– ದೈಹಿಕ, ಮಾನಸಿಕ ಹಿಂಸೆಗೆ ಹೇಳಿಕೆ ಕಾರಣವಾಗಿರಬಹುದು
ನವದೆಹಲಿ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆಯವರ ಸಾವಿನ ಕುರಿತಾಗಿ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರ ಹೇಳಿಕೆ ವೈಯಕ್ತಿಕವಾಗಿದೆ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.
ಸಾಧ್ವಿ ಪ್ರಜ್ಞಾಸಿಂಗ್ ಅವರು ಜೈಲಿನಲ್ಲಿ ಅನುಭವಿಸಿದ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಈ ಹೇಳಿಕೆ ಕಾರಣವಾಗಿರಬಹುದು ಎಂದು ಬಿಜೆಪಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಾಧ್ವಿ ಪ್ರಜ್ಞಾಸಿಂಗ್ ಇತ್ತೀಚೆಗೆ ಬಿಜೆಪಿ ಸೇರಿದ್ದು, ಅವರಿಗೆ ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಹೇಮಂತ್ ಕರ್ಕರೆ ಸಾವಿನ ಕುರಿತು ಸಾಧ್ವಿ ಪ್ರಜ್ಞಾಸಿಂಗ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ವಿಪಕ್ಷ ನಾಯಕರು ಅಸಮಾಧಾನ ಹೊರಹಾಕಿದರು. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು. ಇದರಿಂದಾಗಿ ಬಿಜೆಪಿಯು, ಈ ಹೇಳಿಕೆ ಅವರ ವೈಯಕ್ತಿಕ ವಿಚಾರವಾಗಿ ಎಂದು ಪ್ರತಿಕ್ರಿಯೆ ನೀಡಿದೆ.
ಐಪಿಎಸ್ ಅಧಿಕಾರಿಗಳ ಸಂಘ ಕೂಡ ಸಾಧ್ವಿ ಪ್ರಜ್ಞಾಸಿಂಗ್ ಹೇಳಿಕೆಯನ್ನು ಖಂಡಿಸಿದೆ. ಅಶೋಕ್ ಚಕ್ರ ಪುರಸ್ಕೃತ ಹೇಮಂತ್ ಕರ್ಕರೆ ಅವರು ಉಗ್ರರೊಂದಿಗೆ ಹೋರಾಡಿ ಹುತಾತ್ಮರಾಗಿದ್ದಾರೆ. ಅವರ ಬಲಿದಾನವನ್ನು ಅವಮಾನಿಸಿದ ಅಭ್ಯರ್ಥಿಯ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಸಾಧ್ವಿ ಪ್ರಜ್ಞಾಸಿಂಗ್ ಹೇಳಿದ್ದೇನು?:
ಭೋಪಾಲ್‍ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಾಧ್ವಿ ಪ್ರಜ್ಞಾಸಿಂಗ್ ಅವರು, 26/11 ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಹೇಮಂತ್ ಕರ್ಕರೆ ಸಾವನ್ನಪಿದ್ದು ನನ್ನ ಶಾಪದಿಂದಲೇ. ನೀನು ಸರ್ವನಾಶ ಆಗುತ್ತೀಯಾ ಎಂದು ಕರ್ಕರೆ ಅವರಿಗೆ ಶಾಪ ಹಾಕಿದ್ದೆ. ಆ ಶಾಪ ಅವರಿಗೆ ತಟ್ಟಿತು ಎಂದು ಹೇಳಿದ್ದರು.
ಹೇಮಂತ್ ಕರ್ಕರೆ ಅವರು ಪದೇ ಪದೇ ನನ್ನನ್ನು ವಿಚಾರಣೆಗೆ ಒಳಪಡಿಸಿ, ಕಿರುಕುಳ ನೀಡುತ್ತಿದ್ದರು. ನಿರಪರಾಧಿಯಾಗಿದ್ದರಿಂದ ಅವರ ಪ್ರಶ್ನೆಗೆ ನನ್ನ ಬಳಿ ಉತ್ತರವೇ ಇರಲಿಲ್ಲ. ಹೀಗಾಗಿ ನಾನು ಅವರಿಗೆ ಶಪಿಸಿದ್ದೆ. ನನ್ನನ್ನು ಬಂಧಿಸಿದ 45 ದಿನಗಳ ನಂತರ ಕರ್ಕರೆ ಉಗ್ರರಿಂದ ಪ್ರಾಣ ಬಿಟ್ಟರು ಎಂದು ತಿಳಿಸಿದ್ದರು.

ಇದಕ್ಕೂ ಮುನ್ನ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರು ಮಾಲೇಗಾಂವ್ ಸ್ಫೋಟ ಪ್ರಕರಣ ನೆನೆದು ಕಣ್ಣೀರಿಟ್ಟಿದ್ದರು. ಮಾಲೇಗಾಂವ್ ಪ್ರಕರಣದಲ್ಲಿ ಮುಸ್ಲಿಮರನ್ನು ಹತ್ಯೆ ಮಾಡುವುದಕ್ಕಾಗಿಯೇ ಸ್ಫೋಟ ನಡೆಸಿದೆ ಅಂತ ತಪ್ಪೊಪ್ಪಿಕೊಳ್ಳಬೇಕು ಎಂದು ಜೈಲು ಅಧಿಕಾರಿಗಳು ಒತ್ತಾಯಿಸಿ ಕಿರುಕುಳ ನೀಡಿದ್ದರು. ವಿಚಾರಣೆ ಸಂಬಂಧ ಅಕ್ರಮವಾಗಿ ಬಂಧಿಸಿದ ಪೊಲೀಸರು, ನನಗೆ ಮುಳ್ಳಿನ ಬೆಲ್ಟ್‍ನಿಂದ ಹೊಡೆದರು. ಅಸಭ್ಯ ಭಾಷೆಯಲ್ಲಿ ಬೈದರು. ಅಷ್ಟೇ ಅಲ್ಲದೆ ಬಟ್ಟೆ ಕಳಚಿ ನಗ್ನಗೊಳಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ದೂರಿದ್ದರು.
ನನ್ನನ್ನು 13 ದಿನಗಳ ಕಾಲ ಅಕ್ರಮವಾಗಿ ಬಂಧಿಸಿ ಇಡಲಾಗಿತ್ತು. ಬಂಧಿಸಿದ ಮೊದಲ ದಿನವೇ ನನ್ನ ಮೇಲೆ ಹಲ್ಲೆ ಮಾಡಲು ಆರಂಭಿಸಿದರು. ಬಳಿಕ ಹಗಲು ರಾತ್ರಿ ಎನ್ನದೇ ನನ್ನನ್ನು ಹೊಡೆಯುತ್ತಿದ್ದರು. ನನ್ನ ಕೈಯಲ್ಲಿ ರಕ್ತ ಬಂದರೂ ಎಂದು ಅವರು ಹೊಡೆಯುವುದನ್ನು ನಿಲ್ಲಿಸಿದರು. ಬಳಿಕ ಬಿಸಿ ನೀರು ತಂದು ಅದರಲ್ಲಿ ಉಪ್ಪು ಬೆರೆಸಿ ಕೈಗಳನ್ನು ಇರಿಸಿದರು. ಸ್ವಲ್ಪ ಗುಣಮುಖವಾಗುತ್ತಿದ್ದಂತೆ ಮತ್ತೆ ಹೊಡೆಯಲು ಆರಂಭಿಸಿದರು ಎಂದು ಜೈಲಿನಲ್ಲಿ ಕೊಟ್ಟ ಶಿಕ್ಷೆಯನ್ನು ನೆನೆದ್ದರು.
ಏನಿದು ಪ್ರಕರಣ?:
ಮಹಾರಾಷ್ಟ್ರದ ಮಾಲೇಗಾಂವ್‍ನಲ್ಲಿ 2008ರ ಸೆಪ್ಟೆಂಬರ್ ನಲ್ಲಿ ಸ್ಫೋಟ ನಡೆದಿತ್ತು. ಈ ವೇಳೆ 7 ಜನರು ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸಂಬಂಧ ಉಗ್ರ ನಿಗ್ರಹ ದಳವು ಕಣ್ಣೀರಿಟ್ಟ ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಬಂಧಿಸಿತ್ತು. ಈ ಪ್ರಕರಣದ ಕುರಿತು 2011ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ತನಿಖೆ ಆರಂಭಿಸಿತ್ತು. ಪ್ರಜ್ಞಾ ವಿರುದ್ಧ ಯಾವುದೇ ಸಾಕ್ಷಿಗಳು ಇಲ್ಲದೇ ಇರುವುದರಿಂದ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಕ್ಲೀನ್ ಚಿಟ್ ನೀಡಿತ್ತು.