Tag: Maldives

  • ಮಾಲ್ಡೀವ್ಸ್‌ನಲ್ಲಿ ರಾಜವರ್ಧನ್‌ – ದಿವ್ಯ ದಂಪತಿ ಆನಿವರ್ಸರಿ ಸೆಲಬ್ರೇಷನ್

    ಮಾಲ್ಡೀವ್ಸ್‌ನಲ್ಲಿ ರಾಜವರ್ಧನ್‌ – ದಿವ್ಯ ದಂಪತಿ ಆನಿವರ್ಸರಿ ಸೆಲಬ್ರೇಷನ್

    ಸ್ಯಾಂಡಲ್‌ವುಡ್‌ನ ನಟ, ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್‌ (Raja Vardan) ಹಾಗೂ ಪತ್ನಿ ದಿವ್ಯ ಮಾಲ್ಡೀವ್ಸ್‌ನ ಕಡಲ ಕಿನಾರೆಯಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನ (Marriage Anniversary) ಆಚರಿಸಿಕೊಂಡಿದ್ದಾರೆ. ವಿವಾಹ ವಾರ್ಷಿಕೋತ್ಸವ ಆಚರಣೆಯ ಬ್ಯೂಟಿಫುಲ್ ಮುಮೆಂಟ್ಸ್‌ಳನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸಿನಿಮಾಗಳ ನಟನೆಯ ಜೊತೆಗೆ ನಿರ್ಮಾಣಕ್ಕೂ ಕೈಹಾಕಿರುವ ರಾಜವರ್ಧನ್‌ ಇದರ ಮಧ್ಯದಲ್ಲಿಯೂ ಫ್ಯಾಮಿಲಿಗೆ ಕೂಡ ಟೈಂ ಕೊಟ್ಟಿದ್ದಾರೆ. ಸ್ಪೆಷಲ್ ಡೇಯನ್ನ ಸ್ಪೆಷಲ್ ಜಾಗದಲ್ಲಿ ಕಳೆಯೋಕೆ ವಿದೇಶಕ್ಕೆ ಹಾರಿದ್ದಾರೆ. ಇದೇ ವರ್ಷ ತೆರೆಕಂಡ ಗಜರಾಮ ಸಿನಿಮಾ ಬಳಿಕ ಜಾವಾ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ ರಾಜವರ್ಧನ್. ಇದನ್ನೂ ಓದಿ: ಉಪೇಂದ್ರಾಗೆ ಮಾಲಾಶ್ರೀ ಮಗಳು ಆರಾಧನಾ ಜೋಡಿ

    ಬಿಚ್ಚುಗತ್ತಿ, ಹಿರಣ್ಯ ಹಾಗೂ ಗಜರಾಮ ಸಿನಿಮಾದಲ್ಲಿ ನಟಿಸಿರುವ ರಾಜವರ್ಧನ್ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಹೊಸ ಪ್ರಯತ್ನ ಮಾಡಲು ಮುಂದಾಗಿದ್ದಾರೆ. ಸದ್ಯ ಮಾಲ್ಡೀವ್ಸ್‌ನ (Maldives) ಸುಂದರ ತಾಣದಲ್ಲಿ ಪತ್ನಿ ಜೊತೆ ಆ್ಯನಿವರ್ಸರಿ ಸೆಲಬ್ರೇಷನ್ ಮಾಡ್ತಿದ್ದಾರೆ. ಇದನ್ನೂ ಓದಿ: ʼಕೇರಂ, ಬ್ಯಾಡ್ಮಿಂಟನ್ ಆಡುವಾಗ ಸೆಕೆಂಡ್‍ನಲ್ಲಿ ಸೋಲಿಸುತ್ತಿದ್ದರು’- ಸುಮಲತಾ ನೆನಪು ಹಂಚಿಕೊಂಡಿದ್ದು ಯಾರ ಬಗ್ಗೆ?

  • Explained| ಬದಲಾದ ಮಾಲ್ಡೀವ್ಸ್‌ – ಇಂಡಿಯಾ ಔಟ್‌ ಹೇಳಿ ಈಗ ಮೋದಿಯನ್ನು ಆಹ್ವಾನಿಸಿದ್ದು ಯಾಕೆ?

    Explained| ಬದಲಾದ ಮಾಲ್ಡೀವ್ಸ್‌ – ಇಂಡಿಯಾ ಔಟ್‌ ಹೇಳಿ ಈಗ ಮೋದಿಯನ್ನು ಆಹ್ವಾನಿಸಿದ್ದು ಯಾಕೆ?

    ಭಾರತದ (India) ವಿರೋಧ ಧೋರಣೆ ತೋರಿ ಚೀನಾದತ್ತ (China) ವಾಲಿದ್ದ ಮಾಲ್ಡೀವ್ಸ್‌ (Maldives) ಈಗ ಮತ್ತೆ ಭಾರತದ ಮುಖಮಾಡಿದೆ. ಅಧಿಕಾರ ಸ್ವೀಕರಿಸಿದ ಬಳಿಕ ಚೀನಾ, ಟರ್ಕಿಗೆ ಅಧಿಕೃತ ಪ್ರವಾಸ ಕೈಗೊಂಡಿದ್ದ ಅಧ್ಯಕ್ಷ ಮುಯಿಝು ಭಾರತೀಯರ ಬಾಯ್ಕಾಟ್‌ ಮಾಲ್ಡೀವ್ಸ್‌ (Boycott Maldives) ಅಭಿಯಾನಕ್ಕೆ ಬೆಚ್ಚಿದ್ದಾರೆ. ಚುನಾವಣೆಯ ಸಮಯದಲ್ಲಿ ಭಾರತದ ವಿರುದ್ಧ ಅಪಪ್ರಚಾರ ನಡೆಸಿದ್ದ ಮುಯಿಝು ಈಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿ ಸಂಬಂಧವನ್ನು ಸುಧಾರಿಸುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಇಲ್ಲಿ ಇಂಡಿಯಾ ಔಟ್‌ (India Out) ಪ್ರಚಾರ ನಡೆಸಿ ಅಧಿಕಾರ ಏರಿದ್ದ ಮುಯಿಝು ಅವರ ನಿರ್ಧಾರ ಬದಲಾಗಿದ್ದು ಯಾಕೆ? ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಪ್ರವಾಸೋದ್ಯಮದ ಮೇಲೆ ಎಷ್ಟು ಪೆಟ್ಟು ಬಿತ್ತು? ಇಸ್ಲಾಂ ರಾಷ್ಟ್ರವಾಗಿರುವ ಮಾಲ್ಡೀವ್ಸ್‌ ಆರ್ಥಿಕತೆ ಹೇಗಿದೆ ಇತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ.

    ಮಾಲ್ಡೀವ್ಸ್‌ ಎಲ್ಲಿದೆ?
    ಹಿಂದೂ ಮಹಾಸಾಗರದಲ್ಲಿರುವ ಸಣ್ಣ ದ್ವೀಪ ಮಾಲ್ಡೀವ್ಸ್‌. ಹಿಂದೆ ಈ ಪ್ರದೇಶವನ್ನು ರಾಜರು ಆಳುತ್ತಿದ್ದರು. ಅಶೋಕನ ಅವಧಿಯಲ್ಲಿ ಮಾಲ್ಡೀವ್ಸ್‌ನಲ್ಲಿ ಬೌದ್ಧ ಧರ್ಮ ಪ್ರಸಾರವಾಯಿತು. 12 ಶತಮಾನದಲ್ಲಿ ಅಲ್ಲಿನ ರಾಜ ಮುಸ್ಲಿಂ ಧರ್ಮಕ್ಕೆ ಮತಾಂತರವಾದ ನಂತರ ಈ ದೇಶ ನಿಧನವಾಗಿ ಇಸ್ಲಾಂ ರಾಷ್ಟ್ರವಾಗಿ ಬದಲಾಯಿತು.

    2021ರ ಜನಗಣತಿಯ ಪ್ರಕಾರ ಮಾಲ್ಡೀವ್ಸ್‌ನಲ್ಲಿ ಹತ್ತಿರ ಹತ್ತಿರ ಐದೂವರೆ ಲಕ್ಷ ಜನರಿದ್ದಾರೆ. ಈ ಪೈಕಿ 98% ಮುಸ್ಲಿಮರೇ ಇದ್ದರೆ 0.3% ಕ್ರೈಸ್ತರಿದ್ದಾರೆ. ಭಾರತದ ಲಕ್ಷದ್ವೀಪದಿಂದ ಮಾಲ್ಡೀವ್ಸ್‌ಗೆ 798 ಕಿ.ಮೀ ದೂರ ಇದ್ದರೆ ಬೆಂಗಳೂರಿನಿಂದ 1,187 ಕಿ.ಮೀ ದೂರದಲ್ಲಿ ಮಾಲ್ಡೀವ್ಸ್‌ ಇದೆ.

     

    ಆರ್ಥಿಕ ಸಂಕಷ್ಟದಲ್ಲಿ ಮಾಲ್ಡೀವ್ಸ್‌:
    ಸುಮಾರು 1,200 ದ್ವೀಪಗಳ ರಾಷ್ಟ್ರವಾಗಿರುವ ಮಾಲ್ಡೀವ್ಸ್‌ ಮುಖ್ಯ ಆದಾಯ ಮೂಲ ಯಾವುದು ಎಂದರೆ ಪ್ರವಾಸೋದ್ಯಮ, ಆಸ್ತಿ ತೆರಿಗೆಗಳು. ಆದರೆ ಅಲ್ಲಿ ನಡೆಸುವ ಪಕ್ಷಗಳು ಅಧಿಕಾರಕ್ಕೆ ಏರಲು ಹಲವಾರು ಸಬ್ಸಿಡಿ ಸಮಾಜ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿವೆ. ಇದರ ಜೊತೆ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಮೆಗಾ-ಮೂಲಸೌಕರ್ಯ, ವಸತಿ ಯೋಜನೆಗಳನ್ನು ಆರಂಭಿಸಿದೆ ಈ ಯೋಜನೆ ಪೂರ್ಣಗೊಳಿಸಲು ಭಾರತ, ಚೀನಾ ಮತ್ತು ವಿದೇಶದ ಬ್ಯಾಂಕ್‌ಗಳಿಂದ ಸಾಲ ಮಾಡಿದೆ.

    2023ರಲ್ಲಿ ಮುಯಿಝು ಅಧಿಕಾರಕ್ಕೆ ಏರಿದ್ದರು. ಸದ್ಯ ಈಗ ಹಣದುಬ್ಬರ ಏರಿಕೆಯಾಗಿದ್ದರಿಂದ ವಸ್ತುಗಳ ಬೆಲೆ ಏರಿಕೆಯಾಗಿದೆ. ಪ್ರವಾಸೋದ್ಯಮ ಆದಾಯದಲ್ಲಿನ ಕಡಿತಗೊಂಡಿದೆ. ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸಲು 2 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿತು. ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಸರ್ಕಾರಕ್ಕೆ ಇದು ಮತ್ತಷ್ಟು ಹೊರೆಯಾಯಿತು. ಈ ನೇಮಕಾತಿಯಿಂದಲೇ ಬಜೆಟ್‌ನಿಂದ 65 ಮಿಲಿಯನ್‌ ಡಾಲರ್‌ ಖರ್ಚು ಮಾಡುತ್ತಿದೆ. ಆರ್ಥಿಕ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಮುಯಿಝು ಅವರು ಇನ್ನು ಮುಂದೆ ಯಾವುದೇ ದೊಡ್ಡ ಮೂಲಸೌಕರ್ಯ ಯೋಜನೆ ಆರಂಭಿಸುವುದಿಲ್ಲ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದರು.

    ಜಾಗತಿಕ ಕ್ರೇಡಿಟ್‌ ರೇಟಿಂಗ್‌ ಸಂಸ್ಥೆ ಮೂಡೀಸ್‌ ಮಾಲ್ಡೀವ್ಸ್‌ ರೇಟಿಂಗ್‌ ಇಳಿಕೆ ಮಾಡಿದೆ. ವಿಶ್ವ ಬ್ಯಾಂಕ್‌ ಮಾಹಿತಿ ಅನ್ವಯ 2018 ರಲ್ಲಿ 3 ಶತಕೋಟಿ ಡಾಲರ್‌ ಇದ್ದರೆ 2024 ರಲ್ಲಿ ಇದು 8.2 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಜಿಡಿಪಿ 122.9% ಸಾಲವೇ ಇರುವ ಕಾರಣ ಈಗ ಸಂಕಷ್ಟಕ್ಕೆ ಸಿಲುಕಿದೆ.

    ಬಾಯ್ಕಾಟ್‌ ಮಾಲ್ಡೀವ್ಸ್‌ ಆರಂಭವಾಗಿದ್ದು ಹೇಗೆ?
    ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಯಾಕೆ ನಡೆಯಿತು? ಹಿನ್ನೆಲೆ ಏನು ಅಂತ ತಿಳ್ಕೊಳ್ಳಬೇಕಾದರೆ 5 ವರ್ಷದ ಹಿಂದೆ ಹೋಗಬೇಕು. 2010 ಮತ್ತು 2015ರಲ್ಲಿ ಭಾರತ ಧ್ರುವ್ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್‌ಗಳನ್ನು ಮಾಲ್ಡೀವ್ಸ್‌ಗೆ ನೀಡಿತ್ತು. ದ್ವೀಪರಾಷ್ಟ್ರವಾದ ಕಾರಣ ಹುಡುಕಾಟ, ಹವಾಮಾನ ಕಣ್ಗಾವಲು ಮತ್ತು ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ದ್ವೀಪರಾಷ್ಟ್ರದ ಜನರನ್ನು ಏರ್‌ಲಿಫ್ಟ್‌ ಮಾಡಲು ಭಾರತ ಹೆಲಿಕಾಪ್ಟರ್‌ ನೀಡಿತ್ತು.

    ಮಾನವೀಯ ದೃಷ್ಟಿಯಿಂದ ಭಾರತ ಕೊಡುಗೆಯಾಗಿ ನೀಡಿದ್ದರೂ ಮಾಲ್ಡೀವ್ಸ್‌ನಲ್ಲಿ ಇದೊಂದು ವಿವಾದವಾಗಿ ಹೊರಹೊಮ್ಮಿತ್ತು. ಭಾರತ ತನ್ನ ಮಿಲಿಟರಿ ನೆಲೆಯಾಗಿ ಮಾಲ್ಡೀವ್ಸ್‌ನ್ನು ಬಳಸಲು ಮುಂದಾಗಿದೆ ಎಂದು ಅಪಪ್ರಚಾರ ಮಾಡಲಾಯಿತು. ಈ ಸಂದರ್ಭದಲ್ಲಿ ಅಲ್ಲಿದ್ದ ಮಾಲ್ಡೀವ್ಸ್‌ ಸರ್ಕಾರ ಈ ವಿಚಾರವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಯಿತು. 2020ರಲ್ಲಿ ಇಂಡಿಯಾ ಔಟ್‌ ವಿಚಾರ ಜೋರಾಗಿ ಚರ್ಚೆ ಆಯ್ತು. ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರದ ಬಗ್ಗೆ ಅಪಪ್ರಚಾರ ಮಾಡಲಾಯಿತು. ಇಂಡಿಯಾ ಔಟ್‌ ಪ್ರಚಾರಕ್ಕೆ ಚೀನಾ ಹಿಂದುಗಡೆಯಿಂದ ಬೆಂಬಲ ನೀಡಿತು. ಅಂತಿಮವಾಗಿ ಭಾರತದ ವಿರೋಧಿಯಾಗಿ ಮೊಹಮ್ಮದ್‌ ಮುಯಿಝು ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಯಾವೊಬ್ಬ ಭಾರತೀಯ ಸೈನಿಕ ಮಾಲ್ಡೀವ್ಸ್‌ನಲ್ಲಿ ಇರಬಾರದು, ಭಾರತದ ಸೈನಿಕರು ಮಾಲ್ಡೀವ್ಸ್‌ ತೊರೆಯಬೇಕು ಎಂದು ತಾಕೀತು ಮಾಡಿದರು.

    ಕಿತ್ತಾಟ ನಡೆಯುತ್ತಿರುವ ಸಮಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಯಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಮಾಲ್ದೀವ್ಸ್‌ಗೆ ಸರಿಸಾಟಿಯಾಗಿ ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ರಧಾನಿ ಮೋದಿ ಅವರು ಅಲ್ಲಿಗೆ ಭೇಟಿ ನೀಡಿದರು ಎಂಬ ಚರ್ಚೆ ಆರಂಭವಾಯಿತು. ಪ್ರಧಾನಿ ಅವರ ಚಿತ್ರ ಹಾಗೂ ವಿಡಿಯೊಗಳು ಇದಕ್ಕೆ ಪುಷ್ಟಿ ನೀಡಿದ್ದವು. ಈ ಚಿತ್ರ ಹಾಗೂ ವಿಡಿಯೋಗಳಿಗೆ ಮಾಲ್ದೀವ್ಸ್‌ನ ಇಬ್ಬರು ಸಚಿವರು ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದರು. ಇದು ಭಾರತದಲ್ಲಿ ದೊಡ್ಡ ವಿವಾದಕ್ಕೆ ಕಾರಣ ಆಗಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಆರಂಭವಾಯಿತು. ಇದನ್ನೂ ಓದಿ: ಪ್ರವಾಸಿಗರಿಲ್ಲದೇ ಪರದಾಟ- ಭಾರತದಲ್ಲಿ ರೋಡ್‌ ಶೋಗೆ ಮಾಲ್ಡೀವ್ಸ್‌ ಪ್ಲಾನ್‌

    ಪ್ರವಾಸಿಗರ ಸಂಖ್ಯೆ ಇಳಿಕೆ:
    ಅಭಿಯಾನ ಜೋರಾಗುತ್ತಿದ್ದಂತೆ ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಿರುವ ಭಾರತೀಯರ ಸಂಖ್ಯೆ ಭಾರೀ ಇಳಿಕೆಯಾಗಿದ್ದು ಲಕ್ಷದ್ವೀಪಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದೆ. 2022 ರಲ್ಲಿ 2.4 ಲಕ್ಷ, 2023 ರಲ್ಲಿ 2.06 ಲಕ್ಷ ಮಂದಿ ಹೋಗಿದ್ದರೆ 2024 ರಲ್ಲಿ 1.3 ಲಕ್ಷ ಮಂದಿ ಮಾತ್ರ ಹೋಗಿದ್ದರು. ಪ್ರವಾಸಿಗರ ಸಂಖ್ಯೆ 50% ಇಳಿಕೆಯಾದ ಬೆನ್ನಲ್ಲೇ ಈಗ ಮಾಲ್ಡೀವ್ಸ್‌ ಭಾರತದತ್ತ ವಾಲಿದೆ.

    2023 ರಲ್ಲಿ ಮಾಲ್ಡೀವ್ಸ್‌ಗೆ ಭಾರತದಿಂದ ಅತಿ ಹೆಚ್ಚು ಜನ ತೆರಳಿದ್ದರು. ಟಾಪ್‌ 5 ಪ್ರವಾಸಿಗರ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ ರಷ್ಯಾ ಎರಡನೇ ಸ್ಥಾನ, ಚೀನಾ ಮೂರನೇ ಸ್ಥಾನದಲ್ಲಿತ್ತು. ಬಾಯ್ಕಾಟ್‌ ಅಭಿಯಾನ ಜಾಸ್ತಿ ಆಗುತ್ತಿದ್ದಂತೆ ಮಾಲ್ಡೀವ್ಸ್‌ ಭಾರತದಲ್ಲಿ ಪ್ರವಾಸಿಗರನ್ನು ಸೆಳೆಯಲು ರೋಡ್‌ ಶೋ ಸಹ ನಡೆಸಿತ್ತು. ಇದರ ಜೊತೆ ಸೋಶಿಯಲ್‌ ಮೀಡಿಯಾ ಇನ್ಫ್ಲಯೂನ್ಸರ್‌ಗೆ ಉಚಿತ ಪ್ರವಾಸ ಆಯೋಜಿಸಿ ಪ್ರಚಾರ ಸಹ ನಡೆಸಿತ್ತು. ಏನೇ ಪ್ರಚಾರ ನಡೆಸಿರೂ ಫಲ ಮಾತ್ರ ನೀಡಲಿಲ್ಲ. ಇದನ್ನೂ ಓದಿ: ಅಂದು ಇಂಡಿಯಾ ಔಟ್‌ – ಇಂದು ಸೇನಾ ಕಚೇರಿಯಲ್ಲೇ ದೊಡ್ಡ ಕಟೌಟ್‌ | ಇದು ಮೋದಿ ಮ್ಯಾಜಿಕ್‌

     

    ಈಗ ಭಾರತ ಯಾಕೆ ಬೇಕು?
    ಮಾಲ್ಡೀವ್ಸ್‌ ಈಗ ವಿಪರೀತ ಸಾಲದಲ್ಲಿದೆ. ಸಾಲ ಹೆಚ್ಚಾದ ಬೆನ್ನಲ್ಲೇ ಚೀನಾ ಹೆಚ್ಚಿನ ಸಾಲ ನೀಡಲು ಆಸಕ್ತಿ ತೋರಿಸಿಲ್ಲ. ಹೀಗಾಗಿ ಮಾಲ್ಡೀವ್ಸ್‌ ಗಲ್ಫ್‌ ದೇಶಗಳ ಮೊರೆ ಹೋಗಿತ್ತು. ಗಲ್ಫ್‌ ದೇಶಗಳಿಗೂ ಪ್ರವಾಸೋದ್ಯಮ ಕ್ಷೇತ್ರದ ಆದಾಯದ ಮೂಲಗಳಲ್ಲಿ ಒಂದು. ಗಲ್ಫ್‌ ದೇಶಗಳು ಮಾಲ್ಡೀವ್ಸ್‌ಗೆ ಸಾಲ ನೀಡಲು ಮುಂದೆ ಬರಲಿಲ್ಲ.

    ಸಂಕಷ್ಟದ ಪರಿಸ್ಥಿತಿಯಲ್ಲಿ ಕೊನೆಗೆ ಮುಯಿಝು ಅನಿವಾರ್ಯವಾಗಿ ಭಾರತದ ಸಹಕಾರ ಕೇಳಿದರು. ಭಾರತ ಸಹಕಾರ ನೀಡುವುದಾಗಿ ಹೇಳಿತು. ಭಾರತ ಸಹಕಾರ ನೀಡಿದ ಬೆನ್ನಲ್ಲೇ ಉತ್ತರ ಮಾಲ್ಡೀವ್ಸ್‌ನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ದಕ್ಷಿಣ ಮಾಲ್ಡೀವ್ಸ್‌ನಲ್ಲಿ ಸೇತುವೆ ಮತ್ತು ರಸ್ತೆ ಯೋಜನೆ, ರಾಜಧಾನಿ ಮಾಲೆಯಲ್ಲಿ ದೊಡ್ಡ ವಸತಿ ಅಭಿವೃದ್ಧಿ ಯೋಜನೆ ಮತ್ತು ಮಾಲೆ ದ್ವೀಪವನ್ನು ಅದರ ಪಶ್ಚಿಮ ಉಪನಗರ ದ್ವೀಪಗಳೊಂದಿಗೆ ಸಂಪರ್ಕಿಸುವ ಹೊಸ ಸೇತುವೆ ಸೇರಿದಂತೆ ದೊಡ್ಡ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ನಿರ್ಧರಿಸಲಾಯಿತು. ಗ್ರೇಟರ್ ಮಾಲೆ ಕನೆಕ್ಟಿವಿಟಿ ಪ್ರಾಜೆಕ್ಟ್‌ಗೆ ಭಾರತ 500 ಮಿಲಿಯನ್ ಡಾಲರ್‌ ನೆರವು ನೀಡಿದೆ.

    2025 ರಲ್ಲಿ ಭಾರತವು ಮಾಲ್ಡೀವ್ಸ್‌ಗೆ ತನ್ನ ಸಹಾಯವನ್ನು 28 % ರಷ್ಟು ಹೆಚ್ಚಿಸಿತು, ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸಲು 600 ಕೋಟಿ ರೂ. ಟಿಗಳನ್ನು ಮಂಜೂರು ಮಾಡಿತ್ತು.

     

     

     

    ಭಾರತದ ಜೊತೆಯಿದ್ದರೆ ಲಾಭ ಜಾಸ್ತಿ!
    ಮಾಲ್ಡೀವ್ಸ್‌ನಲ್ಲಿ ಚೀನಾ ಬಹಳ ಹೂಡಿಕೆ ಮಾಡಿದೆ. ಮಾಲ್ಡೀವ್ಸ್‌ನ ಐದಕ್ಕೂ ಹೆಚ್ಚು ದ್ವೀಪಗಳನ್ನು ಚೀನಾದ ಕಂಪನಿಗಳು 50 ವರ್ಷಗಳಿಗೆ ಗುತ್ತಿಗೆ ಪಡೆದಿವೆ. ಮಾಲೆ ಸಮುದ್ರ ಸೇತುವೆ ಅಭಿವೃದ್ಧಿ ಯೋಜನೆಯ ವೆಚ್ಚದ 50% ರಷ್ಟು ಹಣವನ್ನು ಚೀನಾವೇ ಭರಿಸಿದೆ. ಅಷ್ಟೇ ಅಲ್ಲದೇ 50% ರಷ್ಟು ವೆಚ್ಚವನ್ನು ಸಾಲದ ರೂಪದಲ್ಲಿ ನೀಡಿದೆ. ಚೀನಾ -ಮಾಲ್ಡೀವ್ಸ್‌ ಸ್ನೇಹ ಸೇತುವೆ, ವಿಮಾನ ನಿಲ್ದಾಣ ನವೀಕರಣ, ಮನೆಗಳ ನಿರ್ಮಾಣ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳಿಗೆ ಚೀನಾ ಸರ್ಕಾರ ಬಿಲಿಯನ್‌ಗಟ್ಟಲೇ ಡಾಲರ್‌ ಹಣವನ್ನು ಹೂಡಿಕೆ ಮಾಡಿದೆ. ಮಾಲ್ಡೀವ್ಸ್‌ ಮತ್ತು ಚೀನಾದ ಸಂಬಂಧ ಈಗ ಆರಂಭವಾಗಿದ್ದಲ್ಲ. 1975 ರಿಂದಲೇ ಚೀನಾ ಮಾಲ್ಡೀವ್ಸ್‌ನಲ್ಲಿ ಹೂಡಿಕೆ ಮಾಡಲು ಆರಂಭಿಸಿದೆ.

    ಚೀನಾ ಅಭಿವೃದ್ಧಿ ಹೊಂದಿದ ದೇಶ ಹೌದು. ಆದರೆ ಬಡ ದೇಶಗಳಿಗೆ ಭಾರೀ ಪ್ರಮಾಣದ ಸಾಲ ನೀಡಿ ನಂತರ ಆ ಸಾಲವನ್ನು ತೀರಿಸಲು ಆಗದೇ ಇದ್ದಾಗ ಸಾಲ ಪಾವತಿ ಆಗದೇ ಇದ್ದಾಗ ಯೋಜನೆಯನ್ನೇ ಸಂಪೂರ್ಣ ಸ್ವಾಧೀನಪಡಿಸಿಕೊಳ್ಳುತ್ತದೆ. ಈಗಾಲೇ ಶ್ರೀಲಂಕಾದ ಹಂಬನ್‌ತೋಟ ಬಂದರನ್ನು 99 ವರ್ಷಗಳ ಕಾಲ ಚೀನಾ ಮರ್ಚಂಟ್‌ ಪೋರ್ಟ್‌ ಹೋಲ್ಡಿಂಗ್‌ಗೆ ಲೀಸ್‌ಗೆ ನೀಡಲಾಗಿದೆ. ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡ, ಮಲೇಷ್ಯಾ ಸೇರಿದಂತೆ ಹಲವು ದೇಶಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಈ ಕಾರಣಕ್ಕೆ ಚೀನಾ ಯೋಜನೆಗಳು ಡೆಟ್‌ ಟ್ರ್ಯಾಪ್‌ ಡಿಪ್ಲೊಮಸಿ ಎಂದೇ ಎಂದೇ ಕುಖ್ಯಾತಿ ಪಡೆದಿದೆ. ಇದನ್ನೂ ಓದಿ: ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ

    ಈಗ ಮಾಲ್ಡೀವ್ಸ್‌ ಸಹ ಭಾರೀ ಪ್ರಮಾಣದಲ್ಲಿ ಸಾಲ ಮಾಡಿದೆ. ಚೀನಾದ ಸಹಾಯ ಮತ್ತಷ್ಟು ಪಡೆದರೆ ನಾವು ದಿವಾಳಿಯಾಗುವುದು ಖಚಿತ ಎನ್ನುವುದು ಗೊತ್ತಾಗುತ್ತಿದೆ. ಈ ಕಾರಣಕ್ಕೆ ಈಗ ಭಾರತದಿಂದ ಮತ್ತಷ್ಟು ಸಹಾಯ ಪಡೆಯಲು ಮುಂದಾಗಿದೆ. ಭಾರತ ಇಲ್ಲಿಯವರೆಗೂ ಬೇರೆ ದೇಶದಲ್ಲಿನ ಸಮಸ್ಯೆ ಪರಿಹಾರಕ್ಕೆ ಯತ್ನಿಸಿದೆ ಹೊರತು ಕುತಂತ್ರ ಮಾಡಿಲ್ಲ. ಮಾಲ್ಡೀವ್ಸ್‌ಗೆ ಹಿಂದಿನಿಂದಲೂ ಸಹಾಯ ಮಾಡಿಕೊಂಡೇ ಬಂದಿದೆ.

    1988 ರಲ್ಲಿ ನುಸುಳುಕೋರರು ದಾಳಿ ಮಾಡಿದ್ದ ಭಾರತ ಸಹಾಯ ಮಾಡಿತ್ತು. 2004ರಲ್ಲಿ ಸುನಾಮಿ ಸಮಯದಲ್ಲಿ ಭಾರತ ಅಲ್ಲಿನ ಪ್ರಜೆಗಳನ್ನು ರಕ್ಷಿಸಿತ್ತು. ಆರೋಗ್ಯ ಸಾಮಾಗ್ರಿಗಳನ್ನು ಕಳುಹಿಸಿತ್ತು. 2014ರಲ್ಲಿ ರಾಜಧಾನಿ ಮಾಲೆಯಲ್ಲಿ ನೀರಿನ ಬಿಕ್ಟಟ್ಟು ಎದುರಾದಾಗ ನಗರಕ್ಕೆ ಭಾರತ ವಿಮಾನದ ಮೂಲಕ ನೀರಿನ ಪ್ಯಾಕೆಟ್‌ ಕಳುಹಿಸಿಕೊಟ್ಟಿತ್ತು. ಕೊರೊನಾ ಸಮಯದಲ್ಲಿ ಭಾರತ ಮಾಲ್ಡೀವ್ಸ್‌ಗೆ ಉಚಿತ ಲಸಿಕೆಯನ್ನು ಕಳುಹಿಸಿತ್ತು.

    ಭಾರತ ಮತ್ತು ಮಾಲ್ಡೀವ್ಸ್ 1981 ರಲ್ಲಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದವು. ಮಾಲ್ಡೀವ್ಸ್‌ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಿರ್ಮಾಣ ಉದ್ಯಮಕ್ಕೆ ನಿರ್ಣಾಯಕ ವಸ್ತುಗಳಾದ ನದಿ ಮರಳು ಮತ್ತು ಜಲ್ಲಿಕಲ್ಲು ರಫ್ತು ಮಾಡುತ್ತಿದೆ. ಈಗ ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಸಕ್ಕರೆ, ಅಕ್ಕಿ, ಗೋಧಿ ಹಿಟ್ಟು ಮತ್ತು ಬೇಳೆಕಾಳುಗಳ ರಫ್ತು 5% ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಭಾರತದಿಂದ ಈ ವಸ್ತುಗಳ ರಫ್ತಿನ ಮೇಲೆ ವಿಶ್ವಾದ್ಯಂತ ನಿಷೇಧದ ಹೊರತಾಗಿಯೂ ಭಾರತವು ಮಾಲ್ಡೀವ್ಸ್‌ಗೆ ಅಕ್ಕಿ, ಸಕ್ಕರೆ ಮತ್ತು ಈರುಳ್ಳಿ ರಫ್ತು ಮಾಡುವುದನ್ನು ಮುಂದುವರಿಸಿತ್ತು.

    ಮಾಲ್ಡೀವ್ಸ್‌ ಆದಾಯ ಯಾವುದು ಎಂದರೆ ಪ್ರವಾಸೋದ್ಯಮ. ದ್ವೀಪ ರಾಷ್ಟ್ರವಾಗಿರುವ ಕಾರಣ ಅಲ್ಲಿ ಕೃಷಿ, ಆಹಾರ ಉತ್ಪನ್ನಗಳನ್ನು ಬೆಳೆಯಲು ಸಾಧ್ಯವಿಲ್ಲ. ಆಹಾರ ಉತ್ಪನ್ನಗಳು ಬೇರೆ ದೇಶದಿಂದ ಆಮದಾಗಬೇಕು. ಚೀನಾದಿಂದ ಆಹಾರ ವಸ್ತುಗಳನ್ನಯ ಆಮದು ಮಾಡಿದರೆ ಮಾಲ್ಡೀವ್ಸ್‌ನಲ್ಲಿ ದರ ಭಾರೀ ಏರಿಕೆ ಆಗುತ್ತದೆ. ಇನ್ನು ಹತ್ತಿರದಲ್ಲಿರುವ ಶ್ರೀಲಂಕಾ ಇದೆ. ಆದರೆ ಅಲ್ಲಿಯೂ ಆಹಾರ ಸಮಸ್ಯೆ ಇದೆ. ಹೀಗಾಗಿ ಭಾರತದ ಸ್ನೇಹ ಅನಿವಾರ್ಯ. ತಪ್ಪು ಮಾಡಿದ ನಂತರ ಬುದ್ದಿ ಬರುತ್ತೆ ಎನ್ನುವಂತೆ ಈಗ ಭಾರತದತ್ತ ಮಾಲ್ಡೀವ್ಸ್‌ ವಾಲಿದೆ.

  • ಅಂದು ಇಂಡಿಯಾ ಔಟ್‌ – ಇಂದು ಸೇನಾ ಕಚೇರಿಯಲ್ಲೇ ದೊಡ್ಡ ಕಟೌಟ್‌ | ಇದು ಮೋದಿ ಮ್ಯಾಜಿಕ್‌

    ಅಂದು ಇಂಡಿಯಾ ಔಟ್‌ – ಇಂದು ಸೇನಾ ಕಚೇರಿಯಲ್ಲೇ ದೊಡ್ಡ ಕಟೌಟ್‌ | ಇದು ಮೋದಿ ಮ್ಯಾಜಿಕ್‌

    – ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ ಮಾಲ್ಡೀವ್ಸ್‌ ಪ್ರಧಾನಿ
    – ಭಾರತದ ವಿರುದ್ಧವೇ ಪ್ರಚಾರ ನಡೆಸಿ ಚುನಾವಣೆ ಗೆದ್ದಿದ್ದ ಮುಯಿಜು

    ಇಂಡಿಯಾ ಔಟ್‌ (India Out) ಅಭಿಯಾನ ಆರಂಭಿಸಿ ನರೇಂದ್ರ ಮೋದಿ (Narendra Modi) ವಿರುದ್ಧ ಪ್ರಚಾರ ಮಾಡಿದ್ದ ಮಾಲ್ಡೀವ್ಸ್‌ (Maldives) ಈಗ ರತ್ನಗಂಬಳಿ ಹಾಕಿ ಸ್ವಾಗತಿಸಿದೆ.

    ಪ್ರಧಾನಿ ಮೋದಿ ಅವರನ್ನು ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು (Mohamed Muizzu) ಅವರು ಮಾಲೆ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ವಿಮಾನ ನಿಲ್ದಾಣದಲ್ಲಿ ಮಕ್ಕಳು ಸಾಂಪ್ರದಾಯಿಕ ನೃತ್ಯದೊಂದಿಗೆ ಮೋದಿ ಅವರನ್ನು ಸ್ವಾಗತಿಸಿದರು.

    ಕಳೆದ ಮಾಲ್ಡೀವ್ಸ್‌ ಚುನಾವಣೆಯಲ್ಲಿ ಮುಯಿಜು ಮೋದಿ ಫೋಟೋವನ್ನು ಹಿಡಿದು ಇಂಡಿಯಾ ಔಟ್‌ ಅಭಿಯಾನವನ್ನು ನಡೆಸಿದ್ದರು. ಆದರೆ ಈಗ ಸೇನಾ ಪ್ರಧಾನ ಕಚೇರಿ ಹೊರಗಡೆ ದೊಡ್ಡ ಕಟೌಟ್‌ ಹಾಕಿ ಮೋದಿ ಅವರಿಗೆ ಮಾಲ್ಡೀವ್ಸ್‌ ಗೌರವ ನೀಡಿದೆ. ಇದನ್ನೂ ಓದಿ: ಪ್ರಧಾನಿ ಮೋದಿ, ಭಾರತದ ಜನತೆ ಬಳಿ ಕ್ಷಮೆಯಾಚಿಸಿ: ಮಾಲ್ಡೀವ್ಸ್‌ ಅಧ್ಯಕ್ಷರಿಗೆ ವಿಪಕ್ಷ ನಾಯಕರ ಒತ್ತಾಯ

    ಜುಲೈ 26 ರಂದು ದ್ವೀಪರಾಷ್ಟ್ರದ 60ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮೋದಿ ಭಾಗವಹಿಸಲಿದ್ದಾರೆ. ಹೀಗಾಗಿ ಅಧ್ಯಕ್ಷ ಮುಯಿಜು ಅವರ ವಿಶೇಷ ಆಹ್ವಾನದ ಮೇರೆಗೆ ಮೋದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಮಾಲ್ದೀವ್ಸ್‌ನಲ್ಲಿ ಭಾರತದ ಸಹಾಯದೊಂದಿಗೆ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

    ಭಾರತೀಯರ ಅಭಿಯಾನಕ್ಕೆ ಬೆಚ್ಚಿಬಿದ್ದ ಮಾಲ್ಡೀವ್ಸ್!
    ಮೊದಲಿನಿಂದಲೂ ಭಾರತ ಮತ್ತು ಮಾಲ್ಡೀವ್ಸ್‌ ಸಂಬಂಧ ಉತ್ತಮವಾಗಿತ್ತು.  ಮುಸ್ಲಿಮ್‌ ಬಹುಸಂಖ್ಯಾತರಿರುವ ಮಾಲ್ಡೀವ್ಸ್‌ನಲ್ಲಿ ಯಾರೇ ಪ್ರಧಾನಿಯಾದರೂ ಮೊದಲು ಭಾರತಕ್ಕೆ ಬರತ್ತಿದ್ದರು. ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಯಾಕೆ ನಡೆಯಿತು? ಹಿನ್ನೆಲೆ ಏನು ಎಂದು ತಿಳಿದುಕೊಳ್ಳಬೇಕಾದರೆ 15 ವರ್ಷದ ಹಿಂದೆ ಹೋಗಬೇಕು.

    2010 ಮತ್ತು 2015ರಲ್ಲಿ ಭಾರತ ಧ್ರುವ್ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್‌ಗಳನ್ನು ಮಾಲ್ಡೀವ್ಸ್‌ಗೆ ನೀಡಿತ್ತು. ದ್ವೀಪರಾಷ್ಟ್ರವಾದ ಕಾರಣ ಹುಡುಕಾಟ, ಹವಾಮಾನ ಕಣ್ಗಾವಲು ಮತ್ತು ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ದ್ವೀಪರಾಷ್ಟ್ರದ ಜನರನ್ನು ಏರ್‌ಲಿಫ್ಟ್‌ ಮಾಡಲು ಭಾರತ ಹೆಲಿಕಾಪ್ಟರ್‌ ನೀಡಿತ್ತು.

    ಮಾನವೀಯ ದೃಷ್ಟಿಯಿಂದ ಭಾರತ ಕೊಡುಗೆಯಾಗಿ ನೀಡಿದ್ದರೂ ಮಾಲ್ಡೀವ್ಸ್‌ನಲ್ಲಿ ಇದೊಂದು ವಿವಾದವಾಗಿ ಹೊರಹೊಮ್ಮಿತ್ತು. ಭಾರತ ತನ್ನ ಮಿಲಿಟರಿ ನೆಲೆಯಾಗಿ ಮಾಲ್ಡೀವ್ಸ್‌ನ್ನು ಬಳಸಲು ಮುಂದಾಗಿದೆ ಎಂದು ಅಪಪ್ರಚಾರ ಮಾಡಲಾಯಿತು. ಈ ಸಂದರ್ಭದಲ್ಲಿ ಅಲ್ಲಿದ್ದ ಮಾಲ್ಡೀವ್ಸ್‌ ಸರ್ಕಾರ ಈ ವಿಚಾರವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಯಿತು.

    2020ರಲ್ಲಿ ಇಂಡಿಯಾ ಔಟ್‌ ವಿಚಾರ ಜೋರಾಗಿ ಚರ್ಚೆ ಆಗತೊಡಗಿತು. ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರದ ಬಗ್ಗೆ ಅಪಪ್ರಚಾರ ಮಾಡಲಾಯಿತು. ಇಂಡಿಯಾ ಔಟ್‌ ಪ್ರಚಾರಕ್ಕೆ ಚೀನಾ ಹಿಂದುಗಡೆಯಿಂದ ಬೆಂಬಲ ನೀಡಿತು. ಅಂತಿಮವಾಗಿ 2023 ರ ಚುನಾವಣೆಯಲ್ಲಿ ಭಾರತದ ವಿರೋಧಿಯಾಗಿ ಮೊಹಮ್ಮದ್‌ ಮುಯಿಜು ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮುಯಿಜು ಚೀನಾ, ಟರ್ಕಿಗೆ ಭೇಟಿ ನೀಡಯವ ಮೂಲಕ ಭಾರತದ ವಿರೋಧಿ ಧೋರಣೆ ತೋರಲು ಆರಂಭಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಯಾವೊಬ್ಬ ಭಾರತೀಯ ಸೈನಿಕ ಮಾಲ್ಡೀವ್ಸ್‌ನಲ್ಲಿ ಇರಬಾರದು, ಭಾರತದ ಸೈನಿಕರು ಮಾಲ್ಡೀವ್ಸ್‌ ತೊರೆಯಬೇಕು ಎಂದು ತಾಕೀತು ಮಾಡಿದರು.

    ಕಿತ್ತಾಟ ನಡೆಯುತ್ತಿರುವ ಸಮಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಯಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಮಾಲ್ದೀವ್ಸ್‌ಗೆ ಸರಿಸಾಟಿಯಾಗಿ ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ರಧಾನಿ ಮೋದಿ ಅವರು ಅಲ್ಲಿಗೆ ಭೇಟಿ ನೀಡಿದರು ಎಂಬ ಚರ್ಚೆ ಆರಂಭವಾಯಿತು. ಪ್ರಧಾನಿ ಅವರ ಚಿತ್ರ ಹಾಗೂ ವಿಡಿಯೊಗಳು ಇದಕ್ಕೆ ಪುಷ್ಟಿ ನೀಡಿದ್ದವು. ಈ ಚಿತ್ರ ಹಾಗೂ ವಿಡಿಯೋಗಳಿಗೆ ಮಾಲ್ದೀವ್ಸ್‌ನ ಇಬ್ಬರು ಸಚಿವರು ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದರು. ಇದು ಭಾರತದಲ್ಲಿ ದೊಡ್ಡ ವಿವಾದಕ್ಕೆ ಕಾರಣ ಆಗಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಆರಂಭವಾಯಿತು. ಇದನ್ನೂ ಓದಿ: ಮೋದಿಯನ್ನು ಟೀಕಿಸಿದ ಮಾಲ್ಡೀವ್ಸ್‌ಗೆ ಶಾಕ್ ಭಾರತೀಯ ಪ್ರವಾಸಿಗರ ಸಂಖ್ಯೆ 33%ರಷ್ಟು ಕುಸಿತ

    ಅಭಿಯಾನ ಜೋರಾಗುತ್ತಿದ್ದಂತೆ ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಿರುವ ಭಾರತೀಯರ ಸಂಖ್ಯೆ ಭಾರೀ ಇಳಿಕೆಯಾಗಿದ್ದು ಲಕ್ಷದ್ವೀಪಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗತೊಡಗಿತು. ಮಾಲ್ಡೀವ್ಸ್‌ ಆದಾಯ ಯಾವುದು ಎಂದರೆ ಪ್ರವಾಸೋದ್ಯಮ. ಅದರಲ್ಲೂ ಭಾರತದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳುತ್ತಿದ್ದರು. ಯಾವಾಗ ಪ್ರವಾಸೋದ್ಯಮಕ್ಕೆ ಪೆಟ್ಟು ಬಿತ್ತೋ ಆರ್ಥಿಕತೆ ನೆಲಕಚ್ಚಲು ಆರಂಭವಾಯಿತು. ಮಾಲ್ಡೀವ್ಸ್‌ ಸರ್ಕಾರವೇ ಭಾರತದಲ್ಲಿ ಪ್ರವಾಸೋದ್ಯಮ ಪ್ರಚಾರ ಮಾಡಿದರೂ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.  ಭಾರತದ ಜೊತೆ ಸಂಬಂಧ ಹಾಳಾದರೆ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ ಎನ್ನುವುದನ್ನು ಅರಿತ ಮುಯಿಜು ಈಗ ಮೋದಿ ಅವರನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಿ ಸಂಬಂಧ ಸುಧಾರಿಸಲು ಮುಂದಾಗುತ್ತಿದ್ದಾರೆ.

  • ಇಂದಿನಿಂದ ನಾಲ್ಕು ದಿನ ಪ್ರಧಾನಿ ಮೋದಿ ವಿದೇಶ ಪ್ರವಾಸ; ಬ್ರಿಟನ್, ಮಾಲ್ಡೀವ್ಸ್‌ಗೆ ಭೇಟಿ

    ಇಂದಿನಿಂದ ನಾಲ್ಕು ದಿನ ಪ್ರಧಾನಿ ಮೋದಿ ವಿದೇಶ ಪ್ರವಾಸ; ಬ್ರಿಟನ್, ಮಾಲ್ಡೀವ್ಸ್‌ಗೆ ಭೇಟಿ

    – ವಾಣಿಜ್ಯ ಒಪ್ಪಂದ, ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಒತ್ತು

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದಿನಿಂದ ಜುಲೈ 26 ರವರೆಗೆ ವಿದೇಶ ಪ್ರವಾಸದಲ್ಲಿರಲಿದ್ದಾರೆ. ಈ ಬಾರಿ ಬ್ರಿಟನ್ (Britain) ಮತ್ತು ಮಾಲ್ಡೀವ್ಸ್‌ಗೆ (Maldives) ಭೇಟಿ ನೀಡಲಿದ್ದು, ಭೇಟಿಯಲ್ಲಿ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಅಂತಿಮ ಸ್ವರೂಪ ನೀಡುವುದು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದು ಪ್ರಮುಖ ಗುರಿಯಾಗಿದೆ.

    ಇಂದು ಮತ್ತು ನಾಳೆ ಪ್ರಧಾನಿ ಮೋದಿ ಬ್ರಿಟನ್‌ಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯಲ್ಲಿ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ (ಎಫ್‌ಟಿಎ) ಅಂತಿಮ ಸಹಿ ಹಾಕುವ ಸಾಧ್ಯತೆ ಇದೆ. ಮೂರು ವರ್ಷಗಳ ಚರ್ಚೆಯ ಬಳಿಕ ಮೇ ತಿಂಗಳಲ್ಲಿ ಒಪ್ಪಂದಕ್ಕೆ ಅಂತಿಮ ರೂಪ ನೀಡಲಾಗಿದ್ದು, ಇದು ಭಾರತದ ಶೇ.99 ರಷ್ಟು ರಫ್ತುಗಳ ಮೇಲಿನ ಸುಂಕವನ್ನು ತೆಗೆದುಹಾಕಲಿದೆ. ಇದರಿಂದ ಬ್ರಿಟಿಷ್ ಉತ್ಪನ್ನಗಳಾದ ವಿಸ್ಕಿ ಮತ್ತು ಆಟೋಮೊಬೈಲ್‌ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ ಸಿಗಲಿದೆ.‌ ಇದನ್ನೂ ಓದಿ: ದೆಹಲಿಯಲ್ಲಿ ಮಳೆ ಆರ್ಭಟ; ಪ್ರಮುಖ ರಸ್ತೆಗಳು ಜಲಾವೃತ – ಸಂಚಾರ ಅಸ್ತವ್ಯಸ್ತ

    ಎಸ್‌ & ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಪ್ರಕಾರ, ಈ ಒಪ್ಪಂದವು ಭಾರತಕ್ಕೆ ಗಣನೀಯ ಆರ್ಥಿಕ ಉತ್ತೇಜನ ನೀಡಲಿದೆ. 2024ರಲ್ಲಿ ಯುಕೆಯಿಂದ ಭಾರತಕ್ಕೆ 130 ಬಿಲಿಯನ್ ಡಾಲರ್‌ನಷ್ಟು (ಭಾರತದ ಜಿಡಿಪಿಯ 3.3%) ವಿದೇಶಿ ವಿನಿಮಯ ಹರಿವು ದಾಖಲಾಗಿದ್ದು, ಈ ಒಪ್ಪಂದದಿಂದ ಈ ಹರಿವು ಮತ್ತಷ್ಟು ಹೆಚ್ಚಲಿದೆ. ವಿಶೇಷವಾಗಿ, ಯುಕೆಯಲ್ಲಿ ಕೆಲಸ ಮಾಡುವ ಭಾರತೀಯ ಐಟಿ ವೃತ್ತಿಪರರಿಗೆ ಮೂರು ವರ್ಷಗಳವರೆಗೆ ರಾಷ್ಟ್ರೀಯ ವಿಮೆಯಿಂದ ವಿನಾಯಿತಿ ನೀಡುವ ನಿಬಂಧನೆಯು ಅವರ ಉಳಿತಾಯ ಮತ್ತು ವಿದೇಶಿ ವಿನಿಮಯ ಹರಿವನ್ನು ಹೆಚ್ಚಿಸಲಿದೆ. 2024ರಲ್ಲಿ 56.7 ಬಿಲಿಯನ್ ಡಾಲರ್‌ ಆಗಿರುವ ದ್ವಿಪಕ್ಷೀಯ ವಾಣಿಜ್ಯವನ್ನು 2030ರ ವೇಳೆಗೆ ದ್ವಿಗುಣಗೊಳಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ.

    ಬ್ರಿಟನ್ ಭೇಟಿಯ ಬಳಿಕ, ಪ್ರಧಾನಿ ಮೋದಿ ಜುಲೈ 25-26ರಂದು ಮಾಲ್ಡೀವ್ಸ್‌ಗೆ ತೆರಳಲಿದ್ದಾರೆ. ಅಲ್ಲಿ ಅವರು ಮಾಲ್ಡೀವ್ಸ್‌ನ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 1965ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ 60ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಮಾಲ್ಡೀವ್ಸ್, ಈ ಸಂದರ್ಭದಲ್ಲಿ ಮೋದಿಯವರಿಗೆ ಗೌರವಾನ್ವಿತ ಸ್ವಾಗತವನ್ನು ನೀಡಲಿದೆ. ಮಾಲ್ಡೀವ್ಸ್‌ನ ರಾಷ್ಟ್ರಪತಿ ಮೊಹಮ್ಮದ್ ಮುಯಿಝು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ಮೋದಿ, ಎರಡೂ ದೇಶಗಳ ನಡುವಿನ ಸಹಕಾರವನ್ನು ಗಾಢವಾಗಿಸುವ ಬಗ್ಗೆ ಚರ್ಚಿಸಲಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ 18 ದಿನ – ಭೂಮಿಯಲ್ಲಿ ಮತ್ತೆ ನಡೆಯುವುದನ್ನ ಕಲಿಯುತ್ತಿದ್ದಾರೆ ಶುಭಾಂಶು ಶುಕ್ಲಾ

    ಕಳೆದ ಕೆಲವು ವರ್ಷಗಳಲ್ಲಿ ಭಾರತ-ಮಾಲ್ಡೀವ್ಸ್ ಸಂಬಂಧಗಳು ಕೆಲವು ಏರಿಳಿತಗಳನ್ನು ಕಂಡಿವೆ. 2023ರಲ್ಲಿ ಮುಯಿಝು ಅವರು ‘ಇಂಡಿಯಾ ಔಟ್’ ಚುನಾವಣಾ ಪ್ರಚಾರದೊಂದಿಗೆ ಅಧಿಕಾರಕ್ಕೆ ಬಂದಿದ್ದರು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಎರಡೂ ದೇಶಗಳು ತಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಲು ಕಾರ್ಯನಿರ್ವಹಿಸಿವೆ. ಭಾರತವು ಮಾಲ್ಡೀವ್ಸ್‌ಗೆ 2024-25ರಲ್ಲಿ 470 ಕೋಟಿ ರೂ.ನಿಂದ 600 ಕೋಟಿ ರೂ.ಗೆ ಹೆಚ್ಚಳವಾದ ಲೈನ್ ಆಫ್ ಕ್ರೆಡಿಟ್ ಮತ್ತು ಕರೆನ್ಸಿ ಸ್ವಾಪ್ ಸೌಲಭ್ಯವನ್ನು ವಿಸ್ತರಿಸಿದೆ. ಇದರಿಂದ ಮಾಲ್ಡೀವ್ಸ್‌ನ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ನೆರವಾಗಿದೆ.

  • ಜು.23-26ರವರೆಗೆ ಪ್ರಧಾನಿ ಮೋದಿ ಬ್ರಿಟನ್, ಮಾಲ್ಡೀವ್ಸ್‌ಗೆ ಭೇಟಿ

    ಜು.23-26ರವರೆಗೆ ಪ್ರಧಾನಿ ಮೋದಿ ಬ್ರಿಟನ್, ಮಾಲ್ಡೀವ್ಸ್‌ಗೆ ಭೇಟಿ

    -ವಾಣಿಜ್ಯ ಒಪ್ಪಂದ, ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಒತ್ತು

    ನವದೆಹಲಿ: ಜು.23ರಿಂದ 26ರವರೆಗೆ ಪ್ರಧಾನಿ ಮೋದಿ (PM Modi) ಅವರು ವಿದೇಶ ಪ್ರವಾಸಕ್ಕೆ ತೆರಳಲಿದ್ದು, ಈ ಬಾರಿ ಬ್ರಿಟನ್ ಮತ್ತು ಮಾಲ್ಡೀವ್ಸ್‌ಗೆ ಭೇಟಿ ನೀಡಲಿದ್ದಾರೆ.

    ಈ ಭೇಟಿಯು ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಅಂತಿಮ ಸ್ವರೂಪ ನೀಡುವುದು ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಮುಖ ಗುರಿಯನ್ನು ಹೊಂದಿದೆ.ಇದನ್ನೂ ಓದಿ: ಶೂಟಿಂಗ್ ವೇಳೆ ನಟ ಶಾರುಖ್ ಖಾನ್‌ಗೆ ಗಾಯ

    ಜು.23-24ರವರೆಗೆ ಪ್ರಧಾನಿ ಮೋದಿ ಬ್ರಿಟನ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ (ಎಫ್‌ಟಿಎ) ಅಂತಿಮ ಸಹಿ ಹಾಕುವ ಸಾಧ್ಯತೆ ಇದೆ. ಮೂರು ವರ್ಷಗಳ ಚರ್ಚೆಯ ಬಳಿಕ ಮೇ ತಿಂಗಳಲ್ಲಿ ಒಪ್ಪಂದಕ್ಕೆ ಅಂತಿಮ ರೂಪ ನೀಡಲಾಗಿದ್ದು, ಇದು ಭಾರತದ ಶೇ.99ರಷ್ಟು ರಫ್ತುಗಳ ಮೇಲಿನ ಸುಂಕವನ್ನು ತೆಗೆದುಹಾಕಲಿದೆ. ಇದರಿಂದ ಬ್ರಿಟಿಷ್ ಉತ್ಪನ್ನಗಳಾದ ವಿಸ್ಕಿ ಮತ್ತು ಆಟೋಮೊಬೈಲ್‌ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ ಸಿಗಲಿದೆ.

    ಎಸ್&ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಪ್ರಕಾರ, ಈ ಒಪ್ಪಂದವು ಭಾರತಕ್ಕೆ ಗಣನೀಯ ಆರ್ಥಿಕ ಉತ್ತೇಜನ ನೀಡಲಿದೆ. 2024ರಲ್ಲಿ ಯುಕೆಯಿಂದ ಭಾರತಕ್ಕೆ 130 ಬಿಲಿಯನ್ ಡಾಲರ್‌ನಷ್ಟು (ಭಾರತದ ಜಿಡಿಪಿಯ 3.3%) ವಿದೇಶಿ ವಿನಿಮಯ ಹರಿವು ದಾಖಲಾಗಿದ್ದು, ಈ ಒಪ್ಪಂದದಿAದ ಈ ಹರಿವು ಮತ್ತಷ್ಟು ಹೆಚ್ಚಲಿದೆ. ವಿಶೇಷವಾಗಿ, ಯುಕೆಯಲ್ಲಿ ಕೆಲಸ ಮಾಡುವ ಭಾರತೀಯ ಐಟಿ ವೃತ್ತಿಪರರಿಗೆ ಮೂರು ವರ್ಷಗಳವರೆಗೆ ರಾಷ್ಟ್ರೀಯ ವಿಮೆಯಿಂದ ವಿನಾಯಿತಿ ನೀಡುವ ನಿಬಂಧನೆಯು ಅವರ ಉಳಿತಾಯ ಮತ್ತು ವಿದೇಶಿ ವಿನಿಮಯ ಹರಿವನ್ನು ಹೆಚ್ಚಿಸಲಿದೆ. 2024ರಲ್ಲಿ 56.7 ಬಿಲಿಯನ್ ಡಾಲರ್ ಆಗಿರುವ ದ್ವಿಪಕ್ಷೀಯ ವಾಣಿಜ್ಯವನ್ನು 2030ರ ವೇಳೆಗೆ ದ್ವಿಗುಣಗೊಳಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ.

    ಬ್ರಿಟನ್ ಭೇಟಿಯ ಬಳಿಕ, ಪ್ರಧಾನಮಂತ್ರಿ ಮೋದಿ ಜು.25-26ರವರೆಗೆ ಮಾಲ್ಡೀವ್ಸ್ಗೆ ತೆರಳಲಿದ್ದಾರೆ. ಈ ವೇಳೆ ಅವರು ಮಾಲ್ಡೀವ್ಸ್ನ ಸ್ವಾತಂತ್ರ‍್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 1965ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ‍್ಯ ಪಡೆದ ನಂತರ 60ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಮಾಲ್ಡೀವ್ಸ್, ಈ ಸಂದರ್ಭದಲ್ಲಿ ಮೋದಿಯವರಿಗೆ ಗೌರವಾನ್ವಿತ ಸ್ವಾಗತವನ್ನು ನೀಡಲಿದೆ. ಮಾಲ್ಡೀವ್ಸ್ನ ರಾಷ್ಟ್ರಪತಿ ಮೊಹಮ್ಮದ್ ಮುಯಿಝು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಎರಡೂ ದೇಶಗಳ ನಡುವಿನ ಸಹಕಾರವನ್ನು ಗಾಢವಾಗಿಸುವ ಬಗ್ಗೆ ಮೋದಿ ಚರ್ಚಿಸಲಿದ್ದಾರೆ.

    ಕಳೆದ ಕೆಲವು ವರ್ಷಗಳಲ್ಲಿ ಭಾರತ-ಮಾಲ್ಡೀವ್ಸ್ ಸಂಬಂಧಗಳು ಕೆಲವು ಏರಿಳಿತಗಳನ್ನು ಕಂಡಿವೆ. 2023ರಲ್ಲಿ ಮುಯಿಝು ಅವರು “ಇಂಡಿಯಾ ಔಟ್” ಚುನಾವಣಾ ಪ್ರಚಾರದೊಂದಿಗೆ ಅಧಿಕಾರಕ್ಕೆ ಬಂದಿದ್ದರು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಎರಡೂ ದೇಶಗಳು ತಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಲು ಮುಂದಾಗಿವೆ. ಇನ್ನೂ, ಭಾರತವು ಮಾಲ್ಡೀವ್ಸ್‌ಗೆ 2024-25ರಲ್ಲಿ 470 ಕೋಟಿ ರೂ.ನಿಂದ 600 ಕೋಟಿ ರೂ.ಗೆ ಹೆಚ್ಚಳವಾದ ಲೈನ್ ಆಫ್ ಕ್ರೆಡಿಟ್ ಮತ್ತು ಕರೆನ್ಸಿ ಸ್ವಾಪ್ ಸೌಲಭ್ಯವನ್ನು ವಿಸ್ತರಿಸಿದೆ. ಇದರಿಂದ ಮಾಲ್ಡೀವ್ಸ್ನ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ನೆರವಾಗಿದೆ.ಇದನ್ನೂ ಓದಿ: ಅಪ್ರಾಪ್ತನ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ – ಇಬ್ಬರು ಬಾಲಕರು ಅರೆಸ್ಟ್‌

  • ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ

    ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ

    ಭಾರತದೊಂದಿಗೆ ಸಂಘರ್ಷ ಮಾಡಿಕೊಂಡಿದ್ದ ಮಾಲ್ಡೀವ್ಸ್‌, ಬಾಲಿವುಡ್‌ ನಟಿ ಕತ್ರಿನಾ ಕೈಫ್‌ (Katrina Kaif) ಅವರನ್ನು ತನ್ನ ದೇಶದ ಜಾಗತಿಕ ಪ್ರವಾಸೋದ್ಯಮದ ರಾಯಭಾರಿಯಾಗಿ ಘೋಷಿಸಿದೆ.

    ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ್ ಕಾರ್ಪೊರೇಷನ್ (MMPRC/Visit Maldives) ಇತ್ತೀಚೆಗೆ ಈ ಘೋಷಣೆ ಮಾಡಿದೆ. ನಟಿ ಕತ್ರಿನಾ ಕೈಫ್ ಅವರನ್ನು ವಿಸಿಟ್ ಮಾಲ್ಡೀವ್ಸ್‌ನ ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ನೇಮಿಸಲಾಗಿದೆ. ಭಾರತದ ಜೊತೆ ರಾಜತಾಂತ್ರಿಕ ಸಂಬಂಧ ಸುಧಾರಣೆಗೆ ಈ ಕ್ರಮಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಘೋಷಿಸಿದ ದೀಪಿಕಾ ಪಡುಕೋಣೆ

     

    View this post on Instagram

     

    A post shared by Visit Maldives (@visitmaldives)

    ನಮ್ಮ ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ಕತ್ರಿನಾ ಅವರನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ. ಜನಪ್ರಿಯ ವ್ಯಕ್ತಿತ್ವ ಮತ್ತು ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರನ್ನು ಕಳೆದ 5 ವರ್ಷಗಳಿಂದ ಸತತ ವಿಶ್ವದ ಪ್ರಮುಖ ತಾಣವಾದ ಸನ್ನಿ ಸೈಡ್ ಆಫ್ ಲೈಫ್‌ಗೆ ಪರಿಪೂರ್ಣ ಪ್ರತಿನಿಧಿಯನ್ನಾಗಿ ಮಾಡುತ್ತದೆ. ವಿಶೇಷವಾಗಿ ನಾವು ಪ್ರಪಂಚದಾದ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ ನಮ್ಮ ‘ಸಮ್ಮರ್‌ ಸೇಲ್ಸ್‌’ ಪ್ರಚಾರವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ವಿಸಿಟ್ ಮಾಲ್ಡೀವ್ಸ್‌ನ ಸಿಇಒ ಮತ್ತು ಎಂಡಿ ಇಬ್ರಾಹಿಂ ಶಿಯುರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಮಾಲ್ಡೀವ್ಸ್ ನೀಡುವ ನೈಸರ್ಗಿಕ ಸೌಂದರ್ಯ, ರೋಮಾಂಚಕ ಸಮುದ್ರ ಜೀವಿಗಳು ಮತ್ತು ವಿಶೇಷ ಐಷಾರಾಮಿ ಅನುಭವಗಳನ್ನು ಬಯಸುವ ಹೆಚ್ಚಿನ ಪ್ರಯಾಣಿಕರನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿರುವ ‘ಸಮ್ಮರ್‌ ಸೇಲ್ಸ್‌’ ಪ್ರಾರಂಭಿಸಿದ ನಂತರ ಕೈಫ್ ಅವರನ್ನು ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ನೇಮಿಸಲಾಗಿದೆ. ಇದನ್ನೂ ಓದಿ: ನಟ ಸೂರ್ಯ ಜೊತೆಗೆ ಬಿಗ್‌ ಬಜೆಟ್‌ ಸಿನಿಮಾಗೆ ಕಮಲ್‌ ಪ್ಲ್ಯಾನ್‌

    ಸನ್ನಿ ಸೈಡ್ ಆಫ್ ಲೈಫ್‌ನ ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ನೇಮಕವಾಗಿರುವ ಬಗ್ಗೆ ಮಾತನಾಡಿದ ಕತ್ರಿನಾ, ಮಾಲ್ಡೀವ್ಸ್ ಐಷಾರಾಮಿ ಮತ್ತು ನೈಸರ್ಗಿಕ ಸೌಂದರ್ಯದ ಪರಾಕಾಷ್ಠೆಯನ್ನು ಪ್ರತಿನಿಧಿಸುತ್ತದೆ. ಸೊಬಗು ಶಾಂತಿಯನ್ನು ಪೂರೈಸುವ ಸ್ಥಳ. ಸನ್ನಿ ಸೈಡ್ ಆಫ್ ಲೈಫ್‌ನ ಪ್ರತಿನಿಧಿಯಾಗಿ ಆಯ್ಕೆಯಾಗುವುದು ಒಂದು ಗೌರವ. ಜಾಗತಿಕ ಪ್ರೇಕ್ಷಕರಿಗೆ ಅತ್ಯುತ್ತಮ ಪ್ರಯಾಣ ಅನುಭವ ನೀಡುವ ಮತ್ತು ಪ್ರಪಂಚದಾದ್ಯಂತ ಜನರು ಈ ಅಸಾಧಾರಣ ತಾಣದ ವಿಶಿಷ್ಟ ಮೋಡಿ ಮತ್ತು ವಿಶ್ವ ದರ್ಜೆಯ ಕೊಡುಗೆಗಳನ್ನು ಸ್ವೀಕರಿಸಲು ಸಹಾಯ ಮಾಡಲು ನಾನು ಉತ್ಸುಕಳಾಗಿದ್ದೇನೆ ಎಂದು ತಿಳಿಸಿದ್ದಾರೆ.

    ಪ್ರಧಾನಿ ಮೋದಿ ಅವರ ಮಾಲ್ಡೀವ್ಸ್‌ ಪ್ರವಾಸಕ್ಕೂ ಮುನ್ನ ಈ ಘೋಷಣೆ ಹೊರಬಿದ್ದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ದೇಶಕ್ಕೆ ಭೇಟಿ ನೀಡಲಿದ್ದಾರೆ.

  • Budget 2025| ಕಿತ್ತಾಟ ನಡೆಸಿದ್ರೂ ಮಾಲ್ಡೀವ್ಸ್‌ಗೆ ಅನುದಾನ ಹೆಚ್ಚಳ,ಬಾಂಗ್ಲಾಗೂ ಸಹಾಯ- ಯಾವ ದೇಶಕ್ಕೆ ಎಷ್ಟು ಕೋಟಿ?

    Budget 2025| ಕಿತ್ತಾಟ ನಡೆಸಿದ್ರೂ ಮಾಲ್ಡೀವ್ಸ್‌ಗೆ ಅನುದಾನ ಹೆಚ್ಚಳ,ಬಾಂಗ್ಲಾಗೂ ಸಹಾಯ- ಯಾವ ದೇಶಕ್ಕೆ ಎಷ್ಟು ಕೋಟಿ?

    ನವದೆಹಲಿ: ತನ್ನ ಜೊತೆ ಕಿತ್ತಾಟ ನಡೆಸಿದರೂ ಬಾಂಗ್ಲಾದೇಶ (Bangladesh), ಮಾಲ್ಡೀವ್ಸ್‌ಗೆ (Maldives) ಭಾರತ ಅನುದಾನ ನೀಡುವುದನ್ನು ಮುಂದುವರಿಸಿದೆ.

    ನೆರೆಹೊರೆಯವರಿಗೆ ಮೊದಲ ಆದ್ಯತೆ ಎಂಬ ನೀತಿಯನ್ನು ಅಳವಡಿಸಿರುವ ಭಾರತ ತನ್ನ ಬಜೆಟ್‌ನಲ್ಲಿ (Union Budget)  ನೆರೆಯ ದೇಶಗಳಿಗೆ ಪ್ರತಿ ವರ್ಷ ಅನುದಾನವನ್ನು ನೀಡುತ್ತಾ ಬಂದಿದೆ.

    ಪಟ್ಟಿಯಲ್ಲಿ ಭೂತನ್‌ ಮೊದಲ ಸ್ಥಾನದಲ್ಲಿದ್ದು 2025-26ರ ಬಜೆಟ್‌ನಲ್ಲಿ 2,150 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಕಳೆದ ವರ್ಷದ ಅನುದಾನಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಕಳೆದ ಬಾರಿ 2,543 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಇದನ್ನೂ ಓದಿ: Union Budget 2025: ಯಾವುದು ಅಗ್ಗ, ಯಾವುದು ದುಬಾರಿ?

    ಚೀನಾದ ಪರ ವಾಲಿರುವ ಮಾಲ್ಡೀವ್ಸ್‌ಗೆ ಅನುದಾನ ಏರಿಕೆಯಾಗಿದೆ. ಕಳೆದ ಬಾರಿ 470 ಕೋಟಿ ರೂ. ನೀಡಿದ್ದರೆ ಈ ಬಾರಿ 600 ಕೋಟಿ ರೂ. ನೀಡಲಾಗಿದೆ.

    ಅಫ್ಘಾನಿಸ್ತಾನಕ್ಕೆ ನೀಡುವ ಅನುದಾನ ಡಬಲ್‌ ಆಗಿದೆ. ಕಳೆದ ಬಾರಿ 50 ಕೋಟಿ ರೂ. ನೀಡಿದ್ದರೆ ಈ ಬಾರಿ 100 ಕೋಟಿ ರೂ.ಗೆ ಏರಿಕೆಯಾಗಿದೆ. 2 ವರ್ಷದ ಹಿಂದೆ 207 ಕೋಟಿ ರೂ. ಅನುದಾನ ನೀಡಲಾಗಿತ್ತು.

    ಮ್ಯಾನ್ಮರ್‌ಗೆ ಕಳೆದ ಬಾರಿ 400 ಕೋಟಿ ರೂ. ನೀಡಲಾಗಿತ್ತು. ಈ ಬಾರಿ 350 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ.  ಇದನ್ನೂ ಓದಿ: Union Budget 2025 | ಯಾವ ವರ್ಷ ಎಷ್ಟು ಲಕ್ಷ ತೆರಿಗೆ ವಿನಾಯಿತಿ ಸಿಕ್ಕಿತ್ತು? – ಇಲ್ಲಿದೆ ಪೂರ್ಣ ವಿವರ

    ಬಾಂಗ್ಲಾ ಸರ್ಕಾರದ ಜೊತೆ ಭಿನ್ನಮತ ಇದ್ದರೂ ಬಜೆಟ್‌ನಲ್ಲಿ ಅನುದಾನ ನಿಲ್ಲಿಸಿಲ್ಲ. ಬಾಂಗ್ಲಾದೇಶಕ್ಕೆ 120 ಕೋಟಿ ರೂ. ನೇಪಾಳ 700 ಕೋಟಿ ರೂ., ಶ್ರೀಲಂಕಾಗೆ 300 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕಳೆದ ಬಾರಿ ಇಷ್ಟೇ ಪ್ರಮಾಣದ ಹಣವನ್ನು ಹಂಚಿಕೆ ಮಾಡಲಾಗಿತ್ತು.

    ಇರಾನ್‌ನಲ್ಲಿ ನಿರ್ಮಾಣವಾಗುತ್ತಿರುವ ಚಬಹಾರ್‌  ಬಂದರು ಕಾಮಗಾರಿಗೆ ಕಳೆದ ವರ್ಷದಂತೆ 100 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

    ಆಫ್ರಿಕಾದ ದೇಶಗಳಿಗೆ ಕಳೆದ ವರ್ಷ 200 ಕೋಟಿ ರೂ. ನೀಡಲಾಗಿತ್ತು. ಈ ಬಜೆಟ್‌ನಲ್ಲಿ 225 ಕೋಟಿ ರೂ.ಗೆ ಏರಿಕೆಯಾಗಿದೆ. 2023 ರಲ್ಲಿ ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಆಫ್ರಿಕನ್‌ ಒಕ್ಕೂಟ ಜಿ20 ಗ್ರೂಪಿಗೆ ಸೇರ್ಪಡೆಯಾಗಿತ್ತು.

  • ಬೆಂಗಳೂರಿಗೆ ಆಗಮಿಸಿದ ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಆತ್ಮೀಯ ಸ್ವಾಗತ

    ಬೆಂಗಳೂರಿಗೆ ಆಗಮಿಸಿದ ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಆತ್ಮೀಯ ಸ್ವಾಗತ

    ಬೆಂಗಳೂರು: ಸದ್ಯ ಭಾರತದಲ್ಲಿರುವ ಮಾಲ್ಡೀವ್ಸ್‌ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು (Mohamed Muizzu) ಮತ್ತು ಪ್ರಥಮ ಮಹಿಳೆ ಸಾಜಿದಾ ಮೊಹಮ್ಮದ್ ಅವರಿಂದು ಬೆಂಗಳೂರಿಗೆ ಆಗಮಿಸಿದ್ದಾರೆ. ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದಾರೆ.

    ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ (Bengaluru Airport) ಅವರನ್ನ ಸಚಿವ ಡಾ.ಎಂ.ಸಿ ಸುಧಾಕರ್ (MC Sudhakar) ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಬಳಿಕ ಖಾಸಗಿ ಹೊಟೇಲಿನಲ್ಲಿ ವಿಶ್ರಾಂತಿಗೆ ತೆರಳಿದ ಮಾಲ್ಡೀವ್ಸ್ ಅಧ್ಯಕ್ಷರು, ರಾಜ್ಯಪಾಲರ ಆಹ್ವಾನ ಮೇರೆಗೆ ರಾಜಭವನ ಭೇಟಿ ನೀಡಲಿದ್ದಾರೆ.

    ಕಳೆದ ನವೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮಾಲ್ಡೀವ್ಸ್ ಅಧ್ಯಕ್ಷ ಮೊಹ್ಮದ್ ಮುಯಿಝು ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಇದೇ ಅಕ್ಟೋಬರ್‌ 7ರಂದು ಅವರನ್ನ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಭಾರತವು ಯಾವಾಗಲೂ ಮಾಲ್ಡೀವ್ಸ್‌ಗೆ ಮೊದಲ ಆದ್ಯತೆ ನೀಡುತ್ತದೆ ಎಂದು ಭರವಸೆ ನೀಡಿದ್ದರು. ಇದೇ ವೇಳೆ ಮಾಲ್ಡೀವ್ಸ್‌ಗೆ ಭೇಟಿ ನೀಡುವಂತೆ ಮುಯಿಝು ಪ್ರಧಾನಿ ಮೋದಿಗೆ ಆಹ್ವಾನ ನೀಡಿದರು. ನಿನ್ನೆ ತಾಜ್‌ ಮಹಲ್‌ಗೆ ಭೇಟಿ ನೀಡಿದ್ದರು.

  • ಮಾಲ್ಡೀವ್ಸ್ ಭಾರತದ ನೆರೆಹೊರೆಯ ಆಪ್ತ ಸ್ನೇಹಿತ, ಮೊದಲ ಆದ್ಯತೆಯಲ್ಲಿ ಸಹಾಯ: ಮೋದಿ ಭರವಸೆ

    ಮಾಲ್ಡೀವ್ಸ್ ಭಾರತದ ನೆರೆಹೊರೆಯ ಆಪ್ತ ಸ್ನೇಹಿತ, ಮೊದಲ ಆದ್ಯತೆಯಲ್ಲಿ ಸಹಾಯ: ಮೋದಿ ಭರವಸೆ

    ನವದೆಹಲಿ: ಭಾರತ (India) ಮತ್ತು ಮಾಲ್ಡೀವ್ಸ್ (Maldives) ಸಂಬಂಧಗಳು ಶತಮಾನಗಳಷ್ಟು ಹಳೆಯದು. ಭಾರತವು ಮಾಲ್ಡೀವ್ಸ್ ಅನ್ನು ನೆರೆಹೊರೆ ಮತ್ತು ಆಪ್ತ ಸ್ನೇಹಿತ ಎಂದು ಭಾವಿಸುತ್ತದೆ. ನಮ್ಮ ನೆರೆಹೊರೆ ನೀತಿ ಮತ್ತು ಸಾಗರ ದೃಷ್ಟಿಯಲ್ಲಿ ಮಾಲ್ಡೀವ್ಸ್‌ಗೆ ಪ್ರಮುಖ ಸ್ಥಾನ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

    ಕಳೆದ ನವೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮಾಲ್ಡೀವ್ಸ್ ಅಧ್ಯಕ್ಷ ಮೊಹ್ಮದ್ ಮುಯಿಝು (Mohamed Muizzu) ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಪ್ರಧಾನಿ ಮೋದಿ ಅವರನ್ನು ದೆಹಲಿಯ ಹೈದ್ರಬಾದ್ ಹೌಸ್‌ನಲ್ಲಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಭಾರತವು ಯಾವಾಗಲೂ ಮಾಲ್ಡೀವ್ಸ್‌ಗೆ ಮೊದಲ ಆದ್ಯತೆ ನೀಡುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: Kolar | ಪತಿಯಿಂದ ವರದಕ್ಷಿಣೆ ಕಿರುಕುಳ – ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

    ಭಾರತ – ಮಾಲ್ಡೀವ್ಸ್ ನಡುವೆ ಸಂಬಂಧಗಳು ಹದಗೆಡುತ್ತಿದ್ದು, ಭಾರತೀಯ ಸೇನೆಯನ್ನು ವಾಪಸ್ ಕಳುಹಿಸಿದ ಬಳಿಕ ಚೀನಾ ಜೊತೆಗೆ ಹೆಚ್ಚು ಸಂಬಂಧ ಹೊಂದಿತ್ತು. ಈ ನಡುವೆ ಮಾಲ್ಡೀವ್ಸ್‌ಗೆ ಬೆಂಬಲ ನೀಡುವ ಭಾರತದ ಪಾತ್ರವನ್ನು ಮೋದಿ ಒತ್ತಿ ಹೇಳಿದರು. ಇದನ್ನೂ ಓದಿ: ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರು ಸಿಎಂ ಬದಲಾವಣೆ ಅವಸರದಲ್ಲಿದ್ದಾರೆ- ಬಸವರಾಜ ಬೊಮ್ಮಾಯಿ

    ಭಾರತ-ಮಾಲ್ಡೀವ್ಸ್ ಸಂಬಂಧ ಪ್ರಮುಖವಾಗಿದೆ. ನಾವು ಯಾವಾಗಲೂ ಮಾಲ್ಡೀವ್ಸ್ ಜನರ ಆದ್ಯತೆಗಳಿಗೆ ಆದ್ಯತೆ ನೀಡುತ್ತೇವೆ ಎಂದು ಮೋದಿ ಹೇಳಿದರು. ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಲು ಮಾಲ್ಡೀವ್ಸ್‌ಗೆ ನಿರ್ಣಾಯಕ ಹಣಕಾಸಿನ ನೆರವು ನೀಡುವ ಭಾರತದ ನಿರ್ಧಾರವನ್ನು ಇದೇ ವೇಳೆ ಮೋದಿ ಘೋಷಿಸಿದರು. ಇದನ್ನೂ ಓದಿ: ಕ್ಯಾಬಿನೆಟ್‌ನಲ್ಲಿ ಜಾತಿಗಣತಿ ವರದಿ ಬಗ್ಗೆ ಅಭಿಪ್ರಾಯ ಹೇಳ್ತೀನಿ – ಈಶ್ವರ್ ಖಂಡ್ರೆ

    ಹಣಕಾಸಿನ ಬೆಂಬಲಕ್ಕಾಗಿ ಪ್ರಧಾನಿ ಮೋದಿಯವರಿಗೆ ಅಧ್ಯಕ್ಷ ಮುಯಿಝು ಅವರು ಧನ್ಯವಾದ ಹೇಳಿದರು. ಭಾರತವು ದ್ವೀಪ ರಾಷ್ಟ್ರದ ಅಗತ್ಯದ ಸಮಯದಲ್ಲಿ ಯಾವಾಗಲೂ ಜೊತೆಯಲ್ಲಿ ನಿಂತಿದೆ ಎಂದು ಹೇಳಿದರು. ಮಾಲ್ಡೀವ್ಸ್‌ಗೆ ಭೇಟಿ ನೀಡುವಂತೆ ಅವರು ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದರು. ಇದನ್ನೂ ಓದಿ: ಸಿಎಂ ಹುದ್ದೆ ಕನಸು ಕಂಡರೆ ಹೇಳುವೆ, ಸದ್ಯಕ್ಕೆ ಬೇಡ – ಸಿಎಂ ರಾಜೀನಾಮೆ ಕೊಡುವ ಕಾಲ ಸನ್ನಿಹಿತ: ವಿಜಯೇಂದ್ರ

    ಮಾಲ್ಡೀವ್ಸ್‌ಗೆ ಭಾರತವು ಅತಿದೊಡ್ಡ ಪ್ರವಾಸೋದ್ಯಮ ಮಾರುಕಟ್ಟೆಯಾಗಿದೆ. ಹೆಚ್ಚಿನ ಭಾರತೀಯ ಪ್ರವಾಸಿಗರನ್ನು ಸ್ವಾಗತಿಸಲು ನಾನು ಬಯಸುತ್ತೇವೆ. ಭಾರತದ ಆರ್ಥಿಕ ಸಹಕಾರವು ಮೂಲಸೌಕರ್ಯ ಅಭಿವೃದ್ಧಿಗೂ ವಿಸ್ತರಿಸುತ್ತದೆ ಎಂದು ಮುಯಿಝು ಹೇಳಿದರು. ಇದನ್ನೂ ಓದಿ: ಪಶ್ಚಿಮ ಬಂಗಾಳ| ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ- 7 ಮಂದಿ ಸಾವು, ಹಲವರಿಗೆ ಗಾಯ

    ಉಭಯ ನಾಯಕರ ಭೇಟಿ ವೇಳೆ ಪಿಎಂ ಮೋದಿ ಮತ್ತು ಮುಯಿಝು ಅವರು ಭಾರತದ ಬೆಂಬಲಿತ ಯೋಜನೆಯಾದ ಮರು ಅಭಿವೃದ್ಧಿಪಡಿಸಿದ ಹನಿಮಾಧು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವರ್ಚ್ಯುವಲ್ ಆಗಿ ಉದ್ಘಾಟಿಸಿದರು. ಬಳಿಕ ಭಾರತವು ಮಾಲ್ಡೀವ್ಸ್‌ನಲ್ಲಿ ರುಪೇ ಕಾರ್ಡ್ ಅನ್ನು ಪರಿಚಯಿಸಿತು. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಕೇಳೋ ಮೊದಲು ವಿಜಯೇಂದ್ರ ರಾಜೀನಾಮೆ ನೀಡಲಿ: ಈಶ್ವರ್ ಖಂಡ್ರೆ

    ಬೆಂಗಳೂರಿನಲ್ಲಿ ಮಾಲ್ಡೀವ್ಸ್ ದೂತಾವಾಸವನ್ನು ತೆರೆಯುವ ಕುರಿತು ಚರ್ಚೆ ನಡೆದಿದೆ. ಭಾರತವು ತನ್ನ ಬೆಂಬಲದೊಂದಿಗೆ ನಿರ್ಮಿಸಲಾದ 700 ಸಾಮಾಜಿಕ ವಸತಿ ಘಟಕಗಳನ್ನು ಮಾಲ್ಡೀವ್ಸ್‌ಗೆ ಹಸ್ತಾಂತರಿಸುವ ಬಗ್ಗೆ, ಮಾಲ್ಡೀವಿಯನ್ ಸರ್ಕಾರಕ್ಕೆ ಅಗತ್ಯವಾದ ಬಜೆಟ್ ಪರಿಹಾರವನ್ನು ಒದಗಿಸಲು ಭಾರತವು ಮತ್ತೊಂದು ವರ್ಷಕ್ಕೆ 50 ಮಿಲಿಯನ್ ನೀಡಲು ಮತ್ತು ಭಾರತ ಮತ್ತು ಮಾಲ್ಡೀವ್ಸ್ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ಆರಂಭವಾಗಿದೆ. ಇದನ್ನೂ ಓದಿ: ವಿಜಯೇಂದ್ರ ಏನು ಹೈಕಮಾಂಡಾ? – ಸಿಎಂ ರಾಜೀನಾಮೆ ಹೇಳಿಕೆಗೆ ಜಮೀರ್ ತಿರುಗೇಟು

  • ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆಯೂ ಮೋದಿ ಪ್ರಮಾಣವಚನಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಆಹ್ವಾನ

    ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆಯೂ ಮೋದಿ ಪ್ರಮಾಣವಚನಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಆಹ್ವಾನ

    ಮಾಲೆ: ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೂ ನರೇಂದ್ರ ಮೋದಿ (Narendra Modi) ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮಾಲ್ಡೀವ್ಸ್‌ (Maldives) ಅಧ್ಯಕ್ಷ ಮೊಹಮ್ಮದ್‌ ಮುಯಿಝು (Mohamed Muizzu) ಅವರನ್ನು ಆಹ್ವಾನಿಸಲಾಗಿದೆ.

    ಭಾರತ ಸರ್ಕಾರದ ಮಂತ್ರಿಗಳ ಪರಿಷತ್‌ ನೀಡಿದ ಆಹ್ವಾನವನ್ನು ಸ್ವೀಕರಿಸಲಾಗಿದೆ ಎಂದು ಮಾಲ್ಡೀವ್ಸ್‌ ಅಧ್ಯಕ್ಷರ ಕಚೇರಿ ಪ್ರಕಟಣೆ ಮೂಲಕ ತಿಳಿಸಿದೆ. ಭಾರತದ ಹೈಯರ್‌ ಕಮಿಷನರ್‌ ಮುನು ಮಹಾವರ್‌ ಅವರು ಮಾಲ್ಡೀವ್ಸ್‌ ಅಧ್ಯಕ್ಷರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ: ನಾವು ಶಿಸ್ತುಬದ್ಧವಾಗಿ, ಒಗ್ಗಟ್ಟಿನಿಂದ ಇರಬೇಕು- CWC ಸಭೆಯಲ್ಲಿ ಖರ್ಗೆ ಮಾತು

    ಆಹ್ವಾನ ನೀಡಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ ಅಧ್ಯಕ್ಷ ಮುಯಿಝು, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಹಾಜರಾಗಿ ಮೋದಿ ಅವರಿಗೆ ಗೌರವ ನೀಡಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

    ಭಾರತದೊಂದಿಗಿನ ನಿಕಟ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಪ್ರಧಾನ ಮಂತ್ರಿಯೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಮಾಲ್ಡೀವ್ಸ್-ಭಾರತದ ಸಂಬಂಧಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ಈ ಭೇಟಿಯಿಂದ ಸಾಬೀತಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಪ್ರಮಾಣವಚನಕ್ಕೆ ವಿದೇಶಿ ಗಣ್ಯರು, ಪೌರಕಾರ್ಮಿಕರು- ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ?

    ಆಮಂತ್ರಣವನ್ನು ಖುದ್ದಾಗಿ ತಲುಪಿಸಿದ್ದಕ್ಕಾಗಿ ಮಾಲ್ಡೀವ್ಸ್‌ ಅಧ್ಯಕ್ಷರು, ಹೈಕಮಿಷನರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸಂಸತ್ತಿನ ಚುನಾವಣೆಯಲ್ಲಿ ವಿಜಯಶಾಲಿಯಾಗುವುದರೊಂದಿಗೆ ಪಿಎಂ ಮೋದಿ ಅವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಲು ಸಿದ್ಧರಾಗಿದ್ದಾರೆ.

    ಪ್ರಧಾನಿ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಮಾಲ್ಡೀವ್ಸ್‌ ಮತ್ತು ಭಾರತದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರಿತು. ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದ ಭಾರತೀಯ ಸೇನೆ ದೇಶಕ್ಕೆ ಮರಳುವಂತಾಯಿತು. ಉಭಯ ದೇಶಗಳ ಸಂಬಂಧ ಹದಗೆಟ್ಟಾಗಿನಿಂದ ಮಾಲ್ಡೀವ್ಸ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ದ್ವೀಪ ರಾಷ್ಟ್ರಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದವರಲ್ಲಿ ಭಾರತೀಯರೇ ಹೆಚ್ಚಿದ್ದರು. ಇದು ಆ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಿತು. ಇದನ್ನೂ ಓದಿ: ಜೂ.9ರ ಸಂಜೆ 7:15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿಯಾಗಿ ಮೋದಿ ಪ್ರಮಾಣವಚನ