Tag: makara sankranti 2025

  • ಬೇರೆ ಬೇರೆ ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆ ಹೇಗೆ?

    ಬೇರೆ ಬೇರೆ ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆ ಹೇಗೆ?

    ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಈ ಹಬ್ಬವನ್ನು ದೇಶಾದ್ಯಂತ ಉತ್ಸಹಭರಿತವಾಗಿ ಆಚರಿಸಲಾಗುತ್ತದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ಪ್ರವೇಶಿಸುವ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯಲಾಗುತ್ತದೆ. ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ.

    ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ, ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ.

    ಸಂಕ್ರಾಂತಿ ಹಬ್ಬವನ್ನು ದಕ್ಷಿಣ ಭಾರತ ಸೇರಿದಂತೆ ಉತ್ತರ ಭಾರತದಲ್ಲಿ ಕೂಡಾ ಈ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಂದು ರಾಜ್ಯದಲ್ಲೂ ಒಂದೊಂದು ಹೆಸರಿನಿಂದ ಉದಾಹರಣೆಗೆ ಪಂಜಾಬ್‌ನಲ್ಲಿ ಲೋಹ್ರಿ, ದಕ್ಷಿಣ ಭಾರತದಲ್ಲಿ ಪೊಂಗಲ್ ಎಂದು ಆಚರಿಸಲಾಗುತ್ತದೆ.

    ಸಂಕ್ರಾಂತಿ ಹಬ್ಬದಲ್ಲಿ ಮಾಡಲಾಗುವ ಇನ್ನಿತರ ಆಚರಣೆಗಳು:
    ಪಾಪ ಶುದ್ಧಿಗಾಗಿ ಗಂಗಾ ಅಥವಾ ಇತರ ಪವಿತ್ರ ನದಿಗಳಲ್ಲಿ ಸ್ನಾನ ಮಾಡಲಾಗುತ್ತದೆ. ಪಂಜಾಬ್‌ನಲ್ಲಿ ಸಂಕ್ರಾಂತಿಯಂದು ದೀಪೋತ್ಸವ ಆಚರಣೆ ಮಾಡುತ್ತಾರೆ. ಇನ್ನೂ ಗುಜರಾತ್‌ನಲ್ಲಿ ಗಾಳಿಪಟ ಹಾರಿಸುವುದೇ ಒಂದು ಸಂಭ್ರಮ. ತಮಿಳುನಾಡು ಹಾಗೂ ದಕ್ಷಿಣ ಭಾರತದಲ್ಲಿ ಸುಗ್ಗಿಯ ಸಂಭ್ರಮದೊಂದಿಗೆ ಗ್ರಾಮದ ದೇವರನ್ನು ಪೂಜಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಸೂರ್ಯ ದೇವರಿಗೆ ಪೂಜೆ ಹಾಗೂ ನದಿಯಲ್ಲಿ ಸ್ನಾನ ಮಾಡುವುದು ರೂಢಿಯಲ್ಲಿದೆ.

    ಕರ್ನಾಟಕ, ಆಂಧ್ರ, ತೆಲಂಗಾಣಗಳಲ್ಲಿ ಸಂಕ್ರಾಂತಿ ಎಂಬ ಹೆಸರಿನಿಂದ ಹಬ್ಬ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಒಂದು ದಿನ ಈ ಹಬ್ಬ ಆಚರಿಸಿದರೆ ಆಂಧ್ರ ಹಾಗೂ ತೆಲಂಗಾಣಗಳಲ್ಲಿ 3 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಎಳ್ಳು ಬೆಲ್ಲವನ್ನು ಆತ್ಮೀಯರೊಂದಿಗೆ ಹಂಚಿಕೊಂಡು ಸಂಭ್ರಮಿಸುತ್ತಾರೆ.

    ಮಹಾರಾಷ್ಟ್ರದಲ್ಲಿ ಹಡಗ
    ಸಂಕ್ರಾಂತಿಯನ್ನು ಮಹಾರಾಷ್ಟ್ರದಲ್ಲಿ ಹಡಗ ಎಂದು ಆಚರಿಸುತ್ತಾರೆ. ಇದನ್ನು ತಿಲ್ಗುಲ್ ಹಬ್ಬ ಎಂದೂ ಕರೆಯುತ್ತಾರೆ. ಉತ್ತಮ ಮುಂಗಾರು ಮತ್ತು ಫಸಲು ಬರಲಿ ಎಂದು ಜನರು ದೇವರನ್ನು ಪ್ರಾರ್ಥಿಸುತ್ತಾರೆ. ಇಂದ್ರನು ಮಳೆಯ ದೇವರು ಆಗಿರುವುದರಿಂದ ಜನರು ಇಂದ್ರನಿಗೆ ಹಾಡುಗಳನ್ನು ಹಾಡುವ ಮೂಲಕ ಪೂಜಿಸುವುದು ಇಲ್ಲಿನ ವಿಶೇಷವಾಗಿದೆ

    ಭೋಗಿ
    ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಸಂಕ್ರಾಂತಿ ಹೆಸರಿನಿಂದಲೇ ಈ ಹಬ್ಬವನ್ನು ಆಚರಿಸಿದರೂ, ಅದರ ಹಿಂದಿನ ದಿನ ಭೋಗಿ ಹೆಸರಿನ ಆಚರಣೆ ಮಾಡಲಾಗುತ್ತದೆ. ಈ ದಿನ ಮಳೆಯ ದೇವತೆ ದೇವೇಂದ್ರನನ್ನು ಪೂಜಿಸಲಾಗುತ್ತದೆ. ಇದು ಧನುರ್ಮಾಸದ ಕಡೆಯ ದಿನವಾಗಿದೆ. ಭೂಮಿ ಸುಭಿಕ್ಷವಾಗಲಿ ಎಂದು ಪ್ರಾರ್ಥಿಸಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಎಣ್ಣೆ ಸ್ನಾನ ಮಾಡಿ ಮನೆಯಲ್ಲಿ ದೀಪ ಬೆಳಗಿಸಲಾಗುತ್ತದೆ. ಮೂರನೇ ದಿನ ಕನುಮ ಎಂಬ ಆಚರಣೆ ಇದೆ.

    ಪಂಜಾಬ್‌ನಲ್ಲಿ ಲೋಹ್ರಿ
    ಪಂಜಾಬ್‌ನಲ್ಲಿ ಸಂಕ್ರಾಂತಿಯನ್ನು ಲೋಹ್ರಿ ಎಂದು ಕರೆಯುತ್ತಾರೆ. ಇಲ್ಲಿನ ಜನರು ಲೋಹ್ರಿಯನ್ನು ವರ್ಷದ ಅತ್ಯಂತ ಶೀತ ದಿನವೆಂದು ನಂಬುತ್ತಾರೆ. ತಣ್ಣನೆಯ ಗಾಳಿಯಲ್ಲಿ ಬೆಂಕಿಯ ಸುತ್ತಲೂ ಭಾಂಗ್ರಾ ನೃತ್ಯ ಮಾಡುವ ಮೂಲಕ ಆಚರಿಸುತ್ತಾರೆ. ಎಳ್ಳು ಉಂಡೆ ಜೊತೆ ಇತರ ಸಿಹಿಗಳನ್ನು ಮಾಡಿ ಆತ್ಮೀಯರೊಂದಿಗೆ ಒಟ್ಟಿಗೆ ಊಟ ಮಾಡುತ್ತಾರೆ.

    ಆಸ್ಸಾಂ ನಲ್ಲಿ ಬಿಹು
    ಆಸ್ಸಾಂನಲ್ಲಿ ಸಂಕ್ರಾಂತಿಯನ್ನು ಬಿಹು ಹೆಸರಿನಿಂದ ಆಚರಿಸುತ್ತಾರೆ. ಅಸ್ಸಾಮಿ ಜನರಿಗೆ ಇದು ಬಹಳ ಪ್ರಮುಖವಾದ ಹಬ್ಬವಾಗಿದೆ. ವರ್ಷದಲ್ಲಿ 3 ಬಾರಿ ಬಿಹು ಆಚರಿಸಲಾಗುತ್ತದೆ. ಜನವರಿಯಲ್ಲಿ ಮಾಗ್ ಬಿಹು, ಏಪ್ರಿಲ್ ತಿಂಗಳಲ್ಲಿ ರೊಂಗಾಲಿ ಬಿಹು ಹಾಗೂ ಅಕ್ಟೋಬರ್‌ನಲ್ಲಿ ಕೊಂಗಲಿ ಬಿಹು ಎಂದು ಆಚರಿಸಲಾಗುತ್ತದೆ.

    ಬಿಹಾರ ಸಖ್ರತ್/ಕಿಚಡಿ
    ಬಿಹಾರ ಹಾಗೂ ಜಾರ್ಖಂಡ್‌ನಲ್ಲಿ ಈ ಹಬ್ಬವನ್ನು ಸಖ್ರತ್, ಕಿಚಡಿ ಎಂಬ ಹೆಸರಿನಿಂದ ಆಚರಿಸುತ್ತಾರೆ. ಈ ದಿನ ಜನರು ಮುಂಜಾನೆ ನದಿ ಸ್ನಾನ ಮಾಡಿ ದೀಪೋತ್ಸವ ಮಾಡುತ್ತಾರೆ. ದೀಪಕ್ಕೆ ಎಳ್ಳು ಅರ್ಪಿಸುತ್ತಾರೆ. ಎಳ್ಳು ಬೆಲ್ಲ ಬಳಸಿ ತಿಂಡಿಗಳನ್ನು ತಯಾರಿಸುತ್ತಾರೆ. ಗ್ರಾಮಗಳಲ್ಲಿ ಜನರೆಲ್ಲಾ ಒಟ್ಟಿಗೆ ಸೇರಿ ಈ ಹಬ್ಬವನ್ನು ಆಚರಿಸುತ್ತಾರೆ. ದೆಹಲಿ ಹಾಗೂ ಹರಿಯಾಣಗಳಲ್ಲಿ ಕೂಡಾ ಸಖ್ರತ್ ಹೆಸರಿನಿಂದ ಹಬ್ಬ ಆಚರಿಸಲಾಗುತ್ತದೆ.

    ಹಿಮಾಚಲಪ್ರದೇಶಲ್ಲಿ ಮಾಘ ಸಾಜಿ
    ಹಿಮಾಚಲಪ್ರದೇಶದಲ್ಲಿ ಈ ಹಬ್ಬವನು ಮಾಘ ಸಾಜಿ ಎಂದು ಕರೆಯುತ್ತಾರೆ. ಮಾಘ ಎಂಬುದು ತಿಂಗಳ ಹೆಸರು. ಈ ದಿನವು ಋತುಗಳ ಬದಲಾವಣೆಯನ್ನು ಸೂಚಿಸುತ್ತದೆ. ಜನರು ನದಿಗಳಲ್ಲಿ ಸ್ನಾನ ಮಾಡುವ ಮೂಲಕ ವಸಂತವನ್ನು ಸ್ವಾಗತಿಸುತ್ತಾರೆ. ಬೆಲ್ಲ, ಎಳ್ಳಿನಿಂದ ಮಾಡಿದ ಸಿಹಿ ತಿಂಡಿಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ದೇವಾಲಯಗಳಿಗೆ ಭೇಟಿ ಮಾಡಿ, ದಾನ-ಧರ್ಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಂಜೆ ಜಾನಪದ ಹಾಡುಗಳು ಮತ್ತು ನೃತ್ಯಗಳೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ.

  • ಮಕರ ಸಂಕ್ರಾಂತಿ – ಪಥ ಬದಲಾವಣೆಗೆ ಮಹಾದೇವನ ಅಪ್ಪಣೆ ಕೇಳುವ ಸೂರ್ಯ!

    ಮಕರ ಸಂಕ್ರಾಂತಿ – ಪಥ ಬದಲಾವಣೆಗೆ ಮಹಾದೇವನ ಅಪ್ಪಣೆ ಕೇಳುವ ಸೂರ್ಯ!

    ಹೊಸ ವರ್ಷದ ಮೊದಲ ಹಬ್ಬ ಸಂಕ್ರಾತಿಯನ್ನು ಹಿಂದೂಗಳು ವಿಶೇಷವಾಗಿ ಆಚರಿಸಲಾಗುತ್ತಾರೆ. ಹಿಂದೂಗಳ ಪ್ರಕಾರ ಸೂರ್ಯ ತನ್ನ ಪಥವನ್ನು ಉತ್ತರದತ್ತ ಬದಲಾಯಿಸುವ ದಿನವಿದು. ಇಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

    ಕೆಲವು ದೇವಾಲಯಗಳ ಗರ್ಭಗುಡಿಯಲ್ಲಿರುವ ದೇವರ ಮೂರ್ತಿಗೆ ಸೂರ್ಯ ರಶ್ಮಿಯ ಸ್ಪರ್ಶವಾಗುತ್ತದೆ. ಅದರಂತೆ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನ ಹಾಗೂ ಮಂಡ್ಯದ ಕಾಶಿ ಚಂದ್ರಮೌಳೇಶ್ವರ ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಸೂರ್ಯ ರಶ್ಮಿ ಸ್ಪರ್ಶಿಸುತ್ತದೆ. ಈ ಮೂಲಕ ಪಥ ಬದಲಾವಣೆಗೆ ಸೂರ್ಯ ಮಹಾದೇವನ ಅಪ್ಪಣೆ ಕೇಳುತ್ತಾನೆ.

    ದೃಗ್ ಪಂಚಾಂಗದ ಪ್ರಕಾರ ಜನವರಿ 14ರಂದು ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಪುಣ್ಯಕಾಲ ಜ.15ರವರೆಗೆ ಇರುತ್ತದೆ. ಹೀಗಾಗಿ ಈ ಎರಡು ದಿನ ಮಕರ ಸಂಕ್ರಾಂತಿ ಹಬ್ಬ ಆಚರಿಸುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದ ವಾಡಿಕೆ. ರೈತರಿಗೂ ಸಂಕ್ರಾಂತಿ ಸಮೃದ್ಧಿಯ ಸಂಕೇತ, ವರ್ಷಪೂರ್ತಿ ಬೆಳೆದ ಬೆಳೆಗಳು ಫಸಲಿಗೆ ಬಂದು ಧಾನ್ಯ ಸಂಗ್ರಹಿಸುವ ಸಮಯದಲ್ಲಿ ಈ ಹಬ್ಬ ಬರುತ್ತದೆ. ರಾಗಿ, ಮುಸುಕಿನ ಜೋಳ, ಅವರೆಕಾಳು ಸೇರಿದಂತೆ ಇತರೆ ಧಾನ್ಯಗಳು ಮನೆ ಸೇರುವ ಸಮಯದಲ್ಲಿ ರೈತರು ಅತ್ಯಂತ ಸಂತಸದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ತಾವು ಬೆಳೆದ ಧಾನ್ಯಗಳನ್ನು ಉಪಯೋಗಿಸಿ, ಸಿಹಿ ಪದಾರ್ಥ ಮಾಡಿ, ದೇವರಿಗೆ ನೈವೇದ್ಯ ನೀಡುವ ಜೊತೆಗೆ ಅಕ್ಕ ಪಕ್ಕದವರಿಗೂ ಹಂಚಿ ಸಂಭ್ರಮಿಸುತ್ತಾರೆ,

    ದೇಗುಲಗಳಲ್ಲಿ ವಿಶೇಷ ಪೂಜೆ
    ಮಕರ ಸಂಕ್ರಾಂತಿಯಂದು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಸಂಕ್ರಮಣದಂದು ದೇವರಿಗೆ ಅಭಿಷೇಕ ಮಾಡಿ, ಸೂರ್ಯ ರಶ್ಮಿ ದೇವಾಲಯ ಪ್ರವೇಶ ಮಾಡುವ ಕಾಲಕ್ಕೆ ಪೂಜೆ, ಮಹಾಮಂಗಳಾರತಿ ಮಾಡಲಾಗುತ್ತದೆ. ಹಲವು ದೇವಾಲಯಗಳಲ್ಲಿ ಈ ರೂಢಿ ಇಂದಿಗೂ ಇದೆ.

    ಗವಿ ಗಂಗಾಧರೇಶ್ವರ ದೇವಸ್ಥಾನ
    ಬೆಂಗಳೂರಿನ ಗವಿಗಂಗಾಧರೇಶ್ವ ದೇವಸ್ಥಾನ ನಗರದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿವರ್ಷ ಮಕರ ಸಂಕ್ರಮಣದ ದಿನದಂದು ಸೂರ್ಯ ರಶ್ಮಿಯು ಶಿವನ ವಾಹನವಾದ ನಂದಿಯ ಮೇಲೆ ಬೀಳುತ್ತದೆ. ಬಳಿಕ ಗರ್ಭಗುಡಿಯೊಳಗಿನ ಶಿವಲಿಂಗವನ್ನು ಸ್ಪರ್ಶಿಸುತ್ತದೆ. ನಿರ್ದಿಷ್ಟ ಶಿಲೆಯಿಂದ ನಿರ್ಮಿತವಾಗಿರುವ ಈ ದೇವಸ್ಥಾನದ ಗರ್ಭಗೃಹದೊಳಗೆ ವರ್ಷಪೂರ್ತಿ ಸೂರ್ಯನ ಬೆಳಕು ಪ್ರವೇಶಿಸುವುದಿಲ್ಲ. ಆದರೆ ಮಕರ ಸಂಕ್ರಾಂತಿಯಂದು ಮಾತ್ರ ಪ್ರವೇಶಿಸುವಷ್ಟು ನಿಖರವಾಗಿ ಇಲ್ಲಿನ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.

    ಕಾಶಿ ಚಂದ್ರಮೌಳೇಶ್ವರನಿಗೆ ಪ್ರಥಮ ಸೂರ್ಯ ರಶ್ಮಿ ಸ್ಪರ್ಶ
    ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿರುವ ಕಾಶಿ ಚಂದ್ರಮೌಳೇಶ್ವರನಿಗೆ ಸೂರ್ಯ ರಶ್ಮಿಯ ಸ್ಪರ್ಶವಾಗುತ್ತದೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಕ್ಷಿಣ ಕಾವೇರಿ ನದಿ ತೀರದಲ್ಲಿರುವ ಏಕೈಕ ಶಿವನ ದೇವಾಲಯವಾಗಿರುವ ಪುರಾಣ ಪ್ರಸಿದ್ಧ ಕಾಶಿ ಚಂದ್ರಮೌಳೇಶ್ವರ ದೇವಾಲಯದ ಗರ್ಭಗುಡಿಯ ಲಿಂಗದ ಮೇಲೆ ಸೂರ್ಯನ‌ ಪ್ರಥಮ‌ ರಶ್ಮಿ ಕಿರಣಗಳು ಸ್ಪರ್ಶ ಮಾಡುತ್ತವೆ. ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.

  • ಈ ಬಾರಿಯೂ ಮೈಸೂರಿನಲ್ಲೇ ಸಂಕ್ರಾಂತಿ ಆಚರಿಸಲಿದ್ದಾರೆ ದರ್ಶನ್

    ಈ ಬಾರಿಯೂ ಮೈಸೂರಿನಲ್ಲೇ ಸಂಕ್ರಾಂತಿ ಆಚರಿಸಲಿದ್ದಾರೆ ದರ್ಶನ್

    ಬೆಂಗಳೂರಿನ ಕೋರ್ಟ್ ನೀಡಿದ ಅನುಮತಿಯಿಂದಾಗಿ ಈ ಬಾರಿಯೂ ದರ್ಶನ್ (Darshan) ಮಕರ ಸಂಕ್ರಾತಿ (Makar Sankranti 2025) ಹಬ್ಬವನ್ನು ಮೈಸೂರಿನಲ್ಲಿ ಆಚರಿಸಲಿದ್ದಾರೆ. ಇದನ್ನೂ ಓದಿ:ನಿರ್ದೇಶಕರ ಬಳಿ ಕ್ಷಮೆ ಕೋರಿದ ರಶ್ಮಿಕಾ ಮಂದಣ್ಣ

    ಪ್ರತಿ ವರ್ಷವೂ ಸಂಕ್ರಾಂತಿಯನ್ನು ದರ್ಶನ್ ಅದ್ಧೂರಿಯಾಗಿ ಆಚರಿಸುತ್ತಾರೆ. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಹಸುಗಳಿಗೆ ಸಿಂಗರಿಸಿ ಕಿಚ್ಚು ಹಾಯಿಸುತ್ತಾರೆ. ಕುಟುಂಬದ ಸದಸ್ಯರು ಮತ್ತು ಆಪ್ತರ ಜೊತೆಗೆ ಸಡಗರದಿಂದಲೇ ಸಂಕ್ರಾಂತಿಯನ್ನು ಬರಮಾಡಿಕೊಳ್ಳುತ್ತಾರೆ. ಅದರಂತೆ ಈ ವರ್ಷವೂ ಕೂಡ ಹಬ್ಬ ಆಚರಿಸಲು ದರ್ಶನ್ ಮನೆಯಲ್ಲಿ ಭರ್ಜರಿ ತಯಾರಿ ನಡೆದಿದೆ.

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಆರೋಪಿಯಾಗಿದ್ದರಿಂದ ಮತ್ತು ಬೆಂಗಳೂರು ಬಿಟ್ಟು ತೆರಳಬಾರದು ಅಂತ ಕೋರ್ಟ್ ಆದೇಶ ಇರುವುದರಿಂದ ಈ ಬಾರಿ ಸಂಕ್ರಾಂತಿ ಹಬ್ಬವನ್ನು ಎಲ್ಲಿ ಆಚರಿಸುತ್ತಾರೆ ಎಂಬ ಕುತೂಹಲ ಇತ್ತು.

    ಬೆಂಗಳೂರು ಕೋರ್ಟ್ ಜನವರಿ 12ರಿಂದ 17ರವೆಗೆ ಮೈಸೂರಿನಲ್ಲಿ ಇರಲು ಅನುಮತಿ ನೀಡಿರುವುದರಿಂದ ಮೈಸೂರಿನಲ್ಲಿ ನಟ ಹಬ್ಬ ಆಚರಿಸಲಿದ್ದಾರೆ. ಈ ಬಾರಿಯೂ ಹಸು, ಕುದುರೆ, ಕುರಿ ಹಾಗೂ ಮತ್ತಿತರ ಪ್ರಾಣಿಗಳನ್ನು ಸಿಂಗರಿಸಿ ಕುಟುಂಬದೊಡನೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಿದ್ದಾರೆ.

    ಮೈಸೂರಿಗೆ ದರ್ಶನ್ ತೆರಳಲು ಮತ್ತು ಪವಿತ್ರಾ ಗೌಡಗೆ ಹೊರ ರಾಜ್ಯಕ್ಕೆ ಹೋಗಲು ಕೋರ್ಟ್ ಅನುಮತಿ ನೀಡಿದೆ. 57ನೇ ಸಿಸಿಹೆಚ್ ನ್ಯಾಯಾಧೀಶರ ಮುಂದೆ ದರ್ಶನ್ ಪರ ವಕೀಲರು ಮೈಸೂರಿಗೆ ತೆರಳಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು.

    ಪವಿತ್ರಾ ಗೌಡ ಪರ ವಕೀಲರು ಹೊರ ರಾಜ್ಯಕ್ಕೆ ತೆರಳಲು ಅನುಮತಿ ನೀಡಬೇಕೆಂದು ಕೋರಿದ್ದರು. ಈ ಎರಡು ಅರ್ಜಿಗಳನ್ನು ಕೋರ್ಟ್ ಮಾನ್ಯ ಮಾಡಿದೆ. ದರ್ಶನ್‌ಗೆ ಜ.12ರಿಂದ 17ರವರೆಗೆ ಮೈಸೂರಿನಲ್ಲಿ ತಂಗಲು ಅನುಮತಿ ನೀಡಿದೆ.

    ಕೋರ್ಟ್ ಮುಂಬೈ ಮತ್ತು ದೆಹಲಿಗೆ ತೆರಳಲು ಪವಿತ್ರಾ ಗೌಡಗೆ ಅನುಮತಿ ನೀಡಿದೆ. ದೇವಸ್ಥಾನ ಮತ್ತು ವ್ಯವಹಾರ ಸಂಬಂಧ ಒಂದು ತಿಂಗಳ ಕಾಲ ಹೊರ ರಾಜ್ಯಕ್ಕೆ ತೆರಳಲು ಅನುಮತಿ ಕೇಳಿದ್ದರು. ಆರ್‌ಆರ್ ನಗರದಲ್ಲಿ ಇರುವ ರೆಡ್ ಕಾರ್ಪೆಟ್ ಶೋ ರೂಂಗೆ ಸಂಬಂಧಿಸಿದಂತೆ ವಸ್ತುಗಳನ್ನು ತರಲು ಅವಕಾಶ ನೀಡುವಂತೆ ಪವಿತ್ರಾ ಗೌಡ ಅರ್ಜಿಯಲ್ಲಿ ಮನವಿ ಮಾಡಿದ್ದರು.

    ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಕರ್ನಾಟಕ ಹೈಕೋರ್ಟ್ ಡಿ.13ರಂದು ಜಾಮೀನು ಮಂಜೂರು ಮಾಡಿತ್ತು. ಆದೇಶದಲ್ಲಿ ಏಳು ಆರೋಪಿಗಳಿಗೆ, ಕೋರ್ಟ್ ಅನುಮತಿ ಇಲ್ಲದೇ ಬೆಂಗಳೂರು ಬಿಟ್ಟು ಹೋಗುವಂತಿಲ್ಲ. ಪ್ರತಿ ತಿಂಗಳು ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು.