Tag: Malaria

  • ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸಲು ಈ ಮುನ್ನೆಚ್ಚರಿಕೆಗಳಿರಲಿ

    ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸಲು ಈ ಮುನ್ನೆಚ್ಚರಿಕೆಗಳಿರಲಿ

    ಪ್ರಪಂಚದಾದ್ಯಂತ ಮಲೇರಿಯಾವನ್ನು (Malaria) ನಿಯಂತ್ರಿಸಲು ಮತ್ತು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿವರ್ಷ ಏಪ್ರಿಲ್ 25 ರಂದು ‘ವಿಶ್ವ ಮಲೇರಿಯಾ ದಿನ’ವನ್ನು (World Malaria Day) ಆಚರಿಸಲಾಗುತ್ತದೆ. ಪ್ರಸಕ್ತ ವರ್ಷ ಈ ದಿನವನ್ನು ‘ಜಗತ್ತಿನಾದ್ಯಂತ ಮಲೇರಿಯಾ ವಿರುದ್ಧದ ಹೋರಾಟಕ್ಕೆ ಒತ್ತು’ ಎಂಬ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಲೇರಿಯಾ ಕಾಯಿಲೆಯು ಮಕ್ಕಳ ಮೇಲೆ ಬೀರುವ ಪರಿಣಾಮ ಏನು? ಪೋಷಕರು ತೆಗೆದುಕೊಳ್ಳಬೇಕಾದ ಕ್ರಮಗಳೇನು? ಈ ಬಗ್ಗೆ ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಮಕ್ಕಳ ತಜ್ಞರಾದ ಶಿಲ್ಪಾ ಪಾಂಡ್ಯ (Dr.Shilpa Pandya) ಅವರು ವಿವರಿಸಿದ್ದಾರೆ.

    ಪ್ರಶ್ನೆ: ಮಲೇರಿಯಾ ಹರಡುವುದು ಹೇಗೆ?
    ಉತ್ತರ: ಮಲೇರಿಯಾವು ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಪ್ಲಾಸ್ಮೋಡಿಯಂ ಫಾಲ್ಸಿಪಾರಮ್‌ ಎಂಬುದು ಇದಕ್ಕೆ ಕಾರಣವಾಗಿದೆ. ಈ ಕಾಯಿಲೆಯು ಮಕ್ಕಳು ಮತ್ತು ವಯಸ್ಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ವ್ಯಕ್ತಿಯು ಸೊಳ್ಳೆಯ ಕಡಿತಕ್ಕೆ ಒಳಗಾದ ನಂತರ ಮಲೇರಿಯಾದ ಪರಾವಲಂಬಿಗಳು ಆ ವ್ಯಕ್ತಿಯ ಯಕೃತ್ ಅನ್ನು ಸೇರಿಕೊಂಡು ಯಕೃತ್ತಿನ ಜೀವಕೋಶಗಳಲ್ಲಿ ದ್ವಿಗುಣಗೊಂಡು ಕೆಂಪು ರಕ್ತ ಕಣಗಳನ್ನು ಸೋಂಕಿಗೆ ಒಳಪಡಿಸುತ್ತವೆ. ಜ್ವರ, ತಲೆನೋವು, ವಾಕರಿಕೆ, ವಾಂತಿ ಮತ್ತು ಕೆಲವೊಮ್ಮೆ ಅತಿಸಾರ ಬೇಧಿಯಾಗುವುದು ಈ ಕಾಯಿಲೆಯ ಲಕ್ಷಣಗಳು. ಕಾಯಿಲೆ ಅತಿಯಾದಾಗ ಅಂಗಾಂಗ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಕಾಲಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಗತ್ಯ ಎನ್ನುತ್ತಾರೆ ಮಕ್ಕಳ ತಜ್ಞರಾದ ಶಿಲ್ಪಾ ಪಾಂಡ್ಯ. ಇದನ್ನೂ ಓದಿ: ಚುನಾವಣೆ ಪ್ರಕ್ರಿಯೆ ನಿಯಂತ್ರಿಸುವ ಅಧಿಕಾರ ತಮಗಿಲ್ಲ: ಇವಿಎಂ-ವಿವಿಪ್ಯಾಟ್ ತಾಳೆ ಕೇಸಲ್ಲಿ ತೀರ್ಪು ಕಾಯ್ದಿರಿಸಿದ ಸುಪ್ರೀಂ

    ಪ್ರಶ್ನೆ: ಮಕ್ಕಳಲ್ಲಿ ಕಂಡುಬರುವ ಮಲೇರಿಯಾದ ಸಾಮಾನ್ಯ ಲಕ್ಷಣಗಳೇನು?
    ಉತ್ತರ: ಮಲೇರಿಯಾ ಸೋಂಕಿತ ಮಕ್ಕಳು ಸಾಮಾನ್ಯವಾಗಿ ಜ್ವರದಿಂದ ಬಳಲುತ್ತಿರುತ್ತಾರೆ. ಅದಲ್ಲದೆ ಶೀತ, ತಲೆನೋವು, ವಾಕರಿಕೆ, ವಾಂತಿ ಮತ್ತು ಭೇದಿ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಲೇರಿಯಾ ಹೊಂದಿರುವ ಎಲ್ಲಾ ಮಕ್ಕಳು ಜ್ವರದ ಜೊತೆಗೆ ಶೀತವನ್ನು ಹೊಂದಿರುವುದಿಲ್ಲ. ಆದರೆ ಅಸ್ವಸ್ಥತೆ ಅಥವಾ ಆಯಾಸದಂತಹ ಇತರ ರೋಗಲಕ್ಷಣಗಳನ್ನೂ ಹೊಂದಿರಬಹುದು.

    ಪ್ರಶ್ನೆ: ಮಲೇರಿಯಾ ಪೀಡಿತ ಮಗುವಿನ ಆರೈಕೆ ಹೇಗಿರಬೇಕು?
    ಉತ್ತರ: ಮಲೇರಿಯಾ ಪೀಡಿತ ಮಗುವಿನ ಆರೈಕೆಯಲ್ಲಿ ಪೋಷಕರು ಪ್ರಮುಖ ಪಾತ್ರವಹಿಸುತ್ತಾರೆ. ಕಾಯಿಲೆಯಿಂದ ಕೂಡಿರುವ ಮಗುವಿಗೆ ಪ್ಯಾರಾಸಿಟಮಾಲ್‌ನಂತಹ ಜ್ವರ ನಿಯಂತ್ರಿಸುವ ಔಷಧಗಳನ್ನು ನೀಡುವುದು, ಮಗುವಿಗೆ ಸಾಕಷ್ಟು ವಿಶ್ರಾಂತಿ ನೀಡುವುದು ಮತ್ತು ಮಗುವಿನ ದೇಹ ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯಲು ಅವರನ್ನು ಪ್ರೋತ್ಸಾಹಿಸುವುದರ ಜೊತೆಗೆ ಉತ್ತಮ ಆರೈಕೆಯನ್ನು ಒದಗಿಸುವುದು ಅತ್ಯಗತ್ಯ. ಮುಖ್ಯವಾಗಿ ವೈದ್ಯರ ಸಲಹೆಯ ಮೇರೆಗೆ ಮಗುವನ್ನು ಆರೈಕೆ ಮಾಡುವ ಮೂಲಕ ಸೋಂಕು ಮುಕ್ತವಾಗುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ.

    ಪ್ರಶ್ನೆ: ಮಲೇರಿಯಾ ಪೀಡಿತ ಮಗುವಿನಲ್ಲಿ ಕಂಡುಬರುವ ಅಪಾಯಕಾರಿ ಚಿಹ್ನೆಗಳು ಯಾವುವು?
    ಉತ್ತರ: ಮಲೇರಿಯಾದಿಂದ ಬಳಲುತ್ತಿರುವ ಮಗುವು ಕಾಮಾಲೆ (ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು), ರೋಗಗ್ರಸ್ತವಾಗುವಿಕೆ, ಮೂತ್ರ ಅಥವಾ ಮಲದಲ್ಲಿ ರಕ್ತ ಕಂಡುಬರುವುದು ಅಥವಾ ಸೂಕ್ತ ಔಷಧಿಗಳನ್ನು ತೆಗೆದುಕೊಂಡರೂ ನಿರಂತರವಾಗಿ ಜ್ವರ ಕಾಣಿಸಿಕೊಳ್ಳುವಂತಹ ಅಪಾಯಕಾರಿ ಚಿಹ್ನೆಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಸಲಹೆ ತೆಗೆದುಕೊಳ್ಳುವುದು ಪೋಷಕರ ಕರ್ತವ್ಯ. ಇದನ್ನೂ ಓದಿ: ಪವನ್ ಕಲ್ಯಾಣ್ ಆಸ್ತಿ ಇಷ್ಟೇನಾ?: ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರ

    ಪ್ರಶ್ನೆ: ಮಲೇರಿಯಾದ ಬಗೆಗೆ ಪೋಷಕರಲ್ಲಿ ಇರುವ ತಪ್ಪುಕಲ್ಪನೆಗಳೇನು?
    ಉತ್ತರ: ಮಲೇರಿಯಾ ಕಾಯಿಲೆಯ ಬಗೆಗೆ ಪೋಷಕರಲ್ಲಿ ಹಲವಾರು ತಪ್ಪುಕಲ್ಪನೆಗಳಿವೆ. ಅವುಗಳ ಕುರಿತಾಗಿ ಮಕ್ಕಳ ತಜ್ಞೆ ಶಿಲ್ಪಾ ಪಾಂಡ್ಯ ಅವರು ಹೇಳುತ್ತಾರೆ.

    ತಪ್ಪುಕಲ್ಪನೆ: ಮಲೇರಿಯಾವು ಕಲುಷಿತ ನೀರಿನ ಸೇವನೆ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುತ್ತದೆ.
    ಸತ್ಯಾಂಶ: ಮಲೇರಿಯಾವು ಸೊಳ್ಳೆ ಕಡಿತ ಅಥವಾ ರಕ್ತ ವರ್ಗಾವಣೆಯ ಮೂಲಕ ಮಾತ್ರ ಹರಡುತ್ತದೆ. ನೀರು ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುವುದಿಲ್ಲ.

    ತಪ್ಪುಕಲ್ಪನೆ: ಮಲೇರಿಯಾ ಸೋಂಕಿತ ತಾಯಂದಿರು ಸ್ತನ್ಯಪಾನ ಮಾಡಬಾರದು!
    ಸತ್ಯಾಂಶ: ಮಲೇರಿಯಾ ಪರಾವಲಂಬಿಗಳು ಎದೆ ಹಾಲಿನ ಮೂಲಕ ಹರಡುವುದಿಲ್ಲ. ಆದರೆ ತಾಯಿಯು ಮಗುವಿಗೆ ಹಾಲುಣಿವಾಗ ಕೆಲವು ಔಷಧಿಗಳ ಸೇವನೆ ಬಗೆಗೆ ಎಚ್ಚರಿಕೆವಹಿಸುವುದು ಅತ್ಯಗತ್ಯ.

    ತಪ್ಪುಕಲ್ಪನೆ: ಸೋಂಕಿತ ಮಗುವಿನ ಸಂಪರ್ಕದಿಂದ ಮಕ್ಕಳಿಗೆ ಮಲೇರಿಯಾ ಹರಡುತ್ತದೆ.
    ಸತ್ಯಾಂಶ: ಸೋಂಕಿತ ಮಗುವಿನ ಸಂಪರ್ಕದಿಂದ, ಸೋಂಕಿತ ಮಗು ಬಳಸುವ ಬಟ್ಟೆ ಅಥವಾ ಪಾತ್ರೆಗಳಂತಹ ವಸ್ತುಗಳನ್ನು ಹಂಚಿಕೊಳ್ಳುವುದರಿಂದ ಮಕ್ಕಳಿಗೆ ಮಲೇರಿಯಾ ಹರಡುವುದಿಲ್ಲ.

    ತಪ್ಪುಕಲ್ಪನೆ: ಮಲೇರಿಯಾ ಸೋಂಕು ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ.
    ಸತ್ಯಾಂಶ: ವಿಭಿನ್ನ ಜಾತಿಯ ಪರಾವಲಂಬಿಗಳಿಂದ ಮನುಷ್ಯರಲ್ಲಿ ಮತ್ತೆ ಮಲೇರಿಯಾ ಸೋಂಕು ಕಾಣಿಸಿಕೊಳ್ಳಬಹುದು. ಹೀಗಾಗಿ ರೋಗನಿರೋಧಕ ಶಕ್ತಿ ಶಾಶ್ವತವಲ್ಲ.

    ತಪ್ಪುಕಲ್ಪನೆ: ಮಲೇರಿಯಾ ಕಾಯಿಲೆಗೆ ಲಸಿಕೆ ಲಭ್ಯವಿದೆ!
    ಸತ್ಯಾಂಶ: ಈ ಕಾಯಿಲೆಗೆ ಲಸಿಕೆ ಕಂಡುಹಿಡಿಯಲು ಸಂಶೋಧನೆ ನಡೆಯುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಯಾವುದೇ ಲಸಿಕೆ ಲಭ್ಯವಿಲ್ಲ.

    ಪ್ರಶ್ನೆ: ಪೋಷಕರು ತಮ್ಮ ಮಕ್ಕಳನ್ನು ಮಲೇರಿಯಾದಿಂದ ಹೇಗೆ ರಕ್ಷಿಸಿಕೊಳ್ಳಬಹುದು?
    ಉತ್ತರ: ಪೋಷಕರು ತಮ್ಮ ಮಕ್ಕಳನ್ನು ಮಲೇರಿಯಾದಿಂದ ರಕ್ಷಿಸಿಕೊಳ್ಳಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಅವುಗಳೆಂದರೆ

    * ಸೊಳ್ಳೆಗಳನ್ನು ದೂರವಿಡಲು ಸೊಳ್ಳೆ ನಿವಾರಕಗಳು ಮತ್ತು ಸೊಳ್ಳೆ ಬತ್ತಿಗಳನ್ನು ಬಳಸುವುದು.
    * ಬೆಳಗ್ಗೆ ಮತ್ತು ಮುಸ್ಸಂಜೆ ವೇಳೆ ಸೊಳ್ಳೆಗಳು ಹೆಚ್ಚು, ಹೀಗಾಗಿ ಮಕ್ಕಳು ಮೈತಂಬಾ ಉಡುಪುಗಳನ್ನು ಧರಿಸುವಂತೆ ನೋಡಿಕೊಳ್ಳಬೇಕು.
    * ಮನೆಯ ಆವರಣದಲ್ಲಿ ನೀರು ನಿಂತಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಮನೆಯ ಸುತ್ತ ನಿಂತ ನೀರನ್ನು ಸ್ವಚ್ಛಗೊಳಿಸುವುದು ಪ್ರಮುಖವಾದುದು.
    * ಎರಡು ತಿಂಗಳೊಳಗಿನ ಶಿಶುಗಳಿಗೆ ಸೊಳ್ಳೆ ಪರದೆಗಳನ್ನು ಬಳಸುವುದು ಮುಖ್ಯ.
    * ಸೊಳ್ಳೆಗಳು ಹೆಚ್ಚಿರುವ ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಪೋಷಕರು ನೋಡಿಕೊಳ್ಳಬೇಕು.
    * ಸೊಳ್ಳೆ ಕಡಿತ ಮತ್ತು ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು ಎನ್ನುವುದು ತಜ್ಞರ ಸಲಹೆ.

    ಈ ವರ್ಷ 2024ರ ಥೀಮ್/ವಿಷಯದ ಕುರಿತಾಗಿ ‘ಮಲೇರಿಯಾವು ತಡೆಗಟ್ಟಬಹುದಾದ ಕಾಯಿಲೆಯಾಗಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಮಲೇರಿಯಾದಿಂದ ಮೃತಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಮುಂದಾಗೋಣ ಮತ್ತು ಅನಗತ್ಯ ಜೀವಹಾನಿಯನ್ನು ತಡೆಗಟ್ಟೋಣ’ ಎಂದು ವೈದ್ಯೆ ಶಿಲ್ಪಾ ಪಾಂಡ್ಯ ಅಭಿಪ್ರಾಯ ಪಡುತ್ತಾರೆ.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6364409651, 6364466240

  • ಪಾಕ್‌ನಲ್ಲಿ ಮಲೇರಿಯಾ ಭೀತಿ – 60 ಲಕ್ಷ ಸೊಳ್ಳೆ ಪರದೆ ಕಳುಹಿಸಲು ಭಾರತಕ್ಕೆ ಮನವಿ

    ಪಾಕ್‌ನಲ್ಲಿ ಮಲೇರಿಯಾ ಭೀತಿ – 60 ಲಕ್ಷ ಸೊಳ್ಳೆ ಪರದೆ ಕಳುಹಿಸಲು ಭಾರತಕ್ಕೆ ಮನವಿ

    ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನದಲ್ಲಿ (Pakistan) ಇತ್ತೀಚೆಗೆ ಭಾರೀ ಪ್ರವಾಹ (Flood) ಉಂಟಾಗಿದ್ದು, ಅಲ್ಲಿನ ಜನತೆ ಪ್ರವಾಹಕ್ಕೆ ಹೈರಾಣಾಗಿದೆ. ಪ್ರವಾಹದಿಂದಾಗಿ ಇದೀಗ ಪಾಕಿಸ್ತಾನದಲ್ಲಿ ಸೊಳ್ಳೆಗಳ (Mosquito) ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗದ ಭೀತಿ ಹುಟ್ಟಿಕೊಂಡಿದೆ. ಈ ಹಿನ್ನೆಲೆ ಪಾಕಿಸ್ತಾನ ರೋಗದಿಂದ ತಪ್ಪಿಸಿಕೊಳ್ಳಲು 60 ಲಕ್ಷ ಸೊಳ್ಳೆ ಪರದೆಗಳನ್ನು (Mosquito nets) ಕಳುಹಿಸಿಕೊಡುವಂತೆ ಭಾರತಕ್ಕೆ (India) ಮನವಿ ಮಾಡಿಕೊಂಡಿದೆ.

    ದೇಶದ 32 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮಲೇರಿಯಾ ವೇಗವಾಗಿ ಹರಡುತ್ತಿದೆ. ಅಲ್ಲಿ ಸಾವಿರಾರು ಮಕ್ಕಳು ಸೊಳ್ಳೆಯಿಂದ ಹರಡುವ ರೋಗಗಳಿಗೆ ತುತ್ತಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಲೇರಿಯಾ ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಸೊಳ್ಳೆ ಪರದೆಗಳನ್ನು ಕಳುಹಿಸಲು ಭಾರತಕ್ಕೆ ಮನವಿ ಮಾಡಲು ಆರೋಗ್ಯ ಸಚಿವಾಲಯವನ್ನು ಕೇಳಿಕೊಂಡಿದ್ದೇವೆ. ಇದಕ್ಕೆ ಒಪ್ಪಿಗೆ ದೊರಕಿರುವುದಾಗಿ ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಷ್ಟ ಸರಿದೂಗಿಸಲು ತೈಲ ಕಂಪನಿಗಳಿಗೆ 22 ಸಾವಿರ ಕೋಟಿ ರೂ. ಅನುದಾನ

    ಪಾಕಿಸ್ತಾನದಲ್ಲಿ ಪ್ರವಾಹ ಪೀಡಿತರಿಗೆ ಭಾರತದಿಂದ ಸೊಳ್ಳೆ ಪರದೆಗಳನ್ನು ಪಡೆಯಲು ಜಾಗತಿಕ ನಿಧಿಯು ವಿಶ್ವ ಆರೋಗ್ಯ ಸಂಸ್ಥೆಗೆ (WHO) ಹಣಕಾಸಿನ ಸಂಪನ್ಮೂಲವನ್ನು ಒದಗಿಸುತ್ತಿದೆ. ಪಾಕಿಸ್ತಾನದ ಅಧಿಕಾರಿಗಳು ಆದಷ್ಟು ಬೇಗ ಸೊಳ್ಳೆ ಪರದೆಗಳನ್ನು ಪಡೆಯಲು ಯೋಜಿಸುತ್ತಿದ್ದಾರೆ. ಅದು ವಾಘಾ ಮಾರ್ಗದ ಮೂಲಕ ನವೆಂಬರ್ ಮಧ್ಯದ ವೇಳೆಗೆ ಪಾಕಿಸ್ತಾನಕ್ಕೆ ಬರುವ ಭರವಸೆ ಇದೆ ಎಂದು ಹೇಳಿದರು. ಇದನ್ನೂ ಓದಿ: ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟ – ತಪ್ಪಿದ ಅನಾಹುತ

    ಪಾಕಿಸ್ತಾನದಲ್ಲಿ ಕಳೆದ ತಿಂಗಳು ಉಂಟಾದ ಭಾರೀ ಪ್ರವಾಹದಿಂದ 1,600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಪಾಕಿಸ್ತಾನದಲ್ಲಿ ಉಂಟಾಗಬಹುದಾದಂತಹ ಸಾಂಕ್ರಾಮಿಕ ರೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಅಸನಿ ಎಫೆಕ್ಟ್‌ನಿಂದ ಬಿಟ್ಟು ಬಿಡದೆ ಮಳೆ –  ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಹೆಚ್ಚಳ ಭೀತಿ

    ಅಸನಿ ಎಫೆಕ್ಟ್‌ನಿಂದ ಬಿಟ್ಟು ಬಿಡದೆ ಮಳೆ – ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಹೆಚ್ಚಳ ಭೀತಿ

    ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ವರುಣನ ಆರ್ಭಟ ಜೋರಿದೆ. ದಿನಕಳೆದಂತೆ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗ್ತಾ ಇದೆ ಈಗಾಗಿ ಆರೋಗ್ಯ ಇಲಾಖೆ ಮೂರು ಖಾಯಿಲೆಗಳ ಬಗ್ಗೆ ಎಚ್ಚರವಹಿಸುವಂತೆವ ಅಲರ್ಟ್ ಮಾಡ್ತಿದೆ.

    ರಾಜ್ಯದಲ್ಲಿ ಬಿರು ಬೇಸಿಗೆ ಮಧ್ಯೆ ವರುಣನ ಆರ್ಭಟ ಹೆಚ್ಚಾಗ್ತಿದೆ. ಇದರ ಮಧ್ಯೆ ಮತ್ತೊಂದು ಆತಂಕವೂ ಸೃಷ್ಟಿ ಆಗಿದೆ. ಅದೇ ಸಾಂಕ್ರಾಮಿಕ ರೋಗಗಳ ಹರಡುವ ಭೀತಿ. ಈ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಎಚ್ಚರಿವಹಿಸುವಂತೆ ಸಾರ್ವಜನಿಕರಿಗೆ ಸೂಚಿಸಿದೆ. ಮಳೆಗಾಲ ಆರಂಭ ಹಿನ್ನೆಲೆ ಪ್ರಮುಖವಾಗಿ ಡೆಂಗ್ಯೂ, ಚಿಕನ್ ಗುನ್ಯ ಮತ್ತು ಮಲೇರಿಯಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸ್ತಿದ್ದಾರೆ. ಇದನ್ನೂ ಓದಿ: ಕೊರೊನಾಗೂ ಟೊಮ್ಯಾಟೊ ಫ್ಲೂಗೂ ಸಂಬಂಧವಿಲ್ಲ, ಇದು ಈಗಾಗಲೇ ಇರುವ ಕಾಯಿಲೆ: ಸುಧಾಕರ್‌

    ಆರೋಗ್ಯ ಇಲಾಖೆ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ವಿರುದ್ಧ ಮುನ್ನೆಚ್ಚರಿಕಾ ಕ್ರಮಗಳನ್ನ ಬಿಡುಗಡೆ ಮಾಡಿದೆ. ಮನೆ ಮುಂದೆ ನೀರು ನಿಂತುಕೊಳ್ಳದಂತೆ ಸ್ವಚ್ಛತೆ ಕಾಪಾಡಬೇಕು. ನಿಂತ ನೀರು ಸೊಳ್ಳೆಗಳ ಉತ್ಪತ್ತಿ ತಾಣವಾಗದಂತೆ ಕಟ್ಟೆಚ್ಚರ ವಹಿಸಬೇಕು. ನೀರು ಸಂಗ್ರಹಿಸುವ ಡ್ರಮ್‍ಗಳನ್ನು ಮುಚ್ಚಳದಿಂದ ಮುಚ್ಚಿಡಬೇಕು. ನೀರು ಸಂಗ್ರಹ ತೊಟ್ಟಿ, ಡ್ರಮ್‍ಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಸ್ವಯಂ ರಕ್ಷಣಾ ವಿಧಾನಗಳನ್ನ ಬಳಸಿ. ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕಗಳನ್ನ ಬಳಸಬೇಕು.

    ಮಲೇರಿಯಾ ಮತ್ತು ಡೆಂಗ್ಯೂ ಕೇಸ್‍ಗಳ ಸಂಖ್ಯೆ ಹೆಚ್ಚಾಗ್ತಿದ್ದು ತಕ್ಷಣವೇ ಮುನ್ನೆಚ್ಚರಿಕಾ ಕ್ರಮ ವಹಿಸದಿದ್ದರೆ ಅಪಾಯ ಎಂದು ವೈದ್ಯರು ತಿಳಿಸಿದ್ದಾರೆ. ಒಟ್ಟಾರೆ ಮಳೆಗಾಲ ಆರಂಭದ ಹೊತ್ತಲ್ಲೆ ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮ ವಹಿಸಲು ಆರೋಗ್ಯ ಇಲಾಖೆ ಜನರ ಜಾಗೃತಿ ಮೂಡಿಸ್ತಾ ಇದೆ. ಜನ ಇದನ್ನ ಎಷ್ಟರ ಮಟ್ಟಿಗೆ ಪಾಲನೇ ಮಾಡ್ತಾರೋ ಕಾದು ನೋಡಬೇಕಿದೆ.

  • ಕೊರೊನಾ ಜೊತೆ ಮಲೇರಿಯಾ, ಡೆಂಗ್ಯೂ, ಝಿಕಾ ವೈರಸ್ ಆತಂಕ- ಮಂಗಳೂರು ಪಾಲಿಕೆಯಲ್ಲಿ ತುರ್ತು ಸಭೆ

    ಕೊರೊನಾ ಜೊತೆ ಮಲೇರಿಯಾ, ಡೆಂಗ್ಯೂ, ಝಿಕಾ ವೈರಸ್ ಆತಂಕ- ಮಂಗಳೂರು ಪಾಲಿಕೆಯಲ್ಲಿ ತುರ್ತು ಸಭೆ

    ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಲೇರಿಯಾ, ಡೆಂಗ್ಯೂ ಬಾದಿಸದಂತೆ ಮತ್ತು ಝಿಕಾ ವೈರಸ್ ಕುರಿತು ಎಚ್ಚರಿಕೆ ಹಿನ್ನೆಲೆಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಭಾಂಗಣದಲ್ಲಿ ಮುಂಜಾಗ್ರತ ಸಭೆ ಜರಗಿತು.

    ಸಭೆಯಲ್ಲಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿಯವರು ಮಲೇರಿಯಾ ಮತ್ತು ಡೆಂಗ್ಯೂ ತಡೆಗಟ್ಟಲು ಮೊದಲನೇಯದಾಗಿ ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಯಬೇಕು. ಪಾಲಿಕೆಯ ಎಂಪಿಡಬ್ಲ್ಯೂ ಕಾರ್ಯಕರ್ತರು ಮನೆ ಮನೆ ಭೇಟಿ ಮಾಡಿ ಮನೆಯ ಸುತ್ತ ಮುತ್ತಲುನಲ್ಲಿರುವ ತ್ಯಾಜ್ಯ ಮತ್ತು ಯಾವುದೇ ಬಿಸಾಡುವಂತಹ ವಸ್ತುಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು ಎನ್ನುವ ಮಾಹಿತಿಯನ್ನು ಒದಗಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಸಾರ್ವಜನಿಕರು ತಮ್ಮ ತಮ್ಮ ಮನೆಯ ಸುತ್ತ ಮುತ್ತ ಸ್ವಚ್ಚವಾಗಿ ಇರಿಸಲು ಆಸಕ್ತಿ ವಹಿಸಿದರೆ ಸೊಳ್ಳೆ ಉತ್ಪತ್ತಿಯನ್ನು ತಡೆಯಬಹುದಾಗಿದೆ ಎನ್ನುವ ಮಾಹಿತಿ ತಿಳಿಸಿದರು.

    ಸಭೆಯಲ್ಲಿ ಪಾಲಿಕೆಯ ಆಯುಕ್ತರಾದ ಅಕ್ಷಯ್ ಶ್ರೀಧರ್, ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಂದೀಪ್ ಗರೋಡಿ, ಉಪ ಆಯುಕ್ತರು(ಆಡಳಿತ) ಸಂತೋಷ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ.ನವೀನ್ ಕುಲಾಲ್, ಪಾಲಿಕೆಯ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ, ಪಾಲಿಕೆಯ ಆರೋಗ್ಯ ವಿಭಾಗದ ಎಂ.ಪಿ.ಡಬ್ಲ್ಯೂ ಮೇಲ್ವಿಚಾರಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

  • ಮಹಾಮಳೆಗೆ ಬೆಚ್ಚಿದ ಯಾದಗಿರಿ- ನೀಲಕಂಠರಾಯನಗುಡ್ಡದಲ್ಲಿ ಮಲೇರಿಯಾ ಭೀತಿ

    ಮಹಾಮಳೆಗೆ ಬೆಚ್ಚಿದ ಯಾದಗಿರಿ- ನೀಲಕಂಠರಾಯನಗುಡ್ಡದಲ್ಲಿ ಮಲೇರಿಯಾ ಭೀತಿ

    ಯಾದಗಿರಿ: ಎಲೆಕ್ಷನ್ ಬಂದಾಗ ಎಂಥಾ ಕುಗ್ರಾಮಕ್ಕೂ ಭೇಟಿ ಕೊಡೋ ಜನಪ್ರತಿನಿಧಿಗಳು, ಅದೇ ಜನರು ತೀರ ಸಂಕಷ್ಟದಲ್ಲಿದ್ದಾಗ ಹೇಗೆ ಕೈಕೊಡ್ತಾರೆ ಅನ್ನೋದಕ್ಕೆ ಈ ಸ್ಟೋರಿನೇ ಸಾಕ್ಷಿ.

    ಉಕ್ಕಿ ಹರಿಯುತ್ತಿರುವ ಕೃಷ್ಣೆ, ಜೀವ ಕೈಲಿಡ್ಕೊಂಡು ನದಿಯಲ್ಲಿ ಈಜಿ ದಡ ಸೇರಲೇಬೇಕಾದ ಪರಿಸ್ಥಿತಿ. ಇದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮಕ್ಕೆ ಬಂದಿರೋ ದುರ್ಗತಿ.

    ಬಸವಸಾಗರ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಟ್ಟಿರೋ ಪರಿಣಾಮ ಗ್ರಾಮ ದ್ವೀಪವಾಗಿದೆ. ಇದರ ಜೊತೆಗೆ ರೋಗಗಳು ಕಾಣಿಸಿಕೊಳ್ತಿವೆ. ಜ್ವರದಿಂದ ಬಳಲುತ್ತಿದ್ದ ಮೂವರನ್ನ ಗ್ರಾಮಸ್ಥರೇ ಈಜುಕಾಯಿ ಕಟ್ಟಿಕೊಂಡು ದಡ ಸೇರಿಸಿದ್ದಾರೆ. ದುರಂತ ಅಂದರೆ ಜಿಲ್ಲಾಡಳಿತವಾಗಲೀ ಅಥವಾ ಜನಪ್ರತಿನಿಧಿಗಳಾಗಲೀ ತಾತ್ಕಾಲಿಕವಾಗಿಯಾದ್ರೂ ಬೋಟ್ ವ್ಯವಸ್ಥೆ ಮಾಡಿಲ್ಲ.

    ಜ್ವರದಿಂದ ಬಳಲುತ್ತಿರುವವರ ಜೊತೆ ಪಬ್ಲಿಕ್ ಟಿವಿ ತಂಡ ಕೂಡ ರಾಯಚೂರು ಜಿಲ್ಲೆಯ ಲಿಂಗಸೂಗುರ ತಾಲೂಕಿನ ಗುಡಗುಂಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಡ್ತು. ವೈದ್ಯರು ಆರೋಗ್ಯ ತಪಾಸಣೆ ಮಾಡಿದ ನಂತರ ಮೂರು ವರ್ಷದ ಮಗು ಭೀಮಣ್ಣನಿಗೆ ಮಲೇರಿಯಾ ಬಾಧಿಸಿರೋದು ದೃಢಪಟ್ಟಿದೆ. ಇನ್ನು ಅಮರವ್ವ, ದುರ್ಗಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡಿದ್ದಾರೆ.

    ಚುನಾವಣೆ ಬಂದಾಗ ಮಾತ್ರ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸ್ತೇವೆ ಅಂತ ಭರವಸೆ ಕೊಡೋ ಜನಪ್ರತಿನಿಧಿಗಳು ಇವರ ಸಮಸ್ಯೆಗೆ ಸ್ಪಂದಿಸಬೇಕಿದೆ.

  • ಇದು ನಮ್ಮ ರಾಜ್ಯದ ಡೆಂಗ್ಯೂ ಗ್ರಾಮ!

    ಇದು ನಮ್ಮ ರಾಜ್ಯದ ಡೆಂಗ್ಯೂ ಗ್ರಾಮ!

    ದಾವಣಗೆರೆ: ಈ ಗ್ರಾಮದಲ್ಲಿ ಕಳೆದ ಎರಡು ತಿಂಗಳಿನಿಂದ ಯಾರೂ ಕೆಲಸ ಮಾಡಿಲ್ಲ, ಬಹುತೇಕ ಗ್ರಾಮಸ್ಥರು ಮನೆಯಿಂದ ಕೂಡ ಎದ್ದು ಹೊರ ಬಂದಿಲ್ಲ, ಹಾಸಿಗೆ ಮೇಲೆ ಮಲಗಿರುವ ಮಕ್ಕಳು, ಖಾಲಿ ಖಾಲಿಯಾಗಿ ಕಾಣುತ್ತಿರುವ ಗ್ರಾಮ, ಅಲ್ಲೊಬ್ಬರು ಇಲ್ಲೊಬ್ಬರು ಓಡಾಡುತ್ತಿರುವ ದೃಶ್ಯ. ಇಂಥದ್ದೊಂದು ಸನ್ನಿವೇಶ ಕಂಡು ಬಂದದ್ದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಜಿಗಳಿ ಗ್ರಾಮದಲ್ಲಿ.

    ಈ ಗ್ರಾಮದಲ್ಲಿ ಕಳೆದ ಎರಡು ತಿಂಗಳಿನಿಂದ ಡೆಂಗ್ಯೂ, ಮಲೇರಿಯ ರೋಗ ಬಂದು ಆವರಿಸಿಕೊಂಡಿದೆ. ಇದರಿಂದ ಇಡೀ ಗ್ರಾಮಕ್ಕೆ ಗ್ರಾಮವೇ ಹಾಸಿಗೆ ಹಿಡಿದು ಮಲಗಿದೆ.

    ಇದಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ವೈದ್ಯಾಧಿಕಾರಿ ತ್ರಿಪುಲಾಂಭ ಹಾಗೂ ಹರಿಹರ ತಾಲೂಕು ವೈದ್ಯಾಧಿಕಾರಿ ಹನುಮ ನಾಯ್ಕ ಅವರಿಗೆ ತಿಳಿಸಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸುಮಾರು 400ಕ್ಕೂ ಅಧಿಕ ಗ್ರಾಮಸ್ಥರು, ದಾವಣಗೆರೆ ಮಂಗಳೂರು, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವಾರು ಕಡೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

    ಕಳೆದ ಎರಡು ತಿಂಗಳಿನಿಂದ ಗ್ರಾಮದಲ್ಲಿ ಯಾರು ಹೊರಗಡೆ ಹೋಗದಂತಾಗಿದೆ, ಈ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತಕ್ಕೂ ಹಾಗೂ ಆರೋಗ್ಯಾಧಿಕಾರಿಗೂ ಮಾಹಿತಿ ನೀಡಿದ್ದರೂ ಯಾರು ಕ್ರಮ ಕೈಗೊಂಡಿಲ್ಲ. ಜೊತೆಗೆ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಒಟ್ಟಾರೆಯಾಗಿ ಗ್ರಾಮದಲ್ಲಿ ಡೆಂಗ್ಯೂ, ಮಲೇರಿಯಾ ರೋಗ ಹೆಚ್ಚಾಗಿ ಆವರಿಸಿದ್ದರು ಕೂಡ ಅಧಿಕಾರಿಗಳು ಮಾತ್ರ ದಿವ್ಯನಿರ್ಲಕ್ಷ ವಹಿಸಿರುವುದು ನಿಜಕ್ಕೂ ಬೇಸರದ ಸಂಗತಿ. ಇನ್ನಾದರೂ ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಚಿಕಿತ್ಸೆ ನೀಡಬೇಕಿದೆ.