Tag: Maladharane

  • ಹನುಮಮಾಲೆ ವಿಸರ್ಜಿಸಿದ ಸಂಸದ ಪ್ರತಾಪ್ ಸಿಂಹ- ಹನುಮ ಜಯಂತಿ ಮಾಡೇ ಮಾಡ್ತೀವೆಂದು ಸವಾಲು

    ಹನುಮಮಾಲೆ ವಿಸರ್ಜಿಸಿದ ಸಂಸದ ಪ್ರತಾಪ್ ಸಿಂಹ- ಹನುಮ ಜಯಂತಿ ಮಾಡೇ ಮಾಡ್ತೀವೆಂದು ಸವಾಲು

    ಮೈಸೂರು: ಹನುಮ ಜಯಂತಿ ಪ್ರಯುಕ್ತ  ಮಾಲೆ ಧರಿಸಿದ್ದ ಸಂಸದ ಪ್ರತಾಪ್ ಸಿಂಹ ಇಂದು ಮಾಲೆಯನ್ನು ವಿಸರ್ಜಿಸಿದ್ದಾರೆ.

    ಪ್ರತಾಪ್ ಸಿಂಹ ಡಿಸೆಂಬರ್ 1 ರಂದು ಹನುಮ ಮಾಲೆಯನ್ನು ಧರಿಸಿದ್ದರು. ಇವತ್ತು ನಗರದ ಹುಣಸೂರಿನ ಲಕ್ಷೀನರಸಿಂಹ ಸ್ವಾಮಿ ದೇವಾಲಯದಲ್ಲಿ ಮಾಲೆಯನ್ನು ತೆಗೆಸಿದ್ದಾರೆ. ಹನುಮ ಜಯಂತಿ ಮೆರವಣಿಗೆ ನಂತರ ಮಾಲೆ ತೆಗೆಸಬೇಕಿತ್ತು. ಆದರೆ ಹನುಮ ಜಯಂತಿ ವೇಳೆ ಬಂಧನವಾಗಿದ್ದ ಕಾರಣ ತಡವಾಗಿ ಮಾಲೆಯನ್ನು ತೆಗೆಸಿದ್ದು, ಇವರ ಜೊತೆಗೆ ಹಲವು ಮಂದಿ ಹನುಮ ಭಕ್ತರು ದೇವಾಲಯದಲ್ಲಿ ವಿಶೇಷ ಹೋಮ ನೆರವೇರಿಸಿ ಮಾಲೆಯನ್ನು ವಿಸರ್ಜನೆ ಮಾಡಿದರು.

    ಮಾಲೆ ವಿಸರ್ಜಿಸಿದ ನಂತರ ಪ್ರತಾಪ್ ಸಿಂಹ ಮಾತನಾಡಿ, ರಾಮನ ಭಕ್ತರು ಎಷ್ಟು ಜನರಿದ್ದಾರೋ, ಅಷ್ಟೇ ಹನುಮ ಭಕ್ತರು ಇದ್ದಾರೆ. ದಸರೆಯ ಜೊತೆಗೆ ಕುಸ್ತಿ ಆರಂಭವಾಗಿದ್ದು, ಕುಸ್ತಿಯ ಪೈಲ್ವಾನ್‍ಗಳ ಭಗವಾನ್ ಹನುಮಂತ. ಅದಕ್ಕಾಗಿ ಪ್ರತಿ ಊರಿನಲ್ಲೂ ಹನುಮ ಗುಡಿಯಿದೆ. ನಮ್ಮ ನಂಬಿಕೆ ಮೇಲೆ ಪ್ರಹಾರ ಮಾಡುವ ಕೆಲಸ ಆಗಿದೆ. ಕೆಲವರು ಅಧಿಕಾರದ ದರ್ಪದಿಂದ ಯಾವ ರೀತಿ ಬೇಕಾದರೂ ವರ್ತಿಸಬಹುದು. ಆದರೆ ಕಾಯುವುದಕ್ಕೆ ದೇವಿ ಚಾಮುಂಡೇಶ್ವರಿ ಇದ್ದಾಳೆ. ಯಾರಿಗೆ ಯಾವ ಸಂದರ್ಭದಲ್ಲಿ ಅವರ ಪಾಪಕ್ಕೆ ಪ್ರತಿಫಲ ಸಿಗಬೇಕೋ ಸಿಗಲಿದೆ. ಈ ಬಗ್ಗೆ ನನಗೆ ನಂಬಿಕೆಯಿದೆ ಎಂದು ಹೇಳಿದರು.

    ನನ್ನ ಮೇಲೆ ಸಾಕಷ್ಟು ಆಕ್ರಮಣಗಳು ನಡೆದಿವೆ. ಆದರೂ ನಾನು ಇವತ್ತು ಬದುಕಿದ್ದೇನೆ. ಇದಕ್ಕೆ ಕಾರಣ ದೇವರ ಅನುಗ್ರಹ ನನ್ನ ಮೇಲೆ ಇದೆ. ದುಷ್ಟ ಶಕ್ತಿಗಳನ್ನು ಶಿಕ್ಷಿಸುವ ಕೆಲಸ ದೇವರೆ ಮಾಡುತ್ತಾನೆ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಉತ್ತರ ಸಿಗಲಿದೆ. ಆದ್ದರಿಂದ ಮೆರವಣಿಗೆ ಮಾಡಿಯೇ ಮಾಡುತ್ತೇವೆ. ಯಾವ ಸಂದರ್ಭದಲ್ಲಿ, ಯಾವ ವೇದಿಕೆಯಲ್ಲಿ ಉತ್ತರ ಕೊಡಬೇಕೋ ಕೊಡೋಣ ಎಂದರು.

    ಹುಣಸೂರಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಂಯಮವನ್ನು ಇಟ್ಟುಕೊಳ್ಳಿ. ಯಾವ ಸಂದರ್ಭದಲ್ಲಿ ಯಾವ ಉತ್ತರ ಕೊಡಬೇಕಾಗುತ್ತೆ ಅದಕ್ಕೆ ಕಾಲ ಪರಿಪಕ್ವವಾಗಬೇಕು. ಆಗ ಅವರಿಗೆ ಉತ್ತರ ಸಿಗುತ್ತದೆ. ಮೆರವಣಿಗೆ ನಡೆಯುವ ಬಗ್ಗೆ ವಿಶ್ವಾಸವಿಡಿ, ಎಲ್ಲರೂ ಒಗ್ಗಾಟ್ಟಾಗಿರಿ ಎಂದು ಘೋಷಣೆ ಕೂಗಿ ಹೇಳಿದ್ರು.