Tag: Male Mahadeshwara

  • ‘ಈ ಸಲ ಕಪ್ ನಮ್ದೆ’- ಮಾದಪ್ಪನ ಮೊರೆ ಹೋದ ಆರ್‌ಸಿಬಿ ಅಭಿಮಾನಿ

    ‘ಈ ಸಲ ಕಪ್ ನಮ್ದೆ’- ಮಾದಪ್ಪನ ಮೊರೆ ಹೋದ ಆರ್‌ಸಿಬಿ ಅಭಿಮಾನಿ

    ಚಾಮರಾಜನಗರ: ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭವಾದ್ರೆ ಸಾಕು ‘ಈ ಸಲ ಕಪ್ ನಮ್ದೆ’ ಎನ್ನುವ ಡೈಲಾಗ್ ಸಖತ್ ಸದ್ದು ಮಾಡುತ್ತದೆ. ಅದರಲ್ಲೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ದೇವರಿಗೆ ಹರಗೆ ಕಟ್ಟುವುದು, ಪೂಜೆ ಸಲ್ಲಿಸಿವುದನ್ನು ಮಾಡುತ್ತಾರೆ. ಅದರಂತೆ ಆರ್‌ಸಿಬಿ ಅಭಿಮಾನಿಯೊಬ್ಬರು ಬಾಳೆ ಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆದು ಮಾದಪ್ಪನ ತೇರಿಗೆ ಎಸೆದಿದ್ದಾರೆ.

    ಆರ್‌ಸಿಬಿ ಅಭಿಮಾನಿ ಮಲೆಮಹದೇಶ್ವರನಿಗೆ ಬೇಡಿಕೆ ಸಲ್ಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕಳೆದ 24ರಂದು ರಥೋತ್ಸವ ಜರುಗಿತ್ತು. ಈ ವೇಳೆ ಆರ್‌ಸಿಬಿ ಅಭಿಮಾನಿ ಹನೂರಿನ ರಘು, ಈ ಬಾರಿಯಾದರೂ ನೆಚ್ಚಿನ ತಂಡ ಚಾಂಪಿಯನ್ ಆಗಲೆಂದು ಮಹದೇಶ್ವರನ ಮೊರೆ ಹೋಗಿದ್ದಾರೆ. ಇದನ್ನೂ ಓದಿ:  ಹೊಸ ದಶಕ, ಹೊಸ ಆರ್‌ಸಿಬಿ- ಹೇಗಿದ್ದ ಲೋಗೋ ಹೇಗೆ ಬದಲಾಯಿತು?

    ರಘು ಅವರು ಬಾಳೆ ಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆದು ಮಾದಪ್ಪನ ರಥಕ್ಕೆ ಎಸೆದು ಬೇಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಐಪಿಎಲ್ 11ನೇ ಆವೃತ್ತಿಯಲ್ಲಿ ಆರ್‌ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿ ನೇತೃತ್ವದ ಪಡೆಯನ್ನು ಹುರಿದುಂಬಿಸಲು ‘ಈ ಸಲ ಕಪ್ ನಮ್ದೆ’ ಎಂಬ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಿದ್ದರು. ಇದನ್ನೂ ಓದಿ: ಕಪ್ ಗೆಲ್ಲಲು ಆರ್‌ಸಿಬಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ

    ಸತತ ಸೋಲಿನಿಂದ ಕಂಗೆಟ್ಟಿದ್ದರೂ ಆರ್‌ಸಿಬಿಗೆ ಅಭಿಮಾನಿ ಬಳಗವೇನು ಕಮ್ಮಿಯಾಗಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ‘ಈ ಸಲ ಕಪ್ ನಮ್ದೆ’ ಎಂಬ ಅಭಿಮಾನಿಗಳ ಉದ್ಘಾರ ಈ ಬಾರಿ ಮಲೆಮಹದೇಶ್ವರನಿಗೂ ತಲುಪಿರುವುದು ವಿಶೇಷ.

    ಗೆಲ್ಲದ ತಂಡಗಳು:
    ಇಲ್ಲಿವರೆಗೆ ಐಪಿಎಲ್ 12 ಆವೃತ್ತಿಗಳು ನಡೆದಿದ್ದು, ಮೂರು ತಂಡಗಳು ಇಲ್ಲಿವರೆಗೂ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಕಪ್ ಗೆಲ್ಲದೆ ಇರುವ ತಂಡಗಳಾಗಿದೆ.

    2019ರ ಐಪಿಎಲ್ ಆವೃತ್ತಿಯಲ್ಲಿ ಗೆಲ್ಲುವ ಮೂಲಕ ಮುಂಬೈ ನಾಲ್ಕನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡ ತಂಡವಾಗಿ ಹೊರ ಹೊಮ್ಮಿತು. ಈ ಮೂಲಕ ಐಪಿಎಲ್ ಸೀಸನ್‍ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಚೊಚ್ಚಲ ಸೀಸನ್ (2008)ರಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ 3, ಕೋಲ್ಕತ್ತಾ ನೈಟ್‍ರೈಡರ್ಸ್ 2 ಹಾಗೂ ಸನ್‍ರೈಸರ್ಸ್ ಹೈದರಾಬಾದ್ ಒಂದು ಬಾರಿ ಟ್ರೋಫಿ ಗೆದ್ದುಕೊಂಡಿದೆ.

  • ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು – ನೌಕರರಿಗೆ ರಜೆ ಇಲ್ಲ

    ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು – ನೌಕರರಿಗೆ ರಜೆ ಇಲ್ಲ

    – ಭಕ್ತರ ವಿತರಣೆಗೆ 7.5 ಲಕ್ಷ ಲಾಡು ತಯಾರಿ

    ಚಾಮರಾಜನಗರ: ಜಿಲ್ಲೆಯಲ್ಲಿ ಕೆಎಸ್ಆರ್‌ಟಿಸಿ ಬಸ್ ಸೇವೆ ಅಬಾಧಿತವಾಗಿದೆ. ತಮ್ಮನ್ನೂ ಸಹ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಕೆಎಸ್ಆರ್‌ಟಿಸಿ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಚಾಮರಾಜನಗರ ಜಿಲ್ಲೆಯಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಎಂದಿನಂತೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು ಕೆಎಸ್ಆರ್‌ಟಿಸಿ ಬಸ್‍ಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.

    ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ ಇರುವುದರಿಂದ ಜಿಲ್ಲೆಯಲ್ಲಿ ಕೆಎಸ್ಆರ್‌ಟಿಸಿಯ ಯಾವುದೇ ನೌಕರರಿಗೆ ರಜೆ ನೀಡಿಲ್ಲ. ಗೈರು ಹಾಜರಾದರೆ ನೋ ವರ್ಕ್ ನೋ ವೇಜಸ್ ಎಂದು ಎಚ್ಚರಿಕೆ ನೀಡಲಾಗಿದೆ. ಚಾಮರಾಜನಗರ ವಿಭಾಗದಲ್ಲಿ ಒಟ್ಟು ನಾಲ್ಕು ಡಿಪೋಗಳಿದ್ದು 557 ಬಸ್‍ಗಳಿವೆ 1800ಕ್ಕೂ ಹೆಚ್ಚು ಮಂದಿ ನೌಕರರಿದ್ದು ಜಿಲ್ಲೆಯಲ್ಲಿ ಬಸ್ ಸೇವೆ ಅಬಾಧಿತವಾಗಿದೆ.

    ಇನ್ನೂ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡೆ ಹರಿದು ಬಂದಿದೆ. ಬರುವ ಭಕ್ತಾಧಿಗಳಿಗೆ ಪ್ರಾಧಿಕಾರದಿಂದ ಲಾಡು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೂರು ದಿನದಲ್ಲಿ 2.10 ಲಕ್ಷ ಲಾಡು ಮಾರಾಟವಾಗಿದ್ದು, ಇನ್ನೂ 3.5 ಲಕ್ಷ ಲಾಡು ಸ್ಟಾಕ್ ಇದೆ. ಇಂದಿನಿಂದ 24ರವರೆಗೆ ಪ್ರತಿದಿನ 40,000 ಲಾಡುಗಳು ತಯಾರಾಗಲಿದ್ದು, 2 ಲಕ್ಷ ಲಾಡು ತಯಾರಾಗಲಿವೆ.

    ಅಂದರೆ ಒಟ್ಟಾರೆ ಈ ಬಾರಿ ಶಿವರಾತ್ರಿ ವೇಳೆ 7.5 ಲಕ್ಷ ಲಾಡು ವಿತರಣೆಗೆ ಸಿದ್ಧತೆ ನಡೆದಿದೆ. ಲಾಡುವಿನ ಕೊರತೆ ಉಂಟಾಗಬಾರದೆಂದು ಲಾಡು ತಯಾರಿಕೆ ಇಂದು ಕೂಡ ಮುಂದುವರಿದಿದೆ ಎಂದು ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವ ಸ್ವಾಮಿ ಮಾಹಿತಿ ನೀಡಿದ್ದಾರೆ.

  • ಮಲೆ ಮಹದೇಶ್ವರ ದೇವಸ್ಥಾನದ ಹುಂಡಿಯಲ್ಲಿ ಕೋಟಿಗೂ ಹೆಚ್ಚು ಮೊತ್ತ ಸಂಗ್ರಹ

    ಮಲೆ ಮಹದೇಶ್ವರ ದೇವಸ್ಥಾನದ ಹುಂಡಿಯಲ್ಲಿ ಕೋಟಿಗೂ ಹೆಚ್ಚು ಮೊತ್ತ ಸಂಗ್ರಹ

    ಚಾಮರಾಜನಗರ: ರಾಜ್ಯದ ಎರಡನೇ ಅತಿ ಹೆಚ್ಚು ಆದಾಯ ತರುವ ಕ್ಷೇತ್ರವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ತಡರಾತ್ರಿವರೆಗೂ ಹುಂಡಿ ಎಣಿಕೆ ನಡೆದಿದ್ದು, 1,71,14,219 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

    ಎಣಿಕೆಯಲ್ಲಿ ನಿರತರಾದ ಸಿಬ್ಬಂದಿ ಶ್ರೀ ಕ್ಷೇತ್ರದಲ್ಲಿ ನಡೆಯುವ ದೀಪಾವಳಿ ಜಾತ್ರೆಗಳಲ್ಲೇ ಸಂಗ್ರಹವಾಗಿರುವ ಅತಿ ಹೆಚ್ಚಿನ ಕಾಣಿಕೆ ಇದಾಗಿದೆ. ಪ್ರತಿ ತಿಂಗಳು ಮಾದಪ್ಪನ ಸನ್ನಿಧಿಗೆ ಕೋಟಿಗಟ್ಟಲೆ ಹಣ ಹರಿದು ಬರುತ್ತಿದೆ.

    ಶಿವರಾತ್ರಿ ಜಾತ್ರೆಯಲ್ಲಿ 2 ಕೋಟಿ ರೂ., ಯುಗಾದಿ ಜಾತ್ರೆಯಲ್ಲಿ 1.95 ಕೋಟಿ ರೂ., ಕಾಣಿಕೆ ಸಂಗ್ರಹದ ದಾಖಲೆ ಹೊಂದಿದ್ದು ದೀಪಾವಳಿ ಜಾತ್ರೆಯಲ್ಲಿ ಇದೇ ಹೆಚ್ಚಿನ ಸಂಗ್ರಹ ಮೊತ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

    ಇನ್ನು ಉಳಿದಂತೆ 45 ಗ್ರಾಂ ಚಿನ್ನ, 2.6 ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಮಾದಪ್ಪನಿಗೆ ಭಕ್ತರು ಅರ್ಪಿಸಿದ್ದಾರೆ. ಹುಂಡಿ ಎಣಿಕೆಯು ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಭಾರೀ ಬಿಗಿ ಬಂದೋಬಸ್ತ್ ನೊಂದಿಗೆ ಸಾಲೂರು ಮಠದ ಹಿರಿಯಶ್ರೀ ನೇತೃತ್ವದಲ್ಲಿ ನಡೆಯಿತು.

  • ಮಾದಪ್ಪನಿಗೆ ಹರಕೆ ತೀರಿಸಿದ ಸೆಂಚುರಿ ಸ್ಟಾರ್ ಶಿವಣ್ಣ

    ಮಾದಪ್ಪನಿಗೆ ಹರಕೆ ತೀರಿಸಿದ ಸೆಂಚುರಿ ಸ್ಟಾರ್ ಶಿವಣ್ಣ

    ಚಾಮರಾಜನಗರ: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹರಕೆ ತೀರಿಸಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ಇಂದು ಬೆಳಗ್ಗೆ ಚಲನಚಿತ್ರ ನಿರ್ಮಾಪಕ ಗುರುದತ್ ಜೊತೆ ಭೇಟಿ ನೀಡಿದ ಶಿವಣ್ಣ, ಕಳೆದ ತಿಂಗಳು ಲಂಡನ್‍ನಲ್ಲಿ ಬಲಗೈ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಶಸ್ತ್ರ ಚಿಕತ್ಸೆ ಯಶಸ್ವಿಯಾಗಲೆಂದು ಮಾದಪ್ಪನಲ್ಲಿ ಹರಕೆ ಕಟ್ಟಿಕೊಂಡಿದ್ದರು.

    ಈಗ ಶಸ್ತ್ರ ಚಿಕಿತ್ಸೆ ಯಶಸ್ವಿಯಾದ ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ತಮ್ಮ ಹರಕೆ ತೀರಿಸಿದ್ದಾರೆ. ಇದರ ಜೊತೆಗೆ ಬೆಟ್ಟದಲ್ಲಿರುವ ದಾಸೋಹ ಭವನಕ್ಕೆ 10 ಸಾವಿರ ಕಾಣಿಕೆ ಸಹ ನೀಡಿದ್ದಾರೆ. ಇದೇ ಸಮಯದಲ್ಲಿ ಬೆಟ್ಟದಲ್ಲಿ ಶಿವಣ್ಣನನ್ನು ನೋಡಿದ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

  • ಮಲೆಮಹದೇಶ್ವರ ದೇವಾಲಯದ ಹುಂಡಿ ಏಣಿಕೆ – 28 ದಿನಗಳಲ್ಲಿ 1.25 ಕೋಟಿ ನಗದು ಸಂಗ್ರಹ

    ಮಲೆಮಹದೇಶ್ವರ ದೇವಾಲಯದ ಹುಂಡಿ ಏಣಿಕೆ – 28 ದಿನಗಳಲ್ಲಿ 1.25 ಕೋಟಿ ನಗದು ಸಂಗ್ರಹ

    ಚಾಮರಾಜನಗರ: ಕರ್ನಾಟಕದಲ್ಲಿ ಅತೀ ಹೆಚ್ಚು ಆದಾಯ ತಂದುಕೊಡುವ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಮಲೆ ಮಹೇಶ್ವರ ದೇವಾಲಯದಲ್ಲಿ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಹುಂಡಿ ಹಣ ಸಂಗ್ರಹವಾಗಿದೆ.

    ಮೇ ತಿಂಗಳ ಹುಂಡಿ ಎಣಿಕೆ ಕಾರ್ಯ ಗುರುವಾರ ತಡ ರಾತ್ರಿ ಮುಗಿದಿದ್ದು, 28 ದಿನಗಳಲ್ಲಿ ಬರೋಬ್ಬರಿ 1 ಕೋಟಿ 28 ಲಕ್ಷ 50 ಸಾವಿರ 373 ರೂಪಾಯಿ ನಗದು ಹಣ ಸಂಗ್ರಹವಾಗಿದೆ. ನಗದು ಹೊರತುಪಡಿಸಿ 70 ಗ್ರಾಂ ಚಿನ್ನ, 1 ಕೆಜಿ 100 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

    ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಆನಂದ್ ಮತ್ತು ಶ್ರೀ ಸಾಲೂರು ಬೃಹನ್ಮಠದ ಶ್ರೀ ಶ್ರೀ ಪಟ್ಟದ ಗುರುಸ್ವಾಮಿಗಳವರ ಸಮ್ಮುಖದಲ್ಲಿ ನೂರಾರು ಸಿಬ್ಬಂದಿಗಳು ಹುಂಡಿ ಕಾರ್ಯ ನಡೆಸಿದರು. ಪ್ರತಿ ತಿಂಗಳಿಗೊಮ್ಮೆ ಹುಂಡಿ ಎಣಕೆ ಕಾರ್ಯ ನಡೆಯುತ್ತಿದೆ.

    ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಇದಾಗಿದ್ದು, ಕಳೆದ ಬಾರಿ 32 ದಿನಕ್ಕೆ 1.60 ಕೋಟಿ ರೂ. ಸಂಗ್ರಹವಾಗಿತ್ತು. ಈಗ ದಿನದಿಂದ ದಿನಕ್ಕೆ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ದೇವಸ್ಥಾನದ ಹುಂಡಿಯಲ್ಲಿ ಕಾಣಿಕೆ ಕೂಡ ಹೆಚ್ಚಾಗಿದೆ.

    ದೇವಾಲಯಕ್ಕೆ ಇಷ್ಟು ಅದಾಯ ಬಂದರೂ ಮೂಲಭೂತ ಸೌಕರ್ಯ ಮಾಡಲಿಲ್ಲ ಎಂದು ಜನರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ದೇವಾಲಯದಲ್ಲಿ ಕುಡಿಯುವ ನೀರು, ರಸ್ತೆಯ ಸೌಲಭ್ಯ ಇಲ್ಲ. ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

  • ತಿರುಪತಿಯಂತೇ ಮಲೆಮಹದೇಶ್ವರ ಬೆಟ್ಟದಲ್ಲೂ ಲಡ್ಡು ತಯಾರಿ- ಹೇಗೆ ತಯಾರಿಸ್ತಾರೆ..? ಏನಿದರ ವಿಶೇಷತೆ..?

    ತಿರುಪತಿಯಂತೇ ಮಲೆಮಹದೇಶ್ವರ ಬೆಟ್ಟದಲ್ಲೂ ಲಡ್ಡು ತಯಾರಿ- ಹೇಗೆ ತಯಾರಿಸ್ತಾರೆ..? ಏನಿದರ ವಿಶೇಷತೆ..?

    ಚಾಮರಾಜನಗರ: ವಿಶ್ವ ಪ್ರಸಿದ್ಧಿಯಾದ ತಿರುಪತಿ ಲಡ್ಡು ಮಾದರಿಯಲ್ಲೇ ಮಲೆಮಹದೇಶ್ವರ ಬೆಟ್ಟದಲ್ಲೂ ಲಡ್ಡು ತಯಾರಿಸಲಾಗುತ್ತಿದೆ. ಪ್ರತಿ ವರ್ಷ ಮೂರು ಬಾರಿ ರಥೋತ್ಸವ ನಡೆಯುವ ಮಾದಪ್ಪನ ಬೆಟ್ಟದಲ್ಲಿ ಲಕ್ಷಗಟ್ಟಲೆ ಲಡ್ಡು ತಯಾರಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ.

    ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ. ಲಕ್ಷಾಂತರ ಮಂದಿಯ ಆರಾಧ್ಯ ದೈವ ಪವಾಡ ಪುರುಷ ಮಲೆ ಮಹದೇಶ್ವರ. ಅತೀ ಹೆಚ್ಚು ಆದಾಯ ಬರುವ ರಾಜ್ಯದ ಮುಜರಾಯಿ ಇಲಾಖೆಯ ಶ್ರೀಮಂತ ದೇವರುಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾನೆ. ಇಲ್ಲಿನ ಹುಂಡಿಯಲ್ಲಿ ವಾರ್ಷಿಕ 15ರಿಂದ 20 ಕೋಟಿ ಸಂಗ್ರಹವಾಗುತ್ತೆ. ಇನ್ನು ಚಿನ್ನದ ತೇರು ಎಳೆಯುವುದು, ವಿಶೇಷ ಪೂಜೆ, ಮುಡಿಸೇವೆ ಹೀಗೆ ಬೇರೆ ಬೇರೆ ರೀತಿಯಲ್ಲೂ ಕೋಟ್ಯಂತರ ರೂ. ಆದಾಯವಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ಬರುತ್ತಾರೆ.

    ಹಬ್ಬಗಳು ರಜಾ ದಿನಗಳು, ಅಮಾವಸ್ಯೆ, ದೀಪಾವಳಿ, ಶಿವರಾತ್ರಿ, ಯುಗಾದಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಂತೂ ಇಲ್ಲಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಹೀಗೆ ಬರುವ ಭಕ್ತರಿಗೆ ದೇವಸ್ಥಾನದಿಂದ ಪ್ರಸಾದ ರೂಪದಲ್ಲಿ ಲಡ್ಡು ನೀಡಲಾಗುತ್ತೆ. ಈ ಲಡ್ಡು ತಯಾರಿಕೆಗೆಂದು ದೇವಸ್ಥಾನದ ಮಗ್ಗುಲಲ್ಲೇ ಅಡುಗೆ ಕೋಣೆ ನಿರ್ಮಿಸಲಾಗಿದೆ. ಈ ಬಾರಿ ನವೆಂಬರ್ 8ರಂದು ರಥೋತ್ಸವ ನಡೆಯಲಿದ್ದು, ದೀಪಾವಳಿಗೆಂದೆ ಮೂರು ಲಕ್ಷ ಲಡ್ಡುಗಳನ್ನು ತಯಾರಿ ಮಾಡಲಾಗಿದೆ.

    ದೇವಸ್ಥಾನದ 40ಕ್ಕೂ ಹೆಚ್ಚು ಮಂದಿ ನೌಕರರು ಕಳೆದ 15 ದಿನಗಳಿಂದ ಲಡ್ಡು ತಯಾರಿಸುತ್ತಾರೆ. ಸಕ್ಕರೆ, ಕಡ್ಲೆಹಿಟ್ಟು, ತುಪ್ಪ, ಏಲಕ್ಕಿ ಪಚ್ಚೆಕರ್ಪೂರ, ಕಲ್ಲುಸಕ್ಕರೆ, ಒಣದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿಯನ್ನು ಹದವಾಗಿ ಮಿಶ್ರಣ ಮಾಡಿ ಲಡ್ಡು ತಯಾರಿಸಲಾಗುತ್ತೆ. ಅತ್ಯುತ್ತಮ ಗುಣಮಟ್ಟದ ಸಾಮಾಗ್ರಿಗಳನ್ನೆ ಲಡ್ಡು ತಯಾರಿಕೆಗೆ ಬಳಸಲಾಗುತ್ತೆ. ಪ್ರತಿ ಲಡ್ಡು ಒಂದೇ ಸಮನಾದ ಗಾತ್ರ ಹೊಂದಿದ್ದು 100 ಗ್ರಾಂ ತೂಕವಿರುತ್ತೆ. ಲಡ್ಡು ವಿತರಣೆಗೆಂದೇ ವಿಶೇಷ ಕೌಂಟರ್‍ಗಳನ್ನು ತೆರೆಯಲಾಗಿದ್ದು 20 ರೂ.ಗೆ ಒಂದರಂತೆ ಭಕ್ತರಿಗೆ ಲಡ್ಡು ಪ್ರಸಾದ ನೀಡಲಾಗುತ್ತೆ. ಶುಚಿ, ರುಚಿಯಾಗಿರುವ ಈ ಲಡ್ಡು ಪ್ರಸಾದಕ್ಕೆ ವಿಶೇಷ ಸಂದರ್ಭಗಳಲ್ಲಿ ಭಾರೀ ಬೇಡಿಕೆ ಇದೆ.

    ತಿರುಪತಿ ಮಾದರಿಯಲ್ಲೇ ಇಲ್ಲಿ ಲಡ್ಡು ತಯಾರಿಸಲಾಗುತ್ತೆ. ಹಾಗಾಗಿ ಮಹದೇಶ್ವರ ಬೆಟ್ಟದ ಲಡ್ಡು ತಿರುಪತಿ ಲಡ್ಡುವಿನಷ್ಟೇ ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಅತ್ಯುತ್ತಮ ಗುಣಮಟ್ಟದ ಸಾಮಾಗ್ರಿಗಳನ್ನೇ ಬಳಸುವುದರಿಂದ ಎಷ್ಟೇ ದಿನವಿಟ್ಟರೂ ಈ ಲಡ್ಡು ಕೆಡುವುದಿಲ್ಲ. ವಾರ್ಷಿಕ 15 ಲಕ್ಷ ಲಡ್ಡುಗಳನ್ನು ಇಲ್ಲಿ ತಯಾರಿಸಲಾಗುತ್ತೆ. ಲಡ್ಡು ತಯಾರಿಕೆಯಿಂದಲೇ ಮಾದಪ್ಪನ ಸನ್ನಿಧಿಗೆ ಕೋಟ್ಯಂತರ ರೂ. ಆದಾಯ ಹರಿದು ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ- ಭಕ್ತರಿಂದ ಹರಿದುಬಂದ ಕಾಣಿಕೆ ಇಷ್ಟು

    ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ- ಭಕ್ತರಿಂದ ಹರಿದುಬಂದ ಕಾಣಿಕೆ ಇಷ್ಟು

    ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ದೇವಾಲಯದ ಹುಂಡಿ ಏಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ 1 ಕೋಟಿ 11 ಲಕ್ಷದ 25 ಸಾವಿರದ 636 ರುಪಾಯಿ ನಗದು ಕಾಣಿಕೆಯಾಗಿ ದೊರತಿದೆ.

    ಇದರ ಜೊತೆಗೆ 25 ಗ್ರಾಂ ಚಿನ್ನ ಮತ್ತು 1 ಕೆ.ಜಿ 382 ಗ್ರಾಂ ಬೆಳ್ಳಿ ಆಭರಣಗಳು ಭಕ್ತರಿಂದ ಕಾಣಿಕೆ ರೂಪದಲ್ಲಿ ಲಭ್ಯವಾಗಿದೆ. ಜನವರಿ 31ರ ತಡರಾತ್ರಿವರೆಗೂ ನಡೆದ ಹುಂಡಿ ಏಣಿಕೆ ಕಾರ್ಯದಲ್ಲಿ ಇಷ್ಟೊಂದು ಕಾಣಿಕೆ ಭಕ್ತರಿಂದ ಬಂದಿದೆ.

    ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜಿ ರೂಪ ಅಧ್ಯಕ್ಷತೆಯಲ್ಲಿ, ಸಾಲೂರು ಮಠದ ಗುರುಸ್ವಾಮಿ ಸಮ್ಮಖದಲ್ಲಿ ಮತ್ತು ಎಸ್‍ಬಿಐ ಬ್ಯಾಂಕ್ ಸಿಬ್ಬಂದಿಗಳು ಸಿಸಿ ಕ್ಯಾಮಾರಾದ ಕಣ್ಗಾವಲಿನಲ್ಲಿ ಹುಂಡಿ ಏಣಿಕೆ ಕಾರ್ಯ ನಡೆಸಿದರು.

    ಹುಂಡಿ ಎಣಿಕೆ ಕಾರ್ಯ ಪ್ರತಿ ತಿಂಗಳ ಕೊನೆಯ ದಿನದಂದು ನಡೆಯುತ್ತದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಆದಾಯ ತರುವ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ 2ನೇ ಸ್ಥಾನವನ್ನ ಮಲೆ ಮಹದೇಶ್ವರ ದೇವಾಲಯದ ಪಡೆದುಕೊಂಡಿದೆ.

  • ವಿಜೃಂಭಣೆಯಿಂದ ನೆರವೇರಿದ ಮಲೆ ಮಹದೇಶ್ವರ ಜಾತ್ರಾ ಮಹೋತ್ಸವ

    ವಿಜೃಂಭಣೆಯಿಂದ ನೆರವೇರಿದ ಮಲೆ ಮಹದೇಶ್ವರ ಜಾತ್ರಾ ಮಹೋತ್ಸವ

    ಚಾಮರಾಜನಗರ: ದೀಪಾವಳಿಯ ಅಂಗವಾಗಿ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ದೇವರ ಮಹಾ ರಥೋತ್ಸವವು ವಿಜೃಂಭಣೆಯಿಂದ ನೇರವೇರಿದೆ.

    ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ಮಹಾ ರಥೋತ್ಸವವು ದೀಪಾವಳಿ ಹಬ್ಬದ ಅಂಗವಾಗಿ ಮೂರು ದಿನಗಳ ಕಾಲ ನಡೆಯುತ್ತದೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಿಜೃಂಭಣೆಯಿಂದ ಮಹಾರಥೋತ್ಸವ ನಡೆಯಿತು. ಜಾತ್ರಾ ಮಹೋತ್ಸವಕ್ಕೆ ತಮಿಳುನಾಡು, ಕೇರಳ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಮಹದೇಶ್ವರನ ಕೃಪೆಗೆ ಪಾತ್ರರಾದರು.

    ಜಾತ್ರೆಯ ಮೊದಲನೇ ದಿನ ಮಹದೇಶ್ವರನಿಗೆ ಎಣ್ಣೆ ಮಜ್ಜನ ನಡೆದರೆ, ಎರಡನೇ ದಿನ ಹಾಲರವಿ ಉತ್ಸವ ಮತ್ತು ಅಂತಿಮ ದಿನವಾದ ಇಂದು ಮಹಾರಥೋತ್ಸವ ನಡೆಯಿತು. ರಥೋತ್ಸವದಲ್ಲಿ ವೀರಗಾಸೆ, ಕಂಸಾಳೆ ಸೇರಿದಂತೆ ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಿದವು.

    ಮಹಾರಥೋತ್ಸವ ವೇಳೆ ಕಾಲ್ತುಳಿತ ಕೂಡ ಉಂಟಾಗಿದ್ದು, ಹೋಮ್ ಗಾರ್ಡ್ ಸೇರಿದಂತೆ ಹಲವು ಮಂದಿಗೆ ಸಣ್ಣಪುಟ್ಟ ಗಾಯವಾಗಿವೆ. ಈ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು.