Tag: Malenadu

  • ಮಳೆ ಕಡಿಮೆ ಆಗ್ತಿಲ್ಲ, ಪ್ರವಾಹ ನಿಲ್ಲುತ್ತಿಲ್ಲ- 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

    ಮಳೆ ಕಡಿಮೆ ಆಗ್ತಿಲ್ಲ, ಪ್ರವಾಹ ನಿಲ್ಲುತ್ತಿಲ್ಲ- 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

    ಬೆಂಗಳೂರು: ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಇಂದು ಮತ್ತು ಶನಿವಾರವೂ ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರಾಜ್ಯದ 8 ಜಿಲ್ಲೆಗಳಲ್ಲಿ ರೆಟ್ ಅಲರ್ಟ್ ಘೋಷಿಸಲಾಗಿದೆ.

    ಬೆಳಗಾವಿ, ಬಾಗಲಕೋಟೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲೂ ರಣ ಮಳೆ ರೌದ್ರಸ್ವರೂಪ ತಾಳಿದ್ದು, ಈ ಜಿಲ್ಲೆಗಳಲ್ಲಿ ಶನಿವಾರದವರೆಗೂ ರೆಡ್ ಅಲರ್ಟ್ ವಿಸ್ತರಿಸಲಾಗಿದೆ. ಜಲ ಪ್ರಳಯ ಹಿನ್ನೆಲೆಯಲ್ಲಿ ಇಂದು ಕೂಡ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಹಾವೇರಿ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.

    ಉತ್ತರ ಕರ್ನಾಟಕ, ಮಲೆನಾಡು, ಕರಾವಳಿಯಲ್ಲಿ ಉಂಟಾಗಿರುವ ಪ್ರವಾಹ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೈಲಾದಷ್ಟು ಹಣಕಾಸು ನೆರವು ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.

    ಸರ್ಕಾರಕ್ಕೆ ದೇಣಿಗೆ ಕೊಡಬಹುದಾದ ಬ್ಯಾಂಕ್ ಖಾತೆ ವಿವರ:
    ಮುಖ್ಯಮಂತ್ರಿಯವರ ನೈಸರ್ಗಿಕ ವಿಕೋಪ ನಿಧಿ
    ಖಾತೆ ಸಂಖ್ಯೆ – 37887098605
    ಬ್ಯಾಂಕ್ ಮತ್ತು ಶಾಖೆ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿಧಾನಸೌಧದ ಶಾಖೆ
    ಐಎಫ್‍ಎಸ್‍ಸಿ ಕೋಡ್ – ಎಸ್‍ಬಿಐಎನ್0040277
    ವಿಳಾಸ – ನಂ.235-ಎ, 2ನೇ ಮಹಡಿ, ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು, -1

  • ರಾಜ್ಯದೆಲ್ಲೆಡೆ ಮುಂಗಾರು ಚುರುಕು: ಮಂಗ್ಳೂರು-ಬೆಂಗ್ಳೂರು ರೈಲು ಸಂಚಾರ ಸ್ಥಗಿತ

    ರಾಜ್ಯದೆಲ್ಲೆಡೆ ಮುಂಗಾರು ಚುರುಕು: ಮಂಗ್ಳೂರು-ಬೆಂಗ್ಳೂರು ರೈಲು ಸಂಚಾರ ಸ್ಥಗಿತ

    ಬೆಂಗಳೂರು: ರಾಜ್ಯದೆಲ್ಲೆಡೆ ಮುಂಗಾರು ಚುರುಕುಗೊಂಡಿದ್ದು, ಒಂದೆಡೆ ಮಲೆನಾಡು ಸೇರಿದಂತೆ ಹಲವೆಡೆ ಮಳೆರಾಯನ ಅಬ್ಬರ ಜೋರಾಗಿದೆ. ಇನ್ನೊಂದೆಡೆ ಭಾರೀ ಮಳೆಗೆ ಗುಡ್ಡ ಕುಸಿದು ಮಂಗಳೂರು -ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.

    ಘಾಟ್ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುಬ್ರಹ್ಮಣ್ಯ- ಸಕಲೇಶಪುರ ಮಾರ್ಗ ಮಧ್ಯೆ ಇರುವ ಸಿರಿಬಾಗಿಲಿನಲ್ಲಿ ರೈಲು ಹಳಿ ಮೇಲೆ ಗುಡ್ಡ ಕುಸಿತಗೊಂಡಿದೆ. ಹಾಗಾಗಿ ನೆಟ್ಟಣ ರೈಲ್ವೇ ನಿಲ್ದಾಣದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ.

    ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಳೆಗೆ ಚಿಕ್ಕಮಗಳೂರಿನ ಹೆಬ್ಬಾಳ ಸೇತುವೆ ಮುಳುಗಲಿದೆ. ಕಳಸ ಹೊರನಾಡು ಸಂಪರ್ಕಿಸುವ ಹೆಬ್ಬಾಳ ಸೇತುವೆ ಮುಳುಗಡೆಗೆ ಕೇವಲ ಇನ್ನೊಂದು ಅಡಿ ಬಾಕಿ ಇದೆ. ಮಲೆನಾಡಿನ ಜೀವನದಿಗಳಾದ ತುಂಗಾ-ಭದ್ರಾ, ಹೇಮಾವತಿ ತುಂಬಿ ಹರಿಯುತ್ತಿದೆ. ಕುದುರೆಮುಖ, ಕಳಸ, ಸಂಸೆ, ಬಾಳೆಹೊಳೆ, ಬಸ್ರೀಕಟ್ಟೆ, ತನಿಕೋಡು ವ್ಯಾಪ್ತಿಯಲ್ಲಿ ಹಾಗೂ ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಕೊಪ್ಪದಲ್ಲೂ ಭಾರೀ ಮಳೆ ಆಗುತ್ತಿದೆ.

    ಇತ್ತ ಧಾರವಾಡದಲ್ಲಿ ಕಳೆದ ಎರಡು ದಿನಗಳಿಂದ ಸತತ ಮಳೆ ಆಗುತ್ತಿದ್ದು, ಮಳೆಯಿಂದಾಗಿ ಶಿಥಿಲಗೊಂಡಿದ್ದ ಸಿದ್ದೇಶ್ವರನಗರದ ಸರ್ಕಾರಿ ಶಾಲೆಯ ಗೋಡೆ ಕುಸಿತಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ವರದಿಯಾಗಿದೆ. ಕೊಡಗಿನಲ್ಲಿ ಕೊಂಚ ಮಳೆರಾಯ ಬಿಡುವು ಕೊಟ್ಟಿದ್ದಾನೆ. ಆದರೆ ಭಾಗಮಂಡಲ ತಲಕಾವೇರಿ ಬಾಗದಲ್ಲಿ ತುಂತುರು ಮಳೆ ಆಗುತ್ತಿದ್ದು, ಮಡಿಕೇರಿಯಲ್ಲಿ ಮೋಡ ಕವಿದ ವಾತಾವರಣವಿದೆ.

    ವಾಣಿಜ್ಯನಗರಿ ಮುಂಬೈನಲ್ಲೂ ಮಳೆ ಕೊಂಚ ಬಿಡುವು ಕೊಟ್ಟಿದ್ದು, ಜನಜೀವನ ಸಹಜಸ್ಥಿತಿಯತ್ತ ಬರುತ್ತಿದೆ. ಆದರೂ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಆಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಬರಗಾಲದ ನಡುವೆಯೂ ತುಂಬಿದ ತುಂಗಾ – ರಾಜ್ಯದಲ್ಲಿ ಮೊದಲ ಡ್ಯಾಂ ಭರ್ತಿ

    ಬರಗಾಲದ ನಡುವೆಯೂ ತುಂಬಿದ ತುಂಗಾ – ರಾಜ್ಯದಲ್ಲಿ ಮೊದಲ ಡ್ಯಾಂ ಭರ್ತಿ

    ಶಿವಮೊಗ್ಗ: ರಾಜ್ಯದಲ್ಲಿ ಹಲವಾರು ಕಡೆ ಬರಗಾಲವಿದ್ದು, ಕುಡಿಯುವ ನೀರಿಗೂ ಕಷ್ಟವಾಗಿದೆ. ಆದರೆ ಈ ಬರಗಾಲದ ನಡುವೆಯೂ ಶಿವಮೊಗ್ಗದ ತುಂಗಾ ಡ್ಯಾಂ ತುಂಬಿದ್ದು, ಈ ಮೂಲಕ ಈ ವರ್ಷ ರಾಜ್ಯದಲ್ಲಿ ತುಂಬಿದ ಮೊದಲ ಆಣೆಕಟ್ಟು ಇದಾಗಿದೆ.

    ರಾಜ್ಯದಲ್ಲೂ ಬರವಿದ್ದರೂ ಮಲೆನಾಡಿನಲ್ಲಿ ನಿರಂತರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಗಾಜನೂರು ಡ್ಯಾಂ ತುಂಬಿದೆ. ಈ ಜಲಾಶಯದ 4 ಗೇಟ್‍ಗಳ ಮೂಲಕ, 2 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ.

    ಶಿವಮೊಗ್ಗದ ಗಾಜನೂರು ತುಂಗಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಜಲಾಶಯದ ನೀರಿನ ಮಟ್ಟ 587.42 ಮೀಟರ್ ತಲುಪಿದೆ. 588.24 ಮೀಟರ್ ಎತ್ತರ ಇರುವ ಗಾಜನೂರು ಡ್ಯಾಂ. 3.25 ಟಿ.ಎಂ.ಸಿ. ನೀರುನ್ನು ಶೇಖರಣೆ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ಡ್ಯಾಂಗೆ 6,600 ಕ್ಯೂಸೆಕ್ ಒಳ ಹರಿವು ಬರುತ್ತಿರುವ ಹಿನ್ನೆಲೆ ಇಂದು ಗೇಟ್‍ಗಳನ್ನು ತೆಗೆದು ನೀರನ್ನು ನದಿಗೆ ಬಿಡಲಾಗಿದೆ.

    ಶೃಂಗೇರಿ. ತೀರ್ಥಹಳ್ಳಿ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಕಳೆದ ಹತ್ತು ದಿನಗಳ ಹಿಂದೆಯಷ್ಟೇ, ಡ್ಯಾಂ ತಳ ಕಂಡು ಶಿವಮೊಗ್ಗದಲ್ಲಿ ನೀರಿನ ಅಭಾವವಿದೆ ಎಂದು ಆತಂಕಗೊಂಡಿದ್ದ ಶಿವಮೊಗ್ಗದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಗಮನಿಸಿ, ಮಲೆನಾಡಿನ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರಿಗಿಲ್ಲ ಎಂಟ್ರಿ!

    ಗಮನಿಸಿ, ಮಲೆನಾಡಿನ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರಿಗಿಲ್ಲ ಎಂಟ್ರಿ!

    ಚಿಕ್ಕಮಗಳೂರು: ಮರಣ ಮೃದಂಗ ಬಾರಿಸುತ್ತಿರುವ ಮಂಗನಜ್ವರಕ್ಕೆ ಮಲೆನಾಡಿಗರು ತತ್ತರಿಸಿ ಹೋಗಿದ್ದು, ಈ ಕಾಯಿಲೆ ಇಲ್ಲಿಗೆ ಬರುವ ಪ್ರವಾಸಿಗರಿಗೂ ತಗಲುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.

    ಮಲೆನಾಡು ಹಾಗೂ ಸುತ್ತಮುತ್ತಲ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿರೋ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‍ಡಿ) ವೈರಾಣುವಿನಿಂದ ಅನೇಕ ಮಂದಿ ಮೃತಪಟ್ಟಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಈ ಕಾಯಿಲೆ ಈ ಭಾಗಕ್ಕೆ ಬರುವ ಪ್ರವಾಸಿಗರಿಗೂ ತಗಲಬಾರದೆಂದು ಮುಂಜಾಗೃತೆ ಕ್ರಮವಾಗಿ ಪ್ರವಾಸಿಗರಿಗೆ ಮಲೆನಾಡಿನ ಪ್ರವಾಸಿ ತಾಣಗಳಿಗೆ ಪ್ರವೇಶವನ್ನು ನಿಷೇಧಿಸಿದೆ. ಕುದುರೆಮುಖಕ್ಕೆ ಒಳಪಡುವ ಹಲವು ಪ್ರದೇಶಗಳಲ್ಲಿ ಟ್ರಕ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಗಣನೀಯವಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿದೆ. ಪ್ರವಾಸಿಗರ ಚಾರಣಕ್ಕೆ ಅರಣ್ಯ ಇಲಾಖೆಯಿಂದ ನಿಷೇಧ ಹೇರಿದೆ. ಈ ಭಾಗದಲ್ಲಿ ಕೆ.ಎಫ್.ಡಿ ವೈರಾಣು ಪತ್ತೆ ಹಿನ್ನೆಲೆ ಕುದುರೆಮುಖ ಗಿರಿಶ್ರೇಣಿ, ಕೂಡಲ್ ಫಾಲ್ಸ್, ಕೊಡಚಾದ್ರಿ, ಕುರೆಂಜಲ್ ಗಿರಿಶ್ರೇಣಿ ಪ್ರದೇಶಗಳಿಗೆ ಪ್ರವಾಸಿಗರು ಪ್ರವೇಶಿಸಬಾರದೆಂದು ಅರಣ್ಯ ಇಲಾಖೆ ಸೂಚನೆ ನೀಡಿದೆ.

    ಅಷ್ಟೇ ಅಲ್ಲದೆ ಕಾರ್ಕಳಕ್ಕೆ ಒಳಪಡುವ ಪ್ರದೇಶದಲ್ಲೂ ಟ್ರಕ್ಕಿಂಗ್ ನಿಷೇಧಿಸಲಾಗಿದೆ. ಕಾರ್ಕಳ ಹಾಗೂ ಚಿಕ್ಕಮಗಳೂರು, ಕುದುರೆಮುಖ ವ್ಯಾಪ್ತಿಯಲ್ಲಿ ಕೆಎಫ್‍ಡಿ ಭೀತಿ ಹೆಚ್ಚಾಗಿದ್ದು, ಮುಂಜಾಗೃತೆ ಕ್ರಮವಾಗಿ ಅರಣ್ಯ ಇಲಾಖೆ ಮಲೆನಾಡಿಗೆ ಬರೋ ಪ್ರವಾಸಿಗರಿಗೆ ಹಾಗೂ ಜನರಿಗೆ ಎಚ್ಚರದಿಂದಿರಲು ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಫಿ ನಾಡಿಗೂ ಕಾಲಿಡ್ತಾ ಹೆಮ್ಮಾರಿ ಮಂಗನ ಕಾಯಿಲೆ?

    ಕಾಫಿ ನಾಡಿಗೂ ಕಾಲಿಡ್ತಾ ಹೆಮ್ಮಾರಿ ಮಂಗನ ಕಾಯಿಲೆ?

    ಚಿಕ್ಕಮಗಳೂರು: ವಿಜ್ಞಾನಿಗಳು ಮಂಗನಿಂದ ಮಾನವ ಎಂದಿದ್ರು. ಆದ್ರೆ ಈಗ ಮಲೆನಾಡಿಗರು ಮಂಗನಿಂದ ಮರಣ ಅಂತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಜನರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಈಗ ಚಿಕ್ಕಮಗಳೂರಿಗೂ ಕಾಲು ಇಟ್ಟಿದಿಯಾ ಎನ್ನುವ ಅನುಮಾನ ಸೃಷ್ಟಿಯಾಗಿದೆ.

    ಮೊದಲೆಲ್ಲ ದೇವಸ್ಥಾನದಲ್ಲಿ ಮಂಗನನ್ನ ಕಂಡರೆ ಆಂಜನೇಯನ ಸ್ವರೂಪ ಅಂತಿದ್ದರು. ಆದ್ರೆ ಮಲೆನಾಡಲ್ಲಿ ಮಂಗನನ್ನ ಕಂಡರೆ ಅದು ನಡುಗ್ತಿದ್ಯಾ, ಬಳಲುತ್ತಿದ್ಯಾ ಅಂತ ನೋಡ್ತಾರೆ. ಒಂದು ವೇಳೆ ನಡುಗ್ತಿದ್ದರೆ ಎದ್ನೋ-ಬಿದ್ನೋ ಅಂತ ಜನ ಮಂಗಗಳಿಂದ ದೂರ ಓಡ್ತಾರೆ. ಯಾಕಂದ್ರೆ ಮಲೆನಾಡಿನ ಭಾಗದಲ್ಲಿ ಮಂಗ ಅನ್ನೋ ಪದ ಹುಟ್ಟಿಸಿರೋ ಭಯ ಅಂತದ್ದು. ಮಂಗನ ಕಾಯಿಲೆ ಹೆಸರು ಕೇಳಿದ್ರೇನೆ ಒಂದು ಕ್ಷಣ ವಿಚಲಿತಗೊಳ್ತೀವಿ. ಶಿವಮೊಗ್ಗದಲ್ಲಿ ತನ್ನ ಅಟ್ಟಹಾಸ ತೋರಿದ್ದ ಈ ಕಾಯಿಲೆ ಇದೀಗ ಕಾಫಿನಾಡಿನ ಮಲೆನಾಡು ಭಾಗಕ್ಕೂ ಆವರಿಸಿರೋ ಅನುಮಾನ ಹುಟ್ಟಿದೆ. ಜಿಲ್ಲೆಯ ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿನ ಒಂಬತ್ತು ಕಡೆ ಮಂಗಗಳು ಸಾವನ್ನಪ್ಪುತ್ತಿವೆ. ಈ ಮಂಗಗಳ ಸಾವು ಜಿಲ್ಲೆಯ ಜನರ ನಿದ್ದೆಗೆಡಿಸಿದ್ದು, ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಎನ್.ಆರ್ ಪುರದ ಬಾಳೆಹೊನ್ನೂರು, ಶೃಂಗೇರಿಯ ಮೇಲ್ಪಾಲ್ ಸೇರಿದಂತೆ ಐದಾರು ಕಡೆ ಮಂಗಗಳ ಸಾವಿನಿಂದ ಗ್ರಾಮೀಣ ಭಾಗದ ಜನ ಆತಂಕದಲ್ಲಿ ಬದುಕುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನರನ್ನ ಬಲಿ ಪಡೆದಿರೋ ಈ ಮಂಗನ ಕಾಯಿಲೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲೂ ಆತಂಕ ಸೃಷ್ಟಿಸಿದೆ. ಸತ್ತ ಮಂಗಗಳ ಶವಪರೀಕ್ಷೆ ನಡೆಸಿ ಬೆಂಗಳೂರು, ಶಿವಮೊಗ್ಗ, ಪುಣೆ ಹಾಗೂ ಮಣಿಪಾಲ್ ಸಂಶೋಧನಾ ಕೇಂದ್ರಕ್ಕೆ ಪರೀಕ್ಷೆಗೆಂದು ರಕ್ತದ ಮಾದರಿಯನ್ನ ಕಳುಹಿಸಲಾಗಿದೆ. ಅಷ್ಟೇ ಅಲ್ಲದೆ, ಮಂಗಗಳು ಸತ್ತಿರೋ ಗ್ರಾಮದ ಸುತ್ತಮುತ್ತಲಿನ ಜನರ ರಕ್ತದ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ.

    ತೀರ್ಥಹಳ್ಳಿ, ಸಾಗರದ ಮಲೆನಾಡಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಈ ಕಾಯಿಲೆ ಎಲ್ಲಿ ನಮಗೂ ತಟ್ಟುತ್ತೋ ಅಂತ ಕಾಫಿನಾಡ ಮಲೆನಾಡು ಭಾಗದ ಜನ ಕೂಡ ಆತಂಕದಲ್ಲಿದ್ದಾರೆ. ಮಲೆನಾಡಲ್ಲಿ ಮೊದಲೇ ಸುಸರ್ಜಿತ ಸರ್ಕಾರಿ ಆಸ್ಪತ್ರೆಗಳಿಲ್ಲ. ಖಾಸಗಿ ಆಸ್ಪತ್ರೆಗಳಿಗೇ ಹೋಗಬೇಕು. ಜನಸಾಮಾನ್ಯರಿಗೆ ಕೂಲಿ ಹಾಗೂ ಹಣದ ಸಮಸ್ಯೆ ಇದೆ. ಒಂದು ವೇಳೆ, ಲ್ಯಾಬ್‍ನಿಂದ ವರದಿ ಪಾಸಿಟಿವ್ ಎಂದು ಬಂದರೆ ಈ ಹೆಮ್ಮಾರಿ ಕಾಯಿಲೆ ಕಾಫಿನಾಡಲ್ಲಿ ಇನ್ನೆಷ್ಟು ಬಲಿ ಪಡಿಯುತ್ತೋ ಗೊತ್ತಿಲ್ಲ. ಹಾಗಾಗಿ, ಜಿಲ್ಲಾಡಳಿತ ಈಗಾಗಲೇ ಮುಂಜಾಗೃತ ಕ್ರಮವಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರಕ್ಕೆ 2000 ಚುಚ್ಚು ಮದ್ದುಗಳಿಗೆ ಮನವಿ ಮಾಡಲಾಗಿದೆ. ಜಾನುವಾರುಗಳನ್ನ ಕಾಡಿಗೆ ಕರೆದುಕೊಂಡು ಹೋಗುವವರಿಗೆ ಡಿಎಂಪಿ ತೈಲವನ್ನು ನೀಡಲಾಗಿದೆ. ಈ ಕುರಿತು ಮಲೆನಾಡಿನ ಪ್ರತಿ ಆಸ್ಪತ್ರೆಯ ವೈದ್ಯರಿಗೂ ಸೂಚನೆ ನೀಡಲಾಗಿದೆ. ಹಾಗೆಯೇ ಸುತ್ತಮುತ್ತಲಿನ ಪರಿಸರವನ್ನ ಸ್ವಚ್ಛವಾಗಿಡಲು ಆದೇಶಿಸಿದೆ. ಅಷ್ಟೇ ಅಲ್ಲದೆ ಅಗತ್ಯ ಬಿದ್ದರೆ ಮುನ್ನೇಚ್ಛರಿಕೆಯಾಗಿ ಜನಸಾಮಾನ್ಯರಿಗೆ ಔಷಧಿಗಳನ್ನ ನೀಡೋದಕ್ಕೂ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಈ ಮಹಾಮಾರಿಗೆ 1993 ರಿಂದ 1995ರ ಅವಧಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದೀಗ ಮತ್ತೆ ಆ ಹೆಮ್ಮಾರಿ ಬರುವ ಸೂಚನೆ ಸಿಕ್ಕಿರೋದು ಜಿಲ್ಲಾಡಳಿತಕ್ಕೆ ಬಿಸಿ ತುಪ್ಪವಾಗಿದೆ. ಅದೇನೆ ಆಗಲಿ ಮಂಗನ ಕಾಯಿಲೆ ಸೋಂಕು ನಮಗೆ ತಗುಲದೆ ಇರಲಿ ಅಂತ ಮಲೆನಾಡಿಗರು ಆಂಜನೇಯನ ಬಳಿ ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ಆದ್ರೆ, ಲ್ಯಾಬ್‍ನಿಂದ ವರದಿ ಬಂದ್ಮೇಲಷ್ಟೆ ಇಲ್ಲಿನ ವಾಸ್ತವ ಸ್ಥಿತಿಗತಿಯ ಬಗ್ಗೆ ಮನವರಿಕೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಲೆನಾಡಿನಲ್ಲಿ ಗೋಚರವಾಯ್ತು ಹಾರುವ ಬೆಕ್ಕು- ರೆಕ್ಕೆ ಇರುವ ಬೆಕ್ಕನ್ನು ಕಂಡು ಅಚ್ಚರಿ ಪಟ್ಟ ಜನ : ವಿಡಿಯೋ ನೋಡಿ

    ಮಲೆನಾಡಿನಲ್ಲಿ ಗೋಚರವಾಯ್ತು ಹಾರುವ ಬೆಕ್ಕು- ರೆಕ್ಕೆ ಇರುವ ಬೆಕ್ಕನ್ನು ಕಂಡು ಅಚ್ಚರಿ ಪಟ್ಟ ಜನ : ವಿಡಿಯೋ ನೋಡಿ

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕೊರಡಿ ಎಸ್ಟೇಟ್ ಬಳಿ ರೆಕ್ಕೆ ಇರುವ ಅಪರೂಪದ ಹಾರುವ ಬೆಕ್ಕೊಂದು ಗೋಚರವಾಗಿ ಜನರನ್ನು ಅಚ್ಚರಿಗೊಳಿಸಿದೆ.

    ಹಿಂದೆಂದೂ ಕಂಡುಬರದ ರೆಕ್ಕೆ ಇರುವ ಬೆಕ್ಕೊಂದು ಮಲೆನಾಡಿನಲ್ಲಿ ಕಾಣಿಸಿಕೊಂಡಿದೆ. ಹೆಚ್ಚಾಗಿ ದಟ್ಟಾರಣ್ಯದಲ್ಲಿ ವಾಸ ಮಾಡುವ ಹಾರುವ ಬೆಕ್ಕು ಮೊದಲ ಬಾರಿ ಜನರಿರುವ ಪ್ರದೇಶದಲ್ಲಿ ಕಂಡಿದೆ. ಕಾಡಂಚಿನ ಗ್ರಾಮದ ತೋಟಕ್ಕೆ ಬಂದು ಹಾರುವಾಗ ಸುತ್ತು ಹಾಕಿದ್ದ ತಂತಿ ಬೇಲಿಗೆ ಸಿಲುಕಿ ನರಳಾಡಿದೆ. ಈ ವೇಳೆ ನರಳುತ್ತಿದ್ದ ಬೆಕ್ಕನ್ನು ಕಂಡ ಸ್ಥಳೀಯರು ಅದನ್ನು ರಕ್ಷಿಸಿದ್ದಾರೆ. ಬೇಲಿಯಿಂದ ಬೆಕ್ಕನ್ನು ಬಿಡಿಸಿದ ತಕ್ಷಣವೇ ಅದು ಕಾಡಿನೆಡೆಗೆ ಹಾರಿ ಹೋಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

    ಈ ತರಹದ ಅಪರೂಪದ ಹಾರುವ ಬೆಕ್ಕನ್ನು ಕಂಡ ಮಲೆನಾಡಿಗರು ಅಚ್ಚರಿ ಪಟ್ಟಿದ್ದಾರೆ. ಅಲ್ಲದೆ ಹಕ್ಕಿಗಳಂತೆ ಎರಡು ರೆಕ್ಕೆಯನ್ನು ಹೊಂದಿರುವ ಬೆಕ್ಕನ್ನು ಜನರು ಕುತೂಹಲದಿಂದ ವೀಕ್ಷಿಸಿದ್ದು, ಮೊಬೈಲ್‍ನಲ್ಲಿ ಈ ಅಪರೂಪದ ಪ್ರಾಣಿಯ ದೃಶ್ಯಾವಳಿಯನ್ನು ಸೆರೆಹಿಡಿದಿದ್ದಾರೆ.

    ಪ್ರಸ್ತುತ ಕಾಲಮಾನದಲ್ಲಿ ಅಪರೂಪದ ಹಾರುವ ಬೆಕ್ಕಿನ ಸಂತತಿ ಅಳಿವಿನಂಚಿನಲ್ಲಿದೆ. ಸದ್ಯ ಈ ಅಪರೂಪದ ಹಾರುವ ಬೆಕ್ಕನ್ನು ನೋಡಿ ಜನರು ಖುಷಿ ಪಟ್ಟಿದಾರೆ.

    https://www.youtube.com/watch?v=fKktPY1wQQs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮತ್ತೆ ಮೂರು ದಿನ ಮಳೆ

    ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮತ್ತೆ ಮೂರು ದಿನ ಮಳೆ

    ಬೆಂಗಳೂರು: ಮಹಾಮಳೆಗೆ ಪ್ರವಾಹ ಪರಿಸ್ಥಿತಿ ಎದುರಿಸಿ ಸಂತ್ರಸ್ತರಗಿರುವ ಕೊಡಗು ಮತ್ತು ಕರಾವಳಿ ಭಾಗದಲ್ಲಿ ಮತ್ತೆ ಮಳೆ ಸುರಿಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಇಲಾಖೆ ಮಾಹಿತಿ ನೀಡಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ, ಬಂಗಾಳಕೊಲ್ಲಿಯ ಒಡಿಶಾ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಸುಮಾರು 30 ರಿಂದ 35 ಮೀ.ಮೀ ವರೆಗೂ ಮಳೆಯಾಲಿದೆ ಎಂದು ತಿಳಿಸಿದ್ದಾರೆ.

    ಕಳೆದ 7 ದಿನಗಳ ಮಳೆ ಪ್ರಮಾಣ ಗಮನಿಸಿದರೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕ್ರಮೇಣ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮುಂದಿನ 24 ಗಂಟೆಯಲ್ಲಿ ಬಂಗಾಳಕೊಲ್ಲಿ ಒಡಿಶಾ ಭಾಗದಲ್ಲಿ ವಾಯುಭಾರ ಕುಸಿತ ಆಗುವ ಸಾಧ್ಯತೆ ಇದೆ. ಒಂದೊಮ್ಮೆ ವಾಯುಭಾರ ಕುಸಿತವಾದರೆ ಮೋಡಗಳು ಮತ್ತೆ ಘಟ್ಟಪ್ರದೇಶದ ಕಡೆ ಚಲಿಸುವ ಸಾಧ್ಯತೆಯಿದೆ ಎಂದರು.

    ಕಳೆದ ಮೂರು ದಿನಗಳಿಂದ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಅಲ್ಪ ಪ್ರಮಾಣದಲ್ಲಿ ಬಿಡುವು ನೀಡಿತ್ತು. ಇದರಿಂದ ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರ ಹಾಗೂ ಭೂ ಕುಸಿತದಿಂದ ನಾಪತ್ತೆಯಾದ ಜನರ ಹುಡುಕಾಟ ಕಾರ್ಯಾಚರಣೆ ಕೂಡ ಕೈಗೊಳ್ಳಲಾಗಿತ್ತು. ಮೂರು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಮುಂದುವರಿದರೆ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುವ ಅತಂಕ ಇದ್ದು, ಮತ್ತಷ್ಟು ಭೂ ಕುಸಿತ ಸಂಭವಿಸುವ ಭಯವೂ ಜನರನ್ನು ಕಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮತ್ತೆ ಜೋಡುಪಾಲ, ಮದೆನಾಡಿನಲ್ಲಿ ಗುಡ್ಡ ಕುಸಿತ ಸಾಧ್ಯತೆ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ ನೋಡಿ

    ಮತ್ತೆ ಜೋಡುಪಾಲ, ಮದೆನಾಡಿನಲ್ಲಿ ಗುಡ್ಡ ಕುಸಿತ ಸಾಧ್ಯತೆ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ ನೋಡಿ

    ಮಡಿಕೇರಿ: ಕೊಡಗಿನ ಜೋಡುಪಾಲ, ಮದೆನಾಡು ಪ್ರದೇಶಗಳು ವಾಸಕ್ಕೆ ಯೋಗ್ಯವಾಗಿಲ್ಲ ಎಂದು ರಾಜ್ಯ ನೈಸರ್ಗಿಕ ನಿರ್ವಹಣೆ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ಹೇಳಿದ್ದಾರೆ.

    ಭೂ ಕುಸಿತಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ, ಗುಡ್ಡ ಪ್ರದೇಶದಲ್ಲಿ ನೀರು ಇಂಗಿ ಸ್ಫೋಟಗೊಂಡು ಹೊರಬಂದಿದೆ. ಮತ್ತೆ ಕೆಲವು ಕಡೆ ಗುಡ್ಡಗಳು ಕುಸಿದು ಬೀಳುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

    ಭಾರೀ ಮಳೆಯಿಂದಾಗಿ ಮಣ್ಣು ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಕಳೆದುಕೊಂಡ ಪರಿಣಾಮ ಅಂತರ್ಜಲ ಮಟ್ಟ ಏರಿ ಈ ಕುಸಿತ ಸಂಭವಿಸಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಮುಂದೆ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬೇಕು ಎಂಬುದಕ್ಕೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲಿನ ವಾತಾವರಣವನ್ನು ನೋಡಿದರೆ ಜನರಿಂದ ಯಾವುದೇ ರೀತಿಯ ತೊಂದರೆ ಆಗಿಲ್ಲ. ಈಗ ನಾವು ಪ್ರಾಥಮಿಕ ಮಾಹಿತಿ ಕಲೆ ಹಾಕಲು ಬಂದಿದ್ದು ಮುಂದೆ ಸಮಗ್ರ ಅಧ್ಯಯನಕ್ಕೆ ತಂಡ ಬರಲಿದೆ. ಘಟನೆಗೆ ಏನು ಕಾರಣ ಎಂಬ ಬಗ್ಗೆ 2 ತಿಂಗಳು ಅಧ್ಯಯನ ನಡೆಸಿ ವರದಿ ನೀಡಲಾಗುತ್ತದೆ ಎಂದು ವಿವರಿಸಿದರು.

    ಇಲ್ಲಿ ಜನರು ವಾಸಿಸಬಹುದೇ ಇಲ್ಲವೇ ಎಂಬುದನ್ನು ನೋಡಲು ಬಂದಿದ್ದೇವೆ. ಬಳಿಕ ಪರಿಸ್ಥಿತಿಯನ್ನು ಹೇಗೆ ಸರಿಪಡಿಸಲಾಗುತ್ತದೆ ಎಂಬುದನ್ನು ಕಂಡು ಕೊಳ್ಳಬೇಕಿದೆ ಪ್ರಕೃತಿ ವಿಕೋಪವನ್ನು ತಡೆಯಲು ಸಾಧ್ಯವಿಲ್ಲ. ಆದರೆ ನಾವು ಮಾಡಿರುವ ತಪ್ಪನ್ನು ಮುಂದೆ ಮಾಡದೇ ಇರುವ ಹಾಗೇ ನೋಡಿಕೊಳ್ಳಬೇಕಿದೆ ಎಂದು ಶ್ರೀನಿವಾಸರೆಡ್ಡಿ ಹೇಳಿದರು.

    ಬೋಪಯ್ಯ ತಿರುಗೇಟು: ಜೋಡುಪಾಲ ವಾಸ ಯೋಗ್ಯ ಅಲ್ಲವೆಂಬ ತಜ್ಞರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಬೋಪಯ್ಯ ಹತ್ತಾರು ವರ್ಷಗಳಿಂದ ವಾಸವಿದ್ದವರನ್ನು ಎಬ್ಬಿಸುವುದು ಸರಿಯಲ್ಲ ಎಂದಿದ್ದಾರೆ.

    ಸಂಪಾಜೆಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿದ ಅವರು, ಯಾವುದೇ ಹೋಮ್ ಸ್ಟೇಗಳಿದ್ದಲ್ಲಿ ಭೂ ಕುಸಿತ ಆಗಿಲ್ಲ, ಬರೀ ಬಡವರ ಮನೆಗಳಿರುವಲ್ಲಿ ಹೆಚ್ಚು ಭೂಕುಸಿತವಾಗಿ ನಾಶ ಆಗಿದೆ. ಹೋಮ್ ಸ್ಟೇ ಇಲ್ಲದ ಮೊಣ್ಣಂಗೇರಿ ಸ್ಥಳಗಳಲ್ಲಿ ಪೂರ್ತಿ ನಾಶವಾಗಿದೆ. ಒಂದು ವರ್ಷದಲ್ಲಿ ಬೀಳಬೇಕಾಗಿದ್ದ ಮಳೆ 15 ದಿನದಲ್ಲಿ ಬಿದ್ದ ಪರಿಣಾಮ ಈ ದುರ್ಘಟನೆಯಾಗಿದೆ ಎಂದು ಎಂದು ವಿಜ್ಞಾನಿಗಳ ಹೇಳಿಕೆಗೆ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಫಿ ನಾಡಿನಲ್ಲಿ ಮುಂದುವರೆದ ವರುಣನ ಆರ್ಭಟ -ಮಂಗಳೂರಿಗೆ ಪ್ರಯಾಣ ಕಷ್ಟಕರ

    ಕಾಫಿ ನಾಡಿನಲ್ಲಿ ಮುಂದುವರೆದ ವರುಣನ ಆರ್ಭಟ -ಮಂಗಳೂರಿಗೆ ಪ್ರಯಾಣ ಕಷ್ಟಕರ

    ಚಿಕ್ಕಮಗಳೂರು: ಕುಂಭದ್ರೋಣ, ಪುನರ್ವಸು, ಆಶ್ಲೇಷ ಮಳೆಯಿಂದ ಕಂಗೆಟ್ಟಿದ್ದ ಮಲೆನಾಡಿಗರು ಒಂದೇ ರಾತ್ರಿ ಮಳೆಯ ಆರ್ಭಟಕ್ಕೆ ಕಂಗಾಲಾಗಿದ್ದಾರೆ. 2 ದಿನ ಸೂರ್ಯನ ಕಂಡು ನಿಟ್ಟುಸಿರಿ ಬಿಟ್ಟಿದ್ದ ಮಲೆನಾಡಿಗರು ಮತ್ತೆ ಉಸಿರು ಬಿಗಿ ಹಿಡಿದಿದ್ದಾರೆ. ರಾತ್ರಿಯಿಂದ ಒಂದೇ ಸುಮನೆ ಸುರಿಯುತ್ತಿರೋ ಮಳೆಗೆ ನೆರೆಭೀತಿ ಎದುರಾಗಿದೆ.

    ಕಾಫಿನಾಡಿನ ಪರಿಸ್ಥಿತಿ ಕೊಡಗಿಗಿಂತ ಭಿನ್ನವಾಗೇನು ಇಲ್ಲ. ಚಿಕ್ಕಮಗಳೂರಿನಲ್ಲಿ ಮೂರು ದಶಕಗಳ ಬಳಿಕ ಕಂಡು ಕೇಳರಿಯದ ರೀತಿ ಮಳೆಯಾಗುತ್ತಿದೆ. ಚಿಕ್ಕಮಗಳೂರಿನ ವಾರ್ಷಿಕ ಮಳೆ 1757 ಮಿ.ಮೀ. ಆದ್ರೆ, ಆಗಸ್ಟ್ 15ರ ವೇಳೆಗೆ 1,873 ಮಿ.ಮೀ. ಮಳೆಯಾಗಿರೋದು ಕಾಫಿನಾಡನ್ನ ಕಂಗೇಡಿಸಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊಪ್ಪ ತಾಲೂಕಿನ ಹುಲುಗರಡಿ, ಬೈರೇದೇವರು, ಸಂಪಾನೆ ಗ್ರಾಮಗಳಲ್ಲಿ ಗುಡ್ಡ ಕುಸಿದು ಮಣ್ಣು ಮನೆಗೆ ಅಪ್ಪಳಿಸಿದೆ. ಜಯಪುರ ಸಮೀಪದ ಬಸರೀಕಟ್ಟೆ ಬಳಿ ಭೂಕುಸಿತ ಉಂಟಾಗಿದ್ದು, ಜನಸಾಮಾನ್ಯರು ದಾರಿ ಇಲ್ಲದೆ ಪರದಾಡುವಂತಾಗಿದೆ.

    ಮಂಗಳೂರಿಗೆ ಪ್ರಯಾಣ ಕಷ್ಟಕರ: ಭಾರೀ ಮಳೆಯಿಂದ ಮಂಗಳೂರು, ಬೆಂಗಳೂರಿನ ಸಂಚಾರವೇ ಅಲ್ಲೋಲ-ಕಲ್ಲೋಲವಾಗಿದೆ. ಯಾಕಂದ್ರೆ ಶಿರಾಡಿ, ಸಂಪಾಜೆ ಘಾಟ್ ಬಂದ್ ಆದ ಮೇಲೆ ಮಂಗಳೂರಿನಿಂದ ಬೆಂಗಳೂರಿಗೆ ಇರೋದು ಚಾರ್ಮಾಡಿ ಮಾರ್ಗವೇ ಬಳಸಬೇಕು. ಆದರೆ ಅಲ್ಲೂ ಭಾರೀ ಮಳೆ, ಗಾಳಿ ಇರೋದ್ರಿಂದ ಗುಡ್ಡ ಕುಸಿದ್ರೆ ಆ ಮಾರ್ಗವೂ ಬಂದ್ ಆಗುತ್ತೆಂದು ಐರಾವತ, ರಾಜಹಂಸ ಹಾಗೂ 08, 10, 12 ಚಕ್ರದ ಗಾಡಿಗಳನ್ನ ಕಳಸ-ಕುದುರೆಮುಖ ಮಾರ್ಗವಾಗಿ ಮಂಗಳೂರಿಗೆ ಬಿಡಲಾಗಿತ್ತು. ಆದರೆ ಮಹಾಮಳೆಗೆ ಕುದುರೆಮುಖ ಮಾರ್ಗದಲ್ಲೂ 4 ಗುಡ್ಡ ಕುಸಿದಿದ್ದು ಬೆಂಗಳೂರು-ಮಂಗಳೂರಿಗೆ ಮಾರ್ಗವೇ ಇಲ್ಲದಂತಾಗಿದೆ.

    ಇತ್ತ ಕಾವೇರಿ ಹಾಗೂ ಕಪಿಲಾ ನದಿ ಪ್ರವಾಹ ಹಿನ್ನೆಲೆ ಸಂಗಮ ಸ್ಥಳ ಟಿ.ನರಸೀಪುರದಲ್ಲಿ ಹಲವು ಪ್ರದೇಶ ಜಲಾವೃವಾಗಿದೆ. ಟಿ.ನರಸೀಪುರ ಬಳಿಯ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತವಾಗಿದೆ. ಒಟ್ಟಿನಲ್ಲಿ ಮಡಿಕೇರಿ ಮಾತ್ರವಲ್ಲದೇ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರವ ಮಳೆ ಅವಾಂತರವನ್ನೇ ಸೃಷ್ಠಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರವಾಹದಲ್ಲಿ ಸಿಲುಕಿರುವ ಜನರ ಸಹಾಯಕ್ಕೆ ಮುಂದಾದ ಸಿಲಿಕಾನ್ ಸಿಟಿ ನಾಗರಿಕರು

    ಪ್ರವಾಹದಲ್ಲಿ ಸಿಲುಕಿರುವ ಜನರ ಸಹಾಯಕ್ಕೆ ಮುಂದಾದ ಸಿಲಿಕಾನ್ ಸಿಟಿ ನಾಗರಿಕರು

    ಬೆಂಗಳೂರು: ಭಾರೀ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ಸಿಲಿಕಾನ್ ಸಿಟಿ ನಾಗರಿಕರು ಮತ್ತು ಬೆಂಗಳೂರು ಕೊಡುವ ಸಮಾಜ ಸಹಾಯ ನೀಡಿದೆ.

    ಬೆಂಗಳೂರಿನ ವಸಂತ ನಗರದಲ್ಲಿ ಕೊಡುವ ಸಮಾಜದ ಚೌಟ್ರಿಯಲ್ಲಿ ನಗರದ ಜನತೆ ನೀಡಿರುವ ಅಗತ್ಯ ವಸ್ತುಗಳನ್ನು ಕೊಡಗಿನ ಜನತಗೆ ಪೂರೈಕೆ ಮಾಡಲು ಮುಂದಾಗಿದೆ. ಸದ್ಯ ಕೊಡುಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಅಲ್ಲಿನ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಕೊಡವ ಸಮಾಜ ತಕ್ಷಣಕ್ಕೆ ಬೇಕಾದ ಅಗತ್ಯ ವಸ್ತುಗಳಾದ ಬ್ರೆಡ್, ಹಾಲು, ಇತರೆ ಆಹಾರ ಪದಾರ್ಥಗಳು, ಕುಡಿಯುವ ನೀರು, ಔಷಧಿ ಸಾಮಾಗ್ರಿಗಳನ್ನು ಮತ್ತು ಹೊದಿಕೆ ಮೂರು ಕ್ಯಾಂಟರ್ ಗಳಲ್ಲಿ ಕೊಡಗಿನ ಕುಶಲಾನಗರಕ್ಕೆ ಕಳುಹಿಸಿದೆ.

    ಭಾನುವಾರ ಸಹ ಪ್ರವಾಹ ಪೀಡಿತ ಪ್ರದೇಶಗಳಿಗೆ ಆಹಾರ ಪದಾರ್ಥಗಳನ್ನು ಇಲ್ಲಿಂದ ಕಳುಹಿಸಲಾಗುತ್ತದೆ. ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ಸಹಾಯ ಮಾಡಲು ಅಸಕ್ತಿಯಿರುವ ಬೆಂಗಳೂರು ನಾಗರಿಕರು ಕೊಡುವ ಸಮಾಜಕ್ಕೆ ತಂದು ಕೊಡಬಹುದು. ಅದನ್ನ ಕೊಡುವ ಸಮಾಜ ತೊಂದರೆಯಲ್ಲಿ ಸಿಲುಕಿರುವ ಜನರಿಗೆ ತಲುಪಿಸಲಿದೆ. ಇದನ್ನೂ ಓದಿ: ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ- ಏನು ಕೊಡಬಹುದು? ಯಾರನ್ನು ಸಂಪರ್ಕಿಸಬಹುದು? ಇಲ್ಲಿದೆ ವಿವರ

    ಮಳೆರಾಯನ ಆರ್ಭಟಕ್ಕೆ ನಲುಗಿ ಹೋಗಿರುವ ರಾಜ್ಯದ ಕರಾವಳಿ ಪ್ರದೇಶಗಳು ಹಾಗೂ ಕೇರಳಕ್ಕೆ ಬೆಂಗಳೂರು ನಗರದ ಪುನಂ ಟ್ರಸ್ಟ್ ಒಟ್ಟು 5 ಲಕ್ಷ ಚಪಾತಿ ವಿತರಣೆ ಮಾಡುತ್ತಿದೆ. ಅತಿವೃಷ್ಠಿಯಿಂದ ನಿರಾಶ್ರಿತರಾದವರಿಗೆ ಕೆಂಗೇರಿ ಉಪನಗರದ ಪುನಂ ಟ್ರಸ್ಟ್ ಈ ಮಾನವೀಯ ಕಾರ್ಯಕ್ಕೆ ಮುಂದಾಗಿದೆ. ಒಟ್ಟು 5 ಲಕ್ಷ ಚಪಾತಿಗಳು, ಸಾವಿರಾರು ಬ್ರೆಡ್ ಹಾಗೂ ಬನ್‍ಗಳನ್ನು ವಿತರಿಸಲಿದ್ದಾರೆ. 5 ಲಕ್ಷ ಚಪಾತಿಗಳನ್ನು ತಮ್ಮ ಪುನಂ ಟ್ರಸ್ಟ್ ನ ಸದಸ್ಯರೇ ಕೈಯಾರೆ ತಯಾರು ಮಾಡಿದ್ದು ವಿಶೇಷವಾಗಿದೆ. ಜೊತೆಗೆ ಟವಲ್‍ಗಳು, ಹೊದಿಕೆಗಳು ಹಾಗೂ ಉಡುಪುಗಳು, ಔಷಧಿಗಳನ್ನು ಕೂಡ ಪ್ರವಾಹ ಸಂತ್ರಸ್ತರಿಗೆ ನೀಡಲಾಗ್ತಿದೆ.

    ಕಳೆದ ಎರಡು ದಿನಗಳಿಂದ ಈ ಕುರಿತ ಕಾರ್ಯ ನಡೆಯುತ್ತಿದ್ದು ನಾಳೆ ಬೆಂಗಳೂರಿನಿಂದ ಟ್ರಸ್ಟ್ ನ ಸಿಬ್ಬಂದಿ ಮೊದಲು ಕೊಡಗು ಸೇರಿ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಸ್ತುಗಳ ವಿತರಣೆ ಮಾಡಲಿದ್ದಾರೆ. ನಂತರ ಕೇರಳಕ್ಕೆ ತೆರಳಿ ಆಹಾರ ಪದಾರ್ಥಗಳನ್ನು ನೀಡಿ, ನಿರಾಶ್ರಿತರ ಹಸಿವನ್ನು ನೀಗಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv