Tag: Majestic

  • ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರೇ ಇಲ್ಲ – ಮಹಿಳಾ ವೈದ್ಯರು ಬರಲು ಹಿಂದೇಟು

    ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರೇ ಇಲ್ಲ – ಮಹಿಳಾ ವೈದ್ಯರು ಬರಲು ಹಿಂದೇಟು

    ಬೆಂಗಳೂರು: ದಿನಕ್ಕೆ ಲಕ್ಷಾಂತರ ಜನರು ಪ್ರಯಾಣ ಮಾಡುವ ಮೆಜೆಸ್ಟಿಕ್‍ನಲ್ಲಿರುವ ಇಂದಿರಾ ಕ್ಲಿನಿಕ್‍ಗೆ ಕಳೆದ ಒಂದು ತಿಂಗಳಿನಿಂದ ಡಾಕ್ಟರ್ ಬಂದಿಲ್ಲ. ಹೆಚ್ಚಾಗಿ ತೃತೀಯ ಲಿಂಗಿಗಳೇ ಕ್ಲಿನಿಕ್‍ಗೆ ಬರುತ್ತಾರೆ ಎಂದು ವೈದ್ಯರು ನೇಮಕವಾಗಲು ಹಿಂದೇಟು ಹಾಕುತ್ತಿದ್ದಾರೆ.

    ಬೆಂಗಳೂರು ನಗರದಲ್ಲಿ ಇಂದಿರಾ ಕ್ಯಾಂಟಿನ್ ಯಶಸ್ವಿಯಾದ ಬೆನ್ನಲ್ಲೆ ಕಳೆದ ಬಾರಿ ಇದ್ದ ಸರ್ಕಾರ ಬಿಎಂಟಿಸಿ ಸಿಬ್ಬಂದಿ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಮೆಜೆಸ್ಟಿಕ್ ಮತ್ತು ಯಶವಂತಪುರ ಟಿಟಿಎಂಸಿಯಲ್ಲಿ ಇಂದಿರಾ ಕ್ಲಿನಿಕ್ ಆರಂಭ ಮಾಡಿತ್ತು. ಕೆಲವು ದಿನಗಳು ಚೆನ್ನಾಗಿ ನಡೆಯುತ್ತಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರೇ ಇಲ್ಲ. ಇದ್ದ ವೈದ್ಯರು ಕ್ಲಿನಿಕ್ ಬಿಟ್ಟು ಒಂದು ತಿಂಗಳಾದರೂ ಇನ್ನೂ ಬೇರೆ ಡಾಕ್ಟರ್ ನೇಮಕ ಮಾಡಿಲ್ಲ.

    ಬೇರೆ ಡಾಕ್ಟರ್ ನಾ ನೇಮಕ ಮಾಡೋಣ ಅಂದರೆ ಯಾವ ಡಾಕ್ಟರ್ ಕೂಡ ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ಗೆ ಬರಲು ಮುಂದಾಗುತ್ತಿಲ್ಲ. ಮಹಿಳಾ ವೈದ್ಯರು, ನಾವು ಹೋಗಲ್ಲ, ಜಾಗ ಸರಿ ಇಲ್ಲ ಮತ್ತು ತೃತೀಯ ಲಿಂಗಿಗಳು ಜಾಸ್ತಿ ಬರುತ್ತಾರೆ ಆಗಾಗಿ ನಾವು ಹೋಗಲ್ಲ ಎಂದು ಹೇಳುತ್ತಿದ್ದಾರೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.

    ನಮ್ಮ ಪಬ್ಲಿಕ್ ಟಿವಿ, ವೈದ್ಯಾಧಿಕಾರಿಗಳ ಜೊತೆ ನಡೆಸಿದ ಮಾತುಕತೆ
    ಪ್ರತಿನಿಧಿ : ಯಾಕ್ ಸರ್ ಮೆಜೆಸ್ಟಿಕ್‍ನಲ್ಲಿ ಡಾಕ್ಟರ್ ಇಲ್ಲ. ಮೆಜೆಸ್ಟಿಕ್ ಅಂದರೆ ಯಾರು ಬರಲ್ಲ ಅಂತಾ ಇದಾರಂತೆ ಯಾಕೆ?
    ವೈದ್ಯಾಧಿಕಾರಿ : ಇಲ್ಲ ಸರ್ ಮೆಜೆಸ್ಟಿಕ್ ಅಂದರೆ ಲೇಡಿಸ್ ಹಾಕೋಕೆ ಆಗಲ್ಲ. ಅಲ್ಲಿ ವರ್ಕರ್ಸ್ ಜಾಸ್ತಿ
    ಪ್ರತಿನಿಧಿ : ಹುಂ ಹುಂ .
    ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಜಾಸ್ತಿ ಸರ್ ಆಗಾಗಿ ಬರುತ್ತಿಲ್ಲ.
    ಪ್ರತಿನಿಧಿ : ಹೌದಾ…
    ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಜಾಸ್ತಿ ಇದಾರೆ ಸರ್
    ಪ್ರತಿನಿಧಿ : ಆದರೆ ಏನು..
    ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಹೆಚ್ಚಾಗಿ ಬರುವುದು ಸರ್.. ಅವರಿಗೆ ಲೇಡಿಸ್ ಟ್ರೀಟ್ ಮೆಂಟ್ ಕೊಡೋಕೆ ಆಗಲ್ಲ ಸರ್
    ಪ್ರತಿನಿಧಿ : ಲೇಡಿ ಡಾಕ್ಟರ್ ಅಪಾಯಿಂಟ್ ಆಗಿದ್ರಾ
    ವೈದ್ಯಾಧಿಕಾರಿ : ಹೌದು.. ಲೇಡಿ ಡಾಕ್ಟರ್ ಅಪಾಯಿಂಟ್ ಆಗಿದ್ರು, ಬರಲ್ಲ ಅಂತಾ ಅಂದ್ರು
    ಪ್ರತಿನಿಧಿ : ಮತ್ತೆ ಹೇಗೆ ಈಗ
    ವೈದ್ಯಾಧಿಕಾರಿ : ಈಗ ಜೆಂಟ್ಸ್ ಡಾಕ್ಟರ್ ಬರುತ್ತಾರೆ, ಸೋಮವಾರ

    ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರ್ ಇಲ್ಲದೇ ನರ್ಸ್‌ಗಳು ಟ್ರೀಟ್ ಮೆಂಟ್ ಕೊಡುತ್ತಿದ್ದಾರೆ. ವೈದ್ಯರಿಲ್ಲದೇ ನರ್ಸ್‌ಗಳ ಬಳಿ ಟ್ರೀಟ್ ಮೆಂಟ್ ತೆಗೆದುಕೊಳ್ಳುವುದಕ್ಕೆ ರೋಗಿಗಳು ಸಹ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಯಾಕೆ ಒಂದು ತಿಂಗಳಿನಿಂದ ಡಾಕ್ಟರ್ ಇಲ್ಲ ಎಂದು ನರ್ಸ್ ಕೇಳಿದರೆ ಏನು ಉತ್ತರ ಕೊಟ್ಟಿದ್ದಾರೆ ಎಂದು ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ…

    ಪ್ರತಿನಿಧಿ : ಮೆಜೆಸ್ಟಿಕ್ ಆದರೆ ಏನಂತೆ ಮೇಡಂ ಬರೋದಕ್ಕೆ
    ಇಂದಿರಾ ಕ್ಲಿನಿಕ್ ನರ್ಸ್ : ಮೆಜೆಸ್ಟಿಕ್ ಏರಿಯಾ ಸರಿ ಇಲ್ಲ ಅಂತಾ ಸರ್
    ಪ್ರತಿನಿಧಿ : ಇವರು ಯಾಕ್ ಬಿಟ್ಟಿದ್ದು
    ಇಂದಿರಾ ಕ್ಲಿನಿಕ್ ನರ್ಸ್ : ಎಂಡಿ ಮಾಡೋದಕ್ಕೆ ಹೋಗಿದ್ದಾರೆ
    ಪ್ರತಿನಿಧಿ : ಏನು ಹೇಳ್ತಾರೆ ಮೇಲಿನವರು ಯಾವಾಗ ಬರುತ್ತಾರಂತೆ
    ಇಂದಿರಾ ಕ್ಲಿನಿಕ್ ನರ್ಸ್ : ಗೊತ್ತಿಲ್ಲ ಸರ್ ಮೆಜೆಸ್ಟಿಕ್ ಸರಿ ಇಲ್ಲ ಯಾರು ಬರುತ್ತಿಲ್ಲ ಅಂತಾ ಹೇಳುತ್ತಿದ್ದಾರೆ ಸರ್
    ಪ್ರತಿನಿಧಿ : ಎರಡು ತಿಂಗಳಿನಿಂದ ಡಾಕ್ಟರ್ ಇಲ್ಲ
    ಇಂದಿರಾ ಕ್ಲಿನಿಕ್ ನರ್ಸ್ : ಒಂದು ತಿಂಗಳಿನಿಂದ ಇಲ್ಲ ಸರ್
    ಪ್ರತಿನಿಧಿ : ಯಾವಾಗ ಬರಬಹುದು ?
    ನರ್ಸ್ : ಬರುತ್ತಾರೆ ಸರ್ ಇನ್ನೊಂದು ವಾರದಲ್ಲಿ ಬರ್ತಾರೆ ಅಂತಾ ಆಫೀಸರ್ಸ್ ಹೇಳುತ್ತಿದ್ದಾರೆ ಸರ್.

  • ಬೈಕಿನಲ್ಲಿ ಬಂದು ಮಹಿಳೆಯನ್ನ ಅಪಹರಿಸಿ, ಅತ್ಯಾಚಾರಕ್ಕೆ ಯತ್ನ!

    ಬೈಕಿನಲ್ಲಿ ಬಂದು ಮಹಿಳೆಯನ್ನ ಅಪಹರಿಸಿ, ಅತ್ಯಾಚಾರಕ್ಕೆ ಯತ್ನ!

    ಬೆಂಗಳೂರು: ನಗರದ ಮೆಜೆಸ್ಟಿಕ್ ಬಸ್ಸು ನಿಲ್ದಾಣದಲ್ಲಿ ಮಹಿಳೆಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಂತ್ರಸ್ತ ಮಹಿಳೆ ಸೋಮವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದು, ಮತ್ತೊಂದು ಬಸ್ಸಿಗಾಗಿ ಕಾಯುತ್ತಿದ್ದರು. ರಾತ್ರಿ 11 ಗಂಟೆ ಆಗಿದ್ದರಿಂದ ಮಹಿಳೆ ನಿಂತಿದ್ದ ಪ್ರದೇಶಕ್ಕೆ  ಇಬ್ಬರು ವ್ಯಕ್ತಿಗಳು ಆಗಮಿಸಿ ಲೈಂಗಿಕ ಕಿರುಕುಳ ಕೊಡಲು ಪ್ರಾರಂಭಿಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಮಹಿಳೆಯು ರಸ್ತೆ ದಾಟಿ ರೈಲ್ವೇ ನಿಲ್ದಾಣದ ಕಡೆ ನಡೆದುಕೊಂಡು ಹೋಗುತ್ತಿದ್ದಾಗ, ಬೈಕಿನಲ್ಲಿ ಬಂದ ಇಬ್ಬರು ಆಕೆಯನ್ನು ಅಪಹರಿಸಿ ಬಾಯಿ ಮುಚ್ಚಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.

    ನಿರ್ಜನ ಪ್ರದೇಶದಲ್ಲಿ ಅಂಗಾಂಗಳನ್ನು ಮುಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಬಾಯಿಗೆ ಕಟ್ಟಿದ ಬಟ್ಟೆಯನ್ನು ತೆಗೆದು  ಕಾಪಾಡಿ ಕಾಪಾಡಿ ಎಂದು ಮಹಿಳೆ ಜೋರಾಗಿ ಕಿರುಚಾಡಿದ್ದಾರೆ. ಗಾಬರಿಗೊಂಡ ಸವಾರರು ತಕ್ಷಣವೇ ಆಕೆಯನ್ನು ಅಲ್ಲಿಯೇ ಬಿಟ್ಟು ಬೈಕ್ ಏರಿ ಪರಾರಿಯಾಗಿದ್ದಾರೆ. ಸಂತ್ರಸ್ತ ಮಹಿಳೆಯು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಬೈಕ್ ನಂಬರ್ ಸಹಿತ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

  • ಮೆಜೆಸ್ಟಿಕ್ ಸಿನಿಮಾ ನಿರ್ದೇಶಕ ಪಿ.ಎನ್.ಸತ್ಯ ವಿಧಿವಶ

    ಮೆಜೆಸ್ಟಿಕ್ ಸಿನಿಮಾ ನಿರ್ದೇಶಕ ಪಿ.ಎನ್.ಸತ್ಯ ವಿಧಿವಶ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಬ್ರೇಕ್ ಕೊಟ್ಟಿದ್ದ ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪಿ.ಎನ್.ಸತ್ಯ ಇಂದು ವಿಧಿವಶರಾಗಿದ್ದಾರೆ.

    ಕಳೆದ ಒಂದು ವರ್ಷದಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಸತ್ಯ ಅವರಿಗೆ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಶುಕ್ರವಾರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದ್ರೆ ಇಂದು ಸಂಜೆ ಲೋ ಬಿಪಿ ಆದ ಕಾರಣ ಕೊನೆ ಉಸಿರೆಳೆದಿದ್ದಾರೆ. ಬಸವೇಶ್ವರನಗರದ ಸತ್ಯವರ ಸೋದರಿ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗ್ತಿದೆ.

    ಮೆಜೆಸ್ಟಿಕ್, ಡಾನ್, ದಾಸ, ಸರ್ದಾರ, ಉಡೀಸ್, ಶಾಸ್ತ್ರೀ, ತಂಗಿಗಾಗಿ, ಗೂಳಿ, ಕೆಂಚ, ಹ್ಯಾಟ್ರಿಕ್ ಹೊಡಿ ಮಗ, ಸುಗ್ರೀವ, ಪಾಗಲ್, ಜೇಡರಹಳ್ಳಿ, ಶಿವಾಜಿನಗರ ಬೆಂಗಳುರು ಅಂಡರ್‍ವಲ್ಡ್ ಮತ್ತು ಮರಿ ಟೈಗರ್ ಸೇರಿದಂತೆ 16 ಚಿತ್ರಗಳನ್ನು ಪಿ.ಎನ್.ಸತ್ಯ ನಿರ್ದೇಶಿಸಿದ್ದರು. ನಿರ್ದೇಶನ ಮಾತ್ರವಲ್ಲದೇ 21 ಚಿತ್ರಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಮರಿ ಟೈಗರ್ ಸತ್ಯ ನಿರ್ದೇಶನದ ಕೊನೆಯ ಚಿತ್ರ.

  • ಮಾರುತಿಗೆ ದರ್ಶನ್ ಸಾರಥಿ- ನಡೆದು ಬಂದ ದಾರಿ ಮರೆಯಲಿಲ್ಲ ಚಕ್ರವರ್ತಿ

    ಮಾರುತಿಗೆ ದರ್ಶನ್ ಸಾರಥಿ- ನಡೆದು ಬಂದ ದಾರಿ ಮರೆಯಲಿಲ್ಲ ಚಕ್ರವರ್ತಿ

    ಬೆಂಗಳೂರು: ಹಣ, ಹೆಸರು, ಶ್ರೀಮಂತಿಕೆ ಎಲ್ಲಾ ಬಂದ ಮೇಲೆ ಏನು ಬೇಕೋ ಸಿಗಬಹುದು. ಅವು ಹೆಚ್ಚು ದಿನ  ಸ್ಮೃತಿ ಪಟಲದಲ್ಲಿ ಉಳಿಯಲು ಸಾಧ್ಯವಿಲ್ಲ. ಆದರೆ ಏನೇನೂ ಇಲ್ಲದಿದ್ದಾಗಿನ ನೆನಪುಗಳು ಯಾವತ್ತಿಗೂ ಮರೆಯಲು ಕೂಡಾ ಸಾಧ್ಯವಿಲ್ಲ.

    ಅದು ದರ್ಶನ್ ಅವರ ಮೊದಲ ಸಿನಿಮಾ. `ಮೆಜೆಸ್ಟಿಕ್’ ಹೆಸರಿನ ಸಿನಿಮಾ ಶುರು ಮಾಡಿದಾಗ ದರ್ಶನ್ ಅವರ ಬಳಿ ಓಡಾಟಕ್ಕೆ ಸ್ವಂತಕ್ಕೊಂದು ಕಾರು ಸಹಾ ಇರಲಿಲ್ಲ. ಮೆಜೆಸ್ಟಿಕ್ ಸಿನಿಮಾದ ನಿರ್ಮಾಪಕ ಎಂ.ಜಿ. ರಾಮಮೂರ್ತಿ ಅವರ ಬಳಿ ಮಾರುತಿ 800 ಕಾರ್ ಇತ್ತು. ದರ್ಶನ್ ಶೂಟಿಂಗ್ ಗೆಂದು ಬೆಂಗಳೂರಿಗೆ ಬಂದಾಗ ಅನೇಕ ಸಲ ಇದೇ ಕಾರನ್ನೇ ಓಡಾಟಕ್ಕೆ ಬಳಸುತ್ತಿದ್ದರು. ಮಾರುತಿ 800 ಕಾರಲ್ಲಿ ಓಡಾಡುವುದೇ ಆಗಿನ ಕಾಲಕ್ಕೆ ದರ್ಶನ್ ರಂಥ ಹೊಸಾ ಹೀರೋಗೆ ಖುಷಿಯ ವಿಚಾರವಾಗಿತ್ತು. ಇವತ್ತು ದರ್ಶನ್ ಮನೆಯಲ್ಲಿ ಇಂಟರ್ ನ್ಯಾಷನಲ್ ಕಂಪೆನಿಯ ಕಾರುಗಳು ನಿಂತಿವೆ. ಇತ್ತೀಚೆಗೆ ತಾನೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಲ್ಯಾಂಬೋರ್ಗಿನಿ ಕಾರನ್ನು ಸಹ ದರ್ಶನ್ ಖರೀದಿಸಿದ್ದಾರೆ.

    ಇದೆಲ್ಲದರ ನಡುವೆ ಇತ್ತೀಚೆಗ ನೆಲಮಂಗಲದ ರೆಸಾರ್ಟ್ ವೊಂದರಲ್ಲಿ ಮೆಜೆಸ್ಟಿಕ್ ಸಿನಿಮಾ ಬಿಡುಗಡೆಯಾಗಿ 16 ವರ್ಷ ಕಳೆದ ನೆನಪಿಗೆ ನಿರ್ಮಾಪಕ ರಾಮಮೂರ್ತಿ ಸಣ್ಣದೊಂದು ಸಮಾರಂಭ ಆಯೋಜಿಸಿದ್ದರು. ಮೆಜೆಸ್ಟಿಕ್ ಸಿನಿಮಾಗಾಗಿ ದುಡಿದ ತಂತ್ರಜ್ಞರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ದರ್ಶನ್ ಅವರು ಮೆಜೆಸ್ಟಿಕ್ ಸಂದರ್ಭದಲ್ಲಿ ತಾವು ಓಡಾಡುತ್ತಿದ್ದ ಮಾರುತಿ ಕಾರಿನ 3483 ನಂಬರ್ ಸಮೇತ ನೆನಪು ಮಾಡಿಕೊಂಡರು. ಈ ಕಾರು ಕೊಟ್ಟರೆ ನಾನು ಮನೆಗೆ ತೆಗೆದುಕೊಂಡು ಹೋಗುತ್ತೇನೆ ಎನ್ನುವ ಬಯಕೆ ವ್ಯಕ್ತಪಡಿಸಿದರು. ಕೂಡಲೇ ನಿರ್ಮಾಪಕ ರಾಮಮೂರ್ತಿ ಮಾರು 800 ಕಾರಿನ ಕೀ ಸಮೇತ ಕಾರನ್ನು ದರ್ಶನ್ ಅವರಿಗೆ ನೀಡಿದರು. ತಕ್ಷಣ ಆ ಕಾರಲ್ಲಿ ಕೂತು ಒಂದು ರೌಂಡು ಹಾಕಿಕೊಂಡು ಬಂದ ದರ್ಶನ್ ಅವರ ಮುಖದಲ್ಲಿ ಕಂಡ ಸಂತಸ ನಿಜಕ್ಕೂ ದೊಡ್ಡದು. ಅದು ಯಾವ ಮಟ್ಟಿಗೆಂದರೆ, ಅವರು ಲ್ಯಾಂಬೋರ್ಗಿನಿಯಲ್ಲಿ ಕೂತು ಡ್ರೈವ್ ಮಾಡಿದ್ದಕ್ಕಿಂತಾ ಹೆಚ್ಚು!

  • ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಚಿಂದಿ ಆಯುವವರ ನಡುವೆ ಜಗಳ- ತಲೆಗೆ ಕಲ್ಲಿನಿಂದ ಜಜ್ಜಿ ಹಲ್ಲೆ

    ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಚಿಂದಿ ಆಯುವವರ ನಡುವೆ ಜಗಳ- ತಲೆಗೆ ಕಲ್ಲಿನಿಂದ ಜಜ್ಜಿ ಹಲ್ಲೆ

    ಬೆಂಗಳೂರು: ಕುಡಿದ ಮತ್ತಿನಲ್ಲಿ ಚಿಂದಿ ಆಯುವವರ ನಡುವೆ ಜಗಳವಾಗಿ ಮಗೇಶ್ ಎಂಬಾತನ ತಲೆಗೆ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿರುವ ಘಟನೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಘಟನೆಯಲ್ಲಿ ಮಗೇಶನ ಮೇಲೆ ಆದ ಹಲ್ಲೆಯಿಂದ ವಿಪರೀತ ರಕ್ತಸ್ರಾವವಾಗಿ ರಸ್ತೆಯಲ್ಲಿ ಒದ್ದಾಡ್ತಾ ಇದ್ದ. ಇದನ್ನು ಅರಿತ ಸ್ಥಳೀಯರು ಹಲ್ಲೆ ನಡೆಸಿದ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಗೇಶ್‍ಗೆ ವಿಪರೀತ ರಕ್ತಸ್ರಾವವಾಗುತ್ತಿರುವುದನ್ನ ಕಂಡ ಸ್ಥಳೀಯರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದ್ರೆ ಘಟನೆ ನಡೆದು ಒಂದು ಗಂಟೆಯಾದ್ರೂ ಅಂಬುಲೆನ್ಸ್ ಬರಲೇ ಇಲ್ಲ.

    ಮಾನವೀಯತೆ ಮೆರೆದ ಬೀಟ್ ಪೊಲೀಸರು ಮತ್ತು ಆಟೋ ಚಾಲಕರು ಹಲ್ಲೆಗೊಳಗಾದ ವ್ಯಕ್ತಿಯನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಸಂಬಂಧ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ