Tag: Malemahadeshwara hills

  • ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು ಸಚಿವ ಸಂಪುಟ ಸಭೆ – 8 ಜಿಲ್ಲೆಗಳಿಗೆ ಬಂಪರ್‌?

    ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು ಸಚಿವ ಸಂಪುಟ ಸಭೆ – 8 ಜಿಲ್ಲೆಗಳಿಗೆ ಬಂಪರ್‌?

    ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ (Malemahadeshwara Hills) ಇಂದು ಸಚಿವ ಸಂಪುಟ ಸಭೆ (Cabinet Meeting) ನಡೆಯಲಿದೆ. ಮಲೆಮಹದೇಶ್ವರದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ಸಚಿವ ಸಂಪುಟ ಸಭೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಭೆ ನಡೆಸಲು ವಜ್ರಮಲೆ ವಸತಿ ಗೃಹದ ಎದುರಿನ ಆವರಣದಲ್ಲಿ ಜರ್ಮನ್ ಟೆಂಟ್ ಅಳವಡಿಸಲಾಗಿದೆ. ಇದರಿಂದ ಬಿಸಿಲು, ಮಳೆ ಬಂದರೂ ಸಭೆಗೆ ಯಾವುದೇ ಅಡ್ಡಿಯಾಗುವುದಿಲ್ಲ.

    ಸಚಿವ ಸಂಪುಟ ಸಭೆಯಲ್ಲಿ ಮೈಸೂರು ವಿಭಾಗದ ಎಂಟು ಜಿಲ್ಲೆಗಳ ವಿವಿಧ ಯೋಜನೆಗಳ ಬಗ್ಗೆ ಚರ್ಚೆಯಾಗಲಿದ್ದು, ಅನುಮೋದನೆ ಸಾಧ್ಯತೆಯಿದೆ. ಇನ್ನೂ ಚಾಮರಾಜನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಕಾಶ್ಮೀರಕ್ಕೆ ತೆರಳಿದ್ದ 180 ಕನ್ನಡಿಗರು ಸೇಫ್ – ಸ್ವಂತ ಹಣದಲ್ಲೇ ಎಲ್ಲರನ್ನು ಕರೆತರುತ್ತಿರೋ ಸಂತೋಷ್ ಲಾಡ್

    ಗಿರಿಜನರಿಗೆ ವಸತಿ, ಹಾಡಿಗಳಿಗೆ ವಿದ್ಯುತ್, ಪ್ರವಾಸೋದ್ಯಮ, ಕೆರೆ ನೀರು ತುಂಬಿಸುವ ಯೋಜನೆ ಸೇರಿದಂತೆ ಹಲವು ಪ್ರಸ್ತಾವನೆಗಳಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ.

    ಈಗಾಗಲೇ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಹೆಚ್‌.ಸಿ ಮಹದೇವಪ್ಪ, ಕೆ ವೆಂಕಟೇಶ್ , ಲಕ್ಷ್ಮಿ ಹೆಬ್ಬಾಳ್ಕರ್ ಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ದಾರೆ. ಬೆಳಗ್ಗೆ 11:30 ಕ್ಕೆ ಹೆಲಿಕಾಪ್ಟರ್ ಮೂಲಕ ಮಹದೇಶ್ವರ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಬಳಿಕ ಮಹದೇಶ್ವರರ ಇತಿಹಾಸ ಸಾರುವ ಮ್ಯೂಸಿಯಂ, 376 ಕೊಠಡಿಗಳ ವಸತಿ ಗೃಹ, 1 ಮೆಗಾ ವ್ಯಾಟ್ ಸೋಲಾರ್ ಪ್ಲಾಂಟ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಲಿದೆ.

    ಮಧ್ಯಾಹ್ನ 12:00 ಗಂಟೆಗೆ ಸಚಿವ ಸಂಪುಟ ಸಭೆ ಆರಂಭಗೊಳ್ಳಲಿದ್ದು, ಬಳಿಕ ಪತ್ರಿಕಾಗೋಷ್ಠಿ ನಡೆಯಲಿದೆ. ಸಂಜೆ 4:00 ಗಂಟೆಗೆ ಸಿಎಂ ಅಧ್ಯಕ್ಷತೆಯಲ್ಲಿ ಮಲೆಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಲಿದೆ. ಬಳಿಕ ಮಹದೇಶ್ವರ ಬೆಟ್ಟದಲ್ಲಿ ಸಿಎಂ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ನರಮೇಧ – ಬೆಂಗಳೂರಿಗೆ ಆಗಮಿಸಿದ ಮೃತದೇಹ, ಕುಟುಂಬಸ್ಥರಿಗೆ ಹಸ್ತಾಂತರ

  • ಮತ್ತೆ ಕೋಟಿ ಒಡೆಯನಾದ ಮುದ್ದು ಮಾದಪ್ಪ-1.48 ಕೋಟಿ ರೂ. ಸಂಗ್ರಹ

    ಮತ್ತೆ ಕೋಟಿ ಒಡೆಯನಾದ ಮುದ್ದು ಮಾದಪ್ಪ-1.48 ಕೋಟಿ ರೂ. ಸಂಗ್ರಹ

    – ಹುಂಡಿಯಲ್ಲಿ 44 ವಿದೇಶಿ ನೋಟುಗಳು ಪತ್ತೆ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಈ ಬಾರಿಯೂ ಕೂಡ 1.48 ಕೋಟಿ ರೂಪಾಯಿ(ರೂ1,48,73,233) ನಗದು ಹಣ ಸಂಗ್ರಹವಾಗಿದೆ.

    ನಿನ್ನೆ ಬೆಳಗ್ಗೆಯಿಂದ ಆರಂಭವಾಗಿದ್ದ ಹುಂಡಿ ಎಣಿಕೆ ಕಾರ್ಯ ತಡರಾತ್ರಿವರೆಗೆ ನಡೆದಿದೆ. ನಗದು ಹಣದ ಜೊತೆಗೆ ದೇಗುಲಕ್ಕೆ 31 ಗ್ರಾಂ ಚಿನ್ನ ಹಾಗೂ 2.82 ಕೆ.ಜಿ.ಬೆಳ್ಳಿ ಕಾಣಿಕೆಯಾಗಿ ಬಂದಿದೆ.

    ಹುಂಡಿಯಲ್ಲಿ 44 ವಿದೇಶಿ ನೋಟುಗಳು ಪತ್ತೆಯಾಗಿವೆ. 9 ಅಮೆರಿಕನ್ ಡಾಲರ್ ನೋಟುಗಳು, 15 ಇಂಗ್ಲೆಂಡ್ ಪೌಂಡ್ಸ್, ಹಾಗೂ ಮಲೇಶಿಯಾದ 20 ರಿಂಗ್ ಗಿಟ್ ನೋಟುಗಳನ್ನು ಭಕ್ತರು ಅರ್ಪಿಸಿದ್ದಾರೆ. ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಭಕ್ತರು ಧಾರಳವಾಗಿ ಕಾಣಿಕೆ ಅರ್ಪಿಸಿದ್ದಾರೆ. ಕಳೆದ ಬಾರಿ ಜನವರಿ 28 ರಂದು ಹುಂಡಿ ಎಣಿಕೆ ಕಾರ್ಯ ನಡೆದಿತ್ತು. 2 ಕೋಟಿ 21 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿತ್ತು. ಈಗ ಒಂದು ತಿಂಗಳು ಪೂರ್ಣವಾಗುವ ಮುಂಚೆಯೇ ಮತ್ತೆ ಹುಂಡಿ ಎಣಿಕೆ ಮಾಡಲಾಗಿದ್ದು, 1.48 ಕೋಟಿ ರೂಪಾಯಿ ಹಣ ಸಂಗ್ರಹಣೆಯಾಗಿದೆ.

  • ಮೂರು ದಿನ ಭಕ್ತರಿಗಿಲ್ಲ ಮಾದಪ್ಪನ ದರ್ಶನ!

    ಮೂರು ದಿನ ಭಕ್ತರಿಗಿಲ್ಲ ಮಾದಪ್ಪನ ದರ್ಶನ!

    ಚಾಮರಾಜನಗರ: ಮೂರು ದಿನಗಳ ಕಾಲ ಮಲೆ ಮಾದಪ್ಪ ತನ್ನ ಭಕ್ತರಿಗೆ ದರ್ಶನ ಕೊಡಲ್ಲ.

    ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರು ದಿನ ಭಕ್ತರಿಗೆ ದೇವರ ದರ್ಶನ ಸಿಗಲ್ಲ. ಕೊನೆಯ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಬರುವ ಸಾಧ್ಯತೆ ಇದೆ.

    ಕೊರೊನಾ ಮುಂಜಾಗ್ರತಾ ಕ್ರಮವಾಗಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಡಿ.12 ರಿಂದ ಡಿ.14 ರ ವರೆಗೆ ಮಾದಪ್ಪನ ದರ್ಶನ ಭಕ್ತರಿಗಿಲ್ಲ ಸಿಗಲ್ಲ. ಎಣ್ಣೆ ಮಜ್ಜನ, ತೆಪ್ಪೋತ್ಸವ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತಿತ್ತು. ಆದರೆ ಈ ಬಾರಿ ವಿಶೇಷ ಪೂಜೆಗಳಿಗೆ ಭಾಗವಹಿಸಲು ಭಕ್ತರಿಗೆ ಪ್ರಾಧಿಕಾರ ಅವಕಾಶ ಕೊಟ್ಟಿಲ್ಲ.

  • ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಲಾಡು ದರ ಏರಿಕೆ

    ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಲಾಡು ದರ ಏರಿಕೆ

    ಚಾಮರಾಜನಗರ: ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಲಾಡು ದರದಲ್ಲಿ ಏರಿಕೆ ಮಾಡಲಾಗಿದೆ.

    100 ಗ್ರಾಂ ಲಾಡುಗೆ ಇಂದಿನಿಂದ 25 ರೂಪಾಯಿ ಮಾಡಿದ್ದು, ಈ ಹಿಂದೆ 100 ಗ್ರಾಂ ಲಾಡು ಬೆಲೆ 20 ರೂ. ಇತ್ತು. ಲಾಡು ತಯಾರಿಕಾ ವೆಚ್ಚ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ 5 ರೂಪಾಯಿ ಏರಿಕೆ ಮಾಡಲಾಗಿದೆ.

    ರಾಜ್ಯದಲ್ಲಿಯೇ ಅತಿ ಹೆಚ್ಚು ಆದಾಯ ತಂದು ಕೊಡುವ ದೇಗುಲಗಳ ಪೈಕಿ 2ನೇ ಸ್ಥಾನವನ್ನು ಹನೂರಿನ ಮಲೆ ಮಹದೇಶ್ವರ ಬೆಟ್ಟ ಪಡೆದುಕೊಂಡಿದೆ. ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಮಾದಪ್ಪನ ಸನ್ನಿಧಿಯಲ್ಲಿ ಸಿಗುವ ಲಾಡು ದರವನ್ನು 2015 ರಿಂದಲೂ ಏರಿಕೆ ಮಾಡಿರಲಿಲ್ಲ. ಲಾಡು ತಯಾರಿಕೆಯ ಕಚ್ಚಾ ವಸ್ತು ಬೆಲೆ ಏರಿಕೆ, ನೌಕರರ ಸಂಬಳ ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದು ದೇವಸ್ಥಾನದ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದರು.

  • ಆನ್‍ಲೈನ್‍ನಲ್ಲಿ ಮಾದಪ್ಪನ ದರ್ಶನ ಆರಂಭ

    ಆನ್‍ಲೈನ್‍ನಲ್ಲಿ ಮಾದಪ್ಪನ ದರ್ಶನ ಆರಂಭ

    – ಆನ್‍ಲೈನ್ ಸೇವೆ ವಿವರ

    ಚಾಮರಾಜನಗರ: ರಾಜ್ಯದ ಪ್ರಮುಖ ದೇಗುಲಗಳಲ್ಲೊಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ದೇಗುಲದಲ್ಲಿ ಆನ್‍ಲೈನ್ ದರ್ಶನ ಸೇವೆ ಆರಂಭವಾಗಿದೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ ಇರುವುದರಿಂದ ಆನ್‍ಲೈನ್ ದರ್ಶನ ಸೇವೆಯನ್ನು ಆರಂಭಿಸಲಾಗಿದೆ. ಪ್ರಾಧಿಕಾರದ ವೆಬ್ ಸೈಟ್ www.mmhillstemple.com ನಲ್ಲಿ ಬೆಳಗ್ಗೆ 4 ರಿಂದ 5.30 ರವರೆಗೆ ಹಾಗೂ ಸಂಜೆ 6.45 ರಿಂದ 8 ರವರೆಗೆ ನಡೆಯುವ ಅಭಿಷೇಕವನ್ನು ಭಕ್ತರು ಆನ್‍ಲೈನ್ ಮೂಲಕ ಕಣ್ತುಂಬಿಕೊಳ್ಳಬಹುದಾಗಿದೆ.

    ಆನ್‍ಲೈನ್ ಮೂಲಕವೇ ಭಕ್ತರು ಸೇವೆಯನ್ನು ಕಾಯ್ದಿರಿಸಿ ತಮ್ಮ ತಮ್ಮ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಬಹುದಾಗಿದೆ. ರಾಜ್ಯದೊಳಗಿನ ಭಕ್ತಾದಿಗಳಿಗೆ ಅಂಚೆ ಮೂಲಕ ಬಿಲ್ವ ಪತ್ರೆ, ವಿಭೂತಿ, ಒಣದ್ರಾಕ್ಷಿಯನ್ನು ಕಳುಹಿಸಿಕೊಡಲಾಗುವುದು ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದ್ದಾರೆ.

    ಸೇವಾ ವಿವರ:
    * ಪಂಚ ಕಳಸ ಸಮೇತ ನವರತ್ನ ಕಿರೀಟ ಧಾರಣೆಗೆ 600 ರೂ.
    * ಏಕದಶವಾರ ರುದ್ರಾಭಿಷೇಕ, ನವರತ್ನ ಕಿರೀಟ ಧಾರಣೆಗೆ 750 ರೂ.
    * ರುದ್ರಾಭಿಷೇಕಕ್ಕೆ 300 ರೂ.
    * ಅಷ್ಟೋತ್ತರ ಬಿಲ್ವಾರ್ಚನೆ 300 ರೂ.
    * ಪಂಚಾಮೃತ ಅಭಿಷೇಕ 300 ರೂ.
    * 1 ತಾಸು ವಿದ್ಯುತ್ ದೀಪಾಲಂಕಾರಕ್ಕೆ 1200 ರೂ.
    * ಅರ್ಧ ತಾಸಿಗೆ 750, ಕಾಲು ತಾಸಿಗೆ 500 ರೂ.
    * ಹುಲಿ ವಾಹನ, ಬೆಳ್ಳಿ ವಾಹನ, ಬಸವ ವಾಹನ ಸೇವೆಗೆ 200 ರೂ. ನಿಗದಿ ಪಡಿಸಲಾಗಿದೆ.

    ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಮಹಾರುದ್ರಾಭಿಷೇಕ, ರುದ್ರತ್ರಿಶತಿ, ನಾಮಕರಣ, ಲಾಡು ಸೇವೆ, ಕಜ್ಜಾಯ ಸೇವೆ, ಬಂಗಾರದ ರಥೋತ್ಸವ, ಸಂಕಷ್ಟಹರ ಚತುರ್ಥಿ, ಉರೊಟ್ಟಿನ ಸೇವೆ, ಅನ್ನ ಬ್ರಹ್ಮೋತ್ಸವ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

  • ಲಾಕ್‍ಡೌನ್ ಎಫೆಕ್ಟ್- ಮಲೆಮಹದೇಶ್ವರನಿಗೆ 15 ಕೋಟಿಗೂ ಹೆಚ್ಚು ನಷ್ಟ

    ಲಾಕ್‍ಡೌನ್ ಎಫೆಕ್ಟ್- ಮಲೆಮಹದೇಶ್ವರನಿಗೆ 15 ಕೋಟಿಗೂ ಹೆಚ್ಚು ನಷ್ಟ

    ಚಾಮರಾಜನಗರ: ಕೊರೊನಾ ಲಾಕ್ ಡೌನ್ ಎಪೆಕ್ಟ್ ನಿಂದ ಮಲೆಮಹದೇಶ್ವರನಿಗೆ 15 ಕೋಟಿಗೂ ಹೆಚ್ಚು ನಷ್ಟವಾಗಿದೆ.

    ಚಾಮರಾಜನಗರ ಜಿಲ್ಲೆಯ ಹನೀರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ದೇವಾಲಯ ಕಳೆದ ಎರಡು ತಿಂಗಳಿಂದ ಮುಚ್ಚಿದೆ. ಹೀಗಾಗಿ ಭಕ್ತರಿಲ್ಲದೆ ಮಹದೇಶ್ವರನ ಆದಾಯದಲ್ಲಿ ಭಾರೀ ನಷ್ಟವಾಗಿದೆ.

    ಹುಂಡಿಯೊಂದರಲ್ಲೇ ಪ್ರತಿ ತಿಂಗಳು ಕೋಟಿ ರೂ.ಗೂ ಹೆಚ್ಚು ಸಂಗ್ರಹವಾಗುತ್ತಿತ್ತು. ಚಿನ್ನದ ತೇರು, ವಿವಿಧ ಸೇವೆ ಲಾಡು ಮಾರಾಟ ಹಾಗೂ ವಸತಿಗೃಹ ಮೊದಲಾದ ಮೂಲಗಳಿಂದ ಬರುತ್ತಿದ್ದ ಆದಾಯದಲ್ಲಿ ಇದೀಗ ಕೋಟಿಗಟ್ಟಲೆ ಕಡಿತವಾಗಿದೆ.

    ಆದಾಯವಿಲ್ಲದಿದ್ದರೂ 200 ಮಂದಿ ಖಾಯಂ ನೌಕರರು ಸೇರಿದಂತೆ 475ಕ್ಕೂ ಹೆಚ್ಚು ನೌಕರರಿಗೆ ವೇತನ ನೀಡಲಾಗುತ್ತಿದೆ. ಯಾರಿಗೂ ಕಡಿತ ಮಾಡದೆ ವೇತನ ಪಾವತಿ ಮಾಡಲಾಗುತ್ತಿದೆ. ವೇತನ, ವಿದ್ಯುತ್ ಬಿಲ್, ಸ್ವಚ್ಚತೆ, ಸೇರಿದಂತೆ ಪ್ರತಿ ತಿಂಗಳು 2 ಕೋಟಿಗೂ ಹೆಚ್ಚು ಖರ್ಚು ವೆಚ್ಚವಾಗುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಮೀಸಲಿಟ್ಟಿದ್ದ ಹಣದಲ್ಲಿ ಪ್ರಾಧಿಕಾರ ಖರ್ಚು ವೆಚ್ಚ ಸರಿದೂಗಿಸುತ್ತಿದೆ.

    ಒಟ್ಟಿನಲ್ಲಿ ಲಾಕ್ ಡೌನ್ ಮುಂದುವರಿದರೆ ಮಾದಪ್ಪ ಮತ್ತಷ್ಟು ನಷ್ಟ ಅನುಭವಿಸಲಿದ್ದಾನೆ. ದೇವಸ್ಥಾನ ಓಪನ್ ಆಗದಿದ್ದರೆ ಮುಂದೆ ನೌಕರರ ವೇತನಕ್ಕೂ ಕತ್ತರಿ ಬೀಳಲಿದೆ.

  • ಮಾದಪ್ಪನ ಬೆಟ್ಟದಲ್ಲಿ ಹಾಲರುವೆ ಉತ್ಸವದ ಸಂಭ್ರಮ- ಇದರ ವಿಶೇಷ, ಹಿನ್ನೆಲೆಯೇನು?

    ಮಾದಪ್ಪನ ಬೆಟ್ಟದಲ್ಲಿ ಹಾಲರುವೆ ಉತ್ಸವದ ಸಂಭ್ರಮ- ಇದರ ವಿಶೇಷ, ಹಿನ್ನೆಲೆಯೇನು?

    ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಂಗವಾಗಿ ಹಾಲರುವೆ ಉತ್ಸವ ನಡೆಯಿತು.

    ಬೇಡಗಂಪಣ ಜನಾಂಗಕ್ಕೆ ಸೇರಿದ 101 ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು 9 ಕಿ.ಮೀ ದೂರದ ಹಾಲರೆ ಹಳ್ಳದಿಂದ ಬಲಿಗಾಲಲ್ಲಿ ನೀರು ಹೊತ್ತು ತಂದು ಮಾದಪ್ಪನಿಗೆ ಅಭಿಷೇಕ ಮಾಡುವುದು ಹಾಲರುವೆ ಉತ್ಸವದ ವಿಶೇಷವಾಗಿದೆ.

    ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ದೀಪಾವಳಿ ಜಾತ್ರೆ ನಡೆಯುತ್ತದೆ. ಮಾದಪ್ಪನಿಗೆ ಎಣ್ಣೆಮಜ್ಜನಸೇವೆ, ಹಾಲರವೆ ಉತ್ಸವ ಮೂರನೇ ದಿನ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ. ಅದರಲ್ಲೂ ಎರಡನೇ ದಿನ ನಡೆಯುವ ಹಾಲರುವೆ ಉತ್ಸವ ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ನಡೆಯುತ್ತದೆ.

    ಮಹದೇಶ್ವರ ದೇವಸ್ಥಾನಕ್ಕೆ 9 ಕಿ.ಮೀ ದೂರದಲ್ಲಿ ಬೆಟ್ಟಗುಡ್ಡಗಳ ನಡುವೆ ಒಂದು ಹಳ್ಳ ಹರಿಯುತ್ತದೆ. ಮಹದೇಶ್ವರರು ಇಲ್ಲಿ ಕಾರಯ್ಯ ಬಿಲ್ಲಯ್ಯ ಎಂಬ ಬೇಟೆಗಾರರು ತಂದುಕೊಟ್ಟ ಕಾಡೆಮ್ಮೆ ಹಾಲನ್ನು ಆಕಸ್ಮಿಕವಾಗಿ ಚೆಲ್ಲಿದರು ಎಂಬ ಐತಿಹ್ಯವಿದೆ. ಈ ಹಳ್ಳದ ನೀರು ಹಾಲಿನಂತೆ ಬೆಳ್ಳಗೆ ಇರುವ ಕಾರಣ ಇದಕ್ಕೆ ಹಾಲಹಳ್ಳ ಎಂಬ ಹೆಸರು ಬಂದಿದೆ.

    ದೀಪಾವಳಿ ಜಾತ್ರೆಯ ಎರಡನೇ ದಿನ ಬೇಡಗಂಪಣ ಜನಾಂಗದ ಹನ್ನೊಂದು ವರ್ಷದೊಳಗಿನ 101 ಹೆಣ್ಣುಮಕ್ಕಳು ಉಪವಾಸವಿದ್ದು ಹಾಲಹಳ್ಳಕ್ಕೆ ಬಂದು ಸ್ನಾನ ಮಾಡಿ ಹಳ್ಳದಲ್ಲಿ ಹರಿಯುವ ನೀರು ಹೊತ್ತು ತರುತ್ತಾರೆ. ಬರಿಗಾಲಲ್ಲಿ 9 ಕಿ.ಮೀ ಬೆಟ್ಟಗುಡ್ಡ ಹತ್ತಿ ಬರುವ ಇವರನ್ನು ಸತ್ತಿಗೆ ಸೂರಿಪಾನಿ, ಮಂಗಳವಾದ್ಯ ಸಮೇತ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ ಎಂದು ಪ್ರಧಾನ ಅರ್ಚಕ ಕೆ. ಮಹದೇಶ್ ಹೇಳುತ್ತಾರೆ.

    ಬೇಡಗಂಪಣ ಬಾಲೆಯರಿಂದ 101 ಕುಂಭದಲ್ಲಿ ತಂದ ನೀರನ್ನು ಮಹದೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ. ಬಳಿಕ ಅಭಿಷೇಕದ ನೀರನ್ನು ಭಕ್ತರಿಗೆ ತೀರ್ಥ ರೂಪದಲ್ಲಿ ನೀಡಲಾಗುತ್ತದೆ. ಈ ತೀರ್ಥ ಸ್ವೀಕರಿಸಲು ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿರುತ್ತಾರೆ.

    ಮಕ್ಕಳಿಗೆ ಕುಡಿಸಲು ಎದೆ ಹಾಲು ಬಾರದ ತಾಯಂದಿರು ಹರಕೆ ಹೊತ್ತು ಹಾಲರುವೆ ಅಭಿಷೇಕದ ತೀರ್ಥ ಸೇವಿಸಿದರೆ ಹಾಲು ಬರುತ್ತೆ ಎಂಬ ನಂಬಿಕೆಯೂ ಇದೆ. ಹೀಗಾಗಿ ಅಂತಹ ತಾಯಂದಿರು ಸಹ ಹಾಲರುವೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಒಟ್ಟಾರೆ ಏಳು ಮಲೆ ಒಡೆಯನಿಗೆ ದೀಪಾವಳಿಯಲ್ಲಿ ಎಲ್ಲ ಅಭಿಷೇಕಗಳಿಗಿಂತ ಹಾಲರುವೆ ಅಭಿಷೇಕ ವಿಶೇಷವಾದುದ್ದಾಗಿದೆ.

  • ಕೋಟಿ ಕೋಟಿ ಆದಾಯ ಬಂದ್ರೂ ಮಾದಪ್ಪನ ಬೆಟ್ಟದಲ್ಲಿ ಅಭಿವೃದ್ಧಿ ಮರೀಚಿಕೆ

    ಕೋಟಿ ಕೋಟಿ ಆದಾಯ ಬಂದ್ರೂ ಮಾದಪ್ಪನ ಬೆಟ್ಟದಲ್ಲಿ ಅಭಿವೃದ್ಧಿ ಮರೀಚಿಕೆ

    ಚಾಮರಾಜನಗರ: ಕೋಟಿ ಕೋಟಿ ಆದಾಯ ಬಂದರೂ ಮಲೆಮಹದೇಶ್ವರ ಬೆಟ್ಟದಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಒಳಚರಂಡಿ ಕಾಮಗಾರಿ ಅಪೂರ್ಣಗೊಂಡಿದ್ದು, ಗಬ್ಬೆದ್ದು ನಾರುವ ರಸ್ತೆಯಲ್ಲೇ ಮಾದಪ್ಪನ ಉತ್ಸವ ನಡೆಯುತ್ತದೆ. ಕೆಸರು ತುಂಬಿದ ಕಲ್ಲುಮಣ್ಣುಗಳ ದಾರಿಯಲ್ಲೇ ಏಳುಮಲೆ ಒಡೆಯನ ಮೆರವಣಿಗೆ ನಡೆಯುತ್ತದೆ.

    ಚಾಮರಾಜನಗರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿ ತಿಂಗಳು ಕೋಟಿ ಕೋಟಿ ಆದಾಯ ಹರಿದುಬರುತ್ತಿದೆ. ಭಕ್ತರು ನೀಡುವ ಕಾಣಿಕೆ, ವಸತಿಗೃಹಗಳ ಬಾಡಿಗೆ, ಮುಡಿಸೇವೆ, ಚಿನ್ನದ ರಥೋತ್ಸವದ ಸೇವೆ, ಲಾಡು ಮಾರಾಟ ಹೀಗೆ ನಾನಾ ಮೂಲಗಳಿಂದ ವಾರ್ಷಿಕ 25 ಕೋಟಿ ರೂ. ಹೆಚ್ಚು ಆದಾಯ ಇದೆ. ರಾಜ್ಯದ ಅತಿ ಹೆಚ್ಚು ಆದಾಯ ಇರುವ ಮುಜರಾಯಿ ದೇವಸ್ಥಾನಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಇರುವ ಮಾದಪ್ಪನ ಬೆಟ್ಟದಲ್ಲಿ ಸ್ಥಳೀಯವಾಗಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ.

    ಬೆಟ್ಟದಲ್ಲಿ ವಾಸ ಮಾಡುವ ಜನರು ಪ್ರತಿ ನಿತ್ಯ ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಕಳೆದ ಮೂರು ವರ್ಷಗಳಿಂದ ಒಳಚರಂಡಿ ಕಾಮಗಾರಿಗಳು ಸ್ಥಗಿತಗೊಂಡಿದೆ. ಇದರಿಂದ ಮಳೆ ಬಂದರೆ ಮೋರಿಯಲ್ಲಿ ಹರಿಯಬೇಕಾದ ನೀರು ರಸ್ತೆಗಳಲ್ಲಿ ಹರಿಯುತ್ತಿದೆ. ಮಾದಪ್ಪನ ಬೆಟ್ಟದ ತಂಬಡಿಗೇರಿ ರಸ್ತೆಯಂತೂ ಸಂಪೂರ್ಣವಾಗಿ ಹಾಳಾಗಿದೆ.

    ಹಳ್ಳ-ಕೊಳ್ಳ, ಕೆಸರು ತುಂಬಿದ ರಸ್ತೆಯಲ್ಲಿ ಮಾದಪ್ಪನ ಮೆರವಣಿಗೆ ನಡೆಯುತ್ತದೆ. ಗಬ್ಬೆದ್ದು ನಾರುವ ದಾರಿಯಲ್ಲೇ ಹಾಲರೆಯೋ ಉತ್ಸವ ಜರುಗುತ್ತದೆ. ಸ್ವಲ್ಪ ಯಾಮಾರಿದರೂ ಮಾದಪ್ಪನ ಉತ್ಸವ ಮೂರ್ತಿ ರಸ್ತೆಯಲ್ಲಿ ಬಿಳುವುದಂತೂ ಖಚಿತ. ಒಳಚರಂಡಿ ಕಾಮಗಾರಿ ವಿಳಂಬದಿಂದ ರಸ್ತೆಗಳು ಹದಗೆಟ್ಟು ಹೋಗಿವೆ. ಆದರೆ ಕೋಟಿ ಕೋಟಿ ಆದಾಯ ಬಂದರೂ ಆ ಹಣವನ್ನು ರಸ್ತೆ ಕಾಮಗಾರಿಗೆ ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳುತ್ತಾರೆ. ಅಲ್ಲದೆ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರದಿರುವುದಾಗಿ ಅವರು ಹೇಳುತ್ತಾರೆ.

    ಭಾನುವಾರದಿಂದ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಆರಂಭವಾಗುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ದೀಪಾವಳಿ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಬರುತ್ತಾರೆ. ಆದರೆ ರಸ್ತೆಗಳು ಹದಗೆಟ್ಟು, ಸ್ವಚ್ಛತೆ ಇಲ್ಲದ ಕಾರಣ ಸ್ಥಳೀಯರು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.