ಕೊಡೆವು: ಹೋರಾಟಕ್ಕೆ ಸಜ್ಜಾದ ಮಲೆನಾಡಿಗರು

    ಶಿವಮೊಗ್ಗ: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಮಲೆನಾಡಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೆಂಗಳೂರಿಗರ ಬಾಯಾರಿಸಲು ಶರಾವತಿ ನದಿ ನೀರು ತರುತ್ತೇವೆ ಎಂದ ಪರಮೇಶ್ವರ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

    ಲಿಂಗನಮಕ್ಕಿಯಿಂದ 425 ಕಿಲೋಮೀಟರ್ ದೂರದಲ್ಲಿರುವ ಬೆಂಗಳೂರಿಗೆ ನೀರನ್ನು ತರುವ ಬಗ್ಗೆ ವಿಸ್ತ್ರತ ಯೋಜನಾ ವರದಿ ತಯಾರಿಸಲು ಸೂಚಿಸಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ. ಬಿ.ಎನ್. ತ್ಯಾಗರಾಜನ್ ಸಮಿತಿ ವರದಿ ಆಧರಿಸಿ, 151 ಅಡಿ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದಿಂದ ಮೊದಲ ಹಂತದಲ್ಲಿ 30 ಟಿಎಂಸಿ ಹಾಗೂ ಎರಡನೇ ಹಂತದಲ್ಲಿ 60 ಟಿಎಂಸಿ ನೀರನ್ನು ಬೆಂಗಳೂರಿಗೆ ಪೂರೈಸಲು ಸರ್ಕಾರ ಉದ್ದೇಶಿಸಿದೆ.

    ಕುಸಿದ ಅಂತರ್ಜಲ ಮಟ್ಟ: ಶರಾವತಿಗೆ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಮಾಡಿದಾಗ ಸುಮಾರು 12 ಸಾವಿರ ಎಕರೆ ದಟ್ಟ ಕಾಡು ಮುಳುಗಡೆ ಆಗಿದೆ. ಇದರಿಂದಾಗಿ ಈ ಭಾಗದಲ್ಲಿ ಮಳೆ ಪ್ರಮಾಣ ಅಗಾಧವಾಗಿ ಕಡಿಮೆ ಆಗಿದೆ. 320 ಇಂಚು ನೀರು ಬರುತ್ತಿದ್ದ ಈ ಪ್ರದೇಶದಲ್ಲಿ ಈಗ ಸರಾಸರಿ 70 ಇಂಚು ಬೀಳುತ್ತಿದೆ. ಇಷ್ಟು ನೀರು ವಿದ್ಯುತ್ ಉತ್ಪಾದನೆಗೆ ಸಾಕಾಗುವುದಿಲ್ಲ. ಇನ್ನು ಬೆಂಗಳೂರಿಗೆ ಕುಡಿಯಲು ನೀರು ಕೊಡಲು ಸಾಧ್ಯವೇ ಎಂದು ಹಿರಿಯ ಸಾಹಿತಿ ನಾ ಡಿಸೋಜಾ ಪ್ರಶ್ನಿಸಿದ್ದಾರೆ.

    ಅಗಾಧ ಜೀವವೈವಿಧ್ಯತೆಯ ತಾಣವಾಗಿರುವ ಶರಾವತಿ ಲಿಂಗನಮಕ್ಕಿ ಪ್ರದೇಶದಿಂದ ನೀರನ್ನು ದೂರದ ಬೆಂಗಳೂರಿಗೆ ಸಾಗಿಸುವ ಬಗ್ಗೆ ಯೋಚಿಸುವುದು ಸರ್ಕಾರದ ಮೂರ್ಖತನ ಎನ್ನುತ್ತಾರೆ ಪರಿಸರವಾದಿಗಳು. ಸರ್ಕಾರ ಇದನ್ನು ಕೈಬಿಡದಿದ್ದಲ್ಲಿ ಮಲೆನಾಡಿನಲ್ಲಿ ಮತ್ತೊಂದು ದೊಡ್ಡ ಚಳವಳಿ ನಡೆಯಲಿದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಎಚ್ಚರಿಸಿದ್ದಾರೆ.

    ಅಧಿಕ ಹಣ ಬೇಡುವ, ಹೆಚ್ಚು ಅರಣ್ಯ ನಾಶವಾಗುವ ಇಂಥ ಯೋಜನೆಗಳನ್ನು ಕೈಬಿಡಿ, ಮಳೆ ಕೊಯ್ಲು, ಕೆರೆಗಳ ಪುನರುಜ್ಜೀವ ಇನ್ನಿತರ ಅಂಶಗಳ ಬಗ್ಗೆ ಗಮನ ಹರಿಸಿ. ವಿನಾಶಕಾರಿಯಾದ ಇಂಥ ಯೋಜನೆಗಳಿಗೆ ಕೈಹಾಕಬೇಡಿ ಎಂಬುದು ಶರಾವತಿ ನದಿ ಪಾತ್ರದ ಜನತೆ ಆಗ್ರಹಿಸಿದ್ದಾರೆ.

    ಒಟ್ಟಿನಲ್ಲಿ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಪೂರೈಸುವ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಂಡ ಕನಸು ಆರಂಭದಲ್ಲೇ ಭಾರೀ ವಿರೋಧ ಕೇಳಿಬಂದಿದೆ. ಈ ವಿರೋಧ ಲೆಕ್ಕಿಸದೆ ಸರ್ಕಾರ ಮುಂದುವರಿದಲ್ಲಿ ಮಲೆನಾಡು ಇನ್ನೊಂದು ಚಳವಳಿಗೆ ಸಜ್ಜಾಗಿದೆ.

    2030ಕ್ಕೆ ಬೆಂಗಳೂರು:
    2030ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ 2.5 ಕೋಟಿ ಆಗುವ ಸಾಧ್ಯತೆಗಳಿವೆ. ಬೆಂಗಳೂರಿಗೆ ವಾರ್ಷಿಕ 54 ಟಿಎಂಸಿ ನೀರಿನ ಅಗತ್ಯವಿದ್ದು, ಕಾವೇರಿಯಿಂದ ಈಗಾಗಲೇ 30 ಟಿಎಂಸಿ ನೀರು ಪಡೆಯಲಾಗುತ್ತಿದೆ. ಆದ್ರೆ ಕಾವೇರಿಯಿಂದ ಹೆಚ್ಚಿನ ನೀರು ಪಡೆಯುವುದು ಅಸಾಧ್ಯದ ಮಾತು. ಹಾಗದ್ರೆ 2030ಕ್ಕೆ ಬೆಂಗಳೂರಿಗೆ 24 ಟಿಎಂಸಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಆಗಲಿದೆ.

    ಟಿಎಂಸಿ ಅಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಮಲೆನಾಡು, ಕರಾವಳಿಯಲ್ಲಿ ಬಿರುಸುಗೊಂಡ ಮಳೆರಾಯ- ಎಲ್ಲಿ ಎಷ್ಟು ಮಿಮೀ ಮಳೆಯಾಗಿದೆ?

    ಮಲೆನಾಡು, ಕರಾವಳಿಯಲ್ಲಿ ಬಿರುಸುಗೊಂಡ ಮಳೆರಾಯ- ಎಲ್ಲಿ ಎಷ್ಟು ಮಿಮೀ ಮಳೆಯಾಗಿದೆ?

    ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಮಳೆ ಇನ್ನಷ್ಟು ಬಿರುಸುಗೊಂಡಿದ್ದು ಇವತ್ತೂ ಕೂಡ ಮಳೆರಾಯನ ಆರ್ಭಟ ಮುಂದುವರೆದಿದೆ.

    ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯಕ್ಕೆ ವಾಡಿಕೆಯಂತೆ ಆರು ಮೀಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 12 ಮಿಲಿ ಮೀಟರ್ ಮಳೆಯಾಗಿದ್ದು ಶೇ117 ರಷ್ಟು ಹೆಚ್ಚು ಮಳೆಯಾಗಿದೆ.

    ಇನ್ನೂ ನಾಲ್ಕು ದಿನಗಳ ಕಾಲ ಇದೇ ರೀತಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಮಾಹಿತಿ ನೀಡಿದೆ.

    ಇಂದು ಕೂಡಗಿನಲ್ಲಿ 136 ಮಿ.ಮೀ, ಚಿಕ್ಕಮಗಳೂರಿನಲ್ಲಿ 65 ಮೀ.ಮೀ ದಕ್ಷಿಣ ಕನ್ನಡದಲ್ಲಿ 100 ಮೀ.ಮೀ. ಶಿವಮೊಗ್ಗದಲ್ಲಿ 208 ಮಿ.ಮೀ ಹಾಸನ 38 ಮಿ.ಮೀ, ಉತ್ತರಕನ್ನಡ 50 ಮಿ.ಮೀ, ಮೈಸೂರು 17 ಮಿಮೀ ನಷ್ಟು ಮಳೆಯಾಗಿದೆ.

    ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಹಿನ್ನಲೆ ಕೆಆರ್‍ಎಸ್ ನ ಒಳ ಹರಿವು ಹೆಚ್ಚಳ ಕಂಡಿದ್ದು 17,883 ಕ್ಯೂಸೆಕ್ ನಷ್ಟಿದೆ ಹಾಗೂ ಹೊರ ಹರಿವು 342 ಕ್ಯೂಸೆಕ್ ನಷ್ಟಿದೆ. ಒಂದೇ ದಿನದಲ್ಲಿ ಮೂರು ಅಡಿ ನೀರು ಹೆಚ್ಚಳವಾಗಿದೆ. 124.80 ಅಡಿ ಗರಿಷ್ಟ ಮಟ್ಟವನ್ನು ಹೊಂದಿರುವ ಕೆಆರ್‍ಎಸ್ ನಲ್ಲಿ ಸೋಮವಾರ 79.50 ಅಡಿ ನೀರಿದ್ದರೆ ಮಂಗಳವಾರ 82.80 ಅಡಿಗೆ ಏರಿಕೆಯಾಗಿದೆ.

  • ರಾಜ್ಯದಲ್ಲಿ ಎರಡು ದಿನ ಮಳೆಯಾಗುವ ಸಾಧ್ಯತೆ

    ರಾಜ್ಯದಲ್ಲಿ ಎರಡು ದಿನ ಮಳೆಯಾಗುವ ಸಾಧ್ಯತೆ

    ಬೆಂಗಳೂರು: ಶಿವರಾತ್ರಿಯ ದಿನ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನಲೆಯಲ್ಲಿ ಇವತ್ತು ಹಾಗೂ ನಾಳೆ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಮಳೆ ಕೂಡ ಆಗುವ ಸಾಧ್ಯತೆ ಇದೆ. ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವಿದೆ ಎಂದು ಅವರು ಮಾಹಿತಿ ನೀಡಿದರು.