Tag: Majestic Bus Stand

  • ಟೀ ಚೆನ್ನಾಗಿಲ್ಲ ಎಂದಿದ್ದಕ್ಕೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಫ್ಲಾಸ್ಕ್‌ನಿಂದ ಹಲ್ಲೆ

    ಟೀ ಚೆನ್ನಾಗಿಲ್ಲ ಎಂದಿದ್ದಕ್ಕೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಫ್ಲಾಸ್ಕ್‌ನಿಂದ ಹಲ್ಲೆ

    ಬೆಂಗಳೂರು: ಟೀ (Tea) ಚೆನ್ನಾಗಿಲ್ಲ ಎಂದಿದ್ದಕ್ಕೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಟೀ ಶಾಪ್ ಸಿಬ್ಬಂದಿ ಹಲ್ಲೆ ಮಾಡಿದ ಘಟನೆ ಮೆಜೆಸ್ಟಿಕ್ (Majestic) ಬಸ್ ನಿಲ್ದಾಣದಲ್ಲಿ ನಡೆದಿದೆ.

    46ನೇ ಚಾಲಕ ಮೂಗಪ್ಪ ಅವರ ಮೇಲೆ ಟೀ ಸ್ಟಾಲ್ ಸಿಬ್ಬಂದಿ ಗುರುರಾಜ್ ಫ್ಲಾಸ್ಕ್‌ನಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಚಾಲಕ ಟೀ ಚೆನ್ನಾಗಿಲ್ಲ ಎಂದಿದ್ದಕ್ಕೆ ರೊಚ್ಚಿಗೆದ್ದ ಗುರುರಾಜ್ ರಕ್ತ ಬರುವಂತೆ ಫ್ಲಾಸ್ಕ್‌ನಿಂದ ತಲೆಗೆ ಹೊಡೆದಿದ್ದಾನೆ. ಇದನ್ನೂ ಓದಿ: ಆರೋಪಿ ನಟ ದರ್ಶನ್‌ ಮನೆಯಲ್ಲಿ 3 ಲಕ್ಷ ನಗದು ಕಳ್ಳತನ

    ಹಲ್ಲೆಗೊಳಗಾದ ಚಾಲಕ ಉಪ್ಪಾರಪೇಟೆ ಪೊಲೀಸ್ (Upparpet Police) ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಹಲ್ಲೆ ಮಾಡಿದ ಗುರುರಾಜ್‌ನನ್ನು ಬಂಧಿಸಿ, ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

  • ಹೈಟೆಕ್ ಆಗಲಿದೆ ಮೆಜೆಸ್ಟಿಕ್ ಬಸ್ ನಿಲ್ದಾಣ – 40 ಎಕರೆ ಜಾಗದಲ್ಲಿ ಬಹುಮಾದರಿ ಟ್ರಾನ್ಸ್‌ಪೋರ್ಟ್‌ ಹಬ್!

    ಹೈಟೆಕ್ ಆಗಲಿದೆ ಮೆಜೆಸ್ಟಿಕ್ ಬಸ್ ನಿಲ್ದಾಣ – 40 ಎಕರೆ ಜಾಗದಲ್ಲಿ ಬಹುಮಾದರಿ ಟ್ರಾನ್ಸ್‌ಪೋರ್ಟ್‌ ಹಬ್!

    ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು (Majestic Bus Stand) ಹೈಟೆಕ್ ಮಾಡಲು ಸರ್ಕಾರ ಹೊರಟಿದ್ದು, ಮುಂದೆ ಮೆಜೆಸ್ಟಿಕ್ ಬಸ್ ಸ್ಟಾಪ್ ಇಂಟರ್‌ಮಾಡೆಲ್ ಟ್ರಾನ್ಸ್‌ಪೋರ್ಟ್‌ ಹಬ್ ಆಗಲಿದೆ.

    ಬೆಂಗಳೂರಿನ (Bengaluru) ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಲಕ್ಷಾಂತರ ಜನ ಬರ್ತಾರೆ, ಹೋಗ್ತಾರೆ. ಸುಮಾರು ಮೂವತ್ತು ವರ್ಷಗಳ ಇತಿಹಾಸವಿರುವ ಈ ಬಸ್ ನಿಲ್ದಾಣವನ್ನು ನವೀಕರಣ ಮಾಡಲು ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ತುಮಕೂರು | ಹೋಟೆಲ್‌ನಲ್ಲಿ ದಾವಣಗೆರೆ ಪಿಎಸ್‍ಐ ನೇಣಿಗೆ ಶರಣು

    ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಮೆಜೆಸ್ಟಿಕ್ ಬಸ್ ನಿಲ್ದಾಣದ ಜಾಗವನ್ನು ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಯೋಜನೆಯ ಅಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಪುನರ್ ಅಭಿವೃದ್ಧಿಪಡಿಸಿ, ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ನಿರ್ಮಿಸುತ್ತೇವೆ ಎಂದು ಘೋಷಿಸಿದ್ದರು. ಈ ಹಿನ್ನೆಲೆ ಸಾರಿಗೆ ಇಲಾಖೆ ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಇಂಟರ್‌ಮಾಡಲ್ ಟ್ರಾನ್ಸ್‌ಪೋರ್ಟ್‌ ಹಬ್ ಆಗಿ ಪರಿವರ್ತನೆ ಮಾಡಲು ಸಜ್ಜಾಗುತ್ತಿದೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಹಮ್ಮಿಕೊಳ್ಳಲು ಪ್ಲಾನ್ ಮಾಡಿದೆ. ಈ ಪ್ರಾಜೆಕ್ಟ್ ಬಗ್ಗೆ ತಂತ್ರಜ್ಞ ಸಲಹೆಗಾರರನ್ನು ನೇಮಿಸಲು ಕೆಎಸ್‌ಆರ್‌ಟಿಸಿ ಟೆಂಡರ್ ಕರೆದಿದೆ.

    ಈ ಯೋಜನೆಯ ಉದ್ದೇಶವೆಂದರೆ, ನಗರ ಮತ್ತು ಅಂತರನಗರ ಸಾರಿಗೆ, ಮೆಟ್ರೋ ಮತ್ತು ರೈಲ್ವೆ ಸೇವೆಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸಿ ಪ್ರಯಾಣಿಕರಿಗೆ ಸುಗಮ ಸಂಚಾರ ಅನುಭವ ಒದಗಿಸುವುದು. ಸುಮಾರು 40 ಎಕರೆ ಭೂಭಾಗದಲ್ಲಿ ಈ ಹಬ್ ನಿರ್ಮಾಣವಾಗಲಿದೆ. ಇದು ಈಗಿರುವ ಕೆಎಸ್‌ಆರ್‌ಟಿಸಿ ಟರ್ಮಿನಲ್‌ಗಳು 1, 2, 3 ಅನ್ನು ಒಳಗೊಂಡಿರುತ್ತದೆ. ಶಾಪಿಂಗ್ ಕಾಂಪ್ಲೆಕ್ಸ್, ಆಹಾರ ಮಳಿಗೆಗಳು, ಕಚೇರಿ ಪ್ರದೇಶಗಳು ಸೇರಿ ವಾಣಿಜ್ಯ ವ್ಯವಸ್ಥೆಗೂ ಅವಕಾಶವಿರುತ್ತದೆ. ಈಗ ಕೆಎಸ್‌ಆರ್‌ಟಿಸಿ ಟೆಂಡರ್‌ನಲ್ಲಿ ಆಯ್ಕೆಯಾದ ಸಲಹೆಗಾರರು ಸ್ಥಳ ಪರಿಶೀಲನೆ, ಸಂಚಾರದ ಚಟುವಟಿಕೆ ವಿಶ್ಲೇಷಣೆ, ಮಾರುಕಟ್ಟೆ ಅಗತ್ಯತೆಯ ಮುನ್ಸೂಚನೆ, ಪರಿಸರ ಹಾಗೂ ಸಾಮಾಜಿಕ ಪರಿಣಾಮಗಳ ಅಧ್ಯಯನದೊಂದಿಗೆ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಬೇಕು. ಇದನ್ನೂ ಓದಿ: ಗ್ಯಾರಂಟಿ ಬೇಡ ಅಂತ ಹೇಳಿ, ಅದೇ ದುಡ್ಡಲ್ಲಿ ರಸ್ತೆ ಮಾಡಿಸ್ತೀವಿ: ರಾಯರೆಡ್ಡಿ

    ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ದೇವರಾಜ್ ಅರಸ್ ಹಾಗೂ ಗುಂಡೂರಾವ್ ನೇತೃತ್ವದಲ್ಲಿ ಈ ಬಸ್ ನಿಲ್ದಾಣವಾಗಿದ್ದು, 2016 ರಲ್ಲಿಯೇ ನವೀಕರಣಕ್ಕೆ ಪ್ಲಾನ್ ಮಾಡಲಾಗಿತ್ತು. ಇದೀಗ ನವೀಕರಣವಾಗ್ತಿದೆ. ಸದ್ಯ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಯಿಂದ ಪ್ರತಿದಿನ ಅಂದಾಜು ಹತ್ತು ಸಾವಿರ ಬಸ್‌ಗಳು ಸಂಚರಿಸುತ್ತಿದ್ದು, ಜಾಗದ ಕೊರತೆ ಇದೆ ಎಂದು ತಿಳಿಸಿದ್ದಾರೆ.

  • ಬೆಂಗಳೂರಿನ ಹಲವೆಡೆ ಆಲಿಕಲ್ಲು ಮಳೆ

    ಬೆಂಗಳೂರಿನ ಹಲವೆಡೆ ಆಲಿಕಲ್ಲು ಮಳೆ

    – ಧರೆಗುರುಳಿದ ಬೃಹತ್ ಮರಗಳು
    – ಒಂದೇ ಮಳೆಗೆ ಕೆರೆಯಂತಾದ ಸಿಲಿಕಾನ್ ಸಿಟಿ

    ಬೆಂಗಳೂರು: ಮಂಗಳವಾರ ಸಂಜೆ ಬೆಂಗಳೂರಲ್ಲಿ(Bengaluru) ವರುಣರಾಯ ಆರ್ಭಟಿಸಿದ್ದು, ನಗರದ ಬಾಣಸವಾಡಿ, ಕಲ್ಯಾಣನಗರ ಪ್ರದೇಶದಲ್ಲಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿ ಸಹಿತ ಮಳೆಯಾಗಿದೆ. ಬಿರುಗಾಳಿ ಮಳೆಗೆ ಟೆರೆಸ್ ಮೇಲಿನ ಗಾರ್ಡನ್ ಚೆಲ್ಲಾಪಿಲ್ಲಿಯಾಗಿವೆ.

    ವರುಣನ ಅಬ್ಬರಕ್ಕೆ ಯಲಚೇನಹಳ್ಳಿ ಬಳಿ ಮೂರು ಮರಗಳು ಧರಾಶಾಹಿಯಾಗಿದ್ದು, ಮರ ಬಿದ್ದ ಪರಿಣಾಮ ನಾಲ್ಕು ಕಾರುಗಳು ಜಖಂಗೊಂಡಿವೆ. ಬಿಬಿಎಂಪಿ ಸಿಬ್ಬಂದಿ ಮರ ತೆರವು ಕಾರ್ಯ ಮಾಡಿದರು. ಮಲ್ಲೇಶ್ವರಂನ(Malleshwaram) ಪಿಯುಸಿ ಬೋರ್ಡ್ ಬಳಿ ಮರವೊಂದು ರಸ್ತೆಗುರುಳಿದ್ದು, ಸದ್ಯ ಯಾವುದೇ ಹಾನಿ ಸಂಭವಿಸಿಲ್ಲ. ಅಲ್ಲದೇ ಕಾವೇರಿ ಜಂಕ್ಷನ್(Cauvery Junction) ಬಳಿ ಮರದ ಕೊಂಬೆಗಳು ಮುರಿದು ಬಿದ್ದಿದ್ದು, ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್‌ನಿಂದ ಅರಮನೆ ಮೈದಾನ ಕಡೆ ಹೋಗುವ ಮಾರ್ಗದಲ್ಲಿ ಮುರಿದು ಬಿದ್ದಿದೆ. ಮರದ ಕೊಂಬೆ ಮುರಿದು ಬೀಳುವಾಗ ಯಾವುದೇ ವಾಹನ ಸಂಚಾರವಿರದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಇದನ್ನೂ ಓದಿ: ಬೆಂಗಳೂರಿಗೆ ಯಲ್ಲೋ ಅಲರ್ಟ್ – ಮುಂದಿನ 3 ಗಂಟೆ ಭಾರೀ ಮಳೆ

    ಇನ್ನು ಒಂದೇ ಮಳೆಗೆ ಮೆಜೆಸ್ಟಿಕ್ ಬಸ್ ನಿಲ್ದಾಣಯು(Majestic Busstand) ಕೆರೆಯಂತಾಗಿದೆ. ಮಳೆ ನೀರು ಬಸ್ ನಿಲ್ದಾಣದ ಒಳಗೆ ನುಗ್ಗಿ, ಪ್ರಯಾಣಿಕರು ಪರದಾಡುವಂತಾಯಿತು. ಮಳೆಯ ಅವಾಂತರಕ್ಕೆ ನಾಗವಾರ ಹೆಬ್ಬಾಳ ಮುಖ್ಯ ರಸ್ತೆಯಲ್ಲಿ ಬಿಎಂಟಿಸಿ ಬಸ್ಸೊಂದು ಜಲಾವೃತವಾಗಿದೆ. ಜಲಾವೃತವಾಗಿದ್ದ ರಸ್ತೆಯಿಂದ ಬಸ್‌ನ ಒಳಗೆ ನೀರು ನುಗ್ಗಿದ್ದು, ಪ್ರಯಾಣಿಕರು ಮಳೆ ನೀರಿನಲ್ಲೇ ಕುಳಿತಿರುವಂತ ಪರಿಸ್ಥಿತಿ ಎದುರಾಗಿತ್ತು. ಇದನ್ನೂ ಓದಿ: ಪಾಕ್ ಮತ್ತೆ ದಾಳಿ ಮಾಡಿದ್ರೆ ಭಾರತ ನುಗ್ಗಿ ಹೊಡೆಯುತ್ತೆ: ಮೋದಿ

    ಭಾರೀ ಮಳೆಗೆ ಕೆ ಆರ್ ಮಾರ್ಕೆಟ್(K R Market) ರಸ್ತೆ ಕೆರೆಯಂತಾಗಿದ್ದು, ಕಿಲೋಮೀಟರ್‌ಗಟ್ಟಲೇ ನಿಂತಿರೋ ನೀರಿನಲ್ಲಿ ವಾಹನ ಸವಾರರ ಪರದಾಡಿದರು. ಒಂದು ತಾಸಿನ ಮಳೆಗೆ ಬ್ರ‍್ಯಾಂಡ್ ಬೆಂಗಳೂರು ಅಸಲಿಯತ್ತು ಅನಾವರಣಗೊಂಡಿದೆ. ಕುಮಾರಸ್ವಾಮಿ ಲೇಔಟ್ ರಸ್ತೆಯಲ್ಲಿ ನೀರು ನಿಂತಿದ್ದ ಕಾರಣ ಆಟೋದ ಮುಂದಿನ ಚಕ್ರ ಗುಂಡಿಗೆ ಬಿದ್ದು ಆಟೋ ಚಾಲಕ ಒದ್ದಾಡಿದ್ದಾರೆ. ಇದನ್ನೂ ಓದಿ: ತೆಲುಗಿಗೆ ‘ಕಾಂತಾರ’ ಲೀಲಾ- ‘ಮೂಡ್ ಆಫ್ ತಮ್ಮುಡು’ ಚಿತ್ರದ ಟೀಸರ್ ಔಟ್

    ಇನ್ನು ಸಾಯಿ ಲೇಔಟ್‌ನ ಜನರಿಗೆ ಮತ್ತೆ ಜಲಸಂಕಷ್ಟ ಎದುರಾಗಿದೆ. ಸಣ್ಣ ಮಳೆಗೂ ಈ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ಜನ ಹೈರಣಾಗಿದ್ದಾರೆ.

  • ಮೆಜೆಸ್ಟಿಕ್‌ನಲ್ಲಿದ್ದ ಬೂತ್‌ಗಳ ಎತ್ತಂಗಡಿ – BMTCಗೆ ಬೇಡವಾಯ್ತಾ ನಂದಿನಿ?

    ಮೆಜೆಸ್ಟಿಕ್‌ನಲ್ಲಿದ್ದ ಬೂತ್‌ಗಳ ಎತ್ತಂಗಡಿ – BMTCಗೆ ಬೇಡವಾಯ್ತಾ ನಂದಿನಿ?

    ಬೆಂಗಳೂರು: ನಂದಿನಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌, ಈಗ ಸರ್ಕಾರದ ಅಂಗ ಸಂಸ್ಥೆಯಾದ ಬಿಎಂಟಿಸಿಗೆ (BMTC) ಬೇಡವಾಗಿದೆ. ಶಕ್ತಿ ಯೋಜನೆಯ ಖರ್ಚು ಸರಿದೂಗಿಸಬೇಕಾದ ಒತ್ತಡದಲ್ಲಿ, ಹೆಚ್ಚು ಆದಾಯದ ಆಸೆಯಿಂದ ನಂದಿನಿ ಪಾರ್ಲರ್‌ಗಳನ್ನ ಜನರಲ್ ಸ್ಟೋರ್ (General Store) ಆಗಿ ಬದಲಾಯಿಸುವ ಮೂಲಕ ನಂದಿನಿ ಬೂತ್‌  (Nandini Parlor) ಎತ್ತಂಗಡಿ ಮಾಡಿದೆ.

    2023ರ ವಿಧಾನಸಭಾ ಚುನಾವಣೆ (Election 2023) ಸಂಧರ್ಭದಲ್ಲಿ ನಂದಿನಿ ವಿಚಾರವನ್ನೇ ಹೆಚ್ಚು ಬಳಕೆ ಮಾಡಿಕೊಂಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ಬಹುಶಃ ನಾಡಿನ ಹೆಮ್ಮೆಯ ನಂದಿನಿಯನ್ನೇ ಮರೆತಂತೆ ಕಾಣುತ್ತಿದೆ. ಬಿಎಂಟಿಸಿ ತನ್ನ ಆದಾಯದ ಮೂಲವನ್ನ ಹೆಚ್ಚಿಸಿಕೊಳ್ಳಬೇಕಾದ ಭರದಲ್ಲಿ, ತನ್ನ ವ್ಯಾಪ್ತಿಯ ವ್ಯಾಪಾರ ಸ್ಥಳಗಳಲ್ಲಿದ್ದ ನಂದಿನಿ ಪಾರ್ಲರ್‌ಗಳನ್ನ ಏಕಾಏಕಿ ಜನರಲ್ ಸ್ಟೋರ್‌ಗಳನ್ನಾಗಿ ಪರಿವರ್ತನೆ ಮಾಡುವ ಕೆಲಸಕ್ಕೆ ಮುಂದಾಗಿದೆ.

    ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕಳೆದ ಅನೇಕ ವರ್ಷಗಳಿಂದ ನಂದಿನಿ ಪಾರ್ಲರ್‌ಗಳನ್ನ ತೆರೆಯಲಾಗಿತ್ತು. ಪ್ರತಿ ತಿಂಗಳು 30 ಸಾವಿರ ಬಾಡಿಗೆ ಕೂಡ ಪಡೆಯುತ್ತಿತ್ತು. ಆದರೀಗ ಆದಾಯ ಹೆಚ್ಚಿಸುವ ಭರದಲ್ಲಿ ಎಲ್ಲಾ ಪಾರ್ಲರ್‌ಗಳನ್ನ ಜನರಲ್ ಸ್ಟೋರ್‌ಗಳನ್ನಾಗಿ ಬದಲಾಯಿಸಿದೆ. ಕಾರಣ ನಂದಿನಿ ಪಾರ್ಲರ್‌ಗಳಿಗೆ ಹೋಲಿಕೆ ಮಾಡಿದ್ರೆ ಜನರಲ್ ಸ್ಟೋರ್‌ಗಳಿಂದ ಬಿಎಂಟಿಸಿಗೆ ಆದಾಯ ಹೆಚ್ಚು. ಟೆಂಡರ್‌ನಲ್ಲಿ ಪ್ರತಿ ಜನರಲ್ ಸ್ಟೋರ್‌ಗಳು ತಿಂಗಳಿಗೆ 90 ಸಾವಿರ ಬಾಡಿಗೆ ಪಡೆಯುವುದಾಗಿ ಬಿಡ್ ಪಡೆದಿವೆ. ನಂದಿನಿ ಪಾರ್ಲರ್‌ಗಿಂತ ಮೂರು ಪಟ್ಟು ಹೆಚ್ಚಿಗೆ ಹಣವನ್ನ ಜನರಲ್ ಸ್ಟೋರ್ ನೀಡುತ್ತಿರೋ ಕಾರಣ ಪಾರ್ಲರ್‌ಗಳನ್ನೇ ಪರಿವರ್ತನೆ ಮಾಡಲು ನಿಗಮ ಮುಂದಾಗಿದೆ. ಇದನ್ನೂ ಓದಿ: ‘ಕೈ’ ತೆಲಂಗಾಣ ಗೆದ್ದಿದ್ದಕ್ಕೆ ಬಿಜೆಪಿ ಅಸೂಯೆ ಪಡುವ ಬದಲು ತಾನು ಗೆದ್ದ ರಾಜ್ಯಗಳಲ್ಲಿ ಸಿಎಂ ಆಯ್ಕೆ ಮಾಡಲಿ: ದಿನೇಶ್ ಗುಂಡೂರಾವ್

    ಇನ್ನೂ ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣದಲ್ಲಿ 14 ನಂದಿನಿ ಪಾರ್ಲರ್‌ಗಳನ್ನ ಈಗಾಗಲೇ ಕ್ಲೋಸ್ ಮಾಡಲಾಗಿದೆ. ಕೆಲವು ಪಾರ್ಲರ್‌ಗಳನ್ನ ಜನರಲ್ ಸ್ಟೋರ್‌ಗಳಾಗಿ ಬದಲಾಯಿಸಿ ನಂದಿನಿ ಹೆಸರಿನ ಮೇಲೆಯೇ ಜನರಲ್ ಸ್ಟೋರ್ ಅನ್ನೋ ಬೋರ್ಡಗಳನ್ನ ಹಾಕಲಾಗಿದೆ. ಬಿಎಂಟಿಸಿಯ ಈ ನಡೆ ಕನ್ನಡ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೂಡಲೇ ಸಚಿವರು, ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ – ಕುಡುಪು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ?