Tag: Male Mahadeshwara Hills

  • ಹಸು ಬೇಟೆಯಾಡಿದ್ದಕ್ಕೆ ಸೇಡು – ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಕೊಂದಿದ್ದ ನಾಲ್ವರು ಅರೆಸ್ಟ್‌

    ಹಸು ಬೇಟೆಯಾಡಿದ್ದಕ್ಕೆ ಸೇಡು – ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಕೊಂದಿದ್ದ ನಾಲ್ವರು ಅರೆಸ್ಟ್‌

    ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ (Male Mahadeshwara Wildlife Sanctuary) ನಡೆದ ಹುಲಿ (Tiger) ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಪ್ರೀತಿಯ ಹಸುವನ್ನು ಹುಲಿ ಬೇಟೆಯಾಡಿದ್ದಕ್ಕೆ ಹುಲಿಯನ್ನು ಕೊಂದಿದ್ದಾರೆ ಎಂಬ ಮಾತು ಕೇಳಿಬಂದಿದೆ.

    ಸದ್ಯ ಹಸುವಿನ ಮಾಲೀಕ ತಲೆಮರೆಸಿಕೊಂಡಿದ್ದಾನೆ. ಆತನನ್ನು ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಬಲೆ ಬೀಸಿದ್ದಾರೆ. ಆತನ ಪತ್ತೆಗೆ ನಾಲ್ಕೂ ತಂಡ ರಚನೆ ಮಾಡಲಾಗಿದೆ. ತಮಿಳುನಾಡು ಸೇರಿದಂತೆ ನಾಲ್ಕು ಕಡೆ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ: ಮಲೆ ಮಹದೇಶ್ವರನ ವನ್ಯಧಾಮದಲ್ಲಿ ಮತ್ತೆ ಹುಲಿಯ ದಾರುಣ ಸಾವು – ಅರ್ಧ ಹುಲಿ ದೇಹ ಪತ್ತೆ 

    ಬಂಧಿತರನ್ನು ಪಚ್ಚೆದೊಡ್ಡಿ ಹಾಗೂ ಕಾಂಚಳ್ಳಿ ಗ್ರಾಮಕ್ಕೆ ಸೇರಿರುವ ಪಚ್ಚಮಲ್ಲು, ಗೋವಿಂದರಾಜು, ಗಣೇಶ ಹಾಗೂ ಶಂಪು ಎಂದು ಗುರುತಿಸಲಾಗಿದೆ. ಹಸುವಿನ ಮಾಲೀಕ ಚಂದು ಅರಣ್ಯ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದಾನೆ.

    ಈ ಪ್ರಕರಣದಲ್ಲಿ ಕುರಿಗಾಹಿಗಳ ಮೇಲೆಯೂ ಕೂಡ ಶಂಕೆ ವ್ಯಕ್ತವಾಗಿತ್ತು. ಆ ಹಿನ್ನಲೆ ಮಂಜುನಾಥ್ ಹಾಗೂ ಕಂಬಣ್ಣ ಎಂಬುವವರನ್ನು ಕೂಡ ಕರೆಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಸಾವಿನ ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಆ ಹಿನ್ನಲೆ ಅವರಿಬ್ಬರನ್ನೂ ಕೂಡ ಪ್ರಕರಣದಿಂದ ಕೈ ಬಿಡುವ ಬಗ್ಗೆ ಅರಣ್ಯಾಧಿಕಾರಿಗಳು ಚಿಂತಿಸಿದ್ದಾರೆ. ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ – ದೈತ್ಯ ಹುಲಿ ಕೊಂದಿದ್ದು ಪ್ರತೀಕಾರಕ್ಕಾ?

  • ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ವೇಷದಲ್ಲಿ ಬಂದು ಶ್ರೀಗಂಧಕ್ಕೆ ಕೊಡಲಿ – 33 ತುಂಡುಗಳು ವಶ, ಆರೋಪಿ ಅರೆಸ್ಟ್

    ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ವೇಷದಲ್ಲಿ ಬಂದು ಶ್ರೀಗಂಧಕ್ಕೆ ಕೊಡಲಿ – 33 ತುಂಡುಗಳು ವಶ, ಆರೋಪಿ ಅರೆಸ್ಟ್

    – ಬಾಲಕ ವಶಕ್ಕೆ, ಇಬ್ಬರು ಪರಾರಿ

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ (Male Mahadeshwara Hills) ಭಕ್ತರ ವೇಷದಲ್ಲಿ ಬಂದು ಶ್ರೀಗಂಧ (Sandalwood) ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ (Forest Department) ಸಿಬ್ಬಂದಿ ಬಂಧಿಸಿದ್ದಾರೆ.

    ಬಂಧಿತನನ್ನು ತಮಿಳುನಾಡು ಮೂಲದ ಸೆಡೆಯಾನ್ ಎಂದು ಗುರುತಿಸಲಾಗಿದೆ. ಆರೋಪಿ ಬೆಟ್ಟದ ಆನೆತಲೆದಿಂಬ ಬಳಿ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ. ಬಂಧಿತನಿಂದ 33 ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಶ್ರೀಗಂಧ ಕಳ್ಳತನ – 41 ಕೆಜಿ ಶ್ರೀಗಂಧ ತುಂಡು ಸಮೇತ ಮೂವರ ಬಂಧನ

    ಮತ್ತೊಂದು ಪ್ರಕರಣದಲ್ಲಿ ಭಕ್ತರಂತೆ ಬಂದು ಗಂಧ ಕಳ್ಳತನಕ್ಕೆ ಯತ್ನಿಸುತ್ತಿದ್ದ ಬಾಲಕನನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈತನ ಜೊತೆಗಿದ್ದ ಇಬ್ಬರು ಪರಾರಿಯಾಗಿದ್ದಾರೆ. ಹನೂರು ತಾಲೂಕಿನ ಕೊಕ್ಕಬೋರೆ ಪ್ರದೇಶದ ದೊಡ್ಡ ಬರೇಹಳ್ಳದ ಬಳಿ ಶ್ರೀಗಂಧ ಮರ ಕತ್ತರಿಸುವ ವೇಳೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ ಬಾಲಕ ಸಿಕ್ಕಿಬಿದ್ದಿದ್ದಾನೆ.

    ಕಳ್ಳರು ಭಕ್ತರ ವೇಷದಲ್ಲಿ ಬೆಟ್ಟಕ್ಕೆ ಬಂದು ಮಲೆ ಮಹದೇಶ್ವರ ವನ್ಯಧಾಮದ ಮೀಸಲು ಅರಣ್ಯ ಪ್ರದೇಶ ಪ್ರವೇಶಿಸುತ್ತಿದ್ದರು. ಅಲ್ಲಿ ಗಂಧದ ಮರಗಳನ್ನು ಕತ್ತರಿಸಿ ಕೊಂಡೊಯ್ಯುತ್ತಿದ್ದರು. ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾದ ಶ್ರೀಗಂಧ ಕಳ್ಳರನ್ನು ಪೆರುಮಾಳ್ ಹಾಗೂ ಮುರುಗನ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬಂಡೀಪುರದ ಅರಣ್ಯಕ್ಕೆ ಅಕ್ರಮ ಪ್ರವೇಶ; 6 ಜೀವಂತ ಆಮೆ, 72 ಕೆಜಿ ಶ್ರೀಗಂಧ ತುಂಡು ವಶ – ಆರೋಪಿ ಬಂಧನ

  • ಭಕ್ತರಿಗೆ ಸಿಹಿಸುದ್ದಿ; ಮಾದಪ್ಪನ ದರ್ಶನಕ್ಕೆ ತಿರುಪತಿ ಮಾದರಿ ವ್ಯವಸ್ಥೆ

    ಭಕ್ತರಿಗೆ ಸಿಹಿಸುದ್ದಿ; ಮಾದಪ್ಪನ ದರ್ಶನಕ್ಕೆ ತಿರುಪತಿ ಮಾದರಿ ವ್ಯವಸ್ಥೆ

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ದಿನೇ ದಿನೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಮಹದೇಶ್ವರನ ದರ್ಶನಕ್ಕಾಗಿ ಭಕ್ತರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಹಾಗಾಗಿ, ಭಕ್ತರು ಸುಗಮವಾಗಿ ಮಹದೇಶ್ವರನ ದರ್ಶನ ಪಡೆಯಲು ಅನುಕೂಲವಾಗುವಂತೆ ತಿರುಪತಿ ಮಾದರಿಯಲ್ಲಿ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುತ್ತಿದೆ.

    ಮಲೆ ಮಹದೇಶ್ವರ ಬೆಟ್ಟ (Male Mahadeshwara Hills) ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ. ಕೋಟ್ಯಂತರ ಭಕ್ತರ ಆರಾಧ್ಯ ದೈವ ಮಲೆ ಮಹದೇಶ್ವರನ ಸನ್ನಿಧಿಗೆ ನಿತ್ಯ ಸಾವಿರಾರು ಭಕ್ತರು ಬರುತ್ತಿದ್ದಾರೆ. ಅದರಲ್ಲೂ ಅಮಾವಾಸ್ಯೆ, ಜಾತ್ರೆ ಹಾಗೂ ರಜಾದಿನಗಳಲ್ಲಿ ಭಕ್ತರ ಸಂಖ್ಯೆ ಲಕ್ಷ ದಾಟುತ್ತದೆ. ಶಕ್ತಿ ಯೋಜನೆ ಜಾರಿಯಾದ ನಂತರ ಭಕ್ತರು ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ಮಹದೇಶ್ವರನ ದರ್ಶನ ಪಡೆಯಲು ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಹಾಗಾಗಿ, ಭಕ್ತರು ಸುಗಮ ಹಾಗೂ ಬೇಗ ಮಹದೇಶ್ವರನ ದರ್ಶನ ಪಡೆಯಲು ಅನುಕೂಲವಾಗುವಂತೆ ತಿರುಪತಿ ಮಾದರಿಯಲ್ಲಿ ಕ್ಯೂ ‌ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದೆ. ಈ ಕಾಂಪ್ಲೆಕ್ಸ್‌ಗಳಲ್ಲಿ ಭಕ್ತರು ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಉಪಾಹಾರ, ಮಕ್ಕಳ ಆರೈಕೆ ಕೇಂದ್ರ ಮೊದಲಾದ ಸೌಲಭ್ಯಗಳನ್ನು ಒಳಗೊಂಡಿದೆ.

    ಬೆಟ್ಟಕ್ಕೆ ಬರುವ ಭಕ್ತರು ಮಹದೇಶ್ವರನ ದರ್ಶನ ಪಡೆಯಲು ಮೊದಲೇ ಸಮಯ ನಿಗದಿ ಮಾಡಲು ಸಹ ನಿರ್ಧರಿಸಲಾಗಿದೆ. ಇದರಿಂದ ಭಕ್ತರು ದೇವಸ್ಥಾನ ಆವರಣದಲ್ಲಿ ಅನವಶ್ಯಕವಾಗಿ ಕಾಯುವುದು ತಪ್ಪಲಿದೆ. ಕ್ಯೂ ಕಾಂಪ್ಲೆಕ್ಸ್ ಅಲ್ಲದೇ ಒಂದೇ ಬಾರಿಗೆ 4 ಸಾವಿರ ಮಂದಿ ಕುಳಿತು ಭೋಜನ ಮಾಡುವ ಸುಸಜ್ಜಿತ ದಾಸೋಹ ಭವನವನ್ನು ನಿರ್ಮಿಸಲಾಗುತ್ತಿದೆ.

    ಎಲ್ಲವೂ ಅಂದುಕೊಂಡಂತೆ ಆದರೆ ಮೂರು ತಿಂಗಳ ಒಳಗೆ ತಿರುಪತಿ ಮಾದರಿ ಕ್ಯೂ ಕಾಂಪ್ಲೆಕ್ಸ್ ಹಾಗೂ ಸುಸಜ್ಜಿತ ದಾಸೋಹ ಭವನ ನಿರ್ಮಾಣ ಕಾಮಗಾರಿ ಮುಗಿಯಲಿದೆ. ಇದೇ ವೇಳೆ, ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ತಿರುಪತಿ ಮಾದರಿ ಮೆಟ್ಟಿಲು ನಿರ್ಮಾಣ ಕಾಮಗಾರಿಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

  • ಕೋಟಿ ಒಡೆಯನಾದ ಮಾದಪ್ಪ – ಒಂದೇ ತಿಂಗಳಲ್ಲಿ ಭಕ್ತರಿಂದ 2.36 ಕೋಟಿ ಕಾಣಿಕೆ

    ಕೋಟಿ ಒಡೆಯನಾದ ಮಾದಪ್ಪ – ಒಂದೇ ತಿಂಗಳಲ್ಲಿ ಭಕ್ತರಿಂದ 2.36 ಕೋಟಿ ಕಾಣಿಕೆ

    ಚಾಮರಾಜನಗರ: ಮಲೆ ಮಹದೇಶ್ವರ ಮತ್ತೆ ಕೋಟಿ ಒಡೆಯನಾಗಿದ್ದಾನೆ. ಒಂದೇ ತಿಂಗಳಿಗೆ ಭಕ್ತರಿಂದ 2.36 ಕೋಟಿ ಕಾಣಿಕೆ ಹರಿದುಬಂದಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದ್ದು, ಕಳೆದ ಮೂವತ್ತು ದಿನಗಳಲ್ಲಿ ಒಟ್ಟು 2.36 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.

    ಇದಲ್ಲದೇ, 70 ಗ್ರಾಂ ಚಿನ್ನ, 1 ಕೆಜಿ 712 ಗ್ರಾಂ ಬೆಳ್ಳಿ ಆಭರಣಗಳನ್ನು ಭಕ್ತರು ಮಲೆ ಮಹದೇಶ್ವರನಿಗೆ ಸಮರ್ಪಿಸಿದ್ದಾರೆ. ಹುಂಡಿಯಲ್ಲಿ ಎರಡು ಸಾವಿರ ಮುಖಬೆಲೆಯ 14 ನೋಟುಗಳು ಹಾಗೂ 20 ವಿದೇಶಿ ನೋಟುಗಳು ಸಹ ಕಂಡು ಬಂದಿವೆ.

  • 5 ಹುಲಿಗಳ ಸಾವು ಕೇಸ್ – ಮೃತ ಹಸು ಮಾಲೀಕ ಸೇರಿ ಮೂವರ ಬಂಧನ

    5 ಹುಲಿಗಳ ಸಾವು ಕೇಸ್ – ಮೃತ ಹಸು ಮಾಲೀಕ ಸೇರಿ ಮೂವರ ಬಂಧನ

    ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳ (Tigers Death Case) ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮೃತ ಹಸುವಿನ ಮಾಲೀಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಹಸುವಿನ ಮಾಲೀಕ ಕಳ್ಳಬೇದೊಡ್ಡಿಯ ಕೋನಪ್ಪ ಹಾಗೂ ಮಾದುರಾಜ್, ಕೊಪ್ಪ ಗ್ರಾಮದ ನಾಗರಾಜು ಮೂವರ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಐದು ಹುಲಿಗಳ ಸಾವು – ಹಸು ಕೊಂದಿದ್ದಕ್ಕೆ ವಿಷ ಹಾಕಿದ್ನಾ ಹಸು ಮಾಲೀಕ?

    ನಿನ್ನೆ ಹಸು ಯಾರದೆಂಬ ಪತ್ತೆಗೆ ದನಗಾಹಿಗಳನ್ನು ಸ್ಥಳಕ್ಕೆ ಕರೆತಂದು ಅರಣ್ಯ ಸಿಬ್ಬಂದಿ ವಿಚಾರಣೆ ನಡೆಸಿದ್ದರು. ಈ ವೇಳೆ ಹಸುವಿನ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದಿದ್ದರು. ಹಸುವಿನ ಮಾಲೀಕ ಕೋನಪ್ಪ ಮತ್ತು ನಾಗರಾಜು ಇಬ್ಬರೂ ಅಮಾಯಕರಂತೆ ವರ್ತಿಸಿದ್ದರು. ಹಸುವನ್ನು ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ನಂತರ ಅರಣ್ಯ ಇಲಾಖೆ ಹಾಗೂ ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ.

    ಹುಲಿಗಳ ಸಾವು ಪ್ರಕರಣದವನ್ನು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ತನಿಖೆ ನಡೆಸುತ್ತಿವೆ. ಕೊಳ್ಳೇಗಾಲ ವಿಜಿಲೆನ್ಸ್ ತಂಡ ಹಾಗೂ ಅರಣ್ಯ ಇಲಾಖೆಯ ಎಸಿಎಫ್ ಗಜಾನನ ಹೆಗಡೆ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದೆ. ನಿನ್ನೆ ಮೀಣ್ಯಂ, ಗಾಜನೂರು, ಕಳಬಾಯಿ ದೊಡ್ಡಿ, ಕೊಪ್ಪ ಗ್ರಾಮದ ಕೆಲ ಶಂಕಿತರನ್ನು ತಂಡ ವಿಚಾರಣೆ ನಡೆಸಿತ್ತು. ರಾತ್ರಿ ವಿಚಾರಣೆ ವೇಳೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿತು. ಇದನ್ನೂ ಓದಿ: 5 ಹುಲಿಗಳ ನಿಗೂಢ ಸಾವು ಬೆನ್ನಲ್ಲೇ ಬಂಡೀಪುರದಲ್ಲಿ ಮತ್ತೊಂದು ಹುಲಿ ಸಾವು

    ನಿನ್ನೆ ಕಳ್ಳಬೇದೊಡ್ಡಿಯ ಶಿವಣ್ಣ ಎಂಬಾತನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದರು. ತಡರಾತ್ರಿ ಶಿವಣ್ಣ ಪುತ್ರ ಮಾದರಾಜು ಅರಣ್ಯ ಇಲಾಖೆ ವಶಕ್ಕೆ ಸಿಕ್ಕಿದ್ದಾನೆ. ಈತ ಕೊಪ್ಪ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ.

  • ಚಾ.ನಗರ| ಹುಲಿಗಳು ಸತ್ತ 10 ಹೆಜ್ಜೆ ದೂರದಲ್ಲಿಯೇ ಹಸು ಕಳೇಬರ ಪತ್ತೆ- ವಿಷಪ್ರಾಶನ ಶಂಕೆ

    ಚಾ.ನಗರ| ಹುಲಿಗಳು ಸತ್ತ 10 ಹೆಜ್ಜೆ ದೂರದಲ್ಲಿಯೇ ಹಸು ಕಳೇಬರ ಪತ್ತೆ- ವಿಷಪ್ರಾಶನ ಶಂಕೆ

    ಚಾಮರಾಜನಗರ: ಹುಲಿಗಳ ನಾಡು ಚಾಮರಾಜನಗರದಲ್ಲಿ (Chamarajanagara) ಬರೋಬ್ಬರಿ ಐದು ಹುಲಿಗಳು ಮೃತಪಟ್ಟಿವೆ. ವಿಷಪ್ರಾಶನದಿಂದ ಹುಲಿಗಳು ಸಾವನ್ನಪ್ಪಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಈ ದಿನಗಳಲ್ಲಿ, ಐದು ಹುಲಿಗಳನ್ನು ವಿಷವಿಕ್ಕಿ ಕೊಂದಿರುವುದು ಆಘಾತಕಾರಿಯಾಗಿದೆ.

    ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದಲ್ಲಿ (MM Hills) ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳ ಅಸಹಜ ಸಾವು ತಲ್ಲಣ ಉಂಟುಮಾಡಿದೆ. ಹೂಗ್ಯಂ ಅರಣ್ಯ ವಲಯದ ಮೀಣ್ಯಂ ಸಮೀಪ ಮಹದೇಶ್ವರ ಗುಡಿ ಬಯಲಿನಲ್ಲಿ ಈ ಐದೂ ಹುಲಿಗಳು ಸತ್ತುಬಿದ್ದಿವೆ. ಅರಣ್ಯ ಸಿಬ್ಬಂದಿ ಗಸ್ತಿನ ವೇಳೆ ಐದು ಹುಲಿಗಳ ಮೃತದೇಹ ಪತ್ತೆಯಾಗಿದ್ದು, ಅನತಿ ದೂರದಲ್ಲಿ ಹಸುವೊಂದರ ಮೃತದೇಹವೂ ಕಂಡು ಬಂದಿದೆ. ಇದನ್ನೂ ಓದಿ: ಮಹದೇಶ್ವರ ಬೆಟ್ಟದಲ್ಲಿ 4 ಹುಲಿಗಳ ಅಸಹಜ ಸಾವು – ತನಿಖೆಗೆ ಈಶ್ವರ ಖಂಡ್ರೆ ಆದೇಶ

    ವನ್ಯಪ್ರಾಣಿಯ ದಾಳಿಯಿಂದ ಹಸು ಸಾವನ್ನಪ್ಪಿದ್ದು, ಇದರ ಅರ್ಧಂಬರ್ಧ ದೇಹವನ್ನು ವನ್ಯಪ್ರಾಣಿಗಳು ತಿಂದು ಹೋಗಿವೆ. ಉಳಿದ ಮಾಂಸ ತಿನ್ನಲು ವನ್ಯಪ್ರಾಣಿ ಬರಬಹುದು ಎಂಬ ಕಾರಣಕ್ಕೆ ಅದನ್ನು ಕೊಲ್ಲಲು ಹಸುವಿನ ಮಾಂಸಕ್ಕೆ ಯಾರೋ ವಿಷ ಸಿಂಪಡಣೆ ಮಾಡಿರಬಹುದು ಎಂಬ ಗುಮಾನಿ ಇದೆ. ವಿಷ ಮಿಶ್ರಿತ ಹಸುವಿನ ಮಾಂಸ ತಿಂದು ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

    ಐದು ಹುಲಿಗಳು ಒಮ್ಮೆಲೆ ಮೃತಪಟ್ಟಿರುವುದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ದಿಗ್ಭçಮೆ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆಗೆ ಪಿಸಿಸಿಎಫ್ ನೇತೃತ್ವದಲ್ಲಿ ಉನ್ನತ ಮಟ್ಟದ ತಂಡ ರಚಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಅಥವಾ ವಿಷಪ್ರಾಶನದಿಂದ ಮೃತಪಟ್ಟಿದ್ದರೆ ಅದಕ್ಕೆ ಕಾರಣರಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶ ನೀಡಿದ್ದಾರೆ. ಸದ್ಯ ಆರು ಮಂದಿ ತನಿಖಾ ತಂಡಲಿದ್ದಾರೆ. ಪಿಸಿಸಿಎಫ್ ರವಿ, ಎಪಿಸಿಸಿಎಫ್ ಶ್ರೀನಿವಾಸಲು, ಸಿಎಫ್ ಹೀರಾಲಾಲ್, ಎನ್‌ಟಿಸಿಎ ಪ್ರತಿನಿಧಿ ಮಲ್ಲೇಶಪ್ಪ, ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಹಾಗೂ ಮೈಸೂರು ಮೃಗಾಲಯದ ಪಶು ವೈದ್ಯಾಧಿಕಾರಿಕಾರಿ ಈ ತಂಡದಲ್ಲಿದ್ದಾರೆ. 14 ದಿನಗಳ ಒಳಗೆ ತನಿಖಾ ತಂಡದ ವರದಿ ಕೊಡಲೂ ಸೂಚಿಸಲಾಗಿದೆ. ಇದನ್ನೂ ಓದಿ: ಹುಲಿ ದಾಳಿಗೆ ಕುರಿಗಾಹಿ ಮಹಿಳೆ ಬಲಿ- 9 ದಿನಕ್ಕೆ ಜಿಲ್ಲೆಯಲ್ಲಿ 2ನೇ ಸಾವು

    ಸಂತಾನೋತ್ಪತ್ತಿ ಮಾಡುವ ಹೆಣ್ಣು ಹುಲಿ ಮತ್ತು ನಾಲ್ಕು ಮರಿಗಳು ಅಸಹಜವಾಗಿ ಸಾಯುವುದು ದೊಡ್ಡ ಆಘಾತಕಾರಿ ವಿಷಯವಾಗಿದೆ ಎಂದು ವನ್ಯಜೀವಿ ತಜ್ಞರು ಬೇಸರ ಆಘಾತ ವ್ಯಕ್ತಪಡಿಸಿದ್ದಾರೆ. ಹುಲಿಗಳು ಕಡಿಮೆ ಸಾಂದ್ರತೆಯಿರುವ ಮಲೆ ಮಹದೇಶ್ವರಬೆಟ್ಟದಲ್ಲಿ ಹೀಗಾಗಿರುವುದು ಅತ್ಯಂತ ಖಂಡನೀಯವಾಗಿದ್ದು, ಈ ವಿಚಾರದಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

  • ಹುಲಿಗಳ ಸಾವು ಪ್ರಕರಣ | ಗಂಧದಗುಡಿಯನ್ನ ಕಸಾಯಿಖಾನೆ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ – ಆರ್‌. ಅಶೋಕ್‌

    ಹುಲಿಗಳ ಸಾವು ಪ್ರಕರಣ | ಗಂಧದಗುಡಿಯನ್ನ ಕಸಾಯಿಖಾನೆ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ – ಆರ್‌. ಅಶೋಕ್‌

    ಬೆಂಗಳೂರು: ಗಂಧದಗುಡಿಯನ್ನ ಕಸಾಯಿಖಾನೆ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ (Congress Government) ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ (R. Ashoka) ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಜ ಸಾವಿಗೀಡಾಗಿರುವ ಬಗ್ಗೆ ದುಃಖ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Eshwar Khandre), ಪಿಸಿಸಿಎಫ್ ನೇತೃತ್ವದ ತಂಡದ ತನಿಖೆಗೆ ಆದೇಶ ನೀಡಿದ್ದಾರೆ. ಈ ಬೆನ್ನಲ್ಲೇ ಹುಲಿಗಳ ಸಾವಿನ ಪ್ರಕರಣ ಕುರಿತು ಆರ್‌. ಅಶೋಕ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮಹದೇಶ್ವರ ಬೆಟ್ಟದಲ್ಲಿ 4 ಹುಲಿಗಳ ಅಸಹಜ ಸಾವು – ತನಿಖೆಗೆ ಈಶ್ವರ ಖಂಡ್ರೆ ಆದೇಶ

    ಸಾಂದರ್ಭಿಕ ಚಿತ್ರ

    ಅಶೋಕ್‌ ಎಕ್ಸ್‌ನಲ್ಲಿ ಏನಿದೆ?
    ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀನ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟಿರುವ ವಿಷಯ ಅತ್ಯಂತ ಆಘಾತಕಾರಿ. ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ ತನ್ನದೇ ಆದ ಹೆಸರು ಮಾಡಿರುವ ಕರ್ನಾಟಕದಲ್ಲಿ ಇಂತಹ ಘಟನೆ ನಡೆದಿರುವುದು ರಾಜ್ಯಕ್ಕೆ ಕಳಂಕ ತಂದಿದೆ. ಇದನ್ನೂ ಓದಿ: ಬೀಡಾಡಿ ಬೆಕ್ಕಿಗೊಂದು ಸುಂದರ ಮನೆ – ಮಂಗಳೂರಿನ ಮಾಲ್‌ಗೆ ಬರೋರ ಕಣ್ಮಣಿಯಾದ ವೈಟ್ ಕ್ಯಾಟ್

    ಮಲೆ ಮಹದೇಶ್ವರ ಕಾಡು ಹುಲಿ ಸಂತತಿ (Tiger offspring) ಹೆಚ್ಚಳಕ್ಕೆ ಬೇಕಾದ ಎಲ್ಲಾ ಅಗತ್ಯ ವಾತಾವರಣವನ್ನು ಹೊಂದಿದೆ. ಆದರೆ ಅರಣ್ಯ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ಭ್ರಷ್ಟಾಚಾರ ನಮ್ಮ ವನ್ಯ ಸಂಪತ್ತನ್ನು ಹಾಳು ಮಾಡುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ, ಸರ್ಕಾರ ಅರಣ್ಯ ಇಲಾಖೆಯಲ್ಲಿ ಆಡಳಿತ ಬಿಗಿಗೊಳಿಸದಿದ್ದರೆ ಇಡೀ ಅರಣ್ಯವೇ ಸರ್ವನಾಶ ಆಗುವ ಅಪಾಯವಿದೆ. ಇದನ್ನೂ ಓದಿ: Ramanagara | ಅಡುಗೆ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಗಲಾಟೆ – ಕೊಲೆಯಲ್ಲಿ ಅಂತ್ಯ

    ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಬೇಕು, ತಪ್ಪಿತಸ್ಥರಿಗೆ ಮುಲಾಜಿಲ್ಲದೆ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮ್ಯಾನೇಜರ್‌ನಿಂದಲೇ ಬ್ಯಾಂಕ್ ದರೋಡೆಗೆ ಸ್ಕೆಚ್ – 10.5 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ಮೂವರು ಅರೆಸ್ಟ್

  • ಆರ್‌ಸಿಬಿ ಕಪ್ ಗೆಲ್ಲಲೆಂದು ಮಾದಪ್ಪನಿಗೆ ಮುಡಿ ಕೊಟ್ಟ ಅಭಿಮಾನಿ

    ಆರ್‌ಸಿಬಿ ಕಪ್ ಗೆಲ್ಲಲೆಂದು ಮಾದಪ್ಪನಿಗೆ ಮುಡಿ ಕೊಟ್ಟ ಅಭಿಮಾನಿ

    ಚಾಮರಾಜನಗರ: ಐಪಿಎಲ್ (IPL 2025) ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಆರ್‌ಸಿಬಿ (RCB) ಕಪ್‌ ಗೆಲ್ಲಲೆಂದು ಅಭಿಮಾನಿಗಳು ವಿಶೇಷ, ವಿಭಿನ್ನವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

    ಅಭಿಮಾನಿಯೊಬ್ಬ ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ಮುಡಿ ಕೊಟ್ಟು ಆರ್‌ಸಿಬಿ ಜಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಾನು ಬೆಂಗಳೂರಿನ ಅಳಿಯ, ಗೆದ್ದು ಬಾ ಆರ್‌ಸಿಬಿ: ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌ ವಿಶ್‌

    ಮೈಸೂರಿನ ಶಶಿಕುಮಾರ್ ಎಂಬವರು ಮಹದೇಶ್ವರನಿಗೆ ಮುಡಿ ಕೊಟ್ಟಿದ್ದು, ಆರ್‌ಸಿಬಿ ಜೆರ್ಸಿ ಹಿಡಿದು ಮಹದೇಶ್ವರನಿಗೆ ಇಡುಗಾಯಿ ಒಡೆದಿದ್ದಾರೆ. ಅಯ್ಯಪ್ಪನ ದೇಗುಲಕ್ಕೆ 18 ಮೆಟ್ಟಿಲು, ಈ ಬಾರಿ ಸೀಸನ್ 18 ಹಾಗೂ ವಿರಾಟ್ ಜೆರ್ಸಿ ನಂಬರ್ ಕೂಡ 18. ಅದೇ ರೀತಿ 18 ರ ಕಪ್ ಕೂಡ ನಮ್ಮದೇ ಎಂದು ಶಶಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಟ್ರೈಲರ್ ಅಷ್ಟೇ, ಆರ್‌ಸಿಬಿ ಗೆದ್ದರೆ ಹೋಮ-ಹವನ ಮಾಡಿಸುತ್ತೇನೆ ಎಂದು ತಿಳಿಸಿದ್ದಾರೆ.

    ಅಹಮದಾಬಾದ್‌ನಲ್ಲಿ ಇಂದು ಐಪಿಎಲ್‌ 2025ರ ಟ್ರೋಫಿಗಾಗಿ ಪಂಜಾಬ್‌ ವಿರುದ್ಧ ಆರ್‌ಸಿಬಿ ಸೆಣಸಲಿದೆ. ಐಪಿಎಲ್‌ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೂ ಒಂದೇ ಒಂದು ಕಪ್‌ ಗೆದ್ದಿಲ್ಲ. ಈ ದಿನದ ಪಂದ್ಯ ಇಬ್ಬರಿಗೂ ಐತಿಹಾಸಿಕ ಮ್ಯಾಚ್‌ ಆಗಿದೆ. ಇದನ್ನೂ ಓದಿ: ಆರ್‌ಸಿಬಿ ಗೆಲುವಿಗಾಗಿ ರಕ್ತದಾನ ಮಾಡಿದ ಕಿರುತೆರೆ ನಟಿ ರಜಿನಿ

  • ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಲಿಂಗೈಕ್ಯ

    ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಲಿಂಗೈಕ್ಯ

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ (Salur Mutt) ಹಿರಿಯ ಶ್ರೀ ಗುರುಸ್ವಾಮೀಜಿ (70) ಲಿಂಗೈಕ್ಯರಾಗಿದ್ದಾರೆ.

    ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗುರುಸ್ವಾಮೀಜಿ (Sri Guru Swamiji) ಸಾಲೂರು ಮಠದಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಸ್ವಾಮೀಜಿ ಇಂದು ಕೊನೆಯುಸಿರೆಳೆದಿದ್ದಾರೆ. ಸಂಜೆ 5:30 ಕ್ಕೆ ಸಾಲೂರು ಮಠದಲ್ಲಿ ಅಂತ್ಯಕ್ರಿಯೆ ನೆರವೇರಿತು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆ; ಕುಮಟಾ-ಸಿದ್ದಾಪುರ ರಸ್ತೆ ಜಲಾವೃತ

    ಅಂತ್ಯಕ್ರಿಯೆಗೂ ಮುನ್ನ ಮಹದೇಶ್ವರ ಬೆಟ್ಟದಲ್ಲಿ ಸ್ವಾಮೀಜಿಯ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಅಪಾರ ಭಕ್ತ ವೃಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಸ್ವಾಮೀಜಿಗಳಿಗೆ ನಮಿಸಿತು.

    ಕಾಡಂಚಿನ ಮಕ್ಕಳ ಶಿಕ್ಷಣಕ್ಕೆ ಶ್ರಮಿಸಿದವರು ಶ್ರೀ ಗುರುಸ್ವಾಮೀಜಿ. ಸಾಲೂರು ಮಠದ 17ನೇ ಪೀಠಾಧಿಪತಿಯಾಗಿ ಸೇವೆ ಸಲ್ಲಿಸಿದ್ದರು. ಕಾಡಂಚಿನ ಮಕ್ಕಳನ್ನು ಸಾಲೂರು ಮಠಕ್ಕೆ ಕರೆತಂದು ಶಿಕ್ಷಣ ನೀಡಿದ್ದರು. ಇದನ್ನೂ ಓದಿ: ದರ್ಶನ್ ಮೇಕಪ್ ಆರ್ಟಿಸ್ಟ್ ಹೊನ್ನೆಗೌಡ ನಿಧನ- ಭಾವುಕ ಪೋಸ್ಟ್ ಹಂಚಿಕೊಂಡ ದಚ್ಚು

    ಸುತ್ತಮುತ್ತಲ ಗ್ರಾಮಗಳಲ್ಲಿ ಭಿಕ್ಷೆ ಮಾಡಿ ಮಕ್ಕಳಿಗೆ ಉಚಿತ ಊಟ, ವಸತಿ ವ್ಯವಸ್ಥೆ ಮಾಡಿಸಿದ್ದರು. ಗುಡ್ಡಗಾಡು ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪೊನ್ನಾಚಿ ಗ್ರಾಮದಲ್ಲಿ ಪ್ರೌಢಶಾಲೆ ತೆರೆದಿದ್ದರು.

  • ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಮಲೆ ಮಹದೇಶ್ವರ ವನ್ಯಧಾಮದ ಸುಂಕದ ಕಟ್ಟೆಯಲ್ಲಿ ಹುಲಿ ದರ್ಶನ

    ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಮಲೆ ಮಹದೇಶ್ವರ ವನ್ಯಧಾಮದ ಸುಂಕದ ಕಟ್ಟೆಯಲ್ಲಿ ಹುಲಿ ದರ್ಶನ

    ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಹನೂರು ಬಫರ್ ವಲಯದ ಪಚ್ಚೆ ದೊಡ್ಡಿಗಸ್ತಿನ ಸುಂಕದಕಟ್ಟೆ ಅರಣ್ಯ ಪ್ರದೇಶದಲ್ಲಿ ಸಫಾರಿಗರಿಗೆ ಹುಲಿ ಕಾಣಿಸಿಕೊಂಡಿದ್ದು, ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ.

    ಕಳೆದ ತಿಂಗಳು ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆ ಕಾಡ್ಗಿಚ್ಚು ಕಾಣಿಸಿಕೊಂಡು ಒಣ ಹುಲ್ಲು ಹಾಗೂ ಸಣ್ಣ ಪುಟ್ಟ ಮರಗಳು ಬೆಂಕಿಗೆ ಆಹುತಿಯಾಗಿತ್ತು. ತದನಂತರ ಮೂರ್ನಾಲ್ಕು ದಿನಗಳ ಕಾಲ ಸತತವಾಗಿ ಬಿದ್ದ ಮಳೆಗೆ ಅರಣ್ಯವು ಅಚ್ಚಹಸಿರಿನಿಂದ ಕೂಡಿದ್ದು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: 2ನೇ ದಿನ ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ ಭರ್ಜರಿ ಪ್ರತಿಕ್ರಿಯೆ – ಮುಗಿಯುವ ಮುನ್ನ ಭಾಗಿಯಾಗಿ

    ಇದೀಗ ಅರಣ್ಯವು ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವುದರಿಂದ ಸಫಾರಿಗೆ ತೆರಳುವ ವನ್ಯ ಪ್ರಿಯರಿಗೆ ಒಂದಲ್ಲ ಒಂದು ಪ್ರಾಣಿಗಳು ಕಾಣಸಿಗುತ್ತಿವೆ. ಮಲೆ ಮಹದೇಶ್ವರ ವನ್ಯಜೀವಿ ವ್ಯಾಪ್ತಿಯ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ಸಫಾರಿ ಕೇಂದ್ರ 2024ರ ಅಕ್ಟೋಬರ್ 2 ರಂದು ಪ್ರಾರಂಭಿಸಲಾಗಿತ್ತು. ಆದರೆ, ಇದುವರೆಗೂ ಒಮ್ಮೆಯೂ ಹುಲಿರಾಯ ದರ್ಶನ ನೀಡಿರಲಿಲ್ಲ.

    ಅಜ್ಜೀಪುರ ಸಫಾರಿ ಕೇಂದ್ರದಿಂದ ತೆರಳುವ ಪ್ರವಾಸಿಗರಿಗೆ ಆನೆ, ಕಾಡೆಮ್ಮೆ, ಜಿಂಕೆ, ಕಡವೆ, ಕರಡಿ, ತೋಳ ನರಿ ಇನ್ನಿತರ ಪ್ರಾಣಿಗಳು ಮಾತ್ರ ಕಾಣಿಸಿಕೊಂಡಿದ್ದವು. ಶನಿವಾರ ತೆರಳಿದ್ದ ಪ್ರವಾಸಿಗರಿಗೆ ಹುಲಿರಾಯ ಕಾಣಿಸಿಕೊಳ್ಳುತ್ತಿದ್ದಂತೆ ತಮ್ಮ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಎಂಟು ಜನ ಬೆಂಗಳೂರು ಮೂಲದ ಪ್ರವಾಸಿಗರು ಸಫಾರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜನಿವಾರ ವಾರ್‌ | ಭೌತಶಾಸ್ತ್ರ, ರಸಾಯನಶಾಸ್ತ್ರ ಸರಾಸರಿ ಅಂಕ ಪರಿಗಣಿಸಿ ಗಣಿತಕ್ಕೆ ಮಾರ್ಕ್ಸ್‌ ನೀಡಿ