Tag: Malemahadeshwara Hill

  • ಮಲೆಮಹದೇಶ್ವರ ಬೆಟ್ಟ 5 ವರ್ಷಗಳಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಲಿದೆ: ಬೊಮ್ಮಾಯಿ

    ಮಲೆಮಹದೇಶ್ವರ ಬೆಟ್ಟ 5 ವರ್ಷಗಳಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಲಿದೆ: ಬೊಮ್ಮಾಯಿ

    ಬೆಂಗಳೂರು: ಐದು ವರ್ಷದೊಳಗೆ ಮಲೆಮಹದೇಶ್ವರ ದೇವಸ್ಥಾನ ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ವಿಧಾನಸೌಧ ಸಭಾಂಗಣದಲ್ಲಿ ಇಂದು ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕದ ಧಾರ್ಮಿಕ ಕ್ಷೇತ್ರವಾದ ಮಲೆಮಹದೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರೇ ಹೆಚ್ಚು. ಬೆಂಗಳೂರು, ಮೈಸೂರು ಭಾಗದವರು ಮಾತ್ರವಲ್ಲ ರಾಜ್ಯದ ನಾನಾ ಭಾಗಗಳಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಇದರ ಜೊತೆಗೆ ದೇವಸ್ಥಾನದ ಅಭಿವೃದ್ಧಿ ಕೂಡ ವೇಗ ಪಡೆದುಕೊಂಡಿದೆ. ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸಮಯ ನಿಗದಿ ಮಾಡಿಕೊಂಡು ಕ್ಷೇತ್ರಕ್ಕೆ ಆಗಮಿಸಲಾಗುವುದು ಎಂದು ಭರವಸೆ ನೀಡಿದರು.

    ಪ್ರಾಧಿಕಾರದ ಅಭಿವೃದ್ಧಿ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಸಹಕಾರ ಸಚಿವರು ಹಾಗೂ ಮೈಸೂರು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಿತ್ಯ ಸಾವಿರಾರು ಭಕ್ತರು ಆಗಮಿಸುವ ಮಲೆಮಹದೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಚಿವರು, ದೇವಸ್ಥಾನದಲ್ಲಿ ಎಲ್ಲಾ ಸೌಲಭ್ಯಗಳ ಜೊತೆಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ:  ರೋಡಿಗೆ ಬಂದ ನಾಗರಹಾವು- ಅರ್ಧ ಗಂಟೆ ಸಂಚಾರ ಬಂದ್ 

    ದೇವಸ್ಥಾನದ ಹಿಂಭಾಗದ ದೀಪದಗಿರಿ ಒಡ್ಡಿನಲ್ಲಿ ಮಹದೇಶ್ವರ ಸ್ವಾಮಿ ಪ್ರತಿಮೆ ನಿರ್ಮಾಣದ ಬಗ್ಗೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ನಂತರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳನ್ನು ಅವರು ಪರಿಶೀಲನೆ ನಡೆಸಿದರು.

    ಇದೇ ವೇಳೆ ಪ್ರಾಧಿಕಾರದ ಕ್ರಿಯಾ ಯೋಜನೆ ಹಾಗೂ ಮುಂದುವರಿದ ಕಾಮಗಾರಿಗಳಿಗೆ 141.20 ಕೋಟಿ ರೂ. ಗಳ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಕಾರ್ ಪಾರ್ಕಿಂಗ್ ಗೆ 40 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲು, ಹೊಸದಾಗಿ ಸ್ನಾನಘಟ್ಟ ನಿರ್ಮಾಣಕ್ಕೆ 4.95 ಕೋಟಿ ರೂ.ಗೆ ಅನುಮೋದನೆ ಸೇರಿದಂತೆ 49 ವಿವಿಧ ವಿಷಯಗಳಿಗೆ ಅನುಮೋದನೆ ನೀಡಲಾಯಿತು. ಇದನ್ನೂ ಓದಿ: ಮೈಸೂರು ಅರಮನೆಗೆ ಸೇರಿದ 4 ಆನೆಗಳು ಗುಜರಾತಿಗೆ ಶಿಫ್ಟ್

    ಕ್ಷೇತ್ರದಲ್ಲಿ ಮಹದೇಶ್ವರ ಸ್ವಾಮಿ ಪ್ರತಿಮೆ ನಿರ್ಮಿಸಲು ಪ್ರಾಧಿಕಾರಕ್ಕೆ 450 ಕೆಜಿ ಬೆಳ್ಳಿಯ ಅವಶ್ಯಕತೆಯಿತ್ತು. ಆದರೆ ಭಕ್ತರು 500 ಕೆಜಿಯಷ್ಟು ಬೆಳ್ಳಿ ನೀಡಿದ್ದಾರೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಸಭೆಯ ಗಮನಕ್ಕೆ ತಂದರು.

    ಸಭೆಯಲ್ಲಿ ಮುಜರಾಯಿ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ, ಶಾಸಕರಾದ ನಿರಂಜನ್ ಕುಮಾರ್, ಎನ್.ಮಹೇಶ್, ಪುಟ್ಟರಂಗಶೆಟ್ಟಿ, ನರೇಂದ್ರ, ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ರಾಮಚಂದ್ರ, ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್, ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.

  • ಕೊರೊನಾ 3ನೇ ಅಲೆ ಭೀತಿ – ಆರತಿ ಉಕ್ಕಡ, ಮಹದೇಶ್ವರ ಬೆಟ್ಟಕ್ಕೆ ಭಕ್ತರ ನಿಷೇಧ

    ಕೊರೊನಾ 3ನೇ ಅಲೆ ಭೀತಿ – ಆರತಿ ಉಕ್ಕಡ, ಮಹದೇಶ್ವರ ಬೆಟ್ಟಕ್ಕೆ ಭಕ್ತರ ನಿಷೇಧ

    ಮಂಡ್ಯ/ಚಾಮರಾಜನಗರ: ಇಂದು ಆಷಾಡದಲ್ಲಿ ಬರುವ ವಿಶೇಷ ಭೀಮನ ಅಮಾವಾಸ್ಯೆಯಾಗಿರುವುದರಿಂದ ಹಲವಾರು ದೇವಾಲಗಳಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಭೀತಿ ಉಂಟಾಗಿದ್ದು, ದೇವಾಲಯಗಳಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಧಾವಿಸುತ್ತಿರುವ ಕಾರಣ ದೇವಸ್ಥಾನಕ್ಕೆ ಭಕ್ತರನ್ನು ನಿಷೇಧಿಸಲಾಗಿದೆ.

    ಪ್ರತಿ ಅಮಾವಾಸ್ಯೆಯಂದು ಒಂದೇ ದಿನ ಒಂದು ಕೋಟಿಗೂ ಅಧಿಕ ಆದಾಯ ಬರುತ್ತಿದ್ದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದ ಮಾರಮ್ಮ ಅಹಲ್ಯಾದೇವಿಯ ದೇವಸ್ಥಾನಕ್ಕೆ ಅಮಾವಾಸ್ಯೆ ದಿನದಂದು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಗೆ ನಿರ್ಬಂಧ ಏರಲಾಗಿದೆ.

    ಇಂದು ಭೀಮನ ಅಮಾವಾಸ್ಯೆ ಹಿನ್ನೆಲೆ ಲಕ್ಷಾಂತರ ಮಂದಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಬಲಿ ನೀಡಿ, ತಡೆ ಹೊಡೆಸಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದರು. ಅಲ್ಲದೇ ಬಾಡೂಟವನ್ನು ಸಹ ಮಾಡುತ್ತಿದ್ದರು. ಇದೀಗ ಭಕ್ತರಿಗೆ ನಿಷೇಧ ಇರುವ ಹಿನ್ನೆಲೆ ದೇವಸ್ಥಾನ ಬಿಕೋ ಎನ್ನುವ ಜೊತೆಗೆ ಒಂದು ಕೋಟಿಗೂ ಅಧಿಕ ಆದಾಯಕ್ಕೂ ಕತ್ತರಿ ಬಿದ್ದಿದೆ. ಆರತಿ ಉಕ್ಕಡಕ್ಕೆ ಪ್ರತಿ ಅಮಾವಾಸ್ಯೆ ದಿನಗಳಂದು ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಬೆಂಗಳೂರು, ರಾಮನಗರ, ಕೊಡಗು ಸೇರಿದಂತೆ ಇತರೆ ಜಿಲ್ಲೆಗಳಿಂದ ಲಕ್ಷಾಂತರ ಜನರು ಬರುತ್ತಾರೆ. ಇಂದು ಸಹ ಭೀಮನ ಅಮಾವಾಸ್ಯೆ ಹಿನ್ನೆಲೆ ಲಕ್ಷಾಂತರ ಜನರು ಬರುವ ಸಾಧ್ಯತೆ ಇತ್ತು. ಆದರೆ ಭಕ್ತರಿಗೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣ ಬಿಕೋ ಎನ್ನುತ್ತಿದೆ. ವಿಷಯ ತಿಳಿಯದ ಭಕ್ತರು ದೇವಸ್ಥಾನದ ಬಳಿಗೆ ಬಂದು ವಾಪಸ್ಸು ತೆರಳುತ್ತಿದ್ದಾರೆ.

    ಮತ್ತೊಂದೆಡೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆಮಹಾದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ದಿನದಂದು ಭಕ್ತದಿಗಳೂ ತುಂಬಿರುತ್ತಿದ್ದರು. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಭಕ್ತರಿಲ್ಲದೇ ಮುಂಜಾನೆ 3 ಗಂಟೆಯಿಂದ 6.30ರವರೆಗೆ ನಡೆದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದೆ. ಅಮಾವಾಸ್ಯೆ ದಿನದಂದು ಮಾದಪ್ಪನ ದರ್ಶನ ಪಡೆದ್ರೆ ಇಷ್ಟಾರ್ಥ ಈಡೇರಿಕೆಯಾಗುತ್ತೆ ಎಂದು ಲಕ್ಷಾಂತರು ಭಕ್ತರು ದರ್ಶನ ಪಡೆಯುತ್ತಿದ್ದರು. ಪ್ರಥಮ ಪೂಜೆ, ಸಂಕಲ್ಪ, ಪಂಚಕಳಸ ಪೂಜೆ, ಪಂಚಾಮೃತ ಅಭಿಷೇಕಾ, ಕ್ಷೀರ ಅಭಿಷೇಕ, ಬಿಲ್ವಾರ್ಚನೆ, ಅಲಂಕಾರ, ಮಹಮಂಗಳಾರತಿ ಪೂಜೆಗಳಿಗೆ ಭಕ್ತರು ಜಾತ್ರೆಯ ರೀತಿ ಜಮಾಯಿಸುತ್ತಿದ್ದರು. ಆದರೆ ಕೊರೊನಾ ಆತಂಕದಿಂದ ಬೆಟ್ಟಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ.

    ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇದ್ದರೂ ಚಾಮರಾಜನಗರದ ಪ್ರಸಿದ್ಧ ಮುದುಕಮಾರಮ್ಮ ದೇವಸ್ಥಾನ ಮಾತ್ರ ಓಪನ್ ಆಗಿತ್ತು. ನಗರದ ಮುದುಕ ಮಾರಮ್ಮ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ಯಾವುದೇ ಅಡೆತಡೆ ಇರಲಿಲ್ಲ. ಬೆಳಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತರು ಯಾವುದೇ ಅಂತರ ಪಾಲಿಸದೆ ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿ ಹೇಳುವವರು ಇಲ್ಲ, ಕೇಳುವವರು ಇಲ್ಲದಂತಾಗಿದ್ದು, ಕೊರೊನಾ ರೂಲ್ಸ್ ಬ್ರೇಕ್ ಮಾಡಲಾಗಿದೆ. ಮೊನ್ನೆ ಆಷಾಡ ಶುಕ್ರವಾರ ನಿಷೇಧವಿದ್ದರೂ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಂದಲೇ ಉಲ್ಲಂಘನೆಯಾಗಿತ್ತು. ಇದೀಗ ಸಾರ್ವಜನಿಕರಿಂದಲೂ ಕೊರೊನಾ ರೂಲ್ಸ್ ಉಲ್ಲಂಘನೆಯಾಗಿದೆ. ಇದನ್ನೂ ಓದಿ:ಇಂದಿನಿಂದ ಆಗಸ್ಟ್ 15ರವರೆಗೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಟ್

  • ಮಹದೇಶ್ವರನ ಹುಂಡಿಯಲ್ಲಿ 2 ಕೋಟಿ 21 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ

    ಮಹದೇಶ್ವರನ ಹುಂಡಿಯಲ್ಲಿ 2 ಕೋಟಿ 21 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ

    ಚಾಮರಾಜನಗರ: ಮಹಾಮಾರಿ ಕೊರೊನಾ ವೈರಸ್ ನಡುವೆಯೂ ಮಾದಪ್ಪನ ಸನ್ನಿಧಿಗೆ ಕೋಟಿ ಕೋಟಿ ಹಣ ಹರಿದುಬಂದಿದೆ.

    ಹೌದು. ಕೊರೊನಾ ಸಾಂಕ್ರಮಿಕ ರೋಗದಿಂದ ದೇಶದ ಆರ್ಥಿಕತೆ ಕುಸಿದಿದೆ. ಜನ ಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದೆ. ವ್ಯಾಪಾರ ವಾಹಿವಾಟುಗಳ ಹೊಡೆತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಜೊತೆಗೆ ಕೊರೊನಾ ರಾಜ್ಯದ ದೇವಾಲಯಗಳ ಆದಾಯ ಗಳಿಕೆ ಮೇಲೂ ಪ್ರಭಾವ ಬೀರಿದೆ. ಆದರೆ ಕೊರೊನಾ ಸಂಕಷ್ಟದ ನಡುವೆ ಕೂಡ ಮಲೆಮಹದೇಶ್ವರ ಬೆಟ್ಟದ ದೇವಾಲಯದ ಹುಂಡಿಗೆ ಭಕ್ತರಿಂದ ಕೋಟಿ ಕೋಟಿ ಹಣ ಸಂಗ್ರಹವಾಗಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈ ಮಹದೇಶ್ವರ ಬೆಟ್ಟ ದೇವಾಲಯದಲ್ಲಿ ತಡ ರಾತ್ರಿವರೆಗೂ ನಡೆದ ಹುಂಡಿ ಏಣಿಕೆಯಲ್ಲಿ 2 ಕೋಟಿ 21 ಲಕ್ಷ ರೂಪಾಯಿ ನಗದು ರೂಪದಲ್ಲಿ ಸಂಗ್ರಹವಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 2, 21,59, 820 ರೂ. ನಗದು ಜೊತೆಗೆ 80 ಗ್ರಾಂ ಚಿನ್ನ, 2 ಕೆ.ಜಿ.ಬೆಳ್ಳಿ ಮತ್ತು ನಾಣ್ಯದ ರೂಪದಲ್ಲಿ 11.23 ಲಕ್ಷ ರೂಪಾಯಿ ಭಕ್ತರಿಂದ ಸಂಗ್ರಹವಾಗಿದೆ. ಕೋವಿಡ್ ಪರಿಣಾಮದ ಆರ್ಥಿಕ ಕಷ್ಟದ ನಡುವೆಯು ಮಲೆಮಹದೇಶ್ವರನಿಗೆ ಭಕ್ತರು ಉದಾರವಾಗಿ ಕಾಣಿಕೆ ಅರ್ಪಿಸಿದ್ದಾರೆ.

  • ಇಂದಿನಿಂದ ಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ, ಮುಡಿಸೇವೆ ಪ್ರಾರಂಭ

    ಇಂದಿನಿಂದ ಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ, ಮುಡಿಸೇವೆ ಪ್ರಾರಂಭ

    ಚಾಮರಾಜನಗರ: ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ದೇವಾಲಯದ ಎಲ್ಲ ಸೇವೆಗಳನ್ನು ಪುನರಾರಂಭಿಸಲಾಗಿದೆ.

    ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ದಾಸೋಹ ಮತ್ತು ಜಾತ್ರೆಗಳನ್ನು ಹೊರತುಪಡಿಸಿ, ನಡೆಯುತ್ತಿದ್ದ ದೈನಂದಿನ ಸಾಂಪ್ರದಾಯಿಕ ಸೇವೆಗಳನ್ನು ಪುನರಾರಂಭಿಸಲು ಹಾಗೂ ಪೂಜಾ ಕೈಂಕರ್ಯಗಳನ್ನು ನಡೆಸಲು ನಿಗಧಿಪಡಿಸಿದ್ದ ಕಾಲಮಿತಿ, ಭಕ್ತಾದಿಗಳ ವಾಸ್ತವ್ಯ ಮತ್ತು ಮುಡಿಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಇಂದಿನಿಂದ ಜಾರಿಗೆ ಬರುವಂತೆ ತೆರವುಗೊಳಿಸಿ ಜಿಲ್ಲಾಧಿಕಾರಿ ಡಾ. ಎಂಆರ್.ರವಿ ಆದೇಶ ಹೊರಡಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಬೆಳಿಗ್ಗೆ 4ರ ಅಭಿಷೇಕ, ಸಂಜೆ 7ರ ಅಭಿಷೇಕ, ಎಲ್ಲ ಪೂಜಾ ಕೈಂಕರ್ಯಗಳು, ಉತ್ಸವಾದಿ ಸೇವೆಗಳು ಮಹದೇಶ್ವರನ ಭಕ್ತರಿಗೆ ಮುಕ್ತವಾಗಿವೆ. ಈ ಹಿಂದೆ ದೇವರ ದರ್ಶನ ವ್ಯವಸ್ಥೆ ಮಾತ್ರ ಇತ್ತು. ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಭಕ್ತರು ಪಾಲ್ಗೊಳ್ಳುವಂತಿರಲಿಲ್ಲ. ಇದೀಗ ನಿರ್ಬಂಧವನ್ನು ತೆಗೆದುಹಾಕಲಾಗಿದ್ದು ಭಕ್ತರು ಎಂದಿನಂತೆ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಮಾಡಿಸಬಹುದಾಗಿದೆ.

    12 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಹಾಗೂ 65 ವರ್ಷಕ್ಕಿಂತ ಹೆಚ್ಚು ಇರುವ ವ್ಯಕ್ತಿಗಳಿಗೆ ದೇವಾಲಯದ ಒಳಗೆ ಪ್ರವೇಶ ಇರುವುದಿಲ್ಲ. ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಇದ್ದ ದರ್ಶನ ಹಾಗೂ ಎಲ್ಲ ಸೇವೆಗಳನ್ನು ಬೆಳಿಗ್ಗೆ 4 ರಿಂದ ರಾತ್ರಿ 10ರವರೆಗೆ ವಿಸ್ತರಿಸಲಾಗಿದೆ. ದಾಸೋಹದಲ್ಲಿ ಹಾಲಿ ಇರುವ ತಿಂಡಿ ಪ್ರಸಾದ ಸೇವೆ ಮಾತ್ರ ಇರಲಿದೆ. ಊಟದ ವ್ಯವಸ್ಥೆ ಇರುವುದಿಲ್ಲ ಭಕ್ತರು ಜಾತಕಪಕ್ಷಿಯಂತೆ ಕಾಯುತ್ತಿದ್ದ ಮುಡಿಸೇವೆಯನ್ನು ಮತ್ತೆ ಆರಂಭಿಸಲಾಗಿದೆ.

    ಅಲ್ಲದೆ ರಾತ್ರಿ ದೇವಾಲಯದ ವಸತಿಗೃಹಗಳಲ್ಲಿ ತಂಗುವ ವ್ಯವಸ್ಥೆ ಪ್ರಾರಂಭವಾಗಿದೆ. ಕಾಟೇಜು, ಡಾರ್ಮಿಟರಿಗಳನ್ನೂ ಸಹಾ ನೀಡಲಾಗುವುದು. ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಲಾಗಿದೆ.

  • ಸಾರ್ವಜನಿಕರಿಗೆ ನಿರ್ಬಂಧ, ಸಚಿವರಿಗೆ ರೆಡ್ ಕಾರ್ಪೆಟ್ – ಜಿಲ್ಲಾಡಳಿತದ ನಡೆಗೆ ಆಕ್ರೋಶ

    ಸಾರ್ವಜನಿಕರಿಗೆ ನಿರ್ಬಂಧ, ಸಚಿವರಿಗೆ ರೆಡ್ ಕಾರ್ಪೆಟ್ – ಜಿಲ್ಲಾಡಳಿತದ ನಡೆಗೆ ಆಕ್ರೋಶ

    ಚಾಮರಾಜನಗರ: ಅಮಾವಾಸ್ಯೆ ಪೂಜೆಗೆ ಹೆಚ್ಚಿನ ಜನ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ನಿನ್ನೆ ಮತ್ತು ಇಂದು ಮಲೆ ಮಹದೇಶ್ವರಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದೆ.

    ಆದರೆ ಸರ್ಕಾರಿ ಕೆಲಸಕ್ಕೆ ತೆರಳುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹೊರತು ಪಡಿಸಿ ಎಂದು ಆದೇಶದಲ್ಲಿ ತಿಳಿಸಿದೆ. ಇದೇ ವೇಳೆ ನಿನ್ನೆ ಕೃಷಿ ಸಚಿವ ಬಿ.ಸಿ ಪಾಟೀಲ್ ಮಹದೇಶ್ವರಬೆಟ್ಟಕ್ಜೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಆವರಣದಲ್ಲಿ ಸಚಿವರು ಕುಟುಂಬ ಸಮೇತ ಹುಲಿವಾಹನ ಸೇವೆ ಸಲ್ಲಿಸಿದರು. ಸಚಿವರಿಗೋಸ್ಕರ ಹುಲಿ ವಾಹನ ಉತ್ಸವಕ್ಕೂ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಅವಕಾಶ ಮಾಡಿಕೊಟ್ಟಿತ್ತು.

    ಕೃಷಿ ಸಚಿವರಿಗೆ ಮಹದೇಶ್ವರ ಬೆಟ್ಟದಲ್ಲಿ ಯಾವ ಸರ್ಕಾರಿ ಕೆಲಸವು ಇರಲಿಲ್ಲ. ಆದರೆ ಸರ್ಕಾರಿ ಕೆಲಸ ನೆಪದಲ್ಲಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಮಾವಾಸ್ಯೆ ಪೂಜೆಗಾಗಿಯೇ ಸಚಿವ ಬಿ.ಸಿ. ಪಾಟೀಲ್ ಬಂದು ನಿನ್ನೆ ರಾತ್ರಿ ಬೆಟ್ಟದಲ್ಲೇ ವಾಸ್ತವ್ಯ ಹೂಡಿದ್ದರು. ಸಚಿವರೊಡನೆ ಹಲವು ಹಿಂಬಾಲಕರು ಬಂದಿದ್ದರು. ಹಾಗಾದರೆ ಸಚಿವರಿಗೊಂದು ಸಾರ್ವಜನಿಕರಿಗೊಂದು ಕಾನೂನೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.

    ಅಮಾವಾಸ್ಯೆ ಪೂಜೆಗಾಗಿ ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕು ತೆರಳಲಿರುವ ಸಚಿವರು ನಂತರ ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಬ ದೇವಸ್ಥಾನಕ್ಕೂ ಹೋಗಲಿದ್ದಾರೆ.

  • ಮಹದೇಶ್ವರ ಬೆಟ್ಟದ ಅಭಿವೃದ್ದಿ ಪ್ರಾಧಿಕಾರದಿಂದ ಸಿಎಂ ಪರಿಹಾರ ನಿಧಿಗೆ 60 ಲಕ್ಷ ಸಹಾಯ

    ಮಹದೇಶ್ವರ ಬೆಟ್ಟದ ಅಭಿವೃದ್ದಿ ಪ್ರಾಧಿಕಾರದಿಂದ ಸಿಎಂ ಪರಿಹಾರ ನಿಧಿಗೆ 60 ಲಕ್ಷ ಸಹಾಯ

    ಚಾಮರಾಜನಗರ: ಮುಖ್ಯಮಂತ್ರಿ ಕೋವಿಡ್-19 ಪರಿಹಾರ ನಿಧಿಗೆ ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದಿಂದ 60 ಲಕ್ಷ ರೂ.ಹಣ ನೀಡಲಾಗಿದೆ.

    ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಸಿಎಂ ಯಡಿಯೂರಪ್ಪಗೆ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಇಂದು ಚೆಕ್ ಹಸ್ತಾಂತರಿಸಿದರು. ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದಿಂದ 50 ಲಕ್ಷ ರೂ. ಹಾಗೂ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿಯ 3 ದಿನದ ವೇತನ ಹಣ 10 ಲಕ್ಷ ರೂ.ಸೇರಿ ಒಟ್ಟು 60 ಲಕ್ಷ ರೂ.ಗಳನ್ನು ಸಿಎಂ ಪರಿಹಾರ ನಿಧಿಗೆ ನೀಡಲಾಗಿದೆ.

    ನೌಕಕರು ಸ್ವಯಂ ಪ್ರೇರಣೆಯಿಂದ 3 ದಿನದ ವೇತನವನ್ನು ಬಿಟ್ಟುಕೊಟ್ಟಿದ್ದಾರೆ. ಜೊತೆಗೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಿವೃತ್ತ ಅಧಿಕಾರಿಗಳು, ನೌಕರರು ತಮ್ಮ ಒಂದು ದಿನದ ಪಿಂಚಣಿ ಹಣ ಹಾಗೂ ನೌಕರರು, ಅಧಿಕಾರಿಗಳ ಒಂದು ದಿನದ ವೇತನವನ್ನು ಕೋವಿಡ್-19 ನಿಧಿಗೆ ನೀಡಿದ್ದಾರೆ. ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ 60 ಲಕ್ಷ ರೂ. ಖಾದಿ ಮತ್ತು ಗ್ರಾಮೋದ್ಯೋಗದ 4.08 ಲಕ್ಷ ರೂ.ಗಳ ಚೆಕ್‍ನ್ನು ಸಿಎಂ ಯಡಿಯೂರಪ್ಪನವರಿಗೆ ನೀಡಿರುವುದಾಗಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

  • ಸಾರ್ವಕಾಲಿಕ ದಾಖಲೆ – ಮಾದಪ್ಪನ ಹುಂಡಿಗೆ ಹರಿದು ಬಂತು ಎರಡೂವರೆ ಕೋಟಿ ರೂ. ಕಾಣಿಕೆ

    ಸಾರ್ವಕಾಲಿಕ ದಾಖಲೆ – ಮಾದಪ್ಪನ ಹುಂಡಿಗೆ ಹರಿದು ಬಂತು ಎರಡೂವರೆ ಕೋಟಿ ರೂ. ಕಾಣಿಕೆ

    ಚಾಮರಾಜನಗರ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಮಾದಪ್ಪನ ಆದಾಯವು ಅದೇ ರೀತಿ ಏರಿಕೆಯಾಗತೊಡಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಮಹದೇಶ್ವರ ದೇವಸ್ಥಾನದ ಹುಂಡಿಯಲ್ಲಿ ಎರಡೂವರೆ ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹವಾಗಿದ್ದು, ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ.

    ನಾಡಿನ ಪ್ರಸಿದ್ಧ ದೇವಾಯಗಳ ಪೈಕಿ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟವೂ ಒಂದು. ರಾಜ್ಯದಲ್ಲೇ ಅತಿಹೆಚ್ಚು ಆದಾಯ ಇರುವ ಎರಡನೇ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಲೆಮಹದೇಶ್ವರ ಬೆಟ್ಟಕ್ಕೆ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಹಬ್ಬ ಹರಿದಿನ ಹಾಗೂ ಜಾತ್ರಾ ಮಹೋತ್ಸವದ ಸಂದರ್ಭಗಳಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ.

    ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊರುವುದು ಸಾಮಾನ್ಯ. ಬೇಡಿದ ವರವ ಕೊಡುವ ಮಾದಪ್ಪನಿಗೆ ಭಕ್ತರು ಹಣ ಹಾಗೂ ಆಭರಣಗಳ ರೂಪದಲ್ಲಿ ಹರಕೆ ಸಲ್ಲಿಸುವುದು ವಾಡಿಕೆ. ಹೀಗೆ ಭಕ್ತರು ಮಾದಪ್ಪನ ಹುಂಡಿಗೆ ಹಾಕುವ ಹಣ ಪ್ರತಿ ತಿಂಗಳು ಕೋಟಿ ರೂಪಾಯಿ ದಾಟುತ್ತಿದೆ. ಇದೇ ರೀತಿ ಮಲೆಮಹದೇಶ್ವರನ ಹುಂಡಿಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 2.52 ಕೋಟಿ ರೂ ಸಂಗ್ರಹವಾಗಿದೆ. ಅಲ್ಲದೆ 50 ಗ್ರಾಂ. ಚಿನ್ನ ಮತ್ತು 2.44 ಕೆ.ಜಿ. ಬೆಳ್ಳಿಯನ್ನು ಭಕ್ತರು ಮಾದಪ್ಪನಿಗೆ ಅರ್ಪಿಸಿದ್ದಾರೆ. ಇದರಲ್ಲಿ 15.21 ಲಕ್ಷ ರೂ.ಗಳಷ್ಟು ನಾಣ್ಯಗಳೇ ಸಂಗ್ರಹವಾಗಿವೆ. ಈ ಮೂಲಕ ಹಣ ಸಂಗ್ರಹಣೆಯಲ್ಲಿ ದಾಖಲೆ ನಿರ್ಮಾಣವಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಹಿಂದೆಂದೂ ಇಷ್ಟೊಂದು ಹಣ ಹುಂಡಿಯಲ್ಲಿ ಸಂಗ್ರಹವಾಗಿರಲಿಲ್ಲ. ಇದೊಂದು ಸಾರ್ವಕಾಲಿಕ ದಾಖಲೆ ಎಂದು ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದ್ದಾರೆ.

    ಕೇವಲ ಹುಂಡಿ ಅಷ್ಟೇ ಅಲ್ಲದೆ ಶಿವರಾತ್ರಿ ಜಾತ್ರಾ ಸಂದರ್ಭದಲ್ಲಿ ಲಾಡು ಮಾರಾಟದಿಂದ 1 ಕೋಟಿ 50 ಸಾವಿರ ರೂ., ಉತ್ಸವಗಳಿಂದ 99.50 ಲಕ್ಷ ರೂ., ವಸತಿ ಗೃಹಗಳ ಬಾಡಿಗೆ 86.57 ಲಕ್ಷ ರೂ., ವಿಶೇಷ ಪ್ರವೇಶ ಶುಲ್ಕ 98 ಲಕ್ಷ ರೂ., ವಿವಿಧ ಸೇವೆಗಳಿಂದ 8.39 ಲಕ್ಷ ರೂ. ಸೇರಿದಂತೆ ವಿವಿಧ ಮೂಲಗಳಿಂದ 3.54 ಕೋಟಿ ರೂ.ಗೂ ಹೆಚ್ಚು ಆದಾಯ ಮಾದಪ್ಪನ ಸನ್ನಿಧಿಗೆ ಹರಿದುಬಂದಿದೆ. ಅಲ್ಲದೆ ಶಿವರಾತ್ರಿ ಜಾತ್ರಾ ಸಂದರ್ಭ ಆರು ದಿನಗಳಲ್ಲಿ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧೆಡೆಯಿಂದ 10 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದು, ಇದೂ ಸಹ ದಾಖಲೆ ಆಗಿದೆ.

  • ದೀಪಾಲಂಕಾರಗಳಿಂದ ಝಗಮಗಿಸುತ್ತಿದೆ ಮಾದಪ್ಪನ ಸನ್ನಿಧಿ- ಇಂದಿನಿಂದ ಜಾತ್ರಾ ಮಹೋತ್ಸವ ಆರಂಭ

    ದೀಪಾಲಂಕಾರಗಳಿಂದ ಝಗಮಗಿಸುತ್ತಿದೆ ಮಾದಪ್ಪನ ಸನ್ನಿಧಿ- ಇಂದಿನಿಂದ ಜಾತ್ರಾ ಮಹೋತ್ಸವ ಆರಂಭ

    ಚಾಮರಾಜನಗರ: ಬೆಳಕಿನ ಹಬ್ಬದ ಸಂಭ್ರಮಕ್ಕೆ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟ ತಯಾರಾಗಿದೆ. ದೀಪಾವಳಿ ಹಿನ್ನೆಲೆ ಬೆಟ್ಟದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಇಂದಿನಿಂದ ಬೆಟ್ಟದಲ್ಲಿ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ.

    ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಈಗಾಗಲೇ ದೀಪಾಲಂಕಾರದಿಂದ ಝಗಮಗಿಸುತ್ತಿದೆ. ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಹಳೇ ಮೈಸೂರು, ಬೆಂಗಳೂರು, ತಮಿಳುನಾಡು ಸೇರಿದಂತೆ ಇನ್ನಿತರ ಭಾಗಗಳಿಂದ ಲಕ್ಷಾಂತರ ಭಕ್ತರು ಮಾದಪ್ಪನ ದರ್ಶನಕ್ಕೆ ಸಾಕ್ಷಿಯಾಗಲಿದ್ದಾರೆ.

    ಅಲ್ಲದೆ ದೀಪಾವಳಿ ಅಂಗವಾಗಿ ಇಂದಿನಿಂದ ಮೂರು ದಿನಗಳ ಕಾಲ ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ನೆರವೇರಲಿದ್ದು, ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ವತಿಯಿಂದ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

  • ಸ್ನೇಹಿತರ ಮುಂದೆ ಜಲಸಮಾಧಿಯಾದ ಬೆಂಗಳೂರಿನ ಯುವಕ

    ಸ್ನೇಹಿತರ ಮುಂದೆ ಜಲಸಮಾಧಿಯಾದ ಬೆಂಗಳೂರಿನ ಯುವಕ

    ಚಾಮರಾಜನಗರ: ಸ್ನೇಹಿತರ ದಿನದೊಂದು ಗೆಳಯರ ಜೊತೆಗೆ ಮಲೆಮಾದಪ್ಪನ ದರ್ಶನಕ್ಕೆ ಬಂದಿದ್ದ ಯುವಕನೊರ್ವ ನೀರಿನಲ್ಲಿ ಮುಳುಗಿ ಜಲ ಸಮಾಧಿಯಾದ ಘಟನೆ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿನ ಅಂತರಗಂಗೆಯಲ್ಲಿ ಸ್ನಾನ ಮಾಡಲು ಹೋದಾಗ ಬೆಂಗಳೂರಿನ ನಿವಾಸಿಯಾದ ಪ್ರಭು (28) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಬೆಂಗಳೂರಿನಿಂದ 9 ಜನ ಸ್ನೇಹಿತರು ಪ್ರವಾಸಕ್ಕೆಂದು ಆಗಮಿಸಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪ್ರವಾಸಕ್ಕೆ ಹೋಗಿದ್ದವರ ಪೈಕಿ ಪ್ರಭುವಿಗೆ ಮಾತ್ರ ಈಜು ಬರುತಿತ್ತು ಎಂದು ತಿಳಿದುಬಂದಿದೆ. ಅಲ್ಲಿದ್ದ ಬೇರೆ ಯಾವ ಗೆಳೆಯರಿಗೂ ಈಜು ಬಾರದ ಹಿನ್ನೆಲೆಯಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲಾಗದೇ ಕೂಗಾಡಿ ಕೊನೆಗೆ ಪೋಲಿಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಯುವಕನ ಶೋಧಕಾರ್ಯವನ್ನು ಮಲೆಮಹದೇಶ್ವರ ಬೆಟ್ಟದ ಪೊಲೀಸರು ಮುಂದುವರಿಸಿದ್ದಾರೆ.